ಜೀವ ತೆಗೆಯುವ ಪ್ರಭುತ್ವ ಬೇಕಿಲ್ಲ; ಜೀವ ಸಂರಕ್ಷಿಸುವ ಪ್ರಭುತ್ವ ಬೇಕಿದೆ...

Update: 2020-01-07 18:27 GMT

ಇಡೀ ಭಾರತ ಉಸಿರಾಡುತ್ತಿರುವುದು ಗ್ರಾಮೀಣ ಜನರಿಂದ. ಗ್ರಾಮಪ್ರದೇಶದಲ್ಲಿ ಭೂ ಮಾಲಕ ಮತ್ತು ಕೂಲಿಕಾರರು ಎಂಬ ಎರಡು ರೀತಿಯ ಜನರನ್ನು ಕಾಣಬಹುದು. ಇಲ್ಲಿ ಒಂದು ಹೊತ್ತಿನ ಅನ್ನಕ್ಕಾಗಿ ದುಡಿಯುತ್ತಿರುವ ಜನಸಂಖ್ಯೆ ಬೇಕಾದಷ್ಟಿದೆ. ದುಡಿಯುತ್ತಿರುವ ಜನರಿಂದಲೇ ಭಾರತಕ್ಕೆ ಅನ್ನ ದೊರೆಯುತ್ತಿರುವುದು. ಈ ಕೂಲಿಜನರ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇಲ್ಲದೆ ಇರುವವರೂ ಇದ್ದಾರೆ. ಇಂತಹವರಿಗೆ ಈ ಪೌರತ್ವದ ಕಾಯ್ದೆ ಯಾವ ದಿಕ್ಕನ್ನು ತೋರಿಸಬಹುದು? ಪೌರತ್ವ ಕಾಯ್ದೆಯಲ್ಲಿ ತನ್ನ ಪೌರತ್ವವನ್ನು ಸಾಬೀತು ಪಡಿಸುವುದಕ್ಕಾಗದೆ ಇದ್ದಾಗ ಇವರನ್ನು ಯಾವ ಜೈಲಿಗೆ ಅಟ್ಟುತ್ತೀರಿ? ಇವರ ಬದುಕು ನಾಶವಾದರೆ ಇಡೀ ಭಾರತ ಉಳಿಯುತ್ತಾ?

