ಸುಳ್ಳು ಸುದ್ದಿಗಳ ಬೆಂಕಿಯಲ್ಲಿ ಬೇಯುವ ನಾವು ನೀವು

Update: 2020-01-23 18:31 GMT

ಗಾಸಿಪ್‌ಗಳನ್ನು ನಿರಾಕರಿಸಲು ಸಿದ್ಧರಾಗುವ ಮಂದಿ ಕಣ್ಣಾರೆ ನೋಡಿದ್ದನ್ನು ಸುಳ್ಳು ಎಂದು ನಂಬಲು ಸಿದ್ಧರಾಗುವುದಿಲ್ಲ. ಇಲ್ಲೊಂದು ವಿಶೇಷವಿದೆ. ಕೈಯಲ್ಲಿ ವೀಡಿಯೊವನ್ನು ನೋಡುವ ಅವಕಾಶವನ್ನು ವಿಶ್ವದ ಶೇ. 70ರಷ್ಟು ಜನರು ಇದೇ ಮೊದಲ ಬಾರಿಗೆ ಪಡೆದುಕೊಂಡಿದ್ದಾರೆ. ಇದೊಂದು ದೊಡ್ಡ ಕೌತುಕ ಅವರಿಗೆ. ಈ ಕೌತುಕವನ್ನು ಅನುಭವಿಸುವ ಖುಷಿಯಲ್ಲಿ ಅವರು ಇರುತ್ತಾರೆ. ಹಿಂದೆಂದೂ ಕಾಣದ ಮತ್ತು ಕಾಣಲು ಸಾಧ್ಯವೇ ಇಲ್ಲವೆಂದು ಊಹಿಸಿದ್ದ ದೃಶ್ಯಗಳಲ್ಲಿ ಅವರು ಸಂಪೂರ್ಣವಾಗಿ ಮುಳುಗಿರುತ್ತಾರೆ. ಉನ್ಮಾದದ ಅಲೆಗಳ ಮೇಲೆ ತೇಲುತ್ತಿರುತ್ತಾರೆ. ಇದನ್ನು ಚೆನ್ನಾಗಿ ಅರಿತಿರುವ ರಾಜಕಾರಣಿಗಳು ಮತ್ತು ಲಾಬಿಕೋರರು ಅಧಿಕಾರ ಗಳಿಕೆಯ ದಾರಿಯಲ್ಲಿ ಫೇಕ್ ಸುದ್ದಿಗಳನ್ನು ಬಂಡವಾಳವಾಗಿಸಿಕೊಂಡಿದ್ದಾರೆ.

ಕಳೆದ ಐದು ತಿಂಗಳಿಂದ ದೂರದ ಆಸ್ಟ್ರೇಲಿಯ ಸುದ್ದಿಯಲ್ಲಿದೆ. ಅಲ್ಲಿನ ಕಾಲು ಭಾಗದಷ್ಟು ಭೂ ಪ್ರದೇಶ ಬುಶ್ ಫೈರ್(ಕಾಡ್ಗಿಚ್ಚು)ನಿಂದ ಪೀಡಿತವಾಗಿ ಹೊತ್ತಿ ಉರಿಯುತ್ತಿದೆ. ಉರಿಯುತ್ತಿರುವ ಬೆಂಕಿಯಿಂದ ಏಳುತ್ತಿರುವ ಹೊಗೆ ಇಡೀ ದೇಶವನ್ನೇ ಆವರಿಸಿಕೊಂಡಿದೆ. ಮನೆಯಿಂದ ಹೊರ ಬರಬೇಕಾದರೆ ಮೂಗಿಗೆ ಬಟ್ಟೆ ಕಟ್ಟಿಕೊಂಡು ಬರುವ ಸ್ಥಿತಿ. ಆಟವಾಡುತ್ತಿದ್ದ ಆಟಗಾರರು ವಾಂತಿ ಮಾಡಿಕೊಂಡು ಬೀಳುವ ಪರಿಸ್ಥಿತಿ. ವಿಮಾನಗಳನ್ನು ಹಾರಿಸಲು ಇಳಿಸಲು ಆಗದಷ್ಟು ದಟ್ಟ ಹೊಗೆ!

