ವಿಶಿಷ್ಟ ಸಂತ ವಿಶ್ವೇಶತೀರ್ಥ ಶ್ರೀಪಾದರು

Update: 2020-01-05 18:29 GMT

ಇಪ್ಪತ್ತನೇ ಶತಮಾನದ ಮೊದಲ ಐದು ದಶಕಗಳಲ್ಲಿ ಭಾರತದ ರಾಜಕಾರಣದಲ್ಲಿ ಮಹಾತ್ಮಾ ಗಾಂಧಿ ಪ್ರಭಾವ ಬೀರಿದಂತೆ, ಇಪ್ಪತ್ತನೇ ಶತಮಾನದ ಕೊನೆಯ ಮೂರು ಹಾಗೂ ಇಪ್ಪತ್ತೊಂದನೇ ಶತಮಾನದ ಮೊದಲ ಎರಡು ದಶಕಗಳಲ್ಲಿ ಭಾರತದ ಸಂಘಟಿತ ಧಾರ್ಮಿಕ ರಂಗದಲ್ಲಿ ವಿವಾದಾಸ್ಪದವಾದರೂ ದೂರಗಾಮಿ ಪರಿಣಾಮ ಬೀರಿದವರು ಪೇಜಾವರ ಶ್ರೀ.

ಆ ವರ್ಷ ದಸರಾ ನಾಡ ಹಬ್ಬವನ್ನು ಮೈಸೂರಿನ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಪೇಜಾವರ ಶ್ರೀ ಉದ್ಘಾಟಿಸಿದ್ದರು. ಕೆಲವು ದಿನಗಳ ಬಳಿಕ ಉಡುಪಿಗೆ ಬಂದಿದ್ದ ಅವರು ಅದೊಂದು ದಿನ ಬೆಳಗ್ಗೆ ಪೇಜಾವರ ಮಠದಿಂದ ಕೃಷ್ಣಮಠದಲ್ಲಿರುವ ಮಧ್ವಸರೋವರಕ್ಕೆ ಸ್ನಾನಕ್ಕೆ ಹೊರಟಿದ್ದರು. ಮಠದಿಂದ ಹೊರಗೆ ಬಂದು ಎಡಕ್ಕೆ ತಿರುಗಿ ಕೆಲವು ಹೆಜ್ಜೆ ಸಾಗುವಷ್ಟರಲ್ಲಿ ರಥಬೀದಿಯ ಪ್ರಸಿದ್ಧ ‘ಮಾಧ್ಯಮ ಕೇಂದ್ರ’ವೆನ್ನಬಹುದಾದ ಎಸ್.ಎನ್. ನ್ಯೂಸ್ ಏಜೆನ್ಸಿಯವರ (ವರ್ತಮಾನ ಪತ್ರಿಕೆಗಳನ್ನು ಮಾರುವ ಅಂಗಡಿ) ಸಿಗುತ್ತದೆ. ನಾನು ನನ್ನ ಮಾರ್ನಿಂಗ್ ವಾಕ್ ಮಾಡುತ್ತ ಅಲ್ಲಿಗೆ ಬರುವಷ್ಟರಲ್ಲಿ ಎದುರುಗಡೆಯಿಂದ ಬರುತ್ತಿದ್ದ ಪೇಜಾವರರನ್ನು ನೋಡಿ ‘ನಮಸ್ತೆ ಸ್ವಾಮೀಜಿ’ ಎಂದೆ. ಒಂದು ಕ್ಷಣ ಮುಗುಳ್ನಗೆ ಬೀರಿದ ಅವರು ಕೆಲವು ಹೆಜ್ಜೆ ಮುಂದೆ ಹೋಗಿ ನಿಂತರು. ಅವರ ಜೊತೆಗೆ ನಡೆಯುತ್ತಿದ್ದ ಅವರ ಶಿಷ್ಯರೊಬ್ಬರು ಹಿಂದೆ ನಡೆದು ಬಂದು ‘ಸ್ವಾಮೀಜಿ ಕರೆಯುತ್ತಿದ್ದಾರೆ’ ಎಂದರು. ನಾನು ಹಿಂತಿರುಗಿ ನಡೆದು ಅವರ ಎದುರು ನಿಂತಾಗ ತಿಳಿಯಿತು; ನಾನು ಮುಂದೆ ಹೋದ ಮೇಲೆ ‘ಯಾರವರು’ ಎಂದು ಕೇಳಿ ತಿಳಿದು ನನ್ನ ಪರಿಚಯವನ್ನು ಜ್ಞಾಪಿಸಿಕೊಂಡು ನನ್ನನ್ನು ಕರೆದಿದ್ದರು.

