ಅಡಮಾನ
ತಳಮಳದ ಹಂಗಿನಲ್ಲೇ ಅವತ್ತಿಡೀ ದಿನದೂಡಿದ ಸೀರಯ್ಯ ಸಂಜೆಯನ್ನು ಮೈಗಾಕಿಕೊಂಡು ಮೇಕೆಗಳೊಂದಿಗೆ ಮನೆಗೆ ಬಂದಾಗ ಅಲ್ಲಿನ ವಾತಾವರಣ ಮತ್ತೊಂದು ರೂಪದಲ್ಲಿತ್ತು. ಮನೆ ಅಗಾಧ ಮೌನವನ್ನು ಮುಪ್ಪಿರಿಯುತ್ತಿತ್ತು. ಬೆಳಕಿಲ್ಲದೆ ಕತ್ತಲ ಕುಪ್ಪೆಯಾಗಿತ್ತು. ದಿನವಿಡೀ ಬೆಂಕಿಯನ್ನು ಕಾಣದಿದ್ದ ಒಲೆಯಲ್ಲಿದ್ದ ಬೂದಿಯ ವಾಸನೆ ಮೂಗಿಗಡರುತ್ತಿತ್ತು.
‘ನಿನ್ ಮನೆ ಗುಡ್ಸಿಗುಂಡಾಂತ್ರಾಗ, ನೀನ್ ನೆಗುದ್‌ಬಿದ್ದು ನೆಲ್ಲೀಕಾಯಾಗ, ನಿನ್ ಕೈ ಸೇದೋಗ...ಸಂಪಿಗಮ್ಮನ ಅಳುವೂ ಬೈಗುಳಗಳೂ ಒಂದರೊಳಗೊಂದು ಮೇಳೈಸಿಕೊಂಡು ದೀಡಾಗುತ್ತಿರುವಂಥ ಹೊತ್ತಲ್ಲಿ ಊರಂಥ ಊರೆಲ್ಲಾ ಧೂಳ್ಸಂಜೆಯಲ್ಲಿ ಮೀಯುತ್ತಿತ್ತು. ಅವು ಊರೊಳಗಿನ ಥರಾವರಿ ಸದ್ದುಗಳೊಳಗೆ ಕೂಡಾಡಿ ಧೂಳ್ಸಂಜೆಯ ಮೆಲುಗಾಳಿಗೆ ಮೈಯ್ಯಿಡ್ಡಿ ಅಡ್ಡಾಡುತ್ತಾ ಅದೇತಾನೇ ಮೇಕೆಗಳೊಂದಿಗೆ ಮನೆಗೆ ಬಂದು ವಚ್ಚಾಲಿನಲ್ಲಿದ್ದ ತಡಿಕೆಯ ಗೂಡಿಗೆ ಮೇಕೆಗಳನ್ನು ಕೂಡಾಕುತ್ತಿದ್ದ ಸೀರಯ್ಯನನ್ನು ಹಣ್ಗಾಯಿನೀರ್ಗಾಯಿ ಮಾಡುತ್ತಿದ್ದವು. ‘ಅಯ್ಯೋ ಅದೇನ್ ಅಂತ ಆಗ್ಬಾರದ್ದು ಆಗೈತೆ ಅಂತ ಈನಾಡಿ ರಂಪ ಮಾಡ್ತಿದೀಯ, ಅಂದ ಸೀರಯ್ಯ ಹೆಂಡತಿಯೆದುರು ಬುಳ್ಳಗೆ ನಿಂತು. ಗಂಡನ ಮಾತುಗಳು ಸಂಪಿಗಮ್ಮನನ್ನು ಮತ್ತೂ ಕೆಣಕಿ ಅಳುವಿಗೆ ಮತ್ತಷ್ಟು ಅಳು ಕೂಡಿಕೊಂಡು,‘ಆಗಿರಾದು ಸಾಲ್ದ ಇನ್ನೂ ಏನಾಗ್ಬೇಕು,ಅಂತ ಎದೆ ಬಡಿದುಕೊಳ್ಳತೊಡಗಿದಳು. ಸೀರಯ್ಯ ,‘ನಿಂಗೇನ್ ಹೇಳೋರ್‌ಕೇಳೋರ್, ಮಾನಮರ್ಯಾದೆ ಇಲ್ವ, ಅಂದ ಕೊಂಚ ಗಡಸು ದನಿಯಲ್ಲಿ. ‘ಅದುನ್ನ ನಿಂಗೆ ಕೇಳ್ಕೋ, ನೀನು ಸಾಬ್ಯಸ್ಥನಾಗಿದ್ರೆ ಹಿಂಗ್ಯಾಕಾಗ್ತಿತ್ತು, ಸಂಪಿಗಮ್ಮ ಕೊಟ್ಟ ತಿರುಗೇಟು ಸೀದಾ ಸೀರಯ್ಯನ ಮರ್ಮಕ್ಕೇ ನಾಟಿದಂತಾಯ್ತು. ‘ನಿನ್ನ ಹಲ್ಕಾ ಬುದ್ದಿಗಿಷ್ಟು ಬೆಂಕಿ ಹಾಕ, ನಿಂದು ಬಾಯಲ್ಲ ಬಚ್ಲುಮನೆ, ತಿರುಗಿಸಿ ಅಂದ. ‘ಹಲ್ಕಾ ಯಾರೂಂತ ಊರ್ಗೆಲ್ಲಾ ಗೊತೈತೆ ತಗಾ. ಸಂಪಿಗಮ್ಮನೂ ಮಾತು ತಿರುಗಿಸಿದಳು. ಇನ್ನು ಇವಳಿಗೆ ಬಾಯಿಕೊಟ್ಟರೆ ಉಳಿಗಾಲವಿಲ್ಲವೆಂದು ಸೀರಯ್ಯ ಸೀದಾ ಎಂದಿನಂತೆ ಗುಡಿಯತ್ತ ಕಾಲ್ಕಿತ್ತ. ಆಗ ಧೂಳ್ಸಂಜೆ ಮುಸ್ಸಂಜೆಗೆ ಹೊರಳಿತ್ತು.
