ಬರದ ನಾಡಿನ ಬವಣೆ ನೀಗಿಸಲಿ ಸೋಲಾರ್ ಪಾರ್ಕ್

Update: 2020-01-30 18:33 GMT

ಕಲ್ಲುಗಳಿಂದ ಕೂಡಿದ ಬೆಟ್ಟ ಗುಡ್ಡಗಳಿಂದ ಆವರಿಸಲ್ಪಟ್ಟಿರುವ ಎತ್ತರದ ಪ್ರಸ್ಥಭೂಮಿ ಈ ಪಾವಗಡ ನಾಡು. ವರ್ಷಕ್ಕೆ ಸುಮಾರು 300ಕ್ಕೂ ಹೆಚ್ಚು ದಿನಗಳು ಸುಡುಬಿಸಿಲಿನಿಂದ ಕೂಡಿರುವ ಈ ಪ್ರದೇಶವನ್ನು ಕಳೆದ ಸುಮಾರು 60 ವರ್ಷಗಳಿಂದಲೂ ಬರಪೀಡಿತ ಪ್ರದೇಶವೆಂದೂ ಘೋಷಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ, ಇಷ್ಟು ಸುದೀರ್ಘ ವರ್ಷಗಳ ಕಾಲ ಭೀಕರ ಬರದ ನಾಡಿನಲ್ಲಿ ಅನಿರ್ದಿಷ್ಟ ಮತ್ತು ಅನಿಶ್ಚಿತತೆಯ ಅಡಕತ್ತರಿಯಲ್ಲಿ ಸಿಕ್ಕು ತಮ್ಮ ಹಾಗೂ ತಮ್ಮ ಮಕ್ಕಳ ಭವಿಷ್ಯದ ಬಗೆಗೆ ಚಿಂತಿತರಾಗಿದ್ದ ಜನತೆಯ ಸಮಸ್ಯೆಗೆ ಸದ್ಯದ ಮಟ್ಟಿಗೆ ಸೋಲಾರ್ ಪಾರ್ಕ್‌ನಿಂದಾಗಿ ಕೊಂಚ ಉಪಶಮನ ದೊರೆತಂತಾಗಿದೆ.

ಪ್ರಪಂಚದ ಅತೀ ದೊಡ್ಡ ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕ ಬರದ ನಾಡು, ಬಂಡೆಗಳ ನಾಡು ಇತ್ಯಾದಿಯಾಗಿ ಕುಖ್ಯಾತಿ ಗಳಿಸಿದ್ದ ನಮ್ಮದೇ ರಾಜ್ಯದ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಕಳೆದ ಡಿಸೆಂಬರ್‌ನಿಂದ ಪೂರ್ಣ ಪ್ರಮಾಣದ ಕಾರ್ಯಾರಂಭ ಮಾಡಿದೆ. ಭಾರತದ ಸಿಲಿಕಾನ್ ಸಿಟಿಯೆಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಿಂದ ಸುಮಾರು 180 ಕಿ.ಮೀ. ದೂರದಲ್ಲಿರುವ ಈ ನಾಡಿಗೆ ಸೌರ ಉದ್ಯಾನ ಕಾರ್ಯಾರಂಭ ಮಾಡಲಾರಂಭಿಸಿದ ಕ್ಷಣದಿಂದ ಶಕ್ತಿ ಸ್ಥಳ ಎಂದೇ ಅಧಿಕೃತವಾಗಿ ನಾಮಕರಣ ಮಾಡಲಾಗಿದೆ.
