ಬೆಂಕಿ ಇಲ್ಲದಿದ್ದರೆ ಏನಾಗುತ್ತಿತ್ತು?

Update: 2020-01-26 06:22 GMT

ತಾತ ಪತ್ರಿಕೆಯಲ್ಲಿನ ಸುದ್ದಿ ಓದುತ್ತಿದ್ದರು. ಅಮೆಝಾನ್ ಕಾಡಿಗೆ ಬೆಂಕಿಬಿದ್ದ ಸುದ್ದಿ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿತ್ತು. ಛೇ! ಹೀಗಾಗಬಾರದಿತ್ತು ಎಂದು ಉದ್ಗಾರ ತೆಗೆದರು. ಪಕ್ಕದಲ್ಲೇ ಆಟವಾಡುತ್ತಿದ್ದ ಸೋನು ಏನಾಯ್ತು ತಾತ? ಎಂದ. ಅಮೆಝಾನ್ ಕಾಡಿಗೆ ಬೆಂಕಿಬಿದ್ದು ಬಹುತೇಕ ಕಾಡಿನ ಸಂಪತ್ತು ನಾಶವಾಗಿದೆಯಂತೆ. ಹೀಗಾದರೆ ಜೀವಿಗಳ ಗತಿಯೇನು? ಎಂದರು ತಾತ. ಬೆಂಕಿ ಇಲ್ಲದೇ ಇದ್ರೆ ಚೆನ್ನಾಗಿರುತ್ತಿತ್ತು ಅಲ್ವಾ ತಾತ ಎಂದ ಸೋನು. ಇಲ್ಲಪ್ಪ ಬೆಂಕಿ ನಮ್ಮೆಲ್ಲರ ಜೀವನದ ಬಹುಮುಖ್ಯ ಸಂಶೋಧನೆ ಎಂದರು ತಾತ. ಬೆಂಕಿಯನ್ನು ಸಂಶೋಧಿಸಿದವರು ಯಾರು ತಾತ?. ಅದು ಇಲ್ಲದಿದ್ದರೆ ಏನಾಗುತ್ತಿತ್ತು? ಎಂದ ಸೋನು. ಅವನ ಪ್ರಶ್ನೆ ನಿಮ್ಮ ಪ್ರಶ್ನೆಯೂ ಆಗಿರಬಹುದು ಅಲ್ಲಾ? ಅದಕ್ಕಾಗಿ ಮುಂದೆ ಓದಿ.ಮಾನವನ ಮೊತ್ತಮೊದಲ ಆವಿಷ್ಕಾರವೆಂದರೆ ಬೆಂಕಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಬೆಂಕಿಯನ್ನು ಯಾರೂ ಸಂಶೋಧಿಸಲಿಲ್ಲ. ಅದಾಗಲೇ ನಮ್ಮ ಪ್ರಕೃತಿಯಲ್ಲಿ ಇತ್ತು. ನೂರಾರು ಸಾವಿರ ವರ್ಷಗಳ ಹಿಂದಿನ ನಮ್ಮ ಪೂರ್ವಜರು ಬೆಂಕಿಯ ಉಪಯೋಗವನ್ನು ಕಂಡುಕೊಂಡಿದ್ದರು. ಪೂರ್ವ ಇತಿಹಾಸ ಕಾಲದ ಮಾನವ ಹಸಿ ಮಾಂಸವನ್ನೇ ತನ್ನ ಆಹಾರವನ್ನಾಗಿಸಿಕೊಂಡಿದ್ದ. ಬೇಟೆಯೊಂದು ಅನಿರೀಕ್ಷಿತವಾಗಿ ಕಾಡಿನ ಬೆಂಕಿಯಲ್ಲಿ ಬಿತ್ತು. ಹಸಿವಿನಿಂದ ಬಳಲಿದ ಮಾನವ ಬೆಂಕಿಗೆ ಬಿದ್ದ ಬೇಟೆಯನ್ನು ತಿಂದಾಗ ವಿಶೇಷ ಎನಿಸಿತು. ಹಸಿಯಾಗಿ ತಿನ್ನುತ್ತಿದ್ದ ಮಾಂಸ ಬೆಂಕಿಯಲ್ಲಿ ಬೆಂದಿದ್ದರಿಂದ ರುಚಿಯಾಗಿತ್ತು. ನಂತರದ ದಿನಗಳಲ್ಲಿ ಮಾಂಸವನ್ನು ಬೆಂಕಿಯಲ್ಲಿ ಬೇಯಿಸುವುದನ್ನು ಕಲಿತ. ಹೀಗೆ ಪ್ರಾರಂಭವಾದ ಬೆಂಕಿಯ ಬಳಕೆ ಇಂದು ದೈನಂದಿನ ಭಾಗವಾಗಿದೆ. ಇಂತಹ ಮಹತ್ತರ ಬೆಂಕಿಯ ಮಹತ್ವವನ್ನು ಇಂದಿನ ಪೀಳಿಗೆ ಲಘುವಾಗಿ ಪರಿಗಣಿಸಿದೆ ಎಂಬುದು ಹಾಸ್ಯಾಸ್ಪದವಾದರೂ ಒಂದು ಕ್ಷಣ ಚಿಂತಿಸಿಬೇಕಾದ ಅನಿವಾರ್ಯ ಸಂಗತಿ. ಒಂದು ವೇಳೆ ಬೆಂಕಿಯ ಉಪಯೋಗ ಆಗದಿದ್ದರೆ ಜೀವಿಗಳು ಹೇಗಿರುತ್ತಿದ್ದವು? ಬೇಯಿಸಿದ ಆಹಾರವಿಲ್ಲದೇ ನಾವು ಏನನ್ನು ತಿನ್ನಬೇಕಾಗಿತ್ತು? ಸೂರ್ಯ ಮುಳುಗಿದ ನಂತರ ನಮ್ಮ ಜೀವನ ಹೇಗಿರುತ್ತಿತ್ತು? ಬೆಂಕಿಯ ಕೊರತೆಯು ನಮ್ಮ ಬುದ್ದಿವಂತಿಕೆಯನ್ನು ಮೊಟಕುಗೊಳಿಸುತ್ತಿತ್ತೇ? ಎಂಬ ಹಲವಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ.

