ನನ್ನ ಮತ್ತು ಮೋಹನ್ ಭಾಗವತ್‌ರ ಡಿಎನ್‌ಎಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ, ಆದರೂ ನಾನೀಗ ಭಾರತೀಯನಲ್ಲ! -ಜೂಲಿಯೊ ರಿಬೆರೊ

Update: 2020-01-25 06:00 GMT

ಇಂದು ನನ್ನ 86ನೇ ವಯಸ್ಸಿನಲ್ಲಿ ನಾನು ಬೆದರಿಕೆಯ ಭಾವವನ್ನು ಅನುಭವಿಸುತ್ತಿದ್ದೇನೆ, ಯಾರಿಗೂ ಬೇಡವಾಗಿದ್ದೇನೆ ಮತ್ತು ನನ್ನದೇ ದೇಶದಲ್ಲಿ ಅಪರಿಚಿತನಾಗಿದ್ದೇನೆ. ತಾವು ಎದುರಿಸಲು ಸಾಧ್ಯವಿಲ್ಲದ ಶಕ್ತಿಯಿಂದ ತಮ್ಮನ್ನು ರಕ್ಷಿಸಲು ನನ್ನಲ್ಲಿ ವಿಶ್ವಾಸವಿರಿಸಿದ್ದ ಇದೇ ವರ್ಗದ ಜನರು ಈಗ ಧುತ್ತನೆ ಎದುರಾಗಿ ತಮ್ಮ ಧರ್ಮಕ್ಕಿಂತ ಭಿನ್ನವಾಗಿರುವ ಧರ್ಮವನ್ನು ಪಾಲಿಸುತ್ತಿರುವುದಕ್ಕಾಗಿ ನನ್ನನ್ನು ಖಂಡಿಸುತ್ತಿದ್ದಾರೆ. ನಾನೀಗ, ಕನಿಷ್ಠ ಹಿಂದೂ ರಾಷ್ಟ್ರ ಪ್ರತಿಪಾದಕರ ದೃಷ್ಟಿಯಲ್ಲಿ ಭಾರತೀಯನಾಗಿ ಉಳಿದಿಲ್ಲ.

ದೊಂದು ಕಾಲವಿತ್ತು. ಬಹಳ ಹಿಂದೇನಲ್ಲ, ಸುಮಾರು 30 ವರ್ಷಗಳ ಹಿಂದೆ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರು ‘ಪ್ರತ್ಯೇಕತಾವಾದಿಗಳ ವಿರುದ್ಧ ದೇಶದ ಯುದ್ಧ’ ಎಂದು ಬಣ್ಣಿಸಿದ್ದ ಹೋರಾಟದ ನೇತೃತ್ವವನ್ನು ವಹಿಸಲು ಓರ್ವ ಕ್ರಿಶ್ಚಿಯನ್ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿತ್ತು. ಆಗ ಕೇಂದ್ರ ಗೃಹಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದ ನಾನು ಪ್ರಧಾನಿಯವರ ವೈಯಕ್ತಿಕ ಮನವಿಯ ಮೇರೆಗೆ ಪಂಜಾಬ್ ರಾಜ್ಯದ ಡಿಜಿಪಿಯಾಗಿ ನನ್ನ ‘ಹಿಂಭಡ್ತಿ’ಯನ್ನು ಸಂತೋಷದಿಂದಲೇ ಒಪ್ಪಿಕೊಂಡಿದ್ದೆ.

