ಅಡುಗೆಯ ಆತ್ಮಸಂಗಾತ

Update: 2020-01-06 18:28 GMT

ಅಡುಗೆಯೆಂಬ ಕಲೆಯಲ್ಲಿ ರುಚಿಯ ಅಧ್ಯಾತ್ಮ ಹುಡುಕುವ ಕವಿ, ಲೇಖಕ ರಾಜೇಂದ್ರ ಪ್ರಸಾದ್ ಇಂದಿನಿಂದ ಪ್ರತೀ ಮಂಗಳವಾರ ಪತ್ರಿಕೆಯಲ್ಲಿ ಅಡುಗೆಯ ಸೃಜನಶೀಲ ರಸಪಾಕವನ್ನು ‘ಭಿನ್ನರುಚಿ’ ಅಂಕಣದ ಮೂಲಕ ನಮ್ಮ ಓದುಗರಿಗೆ ಉಣಬಡಿಸಲಿದ್ದಾರೆ.

-ಸಂಪಾದಕ

ಅಭಿರುಚಿಗಳಿಗೂ ಮೊದಲು ದಕ್ಕುವ ರುಚಿ ಬಾಯಿರುಚಿ. ಇದನ್ನು ವೈರಾಗಿಗಳು ಜಿಹ್ವಾ ಚಾಪಲ್ಯವೆಂದು ಹಳಿಯುವುದುಂಟು.. ಆದರೆ ಮಿತಾಹಾರವಾಗಿ ಇದೊಂದು ಬಗೆಯ ಅಧ್ಯಾತ್ಯ ರುಚಿ ಎಂಬುದು ನನ್ನ ನಂಬುಗೆ. ಹಾಗಾಗಿಯೇ ಅಡುಗೆಯು ಅನುದಿನವೂ ನಮ್ಮ ಬದುಕಿನ ಜೀವಮೂಲಭೂತವಾದ ಅಗತ್ಯತತೆಯನ್ನು ದಾಟಿಕೊಂಡು ಆರು ರಸಗಳ ಮೇಳೈಸಿಕೊಂಡು ಬೃಹತ್ ಕಲೆಯಾಗಿ ರೂಪುಗೊಂಡಿದೆ. ಅಡುಗೆಯು ಕಲೆಯೇ ಎಂಬುದನ್ನು ಬಹಳ ಜನರು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಈ ಕಲೆಯ ಸುಳಿಗೆ ಒಮ್ಮೆ ಸಿಕ್ಕಿದರೆ ಮುಗಿಯಿತು, ತಪ್ಪಿಸಲಾಗದ ಆನಂದ ಮತ್ತು ಅಂತಃಕರಣ ನಮ್ಮಿಳಗೆ ಸೃಷ್ಟಿಯಾಗಿ ಬಿಡುತ್ತದೆ.

