‘‘ದವೀಂದರ್ ಸಿಂಗ್ ನನಗೆ ಚಿತ್ರಹಿಂಸೆ ನೀಡಿದರು’’ -ಅಫ್ಝಲ್ ಗುರು ಪತ್ರ

Update: 2020-01-22 18:29 GMT

ಒಂದು ದಿನ ನಾನು ಬೆಳಗ್ಗೆ ಹತ್ತು ಗಂಟೆಗೆ ನನ್ನ ಸ್ಕೂಟರ್‌ನಲ್ಲಿ ಹೋಗುತ್ತಿದ್ದೆ. ಎಸ್‌ಟಿಎಫ್‌ನವರು ನನ್ನನ್ನು ಬುಲೆಟ್ ಪ್ರೂಫ್ ಜಿಪ್ಸಿಯಲ್ಲಿ ಪೈಹಲ್ಲನ್ ಶಿಬಿರಕ್ಕೆ ಕರೆದೊಯ್ದರು. ಅಲ್ಲಿ ಡಿಎಸ್‌ಪಿ ವಿನಯ್ ಗುಪ್ತಾ ನನಗೆ ಚಿತ್ರಹಿಂಸೆ ನೀಡಿದರು. ವಿದ್ಯುತ್ ಶಾಕ್ ನೀಡಿದರು. ನನ್ನನ್ನು ನೀರಿನಲ್ಲಿ ಇರಿಸಿದರು. ಪೆಟ್ರೋಲ್ -ಚಿಲ್ಲಿಸ್ ಹಾಗೂ ಇತರ ತಂತ್ರಗಳನ್ನು ಬಳಸಿದರು. ನನ್ನ ಬಳಿ ಶಸ್ತ್ರಾಸ್ತ್ರಗಳಿವೆ ಎಂದು ಅವರು ಹೇಳಿದರು. ಆದರೆ ಸಂಜೆಯ ವೇಳೆ ಅವರ ಇನ್‌ಸ್ಪೆಕ್ಟರ್‌ಲ್ಲೊಬ್ಬರಾದ ಫಾರೂಕ್ ಹೇಳಿದರು: ನಾನು ಅವರಿಗೆ (ಡಿಎಸ್‌ಪಿಗೆ) 1,00,000 ರೂಪಾಯಿ ಕೊಟ್ಟರೆ ನನ್ನನ್ನು ಬಿಡುಗಡೆ ಮಾಡಲಾಗುವುದು, ಇಲ್ಲವಾದಲ್ಲಿ ಅವರು ನನ್ನನ್ನು ಕೊಲ್ಲುತ್ತಾರೆ.

ಆ ಬಳಿಕ ಅವರು ನನ್ನನ್ನು ಹಮ್‌ಹಮಾ ಎಸ್‌ಟಿಎಫ್ ಶಿಬಿರಕ್ಕೆ ಕೊಂಡು ಹೋದರು. ಅಲ್ಲಿ ಡಿಎಸ್‌ಪಿ ದವೀಂದರ್ ಸಿಂಗ್ ಕೂಡ ನನಗೆ ಚಿತ್ರಹಿಂಸೆ ನೀಡಿದರು.

ಜಮ್ಮುವಿಗೆ ಇಬ್ಬರು ಭಯೋತ್ಪಾದಕರ ಜತೆ ತೆರಳುತ್ತಿದ್ದ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿ ದವೀಂದರ್ ಸಿಂಗ್ ಅವರ ಬಂಧನ 2001ರ ಸಂಸತ್ ಮೇಲಿನ ದಾಳಿಯ ಅಪರಾಧಿ ಅಫ್ಝಲ್ ಗುರುವಿನ ಜೊತೆ ಅವರಿಗಿದ್ದ ಸಂಪರ್ಕವನ್ನು ಬಯಲು ಮಾಡಿದೆ. 2013ರ ಫೆಬ್ರವರಿ ಒಂಬತ್ತರಂದು ಗಲ್ಲಿಗೇರಿಸಲ್ಪಟ್ಟ ಅಫ್ಝಲ್ ಗುರು ತಿಹಾರ್ ಜೈಲಿನಿಂದ ತನ್ನ ವಕೀಲ ಸುಶೀಲ್ ಕುಮಾರ್‌ಗೆ ಬರೆದ ಪತ್ರವೊಂದರಲ್ಲಿ ಸಿಂಗ್ ಅವರ ಹೆಸರನ್ನು ಉಲ್ಲೇಖಿಸಿದ್ದ.