ಬೆಂಕಿ ಬಳಕೆಯ ಆರಂಭದ ಕಾಲದಲ್ಲಿ ಸ್ಟಾಕ್ ಮಾರುಕಟ್ಟೆಗಳು ಇದ್ದಿದ್ದರೆ ಎಲ್ಲರೂ ಬೆಂಕಿಯನ್ನು ಗುಹೆಗಳಲ್ಲಿ ಸ್ಟಾಕ್ ಮಾಡಲು ಹೂಡಿಕೆ ಮಾಡುತ್ತಿದ್ದರು ಎಂದೆನಿಸದೇ ಇರದು. ಏಕೆಂದರೆ ಬೆಂಕಿಯು ಸಾರ್ವಕಾಲಿಕ ಪ್ರಮುಖ ಆವಿಷ್ಕಾರವಾಗಿದೆ. ಬೇಯಿಸಿದ ಆಹಾರ, ಉಷ್ಣತೆ, ಶಸ್ತ್ರಾಸ್ತ್ರಗಳ ತಯಾರಿಕೆ, ಕೈಗಾರಿಕೆ, ತಂತ್ರಜ್ಞಾನ, ವೈದ್ಯಕೀಯ ಉದ್ಯೋಗಗಳೆಲ್ಲವೂ ಬೆಂಕಿಯನ್ನೇ ಅವಲಂಬಿಸಿವೆ.