ಅಡುಗೆಯು ತಾಳ್ಮೆ ಮತ್ತು ಪ್ರಯೋಗಶೀಲತೆಯ ಕಲೆ. ಅದು ದಿನಾ ಎರಡು ಮೂರು ಹೊತ್ತಿನ ಊಟಕ್ಕೆ ಮಾತ್ರ ಸೀಮಿತವಾಗಿಲ್ಲ.. ಅದರ ವ್ಯಾಪ್ತಿ ದಿನದ 24 ಗಂಟೆಗಳಲ್ಲೂ ಸಮಯ, ಸಂದರ್ಭ, ಸಂಬಂಧಗಳಿಗೆ ಅನುಗುಣವಾಗಿ ಬೆಳೆದುಕೊಂಡಿದೆ. ಇವೆಲ್ಲವೂ ನಮ್ಮ ಗಮನಕ್ಕೆ ಯಾಕೆ ಬರೋಲ್ಲ ಅಂದ್ರೆ ಅಡುಗೆ ಎಂಬುದು ಹೆಣ್ಣಿನ ವಿಚಾರ ಎಂಬ ಕೆಟ್ಟ ಧೋರಣೆ. ಕಾಲದಿಂದಲೂ ಈ ಧೋರಣೆಯು ಸಮಾಜದ ಎಲ್ಲ ವರ್ಗ, ಜಾತೀಯ ಜನರ ಮನಸ್ಸಿನಲ್ಲೂ ತಳವೂರಿಬಿಟ್ಟಿದೆ, ಕಡೆಗೆ ಹೆಣ್ಣುಮಕ್ಕಳಲ್ಲೂ ಕೂಡ. ಇದರಿಂದ ಬರುವ ಪ್ರಕ್ರಿಯೆಗಳು ಈಚೆಗೆ ಶುರುವಾಗಿದೆಯಾದರೂ ಬಹಳ ಕಡಿಮೆ ಸಂಖ್ಯೆಯದು. ಅಡುಗೆಯ ವಿಚಾರದಲ್ಲಿ ಮೊದಲು ನಾವು ಒಡೆದು ಹಾಕಬೇಕಾದ ಒಂದು ಭ್ರಮೆ ಅಥವಾ ಸಂಪ್ರದಾಯವೆಂದರೆ ‘‘ಅಡುಗೆ ಹೆಣ್ಣಿಗೆ ಮಾತ್ರ ಸೀಮಿತವಾದ ಕೆಲಸ’’ ಎಂಬುವುದನ್ನು. ಪ್ರತಿ ಜೀವಿಯೂ ತನಗೆ ಬೇಕಾದ ಆಹಾರವನ್ನು ತಾನೇ ಹುಡುಕಿ ತಿನ್ನುತ್ತದೆ. ಹಾಗೆಯೇ ಮನುಷ್ಯನು ತನಗೆ ಬೇಕಾದ ಆಹಾರವನ್ನು ಸಿದ್ಧಪಡಿಸಿಕೊಳ್ಳುವ ಕಲೆ ಕಲಿಯಬೇಕು. ಪ್ರಾಣಿಗಳಾದರೋ ಸಿಕ್ಕಿದ ಹುಲ್ಲು ಸೊಪ್ಪು ತಿನ್ನುತ್ತವೆ, ಕೆಲವು ಬೇಟೆಯಾಡುತ್ತವೆ.. ಇನ್ನು ಸಸ್ಯಗಳಂತೂ ತಮ್ಮ ಆಹಾರ ತಾವೇ ತಯಾರಿಸಿಕೊಳ್ಳುತ್ತವೆ.. ಆದರೆ ಮನುಷ್ಯನದ್ದು ಚೂರು ತಕರಾರಿನದ್ದು. ಅವನ ಆಹಾರ ಅವನೇ ಬೆಳೆಯಬೇಕು, ಅದನ್ನು ಸಂಸ್ಕರಿಸಬೇಕು, ಆಮೇಲೆ ಬೇಯಿಸಬೇಕು. ನಂತರ ತಿಂದು ಬದುಕಬೇಕು. ಇಷ್ಟೆಲ್ಲಾ ಮಾಡುವುದು ಕೂಡ ಇಲ್ಲಿ ಲಿಂಗಾಧಾರಿತವಾಗಿಬಿಟ್ಟಿದೆ. ಆದರೆ ನನಗನ್ನಿಸುವುದು ಅಡುಗೆ ಎಂಬುದು ಪ್ರತಿ ವ್ಯಕ್ತಿಯು ನಡೆಯವುದನ್ನು, ಮಾತಾಡುವುದನ್ನು ಕಲಿತ ಹಾಗೆ ಕಲಿಯಲೇ ಬೇಕಾದ ಒಂದು ಸಹಜ ಜೀವಚಲನೆ. ಇದಕ್ಕೆ ಬೇಕಾದ್ದು ಒಂದು ಸಣ್ಣ ಆಸಕ್ತಿಯಷ್ಟೇ!

ಆಹಾರ ತಯಾರಿಸಿಕೊಳ್ಳುವ ಕೆಲಸವನ್ನು ಮಕ್ಕಳಿಗೆ ಚಿಕ್ಕಂದಿನಿಂದಲೂ ನಾವು ಕಲಿಸುತ್ತಾ ಹೋದರೆ ಮುಂದೆ ಮಕ್ಕಳು ಆ ವಿಷಯಕ್ಕೆ ಇನ್ನೊಬ್ಬರ ಮೇಲೆ ಅವಲಂಬಿತವಾಗುವುದು ನಿಲ್ಲುತ್ತದೆ.. ಹೆಣ್ಣುಮಕ್ಕಳ ಮೇಲೆ ಅನಗತ್ಯವಾಗಿ ಹೇರಿರುವ ಹೊರೆಯೊಂದು ಜಾರಿ ಬೀಳುತ್ತದೆ.. ಹಾಗೆ ಮಕ್ಕಳಿಗೆ ಕಲಿಸುತ್ತಾ ನಾವು ಮತ್ತಷ್ಟು ಕಲಿಯುತ್ತಾ ಜೀವನದ ಸಂತೋಷದ ಕ್ಷಣಗಳನ್ನು ಅನುಭವಿಸುವುದಕ್ಕಿಂತ ಮತ್ತೇನಿದೆ?! ಎಲ್ಲ ಮಕ್ಕಳು ಬಾಲ್ಯದಲ್ಲಿ ಅಡುಗೆಯ ಆಟ ಆಡುವುದು ಇದ್ದೇ ಇದೆ ಅದನ್ನು ಚೂರು ವಿಸ್ತರಿಸಿ, ಮಾಡಿಕೊಳ್ಳುವ ಕಲೆ ಕಲಿಸಿಬಿಟ್ಟರೆ ಮುಂದೆ ಅವೇ ವಿದ್ವತ್ತು, ಮಹತ್ತು ಸೃಷ್ಟಿಸಿಕೊಳ್ಳುತ್ತ್ತವೆ.. ನಾವು ಮನಸ್ಸು ಮಾಡಬೇಕಿರುವುದು ಅಡುಗೆಯನ್ನು ಕಲಿಯುವ ಮತ್ತು ಕಲಿಸುವ ಬಗ್ಗೆ.

