ಅರಳುವ ಮುನ್ನ ಬಾಡುತ್ತಿವೆ ಕಂದಮ್ಮಗಳು...

Update: 2020-01-19 04:12 GMT

ಭಾರತ ಅಭಿವೃದ್ಧಿಯಾಗುತ್ತಿದೆ, ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದೆಲ್ಲಾ ಬಾಯಿ ಬಡಿದುಕೊಳ್ಳುತ್ತಿರುವ ನಾವು, ಶಿಶುಮರಣದಲ್ಲಿ ವಿಶ್ವದಲ್ಲೇ ಮೊದಲನೇ ಸ್ಥಾನದಲ್ಲಿದ್ದೇವೆ ಎನ್ನುವುದು ಮಾತ್ರ ನಮಗೆ ನಿಜಕ್ಕೂ ವಿಶ್ವಮಟ್ಟದಲ್ಲೇ ತಲೆತಗ್ಗಿಸುವ ವಿಷಯವಾಗುವುದಿಲ್ಲ!. ನಮ್ಮ ನೆರೆರಾಷ್ಟ್ರವಾಗಿರುವ ಚೀನಾದಲ್ಲಿ ವಾರ್ಷಿಕ ಶಿಶುಮರಣ ಕೇವಲ ಶೇ.5 ರಷ್ಟಿದೆ. ಆದರೆ ವಾರ್ಷಿಕ ಶೇ.29 ರಷ್ಟು ಶಿಶುಮರಣ ಹೊಂದಿರುವ ನಾವು ಅವರನ್ನು ನೋಡಿ ಅರಿತುಕೊಳ್ಳಬೇಕಾಗಿದೆ.

ಒಬ್ಬ ಗೃಹಿಣಿ ತಾಯಿಯಾದಾಗ ಆ ಮನೆಯಲ್ಲಿನ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅದರಲ್ಲೂ ಚೊಚ್ಚಲ ಹೆರಿಗೆ ಎಂದರೆ ಮನೆಗೆ ಬರುವ ಹೊಸ ಅತಿಥಿಯ ಬಗ್ಗೆ ನೂರಾರು ಕನಸುಗಳನ್ನೇ ಕಟ್ಟಿಕೊಂಡಿರುತ್ತಾರೆ. ಮಗುವೇ ಮನೆಯ ಬೆಳಕು, ತಂದೆ, ತಾಯಿಯ ಮುದ್ದಿನ ಕಣ್ಮಣಿ, ಕುಟುಂಬದ ಮುಂದಿನ ಭವಿಷ್ಯ. ಈ ಸಂತೋಷಕ್ಕೆ ಬಡವ ಬಲ್ಲಿದನೆಂಬ ಭೇದ ಭಾವವಿಲ್ಲ. ಕಂದನ ಜನನವೆಂದರೆ ಅದು ಪೋಷಕರ ಹಲವು ಕನಸುಗಳನ್ನು ಸಾಕಾರಗೊಳಿಸುವ ಕೂಸಾಗಿರುತ್ತದೆ. ಸಹಜ ಗರ್ಭಧರಿಸಿ ಮಕ್ಕಳು ಪಡೆಯುವವರಿಗೆ ಸಂತೋಷವಾದರೆ, ಇನ್ನು ಎಷ್ಟೋ ದಂಪತಿಗಳು ಮಕ್ಕಳನ್ನು ಪಡೆಯಲು ಪಡಬಾರದ ಕಷ್ಟಗಳನ್ನು ಅನುಭವಿಸುತ್ತಾರೆ. ಅದಕ್ಕಾಗಿ ಹತ್ತಾರು ವೈದ್ಯರಿಗೆ ತೋರಿಸುತ್ತಾರೆ. ಹಲವು ದೇವರಿಗೆ ಹರಕೆ ಹೊತ್ತು, ಪೂಜಿಸಿ ಅಲೆದಾಡುತ್ತಾರೆ. ಇಷ್ಟೆಲ್ಲಾ ಕಷ್ಟ ಕಾರ್ಪಣ್ಯಗಳ ನಡುವೆ ತಾಯಿಯಾದ ಎಷ್ಟೋ ಪೋಷಕರಿಗೆ ತಮ್ಮ ಕಂದಮ್ಮನನ್ನು ಎತ್ತಿ ಮುದ್ದಾಡುವ ಭಾಗ್ಯವೇ ಉಳಿಯುವುದಿಲ್ಲ. ಕಾರಣ ಜಗತ್ತನ್ನು ನೋಡುವ ಮುನ್ನವೇ ಅರಳುವ ಮುದ್ದು ಕಂದಮ್ಮ ಹುಟ್ಟಿದ ಕೆಲವೇ ದಿನ ಅಥವಾ ತಿಂಗಳ ಒಳಗೆ ಮರಣ ಹೊಂದುತ್ತಿವೆ. ಇದರಿಂದಾಗಿ ಬೆಳೆಯುವ ಶಿಶುವನ್ನು ಚಿಗುರಿನಲ್ಲೇ ಚಿವುಟಿದಂತಾಗುತ್ತಿದೆ. ಭಾರತ ಅಭಿವೃದ್ಧಿಯಾಗುತ್ತಿದೆ, ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದೆಲ್ಲಾ ಬಾಯಿ ಬಡಿದುಕೊಳ್ಳುತ್ತಿರುವ ನಾವು, ಶಿಶುಮರಣದಲ್ಲಿ ವಿಶ್ವದಲ್ಲೇ ಮೊದಲನೇ ಸ್ಥಾನದಲ್ಲಿದ್ದೇವೆ ಎನ್ನುವುದು ಮಾತ್ರ ನಮಗೆ ನಿಜಕ್ಕೂ ವಿಶ್ವಮಟ್ಟದಲ್ಲೇ ತಲೆತಗ್ಗಿಸುವ ವಿಷಯವಾಗುವುದಿಲ್ಲ!. ನಮ್ಮ ನೆರೆರಾಷ್ಟ್ರವಾಗಿರುವ ಚೀನಾದಲ್ಲಿ ವಾರ್ಷಿಕ ಶಿಶುಮರಣ ಕೇವಲ ಶೇ.5 ರಷ್ಟಿದೆ. ಆದರೆ ವಾರ್ಷಿಕ ಶೇ.29 ರಷ್ಟು ಶಿಶುಮರಣ ಹೊಂದಿರುವ ನಾವು ಅವರನ್ನು ನೋಡಿ ಅರಿತುಕೊಳ್ಳಬೇಕಾಗಿದೆ. ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ಬ್ಲೂಮ್ ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧಕರು ನಡೆಸಿದ ಅಧ್ಯಯನ ವರದಿ ಪ್ರಕಾರ 2015 ರಲ್ಲಿ ಐದು ವರ್ಷದೊಳಗಿನ ಮಕ್ಕಳ ಸಾವಿನ ಪ್ರಮಾಣದಲ್ಲಿ ವಿಶ್ವದಲ್ಲೇ ಭಾರತದಲ್ಲಿ ಹೆಚ್ಚಿದೆ. ಅಷ್ಟೇ ಅಲ್ಲ ವಿಶ್ವ ಸಂಸ್ಥೆ ವರದಿ ಪ್ರಕಾರ 52 ರಾಷ್ಟ್ರಗಳ ಪೈಕಿ ಶಿಶುಮರಣದಲ್ಲಿ ಭಾರತವೇ ಅಗ್ರಸ್ಥಾನದಲ್ಲಿದೆ ಎಂಬ ಅಂಶವನ್ನು ಹೇಳಿರುವುದು ಅಘಾತಕಾರಿ ವಿಷಯ. ಅದು ಇಂದಿಗೂ ಹಾಗೇ ಮುಂದುವರಿದಿದೆ ಎನ್ನುತ್ತಿರುವ ಈ ಅಂಕಿ ಅಂಶಗಳು ಭಾರತ ಹೇಗೆ ಆರ್ಥಿಕವಾಗಿ ಮುಂದುವರಿಯುತ್ತಿದೆ, ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎನ್ನೋದನ್ನ ಪ್ರಶ್ನಿಸುತ್ತಿವೆ. ಅಲ್ಲದೆ ವಿಶ್ವಸಂಸ್ಥೆಯ ಸಮಿತಿಯೊಂದರ (ಯುಎನ್‌ಐಜಿಎಂಇ) 2018 ರ ವರದಿ ಪ್ರಕಾರ ವಿಶ್ವದಲ್ಲೇ ಅತೀ ಹೆಚ್ಚು ಶಿಶುಮರಣಗಳು ಭಾರತದಲ್ಲೇ ಸಂಭವಿಸುತ್ತಿವೆ ಎಂದು ಹೇಳಿದೆ. ಅದರಲ್ಲಿ ಪ್ರತೀ ಎರಡು ನಿಮಿಷಕ್ಕೆ ಮೂರು ನವಜಾತ ಶಿಶುಗಳು ಭಾರತದಲ್ಲಿ ಸಾವಿಗೀಡಾಗುತ್ತಿವೆ ಎಂದು ತಿಳಿಸಿದೆ.

 ಇಷ್ಟು ದೊಡ್ಡ ಪ್ರಮಾಣದಲ್ಲಿ ಶಿಶುಮರಣ ಇದೆ ಎನ್ನುವುದಾದರೆ, ಭಾರತ ಅಭಿವೃದ್ಧಿ ಹೊಂದಿದೆ, ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದು ಒಪ್ಪಿಕೊಳ್ಳುವುದಾದ್ರೂ ಹೇಗೆ.? ಭಾರತ ಅಭಿವೃದ್ಧಿ ಹೊಂದಿದೆ ಎಂದು ಹೇಳುವುದಾದರೂ ಯಾವುದರ ಆಧಾರದಲ್ಲಿ.? ಮಕ್ಕಳು, ಬಾಣಂತಿಯರು ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿದ್ದಾರೆ ಎನ್ನುದಾದರೆ, ಅಗತ್ಯವಿರುವಷ್ಟು ಪೌಷ್ಟಿಕಾಂಶಯುಕ್ತ ಆಹಾರ ಸಿಗುತ್ತಿಲ್ಲ ಎಂದಲ್ಲವೇ.? ಪೌಷ್ಟಿಕಾಂಶಯುಕ್ತ ಆಹಾರ ದೊರೆಯುತ್ತಿಲ್ಲ ಅಥವಾ ಅದನ್ನು ಕೊಳ್ಳಲು ಜನರಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದಾದರೆ. ಭಾರತೀಯರ ಕೊಳ್ಳುವ ಶಕ್ತಿ ಕ್ಷೀಣಿಸಿದೆ ಎಂದರ್ಥವಲ್ಲವೇ?. ಜನರ ಆರ್ಥಿಕ ಸ್ಥಿತಿ ದುರ್ಬಲವೆಂದರೆ ಅದು ದೇಶದ ಆರ್ಥಿಕ ಸ್ಥಿತಿ ದುರ್ಬಲವಾಗಿದೆ ಎನ್ನುವುದೇ ಅರ್ಥ. ಭಾರತದಲ್ಲಿ ಇಷ್ಟೊಂದು ಶಿಶುಮರಣ ಆಗುತ್ತಿರುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಅಪೌಷ್ಟಿಕತೆ ಎನ್ನೋದು ಪ್ರಮುಖವಾದ ಅಂಶ. ಶಿಶುಮರಣಕ್ಕೆ ಕಾರಣವಾಗಿರುವುದರಲ್ಲಿ ಮತ್ತೊಂದು ಅಂಶ ಜನಿಸುವ ಮಕ್ಕಳ ತೂಕದಲ್ಲಿ ಕಡಿಮೆ ಇರೋದು. ಆರೋಗ್ಯಯುತ ಶಿಶುಜನನ ಎಂದರೆ. ಮಗು ಜನಿಸುವಾಗ ಕನಿಷ್ಠ 2 ಕೆ.