ಬೆಂಕಿ ಇಲ್ಲದೇ ಇದ್ದಿದ್ದರೆ ನಮ್ಮ ಸುತ್ತಲಿನ ಪ್ರಪಂಚ ಸಂಪೂರ್ಣವಾಗಿ ಈಗಿನಂತೆ ವೈವಿಧ್ಯಮಯವಾಗಿ ಇರುತ್ತಿರಲಿಲ್ಲ. ಎಲ್ಲವೂ ಒಂದೇ ರೀತಿಯಲ್ಲಿ ಇರುತ್ತಿತ್ತು. ಎಲ್ಲರ ಆಹಾರವೂ ಹಸಿಯಾಗಿರುತ್ತಿತ್ತು. ಬಹುತೇಕ ನಮ್ಮೆಲ್ಲ ಉತ್ಪಾದನೆಗಳು ಸ್ಥಗಿತಗೊಂಡಿರುತ್ತಿದ್ದವು. ಇಂದು ನಾವೆಲ್ಲಾ ದಿನದ ಬಹುತೇಕ ಸಮಯದಲ್ಲಿ ಚಟುವಟಿಕೆಯಿಂದ ಇರುತ್ತೇವೆ. ಒಂದಲ್ಲ ಒಂದು ಕೆಲಸದಲ್ಲಿ ತೊಡಗಿರುತ್ತೇವೆ. ಇದಕ್ಕೆಲ್ಲ ಕಾರಣ ಬೆಂಕಿಯ ಬಳಕೆ. ಬೆಂಕಿ ಇಲ್ಲದಿದ್ದರೆ ನಾವೆಲ್ಲ ಕೆಲಸವಿಲ್ಲದೇ ಬಹುತೇಕ ವಿಶ್ರಾಂತಿಯಲ್ಲಿ ಕಾಲ ಕಳೆಯಬೇಕಾಗಿತ್ತು. ಬೆಂಕಿಯ ರೂಪದ ಬೆಳಕನ್ನು ಕಂಡುಹಿಡಿದ ಮಾನವ ದಿನದ 16 ಗಂಟೆಗಳ ಕಾಲ ಸಕ್ರಿಯವಾಗಿ ಚಟುವಟಿಕೆಗಳಲ್ಲಿ ತೊಡಗಿರುತ್ತಾನೆ. ಬೆಂಕಿ ಇಲ್ಲದಿದ್ದರೆ ರಾತ್ರಿಯಾದೊಡನೆ ಕತ್ತಲೆ ಆವರಿಸುತ್ತಿತ್ತು. ನಮ್ಮೆಲ್ಲ ಚಟುವಟಿಕೆಗಳು ಸ್ತಬ್ಧವಾಗುತ್ತಿದ್ದವು. ಗುಣಮಟ್ಟದ ನಿದ್ದೆಯಿಲ್ಲದೇ ಕನಸು ಕಾಣಲಾಗುತ್ತಿರಲಿಲ್ಲ. ನಿದ್ದೆಯಿಲ್ಲದೇ ಮೆದುಳು ಸಕ್ರಿಯವಾಗಿ ಕೆಲಸ ಮಾಡುತ್ತಿರಲಿಲ್ಲ. ನೆನಪಿನ ಶಕ್ತಿ ಹಾಳಾಗುತ್ತಿತ್ತು. ನಮ್ಮ ಬುದ್ದಿವಂತಿಕೆ ಅಭಿವೃದ್ಧಿ ಹೊಂದುತ್ತಲೇ ಇರಲಿಲ್ಲ. ಕತ್ತಲೆಯಲ್ಲಿ ಕ್ರಿಮಿಕೀಟಗಳು ಹಾಗೂ ಇನ್ನಿತರ ಅಪಾಯಕಾರಿ ಪ್ರಾಣಿಗಳಿಂದ ನಮ್ಮನ್ನು ರಕ್ಷಿಸುಕೊಳ್ಳುವುದೇ ಪ್ರಯಾಸದ ಕೆಲಸವಾಗುತ್ತಿತ್ತು. ಬೆಂಕಿಯ ಬಳಕೆ ಪರಿಚಯಿಸಿದ ಬಹುದೊಡ್ಡ ಕಲಿಕೆಯೆಂದರೆ ವೈವಿಧ್ಯಮಯ ಅಡುಗೆ ಕಲೆ. ಮಾಂತ್ರಿಕ ಜ್ವಾಲೆಗಳು ನಮ್ಮ ಜೀವನದಲ್ಲಿ ಬಾರದೇ ಇದ್ದಿದ್ದರೆ ನಮ್ಮ ಇಷ್ಟದ ಪಿಜ್ಜಾ, ಬರ್ಗರ್, ಹಾಟ್ ಚಿಪ್ಸ್, ಸ್ಪೈಸಿ ಕರ್ರಿಗಳನ್ನು ತಿನ್ನಲು ಆಗುತ್ತಲೇ ಇರಲಿಲ್ಲ. ಬರ್ತ್‌ಡೇ ಆಚರಿಸಿಕೊಳ್ಳಲು ಕೇಕ್ ಇರುತ್ತಿರಲಿಲ್ಲ. ಬ್ರೆಡ್, ಬನ್, ಟೋಸ್ಟ್ ಇವುಗಳ ರುಚಿ ಗೊತ್ತಾಗುತ್ತಲೇ ಇರಲಿಲ್ಲ. ಬೆಂಕಿಯ ಉಷ್ಣವು