ನಿರ್ಭೀತಿಯೇ ಕ್ರಾಂತಿಯ ಕವನ
ಫೈಝ್ ಅಹ್ಮದ್ ಫೈಝ್ ಅವರ ‘ನಝಾಮ್ ಹಮ್ ದೇಖೇಂಗೆ, ಲಾಝಿಂ ಹೈ ಕೆ ಹಮ್ ದೇಖೇಂಗೆ’ ಅಂದರೆ ‘ನಾವು ನೋಡೋಣ’ ಕವನವನ್ನು ಪೌರತ್ವ ತಿದ್ದುಪಡಿ ಕಾಯ್ದೆ (ಸಿಸಿಎ), ರಾಷ್ಟ್ರೀಯ ಜನ ನೋಂದಣಿ (ಎನ್‌ಪಿಆರ್) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿ ಪ್ರತಿಭಟನೆ ನಡೆಸಿದ ವೇಳೆ ಕಾನ್ಪುರದ ಐಐಟಿಯ ವಿದ್ಯಾರ್ಥಿಗಳ ಗುಂಪೊಂದು ಹಾಡಿದ್ದರು. ಆದರೆ ಆ ಕವನವು ಹಿಂದೂ ವಿರೋಧಿ ಪೂರ್ವಾಗ್ರಹಗಳನ್ನು ಹೊಂದಿದೆಯೇ ಎಂಬ ಬಗ್ಗೆ ಕಾನ್ಪುರ ಐಟಿಐ ಆಡಳಿತ ಮಂಡಳಿ ತನಿಖೆ ನಡೆಸಲು ನಿರ್ಧರಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ವಿಮರ್ಶಕರು ಅಥವಾ ಇತರ ಯಾವುದೇ ಬರಹಗಾರರ ಹಾಗೆ ಫೈಝ್‌ನ ಕವನಗಳನ್ನು ಪ್ರಶ್ನಿಸಲು ಸಾಧ್ಯವೇ ಇಲ್ಲವೆಂದು ನನ್ನಂತಹವರು ಎಂದಿಗೂ ಹೇಳಲಾರರು. ಆದರೆ ಕವಿತೆಯೊಂದರ ಇತಿಹಾಸದ ಕುರಿತು ಸಂಪೂರ್ಣ ಅಜ್ಞಾನ ಹೊಂದಿರುವ ಹಾಗೂ ವಿಷಯಗಳನ್ನು ತಪ್ಪಾಗಿ ವ್ಯಾಖ್ಯಾನಿಸುವ ವಿದ್ವಾಂಸರೆಂದೇ ಕರೆಯಲ್ಪಡುವ ಈ ಶಿಕ್ಷಕರ ಕಳಪೆ ಗುಣಮಟ್ಟವನ್ನು ಇದು ಪ್ರತಿಬಿಂಬಿಸುತ್ತದೆ.
ಕವನದ ಬಗ್ಗೆ ಅವರಿಗೆ ತಿಳಿಯದೇ ಇದ್ದಾಗ, ರಾಷ್ಟ್ರದ್ರೋಹಿಯೆಂಬ ಹಣೆಪಟ್ಟಿ ಕಟ್ಟಿ ವಿದ್ಯಾರ್ಥಿಗಳನ್ನು ಹೆದರಿಸಿ, ಬೆದರಿಸಲು ಯತ್ನಿಸುತ್ತಿರುವುದು ಎಷ್ಟು ಸರಿ. ದೇಶದ ಅತ್ಯಂತ ಬೃಹತ್ ಸಂಸ್ಥೆಯಾದ ಐಐಟಿಯಲ್ಲಿ ಜಾತಿ ಆಧಾರಿತ ತಾರತಮ್ಯಗಳು ಮುಂದುವರಿದಿವೆ ಹಾಗೂ ವಿದ್ಯಾರ್ಥಿಗಳು ಹಿಂದೂ ವಿರೋಧಿ ಕವನವನ್ನು ಹಾಡಿದ್ದಾರೆಂದು ದೂರನ್ನು ಸಲ್ಲಿಸಿದ ವ್ಯಕ್ತಿಯು ಮೂಲತಃ ಗುಂಪುಥಳಿತದಲ್ಲಿ ತೊಡಗಿರುವ ಜನರನ್ನು ಪ್ರತಿನಿಧಿಸುವವನಾಗಿದ್ದಾನೆ. ನಾವು ಮಾತನಾಡುವ ಪ್ರತಿಯೊಂದು ಪದವನ್ನು ಹಾಗೂ ವಾಕ್ಯದ ಮೇಲೆ ಆತ ನಿಕಟವಾದ ನಿಗಾವಿರಿಸುತ್ತಾನಾದರೂ, ಬಹಿರಂಗವಾಗಿ ಒಡ್ಡುವ ಅತ್ಯಾಚಾರದ ಬೆದರಿಕೆ, ಕೊಲೆ ಬೆದರಿಕೆ ಬಗ್ಗೆ ಅತ ದಿವ್ಯ ವೌನ ತಾಳುತ್ತಾನೆ. ಹಿಂದುತ್ವದ ಪೆಯ್ಡಾ ಟ್ರೋಲ್‌ಗಳನ್ನು ಮಾಡುವ ಆತ ಆಡಳಿತಾರೂಢ ಪಕ್ಷದ ಜೊತೆ ತನಗಿರುವ ನಂಟನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾನೆ.