ಆ ಪತ್ರದಲ್ಲಿ, ಸಿಂಗ್ ಮತ್ತು ಜಮ್ಮು ಮತ್ತು ಕಾಶ್ಮೀರದ ಇತರ ಅಧಿಕಾರಿಗಳು ತನಗೆ ಚಿತ್ರಹಿಂಸೆ ನೀಡಿ ತನ್ನನ್ನು ಬೆದರಿಸಿ ಹಣ ಪಡೆದುಕೊಂಡದ್ದಷ್ಟೇ ಅಲ್ಲದೆ ಆ ಬಳಿಕ ಸಂಸತ್ ಮೇಲೆ ದಾಳಿ ನಡೆಸಿದ್ದವರಲ್ಲಿ ಒಬ್ಬನಾದ ವ್ಯಕ್ತಿಗೆ ತನ್ನನ್ನು ಪರಿಚಯಿಸಿದ್ದರು ಎಂದೂ ಹೇಳಿದ್ದ. ಅಲ್ಲದೆ ದಾಳಿ ನಡೆಸಿದ ವ್ಯಕ್ತಿಗೆ ಒಂದು ಕಾರಿನ ಹಾಗೂ ವಸತಿ ವ್ಯವಸ್ಥೆಯನ್ನು ಮಾಡುವಂತೆ ತನ್ನೊಡನೆ ಹೇಳಿದ್ದ ವ್ಯಕ್ತಿ ಸಿಂಗ್ ಎಂದು ಆತ ಬರೆದಿದ್ದ.

ಅದೇನಿದ್ದರೂ ಅಧಿಕಾರಿಗಳು ಸಿಂಗ್ ಅವರ ಪಾತ್ರದ ಬಗ್ಗೆ ವಿಚಾರಣೆ ನಡೆಸಿರಲಿಲ್ಲ. ತನ್ನ ಪತ್ರದಲ್ಲಿ ದವೀಂದರ್ ಸಿಂಗ್ ಅವರನ್ನು ದ್ರವೀಂದರ್ ಎಂದು ಹೆಸರಿಸಿರುವ ಅಫ್ಜಲ್‌ನ ಪತ್ರದ ಮುಖ್ಯ ಭಾಗಗಳನ್ನು ‘ದಿ ಪ್ರಿಂಟ್’ ಬಹಿರಂಗಗೊಳಿಸಿದೆ.

‘‘ದವೀಂದರ್ ಸಿಂಗ್ ನನಗೆ ಚಿತ್ರ ಹಿಂಸೆ ನೀಡಿದರು’’

‘‘ಒಂದು ದಿನ ನಾನು ಬೆಳಗ್ಗೆ ಹತ್ತು ಗಂಟೆಗೆ ನನ್ನ ಸ್ಕೂಟರ್‌ನಲ್ಲಿ ಹೋಗುತ್ತಿದ್ದೆ. ಎಸ್‌ಟಿಎಫ್‌ನವರು ನನ್ನನ್ನು ಬುಲೆಟ್ ಪ್ರೂಫ್ ಜಿಪ್ಸಿಯಲ್ಲಿ ಪೈಹಲ್ಲನ್ ಶಿಬಿರಕ್ಕೆ ಕರೆದೊಯ್ದರು. ಅಲ್ಲಿ ಡಿಎಸ್‌ಪಿ ವಿನಯ್ ಗುಪ್ತಾ ನನಗೆ ಚಿತ್ರಹಿಂಸೆ ನೀಡಿದರು. ವಿದ್ಯುತ್ ಶಾಕ್ ನೀಡಿದರು. ನನ್ನನ್ನು ನೀರಿನಲ್ಲಿ ಇರಿಸಿದರು. ಪೆಟ್ರೋಲ್ -ಚಿಲ್ಲಿಸ್ ಹಾಗೂ ಇತರ ತಂತ್ರಗಳನ್ನು ಬಳಸಿದರು. ನನ್ನ ಬಳಿ ಶಸ್ತ್ರಾಸ್ತ್ರಗಳಿವೆ ಎಂದು ಅವರು ಹೇಳಿದರು. ಆದರೆ ಸಂಜೆಯ ವೇಳೆ ಅವರ ಇನ್‌ಸ್ಪೆಕ್ಟರ್‌ಲ್ಲೊಬ್ಬರಾದ ಫಾರೂಕ್ ಹೇಳಿದರು: ನಾನು ಅವರಿಗೆ (ಡಿಎಸ್‌ಪಿಗೆ) 1,00,000 ರೂಪಾಯಿ ಕೊಟ್ಟರೆ ನನ್ನನ್ನು ಬಿಡುಗಡೆ ಮಾಡಲಾಗುವುದು, ಇಲ್ಲವಾದಲ್ಲಿ ಅವರು ನನ್ನನ್ನು ಕೊಲ್ಲುತ್ತಾರೆ.

