ನಂ.13-ಎ, ಶಾಹೀನ್ ಬಾಗ್
ಡಿ.15ರಂದು ಸಂಜೆ ದಿಲ್ಲಿ ಪೊಲೀಸರು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದೊಳಕ್ಕೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದಾಗ ಈ ಮಾತೆಯರು, ಮಾತಾಮಹಿಗಳು ಬೀದಿಗಿಳಿದರು. ಈ ಮಹಿಳೆಯರು ಮನೆಗಳಲ್ಲಿ ಕುಳಿತು ದೂರದರ್ಶನದಲ್ಲಿ ಪೊಲೀಸರ ದೌರ್ಜನ್ಯವನ್ನು ಕಂಡು ತಲ್ಲಣಿಸಿಹೋಗಿದ್ದರು. ಮಕ್ಕಳ ಮೇಲೆ ನಡೆದ ದೌರ್ಜನ್ಯ ಕಂಡು ಕಂಗೆಟ್ಟ ಮಹಿಳೆಯರಿಗೆ ತಮ್ಮ ಮಕ್ಕಳ ರಕ್ಷಣೆಯ ಸಲುವಾಗಿ ಬೀದಿಗಳಿಯುವುದು ಅನಿವಾರ್ಯವಾಯಿತು. ಬೀದಿಗೆ ಬಂದು 13-ಎ ರಸ್ತೆಯ ಮಧ್ಯೆ ಸತ್ಯಾಗ್ರಹ ಪ್ರಾರಂಭಿಸಿದರು.
ದೇಶದ ರಾಜಧಾನಿ, ಮಾಯಾಮೋಹಕ ನಗರಿ ದಿಲ್ಲಿಯ ಎಲ್ಲ ದಾರಿಗಳೂ ಈಚಿನ ದಿನಗಳಲ್ಲಿ ನಂ.13-ಎ, ಶಾಹೀನ್‌ಬಾಗ್ ನತ್ತ ಸಾಗುತ್ತಿವೆ. ದೇಶದ ಎಲ್ಲರ ಕಣ್ಣೂ ಅದರಲ್ಲಿ ಕೇಂದ್ರಿತ. ವಿಶ್ವದ ಗಮನವೂ...ಅದೀಗ ತಾಯಿಯರ ಅಂತಃಕರಣ ಮಿಡಿಯುತ್ತಿರುವ ಕೇಂದ್ರ. ಮಾತೆಯರು, ಮಾತಾಮಹಿಯರು, ಸೋದರಿಯರು ಸೇರಿದಂತೆ ಶಾಹೀನ್ ಬಾಗ್‌ನ ಇಡೀ ನಾರೀವೃಂದ ಇಲ್ಲಿ ಮೇಳೈಸಿದೆ. ಮೇಳಗಾನದಂತೆ ಅಲ್ಲಿಂದ ಒಕ್ಕೊರಳ ದನಿಯೊಂದು ಕೇಳಿಬರುತ್ತಿದೆ. ಅದು: ‘‘ನಾವು ಭಾರತದ ಮಣ್ಣಿನ ಮಕ್ಕಳು. ಮತ್ತೆ ಪೌರತ್ವ ಸಾಬೀತುಪಡಿಸುವಂತೆ ಕೇಳಬೇಡಿ. ಪೌರತ್ವ ತಿದ್ದುಪಡಿ ಕಾಯ್ದೆ ರದ್ದುಗೊಳಿಸಿ.’’-ಇದು ಅವರ ಒಕ್ಕೊರಳ ಹಕ್ಕೊತ್ತಾಯ.
ಪೌರತ್ವ ತಿದ್ದುಪಡಿ ಶಾಸನದ ರದ್ದಿಗೆ ಆಗ್ರಹಿಸುತ್ತಿರುವ ಈ ತಾಯಂದಿರು, ಅಜ್ಜಿಯರು, ಮುತ್ತಜ್ಜಿಯರು, ಸೋದರಿಯರು ಡಿಸೆಂಬರ್ 15ರಿಂದ ಈ ರಸ್ತೆಯ ಮಧ್ಯೆ ಗುಡಾರಗಳನ್ನು ಹಾಕಿಕೊಂಡು ಗಾಂಧಿ ಸತ್ಯಾಗ್ರಹ ಆರಂಭಿಸದ್ದಾರೆ. ಅಂದಿನಿಂದ ಹಗಲುರಾತ್ರಿ ಎನ್ನದೆ ಇಲ್ಲಿ ಬೈಠಕ್ ಸತ್ಯಾಗ್ರಹ ನಡೆದಿದೆ. 13-ಎ ರಸ್ತೆ ಸಂಚಾರಕ್ಕೆ ಬಂದ್ ಆಗಿದೆ.