ಆ ದಿನಗಳಲ್ಲಿ ಅವರ ‘ದಲಿತರ ಕೇರಿಗೆ ನಡಿಗೆ’ ವಿವಾದಕ್ಕೆ ಗುರಿಯಾಗಿತ್ತು. ದಲಿತರ ಕೇರಿಗೆ ಭೇಟಿ ನೀಡಿ ‘ಕ್ರಾಂತಿಕಾರಿ ಸ್ವಾಮೀಜಿ’ ಅನ್ನಿಸಿಕೊಂಡಿದ್ದರೂ ಅವರು ದಲಿತರ ಜೊತೆಗೆ ಉಣ್ಣುವುದನ್ನು ನಿರಾಕರಿಸಿದ್ದರು; ಅವರು ಸಹ ಪಂಕ್ತಿ ನೀಡಲು ಒಪ್ಪಲಿಲ್ಲ ಎಂಬುದು ಅವರಿಗೆ ಎದುರಾದ ದೊಡ್ಡ ಸಾಮಾಜಿಕ-ಜಾತ್ಯತೀತ ಸವಾಲಾಗಿತ್ತು. ಆ ಬಗ್ಗೆ ನನ್ನೊಡನೆ ಮಾತಾಡಿ ‘‘ನಾನೀಗ ಏನು ಮಾಡಬೇಕು? ಯಾರ ಜೊತೆ ಕೂತು ಊಟ ಮಾಡಬೇಕು ಎನ್ನುವುದು ಅವರವರ ಖಾಸಗಿ ವಿಷಯ’’ ಎಂದು ತನ್ನ ನಿಲುವನ್ನು ಸಮರ್ಥಿಸಿಕೊಂಡರು.

ನಾನು ಹೇಳಿದೆ: ‘‘ಸ್ವಾಮೀಜಿ, ನೀವು ನಿಮ್ಮ ಮಠಕ್ಕೆ ಮಾತ್ರ ಸೀಮಿತವಾಗಿರುವ ಯತಿಯಾಗಿದ್ದಲ್ಲಿ ಹಾಗೆ ಹೇಳಬಹುದು. ಆದರೆ ನೀವು ಸಾಮಾಜಿಕ ಪರಿವರ್ತನೆಯಲ್ಲಿ ನಿಮ್ಮನ್ನು ತೊಡಗಿಸಿಕೊಂಡವರು. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನತೆಯ ಸಮಾಜದಲ್ಲಿ ನೀವು ಹಾಗೆ ಹೇಳುವಂತಿಲ್ಲ’’ ಆಗ ಅವರು ಮತ್ತೆ ಕೇಳಿದರು ‘‘ಹಾಗಾದರೆ ನಾನೇನು ಮಾಡಬೇಕು ಈಗ?’’

ನಾನು ಹೇಳಿದೆ: ‘‘ಮಾಧ್ಯಮಗಳ ಮೂಲಕ ಸಾಕಷ್ಟು ಪ್ರಚಾರ ನೀಡಿ ರಾಜಾಂಗಣದಲ್ಲಿ ಒಂದು ಸಾಮೂಹಿಕ ಸಹಪಂಕ್ತಿ ಭೋಜನ ಏರ್ಪಡಿಸಿ. ನೀವು ಅಲ್ಲೇ ವೇದಿಕೆಯ ಮೇಲೆ ಕೂತು ಭೋಜನ ಸ್ವೀಕರಿಸಿ. ಸಹ ಪಂಕ್ತಿ ನೀಡುತ್ತಿಲ್ಲ ಎಂಬ ಅಪವಾದದಿಂದ ನೀವು ಹೀಗೆ ಪಾರಾಗಬಹುದಲ್ಲ?’’

ಈ ಸಲಹೆಗೆ ಅವರು ನೀಡಿದ ಉತ್ತರ: ‘‘ಅದು ಸಾಧ್ಯವಿಲ್ಲ, ಬೇರೆ ಏನು ಮಾಡಬಹುದು ನಾನು?’’ ‘‘ನೀವು ನಿಮ್ಮ ಈ ವಯಸ್ಸಿನಲ್ಲಿ ಏನು ಸಮಾಜಸೇವೆ ಮಾಡುತ್ತಿದ್ದೀರೋ ಅದನ್ನೇ ಮುಂದುವರಿಸಿ’’ ಎಂದೆ. ಅವರು ಮುಗುಳ್ನಕ್ಕರು. ಆ ಮುಗುಳ್ನಗು ನನಗೆ ಬಹಳ ಅರ್ಥಗರ್ಭಿತವಾಗಿದ್ದಂತೆ ಕಂಡಿತು.

