ನನಗಿಂತ ನಿಮಗೆ ನಾನು ಹೆಚ್ಚು ಅರ್ಥವಾದಾಗ!
ಮುಂದಿನ ಹತ್ತು ವರ್ಷಗಳಲ್ಲಿ ಮನುಷ್ಯನನ್ನು ಅರ್ಥ ಮಾಡಿಕೊಳ್ಳುವ ತಂತ್ರಜ್ಞಾನ ತೀವ್ರ ರೀತಿಯ ಅಭಿವೃದ್ಧಿಯನ್ನು ಕಾಣಲಿದೆ. ಅದಕ್ಕೆ ನಿಮ್ಮ ಕೈಯಲ್ಲಿನ ಮೊಬೈಲ್ ಫೋನ್ ದಾರಿ ಮಾಡಿಕೊಡಲಿದೆ. ನಿಮ್ಮ ಆಸಕ್ತಿ, ಅಭಿರುಚಿ, ಹವ್ಯಾಸಗಳು ನಿಮಗಿಂತ ಅವರಿಗೆ ಹೆಚ್ಚು ಅರ್ಥವಾಗುತ್ತಾ ಹೋದಂತೆ... ನೀವು ತೋಡಿದ ಖೆಡ್ಡಾದಲ್ಲಿ ನೀವೇ ಬಂದಿಯಾದರೂ ಆಶ್ಚರ್ಯವಿಲ್ಲ...
ಹೀಗೆ ಒಮ್ಮೆ ಯೋಚಿಸಿ ನೋಡಿ? ನನಗೇನು ಇಷ್ಟ, ನನಗೆ ಇಷ್ಟವಾಗುವವರು ಯಾರು ಮತ್ತು ನಾನು ಯಾರಿಗೆ ಗೌರವ ನೀಡುತ್ತೇನೆ ಇತ್ಯಾದಿ ವಿವರಗಳು ನಿಮಗೆ ತಿಳಿಯುತ್ತವೆ. ಹಾಗೆಯೇ, ಈ ಎಲ್ಲಾ ವಿವರಗಳು ನನಗಿಂತ ನಿಮಗೆ ಸ್ಪಷ್ಟವಾಗಿ, ಸ್ಪುಟವಾಗಿ ಮತ್ತು ಖಚಿತವಾಗಿ ತಿಳಿಯುತ್ತವೆ! ಅದೂ ನನಗಿಂತ ಮೊದಲೇ ನಿಮಗೆ ತಿಳಿದಿರುತ್ತದೆ! ಆಗ ಏನಾಗಬಹುದು? ನಾನು ಏನು ಎಂದು ತಿಳಿದಿರುವುದರಿಂದ ನನ್ನೊಂದಿಗೆ ಉತ್ತಮವಾಗಿ ವ್ಯವಹರಿಸಬಹುದು ಅಥವಾ ನಿಮಗೆ ಅನುಕೂಲವಾಗುವ ಹಾಗೆ ನನ್ನನ್ನು ಬಳಸಿಕೊಳ್ಳಬಹುದು ಅಲ್ಲವೇ?
ಇವೆಲ್ಲಾ ಅಂತೆಕಂತೆಗಳು. ಕೇವಲ ಕನಸು. ಯಾವುದೇ ಪ್ರಯೋಜನಕ್ಕೆ ಬಾರದು ಎಂದೇನಾದರೂ ಯೋಚಿಸುತ್ತಿದ್ದರೆ-ಕ್ಷಮಿಸಿ. ಇದು 2020ರ ದಶಕದ ಮುನ್ನೋಟ. ಮುಂದಿನ ಹತ್ತು ವರ್ಷಗಳಲ್ಲಿ ಮನುಷ್ಯನನ್ನು ಅರ್ಥ ಮಾಡಿಕೊಳ್ಳುವ ತಂತ್ರಜ್ಞಾನ ತೀವ್ರ ರೀತಿಯ ಅಭಿವೃದ್ಧಿಯನ್ನು ಕಾಣಲಿದೆ ಮತ್ತು ಈಗಾಗಲೇ ನಮಗೆ ಅರಿವಿಲ್ಲದೆ ಇದರ ಭಾಗವಾಗಿ ನಮ್ಮನ್ನು ಇತರರು ಅರ್ಥಮಾಡಿಕೊಳ್ಳಲು ಬೇಕಾದ ಅವಕಾಶಗಳನ್ನು ನೀಡಿದ್ದೇವೆ. ಹೇಗೆ ಎಂದು ಒಂದೆರಡು ಉದಾಹರಣೆಗಳು ಮೂಲಕ ಅರಿಯೋಣ ಬನ್ನಿ.
ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದೆ. ಕಾಫಿ ಕುಡಿಯಲು ನೀವು ಒಂದು ಹೊಟೇಲ್‌ಅನ್ನು ಪ್ರವೇಶಿಸುತ್ತೀರಿ. ಒಂದೆರಡು ಘಳಿಗೆ ಅಲ್ಲಿದ್ದು, ಬಿಲ್ಲು ಪಾವತಿಸಿ ಅಲ್ಲಿಂದ ಹೊರಬರುತ್ತೀರಿ. ನೀವು ಹೊರಬಂದ ಒಂದೆರಡು ನಿಮಿಷಗಳಲ್ಲಿ, ಗೂಗಲ್ ಆ ಹೊಟೇಲ್ ಅನುಭವ ಹೇಗಿತ್ತು ಎಂದು ನಿಮ್ಮನ್ನು ಕೇಳುತ್ತದೆ. ನೀವು ಇದಕ್ಕೆ ಪ್ರತಿಕ್ರಿಯಿಸಬಹುದು ಅಥವಾ ಇಲ್ಲದೆಯೂ ಇರಬಹುದು. ಪ್ರತಿಕ್ರಿಯಿಸಿದರೆ, ಗೂಗಲ್‌ಗೆ ಸ್ವಲ್ಪಲಾಭ ಹೆಚ್ಚು. ನಿಮ್ಮ ಹಿಮ್ಮಾಹಿತಿಯನ್ನು ಅದು ಹೊಟೇಲ್‌ನ ಮಾಲಕರಿಗೆ ಮಾರಿಕೊಳ್ಳುತ್ತದೆ. ಆದರೆ ಇದೆಲ್ಲಕ್ಕಿಂತ ಹೆಚ್ಚಾಗಿ ಅದು ನಿಮ್ಮ ಓಡಾಟವನ್ನು ದಾಖಲಿಸಿಕೊಳ್ಳುತ್ತಾ ಸಾಗುತ್ತದೆ. ನೀವು ಯಾವ ಹೊಟೇಲ್ ಹೆಚ್ಚು ಪ್ರವೇಶಿಸುತ್ತೀರಿ, ಎಷ್ಟು ಸಮಯ ಅಲ್ಲಿ ಇರುತ್ತೀರಿ ಇತ್ಯಾದಿಗಳನ್ನು ಅದು ತಿಳಿದುಕೊಳ್ಳುತ್ತದೆ. ತಿಂಗಳಲ್ಲಿ ಇಪ್ಪತ್ತು ಬಾರಿ ನೀವು ಈ ಹೊಟೇಲ್ ಅನ್ನು ಪ್ರವೇಶಿದ್ದೀರಿ ಎನ್ನುವುದು ನಿಮಗೆ ಮರೆತುಹೋಗಿರುತ್ತದೆ. ಆದರೆ ಗೂಗಲ್ ಮರೆತಿರುವುದಿಲ್ಲ! ಅದಕ್ಕೆ ನೀವು ಅಲ್ಲಿ ಕಳೆದಿರುವ ಪ್ರತೀ ನಿಮಿಷದ ಲೆಕ್ಕ ಇರುತ್ತದೆ, ಸೆಕೆಂಡ್‌ಗಳ ನಿಖರತೆಯೂ ಇರುತ್ತದೆ!
