ರೂ. 2000 ಖೋಟಾ ನೋಟುಗಳ ಮುದ್ರಣ ಎಷ್ಟೊಂದು ಸುಲಭ?

Update: 2020-01-26 18:30 GMT

2018ರ ಅಂತ್ಯದ ವೇಳೆಗೆ, ಅಲ್ಲಿ 34,680 2000 ರೂಪಾಯಿ ಖೋಟಾ ನೋಟುಗಳನ್ನು (ಒಟ್ಟು 6.93 ಕೋಟಿ ರೂ. ವೌಲ್ಯ) ವಶಪಡಿಸಿಕೊಳ್ಳಲಾಗಿತ್ತು. ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಳ (3.5 ಕೋಟಿ) ತಮಿಳುನಾಡು (ರೂ. 2.8 ಕೋಟಿ) ಮತ್ತು ಉತ್ತರ ಪ್ರದೇಶ (ರೂ. 2.6 ಕೋಟಿ) ಇವೆ.

‘‘ಒಂದು ದೇಶದ ಇತಿಹಾಸದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತಾನೂ ಆ ಕ್ಷಣದ ಒಂದು ಭಾಗವಾಗಿರಬೇಕು ಅನ್ನಿಸುವ , ತಾನು ಕೂಡ ದೇಶದ ಅಭಿವೃದ್ಧಿಗೆ ತನ್ನ ಕಾಣಿಕೆಯನ್ನು ನಿಡಬೇಕು ಅನ್ನಿಸುವ ಕ್ಷಣಗಳು ಬರುತ್ತವೆ. ಆದರೆ ಅಂತಹ ಕ್ಷಣಗಳು ಅಪರೂಪಕ್ಕೊಮ್ಮೆ ಬರುತ್ತವೆ’’.

1000 ರೂ. ಮತ್ತು 500 ರೂ. ನೋಟುಗಳನ್ನು ರದ್ದುಗೊಳಿಸುವ ತನ್ನ ಐತಿಹಾಸಿಕ ಘೋಷಣೆಯನ್ನು ನವೆಂಬರ್ 8, 2016ರಂದು ಮಾಡಿದ ಟಿವಿ ಪ್ರಸಾರ ಭಾಷಣದಲ್ಲಿ ಪ್ರಧಾನಿ ಮೋದಿಯವರು ಹೇಳಿದ ಮಾತುಗಳಿವು. ಖೋಟಾನೋಟು ಜಾಲಗಳು, ಕಾಳಧನ ಮತ್ತು ಭ್ರಷ್ಟಚಾರದ ವಿರುದ್ಧ ಹೋರಾಡಲು, ಇವುಗಳನ್ನು ನಿರ್ಮೂಲನಗೊಳಿಸಲು ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ರಾತ್ರಿ ಬೆಳಗಾಗುವುದರೊಳಗೆ 1 ಸಾವಿರ ರೂ. ಹಾಗೂ 500 ರೂಪಾಯಿಯ ನೋಟುಗಳನ್ನು ನಿಷೇಧಿಸಿದ ಸರಕಾರ 2000 ಮತ್ತು 500ರೂಪಾಯಿಯ ಹೊಸ ನೋಟುಗಳನ್ನು ಬ್ಯಾಂಕ್ ಚಲಾವಣೆಗೆ ತಂದಿತು. ಈ ನೋಟುಗಳಿಗೆ ಈ ಹಿಂದೆ ಇರದಿದ್ದ ಹೆಚ್ಚುವರಿ ಭದ್ರತಾ ಲಕ್ಷಣಗಳಿವೆ. ಖೋಟಾ ನೋಟು ಮುದ್ರಿಸುವವರಿಗೆ ಈ ನೋಟುಗಳನ್ನು ಕಾಪಿ ಮಾಡಲು ಸಾಧ್ಯವಾಗುವುದಿಲ್ಲ ಎಂದೂ ಅದು ಹೇಳಿತು. ಆದರೆ ಮೂರು ವರ್ಷಗಳ ಬಳಿಕ, ಈ ಭದ್ರತಾ ತಡೆಗಳನ್ನು ಮೀರುವುದು ಖೋಟಾ ನೋಟು ಜಾಲದ ಮಂದಿಗೆ ಕಷ್ಟವಾಗಲಿಲ್ಲ ಎಂಬುದು ಸ್ವತಃ ಸರಕಾರವೇ ಪ್ರಕಟಿಸಿರುವ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ (ಎನ್‌ಸಿಆರ್‌ಬಿ) ದತ್ತಾಂಶಗಳಿಂದ ಸ್ಪಷ್ಟವಾಗುತ್ತದೆ.

ಅಲ್ಲದೆ, ನೋಟು ರದ್ದತಿ ಭಯೋತ್ಪಾದಕರ ಜಾಲಗಳನ್ನು ನಾಶಪಡಿಸುತ್ತದೆ ಮತ್ತು ಸರಕಾರದ ನಿರ್ಧಾರವು ‘‘ನಮ್ಮ ದೇಶವನ್ನು ಶುದ್ಧಗೊಳಿಸುವುದಕ್ಕಾಗಿ ನಡೆಯುವ ಒಂದು ಚಳವಳಿ’’ ಎಂದು ಕೂಡ ಪ್ರಧಾನಿಯವರು ಹೇಳಿದ್ದರು.

