NPR, NRIC ಮತ್ತು CAA : ಭಾರತವನ್ನು ಕಳವಳಕ್ಕೆ ಕೆಡವಿದ 10 ನಿಗೂಢ ಅಕ್ಷರಗಳು

Update: 2020-01-16 06:00 GMT

 ಭಾರತ ಸರಕಾರವು ಅನುಷ್ಠಾನಿಸಲು ಹೊರಟಿರುವ CAA ಎಂಬ ಕಾಯ್ದೆ ಹಾಗೂ NRC ಮತ್ತು NPRಎಂಬ ಸಮೀಕ್ಷೆ - ನೋಂದಣಿ ಯೋಜನೆಗಳ ವಿರುದ್ಧ ದೇಶದೆಲ್ಲೆಡೆ ಭಾರೀ ಆಕ್ರೋಶ ಭುಗಿಲೆದ್ದಿದೆ. ದೇಶದ ಹೆಚ್ಚಿನೆಲ್ಲೆಡೆ ವಿದ್ಯಾರ್ಥಿಗಳು, ಯುವಜನರು ಮತ್ತು ತೀರಾ ವಿಭಿನ್ನ ಹಿನ್ನೆಲೆಯ ವಿವಿಧ ಗುಂಪು, ಪಂಗಡ, ಜಾತಿ ಮತ್ತು ಧರ್ಮಗಳ ಜನರು ಸರಕಾರದ ಪ್ರಸ್ತುತ ಧೋರಣೆಗಳ ವಿರುದ್ಧ ಪ್ರತಿಭಟಿಸಲು ಬೀದಿಗಿಳಿದಿದ್ದಾರೆ. ವಿಶೇಷವಾಗಿ ದೇಶದ ವಿವಿಧೆಡೆ ಕಾಲೇಜು, ವಿಶ್ವ ವಿದ್ಯಾನಿಲಯಗಳ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಮತ್ತು ಉಪನ್ಯಾಸಕರು ಉಗ್ರ ಪ್ರತಿಭಟನೆಗೆ ಇಳಿದಿದ್ದಾರೆ. ಸಾಹಿತಿಗಳು ಮತ್ತು ಪತ್ರಕರ್ತರು ಮಾತ್ರವಲ್ಲ, ಆಡಳಿತರಂಗದಲ್ಲಿ ಅತ್ಯುನ್ನತ ಹುದ್ದೆಗಳಲ್ಲಿದ್ದು ಹಲವು ದಶಕಗಳ ಕಾಲ ಸೇವೆ ಸಲ್ಲಿಸಿ ಅನುಭವ ಇರುವ ಅನೇಕ ಹಿರಿಯ ನಿವೃತ್ತ ಅಧಿಕಾರಿಗಳು, ಮುತ್ಸದ್ಧಿಗಳು, ನಿವೃತ್ತ ಅಧಿಕಾರಿಗಳು, ನ್ಯಾಯಾಧೀಶರು ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಬುದ್ಧಿಜೀವಿಗಳು ಸರಕಾರದ ಪ್ರಸ್ತಾವಗಳನ್ನು ಅಪ್ರಬುದ್ಧ, ಅತಾರ್ಕಿಕ, ಅಸಂಬದ್ಧ, ಅಪ್ರಾಯೋಗಿಕ, ಪಕ್ಷಪಾತಿ ಎಂದೆಲ್ಲ ಕರೆದು ಖಂಡಿಸುತ್ತಿದ್ದಾರೆ. ಸ್ವತಃ: ಆಡಳಿತಾರೂಢ NDA  ಒಕ್ಕೂಟದ 13 ಸದಸ್ಯ ಪಕ್ಷಗಳ ಪೈಕಿ 10 ಪಕ್ಷಗಳು ಈ ವಿಷಯದಲ್ಲಿ ಈಗಾಗಲೇ ತಮ್ಮ ಭಿನ್ನಮತ ಪ್ರಕಟಿಸಿದ್ದು, ಸ್ಪಷ್ಟವಾಗಿ ಸರಕಾರದ ವಿರುದ್ಧ ಹಾಗೂ ಜನತೆಯ ಪರ ನಿಂತಿವೆ. ಕೇಂದ್ರದ ದುರುದ್ದೇಶ ಪೂರಿತ ಯೋಜನೆಗಳನ್ನು ತಾವು ತಮ್ಮ ರಾಜ್ಯದಲ್ಲಿ ಅನುಷ್ಠಾನಿಸುವುದಿಲ್ಲ ಎಂದು ಹಲವು ರಾಜ್ಯ ಸರಕಾರಗಳು ಘೋಷಿಸಿವೆ. ಹಲವು ಹೊರದೇಶಗಳಿಂದಲೂ ಸರಕಾರಗಳ ಮತ್ತು ಮಾನವಹಕ್ಕು ಸಂಘಟನೆಗಳ ಕಡೆಯಿಂದ ಖಂಡನೆಗಳ ಸುರಿಮಳೆ ಹರಿದು ಬರುತ್ತಿದೆ.
CAA ಎಂಬ ವಿರೋಧಾಭಾಸಗಳ ಕಂತೆ!