ಶಾಹೀನ್ ಬಾಗ್ ದಕ್ಷಿಣ ದಿಲ್ಲಿಯ ಒಂದು ಬಡಾವಣೆ. ಮಧ್ಯಮ ವರ್ಗದವರೇ ಹೆಚ್ಚಾಗಿ ಇಲ್ಲಿನ ನಿವಾಸಿಗಳು. ಈ ಬಡಾವಣೆಗೆ ಎರಡು ಕಿ.ಮೀ. ಸಮೀಪದಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸಿದೆ. ಡಿ.15ರಂದು ಸಂಜೆ ದಿಲ್ಲಿ ಪೊಲೀಸರು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದೊಳಕ್ಕೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದಾಗ ಈ ಮಾತೆಯರು, ಮಾತಾಮಹಿಗಳು ಬೀದಿಗಿಳಿದರು. ಈ ಮಹಿಳೆಯರು ಮನೆಗಳಲ್ಲಿ ಕುಳಿತು ದೂರದರ್ಶನದಲ್ಲಿ ಪೊಲೀಸರ ದೌರ್ಜನ್ಯವನ್ನು ಕಂಡು ತಲ್ಲಣಿಸಿಹೋಗಿದ್ದರು. ಮಕ್ಕಳ ಮೇಲೆ ನಡೆದ ದೌರ್ಜನ್ಯ ಕಂಡು ಕಂಗೆಟ್ಟ ಮಹಿಳೆಯರಿಗೆ ತಮ್ಮ ಮಕ್ಕಳ ರಕ್ಷಣೆಯ ಸಲುವಾಗಿ ಬೀದಿಗಿಳಿಯುವುದು ಅನಿವಾರ್ಯವಾಯಿತು. ಬೀದಿಗೆ ಬಂದು 13-ಎ ರಸ್ತೆಯ ಮಧ್ಯೆ ಸತ್ಯಾಗ್ರಹ ಪ್ರಾರಂಭಿಸಿದರು. ಮೊದಲ ದಿನ ಗುಡಾರಗಳೇನಿರಲಿಲ್ಲ. ನೆಲದ ಮೇಲೆ ಬೈಠಕ್ ಸತ್ಯಾಗ್ರಹ. ಪೊಲೀಸರ ದೌರ್ಜನ್ಯ ಬರಲಿರುವ ಕರಾಳ ಭವಿಷ್ಯದ ಮುನ್ಸೂಚನೆಯಾಗಿತ್ತು. ಮನದಲ್ಲಿ ಮೂಡಿದ ಆತಂಕಕ್ಕೆ ಅಭಿವ್ಯಕ್ತಿ ನೀಡಲು ತಾಯಂದಿರು, ಅಜ್ಜಿಯರು, ಸೋದರಿಯರು, ಮನೆಮಕ್ಕಳು 13-ಎ ರಸ್ತೆಯಲ್ಲಿ ಬಂದು ಕಲೆತರು. ಆತಂಕ ಮಡುಗಟ್ಟಿದ ಮಹಿಳೆಯರಲ್ಲಿ ಒಬ್ಬರಾದ ಸಮೀನಾ ಖಾನ್ ಪತ್ರಿಕೆಯೊಂದರೊಂದಿಗೆ ಹಂಚಿಕೊಂಡಿರುವ ಆತಂಕದ ಈ ಮಾತುಗಳನ್ನು ಗಮನಿಸಿ:
‘‘ನೀವು ನೋಟುಗಳನ್ನು ನಿಷೇಧಿಸಿದಿರಿ. ನಾವು ಸೊಲ್ಲೆತ್ತಲಿಲ್ಲ. ಬಾಬರಿ ಮಸೀದಿ ಕುರಿತಂತೆ ನಿಮ್ಮ ತೀರ್ಪನ್ನು ತಿಳಿಸಿದಿರಿ. ನಾವು ಮಾತಾಡಲಿಲ್ಲ, ಮೌನ ತಾಳಿದೆವು. ಆಮೇಲೆ ನೀವು ನಮ್ಮ ಮಕ್ಕಳ ಮೇಲೆರಗಿದಿರಿ. ಆಗ ನಾವು ಬೀದಿಗಿಳಿಯಲು ನಿರ್ಧರಿಸಿದೆವು. ನಮ್ಮ ಹೋರಾಟ ಸರಕಾರದೊಂದಿಗಲ್ಲ. ಆದರೆ ನಾವು ಎಲ್ಲರಂತೆ ಈ ದೇಶದ ಪ್ರಜೆಗಳು’’