ಫೈಝ್ ಅವರು ಭಾರತೀಯ ಉಪಖಂಡದಲ್ಲಿ ನಮ್ಮ ಜಾತ್ಯತೀತ ವೌಲ್ಯಗಳು, ಶೃಂಗಾರ ಹಾಗೂ ಕ್ರಾಂತಿಯ ಹೆಮ್ಮೆಯ ಸಂಕೇತವಾಗಿದ್ದಾರೆ. ಮಹಾನ್ ಕ್ರಾಂತಿಕಾರಿಯಾದ ಫೈಝ್ ಅವರು ಹಲವಾರು ಬಾರಿ ಬಂಧನಕ್ಕೊಳಗಾಗಿದ್ದರು. 1979ರಲ್ಲಿ ಜನರಲ್ ಝಿಯಾವುಲ್ ಹಕ್ ಅವರು ಎಲ್ಲಾ ಪ್ರಜಾತಾಂತ್ರಿಕ ಸಂಸ್ಥಾಪನೆಗಳನ್ನು ನಾಶಪಡಿಸಿ, ಪಾಕಿಸ್ತಾನವನ್ನು ಪುರೋಹಿತಶಾಹಿ (ಥಿಯೋಕ್ರಸಿ) ದೇಶವಾಗಿ ಪರಿವರ್ತಿಸಿದ ಬಳಿಕ ಫೈಝ್ ಅವರು ಝಿಯಾರ ಸರ್ವಾಧಿಕಾರದ ವಿರುದ್ಧ ಸಿಡಿದೆದ್ದರು. ಝಿಯಾ ಅವರ ಆಳ್ವಿಕೆಯಲ್ಲಿ ಅಲ್ಪಸಂಖ್ಯಾತರು ಅದರಲ್ಲೂ ನಿರ್ದಿಷ್ಟವಾಗಿ ಹಿಂದೂಗಳು ಅಥವಾ ಹಿಂದೂ ಸಂಕೇತಗಳು ದಾಳಿಗೆ ತುತ್ತಾದಾಗ ಫೈಝ್ ಅವರು ಪ್ರತಿರೋಧದ ಧ್ವನಿಯಾದರು. ದಿಲ್ಲಿ ಘರಾನಾದ ಖ್ಯಾತ ಗಝಲ್ ಗಾಯಕಿ, ಇಕ್ಬಾಲ್ ಬಾನೊ ಅವರು ಕಪ್ಪು ಸೀರೆ ಧರಿಸಿ ನಿಷೇಧಾಜ್ಞೆಯ ನಡುವೆಯೂ ಲಾಹೋರ್‌ನಲ್ಲಿ ಸುಮಾರು 50 ಸಾವಿರ ಮಂದಿಯ ಸಮಕ್ಷಮದಲ್ಲಿ ಹಾಡಿದ್ದರು.