ಆಗಿನ ಗೃಹ ಕಾರ್ಯದರ್ಶಿ ರಾಮ ಪ್ರಧಾನ್ ಮತ್ತು ನನ್ನ ಆಪ್ತ ಸ್ನೇಹಿತ ಬಿ.ಜಿ.ದೇಶಮುಖ್ ಅವರು ಇದರಿಂದ ತೀವ್ರ ಕಳವಳಗೊಂಡಿದ್ದರು. ನೀವೇಕೆ ಈ ಹುದ್ದೆಯನ್ನು ಒಪ್ಪಿಕೊಂಡಿರಿ ಎಂದು ಅವರು ನನ್ನನ್ನು ಪ್ರಶ್ನಿಸಿದ್ದರು. ಆಗಿನ ರಾಷ್ಟ್ರಪತಿ ಜೈಲ್ ಸಿಂಗ್ ಅವರು ನನಗೆ ದೂರವಾಣಿ ಕರೆಯನ್ನು ಮಾಡಿ ಇದೇ ಪ್ರಶ್ನೆಯನ್ನು ಕೇಳಿದ್ದರು. ಆದರೆ ವಿಶೇಷ ವಿಮಾನದಲ್ಲಿ ನನ್ನೊಂದಿಗೆ ದಿಲ್ಲಿಯಿಂದ ಚಂಡಿಗಡಕ್ಕೆ ಬಂದಿದ್ದ ಕೇಂದ್ರ ಸಚಿವ ಅರ್ಜುನ ಸಿಂಗ್ ಅವರು, ಮರುದಿನ ಬೆಳಗ್ಗೆ ಪಂಜಾಬ್ ಡಿಜಿಪಿಯಾಗಿ ನನ್ನ ನೇಮಕ ಪ್ರಕಟಗೊಂಡಾಗ ರಾಜ್ಯದ ಹಿಂದೂಗಳು ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ ಮತ್ತು ಸಂಭ್ರಮ ಪಡಲಿದ್ದಾರೆ ಎಂದು ಹೇಳಿದ್ದರು. ಪ್ರತ್ಯೇಕತಾವಾದಿಗಳಿಂದ ಮೂಲೆಗೆ ತಳ್ಳಲ್ಪಟ್ಟಿದ್ದ ಆರೆಸ್ಸೆಸಿಗರೂ ಈ ಹಿಂದೂಗಳಲ್ಲಿ ಸೇರಿದ್ದರು ಎಂದು ನಾನು ಭಾವಿಸಿದ್ದೇನೆ.

ಅದೊಂದು ದಿನ ಬೆಳಗ್ಗೆ ಆರೆಸ್ಸೆಸ್ ಪರೇಡ್‌ನಲ್ಲಿ ಭಾಗವಹಿಸಿದ್ದ 25 ಕಾರ್ಯಕರ್ತರು ಪ್ರತ್ಯೇಕತಾವಾದಿಗಳ ಬರ್ಬರ ಗುಂಡಿನ ದಾಳಿಗೆ ಬಲಿಯಾಗಿದ್ದಾಗ ಮೃತರ ದುಃಖತಪ್ತ ಕುಟುಂಬಗಳನ್ನು ಸಂತೈಸಲು ಆಗಿನ ಪಂಜಾಬ್ ರಾಜ್ಯಪಾಲ ಎಸ್.ಎಸ್.ರೇ ಮತ್ತು ನಾನು ಸ್ಥಳಕ್ಕೆ ಧಾವಿಸಿದ್ದೆವು. ರಾಜ್ಯಪಾಲರು 12 ಮನೆಗಳಿಗೆ ಭೇಟಿ ನೀಡಿದ್ದರೆ ಉಳಿದ ಕುಟುಂಬಗಳನ್ನು ನಾನು ಭೇಟಿಯಾಗಿದ್ದೆ. ರಾಜ್ಯಪಾಲರ ಅನುಭವವು ನನಗಿಂತ ಭಿನ್ನವಾಗಿತ್ತು. ಜನರು ರಾಜ್ಯಪಾಲರನ್ನು ತಳ್ಳಾಡಿದ್ದರು ಮತ್ತು ನಿಂದಿಸಿದ್ದರು. ನನ್ನನ್ನು ಆದರಾಭಿಮಾನದಿಂದ ಸ್ವಾಗತಿಸಿದ್ದರು.

ಇಂದು ನನ್ನ 86ನೇ ವಯಸ್ಸಿನಲ್ಲಿ ನಾನು ಬೆದರಿಕೆಯ ಭಾವವನ್ನು ಅನುಭವಿಸುತ್ತಿದ್ದೇನೆ, ಯಾರಿಗೂ ಬೇಡವಾಗಿದ್ದೇನೆ ಮತ್ತು ನನ್ನದೇ ದೇಶದಲ್ಲಿ ಅಪರಿಚಿತನಾಗಿದ್ದೇನೆ. ತಾವು ಎದುರಿಸಲು ಸಾಧ್ಯವಿಲ್ಲದ ಶಕ್ತಿಯಿಂದ ತಮ್ಮನ್ನು ರಕ್ಷಿಸಲು ನನ್ನಲ್ಲಿ ವಿಶ್ವಾಸವಿರಿಸಿದ್ದ ಇದೇ ವರ್ಗದ ಜನರು ಈಗ ಧುತ್ತನೆ ಎದುರಾಗಿ ತಮ್ಮ ಧರ್ಮಕ್ಕಿಂತ ಭಿನ್ನವಾಗಿರುವ ಧರ್ಮವನ್ನು ಪಾಲಿಸುತ್ತಿರುವುದಕ್ಕಾಗಿ ನನ್ನನ್ನು ಖಂಡಿಸುತ್ತಿದ್ದಾರೆ. ನಾನೀಗ, ಕನಿಷ್ಠ ಹಿಂದೂ ರಾಷ್ಟ್ರ ಪ್ರತಿಪಾದಕರ ದೃಷ್ಟಿಯಲ್ಲಿ ಭಾರತೀಯನಾಗಿ ಉಳಿದಿಲ್ಲ.