ನಾವು ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ ಎಂಬ ಮಾತನ್ನು ಮೋದಿ - ಶಾ ಸರಕಾರದ ನಾಯಕರು ಪದೇ ಪದೇ ಮಂತ್ರದಂತೆ ಉಚ್ಚರಿಸುತ್ತಲಿರುತ್ತಾರೆ. ಆದರೆ ನಿಜವಾಗಿ CAA ಎಂಬುದು ಭಾರತದ ಮುಸ್ಲಿಮರನ್ನು ಪ್ರಚೋದಿಸಿ ಬೀದಿಗೆ ಇಳಿಸುವ ಮತ್ತು ಆ ಮೂಲಕ ದೇಶದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಉದ್ದೇಶದಿಂದಲೇ ತರಲಾದ ಕಾಯ್ದೆ ಎಂಬುದರಲ್ಲಿ ಈಗ ಯಾರಿಗೂ ಸಂದೇಹವಿಲ್ಲ. ಹೊಸ ಕಾಯ್ದೆ ಪ್ರಕಾರ 2015ಕ್ಕೆ ಮುನ್ನ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದವರ ಪೈಕಿ ಧರ್ಮದ ಆಧಾರದಲ್ಲಿ ನಡೆಯುವ ದೌರ್ಜನ್ಯವನ್ನು ತಪ್ಪಿಸಿಕೊಳ್ಳಲು ಬಂದ ಹಿಂದೂ, ಸಿಖ್, ಬೌದ್ಧ, ಕ್ರೈಸ್ತ, ಜೈನ ಮತ್ತು ಪಾರ್ಸಿ ಮತಸ್ಥ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಲಾಗುವುದು. ಇದರಲ್ಲಿರುವ ವಿರೋಧಾಭಾಸಗಳ ರಾಶಿ ನೋಡಿ:
1. ಅಸ್ಸಾಮ್ ಮತ್ತು ಈಶಾನ್ಯ ಭಾರತದ ಕೆಲವು ಸ್ಥಳಗಳನ್ನು ಹೊರತುಪಡಿಸಿ ದೇಶದ ಬೇರೆಲ್ಲೂ ಅಕ್ರಮ ವಲಸಿಗರ ಸಮಸ್ಯೆ ಇಲ್ಲ. ಇಂತಹದೊಂದು ಕಾಯ್ದೆ ತಂದು ದೇಶದೆಲ್ಲೆಡೆ ವಲಸಿಗರ ಸಮಸ್ಯೆ ಬಗೆಹರಿಸಬೇಕೆಂಬ ಬೇಡಿಕೆಯನ್ನೂ ಯಾರೂ ಮಂಡಿಸಿರಲಿಲ್ಲ. ಹೀಗಿರುವಾಗ ಸರಕಾರವು ದೇಶದ ಎಷ್ಟೋ ಜ್ವಲಂತ ಸಮಸ್ಯೆಗಳನ್ನು ಮತ್ತು ಜನತೆಯ ಅದೆಷ್ಟೋ ಒಕ್ಕೊರಲ ಬೇಡಿಕೆಗಳನ್ನೆಲ್ಲಾ ಕಡೆಗಣಿಸಿ ಇಂತಹದೊಂದು ಅನಪೇಕ್ಷಿತ ಹಾಗೂ ವಿವಾದಾತ್ಮಕ ಕ್ರಮ ಕೈಗೊಂಡಿರುವುದು ಸರಕಾರದ ಇರಾದೆಗಳ ಬಗ್ಗೆ ಜನರು ಶಂಕಿಸುವಂತೆ ಮಾಡಿದೆ.
2. ಪ್ರಸ್ತುತ ಮೂರು ನೆರೆ ದೇಶಗಳಿಂದ ಬರುವ ಮುಸ್ಲಿಮರನ್ನು ಮತ್ತು ನಾಸ್ತಿಕರನ್ನು ಪೌರತ್ವದ ಅರ್ಹತೆಯ ವ್ಯಾಪ್ತಿಯಿಂದ ಸಂಪೂರ್ಣ ಹೊರಗಿಡಲಾಗಿದೆ. ಇದು ನಿರಾಶ್ರಿತರ ಅಥವಾ ವಲಸಿಗರ ಮೇಲಿನ ಮಾನವೀಯ ಅನುಕಂಪದ ದೃಷ್ಟಿಯಿಂದ ಮಾಡಿದ ಕಾಯ್ದೆಯಾಗಿದ್ದರೆ ಈ ರೀತಿ ಕೆಲವರನ್ನು ಅದರ ವ್ಯಾಪ್ತಿಯಿಂದ ಹೊರಗಿಡುವ ಅಗತ್ಯವಿರಲಿಲ್ಲ. ದೌರ್ಜನ್ಯಕ್ಕೊಳಗಾಗಿ ಅಥವಾ ದೌರ್ಜನ್ಯದ ಭಯದಿಂದ ವಲಸೆ ಬಂದ ಎಲ್ಲರಿಗೆ ನಿಷ್ಪಕ್ಷವಾಗಿ ಪೌರತ್ವ ನೀಡ ಬಹುದಿತ್ತು.
3. ಅಫ್ಘಾನಿಸ್ತಾನ ಎಂಬ ದೂರದ ದೇಶವನ್ನು ಪಟ್ಟಿಯಲ್ಲಿ ಸೇರಿಸಿರುವ ಸರಕಾರ, ಶ್ರೀಲಂಕಾ, ಚೀನಾ, ನೇಪಾಳ, ಟಿಬೆಟ್, ಮ್ಯಾನ್ಮಾರ್, ಭೂತಾನ್ ಇತ್ಯಾದಿ ಹತ್ತಿರದ ನಾಡುಗಳನ್ನು ಪಟ್ಟಿಯಿಂದ ಹೊರಗಿಟ್ಟಿದೆ.
4. ಇದು ಹಿಂದೂಗಳ ಹಿತ ರಕ್ಷಿಸಲು ಮಾಡಿದ ಕಾಯ್ದೆ ಕೂಡ ಅಲ್ಲ. ಏಕೆಂದರೆ ಈ CAA ಕಾಯ್ದೆಯ ಪ್ರಕಾರ ಚೀನಾ, ಮ್ಯಾನ್ಮಾರ್, ಶ್ರೀಲಂಕಾ, ಟಿಬೆಟ್, ಭೂತಾನ್, ನೇಪಾಳ ಮುಂತಾದ ನೆರೆದೇಶಗಳಿಂದ ಬರುವ ಹಿಂದೂ ಅಕ್ರಮ ವಲಸಿಗರು ಯಾವ ಕಾರಣಕ್ಕೆ ಬಂದಿದ್ದರೂ ಅವರು ಭಾರತದ ಪೌರತ್ವಕ್ಕೆ ಅರ್ಹ ರಾಗುವುದಿಲ್ಲ.
5. ದೌರ್ಜನ್ಯ ಎಂಬುದು ಕೇವಲ ಧರ್ಮದ ಆಧಾರದಲ್ಲಿ ಮಾತ್ರ ನಡೆಯುವುದಲ್ಲ. ಭಾಷೆ, ಪ್ರದೇಶ, ಜನಾಂಗ, ಸಂಸ್ಕೃತಿ, ರಾಜಕೀಯ ಹೀಗೆ ಹಲವು ಕಾರಣಗಳಿಗಾಗಿ ದೌರ್ಜನ್ಯ ನಡೆಯುತ್ತದೆ. ಆದರೆ CAA ಕಾಯ್ದೆಯು ಕೇವಲ ಮತ ಧರ್ಮದ ಆಧಾರದಲ್ಲಿ ದೌರ್ಜನ್ಯ ಪೀಡಿತರಾದವರಿಗೆ ಮಾತ್ರ ಅನ್ವಯವಾಗುತ್ತದೆ. ಇತರ ಯಾವುದೇ ಬಗೆಯ ದೌರ್ಜನ್ಯದಿಂದ ಪೀಡಿತರಾದವರಿಗೆ ಅನ್ವಯವಾಗುವುದಿಲ್ಲ.