ಭಾರತ ಸಂವಿಧಾನದ ಆಶಯವೇ ಪ್ರಜಾಸತ್ತಾತ್ಮಕವಾದ ಪ್ರಜೆ, ಸಮಾಜ ಮತ್ತು ರಾಷ್ಟ್ರನಿರ್ಮಾಣವಾಗಿದೆ. ರಾಷ್ಟ್ರದ ಸ್ವತಂತ್ರ ಮತ್ತು ಸಂವಿಧಾನದ ರಚನೆ ಇವೆರಡರ ಇತಿಹಾಸಗಳನ್ನು ಇಂದಿನ ಜನರಿಗೆ ಮನದಟ್ಟು ಮಾಡುವ ಸಂದರ್ಭ ಹೆಚ್ಚಾಗಿದೆ. ಅನೇಕ ತ್ಯಾಗ ಬಲಿದಾನಗಳಿಂದ ಧರ್ಮರಹಿತ, ಜಾತಿರಹಿತ ಧ್ವನಿಗಳು ಪ್ರಬುದ್ಧ ಭಾರತಕ್ಕಾಗಿ ಹಪಾಹಪಿಸುತ್ತಾ ಹೋರಾಟ ನಡೆಸಿರುವ ಚರಿತ್ರೆ ನಮ್ಮದು. ಇಂತಹ ಭಾರತಕ್ಕೆ ವರ್ತಮಾನ ಉಸಿರುಗಟ್ಟಿದ ವಾತಾವರಣವನ್ನು ನಿರ್ಮಿಸಿದೆ. ಅದಕ್ಕೆ ಕಾರಣ ಕೇಂದ್ರ ಸರಕಾರ ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆಯನ್ನು ಜಾರಿಗೆ ತಂದಿರುವುದು. ಇದರಿಂದ ಭಾರತೀಯರು ಬೀದಿಗೆ ಬರುವಂತೆ ಮಾಡಿದೆ. ಈ ಎನ್‌ಆರ್‌ಸಿ ಕಾನೂನನ್ನು ಕೇಂದ್ರ ಸರಕಾರ 6 ವರ್ಷಗಳ ಹಿಂದೆ ಅಸ್ಸಾಂ ರಾಜ್ಯದಲ್ಲಿ ಜಾರಿಗೆ ತಂದಿತು. ಈ ಕಾನೂನಿನ ಪ್ರಕಾರ ಪ್ರತಿಯೊಬ್ಬ ನಾಗರಿಕರು ನಾವು ಈ ದೇಶದ ಪ್ರಜೆಗಳು ಎಂದು ನಿರೂಪಿಸಲು ಸರಕಾರಕ್ಕೆ ಸೂಕ್ತ ದಾಖಲೆಗಳನ್ನು ನಿರ್ದಿಷ್ಟ ಸಮಯದಲ್ಲಿ ನೀಡಲೇಬೇಕು. ದಾಖಲೆ ಕೊಡದ ನಾಗರಿಕರನ್ನು ಬಂಧಿಸಿ Detention centre ಜೈಲಿನಲ್ಲಿ ಇಡಲಾಗಿದೆ. ಇದರಲ್ಲಿ ಸುಮಾರು 3.9 ಕೋಟಿ ಜನರ ನಾಗರಿಕತೆಯ ಪ್ರಕ್ರಿಯೆಗೆ 6 ವರ್ಷಗಳ ಕಾಲ ನಡೆಯಿತು. ಇದಕ್ಕೆ ತಗುಲಿದ ವೆಚ್ಚ ಸುಮಾರು 1,500 ಕೋಟಿ ರೂ. ಇದಕ್ಕಾಗಿ ಲಕ್ಷಗಟ್ಟಲೆ ಸರಕಾರಿ ಅಧಿಕಾರಿಗಳು ಕೆಲಸ ಮಾಡಬೇಕಾಯಿತು. ಇದರಲ್ಲಿ 18 ಲಕ್ಷಕ್ಕೂ ಹೆಚ್ಚು ನಾಗರಿಕರ ಬಳಿ ದಾಖಲೆಗಳಿಲ್ಲದ ಕಾರಣ ಅವರನ್ನು ಬಂಧಿಸಿ Detention centreನಲ್ಲಿ ಇಡಲಾಗಿದೆ. ಇದರಲ್ಲಿ 12 ಲಕ್ಷಕ್ಕೂ ಹೆಚ್ಚು ಹಿಂದೂಗಳು ಹಾಗೂ 6 ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಇದ್ದಾರೆ. ಇದುವರೆಗೆ 30ಕ್ಕೂ ಹೆಚ್ಚು ಜನ ಈ ಜೈಲಿನಲ್ಲಿ ಅಸುನೀಗಿರುವರು ಎಂಬುದಾಗಿ ಕೇಂದ್ರ ಸರಕಾರ ತನ್ನ ವಿವರಣೆಯನ್ನು ಪಾರ್ಲಿಮೆಂಟ್‌ನಲ್ಲಿ ನೀಡಿದೆ. ಈಗ ಈ ಎನ್‌ಆರ್‌ಸಿಯನ್ನು ಇಡೀ ಭಾರತದಲ್ಲಿ ಜಾರಿಗೊಳಿಸಲು ಇದೇ ಸರಕಾರ ಮುಂದಾಗಿದೆ. ಇವತ್ತಿನ ಭಾರತದ ಜನಸಂಖ್ಯೆ 130 ಕೋಟಿಗೂ ಹೆಚ್ಚಾಗಿದೆ. ಇಷ್ಟು ಜನರ ನಾಗರಿಕತ್ವವನ್ನು ಪರಿಶೀಲಿಸಲು ಎಷ್ಟು ಹಣ ಬೇಕಾಗಬಹುದು? ಎಷ್ಟು ಜನ ಸರಕಾರಿ ಅಧಿಕಾರಿಗಳು ಬೇಕಾಗಬಹುದು? ಎಷ್ಟು ಅವಧಿಯನ್ನು ತೆಗೆದುಕೊಳ್ಳುತ್ತದೆ? ಈ ಅವಧಿಯಲ್ಲಿ ದೇಶದ ಆರ್ಥಿಕತೆಯ ಸ್ಥಿತಿ ಏನಾಗಬಹುದು?