ಕಳೆದ ವರ್ಷದ ಮೇ ತಿಂಗಳಲ್ಲಿ ನರೇಂದ್ರ ಮೋದಿಯವರ ಬಿಜೆಪಿ ನೇತೃತ್ವದ ಸರಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರವೇ ಸಣ್ಣ ಮತ್ತು ಶಾಂತಿಯುತ ಸಮುದಾಯವನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತ ದಾಳಿಗಳು ನಡೆಯುತ್ತಿರುವುದು ಕಾಕತಾಳೀಯವೇ ಅಥವಾ ಪೂರ್ವಯೋಜಿತ ಸಂಚು ಆಗಿದೆಯೇ? ‘ಘರ್ ವಾಪ್ಸಿ, ಕ್ರಿಸ್‌ಮಸ್ ದಿನವನ್ನು ‘ಗುಡ್ ಗವರ್ನನ್ಸ್ ಡೇ’ ಎಂದು ಘೋಷಿಸಿರುವುದು, ದಿಲ್ಲಿಯಲ್ಲಿ ಕ್ರಿಶ್ಚಿಯನ್ನರ ಚರ್ಚುಗಳು ಮತ್ತು ಶಾಲೆಗಳ ಮೇಲಿನ ದಾಳಿಗಳು....ಇವೆಲ್ಲ ಈ ಶಾಂತಿಯುತ ಸಮುದಾಯದ ಜನರಲ್ಲಿ ಅಭದ್ರತೆಯ ಭಾವನೆಗಳನ್ನು ಹುಟ್ಟುಹಾಕಿವೆ.

ಕ್ರಿಶ್ಚಿಯನ್ನರು ನಿರಂತರವಾಗಿ ತಮ್ಮ ಸಾಮರ್ಥ್ಯವನ್ನು ಮೀರಿ ಯಶಸ್ವಿಯಾಗುತ್ತಿದ್ದಾರೆ. ಅದು ಪುಟ್ಟ ಪಾರ್ಸಿ ಸಮುದಾಯದ ಸಾಧನೆಯಷ್ಟಿಲ್ಲ, ಆದರೆ ಗಮನಾರ್ಹವಾಗಿದೆ. ವಿಶೇಷವಾಗಿ ಶಿಕ್ಷಣ ಕ್ರಿಶ್ಚಿಯನ್ನರ ಬಲವಾಗಿದೆ. ಕ್ರಿಶ್ಚಿಯನ್ನರು ಹಲವಾರು ಶಾಲಾ-ಕಾಲೇಜುಗಳು, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯವನ್ನು ನೀಡುವ ಸಂಬಂಧಿತ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಸಂಸ್ಥೆಗಳು ವಿದ್ಯಾಕಾಂಕ್ಷಿಗಳಿಂದ ಭಾರೀ ಬೇಡಿಕೆಯಲ್ಲಿವೆ. ಕಟ್ಟರ್ ಹಿಂದೂಗಳು ಕೂಡ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದು ಕ್ರಿಶ್ಚಿಯನ್ ಶಿಕ್ಷಕರ ಬದ್ಧತೆ ಮತ್ತು ಪ್ರಾಮಾಣಿಕತೆಯ ಲಾಭಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ಹಲವರು ಕ್ರಿಶ್ಚಿಯನ್ ವೌಲ್ಯಗಳನ್ನು ಮೈಗೂಡಿಸಿಕೊಂಡಿದ್ದಾರೆ ಮತ್ತು ‘ಢೋಂಗಿ ಜಾತ್ಯತೀತವಾದಿ’ಗಳಾಗಿದ್ದಾರೆ, ಆದರೆ ಯಾರೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಂತೆ ಕಾಣಿಸುತ್ತಿಲ್ಲ.

ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳು, ಬದುಕಿನ ಕೊನೆಯ ದಿನಗಳಲ್ಲಿ ಉಪಶಾಮಕ ಆರೈಕೆಯ ಅಗತ್ಯವುಳ್ಳ ಕ್ಯಾನ್ಸರ್ ರೋಗಿಗಳಿಗಾಗಿ ವಿಶ್ರಾಂತಿ ತಾಣಗಳು....ಈ ಪೈಕಿ ಹೆಚ್ಚಿನವು ಕ್ರಿಶ್ಚಿಯನ್ ಧಾರ್ಮಿಕ ಸಂಸ್ಥೆಗಳು ಅಥವಾ ಮಾನವತೆಯ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡಿರುವ ಸಾಮಾನ್ಯ ಕ್ರಿಶ್ಚಿಯನ್ನರಿಂದ ನಡೆಸಲ್ಪಡುತ್ತಿವೆ. ಅವರ ಸಮಾಜಮುಖಿ ಕಾರ್ಯವನ್ನು ಮೆಚ್ಚಿ ಎಲ್ಲಿಯೋ ಯಾರೋ ಫಲಾನುಭವಿ ತನ್ನ ಸ್ವಂತ ಇಚ್ಛೆಯಿಂದ ಮತಾಂತರಗೊಂಡರೆಂದು ಬಹುಸಂಖ್ಯಾಕರಿಗೆ ಹೆದರಿಕೊಂಡು ಅವರು ಇಂತಹ ಮಾನವೀಯ ಕಾರ್ಯಗಳಿಂದ ದೂರವಿರಬೇಕೇ?

ಭಾರತೀಯ ಸೇನೆಗೆ ಕ್ರಿಶ್ಚಿಯನ್ ಜನರಲ್ ಓರ್ವರು ಮುಖ್ಯಸ್ಥರಾಗಿದ್ದರು. ನೌಕಾಪಡೆಯು ಒಂದಕ್ಕಿಂತ ಹೆಚ್ಚು ಬಾರಿ ಕ್ರಿಶ್ಚಿಯನ್ ಮುಖ್ಯಸ್ಥರನ್ನು ಹೊಂದಿತ್ತು. ಭಾರತೀಯ ವಾಯುಪಡೆಯೂ ಇದಕ್ಕೆ ಹೊರತಾಗಿಲ್ಲ. ದೇಶದ ರಕ್ಷಣಾ ಪಡೆಗಳಲ್ಲಿ ಅಸಂಖ್ಯಾತ ಕ್ರಿಶ್ಚಿಯನ್ನರು ಸೇವೆ ಸಲ್ಲಿಸುತ್ತಿದ್ದಾರೆ. ಶುದ್ಧ ‘ಹಿಂದೂ ರಾಷ್ಟ್ರ ’ವನ್ನು ಸೃಷ್ಟಿಸಲು ಸಂಘ ಪರಿವಾರದ ಪ್ರಭೃತಿಗಳು ಅವರನ್ನೆಲ್ಲ ಭಾರತೀಯರಲ್ಲ ಎಂದು ಘೋಷಿಸಲು ಹೇಗೆ ಸಾಧ್ಯ?

ದ್ವೇಷ ಮತ್ತು ಅಪನಂಬಿಕೆಯ ವಾತಾವರಣದಿಂದ ಈ ತೀವ್ರಗಾಮಿಗಳು ಅನುಮತಿಸಲ್ಪಟ್ಟ ಮಿತಿಯನ್ನೂ ಮೀರಿ ಉತ್ತೇಜಿತರಾಗಿರುವುದು ದುರಂತವಾಗಿದೆ. ದೇಶದ ಒಟ್ಟು ಜನಸಂಖ್ಯೆಯ ಕೇವಲ ಶೇ.2ರಷ್ಟಿರುವ ಕ್ರಿಶ್ಚಿಯನ್ ಸಮುದಾಯ ಸರಣಿ ಯೋಜಿತ ದಾಳಿಗಳಿಗೆ ಗುರಿಯಾಗುತ್ತಿದೆ. ಈ ತೀವ್ರಗಾಮಿಗಳು ನಂತರ ತನ್ನ ಗಮನವನ್ನು ಮುಸ್ಲಿಮರತ್ತ ತಿರುಗಿಸಿದರೆ (ಅದೇ ಅವರ ಗುರಿಯಾಗಿರುವಂತೆ ತೋರುತ್ತದೆ) ಸಂಭವಿಸಬಹುದಾದ ಪರಿಣಾಮಗಳನ್ನು ಊಹಿಸಿಕೊಳ್ಳಲೂ ನನಗೆ ಭಯವಾಗುತ್ತದೆ.

