ಎಫ್‌ಆರ್‌ಡಿಐ ಮಸೂದೆ ವಾಪಸ್ ಬಂದಿದೆ!
2019ರ ನವೆಂಬರ್ 7ರಂದು ಫೈನಾನ್ಷಿಯಲ್ ಸ್ಟೆಬಿಲಿಟಿ ಆ್ಯಂಡ್ ಡೆವಲಪ್‌ಮೆಂಟ್ ಕೌನ್ಸಿಲ್ (ಎಫ್‌ಎಸ್‌ಡಿಸಿ)- ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಪರಿಷದ್-ನ ಸಭೆ ಸೇರಿತ್ತು. ಅದರ ಮುಂದೆ ಭಾರತದ ಹಣಕಾಸು ಕ್ಷೇತ್ರದ ಬಿಕ್ಕಟ್ಟುಗಳನ್ನು ಹೇಗೆ ನಿವಾರಣೆ ಮಾಡಬಹುದೆಂಬ ಕಾರ್ಯಸೂಚಿಯಿತ್ತು. ಆದರೆ ಆ ಸಭೆಯಾದ ನಂತರ ಸರಕಾರವು 2017ರ ಫೈನಾನ್ಷಿಯಲ್ ರೆಸುಲ್ಯುಷನ್ ಆ್ಯಂಡ್ ಡಿಪಾಸಿಟ್ ಇನ್ಷುರೆನ್ಸ್ (ಎಫ್‌ಆರ್‌ಡಿಐ)- ಹಣಕಾಸು ಪರಿಹಾರ ಮತ್ತು ಡಿಪಾಸಿಟ್ ವಿಮೆ-ಮಸೂದೆಯನ್ನು ಮತ್ತೆ ಜಾರಿಗೆ ತರಲು ಮುಂದಾಗುತ್ತಿದೆಯೇ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇದೇ ಮಸೂದೆಯನ್ನು 2017ರಲ್ಲಿ ಮೋದಿ ಸರಕಾರ ಸಂಸತ್ತಿನ ಮುಂದೆ ತಂದಿದ್ದರೂ ಅದು ಬಿದ್ದುಹೋಗಿತ್ತು. ಕಾರಣ ಆ ಮಸೂದೆಯಲ್ಲಿ ಬ್ಯಾಂಕೊಂದು ಹಣಕಾಸು ಬಿಕ್ಕಟ್ಟಿಗೆ ಸಿಲುಕಿದರೆ ಅದರಲ್ಲಿ ಹಣವನ್ನು ಡಿಪಾಸಿಟ್ ಮಾಡಿರುವ ಡಿಪಾಸಿಟರುಗಳು ತಮ್ಮ ಹಣದ ಒಂದು ಭಾಗವನ್ನು ಕಳೆದುಕೊಂಡು ಬ್ಯಾಂಕನ್ನು ಬಿಕ್ಕಟ್ಟಿನಿಂದ ಹೊರತರುವ ಭಾರವನ್ನು ಹೊರಬೇಕೆಂಬ ‘ಬೇಲ್ ಇನ್’ ನಿಯಮವು ಅಪಾರವಾದ ಪ್ರತಿರೋಧವನ್ನು ಹುಟ್ಟುಹಾಕಿತ್ತು. ಕಳೆದೆರಡು ದಶಕಗಳಿಂದ ಭಾರತದ ಸಣ್ಣ ಹಾಗೂ ಗೃಹ ಉಳಿತಾಯದಾರರು ತಮ್ಮ ಉಳಿತಾಯವನ್ನು ಬ್ಯಾಂಕುಗಳಲ್ಲಿ ಹೂಡಲು ಹೆಚ್ಚಾಗಿ ಆಸಕ್ತಿ ತೋರಿಸದಿರುವ ಸನ್ನಿವೇಶದಲ್ಲಿ ಉಳಿತಾಯಗಾರರ ನಿಧಿಯ ಭದ್ರತೆಯ ವಿಷಯ ಮಹತ್ವದ್ದೇ ಆಗಿದೆ.