ಹಿಟ್ಲರ್ ನಿರ್ಮಿಸಿದ ಜೈಲಿನಲ್ಲಿ 60 ಲಕ್ಷ ಜನರನ್ನು ಹತ್ಯೆ ಮಾಡಲಾಗಿತ್ತು. ಹಿಟ್ಲರ್‌ನ ಸಾವಿನ ಬಳಿಕ ಜೈಲಿನಲ್ಲಿ ಉಳಿದವರನ್ನು ಬಿಡುಗಡೆ ಮಾಡಲಾಯಿತು. ಹೀಗೇ ಕೊನೆಯ ಹಂತದಲ್ಲಿ ಬಿಡುಗಡೆಗೊಂಡ ಮಾರ್ಟಿನ್ ನಿಯೋಮುಲ್ಲರ್‌ನನ್ನು ಅಮೆರಿಕದ ಸಂಸತ್ ಗೌರವಿಸಿತು. ಆ ವೇಳೆ ಮಾತನಾಡಿದ ಮಾರ್ಟಿನ್ ಅವರು ‘‘ಮೊದಲು ಯಹೂದಿಯರನ್ನು ಹಿಡಿದು ಜೈಲಿಗೆ ಹಾಕಿದರು, ನಾನು ಯಹೂದಿಯಲ್ಲದ್ದರಿಂದ ನಾನು ಮೌನವಾಗಿದ್ದೆ. ಅವರು ಬಳಿಕ ಕಮ್ಯುನಿಸ್ಟರನ್ನು ಹಿಡಿದು ಜೈಲಿಗಟ್ಟಿದರು, ನಾನು ಕಮ್ಯುನಿಸ್ಟ್‌ನಾಗಿರಲಿಲ್ಲ. ಆದ್ದರಿಂದ ತಟಸ್ಥನಾಗಿದ್ದೆ. ಮತ್ತೆ ಅವರು ಕೆಥೊಲಿಕ್‌ರನ್ನು ಬಂಧಿಸಿ ಜೈಲಿಗಟ್ಟಿದರು, ನಾನು ಪ್ರೊಟೆಸ್ಟೆಂಟ್ ಆಗಿದ್ದುದರಿಂದ ಪ್ರತಿಭಟಿಸಲಿಲ್ಲ. ಕೊನೆಗೆ ಅವರು ನನ್ನನ್ನು ಬಂಧಿಸಿದಾಗ ನನ್ನ ಬಗ್ಗೆ ಮಾತನಾಡಲು ಯಾರೂ ಇರಲಿಲ್ಲ’’ ಎಂದರು. ಇದನ್ನು ವರ್ತಮಾನದ ಸರ್ವಾಧಿಕಾರದ ಭಾರತಕ್ಕೆ ಅನ್ವಯಿಸಿ ನೋಡಿ. ಪ್ರಧಾನಿ ನರೇಂದ್ರ ಮೋದಿಯವರು ‘‘ಯಾವ ಭಾರತೀಯ ಪ್ರಜೆಗೂ ಸಿಎಎ ಮತ್ತು ಎನ್‌ಆರ್‌ಸಿಯಿಂದ ತೊಂದರೆ ಆಗುವುದಿಲ್ಲ’’ ಎಂದು ಹೇಳುತ್ತಲೇ ಇದ್ದಾರೆ. ಆದರೆ ಅವರು ಪೌರತ್ವ ಸಾಬೀತು ಮಾಡಲಾಗದ ಭಾರತೀಯನೊಬ್ಬನ ಸಂದಿಗ್ನತೆಯ ಬಗ್ಗೆ ಏನೂ ಮಾತನಾಡುತ್ತಿವಲ್ಲ ಏಕೆ? ದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪ್ರಜೆಗಳ ಮೇಲೆ ಪ್ರಭುತ್ವ ದೌರ್ಜನ್ಯ ನಡೆಸುತ್ತಲೇ ಬರುತ್ತಿದೆ. ಪೌರತ್ವ ಕಾಯ್ದೆಯನ್ನು ಪ್ರಶ್ನಿಸಿದವರನ್ನು ಗೋರಿಯನ್ನಾಗಿಸಿ ಪೌರತ್ವದ ಕಾಯ್ದೆಗೆ ಮನೆ ಕಟ್ಟುವುದಕ್ಕೆ ಹೊರಟಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ, ಆರ್ಥಿಕತೆ ಕುಸಿದು ಬಿದ್ದಿದೆ, ಅರಾಜಕತೆ ತಾಂಡವವಾಡುತ್ತಿದೆ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಅವ್ಯಾಹಕವಾಗಿ ನಡೆಯುತ್ತಿದೆ, ಶೋಷಿತ ಸಮುದಾಯಗಳ ಬದುಕು ಹೀನಾಯವಾಗಿದೆ, ವಿದ್ಯಾವಂತ ಯುವಜನತೆ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ, ಬದುಕೇ ಬರ್ಬರವೆನಿಸುವ ಸ್ಥಿತಿಗೆ ವರ್ತಮಾನ ತಲುಪಿದೆ. ಇದನ್ನು ಕುರಿತು ಚರ್ಚಿಸಬೇಕಾದ ಈ ಹೊತ್ತಿನಲ್ಲಿ ಹೊಸ ಕಾಯ್ದೆಗಳ ಹೆಸರಿನಲ್ಲಿ ಇದೆಲ್ಲವನ್ನು ಮಣ್ಣುಪಾಲು ಮಾಡುತ್ತಿರುವ ಕೇಂದ್ರ ಸರಕಾರಕ್ಕೆ ಘನತೆ, ಗೌರವವಿದೆಯೇ?