6. ಮುಸ್ಲಿಮರನ್ನು ಹೊರಗಿಟ್ಟಿರುವುದಕ್ಕೆ ಕಾರಣವೇನು? ಎಂದು ಕೇಳಿದರೆ ಸರಕಾರ, ಅವರಿಗೆ ಹೋಗಲು ಬೇಕಾದಷ್ಟು ಮುಸ್ಲಿಮ್ ದೇಶಗಳಿವೆ ಎಂಬ ವಾದ ಮಂಡಿಸುತ್ತಿದೆ. ಈ ವಾದ ತೀರಾ ಅಸಂಬದ್ಧವಾಗಿದೆ. ಏಕೆಂದರೆ ಜಗತ್ತಿನ ಯಾವ ಮುಸ್ಲಿಮ್ ದೇಶವೂ, ಭಾರತದಲ್ಲಿರುವ ವಿದೇಶಿ ಮುಸ್ಲಿಮ್ ನಿರಾಶ್ರಿತರಿಗೆ ಆಶ್ರಯ ನೀಡುತ್ತಿಲ್ಲ. ಮಾತ್ರವಲ್ಲ, ಅವರಿಗೆ ತಾನು ಆಶ್ರಯ ನೀಡುವುದಾಗಿ ಯಾವುದೇ ಮುಸ್ಲಿಮ್ ದೇಶವು ಭಾರತದ ಜೊತೆ ಯಾವುದೇ ಒಡಂಬಡಿಕೆಯನ್ನೂ ಮಾಡಿಕೊಂಡಿಲ್ಲ. ಅಲ್ಲದೆ ಈ ತರ್ಕ ಪ್ರಕಾರ ಕ್ರೈಸ್ತರು ಮತ್ತು ಬೌದ್ಧರನ್ನೂ ಪಟ್ಟಿಯಿಂದ ಹೊರಗಿಡಬೇಕಾಗುತ್ತದೆ. ಏಕೆಂದರೆ ಜಗತ್ತಿನಲ್ಲಿ ನೂರಕ್ಕೂ ಹೆಚ್ಚು ಕ್ರೈಸ್ತ ಬಾಹುಳ್ಯದ ದೇಶಗಳಿವೆ ಮತ್ತು ಬೌದ್ಧ ಬಾಹುಳ್ಯದ ಕನಿಷ್ಠ 7 ದೇಶಗಳಿವೆ (ಭೂತಾನ್, ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್, ಥಾಯ್‌ಲ್ಯಾಂಡ್, ಶ್ರೀಲಂಕಾ, ಮಂಗೋಲಿಯಾ). ನಿಜಕ್ಕೂ ಮಾನವೀಯತೆಯೇ ಈ ಕಾಯ್ದೆಯ ಹಿಂದಿನ ಪ್ರೇರಣೆಯಾಗಿದ್ದರೆ ಈ ರೀತಿ ರೋಹಿಂಗ್ಯಾದ ಮುಸ್ಲಿಮ್ ನಿರಾಶ್ರಿತರನ್ನು, ಶ್ರೀಲಂಕಾದ ತಮಿಳ ಹಿಂದೂ ವಲಸಿಗರನ್ನು, ಟಿಬೆಟ್‌ನ ಬೌದ್ಧರನ್ನು - ಹೀಗೆ ನಿಜಕ್ಕೂ ಪೌರತ್ವಕ್ಕೆ ಅರ್ಹರಾಗಿದ್ದ ಅನೇಕರನ್ನು ಮತ, ಪ್ರದೇಶ ಮತ್ತು ದೌರ್ಜನ್ಯದ ಸ್ವರೂಪದ ಆಧಾರದಲ್ಲಿ ಕಾಯ್ದೆಯ ವಾಪ್ತಿಯಿಂದ ಹೊರಗಿಡುವುದಕ್ಕೆ ಯಾವ ಔಚಿತ್ಯವೂ ಇಲ್ಲ.
7. ಇತರ ದೇಶಗಳಲ್ಲಿ ಪಕ್ಷಪಾತಕ್ಕೆ ತುತ್ತಾದವರಿಗೆ ಆಶ್ರಯ ನೀಡಲು ಹೊರಟಿರುವ ನಮ್ಮ ಸರಕಾರ ಸ್ವತಃ ತನ್ನ ಪಕ್ಷಪಾತಿ ಧೋರಣೆಗಳಿಗೆ ಕುಖ್ಯಾತವಾಗಿದೆ. ಭಾರತದಲ್ಲಿ ಜಾತಿ ಧರ್ಮಗಳ ಹೆಸರಲ್ಲಿ ನಡೆಯುವ ಪಕ್ಷಪಾತ, ದೌರ್ಜನ್ಯ ಮತ್ತು ಸಮೂಹ ಹತ್ಯೆ, ಸಾಮೂಹಿಕ ಅತ್ಯಾಚಾರ ಮುಂತಾದ ಘೋರ ಅಪರಾಧಗಳ ಪ್ರಮಾಣ ಕಳವಳಕಾರಿ ಮಟ್ಟದಲ್ಲಿದೆ. ಅದನ್ನು ನಿಯಂತ್ರಿಸಲು ನಮ್ಮ ಸರಕಾರಕ್ಕೆ ಸಾಧ್ಯವಾಗಿಲ್ಲ. ಸ್ವತಃ ತನ್ನ ನೆಲದಲ್ಲಿ ನ್ಯಾಯ ಸ್ಥಾಪನೆ ಮಾಡಿ, ಜಾತಿ, ಧರ್ಮಗಳ ಆಧಾರದಲ್ಲಿ ನಡೆಯುವ ದೌರ್ಜನ್ಯಗಳಿಂದ ತನ್ನ ಪ್ರಜೆಗಳನ್ನು ರಕ್ಷಿಸಬೇಕಾಗಿದ್ದ ಸರಕಾರವು ಆ ತನ್ನ ಕರ್ತವ್ಯವನ್ನು ಕಡೆಗಣಿಸಿ ಈ ರೀತಿ ನೆರೆದೇಶಗಳಿಂದ ಬಂದ ನಿರಾಶ್ರಿತರಿಗೆ ಕೊಡೆ ಹಿಡಿಯಲು ಹೊರಡುವ ಮೂಲಕ ಜಗತ್ತಿನ ಮುಂದೆ ನಗೆಪಾಟಲಿಗೆ ಈಡಾಗಿದೆ.