ಹೀಗೆ ತನ್ನ ಅಳಲನ್ನು ತೋಡಿಕೊಂಡಿರುವ ಸಮೀನಾ ಡಿ.16ರಿಂದ ತಪ್ಪದೆ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರಂತೆ ಶಾಹೀನ್‌ಬಾಗ್‌ನ ನೂರಾರು, ಸಾವಿರಾರು ಮಹಿಳೆಯರು ನಸುಕಿಗೇ ತಮ್ಮ ಮನೆಗೆಲಸಗಳನ್ನು ಮುಗಿಸಿ ಸತ್ಯಾಗ್ರಹದ ಸ್ಥಳಕ್ಕೆ ಧಾವಿಸಿ ಬರುತ್ತಾರೆ. ಸರಕಾರ ಬರುತ್ತದೆ, ತಮ್ಮ ಅಹವಾಲನ್ನು ಕೇಳುತ್ತದೆ ಎನ್ನುವ ನಿರೀಕ್ಷೆಯಿಂದ. ‘‘ಇನ್ನೊಂದೆರಡು ವರ್ಷಗಳಲ್ಲಿ ಭಗವಂತನ ಕರೆಬಂದಾಗ ನಾನು ಹೊರಟುಹೋಗುತ್ತೇನೆ. ಆದರೆ ನಮ್ಮ ಮಕ್ಕಳ ಗತಿ ಏನು?’’-ಸತ್ಯಾಗ್ರಹಿ ತಾಯಿಯೊಬ್ಬಳು ಪತ್ರತಕರ್ತರ ಮುಂದೆ ತೋಡಿಕೊಂಡ ಚಿಂತೆ. ಈ ಚಿಂತೆ ತಮ್ಮದೂ ಎಂಬಂತೆ ಅಲ್ಲಿ ಕುಳಿತ ಮಾತೆ, ಮಾತಾಮಹಿಗಳೆಲ್ಲ ದನಿಗೂಡಿಸುತ್ತಾರೆ. ‘‘ಪ್ಯಾನ್ ಕಾರ್ಡ್ ಗುರುತಿನ ಚೀಟಿಯಲ್ಲ, ಪಾಸ್‌ಪೊರ್ಟ್ ಗುರುತಿನ ಚೀಟಿಯಲ್ಲ, ಪಡಿತರ ಕಾರ್ಡುಗಳನ್ನು ಸ್ವೀಕರಿಸುವುದಿಲ್ಲ. ಆಧಾರ್‌ಗೆ ಕಿಮ್ಮತ್ತಿಲ್ಲ ಎಂದಾದಲ್ಲಿ ನಮ್ಮ ಭಾರತೀಯತೆಯನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಡುವುದೆಂತು?’’
-ಇದು ಈ ಸತ್ಯಾಗ್ರಹಿಗಳನ್ನು ಕಾಡುತ್ತಿರುವ ಪ್ರಶ್ನೆ. ಶಾಹೀನ್ ಬಾಗ್ ಸತ್ಯಾಗ್ರಹಿಗಳನ್ನು ಮಾತ್ರ ಕಾಡುತ್ತಿರುವ ಪ್ರಶ್ನೆಯಲ್ಲ. ಪೌರತ್ವ ತಿದ್ದುಪಡಿ ಶಾಸನದ ನಂತರ, ದೇಶದಲ್ಲಿನ ಕೋಟ್ಯಂತರ ಮಂದಿ ಅಲ್ಪಸಂಖ್ಯಾತರು, ದಲಿತರು, ಬುಡಕಟ್ಟು ಜನಾಂಗಗಳು ಮೊದಲಾದವರನ್ನು ಚಿಂತೆಗೀಡುಮಾಡಿರುವ ಪ್ರಶ್ನೆ ಇದು. ಎಂದೇ ಕಂಗೆಟ್ಟಿರುವ ಈ ಮಂದಿ ತಾರತಮ್ಯ ಮಾಡುವ ಸಂವಿಧಾನ ವಿರೋಧಿ ಶಾಸನದ ವಿರುದ್ಧ ದನಿಎತ್ತಿ ಬೀದಿಗಿಳಿದಿದ್ದಾರೆ. ಸಂವಿಧಾನದತ್ತವಾದ ಸಮಾನತೆಯಲ್ಲಿ ಮತ್ತು ಜಾತ್ಯತೀತತೆಯಲ್ಲಿ ನಂಬಿಕೆಯುಳ್ಳ ದೇಶವಾಸಿಗಳು ಇವರೊಂದಿಗೆ ಸೇರಿಕೊಂಡಿದ್ದಾರೆ ಎಂದೇ ಶಾಹೀನ್ ಬಾಗ್ ಮಹಿಳೆಯರು ಈ ಹೋರಾಟದಲ್ಲಿ ಏಕಾಂಗಿಯಾಗಿ ಉಳಿದಿಲ್ಲ.