ನನ್ನ ಕಣ್ಮುಂದೆ ನಡೆದ ಒಂದು ಘಟನೆ ಹೀಗಿದೆ: ನನ್ನ ಆಧಾರ್ ಕಾರ್ಡ್‌ನಲ್ಲಿ ನನ್ನ ಹೆಸರು ಹಾಗೂ ಹುಟ್ಟಿದ ದಿನಾಂಕ ತಪ್ಪಾಗಿದ್ದರಿಂದ ಅದನ್ನು ಸರಿಪಡಿಸುವುದಕ್ಕಾಗಿ ಮೂರ್ನಾಲ್ಕು ತಿಂಗಳು ಅಲೆದಾಡಿದ ನಂತರ ಎಸ್‌ಬಿಐನಲ್ಲಿ ಟೋಕನ್ ಪಡೆದುಕೊಂಡು ಸರದಿ ಸಾಲಿನಲ್ಲಿ ನಿಂತಿದ್ದೆ. ನನ್ನ ಮುಂದೆ ಒಬ್ಬ ಗಾರೆ ಕೆಲಸ ಮಾಡುವವನು ತನ್ನ ಆಧಾರ್ ಕಾರ್ಡ್ ಮಾಡಿಸುವುದಕ್ಕಾಗಿ ನೋಂದಣಿ ಮಾಡಿಸಲು ನಿಂತಿದ್ದ. ತನ್ನ ಆಧಾರ್ ಕಾರ್ಡ್ ಮಾಡಿಸಲು ಪರದಾಡಿ ಸುಸ್ತಾಗಿ ಹೋಗಿದ್ದ. ಯಾಕೆಂದರೆ, ಆತನ ಕೈಬೆರಳುಗಳಲ್ಲಿನ ರೇಖೆಗಳನ್ನು ಕಂಪ್ಯೂಟರ್ ಗುರುತಿಸುತ್ತಿಲ್ಲ ಆದ್ದರಿಂದ ಅವನಿಗೆ ಆಧಾರ್ ಕಾರ್ಡ್ ಸಿಗುತ್ತಿಲ್ಲ. ಆತ ಗಾರೆ ಕೆಲಸ ಮಾಡುವವನಾಗಿದ್ದರಿಂದ ಕೈ ಬೆರಳುಗಳಲ್ಲಿನ ರೇಖೆಗಳು ಅಳಿಸಿಹೋಗಿದೆಯೋ, ಕೈ ತುಂಬಾ ಗಾಯಗಳಾಗಿದೆಯೋ. ಬ್ಯಾಂಕಿನವನು ‘‘ಅಯ್ಯಾ. ನಿನ್ನ ಕೈ ಬೆರಳಿನ ರೇಖೆಯನ್ನು ಕಂಪ್ಯೂಟರ್ ಗುರುತಿಸುತ್ತಿಲ್ಲ. ನಿನಗೆ ಆಧಾರ್ ಕಾರ್ಡ್ ಮಾಡುವುದಕ್ಕೆ ಸಾಧ್ಯವಿಲ್ಲ ಅಂತ ಎಷ್ಟು ಸಲ ಹೇಳುವುದು’’ ಎಂದು ರೇಗಾಡಿದ. ತಕ್ಷಣ ಆ ವ್ಯಕ್ತಿ ಹತಾಶೆಯಿಂದ ‘‘ನನಗೆ ಆಧಾರ್ ಕಾರ್ಡ್ ಇಲ್ಲ ಅಂತ ರೇಷನ್ ಕಾರ್ಡ್ ಕೊಟ್ಟಿಲ್ಲ, ರೇಷನ್ ಕಾರ್ಡ್ ಇಲ್ಲ ಅಂತ ಸರಕಾರದಿಂದ ಮನೆಕೊಟ್ಟಿಲ್ಲ, ಮನೆ ಇಲ್ಲ ಅಂತ ವೋಟಿನ ಗುರುತು ಚೀಟಿ ಕೊಟ್ಟಿಲ್ಲ’’ ಅಂತ ಗೋಳಿಡಲು ತೊಡಗಿ, ಅಂಗಲಾಚಿದ. ಕೊನೆಗೆ ಆತನಿಗೆ ಸಿಕ್ಕಿದ್ದು ಅವನ ಕಣ್ಣೀರು, ರೋದನೆ ಮಾತ್ರ. ಆತ ಅಲ್ಲಿಗೆ 17ನೇ ಬಾರಿ ಬಂದಿದ್ದನು ಎಂಬುದು ಬ್ಯಾಂಕ್‌ನವರಿಂದಲೇ ತಿಳಿಯಿತು. ಈ ಪ್ರಸಂಗವನ್ನು ಪೌರತ್ವ ಕಾಯ್ದೆಗೆ ತಾಳೆ ಹಾಕಿ ನೋಡಿದರೆ ಗಾಬರಿಯಾಗುತ್ತದೆ. ಈ ದೃಷ್ಟಿಯಲ್ಲಿ ಭಾರತಕ್ಕೆ ಉಳಿಗಾಲವಿದೆಯೇ ಎಂದು ಯೋಚಿಸಿದರೆ?