ಹದಿನೈದು ದಿನಗಳ ಹಿಂದೆ ಅಪ್ಪನ ಮನೆಗೆಂದು ಊರುಬಿಟ್ಟಿದ್ದ ಸಂಪಿಗಮ್ಮ ಆಗಷ್ಟೇ ಬಂದಿದ್ದಳು. ಮೂರು ತಿಂಗಳ ಹಿಂದೆ ಅವಳಪ್ಪನಿಗೆ ಲಕ್ವಾ ಹೊಡೆದು ಎಡಗೈ, ಎಡಗಾಲು ಪೂರಾ ಸ್ವಾಧೀನ ಕಳಕೊಂಡಿದ್ದವು. ಬಾಯಿ ಒತ್ತಟ್ಟಿಗೆ ತಿರುಚಿಕೊಂಡು ಆಡಿದ್ದೆಲ್ಲಾ ಸೊಟ್ಟ ಸ್ವಾಟೆಯಲ್ಲಿ ತಿಳಿಯದ ತೊದಲಾಗುತ್ತಿತ್ತು. ಶುರುವಿನಲ್ಲಿ ದೊಡ್ಡಾಸ್ಪತ್ರೆಗೆ ತೋರಿಸಲಾಗಿತ್ತು. ಒಂದಷ್ಟು ದಿನ ಅಲ್ಲಿದ್ದು ಮನೆಗೆ ಕರೆತರಲಾಗಿತ್ತು. ಅಷ್ಟೂ ದಿನ ಅಪ್ಪನ ನಿಗಾ ಮಾಡಿದ್ದ ಸಂಪಿಗಮ್ಮನಿಗೆ ಮತ್ತಂದಷ್ಟು ದಿನ ಇರುವ ಮನಸ್ಸಿತ್ತು. ಆದರೆ ಊರಲ್ಲಿ ಕಣಗಾಲದ ಕೆಲಸದ ತುರ್ತಿತ್ತು. ಅದು ಅಖೈರಾಗುತ್ತಿದ್ದಂತೆ ಮತ್ತೆ ಹೋದರಾಯಿತು ಅಂದುಕೊಂಡು ಊರಿಗೆ ಬಂದಿದ್ದಳು. ಆಸ್ಪತ್ರೆಯಲ್ಲಿ ಕೊಂಚ ಗೆಲುವಾಗಿದ್ದ ಅಪ್ಪಮನೆಗೆ ಬರುತ್ತಲೇ ಕುಗ್ಗತೊಡಗಿದ್ದ. ‘ಇದು ಆಸ್ಪತ್ರೆ ಔಷ್ದಿಗೆ ಜಪ್ಪಯ್ಯ ಅನ್ನಲ್ಲ, ನಾಟಿ ಮದ್ದು ಬಿಟ್ರಿಲ್ಲ, ಅವರಿವರು ಅಂದ ಮಾತುಗಳಿಂದ ಸಂಪಿಗಮ್ಮನ ಮಲತಾಯಿ ಗೊಂದಲಕ್ಕೊಳಗಾಗಿದ್ದಳು. ಅದನ್ನೂ ಒಂದು ಕೈ ನೋಡೇಬಿಡುವ ಅನಿಸಿ,‘ನೀನು ಹೇಂಗೇಳ್ತಿಯೋ ಹಂಗೆ, ಅಂತ ಸಂಪಿಗಮ್ಮನ ಮೇಲೆ ಭಾರಹಾಕಿದ್ದಳು. ಹಾಗಾಗಿ ಕಣಗಾಲದ ಕೆಲಸವನ್ನು ಅರಿಬಿರಿಯಲ್ಲಿ ಮುಗಿಸಿದ್ದೇ ಅಪ್ಪನ ಮನೆಗೆ ಹೋಗಿದ್ದಳು.