ಆ ಬಳಿಕ ಅವರು ನನ್ನನ್ನು ಹಮ್‌ಹಮಾ ಎಸ್‌ಟಿಎಫ್ ಶಿಬಿರಕ್ಕೆ ಕೊಂಡು ಹೋದರು. ಅಲ್ಲಿ ಡಿಎಸ್‌ಪಿ ದವೀಂದರ್ ಸಿಂಗ್ ಕೂಡ ನನಗೆ ಚಿತ್ರಹಿಂಸೆ ನೀಡಿದರು. ಅವರ ಇನ್‌ಸ್ಪೆಕ್ಟರ್‌ಗಳಲ್ಲಿನ ಟಾರ್ಚರ್ ಇನ್‌ಸ್ಪೆಕ್ಟರ್ ಎಂದು ಕರೆಯುತ್ತಿದ್ದ ಶಾಂಟಿ ಸಿಂಗ್ ಎಂಬಾತ ಮೂರು ಗಂಟೆಗಳ ಕಾಲ ನನ್ನನ್ನು ಬೆತ್ತಲಾಗಿಸಿ ವಿದ್ಯುತ್ ಶಾಕ್ ನೀಡಿದ ಮತ್ತು ಹಾಗೆ ಶಾಕ್ ಕೊಡುವಾಗ ನಾನು ನೀರು ಕುಡಿಯುವಂತೆ ಮಾಡಿದ. ಟೆಲಿಫೋನ್ ಇನ್‌ಸ್ಟ್ರುಮೆಂಟ್ ಮೂಲಕ ಆತ ನನಗೆ ಶಾಕ್ ಕೊಡುತ್ತಿದ್ದ. ಅಂತಿಮವಾಗಿ ನಾನು ಅವರಿಗೆ 1,00,000 ರೂಪಾಯಿ ನೀಡಲು ಒಪ್ಪಿದೆ. ಈ ಮೊತ್ತಕ್ಕಾಗಿ ನನ್ನ ಕುಟುಂಬದವರು ನನ್ನ ಪತ್ನಿಯ ಚಿನ್ನವನ್ನು ಮಾರಾಟ ಮಾಡಿದರು.

ಆದರೆ ನನ್ನ ಕುಟುಂಬದವರಿಗೆ 80,000 ರೂಪಾಯಿಯನ್ನಷ್ಟೇ ಒಟ್ಟು ಮಾಡಲು ಸಾಧ್ಯವಾಯಿತು. ಆಗ ಅವರು ಕೇವಲ ಎರಡು ಮೂರು ತಿಂಗಳಷ್ಟೇ ಹಳತಾಗಿದ್ದ ನನ್ನ ಸ್ಕೂಟರನ್ನು ಕೂಡ ಕಿತ್ತುಕೊಂಡರು. ನಾನದನ್ನು ರೂ. 24 ಸಾವಿರಕ್ಕೆ ಕೊಂಡುಕೊಂಡಿದ್ದೆ. ಹೀಗೆ ಒಟ್ಟು ಒಂದು ಲಕ್ಷ ರೂಪಾಯಿ ತೆಗೆದುಕೊಂಡ ಬಳಿಕ ಅವರು ನನ್ನನ್ನು ಬಿಟ್ಟು ಬಿಟ್ಟರು.

 1990-96ರ ನಡುವೆ ನಾನು ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದ್ದೆನಾದ್ದರಿಂದ ನಾನು ಕೆಲವು ಕೋಚಿಂಗ್ ಸೆಂಟರ್‌ಗಳಲ್ಲಿ ಟ್ಯೂಷನ್ ಕೊಡುತ್ತಿದ್ದೆ. ಮನೆ ಪಾಠ ಮಾಡುತ್ತಿದ್ದೆ. ಬದ್ಗಾಮ್‌ನ ಎಸ್‌ಎಸ್‌ಪಿಯಾಗಿದ್ದ ಆಶಕ್ ಹುಸೈನ್‌ನ ಬಾವ ಅಲ್ತಾಫ್ ಹುಸೈನ್ ಎಂಬಾತನಿಗೆ ಈ ವಿಷಯ ತಿಳಿಯಿತು. ನನ್ನ ಕುಟುಂಬದ ವ್ಯವಹಾರ ನೋಡಿಕೊಳ್ಳುತ್ತಿದ್ದವ ಈ ಅಲ್ತಾಫ್ ಹುಸೈನ್ ಆಗಿದ್ದರಿಂದ ಆತ ನನ್ನ ಹಾಗೂ ದವೀಂದರ್ ಸಿಂಗ್ ನಡುವೆ ದಲ್ಲಾಳಿಯಾದ.

ಒಂದು ದಿನ ಅಲ್ತಾಫ್ ನನ್ನನ್ನು ದವೀಂದರ್ ಸಿಂಗ್ ಬಳಿಗೆ ಕರೆದುಕೊಂಡು ಹೋದ. ನನಗೆ ದಿಲ್ಲಿಯ ಪರಿಚಯ ಚೆನ್ನಾಗಿರುವುದರಿಂದ ನಾನು ಒಬ್ಬ ವ್ಯಕ್ತಿಯನ್ನು ದಿಲ್ಲಿಗೆ ಕರೆದುಕೊಂಡು ಹೋಗಿ ಅವರಿಗೆ ಒಂದು ಬಾಡಿಗೆ ಮನೆ ಮಾಡಿ ಕೊಡಬೇಕೆಂದು ಡಿಎಸ್‌ಪಿಹೇಳಿದರು. ನಾನು ಅವನನ್ನು ದಿಲ್ಲಿಗೆ ಕರೆದುಕೊಂಡು ಹೋದೆ.