ನಿಮ್ಮ ಬಳಿ ಸ್ಮಾರ್ಟ್ ಫೋನ್ ಇಲ್ಲ. ಮಾಮೂಲಿ ಫೋನ್ ಇದೆ. ಅದರ ಹೆಸರು ಮಾತ್ರ ನಿಮಗೆ ಗೊತ್ತು. ಆದರೆ ಮೊಬೈಲ್ ಕಂಪೆನಿಗೆ ನಿಮ್ಮ ಬಳಿಯಿರುವ ಫೋನಿನ ಚಿಪ್ ಸೆಟ್‌ನಿಂದ ಹಿಡಿದು, ಅದರ ಬ್ಯಾಟರಿವರೆಗಿನ ವಿವರ ಪೂರ್ಣ ತಿಳಿದಿರುತ್ತದೆ! ನೀವು ಓಡಾಡುವ, ವಾಸಿಸುವ ಪ್ರದೇಶವನ್ನು ಆಧರಿಸಿ, ನಿಮ್ಮ ಆರ್ಥಿಕ ಲೆಕ್ಕಾಚಾರವನ್ನು ಇದು ನಿಖರವಾಗಿ ಹಾಕಿಕೊಂಡಿರುತ್ತದೆ. ನೀವು ದಿನದ 24 ಗಂಟೆ ಏನು ಮಾಡುತ್ತೀರಿ ಎನ್ನುವ ಅಂದಾಜು ಇವರ ಬಳಿ ಇರುತ್ತದೆ. ಹಾಗಾಗಿ, ನೀವು ಹೆಚ್ಚು ಓಡಾಡುವ ಪ್ರದೇಶದಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನಿನ ಜಾಹೀರಾತು ಹೆಚ್ಚು ಇರುವಂತೆ ನೋಡಿಕೊಂಡು, ನಿಮ್ಮನ್ನು ಅದರೆಡೆಗೆ ಸೆಳೆಯುವ ಕಾರ್ಯ ನಡೆಯುತ್ತದೆ. ಇದೆಲ್ಲಾ ನಿಮಗೇ ತಿಳಿದೇ ಇರುವುದಿಲ್ಲ! ನಿಮಗಿಂತ ಅವರಿಗೆ ನಿಮ್ಮ ಬಗ್ಗೆ ಹೆಚ್ಚು ತಿಳಿದಿರುತ್ತದೆ!
ನೀವು ಸ್ವಲ್ಪಬುದ್ಧಿವಂತರು. ಹಾಗೆ ಹಣವಂತರು. ಉತ್ತಮವಾದ ಮೌಲ್ಯವನ್ನು ನೀಡುವ ವಹಿವಾಟಿಗಾಗಿ ನೀವು ಆನ್‌ಲೈನ್ ಜಾಲತಾಣಗಳಿಂದ ನಿಮ್ಮ ಖರೀದಿಗಳನ್ನು ಮಾಡುತ್ತೀರಿ ಎಂದಾದರೆ, ನಿಮ್ಮ ಬಗ್ಗೆ ನಿಮಗೆ ತಿಳಿದಿರುವುದಕ್ಕಿಂತ ಹೆಚ್ಚು ವಿಷಯ ಆನ್‌ಲೈನ್ ಕಂಪೆನಿಗೆ ತಿಳಿದಿರುತ್ತದೆ! ಹೇಗೆ ಎಂದೀರಾ? ನೀವು ಎಷ್ಟು ಬಾರಿ ಆ ಕಂಪೆನಿಯ ಆ್ಯಪ್‌ಅನ್ನು ಪ್ರವೇಶಿಸಿದ್ದಿರಿ, ಯಾವ ಯಾವ ವಸ್ತುವನ್ನು ಹೆಚ್ಚು ಕೊಳ್ಳುತ್ತೀರಿ, ಯಾವ ಬ್ರಾಂಡಿನ ಬಗ್ಗೆ ನಿಮಗೆ ನಂಬಿಕೆ ಹೆಚ್ಚು ಎನ್ನುವುದರ ಲೆಕ್ಕ ಅದಕ್ಕೆ ತಿಳಿದಿರುತ್ತದೆ. ಬ್ರಾಂಡಿನ ಬಗೆಗಿನ ನಂಬಿಕೆಯನ್ನು ಹೇಗೆ ಅಳೆಯುತ್ತದೆ ಎಂದೀರಾ? ನೀವು