ಸ್ಥಳೀಯ ಸಂದರ್ಭಗಳಿಗೆ ಅನುಗುಣವಾಗಿ ಹಾಗೂ ಧ್ಯೇಯಸಾಧನೆಗಾಗಿ ಭರವಸೆ ತುಂಬಲು ಬರೆಯಲಾದ ಕವನವನ್ನು ಜನರು ಹೇಗೆ ವಿಶ್ಲೇಷಿಸುತ್ತಾರೆ ಎಂಬುದನ್ನು ಕಂಡಾಗ ವಿಚಿತ್ರವೆನಿಸುತ್ತದೆ. ಝಿಯಾ ಅವರು ತನ್ನ ವ್ಯಕ್ತಿಪೂಜೆಯನ್ನು ಪ್ರೋತ್ಸಾಹಿ ಸುತ್ತಿದ್ದಾಗ ಹಾಗೂ ತನಗೆ ಏನೂ ಆಗಲಾರದೆಂದು ಭಾವನೆಯನ್ನು ಬೆಳೆಸಿಕೊಂಡಿದ್ದ ಸಂದರ್ಭದಲ್ಲಿ ಫೈಝ್ ಹೀಗೆ ಬರೆದಿದ್ದರು:
ಜಬ್ ಝುಲ್ಮ್ ಓ ಸಿತಮ್ ಕೆ ಕೋಹ್‌ಯಾ ಝರಾ
ರೂಯಿ ಕಿ ತರಹ್ ಉಡ್ ಝಾಯೆಂಗೆ
ಹಮ್ ಮಹಾಕುಮೋ ಕೆ ಪಾವೋ ತಲೆ
ಯೇ ದರತಿ ದಡ್ ದಡ್ ದಡ್‌ಕೇಗಿ
ಔರ್ ಅರ್ಹೇ ಹಕಮ್ ಕೆ ಸರ್ ಊಪರ್
ಜಪ್ ಬಿಜಲಿ ಕಢ್-ಕಢ್ ಕಢಕೇಗಿ
( ದಮನಕ್ಕೊಳಗಾದ ನಮ್ಮ ಕಾಲಕೆಳಗಿನ ಭೂಮಿಯು ಕಂಪಿಸಲಿದೆ,ನಡುಗಲಿದೆ ಮತ್ತು ಆಡಳಿತಗಾರರ ತಲೆಗಳಿಗೆ ಮಿಂಚು ಹರಿಯಲಿದೆ ಹಾಗೂ ಸಿಡಿಲು ಘರ್ಜಿಸಲಿದೆ). ಜನತೆಯ ಶಕ್ತಿ ಹಾಗೂ ಸರ್ವಾಧಿಕಾರಿ ಮತ್ತು ದಮನಕಾರಕ ಒಂದಲ್ಲ ಒಂದು ದಿನ ಸರ್ವನಾಶವಾಗುತ್ತಾನೆ ಎಂಬುದನ್ನು ಈ ಕವನ ನೆನಪಿಸುತ್ತದೆ. ಇಸ್ಲಾಮಿಕ್ ಸರ್ವಾಧಿಕಾರಿಯೊಬ್ಬನ ವಿರುದ್ಧ ಜನರನ್ನು ಸಂಘಟಿಸಲು ಬರೆದ ಕವನವೊಂದು ‘ಹಿಂದೂ ವಿರೋಧಿ’ ಹೇಗಾಗುತ್ತದೆಯೆಂಬುದು ನನಗೆ ತಿಳಿಯುತ್ತಿಲ್ಲ. ಆದರೆ ಈ ಸಾಲುಗಳು ವಿಗ್ರಹರಾಧಾನೆಯನ್ನು ವಿರೋಧಿಸುತ್ತಿರುವುದರಿಂದ ಅದು ಹಿಂದೂ ವಿರೋಧಿಯಾಗಿದೆ. ಹೀಗಾಗಿ ಅದು ರಾಷ್ಟ್ರದ್ರೋಹಿ ಕೂಡಾ ಹೌದು ಎಂದು ವಾದಿಸಲು ಕಾನ್ಪುರದ ಪ್ರೊಫೆಸರ್, ಕವಿ ಫೈಝ್ ಅವರ ಸಾಲುಗಳನ್ನು ಉಲ್ಲೇಖಿಸಿದ್ದಾರೆ.