ಅವತ್ತು ಅಲ್ಲಿಂದ ಹೊರಟಾಗಲೇ ಬೈಗಾಗತೊಡಗಿತ್ತು. ಊರು ಮುಟ್ಟಿದಾಗ ಗಂಡ ಸೀರಯ್ಯ ಎಂದಿನಂತೆ ಮೇಕೆಗಳನ್ನು ಮೇಯಿಸಲು ಹೋಗಿದ್ದ. ಮತ್ತೊಂದು ಕೀಯಿಂದ ಬಾಗಿಲನ್ನು ತೆಗೆದು ಒಳಹೊಕ್ಕವಳೇ ಎಂದಿನಂತೆ ದೇವರಮನೆಯತ್ತ ನೋಡಿದ್ದೇ ಉಸಿರೇ ನಿಂತಂತಾಗಿತ್ತು. ಅಲ್ಲಿದ್ದ ದೀಪಾಲೆ ಕಂಬಗಳೇ ಕಾಣದಾಗಿದ್ದವು. ಅದು ಎರಡಂಕಣದ ಪುಟ್ಟ ಮನೆ. ಅಡಿಗೆ ಮನೆಯ ವಾರಾಸಿಗೇ ದೇವರ ಮನೆ. ಎದುರಿಗೆ ಬಚ್ಚಲು ಮನೆ. ಒಂದೇ ಉಸುರಿಗೆ ಇಡೀ ಮನೆಯನ್ನೆಲ್ಲಾ ಸಿದುಕಿದಳು. ಬೆಳಗಲು ಇಟ್ಟಿರಬಹುದೆಂದು ಬಚ್ಚಲುಮನೆ ನೋಡಿದಳು. ಅಲ್ಲೂ ಕಾಣದ್ದರಿಂದ ಭೂಮಿಗಿಳಿದು ಹೋಗಿದ್ದಳು. ಕಡೆಗಿದು ಕುರ್ತೇಟು ಗಂಡನದ್ದೇ ಕೈಚಳಕ ಅನಿಸಿದ್ದೇ ತಡ, ಸಂಪಿಗಮ್ಮನಿಗೆ ಕೆಳಗಲ ಕೇರಿಯ ಸುಬ್ಬಮ್ಮ ಕಣ್ಮುಂದೆ ಬಂದು ಕುದಿಯತೊಡಗಿದ್ದಳು.
ದೀಪಾಲೆ ಕಂಬಗಳಲ್ಲದೆ ಮತ್ತೇನಾದರೂ ಎಪ್ಪೆಸ್ಸಾಗಿದ್ದರೂ ಸಂಪಿಗಮ್ಮ ಅಷ್ಟು ಸಂಕಟಕ್ಕೊಳಗಾಗುತ್ತಿರಲಿಲ್ಲ. ಅವುಗಳ ಕಣ್ಮರೆ ಅವಳನ್ನು ದಿಕ್ಕೆಡಿಸಿತ್ತು. ಬೆಳಗ್ಗೆ ಕಣ್ಬಿಡುತ್ತಿದ್ದಂತೆ ಅವುಗಳನ್ನು ಕಣ್ತುಂಬಿಕೊಳ್ಳುತ್ತಿದ್ದಳು. ಫಳಾರಿಸುವಂತೆ ದಿನವೂ ಹುಣಸೇಹಣ್ಣಿನಲ್ಲಿ ತಿಕ್ಕಿತಿಕ್ಕಿ ಬೆಳಗಿಡುತ್ತಿದ್ದಳು. ಆದರವುಗಳನ್ನು ಹಚ್ಚುತ್ತಿದ್ದುದು ಮಾತ್ರ ಗೌರಿ ಹಬ್ಬ ಹಾಗೂ ಮಾರ್ನವಮಿಯಲ್ಲಿ ತನ್ನವ್ವನಿಗೆ ಎಡೆಯಿಡುವಾಗ. ಅಂದು ಅವೆರಡಕ್ಕೂ ತುಂಬಾ ಎಣ್ಣೆ ತುಂಬಿಸಿ ದಿನವಿಡೀ ಆರದಂತೆ ನೋಡಿಕೊಳ್ಳುತ್ತಿದ್ದಳು. ಇನ್ನು ಮಿಕ್ಕಂತೆ ಹಚ್ಚದಿದ್ದರೂ ಕಣ್ಣಿಗೆ ಬೀಳುವಂತೆ ದೇವರಮನೆಯಲ್ಲಿಟ್ಟಿರುತ್ತಿದ್ದಳು. ಅವುಗಳನ್ನು ಕಾಣುತ್ತಲೇ ಇನ್ನಿಲ್ಲದಂತೆ ಉಲ್ಲಸಗೊಳ್ಳುತ್ತಿದ್ದಳು. ಅಷ್ಟೇ ಬೇಗ ಅವ್ವನ ನೆನಪುಕ್ಕಿ ಹನಿಗಣ್ಣಾಗುತ್ತಿದ್ದಳು. ಪಟವಿಲ್ಲದ ಅವ್ವ ಅವುಗಳಲ್ಲಿ ಪಟವಾಗಿದ್ದಳು.
ಅವುಗಳ ಮೇಲಿನ ಸಂಪಿಗಮ್ಮನ ಅಂಥ ಅಪಾರ ಪ್ರೀತಿಗೊಂದು ಕಾರಣವಿತ್ತು. ಇದು ಹನ್ನೊಂದು ವರ್ಷಗಳ ಹಿಂದಿನ ಮಾತು. ವಾಸಿಯಾಗದ ಕಾಯಿಲೆಯೊಂದರಿಂದ ಅವಳವ್ವ ಹಾಸಿಗೆ ಹಿಡಿದಿದ್ದಳು. ಇನ್ನೇನು ತನ್ನ ಕಥೆ ಮುಗೀತು ಅನಿಸಿದಾಗ ಒಂದಿನ ಸೊಂಟದ ಬಾಳೆಕಾಯಿಂದ ಒಂದಷ್ಟು ನೋಟುಗಳನ್ನು ತೆಗೆದು ಮಗಳ ಕೈಗಿಕ್ಕಿದ್ದಳು. ಅವಳದಕ್ಕೆ ಮತ್ತೊಂದಷ್ಟನ್ನು ಕೂಡಿಸಿಕೊಂಡು ಅವ್ವನ ಸಾವಾದ ಕೆಲದಿನಗಳಲ್ಲಿ ಗಂಡನೊಂದಿಗೆ ಪಟ್ಟಣಕ್ಕೆ ಹೋಗಿ ಒಂದು ಜೊತೆ ಹಿತ್ತಾಳೆಯ ದೀಪಾಲೆಕಂಬ ಖರೀದಿಸಿದ್ದಳು. ಅವು ಮನೆಗೆ ಬಂದಾಗಿನಿಂದ ಸಂಪಿಗಮ್ಮ ಅವುಗಳಲ್ಲಿ ಅವ್ವನನ್ನು ಕಾಣುತ್ತಿದ್ದಳು. ಅವುಗಳೇ ಮಂಗಮಾಯವಾದದ್ದು ಅವಳನ್ನು ಇನ್ನಿಲ್ಲದ ಸಂಕಟಕ್ಕೀಡುಮಾಡಿತ್ತು.