ನನಗೆ ಅಡುಗೆಯ ಆಸಕ್ತಿ ಬೆಳೆದಿದ್ದು ಬಾಲ್ಯದ ಅಡುಗೆಯ ಆಟಗಳಲ್ಲೇ.. ಉರಿ ಹಾಕದ ಹಸಿ ಪದಾರ್ಥಗಳ ಅಡುಗೆ. ಕೊಬ್ಬರಿ ಬೆಲ್ಲದ ಚೂರು ಮಾಡುವುದು, ಹಸಿ ರಾಗಿಯ ತಂದು ಒಲೆಯಲ್ಲಿ ಸುಟ್ಟು ಸಕ್ಕರೆ ಜೊತೆ ಬೆರೆಸಿ ತಿನ್ನುವುದು, ದೋರು ಹುಣಸೆಕಾಯಿ ಉದುರಿಸಿ ತಿನ್ನುವುದು, ಹಲಸು ಬಾಳೆಯ ರಸಾಯನ, ಬೇಲದ ಹಣ್ಣಿಗೆ ಬೆಲ್ಲ ಸೇರಿಸಿ ತಿನ್ನುವುದು ಬಹುತೇಕ ಇದೇ ತರಹದ್ದು.. ಇವನ್ನೇ ಅಡುಗೆ ಎಂದು ನಾವು ಬಗೆದಿದ್ದು, ಇವನ್ನೇ ಹಂಚಿಕೊಂಡು ತಿನ್ನುತ್ತಿದ್ದೆವು. ಕೆಲವೊಮ್ಮೆ ಜಗಳವೂ ನಡೆಯುತ್ತಿತ್ತು. ಇವೆಲ್ಲವು ನಮಗೆ ರುಚಿಯ ಪ್ರಾಥಮಿಕ ಪಠ್ಯಗಳು.. ಸಿಹಿ ಯಾವುದು ಹುಳಿ ಯಾವುದು? ಯಾವುದಕ್ಕೆ ಬೆಲ್ಲ ಸೇರಿಸಬೇಕು, ಯಾವುದಕ್ಕೆ ಉಪ್ಪು-ಖಾರ ಬೆರೆಸಬೇಕು ಎಂಬುದೆಲ್ಲಾ ತರಬೇತಿ ಇಲ್ಲಿಯೇ ಆಗುವುದು.. ಬಹಳ ಅಪರೂಪಕ್ಕೆ ಐಸ್ ಕ್ಯಾಂಡಿ ಸಿಗುತ್ತಿತ್ತು. ಕಾಲ ಕಳೆದಂತೆ ನಮ್ಮ ರುಚಿಗ್ರಹಣ ಬಿಂದುಗಳು ಬದಲಾಗಿವೆ, ರುಚಿ ಮೀಮಾಂಸೆ ಕೂಡ ದಿಕ್ಕು ತಿರುಗಿ ನಡೆಯುತ್ತಿವೆ.