ಜಿ. 600 ಗ್ರಾಂ ಇರಲೇಬೇಕು. ಭಾರತದಲ್ಲಿ ಜನಿಸುವ ಬಹುತೇಕ ಶಿಶುಗಳು ಅಗತ್ಯಕ್ಕಿಂತ ಕಡಿಮೆ ತೂಕದಲ್ಲಿ ಜನಿಸುತ್ತವೆ. ನ್ಯೂನ್ಯತೆಯ ಜನನ ಕೂಡ ಶಿಶುಮರಣ ಹೊಂದುವುದಕ್ಕೆ ಕಾರಣ. ಅರ್ಥಾತ್ ಒಂಬತ್ತು ತಿಂಗಳಲ್ಲಿ ಹೊಂದಬೇಕಾಗಿರುವ ಬೆಳವಣಿಗೆ ಹೊಂದದೇ ಇರುವುದು, ಅತೀಸಾರ, ಅವಧಿಪೂರ್ವ ಜನನ, ನಂಜು, ಹೆರಿಗೆ ಸಮಯದಲ್ಲಿ ಉಸಿರುಗಟ್ಟುವಿಕೆ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇವೆಲ್ಲವೂ ಭಾರತದಲ್ಲಿ ಶಿಶುಮರಣ ಹೆಚ್ಚುವುದಕ್ಕೆ ಕಾರಣವಾಗಿವೆ. ಮೂಲಭೂತ ಸೌಕರ್ಯಗಳ ಕೊರತೆ ಎಂದರೆ ವೈದ್ಯರ ಕೊರತೆ, ಆ್ಯಂಬುಲೆನ್ಸ್ ಸೌಲಭ್ಯ ಇಲ್ಲದಿರುವುದು, ಹೆರಿಗೆ ಸಂದರ್ಭದಲ್ಲಿ ತಾಯಿಗೆ ಎದುರಾಗುವ ಸಮಸ್ಯೆಗಳನ್ನು ನೀಗಿಸಲು ಅಗತ್ಯ ಸಲಕರಣೆಗಳು ಇಲ್ಲದಿರುವುದು ಮತ್ತು ಇದ್ದರೂ ಅವುಗಳು ನಿರುಪಯುಕ್ತವಾಗಿರುತ್ತವೆ. ಇವೆಲ್ಲವೂ ಶಿಶುಮರಣ ಹೆಚ್ಚಿಸುತ್ತಿವೆ. ಇಂತಹ ವಾಸ್ತವ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಜನರಿಗೆ ಅವಕಾಶವನ್ನು ನೀಡದೆ, ನಮ್ಮ ಜನಪ್ರತಿನಿಧಿಗಳು, ಮತ್ತಾವುದೋ ವಿಷಯವನ್ನು ಮುನ್ನೆಲೆಗೆ ತಂದು ಜನರನ್ನು ನೈಜ ಸಮಸ್ಯೆಗಳಿಂದ ವಿಮುಖರನ್ನಾಗಿಸುತ್ತಿದ್ದಾರೆ. ಇದೇ ವೇಳೆ ಭಾರತ ಆರ್ಥಿಕವಾಗಿ ಸಬಲವಾಗುತ್ತಿದೆ ಎನ್ನುತ್ತಾ ಕನ್ನಡಿಯೊಳಗಿನ ಚಂದಿರನನ್ನು ತೋರಿಸುವ ಕೆಲಸ ಮಾಡುತ್ತಿದ್ದಾರೆ. ರಾಜಕಾರಣಿಗಳ ಈ ಹುನ್ನಾರವನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕಾಗಿದೆ. ಶಿಶುಮರಣವನ್ನು