ಹೆಂಡತಿ ಕ್ಯಾತೆ ತೆಗೆಯುತ್ತಾಳೆ ಅನ್ನುವುದು ಸೀರಯ್ಯನಿಗೆ ನಿಕ್ಕಿಯಾಗಿತ್ತು. ಆದರವಳ ಆಪಾಟಿ ಕಾಳಿಯವತಾರ ಕಕರುಮಕರು ಹಿಡಿಸಿತ್ತು. ಗುಡಿಯಲ್ಲಿ ಕೂತು,‘ಸೀಮೇಗಿಲ್ದವ ಆಡಿಸ್ದಂಗೆ ಆಡುಸ್ತಾವ್ಳೆ ಅಂತ ಹೆಂಡತಿಯ ಬಗ್ಗೆ ಅಸಮಾಧಾನಗೊಂಡಿದ್ದ. ಅಂತೆಯೇ ತಾನು ಮಾಡಿದ್ದ ಘನಂಧಾರಿ ಕೆಲಸವನ್ನು ಯಾರೂ ಮೈಯ್ಯೆಕಿಕೊಳ್ಳುವುದಿಲ್ಲ ಅಂತಲೂ ಅಳುಕಿದ್ದ. ಜೊತೆಗೆ ಸರೀಕರೆದುರು ತನ್ನನ್ನು ಬೆತ್ತಲಾಗಿಸಿಬಿಡ್ತಲ್ಲ ಅನ್ನುವ ಕಾರಣಕ್ಕೆ ಮನಸ್ಸು ಕದ್ರೊಡೆದಿತ್ತು. ‘ಒಂದಷ್ಟೊತ್ತು ಎಗರಾಡಿ ಆಮೇಲೆ ಮುದ್ರಿಕೊಳ್ತಾಳೆ ಅನ್ನುವ ಭಂಡಧೈರ್ಯದಿಂದ ತುಂಬಾ ಹೊತ್ತು ಗುಡಿಯಲ್ಲೇ ಕೂತಿದ್ದ. ಹಂಗೂ ಏನಾರಾ ಮೆತ್ತಗಾಗದಿದ್ದಲ್ಲಿ ಮತ್ತೇನೂ ಮಾಡಬೇಕೆಂಬುದು ಹೊಳೆಯದೆ ಕಂಗೆಟ್ಟಿದ್ದ.
ಊಟದ ಹೊತ್ತು ಮೀರಿದರೂ ಗಂಡ ಬಾರದ್ದರಿಂದ ಸಂಪಿಗಮ್ಮನಿಗದು ಇಸಪಾತಕ ಬುದ್ಧಿಯಂತೆ ಕಂಡು ಮತ್ತೂ ಕುದಿಯುವಂತೆ ಮಾಡಿತ್ತು. ಮುಖಕ್ಕೆ ಕೆಂಪಡರಿತ್ತು. ಅತ್ತೂ ಅತ್ತೂ ಕಂಗಳು ಬಾತುಕೊಂಡಿದ್ದವು. ಕೂಗಾಡಿ ಕೂಗಾಡಿ ಗಂಟಲು ಕಟ್ಟಿತ್ತು. ನಿತ್ರಾಣಗೊಂಡು ಕುಸಿದು ಕೂತಿದ್ದಳು. ಸೀರಯ್ಯ ಕಣ್ಣಿಗೆ ಬೀಳುತ್ತಲೇ ಚಕ್ಕನೆದ್ದು ಬಾಗಿಲಿನತ್ತ ನುಗ್ಗಿ ಬಾಗಿಲನ್ನು ಅಡ್ಡಗಟ್ಟಿದಳು. ಸೀರಯ್ಯ ತೊಕ್ಕನ್ನಲಿಲ್ಲ. ‘ಮಾಡಾದೆಲ್ಲಾ ಮಾಡಿ ಕಳ್ಬೆಕ್ಕಿನಂಗೆ ನಿಂತಿದೀಯ,ಯಾವಳ ಬಾಯ್ಗೆ ಬಸ್ದಿದೀಯ ಹೇಳು ನನ್ನ ದೀಪಾಲೆ ಕಂಬಗಳ್ನ,ಕಿರುಕಲು ದನಿಯಲ್ಲಿ ಕಿರುಚಿದಳು. ‘ಮೂರ್ನೂ ಬಿಟ್ಟು ಆರಕ್ಕೆ ಜಮೆಯಾದೋಳೆ,ಸ್ವಲ್ಪ ಅಂಕೇಲಿರೋದ ಕಲ್ತುಕೋ ಮೊದ್ಲು, ಅಂದ ಸೀರಯ್ಯ. ‘ನಾನು ಅಂಕೇಲೇ ಇರೋದು ಅದನ್ನು ಬಿಟ್ಟಿರೋ ಗ್ರಾಸ್ಥ ನೀನು ತಿಳ್ಕೋ, ಅಂದಳು. ಎಲ್ಲದನ್ನೂ ಅಲ್ಲಿಗೇ ತಂದು ತಲುಪಾಕುತ್ತಿದ್ದರಿಂದ ಸೀರಯ್ಯನಿಗೆ ಪಿತ್ಥನೆತ್ತಿಗೇರಿ,‘ಕೇಳ್ದವ್ರ ಏನಂದ್ಕತಾರೆ,ಬಾಯ್ಮುಚ್ಚು