ಪರಂಪರೆಯೊಳಗಿದ್ದುಕೊಂಡೇ, ಅದನ್ನು ಮುರಿಯಲು ಸಾಧ್ಯವಿರುವಷ್ಟನ್ನು ಮಾತ್ರ ಮುರಿದು ಸಾಮಾಜಿಕ ಬದಲಾವಣೆ ತಾನು ತೆರೆದುಕೊಳ್ಳಬಲ್ಲನೆಂದು ತನ್ನ ಜೀವಿತದ ಕೊನೆಯವರೆಗೂ ಮುಕ್ತವಾಗಿ ಯಾವುದೇ ಮುಲಾಜಿಲ್ಲದೆ ತನ್ನ ಆತ್ಮಸಾಕ್ಷಿಗೆ ಸರಿಯಾಗಿ ನಡೆದುಕೊಂಡವರು ಪೇಜಾವರರು ಎನ್ನುವುದಕ್ಕೆ ಒಂದು ಉದಾಹರಣೆಯಾಗಿ ಆ ದಿನ ಬೆಳಗ್ಗೆ ನಡೆದ ಅವರ ಮತ್ತು ನನ್ನ ನಡುವಿನ ಮಾತುಕತೆಯನ್ನು ದಾಖಲಿಸಿದ್ದೇನೆ.

ನಾನು ಅವರಿಗೆ ಇಷ್ಟವಾಗದ ಒಂದು ಸಲಹೆ ನೀಡಿದೆನೆಂದು ಅವರು ಬಳಿಕ ಅವರ ಆಪ್ತರಲ್ಲೊಬ್ಬರಾದ, ನನ್ನ ಮಿತ್ರರೂ ಆಗಿರುವ ಯಕ್ಷಗಾನ ಸಂಘಟಕ ಶ್ರೀ ಎಸ್.ವಿ. ಭಟ್ ಅವರ ಬಳಿ ಹೇಳಿದರಂತೆ!

ಇಪ್ಪತ್ತನೇ ಶತಮಾನದ ಮೊದಲ ಐದು ದಶಕಗಳಲ್ಲಿ ಭಾರತದ ರಾಜಕಾರಣದಲ್ಲಿ ಮಹಾತ್ಮಾ ಗಾಂಧಿ ಪ್ರಭಾವ ಬೀರಿದಂತೆ, ಇಪ್ಪತ್ತನೇ ಶತಮಾನದ ಕೊನೆಯ ಮೂರು ಹಾಗೂ ಇಪ್ಪತ್ತೊಂದನೇ ಶತಮಾನದ ಮೊದಲ ಎರಡು ದಶಕಗಳಲ್ಲಿ ಭಾರತದ ಸಂಘಟಿತ ಧಾರ್ಮಿಕ ರಂಗದಲ್ಲಿ ವಿವಾದಾಸ್ಪದವಾದರೂ ದೂರಗಾಮಿ ಪರಿಣಾಮ ಬೀರಿದವರು ಪೇಜಾವರ ಶ್ರೀ.

ಪೇಜಾವರರ ಜತೆಗಿನ ಐದು ದಶಕಗಳ ಆತ್ಮೀಯ ಪರಿಚಯದಲ್ಲಿ, ಓರ್ವ ‘ಒಳ ವಿಮರ್ಶಕ’ನಾಗಿ ಅವರ ಜೊತೆ ನನಗೆ ಹಾಗೂ ನನ್ನ ತಲೆಮಾರಿನ ಹಲವಾರು ಪ್ರಜಾಪ್ರಭುತ್ವವಾದಿಗಳಿಗೆ ತಾತ್ವಿಕವಾಗಿ ಜಗಳಾಡುವ, ವಿರೋಧಾಭಿಪ್ರಾಯಗಳನ್ನು ವ್ಯಕ್ತಪಡಿಸಿಯೂ ಯಾವುದೇ ರೀತಿಯ ವಿರಸವಿಲ್ಲದೆ ಮುಗುಳ್ನಗೆಯೊಂದಿಗೆ ಮರಳುವ ಅವಕಾಶ (Space) ಇತ್ತು.

