ನೆಡದಿರಿ ನೀಲಗಿರಿ

Update: 2020-01-10 05:46 GMT

ನೀಲಗಿರಿಯ ಹಿನ್ನೆಲೆ

ನೀಲಗಿರಿಯು ಆಸ್ಟ್ರೇಲಿಯಾದ ಸ್ಥಳೀಯ ಸಸ್ಯವಾಗಿದ್ದು ಗುಂಪಾಗಿ, ಪೊದೆ ರೂಪವಾಗಿ ಬೆಳೆಯುವ ಮರಗಳಾಗಿವೆ. ಇದು ನೈಸರ್ಗಿಕ ಕೀಟನಾಶಕವಾಗಿದ್ದು ನೀಲಗಿರಿ ಎಣ್ಣೆ ಅತ್ಯಂತ ದಹನಶೀಲವಾಗಿರುವುದರಿಂದ ಕಾಡ್ಗಿಚ್ಚು ಹಬ್ಬಲೂ ಇದು ಕಾರಣವಾಗುತ್ತದೆ. ಇದರ ಅಂತರ್ಜಲ ಹೀರುವಿಕೆಯ ಉದಾಹರಣೆಯೆಂದರೆ ಜೌಗು ನೆಲಗಳನ್ನು ಒಣಗಿಸಲು ನೀಲಗಿರಿ ಬೆಳೆಸುತ್ತಾರೆಂದರೆ ನೀಲಗಿರಿ ಮಹಾತ್ಮೆಯನ್ನು ಊಹಿಸಿಕೊಳ್ಳಲೂ ಅಸಾಧ್ಯ.

‘ನೆಡದಿರಿ ನೀಲಗರಿ’ ಎಂಬ ಪರಿಸರ ಜಾಗೃತಿ ಮೂಡಿಸುವ ಪುಸ್ತಕವೊಂದನ್ನು ಲೇಖಕ ಚಳ್ಳಕೆರೆ ಯರ್ರಿಸ್ವಾಮಿ ದಶಕಗಳ ಹಿಂದೆಯೇ ಬರೆದು ನೀಲಗಿರಿಯ ಬಾಧಕಗಳ ಕುರಿತು ಎಚ್ಚರಿಸಿದ್ದಾರೆ.

 ಹೌದು. ನೀಲಗಿರಿ ಎಂಬುದು ಅಂತರ್ಜಲವನ್ನು ಕೊಳವೆ ಬಾವಿಗಿಂತಲೂ ಅಧಿಕವಾಗಿ ಹೀರುವ ಬಕಾಸುರ ಮರವಾಗಿದೆ. ಈ ನೀಲಗಿರಿ ಮರಗಳಲ್ಲಿ ಹಸಿ ನೀರಿನಾಂಶವಿದ್ದರೂ ಬೆಂಕಿ ಇಟ್ಟರೆ ಹಸಿ ಮರವೇ ಧಗ ಧಗ ಎಂದು ದಹಿಸುವ ಮರ ಇದಾಗಿದೆ.

ನೀಲಗಿರಿಯನ್ನು ಈ ಹಿಂದಿನಿಂದಲೂ ಬೆಂಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅತಿ ಹೆಚ್ಚಾಗಿ ಒಂದು ಬೆಳೆಯನ್ನಾಗಿ ರೈತರು ತಮ್ಮ ಜಮೀನುಗಳಲ್ಲಿ ದೀರ್ಘಾವಧಿಯಲ್ಲಿ ಬೆಳೆದು ಸೌದೆಯಾಗಿ ಮಾರಾಟ ಮಾಡುವ ಪರಿಪಾಠ ಹೊಂದಿರುತ್ತಾರೆ

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ತನ್ನ ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚಾಗಿ ನೀಲಗಿರಿ ನೆಡೆಸಿ ಪೋಷಿಸಿಸುತ್ತಿದೆ. ಇಂತಹ ನೀಲಗಿರಿ ಮರಗಳು ಪ್ರತಿದಿನಕ್ಕೆ ಭೂಮಿಯಲ್ಲಿನ ನಲವತ್ತು ಲೀಟರ್ ನೀರನ್ನು ಹೀರಿಕೊಳ್ಳಲಿದೆ ಎಂದು ಪ್ರಾಯೋಗಿಕವಾಗಿ ಸಾಬೀತಾಗಿದೆ.