ತಡೆಗಟ್ಟಲು ಸರಕಾರಗಳು ಹತ್ತುಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಶಿಶುಸ್ಥಿರೀಕರಣ ಘಟಕ, ಕಾಂಗರೂ ಮದರ್ ಕೇರ್‌ನಂತ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅವುಗಳು ಎಷ್ಟರಮಟ್ಟಿಗೆ ಉಪಯೋಗಕ್ಕೆ ಬರುತ್ತಿವೆ ಎನ್ನುವುದು ಪ್ರಶ್ನಾರ್ಹ. ಸರಕಾರದ ವಿವಿಧ ಯೋಜನೆಗಳು ಸರಿಯಾಗಿ ಜಾರಿಯಾಗಿದ್ದರೆ, ಶಿಶುಮರಣ ದರದಲ್ಲಿ ವಿಶ್ವದ ಅಗ್ರಸ್ಥಾನದಲ್ಲಿರುವ ಭಾರತ ಸ್ವಲ್ಪ ಮಟ್ಟಿಗಾದರೂ ಕೆಳಗಿನ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದೇನೋ?. ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸಾರವಾದ ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿನ ಶಿಶುಮರಣದ ವರದಿ ಇಡೀ ದೇಶದ ಜನರು ಬೆಚ್ಚಿಬೀಳುವಂತೆ ಮಾಡಿದೆ. ಕೇವಲ ಆರು ತಿಂಗಳಲ್ಲೇ 900 ಮಕ್ಕಳು ಸರಕಾರಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ ಎನ್ನುವುದು ನಿಜಕ್ಕೂ ಆಘಾತಕಾರಿ ವಿಷಯ. ರಾಜಸ್ಥಾನದ ಕೋಟದಲ್ಲಿನ ಸರಕಾರಿ ಆಸ್ಪತ್ರೆಯೊಂದರಲ್ಲೇ 2019ರ ಡಿಸೆಂಬರ್ ತಿಂಗಳಲ್ಲಿ ಬರೋಬ್ಬರಿ 100 ಮಕ್ಕಳು ಸಾವನ್ನಪ್ಪಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಇನ್ನು ಬಿಕಾನೇರ್‌ನಲ್ಲಿ ಡಿಸೆಂಬರ್‌ನಲ್ಲೇ 162 ಶಿಶುಗಳು ಮೃತಪಟ್ಟವು. ಇನ್ನು ನಮ್ಮ ದೇಶದ ಪ್ರಧಾನಿಯವರ ತವರು ರಾಜ್ಯವಾದ ಗುಜರಾತ್‌ನ ಅಹಮದಾಬಾದ್ ಮತ್ತು ರಾಜ್‌ಕೋಟ್‌ನ ಪ್ರಮುಖ ಸರಕಾರಿ ಆಸ್ಪತ್ರೆಗಳಲ್ಲಿ ಮೂರು ತಿಂಗಳಲ್ಲಿ 522 ಮಕ್ಕಳು ಮೃತಪಟ್ಟಿವೆ.