ಈ ಸೋಲಾರ್ ಪಾರ್ಕ್ ನಮ್ಮ ರಾಜ್ಯ ಕರ್ನಾಟಕದ ತುಮಕೂರು ಜಿಲ್ಲೆಯ ಸಾಕಷ್ಟು ಹಿಂದುಳಿದ ಮತ್ತು ಕಿತ್ತು ತಿನ್ನುವ ಬಡತನದಲ್ಲಿ ಬದುಕುತ್ತಿರುವ ಪಾವಗಡ ತಾಲೂಕಿನಲ್ಲಿ ಸ್ಥಾಪಿತಗೊಂಡಿರುವುದು ನಿಜಕ್ಕೂ ಹೆಮ್ಮೆಯ ಮತ್ತು ಸಂತಸದ ಸಂಗತಿ. ವರ್ಷವಿಡೀ ಬರದ ಛಾಯೆ ಪಾವಗಡವನ್ನು ಆವರಿಸಿರುತ್ತಿತ್ತು. ಆಗೊಮ್ಮೆ ಈಗೊಮ್ಮೆ ಮಳೆಯಾಗುತ್ತಿತ್ತಾದರೂ ಸಹ ಯಾವುದೇ ಬೆಳೆಯನ್ನೂ ಬೆಳೆಯಲು ಸಹಕರಿಸುತ್ತಿರಲಿಲ್ಲ. ಇದಕ್ಕೆ ಕಾರಣ ಕೃಷಿಗೆ ಯೋಗ್ಯವಲ್ಲದ, ಬಂಡೆಗಳಿಂದ ಕೂಡಿದ ಮತ್ತು ಫಲವತ್ತಾಗಿರದ ಭೂಮಿ. ಕೇವಲ ನೆಲಗಡಲೆಯಂತಹ ಬೆಳೆಯನ್ನು ಬೆಳೆಯಲಷ್ಟೇ ಸಹಕರಿಸುತ್ತಿದ್ದ ಭೂಮಿ ಬೇರಿನ್ನಾವ ಬೆಳೆಗೂ ತಲೆಯೆತ್ತಲು ಆಸ್ಪದ ನೀಡುತ್ತಿರಲಿಲ್ಲ. ಇದನ್ನು ಬಿಟ್ಟರೆ ಬಂಡೆಗಳ ನಡುವೆ ಬೆಳೆದು ನಿಂತಿರುತ್ತಿದ್ದ ಕಳೆ ಮತ್ತು ಇನ್ನಿತರ, ಮನುಷ್ಯರು ತಿನ್ನಲು ಯೋಗ್ಯವಲ್ಲದ, ಬೆಳೆಗಳನ್ನು ಭಕ್ಷಿಸಿ ಜೀವಿಸುತ್ತಿದ್ದ ಕುರಿಗಳನ್ನು ಸಾಕಲಷ್ಟೇ ಯೋಗ್ಯವಾದ ನಾಡು ಅದಾಗಿತ್ತು. ಈಗ ಅಷ್ಟೂ ಭೂಮಿಯನ್ನು ಈ ಸೌರ ವಿದ್ಯುತ್ ಯೋಜನೆಗಾಗಿ ಗುತ್ತಿಗೆಗೆ ನೀಡಿ ಅಲ್ಲಿಯ ಕೃಷಿಕ ಸದ್ಯದ ಮಟ್ಟಿಗೆ ನಿವೃತ್ತನಾಗಿದ್ದಾನೆ. ಹುಟ್ಟುವ ಮಕ್ಕಳನ್ನು ಸಾಕಲೂ ಸಹ ಪರದಾಡುತ್ತಿದ್ದ ಜನತೆಗೆ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ತಮ್ಮ ಸ್ವಂತ ಮಕ್ಕಳನ್ನೂ ಸಹ ಸಾಕಲು ಹಿಂಜರಿದು ಸರಕಾರದ ಮಕ್ಕಳ ಪಾಲನಾ ಕೇಂದ್ರಕ್ಕೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಸಿಬಿಡುತ್ತಿದ್ದರು. ಅದು ಅನಿವಾರ್ಯವೂ ಆಗಿತ್ತು. ಅಲ್ಲಿಯ ಜನಸಾಮಾನ್ಯರು ಎಲ್ಲಾ ರೀತಿಯ ತ್ಯಾಗಕ್ಕೆ ಸಿದ್ಧರಿದ್ದರೂ ಸಹ ಏಕೋ ಏನೋ ಪ್ರಕೃತಿ ಮಾತೆ ಅಲ್ಲಿನ ಜನರ ಮೇಲೆ ಮುನಿದಿದ್ದಳು. ಇದೇ ರೀತಿಯ ಇನ್ನೂ ಅನೇಕ ಕಾರಣಗಳಿಂದಾಗಿ ಆ ಜಾಗವನ್ನು ‘ಶಾಪಗ್ರಸ್ಥ’ ಎಂದೇ ಕರೆಯಲಾಗುತ್ತಿತ್ತು. ಆದರೆ ಇದೇ ಕಾರಣಕ್ಕೆ ಪ್ರಪಂಚದ ಅತೀ ದೊಡ್ಡ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಈ ನೆಲವನ್ನು ಆಯ್ದುಕೊಳ್ಳಲಾಯಿತು ಎಂಬುದು ಅಚ್ಚರಿಯಾದರೂ ಸತ್ಯ. ಈಗಿನ ಕೊಳೆತ ಸಮಾಜದಲ್ಲೂ ಸಮಾಜಮುಖಿ ಕೆಲಸ ಮಾಡಲು ಬದ್ಧತೆಯಿಂದ ಕೂಡಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದ್ದಾರೆಂಬುದಕ್ಕೆ ಈ ನಮ್ಮ ಕನ್ನಡಿಗರ ಮುಕುಟಮಣಿ, ಕರ್ನಾಟಕದ ಹೆಮ್ಮೆ, ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಅತ್ಯುತ್ತಮ ಉದಾಹರಣೆಯೆಂದರೆ ಖಂಡಿತ ತಪ್ಪಾಗಲಾರದು. ನಿರೀಕ್ಷೆಯಂತೆಯೇ ಡಿಸೆಂಬರ್ 2019ರಿಂದ ಈ ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕ ಪೂರ್ಣ ಪ್ರಮಾಣದ ಕಾರ್ಯಾರಂಭ ಮಾಡಿದೆ. ಈ ಯೋಜನೆಗೆ ತಗಲುವ ಒಟ್ಟು ಮೊತ್ತವನ್ನು ಪ್ರಾರಂಭದಲ್ಲಿ ಸುಮಾರು 14,800 ಕೋಟಿ ರೂ.ಗಳಿಗೆ ಅಂದಾಜು ಮಾಡಲಾಗಿತ್ತು.


ಈ ಸೌರ ಉದ್ಯಾನ ಯೋಜನೆಯನ್ನು ಫೆಬ್ರವರಿ 2015ರಲ್ಲಿ ಪರಿಕಲ್ಪನೆ ಮಾಡಲಾಗಿತ್ತು. ಇದರ ಅಭಿವೃದ್ಧಿ ಮತ್ತು ನಿರ್ಮಾಣ ಕಾರ್ಯ ಜನವರಿ 2016ರಿಂದ ಆರಂಭಗೊಂಡಿತ್ತು. ಆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಹಾಗೆಯೇ ಈ ಯೋಜನೆಯ ಉಸ್ತುವಾರಿ ಇಲಾಖೆಯಾದ ಇಂಧನ ಖಾತೆಯ ಸಚಿವರಾಗಿದ್ದವರು ಡಿ.ಕೆ. ಶಿವಕುಮಾರ್‌ರವರು. ತುಂಬಾ ಮುತುವರ್ಜಿ ವಹಿಸಿ ಬದ್ಧತೆಯಿಂದ ಕಾರ್ಯನಿರ್ವಹಿಸಿದ ಕೀರ್ತಿಗೆ ಇವರಿಬ್ಬರೂ ಪಾತ್ರರು. ನಂತರ ಬದಲಾದ ಸರಕಾರಗಳೂ ಕೂಡ ಹೆಚ್ಚಿನ ಕಾಳಜಿ ವಹಿಸಿ ಈ ಯೋಜನೆಯನ್ನು ಪೂರ್ಣಗೊಳಿಸಿದವೆಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಈ ಉದ್ಯಾನವನ್ನು ತಲಾ 250 ಮೆಗಾ ವ್ಯಾಟ್ ನ ಎಂಟು ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ಎಂಟೂ ವಿಭಾಗಗಳನ್ನು ಮತ್ತಷ್ಟು ವಿಭಜಿಸಿ ತಲಾ 50 ಮೆಗಾವ್ಯಾಟ್ ಸಾಮರ್ಥ್ಯದ ಐದು ಉಪವಿಭಾಗಗಳಾಗಿ ವಿಭಜಿಸಲಾಗಿದೆ. ಅತೀ ಹೆಚ್ಚು ವಿದ್ಯುತ್ ಶಕ್ತಿಯ ವಿದ್ಯುತ್ ಪೂರೈಕೆ ಸಾಲುಗಳು, ಹಂಚಿಕಾ ಕೇಂದ್ರಗಳು ಮತ್ತು ಹಂಚಿಕಾ ಉಪ ಕೇಂದ್ರಗಳನ್ನು ವಿದ್ಯುತ್ ವಿಸರ್ಜನಾ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಪಾವಗಡದಲ್ಲಿರುವ ಸೋಲಾರ್ ಪಾರ್ಕ್‌ನಿಂದ ಇತರ ಕಡೆಗೆ ವಿದ್ಯುತ್ ಪೂರೈಸಲು ಹಿರಿಯೂರು, ಮಧುಗಿರಿ ಮತ್ತು ಬೆಂಗಳೂರಿಗೆ ವಿದ್ಯುತ್ ಪೂರೈಕಾ ಸಾಲುಗಳನ್ನು ನಿರ್ಮಾಣ ಮಾಡಲಾಗಿದೆ. 50 ಮೆ.ವ್ಯಾ.ನ ಸೌರ ಉದ್ಯಾನದ ವಿಭಾಗವು 220 ಕೆ.ವಿ. / 66 ಕೆ.ವಿ ಅಥವಾ 220 ಕೆ.ವಿ. / 33 ಕೆ.ವಿ. ಹಂಚಿಕಾ ಉಪಕೇಂದ್ರದಿಂದ ನೆಲದಾಳದ (ಭೂಗತ) ಡಬಲ್ ಸರ್ಕ್ಯೂಟ್ ಕೇಬಲ್ ಮೂಲಕ ವಿದ್ಯುತ್ ಪ್ರಸರಿಸುತ್ತದೆ. ಹಂಚಿಕಾ ಕೇಂದ್ರವು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದ (ಪಿಜಿಸಿಐಎಲ್) ಉಪಕೇಂದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಪಿಜಿಸಿಐಎಲ್ ಉಪಕೇಂದ್ರದಲ್ಲಿ ವಿದ್ಯುತ್ ಶಕ್ತಿಯು 400 ಕೆ.ವಿ. / 220 ಕೆ.ವಿ. ಯ ಹಂತಕ್ಕೇರಿಸಲ್ಪಡುತ್ತದೆ. ಇಲ್ಲಿಂದ ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಪಿಜಿಸಿಐಎಲ್ ನ 765 ಕೆ.ವಿ. / 400 ಕೆ.ವಿ. ಕೇಂದ್ರಕ್ಕೆ ಮತ್ತು ಆಂಧ್ರಪದೇಶದ ಗೂಟಿಯಲ್ಲಿರುವ 400 ಕೆ.ವಿ. / 220 ಕೆ.ವಿ. ಉಪಕೇಂದ್ರಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ. ಕೇವಲ ಈ ಯೋಜನೆಯ ಬೃಹತ್ ಪ್ರಮಾಣವೇ ಈ ಯೋಜನೆಯನ್ನು ಜಾರಿಗೆ ತರಲು ಅಷ್ಟೇ ಪ್ರಮಾಣದ ಸಮಯ, ಪರಿಶ್ರಮ ಮತ್ತು ವಿಧಿವತ್ತಾದ ಸಮರ್ಪಣೆಯನ್ನು ತೆಗೆದುಕೊಂಡಿದೆ ಎಂಬುದನ್ನು