  ಆದ್ದರಿಂದ ಖೋಟಾನೋಟುಗಳ ವಿರುದ್ಧ ಹೋರಾಡಲು 2000 ರೂಪಾಯಿ ನೋಟುಗಳನ್ನು ಚಲಾವಣೆಗೆ ತಂದು ಮೂರು ವರ್ಷಗಳ ಬಳಿಕ ಭಾರತ ಅರ್ಥವ್ಯವಸ್ಥೆ ಎಷ್ಟು ‘‘ಶುದ್ಧೀಕರಣ’’ಗೊಂಡಿದೆ? ಎಂದು ನೋಡುವ ಎನ್‌ಸಿಆರ್‌ಬಿಯ ‘ಕ್ರೈಮ್ ಇನ್ ಇಂಡಿಯಾ’ ಎಂಬ ಇತ್ತೀಚೆಗೆ ಪ್ರಕಟವಾದ ವರದಿಯ ಪ್ರಕಾರ 2017 ಮತ್ತು 2018ರಲ್ಲಿ ಕಾನೂನು ಅನುಷ್ಠಾನ ಅಧಿಕಾರಿಗಳು 46.06 ಕೋಟಿ ರೂಪಾಯಿ ವೌಲ್ಯದ ಫೇಕ್ ಇಂಡಿಯಾ ಕರೆನ್ಸಿ ನೋಟ್ (ಎಫ್‌ಐಸಿಎನ್-ಖೋಟಾ ಕರೆನ್ಸಿ ನೋಟ್)ಗಳನ್ನು ವಶಪಡಿಸಿಕೊಂಡರು. ಇದರಲ್ಲಿ 56.31 ಶೇಕಡಾ ನೋಟುಗಳು 2000 ರೂ.ಯ ನೋಟುಗಳು.

2017ರಲ್ಲಿ 28.10 ಕೋಟಿ ರೂಪಾಯಿ ನೋಟುಗಳಲ್ಲಿ 53.30 ಶೇ.ದಷ್ಟು 2000 ರೂ. ನೋಟುಗಳಿದ್ದರೆ, 2018ರಲ್ಲಿ 2000 ರೂಪಾಯಿ ನೋಟುಗಳ ಪಾಲು 61.01 ಶೇಕಡಾಕ್ಕೆ ಏರಿತು. ಅಂದರೆ ಖೋಟಾ ನೋಟು ತಯಾರಕರು ಈ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುವುದರಲ್ಲಿ ಹೆಚ್ಚು ಹೆಚ್ಚು ಯಶಸ್ವಿಗಳಾಗುತ್ತಿದ್ದರು ಎಂದಂತಾಯಿತು.

ಕೆಲವೇ ರಾಜ್ಯಗಳಲ್ಲಿ ಈ ಖೋಟಾ ನೋಟು ದಂಧೆ ಕೇಂದ್ರೀಕೃತವಾಗಿದೆ ಎಂಬುದು ವರದಿಯಿಂದ ತಿಳಿದು ಬರುವ ಇನ್ನೊಂದು ಅಂಶ. ಗುಜರಾತ್ ಈ ದಂಧೆಯಲ್ಲಿ ಅಗ್ರಸ್ಥಾನದಲ್ಲಿದೆ. 2018ರ ಅಂತ್ಯದ ವೇಳೆಗೆ, ಅಲ್ಲಿ 34,680 2000 ರೂಪಾಯಿ ಖೋಟಾ ನೋಟುಗಳನ್ನು (ಒಟ್ಟು 6.93 ಕೋಟಿ ರೂ. ವೌಲ್ಯ) ವಶಪಡಿಸಿಕೊಳ್ಳಲಾಗಿತ್ತು. ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಳ (3.5 ಕೋಟಿ) ತಮಿಳುನಾಡು (ರೂ. 2.8 ಕೋಟಿ) ಮತ್ತು ಉತ್ತರ ಪ್ರದೇಶ (ರೂ. 2.6 ಕೋಟಿ) ಇವೆ.