8. ನೆರೆಯ ಮೂರು ದೇಶಗಳಲ್ಲಿ ಧರ್ಮದ ಆಧಾರದಲ್ಲಿ ದೌರ್ಜನ್ಯ ಎದುರಿಸಿ ಭಾರತಕ್ಕೆ ಬಂದು ಅಕ್ರಮವಾಗಿ ನೆಲೆಸಿರುವ ನಿರ್ದಿಷ್ಟ ಧರ್ಮಗಳ ವಲಸಿಗರಿಗೆ ಭಾರತೀಯ ಪೌರತ್ವ ನೀಡುವುದೇ ನಿಜಕ್ಕೂ ಸರಕಾರದ ಉದ್ದೇಶವಾಗಿದ್ದರೆ, ಅಂತಹ ವಲಸಿಗರಿಂದ ಪೌರತ್ವಕ್ಕಾಗಿ ಅರ್ಜಿ ಪಡೆದು ಅವರಿಗೆ ಪೌರತ್ವ ನೀಡಿ ಬಿಡಬಹುದಿತ್ತು. ಇಷ್ಟು ಸರಳ ದಾರಿಯನ್ನು ಬಿಟ್ಟು ಕೇವಲ ಕೆಲವರಿಗೆ ಪೌರತ್ವ ನೀಡುವ ಹೆಸರಲ್ಲಿ ಸರಕಾರವು ಈ ಬೃಹತ್ ದೇಶದ ಹತ್ತಾರು ಕೋಟಿ ನಾಗರಿಕರನ್ನು ಪೌರತ್ವ ಪರೀಕ್ಷೆಗೆ ಒಳಪಡಿಸಲು ಹೊರಟಿರುವುದನ್ನು ಒಂದೋ ಹುಚ್ಚಾಟವೆಂದು ಕರೆಯಬೇಕಾಗುತ್ತದೆ ಅಥವಾ ಇದರ ಹಿಂದೆ ತೀರಾ ಅಪಾಯಕಾರಿಯಾದ ಯಾವುದೋ ದುಷ್ಟ ಸಂಚು ಅಡಗಿದೆ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ.
9. ಒಂದುವೇಳೆ ದೇಶದಲ್ಲಿರುವ ವಿದೇಶಿ ಮೂಲದ ಅಕ್ರಮ ವಲಸಿಗರನ್ನು ಗುರುತಿಸುವುದಕ್ಕಾಗಿ ಸರಕಾರ ಈ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದಾದರೆ ಈ ಪ್ರಕ್ರಿಯೆಯಲ್ಲಿ, ದೇಶದ ಕೋಟ್ಯಂತರ ಬಡ, ಗ್ರಾಮೀಣ ಮತ್ತು ಅವಿದ್ಯಾವಂತ ಪೌರರು ಕೇವಲ ಕೆಲವು ದಾಖಲೆಗಳಿಲ್ಲ ಎಂಬ ಕಾರಣಕ್ಕಾಗಿ ತಮ್ಮ ಪೌರತ್ವ ಕಳೆದುಕೊಂಡು ಬಲಿಪಶುಗಳಾಗದಂತೆ ಖಾತರಿ ಪಡಿಸಿಕೊಳ್ಳುವುದು ಸರಕಾರದ ಕರ್ತವ್ಯವಾಗಿದ್ದು ಸರಕಾರ ಅಂತಹ ಯಾವುದೇ ಮುಂಜಾಗ್ರತೆ ವಹಿಸಿಲ್ಲ.
 10. ಎಲ್ಲಕ್ಕಿಂತ ಮುಖ್ಯವಾಗಿ ಈ ರೀತಿ ಪೌರತ್ವ ನೀಡುವ ವಿಷಯದಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದು ಭಾರತೀಯ ಸಂವಿಧಾನದ ಮೂಲಭೂತ ತತ್ವಗಳ ಮಾತ್ರವಲ್ಲ ಅದರ ಮೂಲ ಸ್ಫೂರ್ತಿಯ ಘೋರ ಉಲ್ಲಂಘನೆಯಾಗಿದೆ.