ಒಂದೆಡೆ 28 ಜನರನ್ನು ಬಲಿ ತೆಗೆದುಕೊಂಡಿರುವ, ಆದರೆ ಇನ್ನೂ ಉರಿಯುತ್ತಲೇ ಬೆಂಕಿಯನ್ನು ಆರಿಸಲು ಹೆಣಗಾಡುತ್ತಿರುವ ಅಧಿಕಾರಿಗಳು ಮತ್ತು ಅಧಿಕಾರಸ್ಥ ರಾಜಕಾರಣಿಗಳು ಮತ್ತೊಂದು ಬೆಂಕಿಗೆ ಸಿಲುಕಿಕೊಂಡು ಬೇಯುತ್ತಿದ್ದಾರೆ -ಈ ಬೆಂಕಿಗೆ ಕಾರಣವೇನು ಎನ್ನುವ ಮತ್ತೊಂದು ಬೆಂಕಿ ಇಡೀ ದೇಶವನ್ನು ಹೊತ್ತಿ ಉರಿಯುವಂತೆ ಮಾಡಿದೆ. ಉರಿಯುತ್ತಿರುವ ಈ ಬೆಂಕಿಗೆ ತುಪ್ಪಸುರಿಯುವ ಕೆಲಸವನ್ನು ಸಾಮಾಜಿಕ ಜಾಲತಾಣಗಳು ಮಾಡುತ್ತಿವೆ. ಇದು ಸಾಲದೆಂಬಂತೆ, ಕೆಲವು ಮಾಧ್ಯಮಗಳು ಈ ಕೆಲಸವನ್ನು ಮುಂದವರಿಸಿವೆ.

ಆಸ್ಟ್ರೇಲಿಯ ದೇಶ ಕಳೆದ ಮೂರು ವರ್ಷಗಳಿಂದ ಸತತ ಬರಕ್ಕೆ ತುತ್ತಾಗಿದೆ. ಸರಾಸರಿ ಉಷ್ಣಾಂಶ ಮೂರು ಡಿಗ್ರಿಗಳಷ್ಟು ಹೆಚ್ಚಾಗಿದೆ. ಇಡೀ ಭೂ ಪ್ರದೇಶ ಬೇಸಿಗೆಯಲ್ಲಿ ಒಣಗಿ ಬೆಂಡಾಗಿದೆ. ಮಳೆ ಬರುತ್ತಿಲ್ಲ, ಏರಿರುವ ಉಷ್ಣಾಂಶ ಇಳಿಯುತ್ತಿಲ್ಲ. ಈ ದ್ವೀಪ ದೇಶದ ಸುತ್ತ ಇರುವ ಸಮುದ್ರದ ಉಷ್ಣಾಂಶವೂ ಸಹ ಮೂರು ಡಿಗ್ರಿಗಳಷ್ಟು ಏರಿಕೆಯನ್ನು ಕಂಡಿದೆ. ಇದರಿಂದ ಅನೇಕ ಜಲಸಸ್ಯಗಳು ಸಂಪೂರ್ಣವಾಗಿ ನಾಶಗೊಂಡಿವೆ. ಇವುಗಳನ್ನು ಅವಲಂಬಿಸಿದ್ದ ಅನೇಕ ಜಲಚರಗಳು ಇಲ್ಲವಾಗಿವೆ. ಇದೆಲ್ಲವೂ ಏರುತ್ತಿರುವ ಭೂಮಿಯ ತಾಪಮಾನದ ಕಾರಣದಿಂದ ಎನ್ನುವುದು ತಜ್ಞರ ಅಂಬೋಣ. ದೇಶದ ಪರಿಸರ ವಿಜ್ಞಾನಿಗಳು ಹತ್ತು ವರ್ಷದ ಹಿಂದಿನಿಂದಲೇ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಲೇ ಇದ್ದರು. ಇವರನ್ನು ದೇಶ ವಿರೋಧಿಗಳೆಂದು ಕೂಗು ಹಾಕುತ್ತಾ ಇಂದಿನ ಪ್ರಧಾನಿ ಸ್ಕಾಟ್ ಮಾರಿಸನ್ ಅಧಿಕಾರಕ್ಕೆ ಬಂದಿದ್ದರು. ಸಾಕಷ್ಟು ಕಲ್ಲಿದ್ದಲ್ಲನ್ನು ಹೊಂದಿರುವ ಆಸ್ಟ್ರೇಲಿಯ ದೇಶದ ಒಟ್ಟು ಜನಸಂಖ್ಯೆಯ ಶೇ. 2ರಷ್ಟು ಮಂದಿ ಕಲ್ಲಿದ್ದಲ್ಲು ಗಣಿಗಾರಿಕೆಯ ಉದ್ಯೋಗವನ್ನು ಅವಲಂಬಿಸಿದ್ದಾರೆ. ಜೊತೆಗೆ ಸಾಕಷ್ಟು ವಿದೇಶಿ ವಿನಿಮಯವನ್ನು ಗಣಿಗಾರಿಕೆ ತಂದುಕೊಡುತ್ತದೆ. ಇವರ ಉದ್ಯೋಗವನ್ನು ಕಿತ್ತುಕೊಳ್ಳುವ ಹುನ್ನಾರವನ್ನು ಪರಿಸರವಾದಿಗಳು ಹೊಂದಿದ್ದಾರೆ. ಇಂತಹವರು ದೇಶ ವಿರೋಧಿಗಳಲ್ಲದೆ ಮತ್ತೇನು ಎನ್ನುವ ವಾದವನ್ನು ಹುಟ್ಟುಹಾಕಿ ಮಾರಿಸನ್ ಅವರು ಅಧಿಕಾರಕ್ಕೆ ಬಂದರು.