ಕೆಲವು ದಿನಗಳ ಹಿಂದೆ ನಮ್ಮ ಪ್ರಧಾನಿಯವರು ದಿಲ್ಲಿಯ ಕ್ರಿಶ್ಚಿಯನ್ ಸಮಾರಂಭವೊಂದರಲ್ಲಿ ಮಾತನಾಡಿದಾಗ ನಾನು ಸ್ವಲ್ಪಮಟ್ಟಿಗೆ ನಿರಾಳವಾಗಿದ್ದೆ. ಆದರೆ ಎಲ್ಲ ಸಮುದಾಯಗಳು ಮತ್ತು ಜನರು ಗೌರವಿಸುವ ಮದರ್ ತೆರೇಸಾ ಅವರ ವಿರುದ್ಧ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ಅವರು ಹೊರಹಾಕಿರುವ ಆಕ್ರೋಶವು ನನ್ನನ್ನು ಮತ್ತೆ ಭೀತಿಗೆ ತಳ್ಳಿದೆ. ಮೀನಾಕ್ಷಿ ಲೇಖಿ ಅವರಂತಹ ಬಿಜೆಪಿ ನಾಯಕರು ಭಾಗವತ್‌ರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ನನ್ನನ್ನು ಇನ್ನಷ್ಟು ಭಯಭೀತಗೊಳಿಸಿದೆ.

ಈಗ ನಾನೇನು ಮಾಡಬೇಕು? ನನ್ನ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ನಾನೇನು ಮಾಡಬಹುದು? ನಾನು ಈ ದೇಶದಲ್ಲಿ ಜನಿಸಿದ್ದೇನೆ. ನನ್ನ ಪೂರ್ವಜರೂ, ಸುಮಾರು 5,000 ಅಥವಾ ಅದಕ್ಕೂ ಹೆಚ್ಚು ವರ್ಷಗಳ ಹಿಂದೆ ಇದೇ ದೇಶದಲ್ಲಿ ಹುಟ್ಟಿದ್ದರು. ನನ್ನ ಡಿಎನ್‌ಎ ಅನ್ನು ಪರೀಕ್ಷೆಗೊಳಪಡಿಸಿದರೆ ಅದು ಭಾಗವತ್ ಅವರ ಡಿಎನ್‌ಎಗಿಂತ ಹೆಚ್ಚು ಭಿನ್ನವಾಗಿರುವುದಿಲ್ಲ. ಮಹರ್ಷಿ ಪರಶುರಾಮರ ಕಾಲದಲ್ಲಿ ನನ್ನ ಪೂರ್ವಜರು ಗೋವಾಕ್ಕೆ ಆಗಮಿಸಿದ್ದರು, ಹೀಗಾಗಿ ನನ್ನ ಡಿಎನ್‌ಎ ಮತ್ತು ರಕ್ಷಣಾ ಸಚಿವರ ಡಿಎನ್‌ಎದಲ್ಲಿ ಖಂಡಿತವಾಗಿಯೂ ಯಾವುದೇ ವ್ಯತ್ಯಾಸವಿರುವುದಿಲ್ಲ. ವಂಶವೃಕ್ಷದ ಯಾವುದೋ ಹಂತದಲ್ಲಿ ಬಹುಶಃ ನಾವು ಒಬ್ಬರೇ ಪೂರ್ವಜರನ್ನು ಹೊಂದಿರಬಹುದು. ನನ್ನ ಪೂರ್ವಜರು ಮತಾಂತರಗೊಂಡಿದ್ದರು ಮತ್ತು ಅವರ ಪೂರ್ವಜರು ಮತಾಂತರಗೊಂಡಿರಲಿಲ್ಲ ಎನ್ನುವುದು ಇತಿಹಾಸದಲ್ಲಿನ ಒಂದು ಆಕಸ್ಮಿಕವಾಗಿದೆ. ಹಾಗಾಗಲು ಕಾರಣವಾಗಿದ್ದ ಸಂದರ್ಭಗಳ ಬಗ್ಗೆ ನನಗೆ ಗೊತ್ತಿಲ್ಲ ಮತ್ತು ಎಂದಿಗೂ ಗೊತ್ತಾಗುವುದೂ ಇಲ್ಲ.