ಜಬ್ ಅರ್ಜೆ ಖುದಾ ಕೆ ಕಾಬೆ ಸೆ
ಸಬ್ ಬೂತ್ ಉಲ್ವಾಯೆ ಜಾಯೆಂಗೆ
ಹಮ್ ಅಹ್ಲೆ ಯೆ ಸಫಾ ಮರ್ದೂದೆ ಹರಮ್
ಮಸಂದ್ ಪೆ ಬಿಟಾಯೆ ಜಾಯೆಂಗೆ
ಸಬ್ ತಾಜ್ ಉಚಾಲೆ ಜಾಯೆಂಗೆ
ಸಬ್ ತಖ್ತ್ ಗಿರಾಯೆ ಜಾಯೆಂಗೆ
ದೇವರ ನೆಲದಲ್ಲಿ ಎಲ್ಲಾ ಹುಸಿತನಗಳನ್ನು ತೆಗೆದುಹಾಕಿದಾಗ ನಾವು ಸಂಪ್ರದಾಯವಾದಿಗಳಿಂದ ನಿಂದನೆಗೊಳಗಾದ ನಮ್ಮ ಹೃದಯಗಳನ್ನು ಸ್ವಚ್ಛಗೊಳಿ ಸಲಿದ್ದೇವೆ. ಕಿರೀಟಗಳನ್ನು ಕಿತ್ತೆಸೆಯಲಾಗುವುದು ಹಾಗೂ ಸಿಂಹಾಸನ ಉರುಳಿ ಬೀಳಲಿದೆ.
ನಾನು ಮೊದಲೇ ವಿವರಿಸಿರುವ ಹಾಗೆ, ಈ ಕವನವು ಪಾಕಿಸ್ತಾನದಲ್ಲಿ ಎಲ್ಲಾ ಕಾನೂನುಗಳನ್ನು ಹಾಗೂ ಪ್ರಜಾಪ್ರಭುತ್ವವನ್ನು ನಾಶಪಡಿಸಿದ ಜನರಲ್ ಝಿಯಾ ಹಾಗೂ ಅವರ ಸಂಪ್ರದಾಯವಾದಿ ಆಡಳಿತದ ಕುರಿತಾಗಿದೆ. ಭಾರತ ಅಥವಾ ಹಿಂದೂಗಳೊಂದಿಗೆ ಅದಕ್ಕೆ ಯಾವುದೇ ಸಂಬಂಧವಿಲ್ಲ. ಆದರೆ ವ್ಯಕ್ತಿಪೂಜೆಯನ್ನು ನಿರ್ಮಿಸುವವರನ್ನು ಅದು ಅಣಕಿಸುತ್ತದೆ. ಹೌದು ಈ ಕವನವು ವಿಗ್ರಹಾರಾಧನೆಯಲ್ಲಿ ನಂಬಿಕೆಯಡದ ಇಸ್ಲಾಮ್ ಧರ್ಮದ ತತ್ವವನ್ನು ಸಂಕೇತಿಸುತ್ತದೆ. ವೇದಗಳು ಕೂಡಾ ವಿಗ್ರಹಾರಾಧನೆಯನ್ನು ವಿರೋಧಿಸುತ್ತವೆ. ಕಬೀರ್, ನಾನಕ್, ತುಕಾರಾಮ್, ರವಿದಾಸ್ ಅವರಂತಹ ಕ್ರಾಂತಿಕಾರಿಗಳು ಬ್ರಾಹ್ಮಣ್ಯವಾದಿ ಆರಾಧನಾಕ್ರಮಗಳನ್ನು ವಿರೋಧಿಸಿದ್ದರು ಹಾಗೂ ‘ಈಶ್ವರ ಆಗಿರಲಿ ಅಲ್ಲಾ ಅಗಿರಲಿ’ ದೇವರೊಬ್ಬನೇ ಎಂದು ಸಾರಿದ್ದರು. ಪಹಾನ್ ಪೂಜೆ ಹರಿ ಮಿಲೇ ತೊ ಮಾಯಿ ಪುಜು ಪಹಾರ್, ತಾಸೆ ಯೆ ಚಾಕಿ ಬಾಲಿ, ಪೀಸ್ ಖಾಯ್ ಸಂಸಾರ್’( ಕೇವಲ ಕಲ್ಲನ್ನು ಪೂಜಿಸುವ ಮೂಲಕ ನೀವು ದೇವರನ್ನು