ಜೆಎನ್‍ ಯು ಗೂಂಡಾ ದಾಳಿ: ಎಬಿವಿಪಿಯತ್ತ ಬೊಟ್ಟು ಮಾಡುತ್ತಿರುವ ವಾಟ್ಸ್ಯಾಪ್ ಚಾಟ್ ಗಳು

Update: 2020-01-06 12:22 GMT

ಹೊಸದಿಲ್ಲಿ: ರವಿವಾರ ಸಂಜೆ ಜೆಎನ್‍ಯು ಹಾಸ್ಟೆಲುಗಳಲ್ಲಿ ನಡೆದ ದಾಂಧಲೆ ಹಾಗೂ ಹಲ್ಲೆ ಘಟನೆಗಳಿಗೆ ಯಾರು ಕಾರಣರೆಂಬ ಬಗ್ಗೆ ಪರಸ್ಪರ ದೋಷಾರೋಪಣೆ ನಡೆಯುತ್ತಿದೆ. ಇದು ಎಬಿವಿಪಿ ಕೃತ್ಯ ಎಂದು ಕೆಲವರು ಹೇಳಿದರೆ ಇದು ಎಡಪಂಥೀಯ ಸಂಘಟನೆಗಳ ಕೃತ್ಯ ಎಂದು ಎಬಿವಿಪಿ ಆರೋಪಿಸುತ್ತಿದೆ.

ಆದರೆ ಇದೀಗ ವೈರಲ್ ಆಗುತ್ತಿರುವ ವಾಟ್ಸ್ಯಾಪ್ ಚಾಟ್ ಗಳ ಸ್ಕ್ರೀನ್ ಶಾಟ್ ಗಳು ಕೃತ್ಯದ ಹಿಂದೆ ಎಬಿವಿಪಿ ಇತ್ತು ಎಂದು ಬೆಟ್ಟು ಮಾಡುತ್ತಿವೆ ಎಂದು scroll.in ವರದಿ ಮಾಡಿದೆ.

ವಾಟ್ಸ್ಯಾಪ್ ಗ್ರೂಪ್ ಒಂದರಲ್ಲಿ 'ಸಾಲೋಂ ಕೋ ಹಾಸ್ಟೆಲ್ ಮೇ ಘುಸ್ ಕೆ ತೋಡೆ' ( ನಾವು ಅವರ ಹಾಸ್ಟೆಲುಗಳಿಗೆ ನುಗ್ಗಿ ಹೊಡೆದೆವು) ಎಂಬ ಸಂದೇಶವನ್ನು ಒಬ್ಬರು ಪೋಸ್ಟ್ ಮಾಡಿದ್ದರೆ ಅದಕ್ಕೆ ಪ್ರತಿಕ್ರಿಯಿಸಿದ್ದ ಇನ್ನೊಬ್ಬ "ಖಂಡಿತವಾಗಿಯೂ ಈಗ ಎಲ್ಲವನ್ನೂ ಇತ್ಯರ್ಥ ಪಡಿಸಬೇಕಿದೆ. ಈಗ ಅವರಿಗೆ ಹೊಡೆಯದೇ ಇದ್ದರೆ ಮತ್ತಿನ್ಯಾವಾಗ,? ಕೋಮಿಯೋ (ಕಮ್ಯುನಿಸ್ಟರು) ಕೊಳಕನ್ನು ಹರಡುತ್ತಿದ್ದಾರೆ'' ಎಂದಿದ್ದಾನೆ. ಈ ಚಾಟ್ ಗಳ ಸ್ಕ್ರೀನ್ ಶಾಟ್ ಗಳೀಗ ವೈರಲ್ ಆಗುತ್ತಿವೆ.

scroll.in ಈ ವಾಟ್ಸ್ಯಾಪ್ ಸಂದೇಶಗಳ ಸ್ಕ್ರೀನ್ ಶಾಟುಗಳನ್ನು  ಪರಿಶೀಲಿಸಿ ಟ್ರೂಕಾಲರ್ ಮೂಲಕ ಆ ಮೊಬೈಲ್ ಸಂಖ್ಯೆ ಯಾರದ್ದೆಂದು ಪರಿಶೀಲಿಸಿದಾಗ ಮೊದಲ ಸಂದೇಶ ಕಳುಹಿಸಿದ್ದಾತ ಸೌರಭ್ ದುಬೆ ಎಂದು ಪತ್ತೆಯಾಗಿದೆ. ಆತನ ಫೇಸ್ ಬುಕ್ ಪ್ರೊಫೈಲ್ ಪ್ರಕಾರ ಆತ ದಿಲ್ಲಿ ವಿವಿಯ ಶಹೀದ್ ಭಗತ್ ಸಿಂಗ್ ಸಂಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕನಾಗಿದ್ದು, ಆತ JNUites for MODI ಎಂಬ ಗ್ರೂಪ್ ಮ್ಯಾನೇಜ್ ಮಾಡುತ್ತಿದ್ದಾನೆಂದು ತಿಳಿದುಬಂದಿದೆ. ಆದರೆ ಆತನ ಫೋನ್ ಸಂಪರ್ಕಕ್ಕೆ ಸಿಕ್ಕಿಲ್ಲ.