ಮಾಧ್ಯಮಗಳ ವರದಿಗಳ ಪ್ರಕಾರ 2017ರ ಎಫ್‌ಆರ್‌ಡಿಐ ಮಸೂದೆಯ ತಿದ್ದುಪಡಿಗಳನ್ನು ಈಗ 2019ರ ಫೈನಾನ್ಷಿಯಲ್ ಸೆಕ್ಟರ್ ಡೆವಲಪ್‌ಮೆಂಟ್ ಆ್ಯಂಡ್ ರೆಗ್ಯುಲೇಷನ್ (ರೆಸುಲ್ಯೂಷನ್) ಬಿಲ್- ಹಣಕಾಸು ಕ್ಷೇತ್ರದ ಅಭಿವೃದ್ಧಿ ಮತ್ತು ನಿಯಂತ್ರಣ (ಪರಿಹಾರ) ಮಸೂದೆ ಎಂದು ಕರೆಯಲಾಗುತ್ತಿದ್ದು ಮೂರು ಮುಖ್ಯವಾದ ಕ್ಷೇತ್ರಗಳಲ್ಲಿ ತಿದ್ದುಪಡಿಗಳನ್ನು ಸೂಚಿಸಲಾಗಿದೆ: ಮೊದಲನೆಯದಾಗಿ ಗ್ರಾಹಕರ ಡಿಪಾಸಿಟ್‌ಗಳ ಮೇಲಿನ ವಿಮೆಯ ವ್ಯಾಪ್ತಿಯನ್ನು ಹೆಚ್ಚಿಸುವುದು; ಬೇಲ್ ಇನ್ ಅವಕಾಶಗಳಂಥ ವಿವಾದಾಸ್ಪದ ವಿಷಯಗಳನ್ನು ಬಗೆಹರಿಸಿಕೊಳ್ಳುವುದು; ಮತ್ತು ಮೂರನೆಯದಾಗಿ ಈ ಮಸೂದೆಯು ಒದಗಿಸುವ ಪರಿಹಾರದ ಚೌಕಟ್ಟು ಸಾರ್ವಜನಿಕ ಬ್ಯಾಂಕುಗಳಿಗೂ ಅನ್ವಯಿಸಬೇಕೆ ಎಂದು ತೀರ್ಮಾನಿಸುವುದು. ಸಾರ್ವಜನಿಕ ಬ್ಯಾಂಕುಗಳು ಮರುಪಾವತಿಯಾಗದ ಸಾಲದ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವಾಗ ವಿಮೆ ವ್ಯಾಪ್ತಿಯೊಳಗೆ ಬರುವ ಡಿಪಾಸಿಟ್ ಮೊತ್ತವನ್ನು ಹೆಚ್ಚಿಸುವುದು ಬ್ಯಾಂಕುಗಳ ಬಗ್ಗೆ ಅದರಲ್ಲೂ ಸಾರ್ವಜನಿಕ ಬ್ಯಾಂಕುಗಳ ಬಗ್ಗೆ ಡಿಪಾಸಿಟರುಗಳಲ್ಲಿ ಹೆಚ್ಚಿನ ವಿಶ್ವಾಸವನ್ನು ಮೂಡಿಸುತ್ತದಾದ್ದರಿಂದ ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಈ ಮಸೂದೆಯನ್ನು ನಾವು ವಿಶ್ಲೇಷಿಸ ಬೇಕಿರುವುದು ಹಾಲಿ ಭಾರತದ ಹಣಕಾಸು ಕ್ಷೇತ್ರದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅತ್ಯಗತ್ಯವಾಗಿರುವ ಸಾಂಸ್ಥಿಕ ಸ್ಥಿರತೆಯ ದೃಷ್ಟಿಕೋನದಲ್ಲಿ.