ಪೇಜಾವರರ ಬದುಕಿನ ಎಂಟು ದಶಕಗಳನ್ನು ಎಂಟು ಶಬ್ದಗಳಲ್ಲಿ ಸಂಕ್ಷೇಪಿಸಬಹುದಾದಲ್ಲಿ ನಾನು ಈ ಎಂಟು ಶಬ್ದಗಳನ್ನು ಬಳಸುತ್ತೇನೆ: ವಿದ್ವತ್, ವಿವಾದ, ವೈದೃಶ್ಯ, ಪ್ರಶಂಸೆ, ಟೀಕೆ, ಸಮಾಜಸೇವೆ, ಸಹನೆ ಮತ್ತು ಸೌಹಾರ್ದ. ಯಾರಾದರೂ ವಿಶ್ವೇಶತೀರ್ಥರ ವಸ್ತುನಿಷ್ಠೆ ಜೀವನ ಚರಿತ್ರೆ ಬರೆಯುವುದಾದಲ್ಲಿ ಈ ಎಂಟು ಶಬ್ದಗಳಲ್ಲಿ ಒಂದೊಂದು ಶಬ್ದದ ಬಗ್ಗೆ ಕನಿಷ್ಟ ನೂರು ಪುಟಗಳನ್ನು ಬರೆಯಲು ಬೇಕಾದಷ್ಟು ವಿವರಗಳು ಅವರ ಬದುಕಿನಲ್ಲಿವೆ.

ಇನ್ನು ಐವತ್ತು ವರ್ಷಗಳ ಬಳಿಕ ವಿಶ್ವೇಶತೀರ್ಥರ ಹೆಸರು ಉಲ್ಲೇಖವಾಗುವಾಗ ಅವರ ಬದುಕಿನ ಯಾವ ಅಂಶಗಳು ಇತಿಹಾಸದಲ್ಲಿ ದಾಖಲಾಗಿ ಉಳಿದಾವು? ಎಂದು ಯೋಚಿಸಿದರೆ....... ನನಗೆ ಹೀಗೆ ಅನ್ನಿಸುತ್ತದೆ:

 ♦ ವಿಶ್ವೇಶತೀರ್ಥರು ಪರಂಪರೆಯೊಳಗೆ ಇದ್ದುಕೊಂಡೇ ಶತಮಾನಗಳ ಕಾಲದಿಂದ ಪರಂಪರೆಯ ಭಾಗವಾಗಿಯೇ ಊಳಿದು ಬಂದಿದ್ದ ಅಸ್ಪಶ್ಯತೆಯ ನಿವಾರಣೆಗೆ ಶ್ರಮಿಸಿದರು. ದಲಿತಕೇರಿಗೆ ಹೋಗುವ ಕ್ರಾಂತಿಕಾರಿ ಹೆಜ್ಜೆ ಇಟ್ಟರು. ಆದರೂ ಅವಚರ ಜತೆ ಸಹಪಂಕ್ತಿಗೆ ಸಹಮತ ತೋರಲಿಲ್ಲ.

* ಅವರು ಮಾನ ಹೊತ್ತ ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳುವ ಸಂಪ್ರದಾಯಕ್ಕೆ ನಿದಾಯ ಹೇಳಿದರು.

 ♦ ಎಂಟುನೂರು ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ತನ್ನ ಐದನೇ ಪರ್ಯಾಯದ ಅವಧಿಯಲ್ಲಿ

(1) ಕೃಷ್ಣಮಠದ ಅನ್ನಬ್ರಹ್ಮ ಭೋಜನ ಶಾಲೆಯಲ್ಲಿ ಇಫ್ತಾರ್ ಕೂಟ ನಡೆಸಿದ್ದರು. ಮತ್ತು (2)ಕೃಷ್ಣಮಠದ ಬಡಗು ಮಾಳಿಗೆಯಲ್ಲಿ ಸ್ವಾತಂತ್ರೋತ್ಸವ ಆಚರಿಸಿ ತ್ರಿವರ್ಣಧ್ವಜ ಅರಳಿಸಿದ್ದರು.

 *ಅವರ ಪರ್ಯಾಯಕ್ಕೆ ಮುಸ್ಲಿಮರು ಮತ್ತು ಕ್ರಿಶ್ಚಿಯನರು ಸಹ ಹೊರೆಕಾಣಿಕೆ ಅರ್ಪಿಸಿದ್ದರು.

 ♦ ಶತಮಾನಗಳಿಂದ ನಡೆದುಕೊಂಡು ಬಂದಿದ್ದ ‘ಮಡೆಸ್ನಾನ’ವೆಂಬ ಬ್ರಾಹ್ಮಣರು ಉಂಡ ಎಂಜಲುಎಲೆಯ ಮೇಲೆ ಹೊರಳುವ ಪದ್ಧತಿಯನ್ನು ಕೊನೆಗಾಣಿಸಿ ‘ಎಡೆಸ್ನಾನ’ವೆಂಬ ಒಂದು ಮಧ್ಯಮ ಮಾರ್ಗವನ್ನು ಸೂಚಿಸಿದ್ದರು.