ರವಿವಾರ ಸಂಜೆ 5:39ಕ್ಕೆ ವಾಟ್ಸ್ಯಾಪ್ ಗ್ರೂಪ್ `ಫ್ರೆಂಡ್ಸ್ ಆಫ್ ಆರೆಸ್ಸೆಸ್' ನಲ್ಲಿ ಒಬ್ಬಾತ, "ಎಡಪಂಥೀಯ ಉಗ್ರವಾದದ ವಿರುದ್ಧವಾಗಿರುವ ಈ ಗ್ರೂಪ್ ಸೇರಿ, ಈ ಜನರನ್ನು ಹೊಡೆಯಬೇಕು, ಅದೊಂದೇ ಪರಿಹಾರ'' ಎಂದು ಬರೆದಿದ್ದರೆ, ಇದಕ್ಕೆ ಪ್ರತಿಕ್ರಿಯಿಸಿ ಇನ್ನೊಬ್ಬಾತ "ಖಜಾನ್ ಸಿಂಗ್ ಸ್ವಿಮ್ಮಿಂಗ್ ಭಾಗದಿಂದ ಡಿಯು ಜನರನ್ನು ಒಳಕ್ಕೆ ಬರುವಂತೆ ಮಾಡಿ. ನಾವು 25-30 ಮಂದಿ ಇದ್ದೇವೆ'' ಎಂದು ಬರೆದಿದ್ದಾನೆ.

ಈ ಸಂದೇಶ ಪೋಸ್ಟ್ ಮಾಡಿದ ವ್ಯಕ್ತಿ ವಿಕಾಸ್ ಪಟೇಲ್ ಎಂದು ಟ್ರೂ ಕಾಲರ್ ಮೂಲಕ ತಿಳಿದು ಬಂದರೆ, ಆತನ ಫೇಸ್ ಬುಕ್ ಪ್ರೊಫೈಲ್ ಪ್ರಕಾರ ಆತ ಎಬಿವಿಪಿ ಕಾರ್ಯಕಾರಿ ಸದಸ್ಯ ಹಾಗೂ ಜೆಎನ್‍ಯುವಿನ ಎಬಿವಿಪಿ ಘಟಕದ ಮಾಜಿ ಉಪಾಧ್ಯಕ್ಷ ಎಂದು ತಿಳಿದುಬಂದಿದೆ.

ಎಬಿವಿಪಿಯಲ್ಲದ ವಿದ್ಯಾರ್ಥಿಗಳು ಈ ಗ್ರೂಪ್ ಗಳಿಗೆ ಇನ್ ವೈಟ್ ಲಿಂಕ್ ಮೂಲಕ ಸೇರಿ ಅದರಲ್ಲಿರುವ ಚಾಟ್ ಗಳ ಸ್ಕ್ರೀನ್ ಶಾಟ್ ಗಳನ್ನು ತೆಗೆದು ವೈರಲ್ ಮಾಡಿದ್ದಾರೆ. ಆದರೆ ಈ ವಿಚಾರವೂ ನಂತರ ತಿಳಿದಿದೆ.

'ಯುನಿಟಿ ಅಗೈನ್ಸ್ಟ್ ಲೆಫ್ಟ್' ಎನ್ನುವ ಗ್ರೂಪ್ ನಲ್ಲಿ ರಾತ್ರಿ 8:41ರ ವೇಳೆ ಒಬ್ಬಾತ ಮೆಸೇಜ್ ಮಾಡಿ, "ಪೊಲೀಸರು ಬಂದಿದ್ದಾರೆಯೇ? ಈ ಗ್ರೂಪ್ ಗೆ ಎಡಪಂಥೀಯರು ಸೇರಿದ್ದಾರೆ" ಎಂದು ಹೇಳುವ ಸ್ಕ್ರೀನ್ ಶಾಟ್ ಒಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News