ದರ್ಬಾರ್: ಹಳೆಯ ಪೊಲೀಸನ ಹೊಸ ದರ್ಬಾರ್..!

Update: 2020-01-11 18:08 GMT

ಹೊಸ ಬಾಟಲಿಯಲ್ಲಿ ಹಳೇ ಮದ್ಯ ಕೊಡುವುದನ್ನು ಕೇಳಿದ್ದೇವೆ. ಬಹುಶಃ ಅದಾದರೂ ಒಂದು ಮಟ್ಟಿಗೆ ಕೆಲಸ ಮಾಡಬಹುದು. ಆದರೆ ಹಳೆಯ ಬಾಟಲಿಯಲ್ಲಿ ಹೊಸ ಮದ್ಯವನ್ನು ತುಂಬಿ ಹೊಸ ಜಾಗದಲ್ಲಿ ಇಟ್ಟ ಮಾತ್ರಕ್ಕೆ ವಿಶೇಷ ಸ್ಥಾನ ಸಿಗಬೇಕಾಗಿಲ್ಲ. ದರ್ಬಾರ್ ಚಿತ್ರದ ಪರಿಸ್ಥಿತಿಯೂ ಹಾಗೆಯೇ ಆಗಿದೆ.

ರಜನಿಕಾಂತ್ ಹಲವು ವರ್ಷಗಳ ಬಳಿಕ ಪೊಲೀಸ್ ಪಾತ್ರದಲ್ಲಿ ಕಾಣಿಸುತ್ತಿದ್ದಾರೆನ್ನುವುದು ವಿಶೇಷ. ಆದರೆ ಈಗಲೂ ಕೂಡ ಅದೇ ಪೊಲೀಸ್ ಅಧಿಕಾರಿಯ ಹೊಡೆದಾಟ ಬಡಿದಾಟ ಬಿಟ್ಟು ಬೇರೆ ಏನನ್ನೂ ಹೇಳದಿರುವ ಚಿತ್ರ ಹೊಸತನ ನೀಡುವ ವಿಚಾರದಲ್ಲಿ ಎಡವಿದೆ ಎಂದೇ ಹೇಳಬಹುದು. ಮುಂಬೈ ಪೊಲೀಸ್ ಕಮಿಷನರ್ ಆದಿತ್ಯ ಅರುಣಾಚಲಂ ಎನ್ನುವುದು ನಾಯಕನ ಪಾತ್ರ. ನಡುವಯಸ್ಸು ದಾಟಿರುವ ಆತನಿಗೆ ಹದಿಹರೆಯಕ್ಕೆ ಕಾಲಿಡುತ್ತಿರುವ ವಳ್ಳಿ ಎಂಬ ಮಗಳು. ಪತ್ನಿ ಇಲ್ಲ. ಮುಂಬೈ ಮಹಾನಗರವನ್ನು ಕಾಡುತ್ತಿರುವ ಡ್ರಗ್ಸ್ ಜಾಲಕ್ಕೆ ಅಂತ್ಯ ಹಾಡುವ ನಿರ್ಧಾರ ಆದಿತ್ಯ ಅರುಣಾಚಲಂನದ್ದು. ಆ ಹೋರಾಟದಲ್ಲಿ ಆತನ ಪ್ರಮುಖ ಎದುರಾಳಿ ಯಾರು? ಮುಂದೆ ಏನೆಲ್ಲ ನಡೆಯುತ್ತದೆ ಎನ್ನುವುದೇ ಚಿತ್ರದ ಕತೆ.