ತನಗೆ ಒಂದು ಕಾರು ಕೊಂಡುಕೊಳ್ಳಬೇಕೆಂದು ಒಂದು ದಿನ ಅವರು (ಸಿಂಗ್) ನನ್ನೊಡನೆ ಹೇಳಿದರು. ಹೀಗಾಗಿ ನಾನು ಅವರ ಜೊತೆ ಕರೋಲ್‌ಬಾಗ್‌ಗೆ ಹೋದೆ. ಅವರು ಒಂದು ಕಾರು ಕೊಂಡುಕೊಂಡರು.

ನಾನು ನನ್ನ ಕುಟುಂಬದ ಜೊತೆ ದಿಲ್ಲಿಯಲ್ಲಿ ವಾಸಿಸಲು ನಿರ್ಧರಿಸಿದ್ದರಿಂದ ಆರು ಅಥವಾ ಎಂಟು ದಿನಗಳ ಮೊದಲು ಇಂದ್ರವಿಹಾರ್‌ನಲ್ಲಿ ನಾನೊಂದು ಬಾಡಿಗೆ ಮನೆ ಹಿಡಿದೆ. ಬಾಡಿಗೆ ಮನೆಯ ಕೀಗಳನ್ನು ನಾನು ಮನೆಯ ಮಾಲಕಿಗೆ ನೀಡಿದೆ. ಈದ್ ಹಬ್ಬದ ಬಳಿಕ ಡಿಸೆಂಬರ್ 11ರಂದು ಮರಳಿ ಬರುವುದಾಗಿ ಹೇಳಿದೆ. ಅದಾಗಲೇ ಸಂಸತ್ ಮೇಲಿನ ದಾಳಿ ನಡೆದಿದ್ದು. ವಾತಾವರಣ ತುಂಬಾ ಬಿಗಿಯಾಗಿತ್ತು. ಮರುದಿನ ಬೆಳಗ್ಗೆ ನಾನು ಸೊವೋರ್‌ಗೆ ಹೋಗಲು ಶ್ರೀನಗರ ಬಸ್‌ಸ್ಟಾಂಡ್‌ನಲ್ಲಿದ್ದಾಗ ಶ್ರೀನಗರ ಪೊಲೀಸರು ನನ್ನನ್ನು ಬಂಧಿಸಿ ಪರಂಪೊರಾ ಪೊಲೀಸ್ ಠಾಣೆಗೆ ಕರೆದೊಯ್ದರು. ಅವರು ನನ್ನ ಜೇಬಿನಿಂದ 35,000 ಸಾವಿರ ಕಿತ್ತುಕೊಂಡರು ಮತ್ತು ನೇರವಾಗಿ ನನ್ನನ್ನು ಎಸ್‌ಟಿಎಫ್ ಹೆಡ್ ಕ್ವಾರ್ಟರ್ಸ್‌ಗೆ ಕರೆದೊಯ್ದರು. ಅಲ್ಲಿಂದ ನನ್ನನ್ನು ದಿಲ್ಲಿಗೆ ಕರೆದುಕೊಂಡು ಹೋಗಲಾಯಿತು. ನನ್ನ ಕಣ್ಣುಗಳಿಗೆ ಪಟ್ಟಿ ಕಟ್ಟಲಾಗಿತ್ತು. ಇಲ್ಲಿ ನಾನು ಒಂದು ವಿಶೇಷವಾದ ಪೊಲೀಸ್ ಟಾರ್ಚರ್ ಕೋಣೆಯಲ್ಲಿದ್ದೇನೆಂದು ತಿಳಿಯಿತು. ನಾನು, ಶೌಕತ್, ಅವನ ಪತ್ನಿ ನವಜೋತ್ (ಅಫ್ಶಾನ್), ಗೀಲಾನಿ ಸಂಸತ್ ಮೇಲಿನ ದಾಳಿಯ ಹಿಂದಿರುವವರು ಎಂದು ಅವರು ಹೇಳಿದರು. ನನ್ನ ಕುಟುಂಬದ ಬಗ್ಗೆ ಅವರು ಕೂಡ ನನಗೆ ಬೆದರಿಕೆ ಹಾಕಿದರು. ಮತ್ತು ನನ್ನ ತಮ್ಮ ಹಿಲಾಲ್ ಅಹಮ್ಮದ್ ಗುರು ಎಸ್‌ಟಿಎಫ್ ಕಸ್ಟಡಿಯಲ್ಲಿರುವುದಾಗಿ ಇನ್‌ಸ್ಪೆಕ್ಟರ್‌ಗಳಲ್ಲಿ ಒಬ್ಬಾತ ಹೇಳಿದ ನಾನು ವಿಚಾರಣೆಯಲ್ಲಿ ಅವರಿಗೆ ಸಹಕರಿಸದಿದ್ದಲ್ಲಿ ಅವರು ನನ್ನ ಕುಟುಂಬದ ಇತರ ಸದಸ್ಯರನ್ನು ಕೂಡಾ ಬಂಧಿಸಬಹುದೆಂದು ಹೇಳಿದರು.