ಈ ಪರಿಣಾಮದಿಂದ ನೀಲಗಿರಿಯು ಭೂಮಿಯಲ್ಲಿನ ಅಂತರ್ಜಲ ಬಸಿಯುವ ಯಂತ್ರಗಳಾದ ಬೋರ್‌ವೆಲ್‌ನ ಸಬ್ ಮರ್ಸಿಬಲ್ ಮೋಟರ್ ಪಂಪುಗಳಂತಾಗಿಬಿಟ್ಟಿವೆ. ಅಂತರ್ಜಲ ಹೀರಿಕೊಳ್ಳುವುದರಲ್ಲಿ ನೀಲಗಿರಿಯು ಕೊಳವೆ ಬಾವಿಗಳಷ್ಟೆ ಪಾತ್ರವಹಿಸುತ್ತವೆ.

ಈ ಮರಗಳಲ್ಲಿರುವ ಎಣ್ಣೆಯ ದಹನಶೀಲ ಅಂಶದಿಂದಾಗಿ ಕಾಳ್ಗಿಚ್ಚು ಉದ್ಭವವಾಗಲು ನೀಲಗಿರಿಯೂ ಪ್ರಮುಖ ಕಾರಣ. ಪ್ರಸ್ತುತ ಆಸ್ಟ್ರೇಲಿಯದ ಕಾಡಿನ ಕಾಳ್ಗಿಚ್ಚಿಗೆ ಅಲ್ಲಿನ ನೀಲಗಿರಿಯೇ ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು.

ಇಂತಹ ಅಂತರ್ಜಲ ಮತ್ತು ಅರಣ್ಯಕ್ಕೂ ಮಾರಕವಾಗಿರುವ ನೀಲಗಿರಿಯನ್ನು ಅರಣ್ಯ ಇಲಾಖೆ ಇನ್ನೂ ನಾಟಿ ಮಾಡಿ ಪೋಷಿಸುತ್ತಿದೆ.

ಗುಬ್ಬಿ ತಾಲೂಕು ಅಂಕಸಂದ್ರ ಮೀಸಲು ಅರಣ್ಯವು ಸುಮಾರು 71 ಸಾವಿರ ಎಕರೆಯಷ್ಟು ಅರಣ್ಯ ಭೂಮಿಯಿದ್ದು ಅದರಲ್ಲಿ ಸುಮಾರು ಎರಡು ಸಾವಿರ ಎಕರೆಯಷ್ಟು ಅರಣ್ಯ ಭೂಮಿಯಲ್ಲಿ ನೀಲಗಿರಿ ಕುರುಚಲು ಕಾಡಿದೆ ಎನ್ನುತ್ತಾರೆ ಗುಬ್ಬಿಯ ವಲಯ ಅರಣ್ಯಅಧಿಕಾರಿಗಳಾದ ರವಿ ಅವರು.

ಈ ಮೀಸಲು ನೀಲಗಿರಿ ಅರಣ್ಯದ ಆಸು ಪಾಸಿನಲ್ಲಿರುವ ರೈತರ ಜಮೀನುಗಳಲ್ಲಿ ಅಂತರ್ಜಲ ಬತ್ತಲು ಈ ನೀಲಗಿರಿಯೂ ಒಂದು ಪ್ರಮುಖ ಕಾರಣವಾಗಿದೆ. ಈ ಪರಿಣಾಮವನ್ನು ಅರಿತ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ರಾಜ್ಯ ಉಚ್ಚನ್ಯಾಯಾಲಯದ ಆದೇಶದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಳೆದಿರುವ ರೈತರೆಲ್ಲರೂ ನೀಲಗಿರಿಯನ್ನು ತೆರವು ಮಾಡುವಂತೆ ಆದೇಶ ಮಾಡಿದ್ದಾರೆ.

ಈ ಬಗೆಯ ಆದೇಶಗಳು ನೀಲಗಿರಿ ಹೊಂದಿರುವ ಎಲ್ಲ ಜಿಲ್ಲೆಗಳಲ್ಲೂ ಆಗಿ ಅರಣ್ಯ ಮತ್ತು ಖಾಸಗಿ ರೈತರ ಜಮೀನಿನಲ್ಲಿರುವ ನೀಲಗಿರಿಯನ್ನು ತೆಗೆಸುವ ನಿರ್ಧಾರವನ್ನು ಸರಕಾರ ಶೀಘ್ರವಾಗಿ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ರೈತಾಪಿ ವರ್ಗ.