 ♦ ಬಾಬ್ರಿಮಸೀದಿ ಧ್ವಂಸಕ್ಕೆ ಪ್ರತ್ಯಕ್ಷಸಾಕ್ಷಿಯಾಗಿದ್ದರು ಮತ್ತು ಮಸೀದಿ ಧ್ವಂಸವನ್ನು ಖಂಡಿಸಿದ್ದರು; ಆದರೆ ಅದೇ ವೇಳೆ ರಾಮಮಂದಿರ ನಿರ್ಮಾಣ ಚಳವಳಿಯಲ್ಲಿ ಮಂಚೂಣಿಯಲ್ಲಿದ್ದರು.

 ♦ ತನ್ನ ಟೀಕಾಕಾರರ ಜೊತೆಗೂ ಸೌಹಾರ್ದ ಸಂಬಂಧ ವಿರಿಸಿಕೊಂಡಿದ್ದ ವಿಶ್ವೇಶತೀರ್ಥರು ಸಂವಾದದ ಹಾದಿಯನ್ನು ಎಂದೂ ಮುಚ್ಚಿದವರಲ್ಲ.

 ♦ ಅವಕಾಶವಾದಿ ರಾಜಕಾರಣಿಗಳು ಸ್ವಹಿತಾಸಕ್ತಿಗಾಗಿ ವಿಶಿಷ್ಟ, ಸಾತ್ವಿಕ ಸಂತ ಪೇಜಾವರರನ್ನು ಯಥಾಶಕ್ತಿ ಬಳಸಿಕೊಂಡಿದ್ದರು.

ಈ ದೇಶದ ಸಾಮಾಜಿಕ-ಧಾರ್ಮಿಕ ಇತಿಹಾಸವನ್ನು ಗಮನಿಸಿದರೆ ಇಲ್ಲಿ ಸತಿ ಸಹಗಮನದಿಂದ ಆರಂಭಿಸಿ ಯಾವುದೇ ಒಂದು ಪದ್ಧತಿ, ಕ್ರಮ, ಸಂಪ್ರದಾಯವನ್ನು ಮುರಿಯುವುದು, ಮುರಿದು ಸುಧಾರಣೆ ತರುವುದು ಎಷ್ಟು ಕಷ್ಟದ ಸಾಹಸವಾಗಿತ್ತೆಂಬುದು ಮನವರಿಕೆಯಾಗುತ್ತದೆ. ಬದಲಾವಣೆಗಾಗಿ ಶ್ರಮಿಸುವ ಓರ್ವ ಸುಧಾರಕ ಸಂಪ್ರದಾಯವಾದಿಗಳ ಕಡು ವಿರೋಧವನ್ನು ಕಟ್ಟಿಕೊಂಡೇ ತನ್ನ ಕನಸಿನ ಸಮಾಜವನ್ನು ಕಟ್ಟಬೇಕಾಗುತ್ತದೆ.

ಸಂಪ್ರದಾಯವಾದಿಗಳು ಅಧಿಕಾರದ ಮೇಲೆ ಕಣ್ಣಿಟ್ಟ ವಿವಿಧ ಪಕ್ಷಗಳ ರಾಜಕಾರಣಿಗಳೂ ಆದಾಗ ಅವರು ಸಮಾಜ ಸುಧಾರಕ ಹಾದಿತಪ್ಪುವಂತೆ ಮಾಡದಿರುವುದಿಲ್ಲ. ಈ ಎಲ್ಲ ಸಾಮಾಜಿಕ ರಾಜಕೀಯ ಅಂಶಗಳನ್ನು, ಸಮಕಾಲದ ಸಂದರ್ಭಗಳನ್ನು ಗಮನಿಸಿದಾಗ, ಯಾರು ಏನೇ ಹೇಳಿದರೂ, ವಿಶ್ವೇಶತೀರ್ಥರ ಬದುಕು ಮತ್ತು ಸಾಧನೆ ವಿವಾದಗಳ ಸುತ್ತ ಕಟ್ಟಿದ ಒಂದು ಸ್ಮತಿ ಮಂದಿರವಾಗಿ ಭಾರತದ ಜನಮನದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

Writer - ಡಾ.ಬಿ. ಭಾಸ್ಕರ ರಾವ್

contributor

Editor - ಡಾ.ಬಿ. ಭಾಸ್ಕರ ರಾವ್

contributor

Similar News

ಜಗದಗಲ
ಜಗ ದಗಲ