ಶೌಕತ್, ಆತನ ಪತ್ನಿ ಮತ್ತು ಗೀಲಾನಿ ಅಪರಾಧದಲ್ಲಿ ಭಾಗಿಗಳು ಎಂದು ಹೇಳುವಂತೆ ಅವರು ನನಗೆ ಬಲವಂತ ಮಾಡಿದರು. ಆದರೆ ನಾನು ಇದಕ್ಕೆ ಒಪ್ಪಲಿಲ್ಲ. ಅದು ಸಾಧ್ಯವಿಲ್ಲವೆಂದು ನಾನು ಅವರಿಗೆ ಹೇಳಿದೆ. ನಾನು ಗೀಲಾನಿಯ ಬಗ್ಗೆ (ಅವನ ನಿರಪರಾಧಿತ್ವದ ಬಗ್ಗೆ) ಏನನ್ನೂ ಹೇಳಕೂಡದೆಂದು ಅವರು ನನಗೆ ಹೇಳಿದರು. ಕೆಲವು ದಿನಗಳ ಬಳಿಕ ಕೈಕೋಳ ತೊಡಿಸಿ ನನ್ನನ್ನು ಮಾಧ್ಯಮದ ಎದುರು ಹಾಜರುಪಡಿಸಲಾಯಿತು.

ನ್ಯಾಯಾಲಯದಲ್ಲಿ ನಿಜವಾಗಿ ಏನು ನಡೆಯಿತು ಎಂದು ಹೇಳಲು ನನಗೆ ಎಂದೂ ಅವಕಾಶವನ್ನೇ ಕೊಡಲಿಲ್ಲ. ಮೊಕದ್ದಮೆ ಅಂತ್ಯದಲ್ಲಿ ಮಾತನಾಡಲು ನನಗೆ ಸಂಪೂರ್ಣ ಅವಕಾಶ ನೀಡಲಾಗುವುದೆಂದು ನ್ಯಾಯಾಧೀಶರು ಹೇಳಿದರು. ಆದರೆ ವಿಚಾರಣೆಯ ಕೊನೆಯಲ್ಲಿ ಅವರು ನನ್ನ ಎಲ್ಲಾ ಹೇಳಿಕೆಗಳನ್ನು ದಾಖಲಿಸಿಕೊಳ್ಳಲೂ ಇಲ್ಲ; ನ್ಯಾಯಾಲಯ ಏನೇನು ದಾಖಲಿಸಿ ಕೊಂಡಿತ್ತೋ ಅದನ್ನು ನ್ಯಾಯಾಲಯ ಕೂಡ ನನಗೆ ನೀಡಲಿಲ್ಲ. ದಾಖಲಿಸಿಕೊಂಡಿದ್ದ ಫೋನ್ ನಂಬರ್‌ಗಳನ್ನು ಸರಿಯಾಗಿ ಗಮನಿಸಿದ್ದಲ್ಲಿ ನ್ಯಾಯಾಲಯಕ್ಕೆ ಎಸ್‌ಟಿಎಫ್‌ನ ನಂಬರ್‌ಗಳು ತಿಳಿಯುತ್ತಿದ್ದವು.’’

ತನ್ನನ್ನು ಕಾಶ್ಮೀರದ ವಿಶೇಷ ತನಿಖಾ ದಳ (ಎಸ್‌ಟಿಎಫ್)ಬಂಧಿಸಿ ಬಲವಂತವಾಗಿ ತನ್ನಿಂದ ತಪ್ಪೊಪ್ಪಿಗೆ ಪಡೆಯಲಾಯಿತು ಎಂದು ಅಫ್ಝಲ್ ಹೇಳುತ್ತಾನೆ.

‘‘ಸಂಸತ್ ದಾಳಿಯ ಪ್ರಕರಣದಲ್ಲಿ ಕಾಶ್ಮೀರದ ಎಸ್‌ಟಿಎಫ್ ನನ್ನನ್ನು ಬಂಧಿಸಿತು. ಇಲ್ಲಿ ದಿಲ್ಲಿಯಲ್ಲಿ ಎಸ್‌ಟಿಎಫ್ ಜೊತೆಗೆ ಕೈಜೋಡಿಸಿ ಕೆಲಸ ಮಾಡುವ ಪೊಲೀಸರ ವಿಶೇಷ ವರದಿಯ ನೆಲೆಯಲ್ಲಿ ನಿಯೋಜಿತ ನ್ಯಾಯಾಲಯ ನನಗೆ ಮರಣದಂಡನೆ ವಿಧಿಸಿತು. ವಿಶೇಷ ಪೊಲೀಸ್ ಎಸಿಪಿ ರಾಜ್‌ಬೀರ್ ಸಿಂಗ್ ಅವರ ಬಲವಂತ ಮತ್ತು ಬೆದರಿಕೆಗೆ ಹೆದರಿ ನಾನು ಅಪರಾಧವನ್ನು ಒಪ್ಪಿಕೊಳ್ಳುವಂತೆ ಮಾಡಲಾಯಿತು.