ಅಂತರ್ಜಲ ವೃದ್ಧಿಸಲು ಸಣ್ಣನೀರಾವರಿ ಇಲಾಖೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಇದರ ಜೊತೆಗೆ ಅಂತರ್ಜಲ ಕಸಿಯುತ್ತಿರುವ ನೀಲಗಿರಿಯನ್ನು ಸರಕಾರ ನಿಷೇಧಿಸುವ ಅಗತ್ಯತೆ ಇದೆ.

ನಾವು ನೆಟ್ಟಿಲ್ಲ...

ಗುಬ್ಬಿ ತಾಲೂಕು ಹಾಗೂ ಶಿರಾ ತಾಲೂಕಿನ ಭೌಗೋಳಿಕ ಪ್ರದೇಶದಲ್ಲಿರುವ ಅಂಕಸಂದ್ರ ಮೀಸಲು ಅರಣ್ಯದಲ್ಲಿ ಸುಮಾರು ಎರಡು ಸಾವಿರ ಎಕರೆಯಲ್ಲಿ ನೀಲಗಿರಿ ಇದೆ. ಕಳೆದ ಐದು ವರ್ಷದಿಂದ ಸರಕಾರದ ಆದೇಶದಂತೆ ನೀಲಗಿರಿ ಮತ್ತು ಅಕೇಶಿಯಾ ಸಸಿಗಳನ್ನು ನಾವು ನೆಟ್ಟಿಲ್ಲ. ಯಾವುದೇ ಆದೇಶವಿಲ್ಲದೆ ನಾವು ಅರಣ್ಯದಲ್ಲಿನ ನೀಲಗಿರಿಯನ್ನು ತೆಗೆಯುವುದಾಗಲಿ, ಕತ್ತರಿಸುವುದಾಗಲಿ ಮಾಡುವುದಿಲ್ಲ. ಅರಣ್ಯ ಇಲಾಖೆಯಲ್ಲಿನ ನೀಲಗಿರಿ ಸಸಿ ಹಾಕಿಸಿ ನಂತರದ 30 ವರ್ಷಗಳ ನಂತರ ಇಲಾಖೆಯ ಅನುಮತಿಯಂತೆ ತೆಗೆದು ಹೊಸ ಪ್ಲಾಂಟೇಶನ್ ಮಾಡಲಾಗುವುದು.

-ರವಿ, ವಲಯ ಅರಣ್ಯಾಧಿಕಾರಿಗಳು, ಗುಬ್ಬಿ ವಲಯ

ಅಂತರ್ಜಲ ಕೊರತೆಗೆ ನೀಲಗಿರಿಯೂ ಕಾರಣ

 ನಮ್ಮ ಊರಿನ ಸುತ್ತ ಅರಣ್ಯವಿದ್ದು ಅರಣ್ಯದ ತುಂಬೆಲ್ಲಾ ನೀಲಗಿರಿ ಮರಗಳೇ ಇದ್ದು ಇದರಿಂದ ನಮ್ಮ ಭಾಗದಲ್ಲಿ ಅಂತರ್ಜಲ ಕೊರತೆ ಉಂಟಾಗಲಿಕ್ಕೆ ನೀಲಗಿರಿಯೂ ಪ್ರಮುಖ ಕಾರಣ. ಆದ್ದರಿಂದ, ಸರಕಾರ ಅರಣ್ಯದಲ್ಲಿರುವ ನೀಲಗಿರಿ ತೆಗೆದು ಪರಿಸರ ಸ್ನೇಹಿ ಮರಗಳನ್ನು ಬೆಳೆಸಬೇಕು.

-ಗಜೇಂದ್ರ, ಬಿಇ ವಿದ್ಯಾರ್ಥಿ ,ಅಂಕಸಂದ್ರ ಗುಬ್ಬಿ ತಾಲೂಕು

Writer - ಲಕ್ಷ್ಮೀಕಾಂತರಾಜು ಎಂ.ಜಿ.

contributor

Editor - ಲಕ್ಷ್ಮೀಕಾಂತರಾಜು ಎಂ.ಜಿ.

contributor

Similar News

ಜಗದಗಲ
ಜಗ ದಗಲ