ಎಲ್ಲರೊಳಗೂ ಅಡುಗೆಯ ಒಂದೊಂದು ನೆನಪು, ಅನುಭವ ಅಡಗಿಕೊಂಡಿರುತ್ತದೆ. ಅದರಲ್ಲಿ ಅಮ್ಮನ ನೆನಪು ಮಾತ್ರ ಚಿರಸ್ಥಾಯಿ. ನನ್ನ ವಿಷಯದಲ್ಲಿ ಅಜ್ಜಿಯರ ನೆನಪು ಹಾಗೆ ಉಳಿದುಬಿಟ್ಟಿದೆ. ಈಗ್ಗೆ ಕೇವಲ ಇಪತ್ತೈದು ವರ್ಷಗಳ ಹಿಂದೆ ನಮ್ಮ ಅಡುಗೆ ಪದ್ಧತಿ, ವಿಧಿವಿಧಾನ ಹಾಗೂ ಸಲಕರಣೆಗಳು ಇವತ್ತಿನಷ್ಟು ಏಕರೂಪತೆಯನ್ನಾಗಲಿ, ರಾಸಾಯನಿಕ ಪೂರಿತವಾಗಲಿ, ಎಣ್ಣೆ-ಮಸಾಲೆಗಳ ವೈಭವವನ್ನಾಗಲಿ ಉಳ್ಳದ್ದಾಗಿರಲಿಲ್ಲ. ಬಹುವೈವಿಧ್ಯದ ಆರೋಗ್ಯಪೂರ್ಣವಾದ ನಮ್ಮ ಹಳ್ಳಿಯ ಗದ್ದೆ, ತೋಟ, ಹಿತ್ತಿಲಲ್ಲಿ ಬೆಳೆದ ಸೊಪ್ಪುತರಕಾರಿ, ಹಣ್ಣು ಹಂಪಲು, ಗೆಣಸು- ಮೆಣಸು ಮತ್ತು ಆಗಾಗ್ಗೆ ಮೀನು- ಮಾಂಸ ಇತ್ಯಾದಿಗಳನ್ನು ಬಳಸುತ್ತಿದ್ದೆವು. ಆಹಾರ ಎಂಬುದು ನಮ್ಮ ಮಾರುಕಟ್ಟೆಯ ಪ್ರಧಾನ ಸರಕಾಗಿರದ ಕಾಲ ಅದು.

ಸೌದೆ ಒಲೆಗಳು, ಮಡಕೆಗಳು, ತಾಮ್ರದ ಪಾತ್ರೆಗಳು, ಹಗುರಾದ ಹಿಂಡಾಲಿಯಂ ಪಾತ್ರೆಗಳು ಚಿಟಪಟಗುಟ್ಟುತ್ತಾ ಚರ್ರನೇ ಒಗ್ಗರಣೆ ಸದ್ದು ಮಾಡುತ್ತಾ, ಉಕ್ಕೇರಿ ಒಲೆಗೆ ಸುರಿಯುತ್ತಿದ್ದ ಹಾಲು, ಅನ್ನ, ಸಾರುಗಳು, ಸೀದ ರಾಗಿಮುದ್ದೆಯ ಕಂಟು, ನೀರೊಲೆಯಲ್ಲಿ ಸುಟ್ಟ ಹಲಸಿನ ಬೀಜ, ಉಪ್ಪಿನಲ್ಲಿ ಹುರಿದ ಮಾಂಸದ ತುಂಡು - ಈ ವಾಸನೆಗಳ ಜೊತೆಯಲ್ಲಿ ಬೆಳೆದ ನನಗೆ ರುಚಿ-ವಾಸನೆ-ಬಣ್ಣ-ರೂಪ ಇತ್ಯಾದಿ ಕುರಿತು ಸದಾ ಗಮನ ಮತ್ತು ಕುತೂಹಲಗಳಿದ್ದುವು. ಅಜ್ಜಿಯರ ಬೆನ್ನಿಗೆ ಬಿದ್ದು ಅಡುಗೆ ಮನೆಯ ವಾಸನೆಗಳ ಒಡನಾಡುತ್ತ, ಅವರೊಂದಿಗೆ ತೋಟ, ಹಿತ್ತಿಲ ಹೂವು-ಸೊಪ್ಪು- ತರಕಾರಿಗಳ ಜೊತೆ ಓಡಾಡುತ್ತಾ ಇದ್ದ ನನಗೆ ಅಡುಗೆಯ ಆತ್ಮ ಸಂಗಾತ ಬಾಲ್ಯದಲ್ಲೇ ಒಲಿದುಬಿಟ್ಟಿತ್ತು. ತಾರುಣ್ಯಕ್ಕೆ ಬಂದಾಗ ಅದು ಪ್ರಯೋಗಕ್ಕೆ ಸಿದ್ಧವಾಯಿತು.