ಹಣಕಾಸು ಸ್ಥಿರತೆಯ ದೃಷ್ಟಿಯಲ್ಲಿ ಬ್ಯಾಂಕುಗಳ ಒಡೆತನದ ಪಾತ್ರವನ್ನು ಈ ದೇಶದಲ್ಲಿ ತುಂಬಾ ಚರ್ಚಿಸಲಾಗಿದೆ. ಒಂದೆಡೆ ಬ್ಯಾಂಕುಗಳ ಮೇಲಿನ ಸರಕಾರಿ ಒಡೆತನವು ಹಣಕಾಸು ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಸಕಾರಾತ್ಮಕ ಪಾತ್ರ ವಹಿಸಿದೆ ಎಂದು ರಿಸರ್ವ್ ಬ್ಯಾಂಕು ಅಭಿಪ್ರಾಯ ಪಟ್ಟರೆ ಹಣಕಾಸು ಕ್ಷೇತ್ರದ ಬಿಕ್ಕಟ್ಟಿನ ಪರಿಹಾರಗಳ ಸೂತ್ರಗಳನ್ನು ರೂಪಿಸಲು ರಚಿಸಲಾದ ಸಮಿತಿಯು ಸರಕಾರದ ಒಡೆತನವು ಹಣಕಾಸು ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ತಟಸ್ಥತೆಯ ಕೊರತೆಯನ್ನುಂಟು ಮಾಡಿದೆ ಎಂದು ದೂಷಿಸುತ್ತದೆ. ಸ್ಪರ್ಧಾತ್ಮಕ ತಟಸ್ಥತೆಯ ದೃಷ್ಟಿಯಿಂದ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕುಗಳೆರಡಕ್ಕೂ ಸಮಾನವಾದ ಅವಕಾಶವನ್ನು ಒದಗಿಸಬೇಕೆಂದು ಸಮಿತಿಯು ಬಲವಾಗಿ ವಾದಿಸಿದ್ದರಿಂದ ಎಲ್ಲಾ ಹಣಕಾಸು ಸಂಸ್ಥೆಗಳಿಗೂ ಅನ್ವಯವಾಗುವಂಥ ಬಿಕ್ಕಟ್ಟು ಪರಿಹಾರ ಚೌಕಟ್ಟನ್ನು ರೂಪಿಸಬೇಕೆಂಬ ಪ್ರಸ್ತಾಪ ಹೆಚ್ಚು ಮಾನ್ಯತೆಯನ್ನು ಪಡೆದುಕೊಂಡಿತು.
ಈ ಕಾರಣಕ್ಕಾಗಿಯೇ 2017ರ ಎಫ್‌ಆರ್‌ಡಿಐ ಮಸೂದೆ ಈ ದೇಶದ ಹಣಕಾಸು ಕ್ಷೇತ್ರಗಳಿಗೆ ಸಂಬಂಧಪಟ್ಟ ಭಿನ್ನಭಿನ್ನವಾದ 20 ಶಾಸನಗಳಿಗೆ ತಿದ್ದುಪಡಿ ತರಬೇಕೆಂಬ ಪ್ರಸ್ತಾಪವನ್ನು ಒಳಗೊಂಡಿತ್ತು. ಏಕೆಂದರೆ ನಮ್ಮ ದೇಶದ ಹಣಕಾಸು ಕ್ಷೇತ್ರದ ಬೇರೆಬೇರೆ ವಲಯಗಳನ್ನು ಬೇರೆಬೇರೆ ಸಂಸ್ಥೆಗಳು ನಿಯಂತ್ರಿಸುತ್ತವೆ. ಬ್ಯಾಂಕುಗಳನ್ನು ಮತ್ತು ಬ್ಯಾಂಕೇತರ ಹಣಕಾಸು ನಿಗಮಗಳನ್ನು ಆರ್‌ಬಿಐ ನಿಯಂತ್ರಿಸಿದರೆ ವಿಮಾ ಮಾರುಕಟ್ಟೆಯನ್ನು ನಿಯಂತ್ರಿಸಲು ಇನ್ಷುರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್‌ಮೆಂಟ್ ಅಥಾರಿಟಿ, ಸ್ಟಾಕ್ ಮಾರುಕಟ್ಟೆ ಮತ್ತು ಮ್ಯೂಚುಯಲ್ ಫಂಡ್‌ಗಳ ನಿಯಂತ್ರಣಕ್ಕೆ ಸೆಕ್ಯೂರಿಟಿ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ಹಾಗೂ ಪೆನ್ಷನ್ ನಿಧಿಯ ನಿರ್ವಹಣೆಯನ್ನು ಗಮನಿಸಲು ಪೆನ್ಷನ್ ಫಂಡ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್‌ಮೆಂಟ್ ಅಥಾರಿಟಿಗಳಿವೆ. ಈಗಿರುವ ಆಲೋಚನೆ ಏನೆಂದರೆ ಯಾವುದೇ ಬಗೆಯ ಹಣಕಾಸು ಕ್ಷೇತ್ರದಲ್ಲಿ ಬಿಕ್ಕಟ್ಟು ಉಂಟಾದರೂ ಎಲ್ಲವನ್ನೂ ಒಂದೇ ಬಿಕ್ಕಟ್ಟು ಪರಿಹಾರ ಚೌಕಟ್ಟು ಹಾಗೂ ನಿಗಮಗಳ ಕೆಳಗೆ ತರುವುದಾಗಿದೆ. ಹಣಕಾಸು ಕ್ಷೇತ್ರದ ಸಕಲ ವಿಭಾಗಗಳಿಗೂ ಏಕತ್ರವಾಗಿ ಅನ್ವಯವಾಗುವಂತೆ ಏಕ ಹಾಗೂ ಸಮಗ್ರ ಪರಿಹಾರದ ಚೌಕಟ್ಟು ಹಾಗೂ ನಿಗಮವು ಇಂದು ಈ ದೇಶಕ್ಕೆ ಅತ್ಯಗತ್ಯವಾಗಿರುವ ಹಣಕಾಸು ಸ್ಥಿರತೆಯನ್ನು ತಂದುಕೊಡುವಲ್ಲಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿರುತ್ತದೆ ಎಂಬುದು ಗಂಭೀರವಾಗಿ ಕೇಳಬೇಕಿರುವ ಪ್ರಶ್ನೆಯಾಗಿದೆ.