ಇಲ್ಲಾಂದ್ರೆ ನೇದುಬಿಡ್ತೀನಿ, ಅಂದ ದನಿಯೆತ್ತರಿಸಿ. ‘ಅದೂ ಆಗ್ಬುಡ್ಲಿ ಈಗ್ಲೇ,ನಗಾಡಾಕೆ ಏನ್ ಉಳ್ದೈತೆ ತಗಾ, ಜವಾಬುಕೊಟ್ಟಳು. ‘ಈಗ ನಿಂಗೊಂದು ಗತಿ ಕಾಣುಸ್ದಿದ್ರೆ ಥೂ ಕುರೋ ಅಂತ ಕರಿ ನನ್ನಅನ್ನುತ್ತಾ ಸಂಪಿಗಮ್ಮನತ್ತ ನುಗ್ಗಿ ಅಡ್ಡಗಟ್ಟಿದ್ದ ಅವಳನ್ನು ದೂಡಿದ ರಭಸಕ್ಕೆ ಆಯತಪ್ಪಿ ಕೆಳಕ್ಕುರುಳಿದ ಸಂಪಿಗಮ್ಮ ಒಂದು ಚಣ ಅವಾಕ್ಕಾದಳು. ಮರುಚಣ,‘ಇನ್ನೂ ಏನೇನು ನೋಡ್ಬೇಕಾಗೈತೋ ಶಿವ್ನೇ,ಅಂತ ಅಳುವಿನ ರಾಗವಾದಳು. ಕೋಪವನ್ನು ಕೊಂಚ ಅತ್ನಕ್ಕೆ ತಂದುಕೊಂಡ ಸೀರಯ್ಯ ಕಂಬಳಿಯೊಂದನ್ನು ಎತ್ತಿಕೊಂಡು ಹೊರನಡೆದು,ಒಮ್ಮೆ ಮೇಕೆಗಳ ಗೂಡಿನತ್ತ ಕಣ್ಣಾಡಿಸಿ ಜಗಲಿಯಲ್ಲಿ ಕುಸಿದಾಗ ಸರೊತ್ತು ಮೀರಿತ್ತು.
ಬೆಳಕರಿಯುವ ಹೊತ್ತಿಗೆ ರಗಳೆ ರವಷ್ಟಾದರೂ ತಿಳಿಯಾಗಬಹುದು ಅಂದುಕೊಂಡಿದ್ದ ಸೀರಯ್ಯ. ಆದರೆ ಅದಿನ್ನೂ ಬಿಗಡಾಯಿಸಿತ್ತು. ಪರಿಸ್ಥಿತಿ ಪತಗೆಡುವುದನ್ನರಿತು,‘ಕೇಳಮ್ಮಿ ಇಲ್ಲಿ ವಸಿ ಅದೇನಾಯ್ತೂಂದ್ರೆ,ನಡೆದದ್ದನ್ನು ಹೇಳಿಕೊಳ್ಳಲು ಹವಣಿಸಿದ. ‘ಮೊದ್ಲು ನನ್ ವಸ್ತೂನಾ ನಂಗೆ ತಂದ್ ಮಡ್ಗಿ ಮುಂದಿನ್ ಮಾತಾಡು ಅಂದಳು ಸಂಪಿಗಮ್ಮ. ‘ಅಯ್ಯೋ ತಂದುಕೊಡ್ತೀನಿ ಬಿಡೇ ಪುಣ್ಯಾತಗಿತ್ತಿ ಅವೊಳ್ಳೇ ಚಿನ್ದವು ಅನ್ನೋಳಂಗೆ ಆಡ್ತಿದೀಯ, ಅಂದ ಸೀರಯ್ಯ. ‘ನಿಂಗಾಪಾಟಿ ಮಾತ್ಯಾಕೆ ಅವು ಮೂರ್ಕಾಸ್ನವೇ ಅಂದ್ಕೋ, ಮೊದ್ಲು ತಂದು ಬಿಸಾಕು,ಅನ್ನುತ್ತಾ ಬಿಕ್ಕಳಿಸಿದಳು ಸಂಪಿಗಮ್ಮ. ‘ಇವಳತ್ರ ಮಾತಾಡ್ತಿದೀನಲ್ಲ ಹೊಡ್ಕಬೇಕು ಏನಾರ ತಗಂಡು,ಅಂದುಕೊಂಡ ಸೀರಯ್ಯ ಸಿರ್ರನೇ ವಚ್ಚಾಲಿಗೆ ಹೋದವನೇ ಮೇಕೆಗಳನ್ನೆಲ್ಲಾ ಮನೆಯ ಮುಂದಿನ ಗೂಟಗಳಿಗೆ ಕಟ್ಟಾಕಿ, ಗೊಬ್ಬರವನ್ನು ಗುಡಿಸಿ ತಿಪ್ಪೆಗಾಕಿ,ಸೀದಾ ಸಿದ್ರಾಮನ ಹೊಟೇಲಿಗೋಗಿ ಹೊಟ್ಟೆಗೊಂದಿಷ್ಟು ತಾಡು ಮಾಡಿಕೊಂಡ. ಹೆಂಡತಿ ಚಣೊತ್ತು ಹಂಗಾಡಿ ಆಮೇಲೆ ಕರಗ್ತಾಳೆ ಅಂದುಕೊಂಡಿದ್ದ ಸೀರಯ್ಯನ ನಂಬಿಕೆ ಮಕಾಡೆಯಾಗಿತ್ತು. ಮುಂಚೇನೇಅವಳಿಗೊಂದು ಮಾತಾಕಬೇಕಿತ್ತು ಅಂದುಕೊಂಡು ಎಂದಿಗಿಂತ ಬೇಗನೇ ಮೇಕೆಗಳ ಕಣ್ಣಿ ಬಿಚ್ಚಿ ಬಾರೆಯ ದಾರಿಹಿಡಿದ. ‘ಇನ್ನಿಲ್ದಂಗೆ ಬೇಡ್ಕಂಡ್ರೂ ಅವ್ಳಿಗೆ ನನ್ನ ಮರ್ಯಾದೆಗಿಂತ ದೀಪಾಲೆ ಕಂಬ್ಗುಳೇ ಹೆಚ್ಚಾದ್ವಲ್ಲ, ಅನಿಸುತ್ತಿದ್ದಂತೆ ಎದೆಯಲ್ಲಿ ಉಲ್ಟಾಡಿದಂತಾಯ್ತು. ‘ಆದ್ರೆ ಕುಡ್ದೋ ಇಸ್ಪೀಟಾಡೋ ಮಜಾಮಾಡಾಕೆ ಅಡ ಮಡ್ಗಿಲ್ವಲ್ಲ ಅಂತ ಅಂದುಕೊಂಡು ವಸಿ ನಿರಾಳವಾದ.
****
ಸೀರಯ್ಯ ಹಂಗೆ ಹೆಂಡತಿಗೂ ಹೇಳದೆ ಅಂಥದ್ದೊಂದು ತೀರ್ಮಾನಕ್ಕೆ ಬರಲು ಎರಡು ಕಾರಣಗಳಿದ್ದವು. ಒಂದು ಅದಕ್ಕವಳು ಸತ್ರಾಂ ಒಪ್ಪಲ್ಲ ಅನ್ನುವುದು. ಮತ್ತೊಂದು ದಿಢೀರನೆ ಬ್ಯಾಂಕಿನವರು ಮನೆಗೇ ವಕ್ಕರಿಸಿದ್ದು. ಎರಡು ವರ್ಷಗಳ ಹಿಂದೆ ಸೀರಯ್ಯ ಹೊಲದ ಮೇಲೆ ಬ್ಯಾಂಕಿನಲ್ಲಿ ಬೆಳೆ ಸಾಲ ತೆಗೆಯೋ ಮೂಲಕ ಸಾಲಗಾರನಾಗಿದ್ದ. ಪಕ್ಕದ ಹೊಲದವರ ಕೊಳವೆಬಾವಿಯನ್ನು ನಂಬಿ ಹೊಲಕ್ಕೆ ತೆಂಗಿನ ಗಿಡಗಳನ್ನು ಕೂರಿಸಿದ್ದ. ಮಿಕ್ಕದ್ದು ಇದ್ದ ಮೇಕೆಗಳ ಜೊತೆಗೆ ಮತ್ತೋದೆರಡು ಮೇಕೆಮರಿಗಳನ್ನು ಕೊಳ್ಳಲು, ಗಿಡಗಳು ದನಕರುಗಳ ಪಾಲಾಗದಂತಿರಲು ಸುಮಾರಾದ ಬೇಲಿ ಮಾಡಲು,ಅಲ್ಲಿಗಲ್ಲಿಗೆ ನೇರೂಪಾಗಿತ್ತು. ಕೆಲವೇ ತಿಂಗಳುಗಳಲ್ಲಿ ಕೊಳವೆಬಾವಿ ಗಾಳಿಯುಗುಳತೊಡಗಿತ್ತು. ನೀರಾಯಿಸುವವರೆಗೂ ಡಿಕಾವಾಗಿದ್ದ ಗಿಡಗಳು ನೀರಿಗೆ ದಡಾಬಂದ್ ಆಗುತ್ತಿದ್ದಂತೆ ಒಂದಷ್ಟು ದಿನ ಇಳಿಮಾರೆಯಲ್ಲಿ ಜೀವಹಿಡುಕಂಡಿದ್ದವು. ಕತ್ರುಸ ಇಲ್ಲದಂತಾದಾಗ ಗೋಣೆಸೆದುಬಿಟ್ಟಿದ್ದವು. ಸೀರಯ್ಯ ಬ್ಯಾಂಕಿನತ್ತ ಮುಖ ಹಾಕಿ ವರ್ಷಗಳೆರಡು ಕಳೆದಿದ್ದವು. ಮೇಕೆಗಳ ವೈವಾಟಿನ ಆದಾಯ ಮನೆಗೇ ನೇರೂಪಾಗ್ತಿತ್ತು. ದಿನಕಳೆದಂತೆ ಮೇಕೆಗಳು ದುಂಡಾಗಾಗುತ್ತಿದ್ದವು. ಅವುಗಳಲ್ಲಿ ಎರಡಾಗಲೇ ಗಬ್ಬವೂ ಆಗಿದ್ದವು. ಅವು ಎರಡೆರಡು ಮರಿಗಳನ್ನಾಕುವ ತಳಿಗಳಾಗಿದ್ದವು. ಹೀಗೆ ಮೇಕೆಗಳು ಹೆಚ್ಚಲಿಯಾದಲ್ಲಿ ಅವುಗಳಿಂದ ಸಾಲ ತೀರಿಸಬಹುದೆಂಬ ಲೆಕ್ಕಾಚಾರದಲ್ಲಿದ್ದ ಸೀರಯ್ಯ. ಈ ನಡುವೆ ಮಾವನಿಗೆ ಲಕ್ವಾ ಹೊಡೆದು ನಿಗಾ ಮಾಡಲೆಂದು ಹೆಂಡತಿ ಸಂಪಿಗಮ್ಮ ಊರಿಗೆ ಹೋಗಿದ್ದಂಥ ಹೊತ್ತಲ್ಲಿ ಒಂದಿನ ಬ್ಯಾಂಕಿನವರು ಸೀದಾ ಮನೆಗೇ ಬಂದಿದ್ದರು. ಇದು ಸೀರಯ್ಯನನ್ನು ಮುಖ ಎತ್ತದಂತೆ ಮಾಡಿತ್ತು. ಅವರು ಮತ್ತೆ ಮನೆಗೆ ಬಾರದಂತೆ ಮಾಡಲು ಕಂಡಲ್ಲೆಲ್ಲಾ ಸಾಲಕ್ಕೆ ಕೈ ಚಾಚಿದ್ದ. ಒಂದು ದಮಡಿ ಕಾಸೂ ಹುಟ್ಟಿರಲಿಲ್ಲ. ಆಗ ಇದ್ದದ್ದರಲ್ಲೇ ಏನಾದರೊಂದನ್ನು ಸೀಯಲೇಬೇಕಾಗಿತ್ತು. ಮೊದಲಿಗೆ ಮೇಕೆಗಳು ಅಂದುಕೊಂಡಿದ್ದ. ದರ್ದು ಅಂತ ಗೊತ್ತಾದರೆ ‘ಆರಕ್ಕೆ ಮೂರರಂಗೆ ಕೇಳ್ತಾರೆ ಅಂತ ಆ ಬಾಬ್ತನ್ನು ಕೈಬಿಟ್ಟಿದ್ದ. ಅವುಗಳನ್ನು ಬಿಟ್ಟರೆ ಅಷ್ಟೊಇಷ್ಟೋ ಬೆಲೆ ತೂಗುವಂಥವುಗಳು ಅಂದರೆ ದೀಪಾಲೆಕಂಬಗಳಾಗಿದ್ದವು. ಹೆಂಡತಿಯ ಕಾಲಿಡಿದರಾಯ್ತು, ಕಾಸು ಕೂಡಿದಾಗ ಬಿಡಿಸಿಕೊಂಡರಾಯ್ತು, ಅಂತ ದೀಪಾಲೆಕಂಬಗಳನ್ನು ಮಾರ್ವಾಡಿಯೊಬ್ಬನಿಗೆ ಅಡವಿಟ್ಟು ಬ್ಯಾಂಕಿಗೆ ಬಡ್ಡಿ ಕಟ್ಟಿದ್ದ. ತಳಮಳದ ಹಂಗಿನಲ್ಲೇ ಅವತ್ತಿಡೀ ದಿನದೂಡಿದ ಸೀರಯ್ಯ ಸಂಜೆಯನ್ನು ಮೈಗಾಕಿಕೊಂಡು ಮೇಕೆಗಳೊಂದಿಗೆ ಮನೆಗೆ ಬಂದಾಗ ಅಲ್ಲಿನ ವಾತಾವರಣ ಮತ್ತೊಂದು ರೂಪದಲ್ಲಿತ್ತು. ಮನೆ ಅಗಾಧ ಮೌನವನ್ನು ಮುಪ್ಪಿರಿಯುತ್ತಿತ್ತು. ಬೆಳಕಿಲ್ಲದೆ ಕತ್ತಲ ಕುಪ್ಪೆಯಾಗಿತ್ತು. ದಿನವಿಡೀ ಬೆಂಕಿಯನ್ನು ಕಾಣದಿದ್ದ ಒಲೆಯಲ್ಲಿದ್ದ ಬೂದಿಯ ವಾಸನೆ ಮೂಗಿಗಡರುತ್ತಿತ್ತು. ಹೆಂಡತಿ ತಲೆ ತುಂಬಾ ಕಂಬಳಿಯೊಂದನ್ನು ಕವುಚಿಕೊಂಡು ಮಲಗಿದ್ದಳು. ಇಡೀ ವಾತಾವರಣ ಸೀರಯ್ಯನನ್ನು ಕಂಗೆಡಿಸಿತು. ಒಳಗೆ ನಿಲ್ಲಲಾಗದೆ ಹೊರಗಿನ ಜಗಲಿಯಲ್ಲಿ ಕೂತು ಮುಗಿಲಿಗೆ ಮುಖವಿಟ್ಟ. ಮಾರುದ್ದ ಮೇಲಕ್ಕೆ ಬಂದಿದ್ದ ಚಂದಮಾಮ ಗೂಡ್ರುಗಟ್ಟಿಕೊಂಡಿದ್ದ. ನಕ್ಷತ್ರಗಳು ಪೇರಿಕಿತ್ತಿದ್ದವು.