ಅಮೆರಿಕದ ಟ್ರಂಪ್ ಅವರಂತೆ ಗ್ಲೋಬಲ್ ವಾರ್ಮಿಂಗ್ ಎನ್ನುವುದೇ ಒಂದು ಕಟ್ಟುಕತೆ ಎಂದಿದ್ದ ಮಾರಿಸನ್ ವಾರದ ಹಿಂದೆ ‘‘ಪರಿಸರ ವಿನಾಶ ತೀವ್ರವಾಗಿರುವ ಈ ಹೊತ್ತಿನಲ್ಲಿ ಸ್ವಲ್ಪ ಹೊಂದಾಣಿಕೆಯ ಬದುಕನ್ನು ಬದುಕಬೇಕಾದ ಅನಿವಾರ್ಯತೆ ಇದೆ’’ ಎಂದು ಹೇಳಿಬಿಟ್ಟರು! ಇದು ಸಾಲದೆಂಬಂತೆ, ಈ ದೇಶದ ವಿಜ್ಞಾನ ಮಂತ್ರಿಯಾದ ಖರೇನ್ ಆಂಡ್ರ್ಯೂಸ್ ‘‘ಭೂಮಿಯ ವಾಯುಗುಣದಲ್ಲಿ ತೀವ್ರ ರೀತಿಯ ಬದಲಾವಣೆಗಳು ಆಗುತ್ತಿವೆ ಎನ್ನುವುದನ್ನು ನಿರಾಕರಿಸುವುದು ಅಮೂಲ್ಯ ಸಮಯದ ನಷ್ಟ’’ ಎಂದರು! ಇದೊಂದು ಗಮನಾರ್ಹವಾದ ವಿಷಯ. ಎಲ್ಲಾ ಪರಿಸರವಾದಿಗಳು ದೇಶದ್ರೋಹಿಗಳು ಎನ್ನುತ್ತಾ ಅಧಿಕಾರಕ್ಕೆ ಬಂದವರು ಇಂದು ಪರಿಸರವಾದಿಗಳ ಮಾತುಗಳನ್ನು ಕೇಳಬೇಕಾದ ಅನಿವಾರ್ಯತೆಯಿದೆಯೆಂದು ಸಾರ್ವಜನಿಕವಾಗಿ ಒಪ್ಪಿಕೊಳ್ಳುವ ಸ್ಥಿತಿಗೆ ಬಂದು ತಲುಪಿರುವುದು ಹೊತ್ತಿ ಉರಿಯುತ್ತಿರುವ ಬೆಂಕಿಯ ತೀವ್ರತೆಯಿಂದಾಗಿ. ‘ಒಲೆ ಹೊತ್ತಿ ಉರಿದಡೆ ನಿಲಬಹುದಲ್ಲದೆ, ಧರೆ ಹೊತ್ತಿ ಉರಿದೊಡೆ ನಿಲಲುಬಹುದೆ’ ಎನ್ನುವ ವಚನದ ಸತ್ಯವನ್ನು ಕಾಣಲು ಇವತ್ತಿನ ಆಸ್ಟ್ರೇಲಿಯದಲ್ಲಿ ಜೀವಿಸುವ ಅಗತ್ಯವಿಲ್ಲ. ಅದರ ಕುರಿತು ಲಭ್ಯವಿರುವ ಮಾಹಿತಿಯನ್ನು ಗ್ರಹಿಸಿ ಅರ್ಥೈಸಿಕೊಂಡರೆ ಸಾಕಾಗುತ್ತದೆ.

