ಬ್ಯಾಂಕಿಂಗ್ ಓಂಬುಡ್ಸ್‌ಮನ್ಗೆ ಯಾವಾಗ ದೂರು ಸಲ್ಲಿಸಬಹುದು?

Update: 2020-01-07 18:27 GMT

ಗ್ರಾಹಕ ದೂರುಗಳ ವ್ಯಾಪ್ತಿಯನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಆಗಿಂದಾಗ್ಗೆ ಬ್ಯಾಂಕಿಂಗ್ ಓಂಬುಡ್ಸ್‌ಮನ್ ಅಥವಾ ಬ್ಯಾಂಕಿಂಗ್ ಲೋಕಪಾಲ ಯೋಜನೆಯನ್ನು ಪರಿಷ್ಕರಿಸುತ್ತಿರುತ್ತದೆ.

ಬ್ಯಾಂಕಿಂಗ್ ಓಂಬುಡ್ಸ್‌ಮನ್ ಯೋಜನೆಯಡಿ ಬ್ಯಾಂಕುಗಳು ಒದಗಿಸುವ ಕೆಲವು ಸೇವೆಗಳಿಗೆ ಸಂಬಂಧಿಸಿದಂತೆ ಕೆಲವು ದೂರುಗಳ ಪರಿಹಾರಕ್ಕಾಗಿ ಬ್ಯಾಂಕ್ ಗ್ರಾಹಕರು ತಮ್ಮ ಸಮಸ್ಯೆಗಳನ್ನೆತ್ತಬಹುದು. ಆರ್‌ಬಿಐನಿಂದ ನೇಮಕಗೊಂಡಿರುವ ಬ್ಯಾಂಕಿಂಗ್ ಓಂಬುಡ್ಸ್ ಮನ್ ಕೆಲವು ಬ್ಯಾಂಕಿಂಗ್ ಸೇವೆಗಳಲ್ಲಿ ಕೊರತೆಯ ವಿರುದ್ಧ ಗ್ರಾಹಕರ ದೂರುಗಳನ್ನು ಬಗೆಹರಿಸುವ ಹಿರಿಯ ಅಧಿಕಾರಿಯಾಗಿರುತ್ತಾರೆ.

ಕ್ರೆಡಿಟ್ ಕಾರ್ಡ್ ದೂರುಗಳು, ಭರವಸೆಯಂತೆ ಸೇವೆಗಳನ್ನು ಒದಗಿಸದಿರುವುದು, ಖಾತೆದಾರನಿಗೆ ಪೂರ್ವ ಸೂಚನೆ ನೀಡದೆ ಶುಲ್ಕಗಳನ್ನು ವಿಧಿಸುವುದು ಮತ್ತು ಆಯಾ ಬ್ಯಾಂಕ್‌ಗಳು ಅಳವಡಿಸಿಕೊಂಡಿರುವ ಫೇರ್ ಪ್ರಾಕ್ಟೀಸ್ ಕೋಡ್‌ನ ಉಲ್ಲಂಘನೆಯ ದೂರುಗಳನ್ನು ಬ್ಯಾಂಕಿಂಗ್ ಓಂಬುಡ್ಸ್‌ಮನ್ ಪರಿಶೀಲಿಸುತ್ತಾರೆ.

ಹಣಪಾವತಿಯಲ್ಲಿ ವಿಳಂಬ ಅಥವಾ ಹಣ ಪಾವತಿ ಮಾಡದಿರುವುದು,ಬ್ಯಾಂಕುಗಳ ಮೂಲಕ ಹಣ ರವಾನೆ,ಬಿಲ್‌ಗಳ ಪಾವತಿಗಾಗಿ ಚೆಕ್‌ಗಳ ಸ್ವೀಕಾರ, ಸಣ್ಣ ಮುಖಬೆಲೆಯ ನೋಟುಗಳು ಅಥವಾ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಣೆ ಮತ್ತು ಕಮಿಷನ್ ವಿಧಿಸುವಿಕೆ ಸೇರಿದಂತೆ ವಿವಿಧ ಕಾರಣಗಳಿಂದ ಬ್ಯಾಂಕಿಂಗ್ ಓಂಬುಡ್ಸ್‌ಮನ್‌ಗೆ ದೂರುಗಳನ್ನು ಸಲ್ಲಿಸಬಹುದಾಗಿದೆ.