ಈ ಸಂದರ್ಭದಲ್ಲಿ ಹಲವಾರು ಮೂಲಭೂತ ವಿಷಯಗಳು ಮುನ್ನೆಲೆಗೆ ಬರುತ್ತವೆ. ಮೊದಲಿಗೆ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳ ಬ್ಯಾಂಕುಗಳು ಕಾರ್ಯನಿರ್ವಹಿಸುವುದು ಭಿನ್ನಭಿನ್ನ ಆಶಯ-ಮಾದರಿಗಳಲ್ಲಾದರೂ, ಸ್ಪರ್ಧಾತ್ಮಕ ತಾಟಸ್ಥ್ಯವನ್ನು ಉಳಿಸಿಕೊಳ್ಳಬೇಕೆಂಬ ಏಕೈಕ ಪ್ರೇರಣೆಯಿಂದ ಅವೆರಡನ್ನೂ ಒಂದೇ ಬಗೆಯ ಬಿಕ್ಕಟ್ಟು ಪರಿಹಾರದ ಚೌಕಟ್ಟಿನೊಳಗೆ ತರುವುದು ಎಷ್ಟರಮಟ್ಟಿಗೆ ಸರಿಯಾದುದಾಗಿದೆ?. ಖಾಸಗಿ ಹಣಕಾಸು ಸಂಸ್ಥೆಗಳು ಪ್ರಧಾನವಾಗಿ ಲಾಭದ ಆಸಕ್ತಿಗಳಿಂದ ನಿರ್ವಹಿಸಲ್ಪಡುತ್ತವೆ. ಆದರೆ ಸಾರ್ವಜನಿಕ ಬ್ಯಾಂಕುಗಳಿಗೆ ಎಲ್ಲಾ ಜನವರ್ಗಗಳನ್ನೂ ಒಳಗೊಳ್ಳಬೇಕೆಂಬ ಹಲವಾರು ಸಾಮಾಜಿಕ ಹೊಣೆಗಾರಿಕೆಗಳು ಪ್ರಧಾನವಾಗಿರುತ್ತವೆ. ಹಾಗೂ ವಾಸ್ತವದಲ್ಲಿ ಸಾರ್ವಜನಿಕ ಹಣಕಾಸು ಸಂಸ್ಥೆಗಳು ಅದರಲ್ಲೂ ಸಾರ್ವಜನಿಕ ಬ್ಯಾಂಕುಗಳು ಸರಕಾರಿ ಒಡೆತನದಲ್ಲಿರುತ್ತವೆ ಎಂಬ ವಾಸ್ತವವೇ ಡಿಪಾಸಿಟರುಗಳಲ್ಲಿ ವಿಶ್ವಾಸವನ್ನು ಮೂಡಿಸಿ ಆ ಬ್ಯಾಂಕುಗಳಲ್ಲಿ ತಮ್ಮ ಉಳಿತಾಯವನ್ನು ಇಡುವಂತೆ ಮಾಡುತ್ತದೆ. ಈ ಒಡೆತನದ ಪ್ರಭಾವವನ್ನು ತಟಸ್ಥಗೊಳಿಸುವ ಉದ್ದೇಶದಿಂದ ಡಿಪಾಸಿಟುಗಳಿಗೆ ಸಾರ್ವಭೌಮಿ ಖಾತರಿಯನ್ನು ಕೊಡುವ ಮತ್ತು ಬಿಕ್ಕಟ್ಟು ಪರಿಹರಿಸುವ ಅಧಿಕಾರವನ್ನು ಸರಕಾರದಿಂದ ಕಿತ್ತುಕೊಂಡು ಯಾವುದೋ ಬಿಕ್ಕಟ್ಟು ಪರಿಹಾರ ನಿಗಮಕ್ಕೆ ವಹಿಸುವುದು ನಮ್ಮ ಹಣಕಾಸು ವ್ಯವಸ್ಥೆಯನ್ನು ಮತ್ತಷ್ಟು ಅಸ್ಥಿರಗೊಳಿಸಬಹುದು.