ಒಂದು ವಸ್ತುವನ್ನು ಖರೀದಿ ಮಾಡುವ ಬಟನ್ ಒತ್ತಲು ಎಷ್ಟು ಸಮಯ ತೆಗೆದುಕೊಂಡಿರಿ ಎನ್ನುವುದನ್ನು ಕಂಪೆನಿಯ ಆ್ಯಪ್ ದಾಖಲಿಸುತ್ತಿರುತ್ತದೆ. ಒಂದು ಬ್ರಾಂಡಿನ ಉತ್ಪನ್ನ ನೋಡಿದ ತಕ್ಷಣ ಕೊಳ್ಳುವ ಬಟನ್ ಒತ್ತಿದಿರಿ ಎಂದರೆ, ಅದರ ಕುರಿತು ನಿಮಗೆ ನಂಬಿಕೆ ಜಾಸ್ತಿ ಎಂದರ್ಥ. ಹಾಗೆಯೇ, ನೀವು ಯಾವಾಗಲೂ ಆಫರ್‌ಗಳ ಕಡೆ ಗಮನ ನೀಡುವವರು ಎಂದಾದರೆ, ಅದೂ ಕಂಪೆನಿಗೆ ನಿಮಗಿಂತ ಚೆನ್ನಾಗಿ ತಿಳಿದಿರುತ್ತದೆ. ನೀವು ಎಷ್ಟು ಶೇಕಡಾ ಆಫರ್ ಇದ್ದಾಗ ಹೆಚ್ಚು ಖರೀದಿ ಮಾಡುವವರು ಎಂದು ಅದರ ಡಿಜಿಟಲ್ ಸಹಾಯಕರು ಅದಕ್ಕೆ ಮಾಹಿತಿಯನ್ನು ನೀಡುತ್ತಾರೆ.
ಮೇಲಿನ ಉದಾಹರಣೆಗಳನ್ನು ಇಟ್ಟುಕೊಂಡು ನಾವು ಕೆಲವು ಮೂಲ ಅಂಶಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ತಂತ್ರಜ್ಞಾನದ ಸಹಾಯದಿಂದ ಜನರ ಬಗ್ಗೆ ಸಾಕಷ್ಟು ವಿವರಗಳನ್ನು ಸಂಗ್ರಹಿಸುವ ಸಾಮರ್ಥ್ಯ ಕಂಪೆನಿಗಳಿಗೆ ದಿನೇ ದಿನೇ ಹೆಚ್ಚಾಗುತ್ತಿದೆ. ಮನುಷ್ಯನಿಗೊಂದು ಮಿತಿಯಿದೆ. ದಿನಕ್ಕೆ ಇಪ್ಪತ್ತು ಜನರನ್ನು ಭೇಟಿಯಾದರೂ, ಆ ದಿನದ ಕೊನೆಗೆ ನೆನಪಿರುವುದು ಒಂದೋ ಎರಡೋ ಜನರು ಮಾತ್ರ. ಆದರೆ ನಿಮ್ಮ ಕೈಯಲ್ಲಿರುವ ಫೋನಿಗೆ ನೀವು ಮಾತನಾಡಿದ ಪ್ರತಿಯೊಬ್ಬರ ಮಾಹಿತಿಯೂ ಇರುತ್ತದೆ-ಸಮಯ, ಮಾತನಾಡಿದ ಅವಧಿ, ಎಲ್ಲಿಂದ ಎಲ್ಲಿಗೆ ಮಾತನಾಡಿದಿರಿ, ಇತ್ಯಾದಿ ವಿವರಗಳು ಇಲ್ಲಿ ಯಾವಾಗಲೂ ದಾಖಲಾಗಿರುತ್ತವೆ. ಈ ಎಲ್ಲಾ ಮಾಹಿತಿ ಫೋನಿನಲ್ಲಷ್ಟೇ ದಾಖಲಾಗುವುದಿಲ್ಲ. ಬದಲಿಗೆ ಆ ಫೋನಿಗೆ ಸೇವೆ ನೀಡುವ ಮೊಬೈಲ್ ಕಂಪೆನಿಯಿಂದ ಹಿಡಿದು, ಅಲ್ಲಿರುವ ಎಲ್ಲಾ ಆ್ಯಪ್‌ಗಳ ಮಾಲಕರಿಗೆ ಸಂಪೂರ್ಣವಾಗಿ ಇವು ದೊರೆಯುತ್ತವೆ.