NRC ಎಂಬ ಕಪಿ ಚೇಷ್ಟೆ
NRC  (ರಾಷ್ಟ್ರೀಯ ಪೌರತ್ವದ ನೋಂದಣಿ)ಯ ಹಿಂದೊಂದು ದೀರ್ಘ ಇತಿಹಾಸವೇ ಇದೆ. 1947 ರಲ್ಲಿ ದೇಶ ವಿಭಜನೆಯಾದಾಗ ಭಾರತದಿಂದ ಲಕ್ಷಾಂತರ ಮುಸ್ಲಿಮರು ಬಾಂಗ್ಲಾದೇಶಕ್ಕೆ ವಲಸೆ ಹೋದರು ಮತ್ತು ಬಾಂಗ್ಲಾದೇಶ (ಆಗಿನ ಪೂರ್ವ ಪಾಕಿಸ್ತಾನ)ದಿಂದ ಲಕ್ಷಾಂತರ ಹಿಂದೂಗಳು ಭಾರತಕ್ಕೆ ವಲಸೆ ಬಂದಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿದ್ದ ಪ್ರಸ್ತುತ ಬಂಗಾಳಿ ವಲಸಿಗರ ಬಗ್ಗೆ ಅಸ್ಸಾಮ್‌ನ ಸ್ಥಳೀಯ ಜನರಲ್ಲಿ ಮೊದಲಿಂದಲೇ ಅಸಮಾಧಾನವಿತ್ತು. ಅವರಿಂದಾಗಿ ತಮ್ಮ ಭಾಷೆ, ಸಂಸ್ಕೃತಿ ಮತ್ತು ಆರ್ಥಿಕತೆಯ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಅವರು ದೂರುತ್ತಿದ್ದರು. 1979ರಲ್ಲಿ ಪ್ರಸ್ತುತ ವಲಸಿಗರನ್ನು ಮರಳಿ ಬಾಂಗ್ಲಾದೇಶಕ್ಕೆ ಕಳಿಸಬೇಕು ಮತ್ತು ಅಸ್ಸಾಮ್ ರಾಜ್ಯವನ್ನು ವಲಸಿಗ ಮುಕ್ತ ರಾಜ್ಯವಾಗಿಸಬೇಕೆಂದು ಆಗ್ರಹಿಸಿ ಭಾರೀ ಚಳವಳಿಯೊಂದು ಆರಂಭವಾಯಿತು. ಅಸ್ಸಾಮ್‌ನಲ್ಲಿರುವ ವಲಸಿಗರೆಲ್ಲ ಬಾಂಗ್ಲಾದೇಶದಿಂದ ಬಂದ ಮುಸ್ಲಿಮರು ಎಂಬ ಸುಳ್ಳು ಸುದ್ದಿಯನ್ನು ಆ ವೇಳೆ ದೇಶದೆಲ್ಲೆಡೆ ಹಬ್ಬಲಾಗಿತ್ತು. ಹಲವರು ಆ ಸುಳ್ಳನ್ನು ನಂಬಿದ್ದರು. ಆದರೆ ನಿಜವಾಗಿ ಅಲ್ಲಿದ್ದ ವಲಸಿಗರಲ್ಲಿ ಹೆಚ್ಚಿನವರೆಲ್ಲಾ ಹಿಂದೂಗಳಾಗಿದ್ದರು. 6 ವರ್ಷಗಳ ಕಾಲ ಮುಂದುವರಿದ ವಲಸಿಗ ವಿರೋಧಿ ಚಳವಳಿಯು ಕ್ರಮೇಣ ತೀವ್ರ ಸ್ವರೂಪ ತಾಳಿತ್ತು. ಕೊನೆಗೆ 1985ರಲ್ಲಿ ಕೇಂದ್ರ ಸರಕಾರವು ಚಳವಳಿಗಾರರ ಹಲವು ಬೇಡಿಕೆಗಳನ್ನು ಒಪ್ಪಿಒಂದು ಸಂಧಾನ ನಡೆಸಿತು. ಆ ಪ್ರಕಾರ ಅಸ್ಸಾಮ್‌ನಲ್ಲಿ NRC ಜಾರಿಗೊಳಿಸಿ 1971 ಮಾರ್ಚ್ 25ರ ಬಳಿಕ ಅಸ್ಸಾಮಿಗೆ ಬಂದು ನೆಲೆಸಿದ ವಿದೇಶಿ ಮೂಲದ ವಲಸಿಗರನ್ನು ಗುರುತಿಸಿ ಅವರನ್ನು ಒಂದೋ ಅವರ ಮೂಲ ದೇಶಕ್ಕೆ ರವಾನಿಸಲಾಗುವುದು ಅಥವಾ ಡಿಟೆನ್ಶನ್ ಕೇಂದ್ರಗಳಲ್ಲಿ ಬಂಧಿಸಿಡಲಾಗುವುದು ಎಂದು ಘೋಷಿಸಲಾಯಿತು. ಆದರೆ ವಲಸಿಗರನ್ನು ಗುರುತಿಸುವ ಪ್ರಕ್ರಿಯೆ ಮಾತ್ರ ಸತತ ಮುಂದೂಡಿಕೆಗಳಿಗೆ ತುತ್ತಾಗಿ ಬಹುಕಾಲ ಅತಂತ್ರ ಸ್ಥಿತಿಯಲ್ಲೇ ಉಳಿಯಿತು.
1999 ನವೆಂಬರ್ ತಿಂಗಳಲ್ಲಿ ಪ್ರಥಮ ಬಾರಿಗೆ ಕೇಂದ್ರ ಸರಕಾರವು ಅಸ್ಸಾಮ್‌ನಲ್ಲಿ NRC ಯನ್ನು ನವೀಕರಿಸಲು ನಿರ್ಧರಿಸಿತು. ಆದರೆ ಯಾವುದೇ ಮುನ್ನಡೆ ಸಾಧಿಸಲಿಲ್ಲ. ಇದಾಗಿ 11 ವರ್ಷಗಳ ಬಳಿಕ 2010ರಲ್ಲಿ ಅಸ್ಸಾಮಿನ ಚಾಯ್ ಗಾಂವ್ ಮತ್ತು ಬಾರ್ ಪೇಟ ಎಂಬ ಎರಡು ಸ್ಥಳಗಳಲ್ಲಿ NRC ಗಾಗಿ ಪ್ರಯೋಗಾತ್ಮಕ ಸಮೀಕ್ಷೆ ಆರಂಭವಾಯಿತು. ಈ ಪೈಕಿ ಚಾಯ್ ಗಾಂವ್‌ನಲ್ಲಿ ಪ್ರಯೋಗ ಯಶಸ್ವಿಯಾಯಿತು. ಆದರೆ ಬಾರ್ ಪೇಟದಲ್ಲಿ ಹಿಂಸಾತ್ಮಕ ಪ್ರತಿರೋಧ ನಡೆದು 4 ಮಂದಿ ಹತರಾದರು. ಸಮೀಕ್ಷೆಯ ಚಟುವಟಿಕೆಯನ್ನು ಅಲ್ಲಿಗೆ ಕೈ ಬಿಡಲಾಯಿತು. 