ಸಾರಿ ಹೇಳುತ್ತದೆ. ಅಂದಹಾಗೆ, ಈ ಉದ್ಯಮವು ಭಾರತೀಯ ಸೌರ ವಿದ್ಯುತ್ ನಿಗಮ (ಎಸ್‌ಇಸಿಐ) ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆಆರ್‌ಇಡಿಎಲ್), ಇವುಗಳ ನಡುವಿನ ಜಂಟಿ ಒಪ್ಪಂದದ ಉದ್ಯಮವಾಗಿರುವ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತದ (ಕೆಎಸ್‌ಪಿಡಿಸಿಎಲ್) ಅಡಿಯಲ್ಲಿ ನಿರ್ಮಾಣವಾಗಿದೆ. ಪ್ರಾರಂಭದಲ್ಲಿ 2,000 ಮೆಗಾವ್ಯಾಟ್ ಸಾಮರ್ಥ್ಯದ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಲಾಗಿತ್ತಾದರೂ, ನಂತರದ ದಿನಗಳಲ್ಲಿ ಹೆಚ್ಚುವರಿಯಾಗಿ 50 ಮೆಗಾವ್ಯಾಟ್ ಸಾಮರ್ಥ್ಯವನ್ನು ಇದೇ ಯೋಜನೆಯ ಭಾಗವಾಗಿ ಸೇರಿಸಲಾಯಿತು. ಯೋಜನೆಯಂತೆ ಅಂತಿಮ 200 ಮೆಗಾವ್ಯಾಟ್ ಸಾಮರ್ಥ್ಯದ ಉತ್ಪಾದನಾ ಘಟಕವು ಸಾಫ್ಟ್ ಬ್ಯಾಂಕ್ ಎನೆರ್ಜಿಯಿಂದ ನಿಯೋಜನೆಗೊಂಡು ಸೌರಶಕ್ತಿಯಿಂದ ವಿಶ್ವದಲ್ಲಿಯೇ ಅತೀ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವ ಘಟಕವೆಂಬ ಖ್ಯಾತಿಗೆ ಪಾತ್ರವಾಗಿದೆ. ಹಾಗಾಗಿ, ಇಂದು ನಮ್ಮ ಪಾವಗಡದ ಸೌರ ಉದ್ಯಾನ 2,050 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುತ್ತಾ ಜಗತ್ತಿನ ಗಮನ ಸೆಳೆದಿದೆ. ಬರದ ನಾಡಿನ ಜನರ ನೆತ್ತಿ ಸುಡುವ ಸೂರ್ಯನ ಶಾಖವೇ ಇಂದು ನಮ್ಮ ದೇಶದೆಲ್ಲೆಡೆಗಿನ ಜನರ ವಿದ್ಯುತ್ ಬರವನ್ನು ನೀಗಲು ಕಾರ್ಯ ನಿರ್ವಹಿಸಲಾರಂಭಿಸಿದೆ. ಸಾಂಪ್ರದಾಯಿಕ ಪದ್ಧತಿಯಿಂದ ಉತ್ಪಾದಿಸುತ್ತಿದ್ದ ಇಂಗಾಲ ಸಹಿತ ವಿದ್ಯುತ್ ಉತ್ಪಾದನೆಗಿಂತ ಮಿಲಿಯನ್‌ಗಟ್ಟಲೆ ಸೌರ ಫಲಕಗಳನ್ನೊಳ ಗೊಂಡ ರೈತರ ಭೂಮಿ ಈಗ ಇಂಗಾಲ ರಹಿತ ವಿದ್ಯುತ್ ಉತ್ಪಾದಿಸಿ ಪರಿಸರಕ್ಕೆ ದೊಡ್ಡ ಕೊಡುಗೆಯನ್ನೇ ನೀಡುತ್ತಿದೆ. ಇದರಿಂದಾಗಿ ಪ್ರತೀ ವರ್ಷ ಸುಮಾರು 578,631 ಟನ್.