ದೊರೆತರೆ ಏನೀಗ? ತಿಳಿದುಕೊಳ್ಳಲಿ ಬಿಡಿ ಎಂದಿರಾ? ಇಲ್ಲ. ಅಷ್ಟಕ್ಕೆ ಬಿಡುವ ಹಾಗಿಲ್ಲ. ವಿಷಯ ಗಂಭೀರವಾಗಿದೆ. ನಿಮ್ಮ ದಿನನಿತ್ಯದ ವ್ಯವಹಾರಗಳ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವದ ಪೂರ್ಣಚಿತ್ರಣ ಈ ಕಂಪೆನಿಗಳ ಬಳಿ ಇರುತ್ತದೆ. ನಿಮಗಿಂತ ಅವರಿಗೆ ನಿಮ್ಮ ಬಗ್ಗೆ ಅರಿವು ಇರುತ್ತದೆ! ಒಂದು ವಾರದ ಹಿಂದೆ ನೀವು ತಿಂದ ದೋಸೆಯ ನೆನಪು ನಿಮಗಿರುವುದಿಲ್ಲ. ಆದರೆ ಇವರಿಗೆ ಒಂದು ವರ್ಷದಲ್ಲಿ ಇನ್ನೂರು ಬಾರಿ ನೀವು ದೋಸೆ ತಿಂದಿರುವಿರಿ ಎನ್ನುವ ಮಾಹಿತಿ ಇರುತ್ತದೆ. ದಿನಕ್ಕೆ ಹತ್ತು ಬಾರಿ ನಿರ್ದಿಷ್ಟ ರಾಜಕೀಯ ಪಕ್ಷದ ಪರವಾಗಿ ನೀವು ಮೆಸೇಜ್ ಹಾಕಿದ್ದಿರಿ ಎನ್ನುವ ಮಾಹಿತಿ ಇವರ ಬಳಿ ಇರುತ್ತದೆ.
ಇದು ಮನುಷ್ಯ ಸಮಾಜ ಇದುವರೆಗೂ ಎದುರಿಸದೇ ಇರುವ ಸವಾಲು. ಮನುಷ್ಯನ ಆಲೋಚನೆಗಳ ಮೇಲೆ ಹಿಡಿತ ಸಾಧಿಸಿ, ಅವನ ನಂಬಿಕೆಯನ್ನು ಮತ್ತು ನಿಯತ್ತನ್ನು ಪಡೆಯಬೇಕೆಂಬ ಆಕಾಂಕ್ಷೆಯನ್ನು ಅನೇಕರು ಇತಿಹಾಸದಲ್ಲಿ ಹೊಂದಿದ್ದರು ಮತ್ತು ಈಗಲೂ ಹೊಂದಿದ್ದಾರೆ. ಇತಿಹಾಸದಲ್ಲಿ ಆಗಿ ಹೋದ ರಾಜರ ಮಹತ್ವಾಕಾಂಕ್ಷೆ ಇದೇ ಆಗಿತ್ತು. ಹೇಗಾದರೂ ಮಾಡಿ ತಾವು ಆಳುತ್ತಿರುವ ಜನರನ್ನು ಪೂರ್ಣವಾಗಿ ಗೆಲ್ಲಬೇಕು. ಅವರ ಮೇಲೆ ಪೂರ್ಣ ಹಿಡಿತ ಸಾಧಿಸಬೇಕು. ಅದಕ್ಕಾಗಿಯೇ ‘ಗೂಢಚಾರ’ರನ್ನು ನೇಮಿಸಿಕೊಂಡು, ಈ ಗೂಢಚಾರರು ಸರಿಯಾಗಿ ಕೆಲಸ ಮಾಡುತ್ತಿರುವರೋ ಇಲ್ಲವೋ ಎಂದು ನೋಡಲು ಪ್ರತಿಗೂಢಚಾರರನ್ನು ನೇಮಿಸಿಕೊಂಡು-ಹೀಗೆ ಅನೇಕ ವ್ಯವಸ್ಥೆಗಳನ್ನು ಹೊಂದಿರುತ್ತಿದ್ದರು. ಸಾವಿನ ಕುರಿತು, ಬದುಕಿನ ಕುರಿತು ಜನರಿಗಿರುವ ಆಂತಕಗಳನ್ನು ಧರ್ಮದ ಇಲ್ಲವೇ ಧಾರ್ಮಿಕ ನಾಯಕರ ಮೂಲಕ ಬಗೆಹರಿಸುವ ವ್ಯವಸ್ಥೆಯನ್ನು ಸೃಷ್ಟಿಸುವ ಮೂಲಕ ಜನರ ಮೇಲಿನ ಹಿಡಿತವನ್ನು ಬಿಗಿಯಾಗಿಸಿಕೊಳ್ಳುವ ದೂರಾಲೋಚನೆ ಇರುತಿತ್ತು. ಈಗಿನ ಸರಕಾರಗಳೂ ಇದೇ ಕೆಲಸವನ್ನು ಬೇರೆ ಬೇರೆ ಕಾರಣಗಳಿಗಾಗಿ ಮಾಡುತ್ತಿವೆ.
ಕೃತಕ ಬುದ್ಧಿಮತ್ತೆಯನ್ನು ಆಧರಿಸಿ(ಎ.ಐ.) ನಡೆಯುತ್ತಿರುವ ಈ ಮಾಹಿತಿ ಸಂಗ್ರಹಣಕಾರ್ಯ ಮನುಷ್ಯನ ಬದುಕನ್ನು ಪಲ್ಲಟಗೊಳಿಸುತ್ತಿದೆ. ತನ್ನ ಪ್ರತಿಯೊಬ್ಬ ಗ್ರಾಹಕರ ವರ್ತನೆಯ ವಿವರಗಳ ಪೂರ್ಣ ಮಾಹಿತಿಯಿರುವ ಕಂಪೆನಿಗಳು ಇಂದು ಅವರ ವರ್ತನೆಯನ್ನು ತಮಗೆ ಅನುಕೂಲವಾಗುವ ಹಾಗೆ ಬದಲಿಸಿಕೊಳ್ಳುತ್ತಿವೆ. ಹೀಗೆ ಅವು ಮಾಡುತ್ತಿರುವುದು ಗ್ರಾಹಕರಿಗೆ ತಿಳಿಯದೇ ಹೋಗುವುದು ಇಲ್ಲಿ ಮುಖ್ಯವಾಗುತ್ತದೆ. ಮೇಲು ನೋಟಕ್ಕೆ ನಿರ್ಧಾರಗಳನ್ನು ಗ್ರಾಹಕನೇ ತೆಗೆದುಕೊಳ್ಳುತ್ತಿದ್ದಾನೆ ಎನಿಸಿದರೂ, ಕಂಪೆನಿಯು ತನ್ನ ಬಳಿ ಇರುವ ಗ್ರಾಹಕನ ಮಾಹಿತಿಯ ಆಧಾರದ ಮೇಲೆ, ಅವನ ದೌರ್ಬಲ್ಯಗಳ ತಳಹದಿಯ ಮೇಲೆ ತನಗೆ ಬೇಕಾದ ವರ್ತನೆಯನ್ನು ಸೃಷ್ಟಿಗೊಳಿಸಿಕೊಳ್ಳುತ್ತದೆ! ಆದರೆ ಇದು ನಡೆಯಿತು ಎನ್ನುವುದು ಗ್ರಾಹಕನಿಗೆ ಅರಿವಾಗುವುದೇ ಇಲ್ಲ.