2013ರಲ್ಲಿ, ಪ್ರಸ್ತುತ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಬೇಕೆಂದು ಸುಪ್ರೀಂ ಕೋರ್ಟು ಕೇಂದ್ರ ಮತ್ತು ಅಸ್ಸಾಮ್ ಸರಕಾರಗಳಿಗೆ ಆದೇಶ ನೀಡಿತು. ಈ ಕುರಿತು ಹಲವು ತಕರಾರುಗಳ ಬಳಿಕ 2015 ರಲ್ಲಿ ಕೊನೆಗೂ ಅಸ್ಸಾಮ್‌ನಲ್ಲಿ NRC ನವೀಕರಣದ ಪ್ರಕ್ರಿಯೆ ಅಂದರೆ ವಿದೇಶಿಯರು ಯಾರೆಂಬುದನ್ನು ಗುರುತಿಸುವ ಕಾರ್ಯಾಚರಣೆ ಆರಂಭವಾಯಿತು. 52,000 ಮಂದಿ ಸರಕಾರೀ ನೌಕರರನ್ನು ತೊಡಗಿಸಿ, ಮಾತ್ರವಲ್ಲ, 1,220 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತ ವ್ಯಯಿಸಿ ನಡೆಸಲಾದ ಈ ಕಾರ್ಯಾಚರಣೆ ತೀರಾ ದೋಷಪೂರ್ಣ ಹಾಗೂ ವಿಫಲವಾಗಿತ್ತು ಎಂಬುದು, ಇಂತಹದೊಂದು ಕಾರ್ಯಾಚರಣೆಗಾಗಿ ಹಿಂದೊಮ್ಮೆ ಆಗ್ರಹಿಸಿದ್ದ ಅಸ್ಸಾಮ್ ಗಣ ಪರಿಷದ್ ಸಹಿತ ಹೆಚ್ಚಿನೆಲ್ಲರ ಅಭಿಪ್ರಾಯವಾಗಿದೆ. ಅಲ್ಲಿ ಈ ಕಾರ್ಯಾಚರಣೆಯ ವೇಳೆ ಜನಸಾಮಾನ್ಯರಿಗೆ ನೀಡಲಾದ ಕಿರುಕುಳ ಹಾಗೂ ಅಧಿಕಾರಿಗಳು ನಡೆಸಿದ ಪಕ್ಷಪಾತ, ಭ್ರಷ್ಟಾಚಾರ, ಅಕ್ರಮ ಮತ್ತು ಎಡವಟ್ಟುಗಳು ಜನರಲ್ಲಿ ಈ ಒಟ್ಟು ಪ್ರಕ್ರಿಯೆಯ ಕುರಿತಂತೆ ಜಿಗುಪ್ಸೆ ಮೂಡಿಸಿವೆ. ಹಾಗೆಯೇ ಒಂದು ಪುಟ್ಟ ರಾಜ್ಯದಲ್ಲಿ ಇಷ್ಟೊಂದು ದುಬಾರಿಯಾದ ಮತ್ತು ವಿಫಲವಾದ ಈ ಕಾರ್ಯಾಚರಣೆಯನ್ನು ದೇಶದಾದ್ಯಂತ ನಡೆಸಲು ಹೊರಟರೆ ಅದು ಎಷ್ಟು ದುಬಾರಿಯಾದೀತು ಮತ್ತು ಅದರ ವೈಫಲ್ಯ ಎಷ್ಟೊಂದು ದೊಡ್ಡ ಮಟ್ಟದ ರಾಷ್ಟ್ರೀಯ ಹತಾಶೆಗೆ ಕಾರಣವಾದೀತು ಎಂದು ಸಂವೇದನಾಶೀಲ ನಾಗರಿಕರು ಆತಂಕಿತರಾಗಿದ್ದಾರೆ.
 ಅಸ್ಸಾಮ್‌ನಲ್ಲಿ ಈ ಕಾರ್ಯಾಚರಣೆಯ ಕೊನೆಯಲ್ಲಿ ಒಟ್ಟು ಸುಮಾರು 19 ಲಕ್ಷ ಮಂದಿಯನ್ನು ಅಕ್ರಮ ವಲಸಿಗರೆಂದು ಗುರುತಿಸಲಾಗಿದ್ದು ಅವರಲ್ಲಿ ಸುಮಾರು ಶೇ. 75 ಮಂದಿ ಹಿಂದೂಗಳಾಗಿದ್ದಾರೆ. ಹೀಗೆ ವಲಸಿಗರು ಅಥವಾ ವಿದೇಶೀಯರು ಎಂದು ಗುರುತಿಸಲ್ಪಟ್ಟವರು ಮುಸ್ಲಿಮರಿರಲಿ, ಹಿಂದೂಗಳಿರಲಿ, ಅವರೆಲ್ಲಾ ನಿಜಕ್ಕೂ ವಲಸಿಗರು ಅಥವಾ ವಿದೇಶಿಗಳೆಂದು ಖಚಿತವಾಗಿ ಹೇಳುವಂತಿಲ್ಲ. ಅವರಲ್ಲಿ ಅದೆಷ್ಟೋ ಮಂದಿ ಪರಂಪರಾಗತವಾಗಿ ಇದೇ ನೆಲಕ್ಕೆ ಸೇರಿದವರು. ಆದರೆ ಬಡ, ಕಾರ್ಮಿಕ, ಕೃಷಿಕ ಅಥವಾ ನಿರ್ವಸಿತ ಹಿನ್ನೆಲೆಯ ಈ ಮಂದಿಗೆ ಸರಕಾರ ಕೇಳುವ ಎಲ್ಲ ದಾಖಲೆಗಳನ್ನು ಒದಗಿಸಲು ಸಾಧ್ಯವಾಗಲಿಲ್ಲ, ಅಷ್ಟೇ. ಕೇವಲ ಈ ಕಾರಣಕ್ಕಾಗಿ ಅವರನ್ನು ಈ ರೀತಿ ವಿದೇಶೀಕರಿಸಲಾಗಿದೆ. ಇದೀಗ ಇಂತಹ ದುರಂತವನ್ನು ಇಡೀ ದೇಶಕ್ಕೆ ವಿಸ್ತರಿಸಿ ದಾಖಲೆ ಪತ್ರಗಳಿಲ್ಲದ ಬಡ, ಹಿಂದುಳಿದ, ಬುಡಕಟ್ಟು ಹಾಗೂ ಆದಿವಾಸಿ ವರ್ಗಗಳಿಗೆ ಸೇರಿದ ಕೋಟ್ಯಂತರ ಭಾರತೀಯರ ಪೌರತ್ವ ಕಿತ್ತುಕೊಳ್ಳಲು ಹೊರಟವರ ಬಗ್ಗೆ ಏನನ್ನೋಣ?