ಇಷ್ಟೆಲ್ಲಾ ಆದರೂ ಮನುಷ್ಯನ ಸಣ್ಣತನಗಳು ಮುಂದುವರಿದೇ ಇವೆ. ಕಲ್ಲಿದ್ದಲು ಮೂಲದ ಉದ್ಯಮಗಳಲ್ಲಿ ತೊಡಗಿರುವ ಕಂಪೆನಿಗಳು, ಇವರ ಪರವಾಗಿ ಇರುವ ಲಾಬಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಿಯಬಿಟ್ಟು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಕೃತ್ಯದಲ್ಲಿ ತೊಡಿಗಿಕೊಂಡಿದ್ದಾರೆ- ಪರಿಸರವಾದಿಗಳು ದೇಶದ್ರೋಹಿಗಳು ಮತ್ತು ಉರಿಯುತ್ತಿರುವ ಬೆಂಕಿಯ ಹಿಂದೆ ಇವರ ಕೈವಾಡವಿದೆ. ಇವರ ಪ್ರಕಾರ ಪರಿಸರವಾದಿಗಳು ಜನರಲ್ಲಿ ದಿಗಿಲು ಹುಟ್ಟಿಸಲು ಒಣಗಿ ನಿಂತಿದ್ದ ಕಾಡುಗಳಿಗೆ ಬೆಂಕಿ ಇಟ್ಟರು. ಬೆಂಕಿಯ ಪ್ರಮಾಣ ಹೆಚ್ಚಿರಲಿ ಎಂದು ದೇಶದ ಬೇರೆ ಭಾಗಗಳಲ್ಲಿ ಏಕಕಾಲಕ್ಕೆ ಬೆಂಕಿ ಇಟ್ಟರು. ಇಂತಹವರನ್ನು ಬಂಧಿಸಬೇಕು ಎನ್ನುತ್ತಲೇ ಅಲ್ಲಿ ಇಪ್ಪತ್ತು ಜನರನ್ನು ಬಂಧಿಸಲಾಗಿದೆ, ಇಲ್ಲಿ ಹತ್ತು ಜನರನ್ನು ಬಂಧಿಸಲಾಗಿದೆ ಎನ್ನುವ ಸುದ್ದಿಯನ್ನು ದಿನದ ಇಪ್ಪತ್ನಾಲ್ಕು ಗಂಟೆಗಳೂ ಹಬ್ಬಿಸುತ್ತಲೇ ಇದ್ದಾರೆ.