ಇದನ್ನೇ ಸ್ವಲ್ಪವಿಸ್ತರಿಸಿಕೊಂಡು ನೋಡುವ. ಒಂದು ವೇಳೆ ಸರಕಾರಕ್ಕೆ ದೇಶದ ಪ್ರತಿಯೊಬ್ಬರ ಕುರಿತೂ ಈ ಮಾಹಿತಿ ಲಭ್ಯವಾದರೆ? ಲಭ್ಯವಾದ ನಿಖರ ಮಾಹಿತಿಯ ಆಧಾರದ ಮೇಲೆ, ಅದು ತನಗೆ ಅನುಕೂಲವಾಗುವ ವರ್ತನೆಯನು ್ನೆಳೆಸುವ ಮತ್ತು ಬಳಸುವ ಕಾರ್ಯಕ್ಕೆ ಕೈಹಾಕುತ್ತದೆ. ಸೇವೆ ನೀಡುವ ಕಂಪೆನಿಗಳಿಗೂ ಪ್ರಭುತ್ವದ ಆಶ್ರಯ ಅನಿವಾರ್ಯ. ಹಾಗಾಗಿ, ಎಷ್ಟೇ ಗ್ರಾಹಕ ಸಂರಕ್ಷಣಾ ಕಾನೂನುಗಳು ಇದ್ದರೂ, ಆಳುವ ಪ್ರಭುವಿನ ಇಚ್ಛೆಯನ್ನು ಪೂರೈಸುವುದು ತಮ್ಮ ಧರ್ಮ ಎನ್ನುವ ನಿಲುವಿಗೆ ಬರುತ್ತವೆೆ. ಆಗ, ಹೊಸದೊಂದು ಬದಲಾವಣೆ ಇಲ್ಲವಾಗುತ್ತದೆ. ಏಕೆಂದರೆ, ಇದುವರೆಗೂ ಇತಿಹಾಸ ಓಟ ಬದಲಾಗಿರುವುದು ಜನರ ಬದಲಾಗುವ ಸಾಧ್ಯತೆಗಳಿಂದಲೇ ಮತ್ತು ಜನರ ಬದಲಾವಣೆಯ ಕುರಿತು ಪ್ರಭುತ್ವಕ್ಕೆ ಪೂರ್ಣಅಂದಾಜು ಮೂಡದೇ ಇದ್ದ ಕಾರಣದಿಂದ.
ಸಮಾಜ ವಿಜ್ಞಾನಿಗಳ ಅಧ್ಯಯನ ಪ್ರಕಾರ, ಇಂತಹ ಕಾರ್ಯ ಈಗಾಗಲೇ ನಡೆಯುತ್ತಿದೆ. ಸರ್ವಾಧಿಕಾರಿಗಳು ಇರುವ ದೇಶದಲ್ಲಿ ಪೂರ್ಣವಾಗಿ ಇದು ನಡೆಯುತ್ತಿದ್ದರೆ, ಪ್ರಜಾಪ್ರಭುತ್ವವಿರುವ ಸಮಾಜಗಳಲ್ಲೂ ಹಂತಹಂತವಾಗಿ ಇದು ಜಾರಿಯಾಗುತ್ತಿದೆ. ನಮ್ಮ ಬಗ್ಗೆ ನಮಗಿಂತಲೂ ಸರಕಾರಕ್ಕೆ ಹೆಚ್ಚು ತಿಳಿದಾಗ...ಏನಾಗುತ್ತದೆ ಎನ್ನುವುದು 2030 ವೇಳೆಗೆ ಪೂರ್ಣವಾಗಿ ನಮಗೆ ಗೊತ್ತಾಗಿರುತ್ತದೆ. ಆಗ ಇಂತಹ ಲೇಖನ ಬರೆಯಲು ಅವಕಾಶವಿರುತ್ತದೋ ಇಲ್ಲವೋ, ಬರೆದರೂ ನೀವು ಓದುತ್ತೀರೋ ಇಲ್ಲವೋ ತಿಳಿಯುತ್ತದೆ. ಅಥವಾ ಇಂತಹದೊಂದು ಸಾಧ್ಯತೆಯೇ ಇಲ್ಲವಾಗಬಹುದು!