ಶಿಕ್ಷಕರ ಮುಂದಿರುವ 21ನೇ ಶತಮಾನದ ಸವಾಲುಗಳು

Update: 2020-01-12 18:24 GMT

ದೇ ಜನವರಿ 3ರಂದು ಭಾರತದ ಮೊದಲ ಶಿಕ್ಷಕಿಯಾದ ಶ್ರೀಮತಿ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನವನ್ನು ಆಚರಿಸಲಾಯಿತು. ನೂರೈವತ್ತು ವರ್ಷಗಳ ಹಿಂದೆಯೇ ಕ್ರಾಂತಿಕಾರಿ ಹೆಜ್ಜೆಗಳನ್ನು ಹಾಕಿದ್ದ ಈ ಮಹಾತಾಯಿಯನ್ನು ನೆನೆಯುತ್ತಾ, ಇಂದಿನ ಶಿಕ್ಷಕರ ಮುಂದಿರುವ ಸವಾಲುಗಳ ಕುರಿತು ತುಸು ಆಲೋಚಿಸಬೇಕಿದೆ.

2020ರಲ್ಲಿ ವೃತ್ತಿನಿರತ ಶಿಕ್ಷಕರಿಗೆ, ತಮ್ಮ ಮುಂದಿರುವ ಮಕ್ಕಳ ಕೈಯಲ್ಲಿರುವ ಮೊಬೈಲ್ ಫೋನ್‌ನಲ್ಲಿ 'ಗೂಗಲ್ ಮೇಷ್ಟ್ರು' ಇರುವುದರ ನೆನಪು ಇರಬೇಕಾಗುತ್ತದೆ. ಅಗ್ಗದ ಸ್ಮಾರ್ಟ್ ಫೋನುಗಳು ಇಂದು ಎಲ್ಲೆಡೆ ಲಭ್ಯವಿವೆ. ಬಹುತೇಕ ಮಕ್ಕಳಿಗೆ ಇಂದು ಅವುಗಳು ಒಂದಲ್ಲ ಒಂದು ರೂಪದಲ್ಲಿ ಬಳಸಲು ದೊರೆಯುತ್ತವೆ. 'ಗೂಗಲ್ ಸರ್ಚ್'ನಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಜಾಲಾಡಬಹುದು. ಇವತ್ತು ಮಾಹಿತಿಯ ಕೊರತೆ ಇಲ್ಲ; ಅದರ ಬಳಕೆಯ ಕೊರತೆ ತೀವ್ರವಾಗಿದೆ. ಜೊತೆಗೆ, ಲಭ್ಯವಿರುವ ಮಾಹಿತಿಯು ಫೇಕ್ ಅಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಕ್ಷಮತೆಯೂ ಇರಬೇಕಾಗುತ್ತದೆ.

ಇಂದು ಪಾಠ ಹೇಳುತ್ತಿರುವ ಶಿಕ್ಷಕರಿಗೆ ಸಾಕಷ್ಟು ಸವಾಲುಗಳಿವೆ. ಅವುಗಳನ್ನು ಹೇಗೆ ನಿಭಾಯಿಸಬೇಕೆಂಬ ಪ್ರಶ್ನೆಯೂ ಇದೆ. 21ನೇ ಶತಮಾನದ ಪ್ರಮುಖ ಚಿಂತಕರಲ್ಲಿ ಒಬ್ಬರಾದ ಯುವ ನೊಹಲ್ ಹರಾರಿ ''ಬದಲಾಗುತ್ತಿರುವ ಇಂದಿನ ಕಾಲಮಾನದಲ್ಲಿ, ಜ್ಞಾನ ಗಳಿಕೆಗಿಂತ ಅದರ ಬಳಕೆಯ ಕ್ಷಮತೆ ಮುಖ್ಯ'' ಎನ್ನುತ್ತಾರೆ. ಪಾಠ ಹೇಳುವ ಗುರುವಿಗೆ ಬದಲಾಗುತ್ತಿರುವ ಜಗತ್ತಿನ ಅರಿವು ಇರಬೇಕಾಗುತ್ತದೆ. ಮುಂದಿನ ಇಪತ್ತು ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಮುಖಾಮುಖಿಯಾಗುವ ಬದುಕು ಎಂತಹುದು ಎನ್ನುವುದನ್ನು ಅರಿತು, ಅದನ್ನು ಪೂರೈಸುವ ಕ್ರಿಯಾಶೀಲತೆಯುಳ್ಳ ಕಲಿಸುವ ಕೌಶಲವನ್ನು ಬೆಳೆಸಿಕೊಳ್ಳಬೇಕಾಗುತ್ತದೆ.