ಸರಕಾರವು ನೋಟು ರದ್ದತಿಯ ಘೋಷಣೆ ಮಾಡಿದ್ದ ಕೆಲವೇ ದಿನಗಳ ಬಳಿಕ ಮಾರಕಟ್ಟೆಯಲ್ಲಿ ರೂ. 2000ದ ಖೋಟಾ ನೋಟುಗಳು ಲಭ್ಯವಿದ್ದವೆಂಬುದನ್ನು ಎನ್‌ಸಿಆರ್‌ಬಿ ದಾಖಲೆ ತೋರಿಸುತ್ತದೆ. ನಮ್ಮ ದೇಶದಲ್ಲಿ ಖೋಟಾ ನೋಟುಗಳ ಬಗ್ಗೆ ಮಾಹಿತಿ ಪಡೆಯಲು ಎರಡು ರೀತಿಯ ಮೂಲಗಳಿವೆ: ಎನ್‌ಸಿಆರ್‌ಬಿ ವರದಿ ಮತ್ತು ಆರ್‌ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ವರದಿ. ಆರ್‌ಬಿಐಯ 2018-2019ರ ವರದಿ ಕೂಡ 2017-2018ರ ಹಣಕಾಸು ವರ್ಷದಲ್ಲಿ 2000 ರೂಪಾಯಿ ಒಟ್ಟು 17,929 ಖೋಟಾ ನೋಟುಗಳನ್ನು ಪತ್ತೆ ಮಾಡಲಾಯಿತು ಎಂದು ಹೇಳಿದೆ.

ಆರ್‌ಬಿಐ ವರದಿಯಲ್ಲಿರುವ ಇನ್ನೊಂದು ಆಘಾತಕಾರಿ ಅಂಶವೆಂದರೆ, 500 ರೂಪಾಯಿ (ಹೊಸ ಸೀರೀಸ್‌ನ) ಖೋಟಾ ನೋಟುಗಳ ಸಂಖ್ಯೆಯಲ್ಲಿ 121 ಶೇಕಡಾದಷ್ಟು ಹೆಚ್ಚಳವಾಗಿದೆ ಎಂಬುದು.

2016ರ ನವೆಂಬರ್ 8ರ ಪ್ರಧಾನಿಯವರ ಘೋಷಣೆಯಾದ ಕೆಲವೇ ದಿನಗಳಲ್ಲಿ, ನವೆಂಬರ್ 9, 2016ರ ಮತ್ತು ಮಾರ್ಚ್ 31, 2017ರ ನಡುವೆ ಬ್ಯಾಂಕ್‌ಗಳು 2000 ರೂಪಾಯ ಮುಖಬೆಲೆಯ 638 ಖೋಟಾ ನೋಟುಗಳನ್ನು ಪತ್ತೆ ಮಾಡಿದವೆಂದು ಆರ್‌ಬಿಐ ವರದಿ ಕೂಡ ಹೇಳಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಆರ್‌ಬಿಐ 2000 ರೂಪಾಯಿ ನೋಟುಗಳ ಮುದ್ರಣವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಅಥವಾ ಕಡಿಮೆ ಸಂಖ್ಯೆಯ ನೋಟುಗಳನ್ನು ಮುದ್ರಿಸುತ್ತಿದೆ ಎಂದು ಮೀಡಿಯಾದ ವರದಿಗಳು ಆಗಾಗ ಹೇಳುತ್ತ ಬಂದಿವೆ. ಕಳೆದ ವರ್ಷ ಅಕ್ಟೋಬರ್ 14ರಂದು, ದಿ ನ್ಯೂ ಇಂಡಿಯನ್ ಎಕ್ಸ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ಆ ಹಣಕಾಸು ವರ್ಷದಲ್ಲಿ ಆರ್‌ಬಿಐ ಒಂದೇ ಒಂದು 2000 ರೂ. ನೋಟನ್ನು ಮುದ್ರಿಸಿಲ್ಲ. 2016-17ರಲ್ಲಿ ಆರ್‌ಬಿಐ 3,542.991 ಮಿಲಿಯ 2000 ರೂ. ನೋಟುಗಳನ್ನು ಮುದ್ರಿಸಿತ್ತು. 2017-18ರಲ್ಲಿ ಇದನ್ನು 111.507 ಮಿಲಿಯ ನೋಟುಗಳಿಗೆ ಇಳಿಸಲಾಯಿತು.

ಮಾರುಕಟ್ಟೆಯಿಂದ ಈ ನೋಟುಗಳನ್ನು ಕ್ರಮೇಣ ಹಿಂದಕ್ಕೆ ಪಡೆಯಲಾಗುತ್ತಿದ್ದೆಯೋ ಇಲ್ಲವೋ ಎಂಬ ಪ್ರಶ್ನೆಯ ನಡುವೆ ಒಂದು ಅಂಶವಂತೂ ಸ್ಪಷ್ಟವಾಗಿದೆ: ಸರಕಾರದ ದತ್ತಾಂಶಗಳ ಪ್ರಕಾರವೇ ಈ ಹೊಸ ಶ್ರೇಣಿಯ ನೋಟುಗಳು, ನೋಟುಗಳ ರದ್ದತಿಯ ಬಳಿಕ, ಭಾರತದಲ್ಲಿ ಖೋಟಾನೋಟುಗಳ ಮುದ್ರಣವನ್ನು ಪಡೆಯುವಲ್ಲಿ ವಿಫಲವಾಗಿವೆ.

Writer - ಮುಖೇಶ್ ರಾವತ್

contributor

Editor - ಮುಖೇಶ್ ರಾವತ್

contributor

Similar News

ಜಗದಗಲ
ಜಗ ದಗಲ