ಮೂರು ವರ್ಷದ ಹಿಂದೆ ಇಂತಹ ಸುದ್ದಿಗಳಿಗೆ ಸಾಕಷ್ಟು ಮಾನ್ಯತೆ ದೊರೆತಿತ್ತು. ನಗರವಾಸಿಗಳಲ್ಲಿ ಇಂತಹ ಸುದ್ದಿಗಳು ಸಾಕಷ್ಟು ಬೆಂಬಲವನ್ನು ಪಡೆದುಕೊಂಡಿದ್ದವು. ಗ್ರಾಮಾಂತರ ಪ್ರದೇಶಗಳು ಬರದಿಂದ ತತ್ತರಿಸುತ್ತಿದ್ದರೂ, ಆಳವಾದ ಬೋರ್‌ವೆಲ್‌ಗಳ ಸಹಾಯದಿಂದ ನೀರು ಎಳೆದುಕೊಂಡು, ಟನ್‌ಗಟ್ಟಲೆ ಕಲ್ಲಿದ್ದಲ್ಲನ್ನು ಸುಟ್ಟು ತಯಾರು ಮಾಡುತ್ತಿದ್ದ ವಿದ್ಯುಚ್ಛಕ್ತಿಯ ಮೂಲಕ ಏಸಿಗಳನ್ನು ಬಳಸಿಕೊಂಡು ತಣ್ಣಗೆ ಕುಳಿತಿದ್ದ ಈ ಮಂದಿಗೆ ಪರಿಸರವಾದಿಗಳ ಹೆಸರು ಕೇಳಿದರೆ ಎಲ್ಲಿಲ್ಲದ ಕೋಪ ಬರುತಿತ್ತು. ಅವರನ್ನು ಉಗ್ರರು ಎನ್ನುವ ಸುದ್ದಿಗಳಿಗೆ ಲೈಕ್‌ಗಳನ್ನು ನೀಡುತ್ತಾ ಚಪ್ಪಾಳೆ ತಟ್ಟುವ ಇಮೋಜಿಗಳನ್ನು ಒತ್ತುತ್ತಲೇ ಇರುತ್ತಿದ್ದರು.

ಇಂಹ ಸಂದರ್ಭಗಳು ಏಕೆ ಸೃಷ್ಟಿಯಾಗುತ್ತವೆ? ಇದು ಕಳೆದ ದಶಕದಲ್ಲಿ ಆಗಿರುವ ಮಾಹಿತಿ ತಂತ್ರಜ್ಞಾನದ ಕ್ರಾಂತಿಯ ಪರಿಣಾಮ. ಇಂದು ವಿಶ್ವದ ಶೇ. 52ರಷ್ಟು ಜನರ ಸುದ್ದಿಯ ಮೂಲ ಟಿವಿಗಳಾಗಲಿ, ಪತ್ರಿಕೆಗಳಾಗಲಿ ಅಲ್ಲ-ಇವರ ಸುದ್ದಿಯ ಮೂಲ ಅಂತರ್ಜಾಲ(ಆನ್‌ಲೈನ್). ಕೇವಲ 15ರಷ್ಟು ಜನರು ಪತ್ರಿಕೆಗಳನ್ನು ಸುದ್ದಿಯ ಮೂಲವನ್ನಾಗಿ ಬಳಸಿಕೊಳ್ಳುತ್ತಾರೆ. (ಈ ಲೇಖನವನ್ನು ಅಂತರ್ಜಾಲದ ತಾಣಗಳಾದ ವಾಟ್ಸ್ ಆ್ಯಪ್, ಫೇಸ್‌ಬುಕ್ ಇಲ್ಲವೇ ಇದೇ ಪತ್ರಿಕೆಯ ಆನ್‌ಲೈನ್ ಆವೃತ್ತಿಯಲ್ಲಿ ಓದುವವರ ಸಂಖ್ಯೆ ಶೇ. 50ರಷ್ಟಿರುತ್ತದೆ). ಮುದ್ರಣ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳು ಇರುವುದೇ ಇಲ್ಲ ಅಂತೇನು ಅಲ್ಲ. ಮೂರು ಶತಮಾನಗಳಷ್ಟು ಸುದೀರ್ಘ ಇತಿಹಾಸವನ್ನು ಹೊಂದಿರುವ ಮುದ್ರಣ ಮಾಧ್ಯಮ ಸುಳ್ಳು ಸುದ್ದಿಗಳನ್ನು ತಡೆಯುವ ಅನೇಕ ಸ್ತರದ ನಿಯಂತ್ರಣ ವ್ಯವಸ್ಥೆಗಳನ್ನು ನಿರ್ಮಿಸಿಕೊಳ್ಳುತ್ತಾ ಬಂದಿದೆ. ಐವತ್ತು ವರ್ಷದ ಇತಿಹಾಸವಿರುವ ದೃಶ್ಯ ಮಾಧ್ಯಮವೂ ಹೀಗೆ ತಕ್ಕಮಟ್ಟಿನ ನಿಯಂತ್ರಣ ವ್ಯವಸ್ಥೆಯನ್ನು ನಿರ್ಮಿಸಿಕೊಂಡು ಬಂದಿದೆ. ಆದರೆ ಈ ಸಾಮಾಜಿಕ ಜಾಲತಾಣಗಳಿಗೆ ಹತ್ತು-ಹದಿನೈದರ ಹರೆಯ! ತುಂಟಾಟದ ವಯಸ್ಸು.