ಶ್ರೀನಗರ ಬಸ್ ನಿಲ್ದಾಣದಲ್ಲಿ ನನ್ನನ್ನು ಬಂಧಿಸಿದ ಬಳಿಕ ವಿಶೇಷ ಪೊಲೀಸರು ಎಸ್‌ಟಿಎಫ್ ಜೊತೆಗೂಡಿ ನನ್ನನ್ನು ದಿಲ್ಲಿಗೆ ಕರೆತಂದರು. ನಾನು ವಾಸ್ತವ ಏನೆಂದು ಯಾರಲ್ಲಾದರೂ ಹೇಳಿದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆಂದು ಅವರು ನನಗೆ ಬೆದರಿಸಿದರು. ಪರಂಪೊರಾ ಪೊಲೀಸ್ ಠಾಣೆಯಲ್ಲಿ ನನ್ನಲ್ಲಿದ್ದ ಎಲ್ಲವನ್ನೂ ವಶಪಡಿಸಿಕೊಳ್ಳಲಾಯಿತು.

ನನ್ನ ತಮ್ಮ ಹಿಲಾಲ್ ಅಹಮದ್ ಗುರುವನ್ನು ಕೂಡ ವಾರಂಟ್ ಇಲ್ಲದೆ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಯಿತು. ಅಲ್ಲಿ ಅವನನ್ನು ಎರಡು ಮೂರು ತಿಂಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿಡಲಾಯಿತು. ನಾನು ನನ್ನ ಕುಟುಂಬದ ಸುರಕ್ಷತೆಗೆ ಅತ್ಯಂತ ಹೆಚ್ಚು ಮಹತ್ವ ನೀಡಿದೆ. ಎಸ್‌ಟಿಎಫ್‌ನವರು ಹೇಗೆ ಕಾಶ್ಮೀರಿಗಳನ್ನು ಕೊಲ್ಲುತ್ತಾರೆಂದು ಕಳೆದ ಏಳು ವರ್ಷಗಳಿಂದ ನಾನು ತಿಳಿದಿದ್ದೆ.

ಹಲವು ಚಿತ್ರಹಿಂಸೆ ಘಟನೆಗಳಿಗೆ ಹಾಗೂ ಕಸ್ಟಡಿ ಕೊಲೆಗಳಿಗೆ ನಾನು ಜೀವಂತ ಸಾಕ್ಷಿಯಾಗಿದ್ದೇನೆ. ಸ್ವತಃ ನಾನೇ ಎಸ್‌ಟಿಎಫ್ ಹಿಂಸೆಗೆ ಬಲಿಪಶುವಾಗಿದ್ದೇನೆ. ನಾನು ಶರಣಾಗತನಾದ ಓರ್ವ ಜೆಕೆಎಲ್‌ಎಫ್ ಮಿಲಿಟೆಂಟ್ ಆಗಿರುವುದರಿಂದ ನನಗೆ ಅವಿರತವಾಗಿ ಕಿರುಕುಳ ನೀಡಲಾಯಿತು. ಬೆದರಿಸಲಾಯಿತು. ಸೇನೆ, ಬಿಎಸ್‌ಎಫ್ ಮತ್ತು ಎಸ್‌ಟಿಎಫ್ ನನಗೆ ಇದನ್ನೆಲ್ಲಾ ಮಾಡಿದವು.

ಎಸ್‌ಟಿಎಫ್‌ನ ಮಂದಿ ಯಾವುದೇ ಸಮಯದಲ್ಲಿ, ಹಗಲಿರಲಿ ಅಥವಾ ರಾತ್ರಿಯಿರಲಿ ಪ್ರತಿಯೊಂದು ಕಡೆ, ಪ್ರತಿಯೊಂದು ಮನೆಗೆ, ಪ್ರತಿಯೊಂದು ಕುಟುಂಬಕ್ಕೆ ನುಗ್ಗುತ್ತಾರೆ. ದಾಳಿ ನಡೆಸುತ್ತಾರೆ. ಎಸ್‌ಟಿಎಫ್ ಯಾರನ್ನಾದರೂ ಬಂಧಿಸಿ ಕರೆದುಕೊಂಡು ಹೋದರೆ ಮತ್ತು ಆತನ ಕುಟುಂಬದವರಿಗೆ ಇದು ಗೊತ್ತಾದರೆ ಆಗ ಅವರು ಅವನ ಮೃತ ದೇಹ ಸಿಗಬಹುದೆಂದು ಕಾಯುತ್ತ ಕೂತಿರುವುದಲ್ಲದೆ ಬೇರೆ ಏನೂ ಮಾಡುವಂತಿಲ್ಲ. ಆದರೆ ಸಾಮಾನ್ಯವಾಗಿ ಅವರಿಗೆ ಅವ ಎಲ್ಲಿದ್ದಾನೆಂದೇ ಯಾವತ್ತೂ ಗೊತ್ತಾಗುವುದಿಲ್ಲ.

ಆರು ಸಾವಿರ ಯುವಕರು ನಾಪತ್ತೆಯಾಗಿದ್ದಾರೆ. ಇಂಥ ಸಂದರ್ಭಗಳಲ್ಲಿ, ಸನ್ನಿವೇಶಗಳಲ್ಲಿ ಮತ್ತು ಇಂತಹ ಭಯಾನಕ ಪರಿಸರದಲ್ಲಿ ನನ್ನಂತಹ ವ್ಯಕ್ತಿಗಳು ಬದುಕಿ ಉಳಿಯಲಿಕ್ಕೆ ಎಸ್‌ಟಿಎಫ್ ಕೈಗಳ ಅಡಿಯಲ್ಲಿ ಯಾವುದೇ ಡರ್ಟಿ ಗೇಮ್‌ಆಡಲು ಸದಾ ಸಿದ್ಧರಿರುತ್ತಾರೆ. ಪರಂಪೊರಾ ಪೊಲೀಸ್ ಠಾಣೆಯ ಪೊಲೀಸರಲ್ಲಿ ಅಕ್ಬರ್ ಎಂಬಾತ ದಾಳಿಗೆ ಬಹಳ ಸಮಯದ ಹಿಂದೆಯೇ ನನ್ನನ್ನು ಬೆದರಿಸಿ ನನ್ನಿಂದ ಐದು ಸಾವಿರ ರೂ. ಕಿತ್ತುಕೊಂಡಿದ್ದ. ನಾನು 2000ನೇ ಇಸವಿಯಲ್ಲಿ ಪರಂಪೊರಾದಲ್ಲಿ ಔಷಧಿ ಹಾಗೂ ಸರ್ಜಿಕಲ್ ಐಟಂಗಳ ವ್ಯಾಪಾರ ಮಾಡುತ್ತಿದ್ದೆ. ನಾನು ಕೋಟಾ ಔಷಧಿಗಳನ್ನು ಹಾಗೂ ಸರ್ಜಿಕಲ್ ಐಟಂಗಳನ್ನು ಮಾರುತ್ತಿದ್ದೇನೆಂದು ನನ್ನ ಮೇಲೆ ಮೊಕದ್ದಮೆ ಹೂಡುವುದಾಗಿ ಆತ ನನನ್ನು ಬೆದರಿಸಿದ್ದ.

ನ್ಯಾಯಾಲಯದಲ್ಲಿ ಆತ ನನ್ನ ಕುಟುಂಬದವರು ಓ.ಕೆ. ಆಗಿದ್ದಾರೆ ಎಂದ. ಇದು ಆತ ನನಗೆ ಪರೋಕ್ಷವಾಗಿ ಹಾಕಿದ ಬೆದರಿಕೆ. ಅದು ಹೀಗೆ ಒಂದು ಬೆದರಿಕೆ ಎಂದು ನಿಯೋಜಿತ ನ್ಯಾಯಾಲಯಕ್ಕೆ ಗೊತ್ತಾಗಲಿಲ್ಲ. ಇಲ್ಲವಾಗಿದ್ದಲ್ಲಿ ನಾನು ನ್ಯಾಯಾಲಯದಲ್ಲಿ ಆತನನ್ನು ಪ್ರಶ್ನಿಸುತ್ತಿದ್ದೆ. ಆದರೆ ನ್ಯಾಯಾಲಯ ಆತನ ಹೇಳಿಕೆಯನ್ನು ದಾಖಲಿಸಲು ಆರಂಭಿಸುವ ಮೊದಲೇ ಆತ ನನಗೆ ಹೀಗೆ ಹೇಳಿದ್ದ.