ಹಸಿಮಾಂಸವನ್ನು ಬೇಯಿಸುವುದರ ಜೊತೆಗೆ ಅದರಲ್ಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಅಂತೆಯೇ ಆಹಾರವನ್ನು ಸುಲಭವಾಗಿ ಅಗಿಯಲು ಸಹಾಯ ಮಾಡುತ್ತದೆ. ಬೆಂಕಿ ಇಲ್ಲದಿದ್ದರೆ ಮನೆಗಳನ್ನು ಕಟ್ಟಲು ಸುಟ್ಟ ಇಟ್ಟಿಗೆಗಳು ಇರುತ್ತಿರಲಿಲ್ಲ. ಅದಿರನ್ನು ಕರಗಿಸಿ ನಮಗೆ ಬೇಕಾದ ವಸ್ತುಗಳನ್ನು ತಯಾರಿಸಲು ಆಗುತ್ತಿರಲಿಲ್ಲ. ಕೈಗಾರಿಕೆಗಳು ಅಭಿವೃದ್ಧಿಯಾಗುತ್ತಲೇ ಇರಲಿಲ್ಲ. ಕೈಗಾರಿಕೆಗಳು ಇಲ್ಲದೇ ಹೋಗಿದ್ದರೆ ನಾವು ಬಟ್ಟೆ ಇಲ್ಲದೇ ಗಿಡಮರಗಳ ಎಲೆ ಅಥವಾ ಪ್ರಾಣಿಗಳ ತುಪ್ಪಳವನ್ನೇ ಬಟ್ಟೆಯಾಗಿಸಿಕೊಳ್ಳಬೇಕಿತ್ತು. ಶತ್ರುಗಳಿಂದ ರಕ್ಷಿಸಿಕೊಳ್ಳಲು ಹೊಸ ಆಯುಧಗಳು ಇಲ್ಲದೇ ಸಾಯಬೇಕಾಗುತಿತ್ತು. ನಮ್ಮ ದೈನಂದಿನ ಬದುಕು ತುಂಬಾ ನೀರಸವಾಗಿರುತ್ತಿತ್ತು. ಹೊಸ ನಾಗರಿಕತೆ ಮತ್ತು ಹೊಸ ಸಂಸ್ಕೃತಿಗಳ ಉದಯವಾಗುತ್ತಿರಲಿಲ್ಲ. ಜಗತ್ತು ತುಂಬಾ ವಿಶಾಲ ಎನಿಸುತ್ತಿತ್ತು. ಬೇರೆ ರಾಜ್ಯ/ರಾಷ್ಟ್ರಗಳ ಜನರೊಂದಿಗಿನ ಸಂಪರ್ಕ, ಸಂವಹನ ಸಾಧ್ಯವಾಗುತ್ತಲೇ ಇರಲಿಲ್ಲ. ಏಕೆಂದರೆ ಬೆಂಕಿ ಇಲ್ಲದ್ದರೆ ಯಾವ ವಾಹನಗಳು ಆವಿಷ್ಕಾರವಾಗುತ್ತಿರಲಿಲ್ಲ. ಬೆಂಕಿಯ ಬಳಕೆ ಇಲ್ಲದೇ ಹೋಗಿದ್ದರೆ ವಿಜ್ಞಾನ ಮತ್ತು ತಂತ್ರಜ್ಞಾನಗಳು ಅಭಿವೃದ್ಧಿ ಹೊಂದುತ್ತಲೇ ಇರಲಿಲ್ಲ. ಮೊಬೈಲ್, ಕಂಪ್ಯೂಟರ್, ಟಿ.ವಿ. ಇವುಗಳ ಪರಿಚಯವೇ ನಮಗೆ ಇರುತ್ತಿರಲಿಲ್ಲ. ಕಾಡಿನ ಹಣ್ಣು ಹಂಪಲು, ಗಡ್ಡೆ ಗೆಣಸು ತಿನ್ನುತ್ತಾ ನದಿ ನೀರನ್ನು ಕುಡಿಯುತ್ತಾ ಕಾಡಿನ ಇನ್ನಿತರ ಪ್ರಾಣಿಗಳಂತೆ ನಾವೂ ಒಂದು ಪ್ರಾಣಿಯಾಗಿ ಇರಬೇಕಾಗಿತ್ತು. ಇಂತಹ ಮಹತ್ತರ ಉಪಯೋಗವುಳ್ಳ ಬೆಂಕಿಗೆ ಮತ್ತು ಅದನ್ನು ಬಳಸಲು ದಾರಿ ಮಾಡಿಕೊಟ್ಟ ನಮ್ಮ ಪೂರ್ವಜರಿಗೆ ಥ್ಯಾಂಕ್ಸ್ ಹೇಳಲೇಬೇಕಲ್ಲವೇ?

Writer - ಆರ್.ಬಿ. ಗುರುಬಸವರಾಜ

contributor

Editor - ಆರ್.ಬಿ. ಗುರುಬಸವರಾಜ

contributor

Similar News