2030ರ ವೇಳೆಗೆ ಮೊಬೈಲ್ ಫೋನು ಅಂತರ್ಜಾಲದ ಸಂಪರ್ಕಕ್ಕಾಗಿ ಬೇಕಾಗುವುದೇ ಇಲ್ಲ. ಏಕೆಂದರೆ, ಸಂಪರ್ಕದ ಕಾರ್ಯವನ್ನು ಆಗ ಇತರ ವಸ್ತುಗಳು ನಿರ್ವಹಿಸುತ್ತವೆ. ಕನ್ನಡಕ, ಫ್ರಿಡ್ಜ್, ಮಿಕ್ಸಿ, ಶೂ, ಶರ್ಟ್, ಪ್ಯಾಂಟು ಮುಂತಾದವು ಇಂದು ಫೋನು ನಿರ್ವಹಿಸುತ್ತಿರುವ ಕಾರ್ಯವನ್ನು ಅಂದು ನಿಭಾಯಿಸುತ್ತವೆ. ಇವುಗಳಲ್ಲಿ ಅಡಕವಾಗುವ ಕೃತಕ ಬುದ್ಧಿಶಕ್ತಿಯ ತಂತ್ರಜ್ಞಾನವನ್ನು ಆಧರಿಸಿದ ಅನೇಕ ಸಮರ್ಥ ಡಿಜಿಟಲ್ ಸಹಾಯಕರು ಅಂತರ್ಜಾಲ ಮತ್ತು ನಮ್ಮ ನಡುವಿನ ಕೊಂಡಿಯಾಗಲಿದ್ದಾರೆ. ಮಿಕ್ಸಿ ಅರ್ಧ ನಿಮಿಷ ಮಾತ್ರ ರುಬ್ಬಬೇಕೆಂದು ಮೌಖಿಕವಾಗಿ ಆದೇಶ ನೀಡಲು ಅವಕಾಶವಾಗುತ್ತದೆ. ಮಾತನಾಡುವ ಬಸ್ಸುಗಳು ನಮಗೆ ದೊರೆಯುತ್ತವೆ -ಸಾರ್ವಜನಿಕ ಬಸ್ಸಿನ ಯಾವ ಮೂಲೆಯಲ್ಲಿ ನಿಂತು ಎಲ್ಲಿಗೆ ಹೋಗುತ್ತಿರುವೆ ಎಂದು ಅದನ್ನು ಕೇಳಿದರೆ ಸಾಕು, ತಾನು ಚಲಿಸುತ್ತಿರುವ ಮಾರ್ಗ ಮತ್ತು ನಿಲ್ದಾಣಗಳ ವಿವರಗಳನ್ನು ಅದು ನೀಡುತ್ತದೆ. ಇಷ್ಟೆಲ್ಲಾ ಕೆಲಸಗಳನ್ನು ಮಾಡುವ ಇವು, ದಿನದ 24 ಗಂಟೆಗಳೂ ಅಂತರ್ಜಾಲದೊಂದಿಗೆ ಸಂಪರ್ಕವನ್ನು ಹೊಂದಿರುತ್ತವೆ.