ಅಸ್ಸಾಮ್‌ನಲ್ಲಿ  NRC ಕಾರ್ಯಾಚರಣೆಯಿಂದಾದ ಒಂದು ಅನಿರೀಕ್ಷಿತ ಲಾಭವೇನೆಂದರೆ ಅಸ್ಸಾಮ್ ನಲ್ಲಿ 60 ಲಕ್ಷದಿಂದ 2.5 ಕೋಟಿಯಷ್ಟು ಬಂಗಾಳಿ ಮೂಲದ ಮುಸ್ಲಿಮ್ ಅಕ್ರಮ ವಲಸಿಗರು ಇದ್ದಾರೆ ಎಂದು ಹಲವು ದಶಕಗಳಿಂದ ಸಂಘ ಪರಿವಾರದವರೇ ದೇಶದೆಲ್ಲೆಡೆ ವ್ಯಾಪಕ ಪ್ರಚಾರ ಮಾಡಿದ್ದ ವದಂತಿಯು ಅಪ್ಪಟ ಸುಳ್ಳಾಗಿತ್ತು ಎಂಬುದೀಗ ಅಸ್ಸಾಮ್ ಮಾತ್ರವಲ್ಲ, ಒಟ್ಟು ದೇಶದ ಜನತೆಗೆ ಮನವರಿಕೆಯಾಗಿ ಬಿಟ್ಟಿದೆ. ಹಾಗೆಯೇ, ವಲಸಿಗರೆಲ್ಲಾ ಮುಸ್ಲಿಮರು ಮತ್ತು ಮುಸ್ಲಿಮರೆಲ್ಲಾ ವಲಸಿಗರೆಂದು ಚಿತ್ರಿಸಲು ಶ್ರಮಿಸಿದವರ ಬಣ್ಣ ಬಯಲಾಗಿದೆ.  NRCಯಿಂದ ತೊಂದರೆಯೇನಾದರೂ ಇದ್ದರೆ ಅದು ಮುಸ್ಲಿಮರಿಗೆ ಮಾತ್ರ ಎಂದು ನಂಬಿಕೊಂಡು ನೆಮ್ಮದಿಯಿಂದ ಇದ್ದವರಿಗೆಲ್ಲಾ ಆಘಾತವಾಗಿದೆ.
ಪ್ರಾದೇಶಿ NRC ಯಿಂದ ರಾಷ್ಟ್ರೀಯ NRCಗೆ ಹಠಾತ್ ಜಿಗಿತ
 ಸಾಮಾನ್ಯವಾಗಿ ಒಂದು ಪ್ರಯೋಗ ಒಂದೆಡೆ ಯಶಸ್ವಿಯಾದರೆ ಮಾತ್ರ ಅದನ್ನು ಇನ್ನೊಂದು ಕಡೆ ಅನುಷ್ಠಾನಿಸಲಾಗುತ್ತದೆ. ಪ್ರಯೋಗದ ಉದ್ದೇಶವೇ ಅದು. ಪ್ರಯೋಗದಲ್ಲಿ ವಿಫಲವಾದ ಯೋಜನೆಯನ್ನು ಒಂದೋ ಕೈಬಿಡಲಾಗುತ್ತದೆ ಅಥವಾ ಪರಿಷ್ಕರಿಸಲಾಗುತ್ತದೆ. ಆದರೆ  NRC(ರಾಷ್ಟ್ರೀಯ ಪೌರತ್ವ ನೋಂದಣಿ)ಯ ವಿಷಯದಲ್ಲಿ ಮೋದಿ ಸರಕಾರವು ವಿಚಿತ್ರ ಧೋರಣೆ ಅನುಸರಿಸಿದೆ. ಅದು ಒಂದೆಡೆ ವಿಫಲವಾದ ಕಾಯ್ದೆಯನ್ನೇ ಇನ್ನಷ್ಟು ಸಂಕೀರ್ಣಗೊಳಿಸಿ ಎಲ್ಲೆಡೆ ಅನುಷ್ಠಾನಿಸಲು ಹೊರಟಿದೆ.
ನೋಟು ಅಮಾನ್ಯಗೊಳಿಸುವ (Demonitisation) ದುಸ್ಸಾಹಸ ಮಾಡಿ ತನ್ನ ಕೈಸುಟ್ಟುಕೊಂಡ, ಮಾತ್ರವಲ್ಲ, ದೇಶವಾಸಿಗಳ ಕೈ ಮತ್ತು ಕಿಸೆಗಳನ್ನೂ ಸುಟ್ಟು ಬಿಟ್ಟ ಸರಕಾರವು ಆ ದುರಂತದಿಂದ ಪಾಠ ಕಲಿಯುವ ಬದಲು ಇದೀಗ ಕೋಟ್ಯಂತರ ಭಾರತೀಯರ ಪೌರತ್ವವನ್ನೇ ಅಮಾನ್ಯ (Decitizenisation) ಗೊಳಿಸುವ ಹುಚ್ಚು ಸಾಹಸಕ್ಕೆ ಕೈ ಹಾಕಿದೆ.
ಕೇವಲ ಅಸ್ಸಾಮ್ ಗೆ ಸಂಬಂಧಿಸಿದ್ದ NRC ಯನ್ನು ಅಖಿಲ ಭಾರತ ಮಟ್ಟದಲ್ಲಿ ನಡೆಸಲು, ಕೇಂದ್ರ ಸರಕಾರವು ಅದನ್ನು ಪರಿಷ್ಕರಿಸಿ NRIC (ನ್ಯಾಷನಲ್ ರಿಜಿಸ್ಟರ್ ಆಫ್ ಇಂಡಿಯನ್ ಸಿಟಿಝನ್ಸ್) ಯನ್ನು ರೂಪಿಸಿದೆ.
ನಿಜವಾಗಿ NRC ಮತ್ತು NRIC ಎಂಬ ಎರಡೂ ಯೋಜನೆಗಳ ಬೇರುಗಳು, 2003ರಲ್ಲಿ ಕೇಂದ್ರದಲ್ಲಿದ್ದ ವಾಜಪೇಯಿ NDA ನೇತೃತ್ವದ ಸರಕಾರವು, 1955ರ ಪೌರತ್ವ ಕಾಯ್ದೆ (1955 Act)ಯಲ್ಲಿ ನಡೆಸಿದ ತಿದ್ದುಪಡಿಗಳು ಮತ್ತು ಆ ವರ್ಷ ಅವರ ಸರಕಾರವೇ ರಚಿಸಿದ 2003ರ ಪೌರತ್ವ ಸಂಬಂಧಿ ನಿಯಮ (2003 Rules) ಗಳಲ್ಲಿ ಅಡಗಿವೆ. ಮೂಲತಃ ತೀರಾ ಅಲ್ಪಸಂಖ್ಯೆಯ ಒಂದು ಸಣ್ಣ ವರ್ಗದ ಹಿತಾಸಕ್ತಿ ಕಾಪಾಡಲು ಅಸ್ತಿತ್ವಕ್ಕೆ ಬಂದಿದ್ದ ಸಂಘ ಪರಿವಾರವು ತನ್ನ ಹಿತಾಸಕ್ತಿಗಳಿಗೆ ಅಡ್ಡ ಬರುವ ಎಲ್ಲರನ್ನೂ ಅನ್ಯರು, ಹೊರಗಿನವರು, ಶಂಕಿತರು, ದೇಶದ್ರೋಹಿಗಳು ಎಂದೆಲ್ಲಾ ಕರೆಯುತ್ತಾ ಬಂದಿದೆ. ಅದೇ ಪರಿವಾರದ ಮಾರ್ಗದರ್ಶನದಂತೆ.