ನಲುವತ್ತು ದಾಟಿದ ಪೊಲೀಸ್ ಪಾತ್ರಕ್ಕೆ ರಜನಿಯ ದೇಹ, ವೇಗ, ಸ್ಟೈಲ್ ಎಲ್ಲವೂ ಹೊಂದಿಕೊಂಡಿದೆ. ಆದರೆ ಶಂಕರ್ ಚಿತ್ರಗಳಲ್ಲಿ ಕಾಣುವಂತಹ ಮೇಕಪ್, ಮೇಕೋವರ್ ಕಾಣಿಸದೆ ಆರಂಭದ ಒಂದಷ್ಟು ದೃಶ್ಯಗಳಲ್ಲಿ ರಜನಿ ತುಟಿಗೆ ಸದಾ ಲಿಪ್ ಬಾಮ್ ಹಚ್ಚಿಕೊಂಡಂತೆ ಕಾಣಿಸುತ್ತದೆ. ಜನಪ್ರಿಯ ಛಾಯಾಗ್ರಾಹಕ ಸಂತೋಷ್ ಶಿವನ್ ಅವರ ಛಾಯಾಗ್ರಹಣ ಕೂಡ ಇಲ್ಲಿ ಗಮನ ಸೆಳೆಯುವುದಿಲ್ಲ. ರಜನಿ ಎಂದರೇನೇ ಸ್ಟೈಲ್ ಮತ್ತು ವೇಗ. ಆದರೆ ಅಗತ್ಯದ ದೃಶ್ಯಗಳನ್ನು ವೇಗದ ಹಾಗೂ ಪರಿಣಾಮಕಾರಿ ಸಂಕಲನಕ್ಕೆ ಒಳಪಡಿಸದಿರುವುದು ಕೂಡ ನಿರಾಶೆ ಮೂಡಿಸುತ್ತದೆ. ಆದರೆ ಹೊಡೆದಾಟದ ದೃಶ್ಯಗಳಲ್ಲಿ ಶ್ರೀಕರ ಪ್ರಸಾದ್ ಸಂಕಲನ ಮೆಚ್ಚುವಂತಿದೆ. ಅದರಲ್ಲಿ ಪೀಟರ್ ಹೇನ್ ಮತ್ತು ರಾಮ್ ಲಕ್ಷ್ಮಣ್ ಅವರ ಸಾಹಸ ಸಂಯೋಜನೆಯ ಪ್ರಭಾವ ಖಂಡಿತವಾಗಿ ಕಾಣಬಹುದು. ನಿರ್ದೇಶಕರಾಗಿ ಮುರುಗದಾಸ್ ಅವರು ತನ್ನ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಹಾಗಾಗಿ ನಯನ ತಾರಾಳಂಥ ನಾಯಕಿ ಇದ್ದರೂ ಪಾತ್ರ ಪ್ರಾಧಾನ್ಯತೆ ಕಳೆದುಕೊಂಡು ದೃಶ್ಯಗಳು ಹಾಸ್ಯಕ್ಕೆ ಮೀಸಲಾಗಿಬಿಟ್ಟಿದೆ. 

ಆದರೆ ಮಗಳು ವಳ್ಳಿಯ ಪಾತ್ರದಲ್ಲಿ ನಿವೇದ ಥಾಮಸ್ ಭಾವನಾತ್ಮಕ ದೃಶ್ಯಗಳಲ್ಲಿ ಕುಟುಂಬ ಪ್ರೇಕ್ಷಕರ ಕಣ್ಣೀರು ಕದಿಯುತ್ತಾರೆ! ಉಳಿದಂತೆ ಅಜಯ್ ಮಲ್ಹೋತ್ರ ಪಾತ್ರಧಾರಿ ಪ್ರತೀಕ್ ಬಬ್ಬರ್, ವಿಜಯ ಮಲ್ಹೋತ್ರ ಪಾತ್ರಧಾರಿ ನವಾಬ್ ಶಾ ಮತ್ತು ಹರಿ ಚೋಪ್ರ ಪಾತ್ರದಲ್ಲಿ ಸುನೀಲ್ ಶೆಟ್ಟಿ ಗಮನಾರ್ಹ ನಟನೆ ನೀಡಿದ್ದಾರೆ. ಆದರೆ ಕೆಲವು ಕಡೆಗಳಲ್ಲಿ ಸುನೀಲ್ ಶೆಟ್ಟಿಯ ಪಾತ್ರ ಕೂಡ ಹಿಡಿತ ಕಳೆದುಕೊಂಡಂತಿದೆ. ಚಿತ್ರದ ಹಾಡುಗಳಲ್ಲಿಯೂ ವಿಶೇಷತೆಗಳಿಲ್ಲ. ಆದರೆ ಹಿನ್ನೆಲೆ ಸಂಗೀತ ಆಕರ್ಷಕ.

ರಜನಿಕಾಂತ್ ಅಭಿಮಾನಿಗಳಿಗೆ ಇಷ್ಟವಾಗುವಂತಹ ಸಂದರ್ಭಗಳನ್ನು ಪಾತ್ರದ ಮೂಲಕ ಬೇಕಾದಷ್ಟು ಕಡೆಗಳಲ್ಲಿ ಸೃಷ್ಟಿಸಿದ್ದಾರೆ ನಿರ್ದೇಶಕರು. ಅದನ್ನು ಅಭಿಮಾನಿಗಳು ಮೆಚ್ಚುತ್ತಿದ್ದಾರೆ ಕೂಡ. ಆದರೆ ಅದೇ ಮೆಚ್ಚುಗೆಯನ್ನು ಒಂದು ಹಂತ ಮೇಲೆ ಕೊಂಡೊಯ್ಯಲಿದ್ದಾರೆ ಎನ್ನುವ ನಂಬಿಕೆಯನ್ನು ಮಾತ್ರ ಚಿತ್ರ ಹುಸಿ ಮಾಡಿದೆ.

ತಾರಾಗಣ: ರಜನಿಕಾಂತ್, ಸುನೀಲ್ ಶೆಟ್ಟಿ, ನಯನ್ ತಾರಾ
ನಿರ್ದೇಶಕ: ಎ. ಆರ್. ಮುರುಗದಾಸ್
ನಿರ್ಮಾಣ: ಅಲ್ಲಿರಾಜ್ ಸುಭಾಸ್ಕರನ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News