ಗಳಷ್ಟು ಇಂಗಾಲದ ಡೈಆಕ್ಸೈಡ್‌ನ ಉತ್ಪತ್ತಿಗೆ ಮಂಗಳ ಹಾಡಿ ತನ್ಮೂಲಕ, ಜಾಗತಿಕ ತಾಪಮಾನದ ಹೊಡೆತಕ್ಕೆ ಸಿಕ್ಕು ನಲುಗುತ್ತಿರುವ ಪ್ರಕೃತಿಗೆ ದೊಡ್ಡ ಉಡುಗೊರೆ ನೀಡಿ, ನಾಡಿನ ಜನರನ್ನು ಶಾಪದಿಂದ ವಿಮೋಚನೆಗೊಳಿಸಲು ಸಜ್ಜಾಗಿ ನಿಂತಿದೆ. ವಿಶೇಷತೆಯೇನೆಂದರೆ, ಈ ಯೋಜನೆಗೆಂದು ಬಳಸಿದ ಸುಮಾರು 13 ಸಾವಿರ ಎಕರೆಗಳಷ್ಟು ಭೂಮಿಯನ್ನು ಅಲ್ಲಿನ ರೈತರಿಂದ ಗುತ್ತಿಗೆ ಆಧಾರದ ಮೇಲೆ ಪಡೆದಿರುವುದು. ತಾಲೂಕಿನ ನಾಗಲಮಡಿಕೆ ಹೋಬಳಿಯ ವೆಲ್ಲೂರು, ಬಾಳಸಮುದ್ರ, ತಿರುಮಣಿ, ರಾಯಚೆರ್ಲು, ಕ್ಯಾತಗಣಾಚೆರ್ಲು ಮತ್ತು ವೆಂಕಟಮ್ಮನಹಳ್ಳಿಯಲ್ಲಿ ರೈತರ ಜಮೀನನ್ನು ಒಂದು ವರ್ಷಕ್ಕೆ, ಒಂದು ಎಕರೆಗೆ ಸುಮಾರು 21 ಸಾವಿರದಷ್ಟು ಹಣಕ್ಕೆ ಗುತ್ತಿಗೆಗೆ ಪಡೆಯಲಾಗಿದೆ. ಇದಷ್ಟೇ ಅಲ್ಲದೆ ಪ್ರತೀ ಎರಡು ವರ್ಷಗಳಿಗೊಮ್ಮೆ ರೈತರಿಂದ ಗುತ್ತಿಗೆ ಪಡೆದುಕೊಂಡಿರುವ ಜಮೀನಿಗೆ ಪ್ರಸ್ತುತ ಗುತ್ತಿಗೆ ಹಣದ ಶೇಕಡಾ 5 ರಷ್ಟನ್ನು ಹೆಚ್ಚಳ ಮಾಡಿ ಪಾವತಿಸಲಾಗುತ್ತದೆ. ಯಾವುದೇ ಆದಾಯ ತರದ ಬರಡು ಭೂಮಿಗೆ ವಾರ್ಷಿಕ 21 ಸಾವಿರ ಹಣ ನೀಡುವ ಸರಕಾರದ ಪ್ರಸ್ತಾಪ ರೈತರಿಗೂ ಸಂತಸ ತಂದು, ಒಪ್ಪಿಸಹಕರಿಸುತ್ತಿದ್ದಾರೆ. ಕಲ್ಲುಗಳಿಂದ ಕೂಡಿದ ಬೆಟ್ಟ ಗುಡ್ಡಗಳಿಂದ ಆವರಿಸಲ್ಪಟ್ಟಿರುವ ಎತ್ತರದ ಪ್ರಸ್ಥಭೂಮಿ ಈ ಪಾವಗಡ ನಾಡು. ವರ್ಷಕ್ಕೆ ಸುಮಾರು 300ಕ್ಕೂ ಹೆಚ್ಚು ದಿನಗಳು ಸುಡುಬಿಸಿಲಿನಿಂದ ಕೂಡಿರುವ ಈ ಪ್ರದೇಶವನ್ನು ಕಳೆದ ಸುಮಾರು 60 ವರ್ಷಗಳಿಂದಲೂ ಬರಪೀಡಿತ ಪ್ರದೇಶವೆಂದೂ ಘೋಷಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ, ಇಷ್ಟು ಸುದೀರ್ಘ ವರ್ಷಗಳ ಕಾಲ ಭೀಕರ ಬರದ ನಾಡಿನಲ್ಲಿ ಅನಿರ್ದಿಷ್ಟ ಮತ್ತು ಅನಿಶ್ಚಿತತೆಯ ಅಡಕತ್ತರಿಯಲ್ಲಿ ಸಿಕ್ಕು ತಮ್ಮ ಹಾಗೂ ತಮ್ಮ ಮಕ್ಕಳ ಭವಿಷ್ಯದ ಬಗೆಗೆ ಚಿಂತಿತರಾಗಿದ್ದ ಜನತೆಯ ಸಮಸ್ಯೆಗೆ ಸದ್ಯದ ಮಟ್ಟಿಗೆ ಕೊಂಚ ಉಪಶಮನ ದೊರೆತಂತಾಗಿದೆ.