ಇಡೀ ಭಾರತ ಉಸಿರಾಡುತ್ತಿರುವುದು ಗ್ರಾಮೀಣ ಜನರಿಂದ. ಗ್ರಾಮಪ್ರದೇಶದಲ್ಲಿ ಭೂ ಮಾಲಕ ಮತ್ತು ಕೂಲಿಕಾರರು ಎಂಬ ಎರಡು ರೀತಿಯ ಜನರನ್ನು ಕಾಣಬಹುದು. ಇಲ್ಲಿ ಒಂದು ಹೊತ್ತಿನ ಅನ್ನಕ್ಕಾಗಿ ದುಡಿಯುತ್ತಿರುವ ಜನಸಂಖ್ಯೆ ಬೇಕಾದಷ್ಟಿದೆ. ದುಡಿಯುತ್ತಿರುವ ಜನರಿಂದಲೇ ಭಾರತಕ್ಕೆ ಅನ್ನ ದೊರೆಯುತ್ತಿರುವುದು. ಈ ಕೂಲಿಜನರ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇಲ್ಲದೆ ಇರುವವರೂ ಇದ್ದಾರೆ. ಇಂತಹವರಿಗೆ ಈ ಪೌರತ್ವದ ಕಾಯ್ದೆ ಯಾವ ದಿಕ್ಕನ್ನು ತೋರಿಸಬಹುದು? ಪೌರತ್ವ ಕಾಯ್ದೆಯಲ್ಲಿ ತನ್ನ ಪೌರತ್ವವನ್ನು ಸಾಬೀತು ಪಡಿಸುವುದಕ್ಕಾಗದೆ ಇದ್ದಾಗ ಇವರನ್ನು ಯಾವ ಜೈಲಿಗೆ ಅಟ್ಟುತ್ತೀರಿ? ಇವರ ಬದುಕು ನಾಶವಾದರೆ ಇಡೀ ಭಾರತ ಉಳಿಯುತ್ತಾ?