ತಲುಪಬಹುದಾದರೆ,ನಾನು ಪರ್ವತವನ್ನು ಕೂಡಾ ಪೂಜಿಸಲು ಸಿದ್ಧನಿದ್ದೇನೆ. ಇದಕ್ಕಿಂತ ಒಳ್ಳೆಯದೆಂದರೆ ನೀವು ಗೋಧಿಯನ್ನು ಅರೆಯುವ, ಒರಳುಕಲ್ಲನ್ನು ಪೂಜಿಸಿರಿ. ಅದು ನಿಮಗೆ ರೊಟ್ಟಿಯನ್ನಾದರೂ ಕೊಡುತ್ತದೆ’) ಎಂದು ಸಂತ ಕಬೀರ್ ಹೇಳಿರಲಿಲ್ಲವೇ?. ಇಂದು ನಾವು ಯಾವ ಹಂತಕ್ಕೆ ಬಂದಿದ್ದೇವೆಂದರೆ, ಏನನ್ನಾದರೂ ಉಲ್ಲೇಖಿಸಿದಲ್ಲಿ ಅಥವಾ ಹಾಡಿದಲ್ಲಿ ನಮ್ಮನ್ನು ದೇಶದ್ರೋಹಿಗಳ ಹಾಗೆ ಕಾಣಲಾಗುತ್ತಿದೆ... ಶೈಲೇಂದ್ರ ಅವರು ನಮ್ಮ ಕಾಲದ ಮಹಾನ್ ಕವಿಗಳಲ್ಲೊಬ್ಬರು. ಅವರ ಕ್ರಾಂತಿಕಾರಿ ಕವನಗಳು ನ್ಯಾಯಯುತವಲ್ಲದ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತುತ್ತವೆ ಹಾಗೂ ಅಧಿಕಾರದಲ್ಲಿರುವ ತಾವು ನಡೆಯುವ ದಾರಿಯನ್ನು ತಿದ್ದಿಕೊಳ್ಳುವಂತೆ ಎಚ್ಚರಿಕೆ ನೀಡುತ್ತವೆ.
ಯೇ ಗಾಮ್ ಕೆ ಔರ್ ಚಾರ್ ದಿನ್, ಸಿತಂ ಕೆ ಔರ್ ಚಾರ್ ದಿನ್, ಯೆ ದಿನ್ ಬಿ ಜಾಯೆಂಗೆ ಗುಝರ್, ಗುಝರ್ ಜಾಯೆ ಹಜಾರ್ ದಿನ್ ಕಬಿ ತೊ ಹೋಗಿ ಇಸ್ ಚಮನ್ ಪರ್ ಬಿ ಬಾಹರ್ ಕಿ ನಝರ್! ಅಗರ್ ಕಹೀ ಹೈ ಸ್ವರ್ಗ್ ತೊ ಉತಾರ್ ಲಾ ಜಮೀನ್ ಪರ್!... ತೂ ಜಿಂದಾ ಹೈ...
ಇಂದಿಗೂ ಕೂಡಾ ಈ ಕವನವನ್ನು , ಅನೇಕ ಕಡೆ ಸಾಮೂಹಿಕ ಪ್ರತಿಭಟನೆಯ ಸಂದರ್ಭದಲ್ಲಿ ಹಾಡಲಾಗುತ್ತಿದೆ. ಅವು ನಮಗೆ ಹೋರಾಡುವ ಭರವಸೆ ಹಾಗೂ ಆಶಾವಾದವನ್ನು ನೀಡುತ್ತದೆ. ಇದು ವಿಶ್ವವಿದ್ಯಾನಿಲಯಗಳಲ್ಲಿ ಇರುವವರಿಗೆ ಮಾತ್ರವಲ್ಲದೆ,ತಮ್ಮ ಭೂಮಿಯ ಹಕ್ಕುಗಳು ಹಾಗೂ ಆಹಾರದ ಸಾರ್ವಭೌಮತೆಗಾಗಿ ಹೋರಾಡುವವರಿಗೂ ಸ್ಫೂರ್ತಿ ನೀಡುತ್ತದೆ.