ಮೊದಲ ವಿಷಯದ ಜೊತೆಗೇ ಹೊಂದಿಕೊಂಡಿರುವ ಮತ್ತೊಂದು ಸಂಗತಿಯೆಂದರೆ ವಿವಾದಾಸ್ಪದವಾದ ‘ಬೇಲ್-ಇನ್’ ಉಪನಿಯಮ. 2017ರ ಎಫ್‌ಆರ್‌ಡಿಐ ಮಸೂದೆಯು ವಿಮಾ ವ್ಯಾಪ್ತಿಗೆ (ಅಂದರೆ ಆ ಮಸೂದೆಯ ಪ್ರಕಾರ ಒಂದು ಲಕ್ಷ ರೂ.) ಮೇಲ್ಪಟ್ಟ ಡಿಪಾಸಿಟ್ ಮೊತ್ತವು ಬೇಲ್-ಇನ್ ಉಪನಿಯಮಕ್ಕೆ ಒಳಪಡುತ್ತದೆ ಎಂದು ಹೇಳಿತ್ತು. ಮೇಲಾಗಿ ಆರ್‌ಬಿಐ ನೀಡಿದ ಎಚ್ಚರಿಕೆಯ ಹೊರತಾಗಿಯೂ ಅಲ್ಪಕಾಲೀನ ಸಾಲಗಳು ಮತ್ತು ವರ್ಗೀಕರಣಕ್ಕೆ ಒಳಪಡದ ಕಕ್ಷಿದಾರರ ಆಸ್ತಿ-ಪಾಸ್ತಿಗಳು ಈ ನಿಯಮಾವಳಿಗೆ ಒಳಪಡುತ್ತವೆ. ವಿಪರ್ಯಾಸವೆಂದರೆ 2017ರ ಹಣಕಾಸು ಸ್ಥಿರತೆ ವರದಿಯು ಭಾರತದ ಎಲ್ಲಾ ಸಾರ್ವಜನಿಕ ಬ್ಯಾಂಕುಗಳಲ್ಲಿ ವರ್ಷದಿಂದ ವರ್ಷಕ್ಕೆ ಡಿಪಾಸಿಟುಗಳ ಏರಿಕೆಯ ಗತಿ ಶೇ.3.3ರಷ್ಟು ಇಳಿಕೆಯಾಗಿದೆಯೆಂದು ಬಯಲು ಮಾಡಿದ್ದರೂ ಬೇಲ್-ಇನ್ ಅವಕಾಶಗಳನ್ನೊಳಗೊಂಡ ಮಸೂದೆಯನ್ನು ಮಂಡಿಸಲು ಮುಂದಾಗಿತ್ತು.
ಇದು ಹಲವಾರು ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಹಣಕಾಸು ಸ್ಥಿರತೆಯು ದಿನೇದಿನೇ ಕುಸಿಯುತ್ತಿರುವ ಸಂದರ್ಭದಲ್ಲಿ ಹಣಕಾಸು ಕ್ಷೇತ್ರದ ಸ್ಥಿರತೆಯನ್ನು ಕಾಪಾಡುವಲ್ಲಿ ಕೀಲಕ ಪಾತ್ರ ವಹಿಸುವ ದೇಶೀಯ ಹಣಕಾಸು ಸಂಸ್ಥೆಗಳ ಮೇಲೆ ಡಿಪಾಸಿಟರುಗಳ ವಿಶ್ವಾಸವನ್ನು ಕಳೆಯುವಂತೆ ಮಾಡುವ ಈ ಬಿಕ್ಕಟ್ಟು ಪರಿಹಾರ ಸುಧಾರಣೆಯನ್ನು ತರಲು ಸರಕಾರ ಏಕೆ ಮುಂದಾಗಿದೆ? ಇದೇ ಮಸೂದೆಯು ಮತ್ತೆ ಮಂಡನೆಯಾದರೆ ಮುಂದೆ ಮಾಡಬಹುದಾದ ತಿದ್ದುಪಡಿಗಳ ಬಗ್ಗೆ ನಾವೆಷ್ಟು ಆಶಾಭಾವನೆ ಹೊಂದಿರಲು ಸಾಧ್ಯ?