ಬಹುತೇಕರು ಈ ಪೌರತ್ವ ಕಾಯ್ದೆಯನ್ನು ಕುರಿತಾಗಿ ಮಾತನಾಡುವಾಗ ಈ ಕಾಯ್ದೆ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿದವರನ್ನು ಪತ್ತೆ ಹಚ್ಚಿ ಅವರನ್ನು ವಾಪಸ್ ಅವರ ದೇಶಕ್ಕೆ ಓಡಿಸುವುದಾಗಿದೆ ಎನ್ನುತ್ತಾರೆ. ಹಾಗಾಗಿ ಭಾರತೀಯರಿಗೆ ಈ ಕಾಯ್ದೆಯಿಂದ ಯಾವುದೇ ಅನಾಹುತಗಳಾಗುವುದಿಲ್ಲವೆಂದು ಪ್ರಧಾನಿಯಿಂದ ಹಿಡಿದು ಬಹುತೇಕರು ಜನಸಾಮಾನ್ಯರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಹಾಗಾದರೆ ಈ ಕಾಯ್ದೆಯ ಹಿಂದಿರುವ ಅಜೆಂಡಾವೇನು? ಅಜೆಂಡಾ ಇಷ್ಟೆ; ಈಗ ಎಲ್ಲರ ತಲೆಯಲ್ಲಿ ಪೌರತ್ವ ಎಂದಾಕ್ಷಣ ಮುಸ್ಲಿಮರನ್ನು ಹೊರಹಾಕುತ್ತಾರೆ ಎಂದು ಓಡಾಡಿಸುತ್ತಿದ್ದಾರೆ. ನಂತರ ಕ್ರೈಸ್ತರು, ಜೈನರು, ಬೌದ್ಧರು, ಸಿಖ್ಖರು ಅರ್ಥಾತ್ ಮೂಲನಿವಾಸಿಗಳು! ಕೊನೆಗೆ ಭಾರತದಲ್ಲಿ ಉಳಿಯುವುದು ಮನುಧರ್ಮಶಾಸ್ತ್ರದ ಸಂತಾನಗಳ ಅಧಿಕಾರ. ಅವರಿಗೆ ಜೀತದಾಳುಗಾಳಾಗುವುದು ಭಾರತೀಯರು!

ಇಷ್ಟೆಲ್ಲ ಆಗುತ್ತಿದ್ದರೂ ದೇಶದಲ್ಲಿರುವ ವಿರೋಧ ಪಕ್ಷಗಳು ಏಕೆ ಧ್ವನಿಮಾಡುತ್ತಿಲ್ಲ? ಅವುಗಳು ಯಾವತ್ತೋ ಸತ್ತು ಹೋಗಿವೆ. ವಿರೋಧ ಪಕ್ಷಗಳು ನಿಷ್ಕ್ರಿಯಗೊಂಡರೆ ಜನರೇ ವಿರೋಧ ಪಕ್ಷದವರಾಗಿ ಮಾರ್ಪಾಡಾಗಿ ದೇಶವನ್ನು ಗಂಡಾಂತರದಿಂದ ರಕ್ಷಿಸುವ ಹೊಣೆ ಹೊತ್ತುಕೊಳ್ಳಬೇಕು. ಆದರೆ, ಜನ ಬೀದಿಗೆ ಬಂದರೆ ಪ್ರಭುತ್ವದ ಬಂದೂಕಿನ ತುದಿ ಕೆಲಸಮಾಡುತ್ತಿದೆ. ವಿದ್ಯಾವಂತರು ವಿಶ್ವವಿದ್ಯಾನಿಲಯದಲ್ಲಿ ಪ್ರಶ್ನಿಸಿದರೆ ಪ್ರಭುತ್ವ ತನ್ನ ಚೇಲಾಗಳನ್ನು ಬಿಟ್ಟು ಹಲ್ಲೆ ಮಾಡಿಸುತ್ತಿದೆ. ಎಲ್ಲಿದೆ ಪ್ರಜಾಪ್ರಭುತ್ವ? ಎಲ್ಲಿದೆ ಜನರ ಧ್ವನಿಗೆ ಬೆಲೆ? ಎಲ್ಲಿದೆ ಒಕ್ಕೊರಲ ಹೋರಾಟಗಳು?

ಈ ಪೌರತ್ವ ಕಾಯ್ದೆಯಂತಹ ಸಂದರ್ಭದಲ್ಲಿ ಭಾರತದ ಆರ್ಥಿಕತೆ ಪಾತಾಳಕ್ಕಿಳಿದಿದ್ದನ್ನು ಗುರುತಿಸಬಹುದು. ಇಂತಹ ಸಂದರ್ಭದಲ್ಲಿ ಪ್ರಭುತ್ವದ ವಿರುದ್ಧ ಟೀಕೆ ಟಿಪ್ಪಣಿಗಳು ಸಾಕಷ್ಟು ಬಂದವು. ಇದನ್ನು ಜನರಿಂದ ಮರೆಸುವುದಕ್ಕಾಗಿಯೇ ಈ ಕಾಯ್ದೆಯನ್ನು ಪ್ರಭುತ್ವ ಜಾರಿಗೊಳಿಸಿತು ಎನ್ನುವುದಲ್ಲಿ ಅನುಮಾನವಿಲ್ಲ. ಏಕೆಂದರೆ ರಫೇಲ್ ಹಗರಣವು ಪ್ರಧಾನಿಯ ಮೋದಿಯ ಗಂಟಲಿಗೆ ಸಿಕ್ಕಿಹಾಕಿಕೊಂಡಾಗ ಅವರು ಹೇಳಿದ್ದು ರಫೇಲ್ ದಾಖಲಾತಿಯನ್ನು ಕಳ್ಳರು ಕದ್ದಿದ್ದಾರೆ ಎಂದು. ದೇಶದ ಗೌರವಾನ್ವಿತ ಪ್ರಧಾನಿಯ ಮಾತು ಕೇಳಿದರೆ ನಗಬೇಕೋ ಅಥವಾ ಇಂತಹವರ ಕೈಯಲ್ಲಿ ಪ್ರಜಾಪ್ರಭುತ್ವವನ್ನು ಕೊಟ್ಟೆವಲ್ಲವೆಂದು ನಮಗೆ ನಾವೇ ನಿಟ್ಟುಸಿರು ಬಿಡಬೇಕಾ?

ಈ ಪೌರತ್ವ ಕಾಯ್ದೆ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ ನುಸುಳಿರುವ ಮುಸ್ಲಿಮರ ವಿರುದ್ಧವಲ್ಲ. ಬದಲಾಗಿ ಭಾರತದ ಸಂವಿಧಾನ ಸಾರುವ ಸಮಾನತೆಯ ವಿರುದ್ಧ. ಜಾತಿ, ಮತ, ಧರ್ಮ, ಲಿಂಗ, ಜನಾಂಗ ಸಮಾನತೆ ಎಂಬುವುದು ಸಾಮಾಜಿಕವಾಗಿ ಬೇರೆಬೇರೆ ಎಂದು ಕಾಣಬಹುದು. ಆದರೆ, ಸಂವಿಧಾನದ ಪ್ರಜಾಪ್ರಭುತ್ವದ ತತ್ವವಾಗಿ ಪ್ರತ್ಯೇಕ ಅಲ್ಲ. ಮಾನವ ಸಮಾನತೆ ಎಂಬ ಒಂದೇ ತತ್ವದಡಿಯಲ್ಲಿ ಬರುತ್ತದೆ. ಸಮಾನತೆ ಒಂದು ಕಾನೂನಾತ್ಮಕವಾಗಿ ಒಂದು ವಿಷಯದಲ್ಲಿ ನಿರಾಕರಿಸಲ್ಪಟ್ಟರೆ ಬೇರೆಲ್ಲ ವಿಷಯದಲ್ಲೂ ಅಲುಗಾಡಲು ಆರಂಭವಾಗುತ್ತದೆ. ಜಾತಿಯನ್ನು ಪರಿಗಣಿಸದ ಸಮಾನತೆಯ ಅಂಗವಾಗಿಯೇ ಮೀಸಲಾತಿ, ದಲಿತರ ಮೇಲಿನ ದೌರ್ಜನ್ಯದ ಕಾನೂನುಗಳು, ಹಲವು ಸಾಮಾಜಿಕ ಕಲ್ಯಾಣ ಯೋಜನೆಗಳು, ಲಿಂಗ ಸಮಾನತೆಯ ಅಂಗವಾಗಿ ಮೀಸಲಾತಿ ಮತ್ತಿತರ ಕಾನೂನು, ಕಾರ್ಯಕ್ರಮಗಳು ಅಸ್ತಿತ್ವದಲ್ಲಿವೆ. ಸಿಎಎ ವಿರೋಧವನ್ನು ಕೇವಲ ಮುಸ್ಲಿಮರಿಗೆ ಒಪ್ಪಿಸಿದರೆ ಮುಂದೆ ಸಮಯ ನೋಡಿ ಒಂದೊಂದಾಗಿ ಇವೆಲ್ಲಕ್ಕೂ ಜೀವತೆಗೆಯುವುದಕ್ಕೆ ಅವಕಾಶ ಕೊಟ್ಟಂತೆಯೇ ಆಗುತ್ತದೆ. ಜರ್ಮನಿನ ನಿಯೋಮುಲ್ಲರ್‌ನ ಮಾತನ್ನು ಮತ್ತೊಮ್ಮೆ ಇಲ್ಲಿ ನೆನಪಿಸಿಕೊಳ್ಳಿ ‘‘ಮೊದಲು ಅವರು ಯಹೂದಿಗಳನ್ನು ಕೊಂದರು...’’

 ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಗೆ ತಮ್ಮ ಹುಟ್ಟಿದ ದಿನಾಂಕವೇ ತಿಳಿಯದವರು ತಮ್ಮ ತಂದೆ, ತಾಯಿ, ಅಜ್ಜಿ, ಅಜ್ಜ ಹುಟ್ಟಿದ ಸ್ಥಳದ ದಾಖಲೆ, ಹಲವು ದಶಕಗಳ ಹಿಂದಿನ ದಾಖಲೆಗಳನ್ನು ಎಲ್ಲಿಂದ ತರುತ್ತಾರೆ? ಶಾಲಾ ಸರ್ಟಿಫಿಕೇಟ್ ಅಂತೂ ಕೂಲಿಕಾರರಾದ ಬಹುಜನರಲ್ಲಿ ಲಭ್ಯವಿಲ್ಲ. ಇನ್ನೂ ಈ ದಾಖಲೆಗಳನ್ನು ಆನ್‌ಲೈನ್ ಮೇಲೆ ಸಲ್ಲಿಸುವುದು, ಅದರ ಪಜೀತಿಗಳಾದ ಸ್ಪೆಲ್ಲಿಂಗ್, ಇನಿಸಿಯಲ್, ವಿಳಾಸ ಬದಲಾವಣೆ, ಪಿನ್‌ಕೋಡ್ ವ್ಯತ್ಯಾಸಗಳು ಈ ಕೂಲಿಕಾರರಿಗೆ ಅರ್ಥಾತ್ ಬಹುಜನರಿಗೆ ಹೇಳತೀರದ ತೊಂದರೆಗಳಾಗಿ ತಿಂಗಳುಗಟ್ಟಲೇ ತಿರುಗಿತಿರುಗಿ ರೋಸಿಹೋಗುವಂತೆ ಮಾಡುತ್ತವೆ. ಕಡೆಗೆ ಇದ್ಯಾವ ದಾಖಲೆಗಳೂ ಬೇಡ ಎನ್ನುವ ಸ್ಥಿತಿಗೆ ತಲುಪುತ್ತಾರೆ. ತಮ್ಮ ಬದುಕಿನ ನಿತ್ಯ ಸಂಕಟಗಳ ಜೊತೆಗೆ ಇವುಗಳನ್ನು ನಿಭಾಯಿಸುವುದು ಹೇಗೆ? ಬಹುತೇಕ ಮಾಧ್ಯಮಗಳು ಮಾರಾಟವಾಗಿರುವ ಕಾರಣಕ್ಕಾಗಿ ಪೌರತ್ವಕಾಯ್ದೆಯ ಪರವಾಗಿಯೇ ನಿಂತಿದ್ದಾವೆ. ಬೀದಿಯಲ್ಲಿ ಇದನ್ನು ವಿರೋಧಿಸುವವರನ್ನು ಪೌರತ್ವದ ಕಿಚ್ಚು ಎಂತಲೇ ಬಿತ್ತರಿಸುತ್ತಿದ್ದಾರೆ. ಆದರೆ ಅವರು ಅರ್ಥಮಾಡಿಕೊಳ್ಳಬೇಕು ಇದು ಕಿಚ್ಚಲ್ಲ, ಭಾರತದ ಉಳಿವಿಗಾಗಿ, ಭಾರತ ಸಂವಿಧಾನದ ಉಳಿವಿಗಾಗಿ ಹೋರಾಟ ಎಂದು. ಕಡೆಗೆ ಮಾಧ್ಯಮಗಳು ಸಹ ನಿಯೋಮುಲ್ಲರ್‌ನ ಮಾತಿಗೆ ಸಿಕ್ಕದೆ ಬಚಾವ್ ಆಗುವುದಕ್ಕೆ ಸಾಧ್ಯವಿಲ್ಲ. ಈ ಸಿಎಎ, ಎನ್‌ಆರ್‌ಸಿ ಕ್ಯಾನ್ಸರನ್ನು ಹಬ್ಬುವುದಕ್ಕೆ ಬಿಟ್ಟರೆ ಇಡೀ ಭಾರತ ಸಾಯುತ್ತದೆ.

(ಪ್ರದೀಪ್ ಎನ್ ವಿ

ಸಂಶೋಧಕರು, ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ, ಮಾನಸ ಗಂಗೋತ್ರಿ, ಮೈಸೂರು)

Writer - ಪ್ರದೀಪ್ ಎನ್. ವಿ.

contributor

Editor - ಪ್ರದೀಪ್ ಎನ್. ವಿ.

contributor

Similar News

ಜಗದಗಲ
ಜಗ ದಗಲ