ಈ ಸಾಧ್ಯತೆಯನ್ನು ಅರಿಯಲು, ಈಗ ಲಭ್ಯವಿರುವ ಸ್ಮಾರ್ಟ್ ಫೋನುಗಳಲ್ಲಿರುವ ವಾಯ್ಸಾ ಅಸಿಸ್ಟೆಂಟ್‌ಗಳ ಲಭ್ಯತೆಯನ್ನು ಗಮನಿಸಿ. ನೀವೀಗ ಫೋನ್‌ನಲ್ಲಿ ಆಗಬೇಕಾದ ಕೆಲಸಗಳಿಗೆ ಟೈಪಿಸಬೇಕೆಂದೇನು ಇಲ್ಲ. ವಾಯ್ಸೆ ಅಸಿಸ್ಟೆಂಟ್ ಆ್ಯಪ್ ಅನ್ನು ಕಾರ್ಯಗತಗೊಳಿಸಿ ಹೇಳಿದರೆ ಸಾಕು- ನಿಮ್ಮ ಕೆಲಸ ಆಗುತ್ತದೆ. ಹಾಗೆಯೇ ಟಿವಿ ಜಾಹೀರಾತುಗಳಲ್ಲಿ ನೀವು ನೋಡಿರುವ ಮತ್ತು ಕೆಲವರು ಈಗಾಗಲೇ ಬಳಸಿರುವ ಅಮೆಜಾನ್ ಕಂಪೆನಿಯ ಸ್ಪೀಕರ್ 'ಇಕೋ'ನಲ್ಲ್ಲಿರುವ 'ಅಲೆಕ್ಸಾ' ಹೆಸರಿನ ಡಿಜಿಟಲ್ ಸಹಾಯಕಿ ನೀವು ಕೇಳಿದ ಮಾಹಿತಿಯನ್ನು ನೀಡುತ್ತಾ, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಾ, ನಿಮ್ಮ ಅಗತ್ಯಗಳನ್ನು ಪೂರೈಸುವ ಕಾರ್ಯವನ್ನು ನಿರ್ವಹಿಸುತ್ತಾಳೆ.

ಹಾಗೆಯೇ, ಇಂದು ಲಭ್ಯವಾಗುತ್ತಿರುವ ಹೊಸ ಕಾರುಗಳ ಕಡೆಗೂ ಗಮನಹರಿಸಿ. ಈ ಮಾತನಾಡುವ ಕಾರುಗಳಿಗೆ ನೀವು ಸ್ಟಾರ್ಟ್ ಆಗು ಎಂದು ಹೇಳಿದರೆ ಸಾಕು, ಅವು ಸ್ಟಾರ್ಟ್ ಆಗುತ್ತವೆ; ಇಂಜಿನ್ ಯಾವ ಭಾಗದಲ್ಲಿ ಸಮಸ್ಯೆಯಿದೆ ಎಂದು ಹೇಳುತ್ತವೆ, ಪೆಟ್ರೋಲ್ ಎಷ್ಟು ಇದೆಯೆಂದು ಹೇಳುತ್ತವೆ, ಹವಾಮಾನ ವರದಿಯನ್ನು ಹಂಚಿಕೊಳ್ಳುತ್ತವೆ, ನೀವು ಕೇಳಿದ ಹಾಡನ್ನು ಅಂತರ್ಜಾಲದಲ್ಲಿ ಹುಡುಕಿ ಕೇಳಿಸುತ್ತವೆ, ಮುಂದಿನ ಸರ್ವಿಸ್ ಎಲ್ಲಿ ಹೇಗೆ ಪಡೆಯಬೇಕೆಂದು ಸೂಚನೆಯನ್ನು ನೀಡುತ್ತವೆ. ಹೀಗೆ ಅಂತರ್ಜಾಲ ಆಧಾರಿತ ತಂತ್ರಜ್ಞಾನ ಹೊಸ ಹೊಸ ಅವಕಾಶಗಳನ್ನು ನೀಡುತ್ತಿದೆ. ಆದರೆ, ಇದಕ್ಕೊಂದು ಮಿತಿಯಿದೆ. ಮಾಹಿತಿಯನ್ನು ನೀಡಬಹುದೇ ಹೊರತು, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಅಂತಹ ದಿನಗಳು ಬರುವುದೇ ಇಲ್ಲ ಅಂತ ಹೇಳುತ್ತಿಲ್ಲ; ಆದರೆ ಅಂತಹ ದಿನಗಳು ಇನ್ನೂ ಒಂದು ಶತಮಾನದಷ್ಟು ದೂರ ಇವೆ ಎನ್ನುವುದು ತಜ್ಞರ ಅಂದಾಜು.

ಈ ಹಿನ್ನೆಲೆಯಲ್ಲಿ ಮುಂದಿನ ಐದಾರು ದಶಕಗಳ ಪರಿಸ್ಥಿತಿ ಹೀಗಿರುತ್ತದೆ. ಮಾಹಿತಿಯ ಲಭ್ಯತೆ ಅಪರಿಮಿತವಾಗಿರುತ್ತದೆ. ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಂತಹ ಮಾನವರ ಅಗತ್ಯ ನಮಗಿರುತ್ತದೆ. ಭಾರತದ ಜನಸಂಖ್ಯೆ ಎಷ್ಟು ಎನ್ನುವುದನ್ನು ನೆನಪಿಡಬೇಕಾದ ಅನಿವಾರ್ಯತೆ ಇರುವುದಿಲ್ಲ; ಗೂಗಲ್‌ನಂತಹ ತಾಣಗಳು ನಿಮಗೆ ಆ ಕ್ಷಣದ ಜನಸಂಖ್ಯೆಯ ಮಾಹಿತಿಯನ್ನು ನಿಖರವಾಗಿ ನೀಡುತ್ತವೆ. ಬದಲಿಗೆ ಲಭ್ಯವಿರುವ ಮಾಹಿತಿಯನ್ನು ಬಳಸಿಕೊಂಡು ಉತ್ತಮವಾದ ಪ್ರಬಂಧ ಬರೆಯುವ ಸಾಮರ್ಥ್ಯವಿರುವ ವ್ಯಕ್ತಿಯ ಅಗತ್ಯವಿರುತ್ತದೆ. ಸುಂದರವಾದ ಬರವಣಿಗೆ ಬೇಕೆಂದೇನು ಇಲ್ಲ- ನೀವು ಹೇಗೆ ಬರೆದರೂ ಅದನ್ನು ಸುಂದರವಾದ ಅಕ್ಷರಗಳನ್ನಾಗಿ ಬದಲಿಸುವ ಆ್ಯಪ್‌ಗಳೂ ಲಭ್ಯ ಇವೆ; ಆದರೆ ಲಾಜಿಕಲ್ ಆಗಿ ಆಲೋಚಿಸಿ, ಸುಸಂಬದ್ಧವಾಗಿ ಬರೆಯುವ ಸಾಮರ್ಥ್ಯವಿರುವವರು ಬೇಕು. ಜೊತೆಗೆ, ಲಭ್ಯವಿರುವ ಮಾಹಿತಿಗಳ ಸತ್ಯಾಸತ್ಯತೆಯನ್ನು ವಿಶ್ಲೇಷಿಸಿ ಖಚಿತಪಡಿಸಿಕೊಳ್ಳುವ ಕ್ಷಮತೆಯೂ ಬೇಕಾಗುತ್ತದೆ. ಫೇಕ್ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಗುರುತಿಸಿ, ಅದನ್ನು ಸೂಕ್ತ ರೀತಿಯಲ್ಲಿ ತನಿಖೆಗೆ ಒಳಪಡಿಸಿ, ಆನಂತರ ಅದನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಬೇಕಿರುತ್ತದೆ.

ನೂರೈವತ್ತು ವರ್ಷಗಳ ಹಿಂದೆ ವಿದ್ಯ ಕಲಿಸಲು ಹೊರಟ ಸಾವಿತ್ರಿ ಬಾಯಿ ಫುಲೆ ಅವರಿಗೆ 'ಸಮಾಜದ ಜಾತಿ ಪದ್ಧತಿ' ದೊಡ್ಡ ಸವಾಲಾಗಿತ್ತು. 2020ರಲ್ಲಿ ಕಲಿಸಲು ಹೊರಡುವ ಶಿಕ್ಷಕರಿಗೆ 'ತಂತ್ರಜ್ಞಾನ'ವೇ ಒಂದು ದೊಡ್ಡ ಸವಾಲಾಗಿದೆ. ತರಗತಿಯಲ್ಲಿ ಫೋನು ಹಿಡಿದು ಕೂರುವ ವಿದ್ಯಾರ್ಥಿಗಳಿಗೆ ಕಲಿಸುವ ಹೊಣೆಗಾರಿಕೆ ಇದೆ. ಟಿಕ್‌ಟಾಕ್‌ಗಳಲ್ಲಿ, ವಾಟ್ಸ್‌ಆ್ಯಪ್‌ಗಳಲ್ಲಿ, ಮೀಮ್‌ಗಳಲ್ಲಿ ಮುಳುಗಿ ಹೋಗುವ ವಿದ್ಯಾರ್ಥಿಗಳನ್ನು ಅವರ ಭವಿಷ್ಯಕ್ಕಾಗಿ ತಯಾರು ಮಾಡುವ ವೃತ್ತಿಪರ ಜವಾಬ್ದಾರಿಯಿದೆ. 'ಸೆಗಣಿ ಎಸೆಯುವ ಮಂದಿಗೆ ಅಂಜದೆ' ದಾರಿಯಲ್ಲಿ ನಡೆಯುವಾಗ ಒಂದು ಸೀರೆ, ಶಾಲೆಯಲ್ಲಿ ಒಂದು ಸೀರೆಯನ್ನು ಧರಿಸಿ ಕಲಿಸಿದ ಸಾವಿತ್ರಿಯವರ ಬದ್ಧತೆ ಶಿಕ್ಷಕರಿಗೆ ಬೇಕಿದೆ. ಸವಾಲುಗಳನ್ನು ಎದುರಿಸಲು ಇಂತಹ ತಂತ್ರಗಳನ್ನು ಅಳವಡಿಸಿಕೊಳ್ಳುವ ನೈಪುಣ್ಯತೆ ಮತ್ತು ಬದ್ಧತೆಯೊಂದಿಗೆ ಕ್ರಿಯಾಶೀಲತೆಯು ಶಿಕ್ಷಕರಿಗೆ ಬೇಕಾಗುತ್ತದೆ.

21ನೇ ಶತಮಾನದ ತುರ್ತು 'ಅನ್ವಯಿಸುವ' ಕೌಶಲಗಳಾಗಿರುತ್ತವೆ. ಉದಾಹರಣೆಗೆ, ಕಾರಿನ ಇಂಜಿನ್‌ನಲ್ಲಿರುವ ದೋಷಗಳನ್ನು ಡಿಜಿಟಲ್ ಸಹಾಯಕ ಗುರುತಿಸುತ್ತದೆ; ಒಟ್ಟಾರೆ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಸೂಕ್ತ ಪರಿಹಾರ ಸೂಚಿಸುವ ನಿರ್ಧಾರಕ ಕ್ಷಮತೆಯನ್ನು ಮೆಕ್ಯಾನಿಕ್ ಹೊಂದಿರಬೇಕಾಗುತ್ತದೆ. ವಿದ್ಯಾರ್ಥಿಯೋರ್ವನಿಗೆ ಸ್ವಾತಂತ್ರಪೂರ್ವ ಭಾರತದ ಐತಿಹಾಸಿಕ ಘಟನಾವಳಿಗಳು ಕ್ಷಣಮಾತ್ರದಲ್ಲಿ ದೊರೆಯುತ್ತವೆ; ಇವುಗಳನ್ನು ಉರು ಹೊಡೆಯುವ ಅಗತ್ಯವಿರುವುದಿಲ್ಲ. ಆದರೆ, ಆ ಕಾಲದ ರಾಜಕೀಯ ಪರಿಣಾಮಗಳ ಕುರಿತು ಆಲೋಚಿಸಿ, ಕ್ರಮಬದ್ಧವಾಗಿ ಬರೆಯುವ ಸಾಮರ್ಥ್ಯ ಹೊಂದಿರಬೇಕಾಗುತ್ತದೆ. ಕೈಯಲ್ಲಿ ಬರೆಯುವ ಅಗತ್ಯವೂ ಇರುವುದಿಲ್ಲ; ಮೌಖಿಕವಾಗಿ ಹೇಳಿದರೆ ಡಿಜಿಟಲ್ ಸಹಾಯಕ ಟೈಪಿಸಿಕೊಳ್ಳುತ್ತದೆ, ಆದರೆ ಇಡೀ ಪ್ರಬಂಧವನ್ನು ಚಿಂತಿಸಿ, ಮಾಹಿತಿಯನ್ನು ಅರ್ಥಪೂರ್ಣವಾಗಿ ಜೋಡಿಸಿ ಹೇಳುವ ಸಾಮರ್ಥ್ಯವನ್ನು ಆತ ಹೊಂದಿರಲೇಬೇಕಾಗುತ್ತದೆ.