ಹಣಪಾವತಿಯಲ್ಲಿ ಅಸಾಧಾರಣ ವಿಳಂಬ,ಹಣಪಾವತಿ ಮಾಡದಿರುವುದು, ಚೆಕ್‌ಗಳು, ಡ್ರಾಫ್ಟ್‌ಗಳು, ಬಿಲ್‌ಗಳ ಕಲೆಕ್ಷನ್‌ನಲ್ಲಿ ವಿಳಂಬ ಇತ್ಯಾದಿಗಾಗಿ, ಯಾವುದೇ ಸೂಕ್ತ ಕಾರಣವನ್ನು ನೀಡದೆ ಸಣ್ಣ ಮುಖಬೆಲೆಯ ನೋಟುಗಳನ್ನು ಮತ್ತು ನಾಣ್ಯಗಳನ್ನು ಸ್ವೀಕರಿಸಲು ಬ್ಯಾಂಕು ನಿರಾಕರಿಸಿದರೆ ಮತ್ತು ಸ್ವೀಕರಿಸಲು ಕಮಿಷನ್ ವಿಧಿಸಿದರೆ ಬ್ಯಾಂಕಿಂಗ್ ಓಂಬುಡ್ಸ್‌ಮನ್‌ಗೆ ದೂರುಗಳನ್ನು ಸಲ್ಲಿಸಬಹುದು.

ನಿಮ್ಮ ಖಾತೆಗೆ ಹಣ ಜಮೆಯಾಗದಿದ್ದಾಗ ಅಥವಾ ಅದಕ್ಕೆ ವಿಳಂಬವಾದಾಗಲೂ ನೀವು ದೂರನ್ನು ದಾಖಲಿಸಬಹುದು.

ಡ್ರಾಫ್ಟ್‌ಗಳು, ಪೇ ಆರ್ಡರ್‌ಗಳು ಮತ್ತು ಬ್ಯಾಂಕರ್ಸ್ ಚೆಕ್‌ಗಳ ವಿತರಣೆಯಲ್ಲಿ ವಿಳಂಬವಾದರೆ ಅಥವಾ ಇಂತಹ ಡ್ರಾಫ್ಟ್ ಗಳು ಮತ್ತು ಚೆಕ್‌ಗಳ ವಿತರಣೆಯಲ್ಲಿ ಬ್ಯಾಂಕು ವಿಫಲಗೊಂಡರೆ ಅದರ ವಿರುದ್ಧ ಬ್ಯಾಂಕಿಂಗ್ ಓಂಬುಡ್ಸ್‌ಮನ್‌ಗೆ ದೂರು ನೀಡಬಹುದು.

ಬ್ಯಾಂಕುಗಳ ಕಾರ್ಯಾಚರಣೆಗೆ ನಿಗದಿತ ಸಮಯವಿರುತ್ತದೆ. ಬ್ಯಾಂಕುಗಳು ತಮ್ಮ ಕೆಲಸದ ಅವಧಿಗೆ ಅಂಟಿಕೊಳ್ಳದಿದ್ದರೂ ನೀವು ಬ್ಯಾಂಕಿಂಗ್ ಓಂಬುಡ್ಸ್‌ಮನ್‌ಗೆ ದೂರಿಕೊಳ್ಳಬಹುದು.

ಬರವಣಿಗೆ ಅಥವಾ ನೇರ ಒಪ್ಪಂದದ ಮೂಲಕ ಬ್ಯಾಂಕು ತಾನು ಭರವಸೆ ನೀಡಿರುವ ಬ್ಯಾಂಕಿಂಗ್ ಸೌಲಭ್ಯಗಳನ್ನು (ಸಾಲ ಹೊರತುಪಡಿಸಿ) ಒದಗಿಸುವಲ್ಲಿ ವಿಫಲಗೊಂಡರೆ ಅಥವಾ ವಿಳಂಬಿಸಿದರೆ ಅಂತಹ ಪ್ರಕರಣಗಳಲ್ಲಿ ದೂರು ಸಲ್ಲಿಸಬಹುದು.