ಮಾರನೆಯ ದಿನ. ಅವತ್ತು ಸೋಮವಾರ. ಮನೆಯಲ್ಲಿ ವಾರದ ದಿನ. ಮದುವೆಯಾದ ಲಾಗಾಯ್ತಿನಿಂದಲೂ ಸಂಪಿಗಮ್ಮ ಯಾವತ್ತೂ ವಾರ ತಪ್ಪಿಸಿದವಳಲ್ಲ. ಆದರವತ್ತು ಅದಕ್ಕೂ ಕಲ್ಲು ನೀರು ಬಿಟ್ಟಿದ್ದಳು. ಸೀರಯ್ಯನೇ ನೀರೊಲೆಗೆ ಉರಿ ಹಾಕಿದ. ಮನೆಯ ಕಸ ಗುಡಿಸಿ ಸಾರಿಸಿದ. ನೀರು ಕಾಯುತ್ತಲೇ ಸ್ನಾನ ಮಾಡಿ, ಮಡಿಯುಟ್ಟು ದೇವರ ಪೂಜೆ ಮಾಡಿದ. ಆಗಲೂ ಸಂಪಿಗಮ್ಮ ತುಟಿಕ್‌ಪಿಟಿಕ್ ಅನ್ನಲಿಲ್ಲ. ಹೆಪ್ಪುಗಟ್ಟುತ್ತಿದ್ದ ಮೌನದ ಹೊಡೆತಕ್ಕೆ ಸೀರಯ್ಯ ಚಿಂದಿಯಾಗತೊಡಗಿದ್ದ. ಕೈಕಾಲುಗಳು ಬಿದ್ದುಹೋದಂತಾಗುತ್ತಿದ್ದವು. ಹೆಂಡತಿಯನ್ನು ಮಾತಾಡಿಸಬೇಕೆನಿಸಿತು. ಹತ್ತಿರ ಹೋದ. ಕಂಬಳಿಯೊಳಗೆ ಸಂಪಿಗಮ್ಮ ಸೊಟ್ರುಗುಡುತ್ತಿದ್ದಳು. ಕೆಣಕಲು ಮನಸಾಗದೆ ಆಚೆ ನಡೆದ. ಚಣೊತ್ತು ಚಿಂತಿಸಿದವನೇ ಮರಿಗಳನ್ನಿಡಿದು ಗುಬ್ಬದೊಳಕ್ಕೆ ಕೂಡುತ್ತಿದ್ದ ಎದುರು ಮನೆಯ ಬೀರನನ್ನು ಕೂಗಿ,‘ಲೇ ಬೀರಾ ಇವತ್ತ ನಮ್ಮ ಆಡುಗಳ್ನೂ ನಿಮ್ಮವುಗುಳ್ ಜೊತೆ ಹಂಗೇ ಅಡ್ಡಾಡಿಸಿಕೊಂಡು ಬರ್ತೀಯ. ಅರ್ಜೆಂಟಾಗಿ ಸಂತೆಗೆೆ ಮರಿಗುಳ್ನ ಹೊಡ್ಕಂಡು ಹೋಗ್ಬೇಕು ಮಾರಾಕೆ,ಅಂದ. ‘ಆತು ಸೀರಣ್ಣ, ಬೀರ ಅಲ್ಲಿಂದಲೇ ಕೂಗಿದ.
ಮತ್ತೆ ಒಳ ಹೊಕ್ಕವನೇ ವಾಡೆಯ ಪಕ್ಕದಲ್ಲಿ ಕಟ್ಟಿದ್ದ ಹಗ್ಗದ ಮೇಲಿದ್ದ ಅಂಗಿ ಲುಂಗಿಗಳನ್ನು ಎತ್ತಿ ಹೆಗಲಿಗಾಕಿಕೊಂಡು ಗಬ್ಬದ ಮೇಕೆಗಳತ್ತ ನಡೆದ. ಮಲಗಿದ್ದವುಗಳನ್ನು ಎಬ್ಬಿಸಿ ಕಣ್ಣಿ ಬಿಚ್ಚಿಕೊಂಡ. ಹಂಗೇ ಒಂದೆರಡು ಹಿಡಿ ಹಲಸಿನ ಸೊಪ್ಪನ್ನೂ ಕೈಯ್ಯಲ್ಲಿ ಹಿಡಿದುಕೊಂಡ. ಎದೆ ಹಿಂಡಿದಂತಾಗತೊಡಗಿತು. ಮೇಕೆಗಳ ಹಗ್ಗಗಳನ್ನು ಜಗ್ಗಿಕೊಂಡು ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ‘ಆಗಿದ್ದಾಗೋತು ಬಿಡು,ಇನ್ನ ಇವುಗಳ್ನೂ ನುಂಗಿ ನೀರ್ಕುಡ್ಕಬೇಕು ಅಂತಿದೀಯ, ಬಾಗಿಲೆಡೆಯಿಂದ ಹೆಂಡತಿಯ ದನಿ ಬಂದಂತಾಗಿ ಅತ್ತಲೇ ದಿಟ್ಟಿಸತೊಡಗಿದ.