ಇವೆಲ್ಲಕ್ಕಿಂತ ಮಿಗಿಲಾಗಿ ಮೇಲೆ ಹೇಳಿದ ಎರಡೂ ಮಾಧ್ಯಮಗಳು ಜನಸಾಮಾನ್ಯರಿಂದ ದೂರ ಇದ್ದಂತಹವು. ಅದರಲ್ಲೂ ಟಿವಿ ಮಾಧ್ಯಮದಲ್ಲಿ ಯಾವುದೇ ವಿಷಯವನ್ನು ಚಿತ್ರೀಕರಿಸಿ, ನಂತರ ಅದನ್ನು ಕೇಬಲ್‌ಗಳ ಮೂಲಕವೋ ಇಲ್ಲವೇ ಉಪಗ್ರಹಗಳ ಮೂಲಕವೋ ಟಿವಿಗಳಿಗೆ ಬಿತ್ತರಿಸುವ ವ್ಯವಸ್ಥೆಯನ್ನು ಹೊಂದಿರಬೇಕಾಗುತ್ತಿತ್ತು. ಇದು ಅತ್ಯಂತ ದುಬಾರಿಯಾದ ಕೆಲಸವಾಗಿತ್ತು. ಆದರೆ ಆನ್‌ಲೈನ್ ಸ್ಥಿತಿ ಹೀಗೇನು ಇಲ್ಲ. ಕೈಯಲ್ಲಿರುವ ಸ್ಮಾರ್ಟ್ ಫೋನ್ ಬಳಸಿಕೊಂಡು ಯಾವುದೇ ವೀಡಿಯೊವನ್ನು ಸಾವಿರಾರು ಜನರಿಗೆ ತಲುಪಿಸಬಹುದು. ಇರುವ ವಿಚಾರವನ್ನು ತಿಳಿಸಿದರೆ ಅಪಾಯವೇನು ಇರುವುದಿಲ್ಲ. ಆದರೆ ಸತ್ಯವನ್ನು ತಿರುಚುವ ಕೃತ್ಯವನ್ನು ಬಹಳ ಸಲೀಸಲಾಗಿ ಮಾಡಲಾಗುತ್ತದೆ. ಚಿತ್ರೀಕರಿಸಿದ ವೀಡಿಯೊವನ್ನು ಲಭ್ಯವಿರುವ ವೀಡಿಯೊ ಎಡಿಂಟಿಂಗ್ ಆ್ಯಪ್ ಮೂಲಕ ಬೇಕಾದ ರೀತಿಯಲ್ಲಿ ಮೂಡಿಸಬಹುದು. ಹೀಗೆ ತಿರುಚಲ್ಪಟ್ಟ ವೀಡಿಯೊಗಳನ್ನು ನೋಡಿದವರು ಅದನ್ನು ನಂಬುತ್ತಾರೆ. ಹೇಳಿದ್ದನ್ನು ನಂಬದಿದ್ದರೂ, ನೋಡಿದ್ದನ್ನು ನಂಬಲೇಬೇಕಾಗುತ್ತದೆ ಎನ್ನುವ ಆಲೋಚನೆಯನ್ನು ಬೆಳೆಸಿಕೊಂಡ ಜನಸಾಮಾನ್ಯರಿಗೆ ಇದನ್ನು ಬಿಡಿಸಿ ಹೇಳುವುದು ಕಷ್ಟ.