ವಿಚಾರಣೆಯ ಸಂಪೂರ್ಣ ಅವಧಿಯಲ್ಲಿ ಸಾಕ್ಷಿದಾರರು, ಪೊಲೀಸರು ಮತ್ತು ನ್ಯಾಯಾಧೀಶರು ಕೂಡ ನನ್ನ ವಿರುದ್ಧ ಏಕ ಶಕ್ತಿಯಾದ್ದರಿಂದ ನಾನು ಮೌನವಾಗಿ ಹಾಗೂ ಅಸಹಾಯಕನಾಗಿ ಉಳಿದೆ. ನನ್ನ ಮತ್ತು ನನ್ನ ಕುಟುಂಬದ ಭದ್ರತೆ ಮತ್ತು ಸುರಕ್ಷತೆಯ ಮಧ್ಯೆ ನಾನು ಕಕ್ಕಾಬಿಕ್ಕಿಯಾಗಿ ಗೊಂದಲಕ್ಕೊಳಗಾಗಿದ್ದೆ. ನಾನು ನನ್ನ ಕುಟುಂಬವನ್ನು ರಕ್ಷಿಸಿದೆ, ಉಳಿಸಿದೆ. ಹಾಗಾಗಿ ನಾನು ಮರಣ ದಂಡನೆಯ ನಿರೀಕ್ಷೆಯಲ್ಲಿರಬೇಕಾಗಿದೆ.’’

‘‘ಪೊಲೀಸರು ಅವರಿಗೆ ಶರಣಾಗತರಾದ ಉಗ್ರಗಾಮಿಗಳಿಗೆ ಕಿರುಕುಳ ನೀಡುತ್ತಾರೆ’’

‘‘ಶರಣಾಗತರಾದ ಉಗ್ರಗಾಮಿಗಳಿಗೆ ನೌಕರಿ ಸಿಗಲಿಲ್ಲ. ಅವರು ಎಸ್‌ಪಿಒಗಳಾಗಿ ಅಥವಾ ಎಸ್‌ಟಿಎಫ್‌ಗಳಾಗಿ ಕೆಲಸ ಮಾಡಬೇಕಾಗಿತ್ತು ಅಥವಾ ಪೊಲೀಸರ ಅಥವಾ ಭದ್ರತಾ ಪಡೆಗಳ ಆಶ್ರಯದಲ್ಲಿ ಸೇನೆ ತೊರೆದವರ ಕೆಲಸ ಮಾಡಬೇಕಾಗಿತ್ತು. ಪ್ರತಿದಿನ ಎಸ್‌ಪಿಒಗಳು ಉಗ್ರಗಾಮಿಗಳಿಂದ ಹತ್ಯೆಯಾಗುತ್ತಿದ್ದರು.

ಇಂತಹ ಪರಿಸ್ಥಿತಿಯಲ್ಲಿ ನಾನು ತಿಂಗಳಿಗೆ 4,000-5,000 ರೂಪಾಯಿ ಸಂಪಾದಿಸುವ ನನ್ನ ಕಮಿಷನ್ ಆಧಾರಿತ ಬಿಸಿನೆಸ್ ಆರಂಭಿಸಿದೆ. ಆದರೆ ಎಸ್‌ಟಿಎಫ್ ಜೊತೆ ಕೆಲಸ ಮಾಡದ, ಶರಣಾಗತರಾದ ಉಗ್ರಗಾಮಿಗಳಿಗೆ ಪೊಲೀಸ್ ಮಾಹಿತಿದಾರರು ಸಾಮಾನ್ಯವಾಗಿ ಕಿರುಕುಳ ನೀಡುತ್ತಿರುತ್ತಾರೆ.

  ‘‘1998ರಿಂದ 2,000ದವರೆಗೆ ನಾನು ಸಾಮಾನ್ಯವಾಗಿ ಸ್ಥಳೀಯ ಎಸ್‌ಪಿಒಗೆ 300 ಒಮ್ಮಮ್ಮೆ 500 ರೂಪಾಯಿ ಕೊಡುತ್ತಿದ್ದೆ ಕೊಡದಿದ್ದಲ್ಲಿ ಈ ಎಸ್‌ಪಿಒಗಳು ನಾವು ಭದ್ರತಾ ಪಡೆಗಳ ಮುಂದೆ ಹಾಜರಾಗುವಂತೆ ಮಾಡುತ್ತಾರೆ. ಆಗ ನಾನು ನನ್ನ ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ. ಒಂದು ದಿನ ಒಬ್ಬ ಎಸ್‌ಪಿಒ, ತಾವು ಕೂಡಾ ತಮ್ಮ ಬಾಸ್‌ಗಳಿಗೆ ಹೀಗೆ ಹಣ ಕೊಡಬೇಕಾಗುತ್ತದೆ ಎಂದು ನನ್ನೊಡನೆ ಹೇಳಿದ. ನಾನು ನನ್ನ ವ್ಯಾಪಾರದಲ್ಲಿ ತುಂಬಾ ಕಷ್ಟಪಟ್ಟು ದುಡಿಯುತ್ತಿದ್ದೆನಾದ್ದರಿಂದ ನನ್ನ ವ್ಯಾಪಾರ ಅಭಿವೃದ್ಧಿ ಕಂಡಿತು.’’

ಕೃಪೆ: theprint.in

Writer - ಅನನ್ಯಾ ಭಾರದ್ವಾಜ್

contributor

Editor - ಅನನ್ಯಾ ಭಾರದ್ವಾಜ್

contributor

Similar News

ಜಗದಗಲ
ಜಗ ದಗಲ