ಎನ್‌ಆರ್‌ಸಿ ಪಟ್ಟಿಯಲ್ಲಿಲ್ಲದ ಮಕ್ಕಳನ್ನು ಕುಟುಂಬದಿಂದ ಈಗ ಪ್ರತ್ಯೇಕಿಸುವುದಿಲ್ಲ: ಕೇಂದ್ರದ ಹೇಳಿಕೆ

Update: 2020-01-06 18:14 GMT

ಹೊಸದಿಲ್ಲಿ, ಜ.6: ಅಸ್ಸಾಂನಲ್ಲಿ ಎನ್‌ಆರ್‌ಸಿಯಲ್ಲಿ ಹೆತ್ತವರ ಹೆಸರು ಸೇರ್ಪಡೆಗೊಂಡಿದ್ದರೂ ಮಕ್ಕಳ ಹೆಸರು ಸೇರಿಲ್ಲದಿದ್ದರೆ ಅವರನ್ನು ಕುಟುಂಬದಿಂದ ಈ ಕೂಡಲೇ ಪ್ರತ್ಯೇಕಿಸುವುದಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಇನ್ನೂ ಪೌರತ್ವ ಸಾಬೀತಾಗದ ಹಿನ್ನೆಲೆಯಲ್ಲಿ 60 ಮಕ್ಕಳು ಬಂಧನ ಕೇಂದ್ರದಲ್ಲಿಯೇ ಉಳಿಯುವಂತಾಗಿದೆ. ಈ ಮಕ್ಕಳ ಹೆತ್ತವರ ಹೆಸರು ಪೌರತ್ವ ಪಟ್ಟಿಯಲ್ಲಿದೆ. ಆದರೆ ಮಕ್ಕಳ ಹೆಸರು ಸೇರ್ಪಡೆಗೊಂಡಿಲ್ಲ ಎಂಬ ಕಾರಣಕ್ಕೆ ಅವರನ್ನು ಬಂಧನ ಕೇಂದ್ರದಲ್ಲಿರಿಸಲಾಗಿದೆ ಎಂದು ಸಂಸ್ಥೆಯೊಂದು ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭ ಕೇಂದ್ರ ಸರಕಾರ ಈ ಹೇಳಿಕೆ ನೀಡಿದೆ.

ಮಕ್ಕಳನ್ನು ಬಂಧನ ಕೇಂದ್ರಕ್ಕೆ ಕಳಿಸುವುದನ್ನು ಸಮರ್ಥಿಸಲು ಸಾಧ್ಯವಿಲ್ಲ. ಹೆತ್ತವರಿಗೆ ಎನ್‌ಆರ್‌ಸಿ ಮೂಲಕ ಪೌರತ್ವ ನೀಡಿದ್ದರೆ ಅವರ ಮಕ್ಕಳನ್ನು ತಕ್ಷಣವೇ ಬಂಧನ ಕೇಂದ್ರಕ್ಕೆ ಕಳಿಸುವುದು ಸರಿಯಲ್ಲ ಎಂದು ಕೇಂದ್ರ ಸರಕಾರದ ಪ್ರತಿನಿಧಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಸುಪ್ರೀಂಕೋರ್ಟ್‌ಗೆ ತಿಳಿಸಿದರು.

 ಈ ಕುರಿತ ಪ್ರಮಾಣಪತ್ರವನ್ನು ನಾಲ್ಕು ವಾರದೊಳಗೆ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ನೇತೃತ್ವದ ನ್ಯಾಯಪೀಠ ಸರಕಾರಕ್ಕೆ ತಿಳಿಸಿದೆ. 2004ರ (ಪೌರತ್ವ ಕಾಯ್ದೆಗೆ ತಿದ್ದುಪಡಿಯಾದ) ಬಳಿಕ ಭಾರತದಲ್ಲಿ ಜನಿಸಿದ ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಭಾರತೀಯರಾಗಿದ್ದರೆ ಮಾತ್ರ ಆ ಮಗುವನ್ನು ಭಾರತದ ನಾಗರಿಕ ಎಂದು ಪರಿಗಣಿಸಲಾಗುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News