ವಾಜಪೇಯಿ ಸರಕಾರವು NPR ಮತ್ತು  NRIC ಗಳ ಬೀಜ ಬಿತ್ತಿತು. ಅದು 2003ರ ಪೌರತ್ವ ಸಂಬಂಧಿ ನಿಯಮಗಳಲ್ಲಿ, ಸರಕಾರವು ತಾನು ನಿರ್ಧರಿಸುವ ಸಮಯದಲ್ಲಿ ಜನಸಂಖ್ಯಾ ದಾಖಲೆಯನ್ನು ತಯಾರಿಸಬಹುದು ಮತ್ತು ಸ್ಥಳೀಯ ರಿಜಿಸ್ಟ್ರಾರ್ ಅವರು ಜನಸಂಖ್ಯಾ ದಾಖಲೆಯಲ್ಲಿ ಒಳಗೊಂಡಿರುವ ಪ್ರತಿಯೊಂದು ಕುಟುಂಬಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಿ, ಸಂಶಯಾಸ್ಪದ ಎಂದು ತೋರುವ ಪ್ರಕರಣಗಳಲ್ಲಿ ಹಾಗೆಂದು ದಾಖಲಿಸುವರು ಎಂದು ನಮೂದಿಸಲಾಗಿದೆ. (ಪೌರತ್ವ ನಿಯಮಗಳು 3(4) ಮತ್ತು 4(3) -). ಇದೀಗ ಮೋದಿ ಪಾಳಯವು, ಅಂದಿನ ವಾಜಪೇಯಿ ಸರಕಾರವು ಸದ್ದುಗದ್ದಲವಿಲ್ಲದೆ ಮಾಡಿದ ಅಪೂರ್ಣ ಕಾರ್ಯಾಚರಣೆಯನ್ನು ಪೂರ್ಣರೂಪದಲ್ಲಿ ಕಾರ್ಯಗತಗೊಳಿಸಲು ಹೊರಟಿದೆ.
CAA, NRC ಮತ್ತು NRICಗಳ ನಡುವಣ ನಂಟು ಹಾಗೂ ಅವುಗಳ ಹಿಂದೆ ಅಡಗಿರುವ ಸಮಾಜವನ್ನು ವಿಂಗಡಿಸುವ ಸಂಚನ್ನು ಅರಿಯಲು ಬೇರೆಲ್ಲೂ ಹೋಗಬೇಕಾಗಿಲ್ಲ. ಕೇವಲ ಗೃಹ ಸಚಿವ ಅಮಿತ್ ಶಾರ ಹೇಳಿಕೆಗಳನ್ನೇ ಗಮನಿಸಿದರೆ ಸಾಕು ಗುಟ್ಟು ಬಯಲಾಗಿ ಬಿಡುತ್ತದೆ:
ಅವರು ಕಳೆದ ವರ್ಷ ಮೇ 1ರಂದು ‘‘ಮೊದಲು ನಾವು ಪೌರತ್ವ ತಿದ್ದುಪಡಿ ಕಾಯ್ದೆ (CAA)ಯನ್ನು ತರುತ್ತೇವೆ ಮತ್ತು ನೆರೆ ದೇಶಗಳಿಂದ ಬಂದಿರುವ ಎಲ್ಲ ನಿರಾಶ್ರಿತರಿಗೆ ಭಾರತೀಯ ಪೌರತ್ವ ಕೊಡುತ್ತೇವೆ. ಆ ಬಳಿಕ ನಾವು NRC ತಂದು ಪ್ರತಿಯೊಬ್ಬ ನುಸುಳುಕೋರರನ್ನು ಗುರುತಿಸಿ ಅವರನ್ನು ನಮ್ಮ ತಾಯಿನಾಡಿನಿಂದ ಹೊರ ದಬ್ಬುತ್ತೇವೆ’’ ಎಂದು ಟ್ವೀಟ್ ಮಾಡಿದ್ದರು.
NPR ಎಂಬ ನಿಗೂಢ ಕವಾಯತ್ತು
2021ರಲ್ಲಿ ನಡೆಯಬೇಕಾಗಿರುವ ದೇಶವ್ಯಾಪಿ ಜನಗಣತಿಗಾಗಿ ಕೇಂದ್ರ ಸರಕಾರವು 8,700 ಕೋಟಿ ರೂಪಾಯಿಗಳ ದೈತ್ಯ ಮೊತ್ತವನ್ನು ಮುಂಗಡವಾಗಿ ಮೀಸಲಿಟ್ಟಿದೆ. ಜೊತೆಗೇ, NPR (ನ್ಯಾಷನಲ್ ಪಾಪ್ಯುಲೇಷನ್ ರಿಜಿಸ್ಟರ್ ಅಥವಾ ರಾಷ್ಟ್ರೀಯ ಜನಸಂಖ್ಯಾ ದಾಖಲೆ) ಎಂಬ ನಿಗೂಢ ಕಾರ್ಯಾಚರಣೆಗಾಗಿ 3,900 ಕೋಟಿ ರೂಪಾಯಿಗಳ ಇನ್ನೊಂದು ಬೃಹತ್ ಮೊತ್ತವನ್ನು ಮೀಸಲಿಟ್ಟಿದೆ. 1872ರಲ್ಲಿ ಆರಂಭವಾದ ದಶವಾರ್ಷಿಕ ಜನಗಣತಿಯು ಈ ಹಿಂದೆ 15 ಬಾರಿ ನಡೆದಿದ್ದು 16ನೇ ಜನಗಣತಿ 2021 ಮಾರ್ಚ್ 9 ರಂದು ಆರ�

Writer - ಎ. ಎಸ್. ಪುತ್ತಿಗೆ

contributor

Editor - ಎ. ಎಸ್. ಪುತ್ತಿಗೆ

contributor

Similar News

ಜಗದಗಲ
ಜಗ ದಗಲ