ಸಾವಿತ್ರಿಬಾಯಿ ಫುಲೆ ಅವರ ಸಾಧನೆಗಳನ್ನು ಹೇಳುತ್ತಲೆ, ಅವರ ಜೀವನವನ್ನು ವಿದ್ಯಾರ್ಥಿಗಳ ಅನುಭವಕ್ಕೆ ನಿಲುಕುವಂತೆ ಅನ್ವಯಿಸಿ ಹೇಳದಿದ್ದರೆ, ಶಿಕ್ಷಕ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಲಿಲ್ಲ ಎಂದರ್ಥ. ನೂರೈವತ್ತು ವರ್ಷಗಳ ಹಿಂದಿನ ಸಾಮಾಜಿಕ ಘಟನೆಗಳಿಂದ ಕಲಿತ ಪಾಠಗಳನ್ನು ಹಂಚಿಕೊಳ್ಳುತ್ತಾ, ಮಾನವ ಸಮಾಜ ನಡೆದು ಬಂದ ದಾರಿಯನ್ನು ಪರಿಚಯಿಸುತ್ತಾ, ನಡೆಯಲು ಬಾಕಿಯಿರುವ ದಾರಿಯ ಕುರಿತು ಹೇಳದ ಇತಿಹಾಸ ಶಿಕ್ಷಕ 21ನೇ ಶತಮಾನದ ಶಿಕ್ಷಕನೇ ಅಲ್ಲ. ಈ ಕಲಿಕೆಗಳನ್ನು ಕಲಿಯದ ಶಿಕ್ಷಕರಿಗೆ ಸಾವಿತ್ರಿಬಾಯಿ ಫುಲೆಯಂತಹವರು ಬಿಟ್ಟು ಹೋದ 'ಇತಿಹಾಸದ ಮಹತ್ವ' ಅರಿವಾಗದೇ, ಜೀವವಿಲ್ಲದ ಶಿಕ್ಷಕರಾಗಿಯೇ ಉಳಿದುಬಿಡುತ್ತಾರೆ. ಇಂತಹ ನಿರ್ಜೀವ ಶಿಕ್ಷಕರ ಒಡನಾಟದಿಂದ ಬೇಸತ್ತು ಹೋದ ವಿದ್ಯಾರ್ಥಿಗಳು ಟಿಕ್‌ಟಾಕ್ ಲೋಕದಲ್ಲಿ ತಮ್ಮ ಜೀವನವನ್ನು ಕಂಡುಕೊಳ್ಳುತ್ತಾರೆ. ತಪ್ಪು ಯಾರದ್ದು?

Writer - ಸದಾನಂದ ಆರ್.

contributor

Editor - ಸದಾನಂದ ಆರ್.

contributor

Similar News

ಜಗದಗಲ
ಜಗ ದಗಲ