ಆದರೆ ನಾನು ನಮ್ಮ ಅಜ್ಜಿಯರು, ಅತ್ತೆಯರು, ಬಂಧು ಬಳಗದ ಅಡುಗೆಯ ರೀತಿಗಳನ್ನು ಅನುಸರಿಸಲೇ ಇಲ್ಲ. ಅವುಗಳನ್ನು ಸದಾ ಕಾಲ ಗಮನಿಸಿದ್ದೆನಾದ್ದರಿಂದ ನನ್ನದೇ ಆದ ಮಾರ್ಗವನ್ನು ಅನುಸರಿಸತೊಡಗಿದೆ. ಅದು ರಸ ಮತ್ತು ರುಚಿಗಳ ನಡುವೆ ಹೊಸ ಅನುಸಂಧಾನ ಏರ್ಪಡಿಸಿ ಅಡುಗೆಯಲ್ಲಿ ಇನ್ನೂ ಹೆಚ್ಚಿನ ಆಸಕ್ತಿ ಮತ್ತು ಆನಂದವನ್ನು ಉಂಟುಮಾಡಿತು. ಇನ್ನಷ್ಟು ಬಗೆಗಳನ್ನು ಪರಂಪರೆಯ ಸೀಳುಗಳಿಂ

, ಆಧುನಿಕತೆಯ ಸಿಬಿರುಗಳಿಂದ ಆಯ್ದುಕೊಂಡು ಕೊಲಾಜ್ ಮಾಡತೊಡಗಿದೆ.. ಇವೆಲ್ಲ ಮೇಳೈಸಿ ಅಡುಗೆ ಅಧ್ಯಾತ್ಮ ಮತ್ತು ಕಲೆಯ ವಿರಾಟ್ ಸ್ವರೂಪ ಎಂಬದನ್ನು ಮನಗಂಡೆ. ಅಟ್ಟುವುದು ಮತ್ತು ಬಡಿಸುವುದರಲ್ಲಿ ಮಾತೃ ವಾತ್ಸಲ್ಯ ಮಾತ್ರವಲ್ಲ ಪಿತೃಪ್ರೇಮ ಅಡಗಿರುವುದನ್ನು ಪತ್ತೆ ಹಚ್ಚಿದೆ.. ಅಡುಗೆ ಈಗ ಒಂದು ಕೆಲಸದಂತೆ ನನಗೆ ಭಾಸವಾಗುವುದೇ ಇಲ್ಲ.. ತರಕಾರಿ, ಮಾಂಸ ಹಚ್ಚುವುದು, ಅದಕ್ಕೆ ಮಸಾಲೆ ಉಪ್ಪುಹಾಕಿ ನೆನೆಸುವುದು ಬಳಿಕ ಕರೆಯುವುದು, ಹುರಿಯುವುದು, ಬೇಯಿಸುವುದು, ಬಡಿಸುವುದು ಎಲ್ಲವೂ ಕಾವ್ಯದಂತೆ ಕಾಣುತ್ತದೆ. ಬೇಯಿಸುವಾಗ ಖಾರ, ಉಪ್ಪು, ಹುಳಿ ಕಲಸಿ ಹದಗೊಳಿಸುವುದು ಕಾವ್ಯದ ಸಂರಚನೆಯಂತೆ ತೋರುತ್ತದೆ. ಪ್ರೀತಿಪಾತ್ರರಿಗೆ ಹೊಸರುಚಿಯ ಮಾಡಿ ಬಡಿಸುವುದು ಪ್ರೇಮದಂತೆ ರೋಚಕತೆಯನ್ನುಂಟುಮಾಡುತ್ತದೆ. ಹಲವು ಮಾನಸಿಕ ಸಂಕಟಗಳನ್ನು ಕಳೆದುಕೊಳ್ಳಲು ಪಥ್ಯದಂತೆ ಒದಗುತ್ತದೆ. ಎಷ್ಟೆಲ್ಲಾ ಕಾರಣಗಳಿವೆ ಹುಡುಗನೊಬ್ಬ ಅಡುಗೆ ಕಲಿಯಲು.. ಕಾವ್ಯದಂತೆ, ಕಲೆಯಂತೆ.. ಏಕಾಂತದಲ್ಲಿರುವವರಿಗೆ ಆತ್ಮಸಂಗಾತದಂತೆ.

 ಅಡುಗೆಯೂ ಒಂದು ಕಲೆ ಎಂಬುದನ್ನು ಬಹಳ ಜನರು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಈ ಕಲೆಯ ಸುಳಿಗೆ ಒಮ್ಮೆ ಸಿಕ್ಕಿದರೆ ಮುಗಿಯಿತು, ತಪ್ಪಿಸಲಾಗದ ಆನಂದ ಮತ್ತು ಅಂತಃಕರಣ ನಮ್ಮಿಳಗೆ ಸೃಷ್ಟಿಯಾಗಿ ಬಿಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News