  ಠೇವಣಿಗಳನ್ನು ವಾಪಸ್ ಮಾಡದಿರುವುದು, ಚೆಕ್ ನಗದೀಕರಣ, ವರ್ಗಾವಣೆ ಇತ್ಯಾದಿಗಳ ಬಾಬ್ತು ಹಣವನ್ನು ಗ್ರಾಹಕನ ಖಾತೆಗೆ ಜಮೆ ಮಾಡದಿರುವುದು, ಬ್ಯಾಂಕ್ ಖಾತೆಯಲ್ಲಿನ ಠೇವಣಿಗಳ ಮೇಲೆ ಅನ್ವಯವಾಗುವ ಬಡ್ಡಿಯ ಕುರಿತು ಆರ್‌ಬಿಐ ನಿರ್ದೇಶಗಳಿದ್ದರೆ ಅವುಗಳನ್ನು ಬ್ಯಾಂಕ್ ಪಾಲಿಸದಿರುವುದು ಇವೂ ಬ್ಯಾಂಕಿಂಗ್ ಓಂಬುಡ್ಸ್‌ಮನ್‌ಗೆ ದೂರು ಸಲ್ಲಿಸಲು ಕಾರಣಗಳಾಗುತ್ತವೆ.

ಭಾರತದಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿರುವ ಅನಿವಾಸಿ ಭಾರತೀಯರು ವಿದೇಶಗಳಿಂದ ತಮ್ಮಿಂದ ಹಣ ರವಾನೆ, ಠೇವಣಿಗಳು ಮತ್ತು ಇತರ ಬ್ಯಾಂಕ್ ಸಂಬಂಧಿತ ವಿಷಯಗಳಲ್ಲಿ ಬ್ಯಾಂಕಿಂಗ್ ಓಂಬುಡ್ಸ್‌ಮನ್‌ಗೆ ದೂರು ಸಲ್ಲಿಸಬಹುದು.

ಯಾವುದೇ ಸಿಂಧುವಾದ ಕಾರಣವನ್ನು ನೀಡದೇ ಡಿಪೋಸಿಟ್ ಖಾತೆಗಳನ್ನು ಆರಂಭಿಸಲು ಬ್ಯಾಂಕು ನಿರಾಕರಿಸಿದ್ದರೆ ಆಗಲೂ ಬ್ಯಾಂಕಿಂಗ್ ಓಂಬುಡ್ಸ್‌ಮನ್ ಮೆಟ್ಟಿಲನ್ನೇರಬಹುದು.

ಎಟಿಎಂ ಅಥವಾ ಡೆಬಿಟ್ ಕಾರ್ಡ್, ಪ್ರಿಪೇಡ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಕುರಿತು ಆರ್‌ಬಿಐ ಸೂಚನೆಗಳಿಗೆ ಬ್ಯಾಂಕುಗಳು ಅಂಟಿಕೊಳ್ಳದಿದ್ದಾಗಲೂ ಗ್ರಾಹಕರು ಬ್ಯಾಂಕಿಂಗ್ ಓಂಬುಡ್ಸ್‌ಮನ್ ಮೊರೆ ಹೋಗಬಹುದು.

ಈ ಪೈಕಿ ಯಾವುದೇ ಸಮಸ್ಯೆಯನ್ನೆದುರಿಸುತ್ತಿರುವ ಗ್ರಾಹಕರು ಮೊದಲು ತಮ್ಮ ಬ್ಯಾಂಕಿನಲ್ಲಿ ದೂರು ಸಲ್ಲಿಸಬೇಕು ಮತ್ತು ಅಲ್ಲಿ ತೃಪ್ತಿಕರವಾದ ಪರಿಹಾರ ಸಿಗದಿದ್ದಾಗ ಬ್ಯಾಂಕಿಂಗ್ ಓಂಬುಡ್ಸ್ ಮನ್‌ಗೆ ದೂರು ಸಲ್ಲಿಸಬಹುದು.

ನಿಗದಿತ ನಮೂನೆಯನ್ನು ಭರ್ತಿ ಮಾಡುವ ಮೂಲಕ ಅಥವಾ ಆನ್‌ಲೈನ್ ಮೂಲಕ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ದೂರುಗಳನ್ನು ಸಲ್ಲಿಸಬಹುದು.

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News

ಜಗದಗಲ
ಜಗ ದಗಲ