ಜಾಲತಾಣವೊಂದಕ್ಕೆ ಕೆ.ಎಸ್.ಪಿ.ಡಿ.ಸಿ.ಎಲ್.ನ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯಂತೆ ಪಾವಗಡದ 2,050 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಯೋಜನೆಯು ತನ್ನ ಕಾರ್ಯಾಚರಣೆ ಪ್ರಾರಂಭಿಸಿದೆ ಮತ್ತು ಯೋಜನೆಯಂತೆ ಸೌರ ವಿದ್ಯುತ್ ಉತ್ಪಾದಿಸುತ್ತಿದೆ. ಕಳೆದ ಡಿಸೆಂಬರ್ 17, 2019ರಂದು ಸಾಫ್ಟ್‌ಬ್ಯಾಂಕ್ ಎನೆರ್ಜಿಯಿಂದ ಅಂತಿಮ ಹಂತದ ಭಾಗವಾಗಿ ನಿಯೋಜಿಸಲ್ಪಟ್ಟ 100 ಮೆಗಾವ್ಯಾಟ್ ಸಾಮರ್ಥ್ಯದ ಉತ್ಪಾದನಾ ಘಟಕದಿಂದ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದೆ ಎಂದಿದ್ದಾರೆ. ಒಟ್ಟಾರೆ 2,050 ಮೆಗಾವ್ಯಾಟ್ ಸಾಮರ್ಥ್ಯದ ದ್ಯುತಿವಿದ್ಯುಜ್ಜನಕ ವಿದ್ಯುತ್ ಕೇಂದ್ರದಲ್ಲಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮವು (ಎನ್‌ಟಿಪಿಸಿ) 600 ಮೆಗಾವ್ಯಾಟ್‌ನಷ್ಟು, ಎಸ್‌ಇಸಿಐ. 200 ಮೆಗಾವ್ಯಾಟ್‌ನಷ್ಟು ಮತ್ತು ಕೆಆರ್‌ಇಡಿಎಲ್ 1,250 ಮೆಗಾವ್ಯಾಟ್‌ನಷ್ಟು ವಿದ್ಯುತ್ ಉತ್ಪಾದನೆಯನ್ನು ಕಾರ್ಯಗತಗೊಳಿಸಿವೆ.
ಟಾಟಾ ಪವರ್ (400 ಮೆ.ವ್ಯಾ.), ರಿನ್ಯೂ ಪವರ್ (350 ಮೆ.ವ್ಯಾ.), ಫೋರ್ಟಮ್ ಸೋಲಾರ್ (350 ಮೆ.ವ್ಯಾ.), ಅವಾದ ಎನರ್ಜಿ (300 ಮೆ.ವ್ಯಾ.), ಸಾಫ್ಟ್‌ಬ್ಯಾಂಕ್ ಎನರ್ಜಿ (200 ಮೆ.ವ್ಯಾ.), ಅದಾನಿ ಗ್ರೀನ್ ಎನರ್ಜಿ (150 ಮೆ.ವ್ಯಾ.), ಎ.ಸಿ.ಎಂ.ಇ. ಸೋಲಾರ್ (100 ಮೆ.ವ್ಯಾ.), ಅಜೂರ್ ಪವರ್ (100 ಮೆ.ವ್ಯಾ.), ರತನ್ ಇಂಡಿಯಾ (50 ಮೆ.ವ್ಯಾ.) ಮತ್ತು ಕೆ.ಆರ್.ಇ.ಡಿ.ಎಲ್. (50 ಮೆ.ವ್ಯಾ.) ಹೀಗೆ ಒಟ್ಟು ಹತ್ತು ಕಂಪೆನಿಗಳು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿ ಯಶಸ್ವಿಯಾಗಿವೆ.