ಆದರೂ ನನಗೆ ಜನ್ಮ ನೀಡಿದ ದೇಶದ ಏಳಿಗೆಗೆ ನಾನು ಸಲ್ಲಿಸಿರುವ ಪುಟ್ಟ ಕಾಣಿಕೆಯನ್ನು ಬಹುಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದವರು ಈಗಲೂ ನೆನಪಿನಲ್ಲಿಟ್ಟುಕೊಂಡಿದ್ದಾರೆ ಎನ್ನುವುದು ಈ ಇಳಿವಯಸ್ಸಿನಲ್ಲಿ ನನ್ನಲ್ಲಿ ಮತ್ತೊಮ್ಮೆ ಭರವಸೆಯನ್ನು ತುಂಬಿದೆ. ನನ್ನ ಎನ್‌ಜಿಒ ‘ದಿ ಬಾಂಬೆ ಮದರ್ಸ್‌ ಆ್ಯಂಡ್ ಚಿಲ್ಡ್ರನ್ ವೆಲ್‌ಫೇರ್ ಸೊಸೈಟಿ’ಯು ದತ್ತು ಪಡೆದಿರುವ ಶಾಲೆಗಳಿಗೆ ಭೇಟಿ ನೀಡಲು ಇತ್ತೀಚೆಗೆ ಪುಣೆ ಜಿಲ್ಲೆ ಖೇಡ್ ತಾಲೂಕಿನ ರಾಜಗುರುನಗರಕ್ಕೆ ಪ್ರಯಾಣಿಸುತ್ತಿದ್ದಾಗ ಇಡ್ಲಿ-ಚಹಾಕ್ಕಾಗಿ ಲೋನಾವಳಾದಲ್ಲಿ ಕಾರು ನಿಲ್ಲಿಸಿದ್ದೆ. ಹೊಟೇಲ್‌ನಲ್ಲಿ ನನ್ನ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಮಧ್ಯವಯಸ್ಕ ಮಹಾರಾಷ್ಟ್ರೀಯರ ಗುಂಪೊಂದು ನನ್ನನ್ನು ಗುರುತಿಸಿತ್ತು ಮತ್ತು ನನಗೆ ಶುಭಾಶಯಗಳನ್ನ್ನು ಸಲ್ಲಿಸಿ ಮಾತನಾಡಿಸಿತ್ತು. ಕುವೈತ್‌ನಿಂದ ಮರಳುತ್ತಿದ್ದ (ಇದು ನನಗೆ ನಂತರ ಗೊತ್ತಾಗಿತ್ತು) ಬ್ರಾಹ್ಮಣ ದಂಪತಿ ಕೂಡ ನಾನು ನಾನೇನೆಯೇ ಎನ್ನ್ನುವುದನ್ನು ತಿಳಿದುಕೊಳ್ಳಲು ನನ್ನ ಬಳಿ ಬಂದು ವಿಚಾರಿಸಿದ್ದರು ಮತ್ತು ನನ್ನೊಂದಿಗೆ ಫೋಟೊ ತೆಗೆದುಕೊಂಡಿದ್ದರು.

ನನಗೆ ಪರಿಚಯವಿಲ್ಲದ, ನಾನು ಅವರಿಗೆ ನೇರವಾಗಿ ಸೇವೆ ಸಲ್ಲಿಸಲಾಗದ ಸಾಮಾನ್ಯ ಹಿಂದೂಗಳು ನನ್ನ ನಿವೃತ್ತಿಯ 25ವರ್ಷಗಳ ಬಳಿಕವೂ ನನ್ನ ಬಗ್ಗೆ ಗೌರವವನ್ನಿಟ್ಟುಕೊಂಡಿದ್ದಾರೆ ಮತ್ತು ನನ್ನ ಸ್ನೇಹಿತರಾಗಲು ಬಯಸುತ್ತಿದ್ದಾರೆ ಎನ್ನುವುದು ನನ್ನ ಹೃದಯವನ್ನು ತಟ್ಟಿತ್ತು. ಇದು ಅಪನಂಬಿಕೆ ಮತ್ತು ದ್ವೇಷವನ್ನು ಹರಡಲು ಬಯಸುವ ಯಾವುದೇ ಸಿದ್ಧಾಂತಕ್ಕೆ ಸಾಮಾನ್ಯ ಹಿಂದೂ ಪುರುಷರು ಮತ್ತು ಮಹಿಳೆಯರು ಬಲಿಯಾಗುವುದಿಲ್ಲ ಎಂದು ನಾನು ಆಶಿಸುವಂತೆ ಮಾಡಿದೆ.

(2015ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಲೇಖನವನ್ನು ಸಾಂದರ್ಭಿಕವಾಗಿ ಇತ್ತೀಚೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