 ಆದರೆ ಗುಜರಾತ್‌ನ ಆರೋಗ್ಯ ಸಚಿವ ನಿತಿನ್ ಪಟೇಲ್ ಸಾವಿನ ಅಂಕಿ ಅಂಶಗಳಿಂದ ಆತಂಕಪಡಬೇಕಾಗಿಲ್ಲ. ಈಗಿನ ಶಿಶುಮರಣ ಪ್ರಮಾಣ ಸರಾಸರಿ ಪ್ರಮಾಣಕ್ಕಿಂತ ಕಡಿಮೆಯೇ ಇದೆ ಎಂದಿದ್ದಾರೆ. ಆ ಮೂಲಕ ತಾವೇನೋ ಸಾಧಿಸಿದ್ದೇವೆ ಎಂಬ ಉಡಾಫೆಯ ಮಾತುಗಳನ್ನಾಡಿದ್ದಾರೆ. ಇನ್ನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಹಿಂದಿನ ಸರಕಾರದಲ್ಲಿದ್ದ ಶಿಶುಮರಣಕ್ಕಿಂತ ಈಗ ಪರಿಸ್ಥಿತಿ ಸುಧಾರಿಸಿದೆ ಎನ್ನುವ ಮೂಲಕ ಮತ್ತೊಂದು ರಾಜಕೀಯ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ. ಆದರೆ ತಮ್ಮ ಜವಾಬ್ದಾರಿ ಏನು.? ಇಷ್ಟು ಶಿಶುಗಳ ಸಾವನ್ನು ತಪ್ಪಿಸುವುದಕ್ಕೆ ನಮ್ಮ ಮುಂದಿರುವ ಸವಾಲುಗಳೇನು ಎಂಬುದನ್ನು ಯೋಚಿಸುತ್ತಿಲ್ಲ. ಇಂತಹ ರಾಜಕೀಯ ಪಕ್ಷಗಳು, ನಾಯಕರಿಂದ ಭಾರತದ ಸಾಮಾನ್ಯ ಜನರ ಅಭಿವೃದ್ಧಿಯನ್ನು ನಿರೀಕ್ಷಿಸುವುದು ಹೇಗೆ.? ಈ ಎರಡು ರಾಜ್ಯಗಳ ಸ್ಥಿತಿಯೇ ಹೀಗಿರುವಾಗ ಇನ್ನು ಈಶಾನ್ಯ ರಾಜ್ಯಗಳಲ್ಲಿನ ಅಥವಾ ಉಳಿದ ರಾಜ್ಯಗಳಲ್ಲಿನ ಶಿಶುಮರಣ ಪ್ರಮಾಣ ಹೇಗಿರಬಹುದು ಎಂಬುದನ್ನು ಒಮ್ಮೆ ಯೋಚಿಸಿ.

 ಇನ್ನು ಕರ್ನಾಟಕ ರಾಜ್ಯದ ಶಿಶುಗಳ ಸ್ಥಿತಿ ನೋಡುವುದಾದರೆ, ಪ್ರತೀ ವರ್ಷ ಜನಿಸುವ 1 ಸಾವಿರ ಮಕ್ಕಳಲ್ಲಿ 25 ಮಕ್ಕಳು ವಿವಿಧ ಕಾರಣಗಳಿಂದ ಸಾವಿಗೀಡಾಗುತ್ತಿವೆ. ರಾಜ್ಯದಲ್ಲಿ ಪ್ರತೀನಿತ್ಯ ಸರಾಸರಿ 32 ಮಕ್ಕಳು ಸಾವನ್ನಪ್ಪುತ್ತಿವೆ. ರಾಜ್ಯದಲ್ಲಿ ಶಿಶುಮರಣ ದರ ಅತೀಹೆಚ್ಚು ಕಂಡುಬರುತ್ತಿವುದು ಮುಖ್ಯವಾಗಿ ಹತ್ತು ಜಿಲ್ಲೆಗಳಲ್ಲಿ. ಬೆಂಗಳೂರು ನಗರ, ರಾಯಚೂರು, ಧಾರವಾಢ, ಹಾವೇರಿ, ದಾವಣಗೆರೆ, ಬೆಳಗಾವಿ, ಶಿವಮೊಗ್ಗ, ಮೈಸೂರು, ಕಲಬುರಗಿ ಮತ್ತು ದಕ್ಷಿಣ ಕನ್ನಡ. 2018 ಮತ್ತು 2019ರ ಅವಧಿಯಲ್ಲಿ ಈ ಹತ್ತು ಜಿಲ್ಲೆಗಳಲ್ಲೇ 6,473 ಶಿಶುಗಳು ಮರಣಹೊಂದಿವೆ. ಇವೆಲ್ಲವೂ ಪೌಷ್ಟಿಕಾಂಶದ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಮೃತಪಟ್ಟಿವೆ ಎನ್ನೋದು ಗಮನಿಸಬೇಕಾಗಿರುವ ಅಂಶ. ಉಳಿದಂತೆ ಬೇರೆ ಜಿಲ್ಲೆಗಳಲ್ಲಿ ಶಿಶುಮರಣ ದರ ಕಡಿಮೆ ಇದೆ ಎನ್ನೋ ಅಂಕಿಅಂಶಗಳು ಇವೆ ಆದರೂ, ಅವುಗಳೇನು ಸಮಾಧಾನದ ಸಂಗತಿಗಳೇನು ಅಲ್ಲ. ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಶಿಶುಮರಣ ಹೊಂದಿದ್ದರು, ರಾಜ್ಯದ ಆರೋಗ್ಯ ಸಚಿವರು ಮಾತ್ರ ಇದುವರೆಗೆ ರಾಜ್ಯದಲ್ಲಿ ಹೆಚ್ಚಿರುವ ಶಿಶುಮರಣದ ಬಗ್ಗೆ ತುಟಿಬಿಚ್ಚಿಲ್ಲ. ಬದಲಿಗೆ ತನಗೆ ಉಪಮುಖ್ಯಮಂತ್ರಿ ಸ್ಥಾನ ಎಲ್ಲಿ ಕೈತಪ್ಪಿ ಹೋಗಿಬಿಡಬಹುದೋ ಎಂದೂ, ಅದನ್ನು ತನಗೆ ಹೇಗಾದರೂ ಮಾಡಿ ದಕ್ಕಿಸಿಕೊಳ್ಳಲೇ ಬೇಕು ಎಂದು ದಿಲ್ಲಿಗೆ ಹೋಗಿ ಕುಳಿತಿದ್ದರು. ಹೋಗಲಿ ವಿರೋಧ ಪಕ್ಷದ ನಾಯಕರಾದರೂ ಈ ಕುರಿತು ಮಾತನಾಡುತ್ತಾರೆ ಅಂದರೆ, ಅವರಿಗೆ ಅವರದೇ ಪಕ್ಷದೊಳಗಿನ ಒಳಬೇಗುದಿಗಳನ್ನು ತಣ್ಣಗೆ ಮಾಡುವುದೇ ದೊಡ್ಡ ಸವಾಲಾಗಿ ಹೋಗಿದೆ. ಒಟ್ಟಿನಲ್ಲಿ ಇಂತಹ ಗಂಭೀರ ವಿಷಯಗಳನ್ನು ಚಿಂತಿಸುವ ಬದಲು ಅವರ ರಾಜಕೀಯ ಮತ್ತು ಆರ್ಥಿಕ ಉನ್ನತಿಗಾಗಿಯೇ ಸದಾ ತುಡಿಯುವ ಜನಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡುತ್ತಿದ್ದೇವೆ. ಇಂತಹ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗುತ್ತಿರುವ ನಾವು, ನೀವೆಲ್ಲರೂ ನಮ್ಮ ಮತದಾನದ ಹಕ್ಕನ್ನು ವಿವಿಧ ಲೋಭಗಳಿಗೆ ಒಳಗಾಗಿ ಮಾರಾಟ ಮಾಡುವುದನ್ನ ಬಿಡಬೇಕಾಗಿದೆ. ಇಲ್ಲದಿದ್ದರೆ, ಪ್ರಪಂಚದ ಬೆಳಕನ್ನೇ ನೋಡದ ನಮ್ಮ ಕಂದಮ್ಮಗಳ ಸಾವಿಗೆ ನಾವೇ ನೇರ ಹೊಣೆಗಾರರಾಗಿಬಿಡುತ್ತೇವೆ.

Writer - ಸುಪ್ರೀತಾ ರವಿ, ಮಡಿಕೇರಿ

contributor

Editor - ಸುಪ್ರೀತಾ ರವಿ, ಮಡಿಕೇರಿ

contributor

Similar News