ಈ ಸೌರ ಉದ್ಯಾನದಿಂದ ವಿದ್ಯುತ್ ಖರೀದಿ ಮಾಡಲು ರಾಜ್ಯದ 5 ವಿದ್ಯುತ್ ಸರಬರಾಜು ಕಂಪೆನಿಗಳು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿವೆ. ಪಾರ್ಕ್‌ನಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಗ್ರಿಡ್‌ಗೆ ಸಂಪರ್ಕಿಸಲು ಬೃಹತ್ ವಿದ್ಯುತ್ ಪೂರೈಕಾ ಸಾಲುಗಳನ್ನೂ ಸಹ ನಿರ್ಮಾಣ ಮಾಡಲಾಗಿದೆ.
ಆದರೆ ಯಾವುದೇ ಕ್ರಿಯೆಗೆ ಸರಿಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆಗಳೂ ಇರುತ್ತವೆ ಎಂಬುದೂ ಸುಳ್ಳಲ್ಲ. ಈ ಯೋಜನೆಯು ಗುತ್ತಿಗೆಗೆ ಭೂಮಿಯನ್ನು ನೀಡಿದ ಎಲ್ಲಾ ರೈತರ ಬಾಳನ್ನು ಹಸನು ಮಾಡಿದೆ ಎಂಬುದು ನಿಜವಾದರೂ ಸಹ ಅದು ಕೇವಲ ತಾತ್ಕಾಲಿಕ ಎನ್ನುವುದೂ ಅಷ್ಟೇ ಸತ್ಯ. ಪರಿಸರಕ್ಕೆ ಅಪಾರ ಪ್ರಮಾಣದಲ್ಲಿ ಕೊಡುಗೆ ನೀಡಿದೆ ಎಂಬುದು ನಿಜವಾದರೂ ಸರಕಾರಗಳು ಈಗಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಮತ್ತೊಂದು ರೀತಿಯಲ್ಲಿ ಈ ಯೋಜನೆಯೇ ಶಾಪವಾಗಿ ಪರಿಣಮಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹೇಗೆಂದರೆ ಮಿಲಿಯನ್‌ಗಟ್ಟಲೆ ಇರುವ ಸೌರ ಫಲಕಗಳನ್ನು ನಿರಂತರವಾಗಿ ಸ್ವಚ್ಛಗೊಳಿಸುವ ಕಾರ್ಯಕ್ಕಾಗಿ ಯಥೇಚ್ಛವಾಗಿ ನೀರನ್ನು ಬಳಕೆ ಮಾಡುವಂತಹ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದಾಗಿ ಅಂತರ್ಜಲದ ಮಟ್ಟ ಗಣನೀಯವಾಗಿ ಕುಸಿಯುವುದು ಶತಃಸಿದ್ಧ. ಇದನ್ನು ತಡೆಯಲು, ಇದಕ್ಕೆ ಪರ್ಯಾಯವಾಗಿ ರೊಬೋಟಿಕ್ ತಂತ್ರಜ್ಞಾನವನ್ನು ಬಳಸಲೇಬೇಕಾದ ಅನಿವಾರ್ಯತೆ ಸರಕಾರಕ್ಕಿದೆ. ಒಟ್ಟಾರೆಯಾಗಿ ಇಂತಹ ಸಮಸ್ಯೆಗಳಿಗೆ ಕೇವಲ ಆರ್ಥಿಕ ಸದೃಢತೆಯಿಂದ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಾಗಾಗಿ ಜಗತ್ತಿನ ಅತೀ ದೊಡ್ಡ ಸೌರ ವಿದ್ಯುತ್ ಉತ್ಪಾದನಾ ಕೇಂದ್ರವು ಎಲ್ಲಾ ರೀತಿಯಿಂದ ಅಲ್ಲಿಯ ನಾಡಿನ ಹಾಗೂ ಇನ್ನಿತರ ರೈತಾಪಿ ವರ್ಗದ ಕಣ್ಣುಗಳಲ್ಲಿ ಸಹಜವಾಗಿ ಹೊಳಪು ಮೂಡಿಸಲಿ

Writer - ಚೇತನ್ ರಂಗನಾಥ್

contributor

Editor - ಚೇತನ್ ರಂಗನಾಥ್

contributor

Similar News

ಜಗದಗಲ
ಜಗ ದಗಲ