ಗಾಸಿಪ್‌ಗಳನ್ನು ನಿರಾಕರಿಸಲು ಸಿದ್ಧರಾಗುವ ಮಂದಿ ಕಣ್ಣಾರೆ ನೋಡಿದ್ದನ್ನು ಸುಳ್ಳು ಎಂದು ನಂಬಲು ಸಿದ್ಧರಾಗುವುದಿಲ್ಲ. ಇಲ್ಲೊಂದು ವಿಶೇಷವಿದೆ. ಕೈಯಲ್ಲಿ ವೀಡಿಯೊವನ್ನು ನೋಡುವ ಅವಕಾಶವನ್ನು ವಿಶ್ವದ ಶೇ. 70ರಷ್ಟು ಜನರು ಇದೇ ಮೊದಲ ಬಾರಿಗೆ ಪಡೆದುಕೊಂಡಿದ್ದಾರೆ. ಇದೊಂದು ದೊಡ್ಡ ಕೌತುಕ ಅವರಿಗೆ. ಈ ಕೌತುಕವನ್ನು ಅನುಭವಿಸುವ ಖುಷಿಯಲ್ಲಿ ಅವರು ಇರುತ್ತಾರೆ. ಹಿಂದೆಂದೂ ಕಾಣದ ಮತ್ತು ಕಾಣಲು ಸಾಧ್ಯವೇ ಇಲ್ಲವೆಂದು ಊಹಿಸಿದ್ದ ದೃಶ್ಯಗಳಲ್ಲಿ ಅವರು ಸಂಪೂರ್ಣವಾಗಿ ಮುಳುಗಿರುತ್ತಾರೆ. ಉನ್ಮಾದದ ಅಲೆಗಳ ಮೇಲೆ ತೇಲುತ್ತಿರುತ್ತಾರೆ. ಇದನ್ನು ಚೆನ್ನಾಗಿ ಅರಿತಿರುವ ರಾಜಕಾರಣಿಗಳು ಮತ್ತು ಲಾಬಿಕೋರರು ಅಧಿಕಾರ ಗಳಿಕೆಯ ದಾರಿಯಲ್ಲಿ ಫೇಕ್ ಸುದ್ದಿಗಳನ್ನು ಬಂಡವಾಳವಾಗಿಸಿಕೊಂಡಿದ್ದಾರೆ. ಇವರ ಸಣ್ಣತನದ ಮುಂದೆ, ಭೂಮಿಯ ಸಂಕಟ ಗೌಣವಾಗಿದೆ. ಇದು ಕೇವಲ ಆಸ್ಟ್ರೇಲಿಯದ ಅಷ್ಟೇ ಅಲ್ಲ. ನಮ್ಮ ದೇಶದ, ರಾಜ್ಯದ ಹಾಗೂ ನಮ್ಮ ಊರಿನ ಕಥೆೆಯೂ ಇಷ್ಟೆ. ಇದಕ್ಕೊಂದು ತುರ್ತು ಮದ್ದು ಬೇಕಿದೆ. ಏಕೆಂದರೆ, ನಮಗೆ ಹೆಚ್ಚಿನ ಸಮಯ ಉಳಿದಿಲ್ಲ.

Writer - ಸದಾನಂದ ಆರ್.

contributor

Editor - ಸದಾನಂದ ಆರ್.

contributor

Similar News

ಜಗದಗಲ
ಜಗ ದಗಲ