ಆದರೆ ವಾಸ್ತವವೇನೆಂದರೆ ಧಾರ್ಮಿಕ ಬಲಪಂಥೀಯತೆಯು ಯಾವತ್ತೂ ಕ್ರಾಂತಿಕಾರಿ ಕವನದ ಬಗ್ಗೆ ಭಯಪಡುತ್ತದೆ. ಯಾಕೆಂದರೆ ಕ್ರಾಂತಿಕಾರಿ ಕವನವು ದಬ್ಬಾಳಿಕೆಯ ವಿರುದ್ಧ ಹೋರಾಡಲು ಬೇಕಾದ ಕೆಚ್ಚು ಹಾಗೂ ಸಂಕಲ್ಪವನ್ನು ಬಲಪಡಿಸುತ್ತದೆ. ಈ ಲೇಖನವನ್ನು ಕೊನೆಗೊಳಿಸುವ ಮುನ್ನ ನಾನು ಸಾಹಿರ್ ಲೂಧಿಯಾನ್ವಿಯವು ಬರೆದಿರುವ ‘ಫಿರ್ ಸುಬಹ್ ಹೋಗಿ’ ಚಿತ್ರದ ಹಾಡಿನ ಕೆಲವು ಸುಂದರ ಸಾಲುಗಳ ಮೂಲಕ ನನ್ನ ಭರವಸೆ ಹಾಗೂ ಅಶಾವಾದವನ್ನು ಹಂಚಿಕೊಳ್ಳಬಯಸುತ್ತೇನೆ.
ವಹ ಸುಬಹ್ ಕಬಿ ತೊ ಆಯೆಗಿ
ಮಜಬೂರ್ ಬುಡಪಾ ಜಬ್ ಸುನಿ ರಹೋ ಕಿ ದೂಲ್ ನ ಫಾಕೆಗಾ
ಮಾಸೂಸ್ ಲಡಕಪನ್ ಜಬ್ ಗಂದಿ ಗಲಿಯೋಂ ಮೇ ಬೀಕ್ ನ ಮಾಂಗೆಂಗೆ
ಹಕ್ ಮಾಂಗ್‌ನೇವಾಲಾ ಕೊ ಜಿಸ್ ದಿನ್ ಸೂಲಿ ನ ದಿಖಾಯಿ ಜಾಯೆಗಿ...
ಇಂದು, ನಾನು ಉನ್ನತ ಭವಿಷ್ಯಕ್ಕಾಗಿ ಭರವಸೆಗಳನ್ನು ಇಟ್ಟುಕೊಂಡಿರುವ ಈ ಮಹಾನ್ ಕ್ರಾಂತಿಕಾರಿ ಕವಿಗಳಿಗೆ ನಮನಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆ. ಅಂತಿಮವಾಗಿ ಜನತೆಯೇ ಆದಿಪತ್ಯ ಸಾಧಿಸುತ್ತಾರೆ ಹಾಗೂ ದಮನಕಾರಕನು ಎಷ್ಟೇ ಕ್ರೂರಿಯಾಗಿರಲಿ ಆತ ಒಂದಲ್ಲ ಒಂದು ದಿನ ಪದಚ್ಯುತಗೊಳ್ಳಲೇಬೇಕು ಎಂದು ನೆನಪಿಸುವ ಈ ಕ್ರಾಂತಿಕಾರಿ ಹಾಡುಗಳು ನಮ್ಮ ಜೀವನಾಡಿಯಾಗಿ ಉಳಿದುಕೊಳ್ಳುತ್ತವೆ. ಕಟ್ಟ ಕಡೆಗೆ ಒಳಿತು ಹಾಗೂ ಪ್ರೀತಿಯ ಶಕ್ತಿಗಳು ಗೆಲ್ಲುತ್ತವೆ, ಮಾನವತೆಯ ಶಕ್ತಿಗಳು ರಾರಾಜಿಸುತ್ತವೆ ಹಾಗೂ ದ್ವೇಷವನ್ನು ಹರಡುವವರು ತಮ್ಮ ಚಿಂತನೆಗಳಲ್ಲಿನ ಕೆಡುಕುಗಳನ್ನು ಅರಿತುಕೊಳ್ಳುವರು ಹಾಗೂ ಉತ್ತಮರಾಗಿ ಬದಲಾಗುವರೆಂದು ಆಶಿಸೋಣ.