ದೇಶದ ಉಳಿದೆಡೆಗಳಲ್ಲೂ ಪೌರತ್ವ ತಿದ್ದುಪಡಿ ಶಾಸನದ ವಿರುದ್ಧ ಮಹಿಳೆಯರು ಬೀದಿಗಿಳಿದಿದ್ದಾರೆ. ಸತ್ಯಾಗ್ರಹ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಕೋಲ್ಕತಾ ಹೀಗೆ ದಿನದಿಂದ ದಿನಕ್ಕೆ ಸತ್ಯಾಗ್ರಹ ಜನಾಂದೋಲನವಾಗಿ ನಗರ ಬಡಾವಣೆಗಳಲ್ಲಿ, ತಾಲೂಕು ಪಟ್ಟಣಗಳಲ್ಲಿ ಬೆಳೆಯುತ್ತಿದೆ. ಮುಂಬೈ, ಸಾಂಗ್ಲಿ, ಧಾರವಾಡ, ಬೆಂಗಳೂರಿನ ಶಿವಾಜಿನಗರ, ಯಲಹಂಕ ಮೊದಲಾದೆಡೆಗಳಲ್ಲಿ ಸಾವಿರಸಾವಿರ ಸಂಖ್ಯೆಯಲ್ಲಿ ಮಹಿಳೆಯರು ಸತ್ಯಾಗ್ರಹ ನಡೆಸುತ್ತಿದ್ದು ಇವೆಲ್ಲ ಒಂದೊಂದೂ, ಒಂದು ಪುಟ್ಟ ಶಾಹೀನ್‌ಬಾಗ್‌ಗಳಂತೆ ಕಾಣುತ್ತವೆ ಎನ್ನುತ್ತವೆ ಪತ್ರಿಕಾ ವರದಿಗಳು. ಧಾರವಾಡದಂಥ ಪುಟ್ಟ ನಗರದಲ್ಲೇ ಎರಡು ಸಾವಿರ ಮಹಿಳೆಯರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾಗಿ ವರದಿಯಾಗಿದೆ.
ದೇಶದ ವಿವಿಧೆಡೆಗಳಲ್ಲಿ ಪ್ರತಿನಿತ್ಯ ನಡೆದಿರುವ ಈ ಸತ್ಯಾಗ್ರಹಗಳಲ್ಲಿ ಗೃಹಿಣಿಯರು, ಉದ್ಯೋಗಸ್ಥ ಮಹಿಳೆಯರು, ಶ್ರಮಜೀವಿ ಮಹಿಳೆಯರು, ಸಾಹಿತಿಗಳು, ಕಲಾವಿದರು ಮೊದಲ್ಗೊಂಡು ಸಮಾಜದ ವಿವಿಧ ಸ್ತರಗಳ ಮಹಿಳೆಯರು ಪಾಲ್ಗೊಳ್ಳುತ್ತಿರುವುದು ಒಂದು ಗಮನಾರ್ಹ ಸಂಗತಿ. ಬೆಂಗಳೂರಿನ ಪುರಭವನದೆದುರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಗೃಹಿಣಿಯೊಬ್ಬರ ಅನಿಸಿಕೆ ಹೀಗಿದೆ:
‘‘ನಾನು ನನ್ನ ಮಕ್ಕಳಿಗೆ ಜಾತ್ಯತೀತತೆ, ಸಮಾನತೆಯಂಥ ಮೌಲ್ಯಗಳನ್ನು ಬೋಧಿಸುತ್ತೇನೆ. ಈಗ ನಡೆದಿರುವ ವಿದ್ಯಮಾನಗಳನ್ನು ಗಮನಿಸಿದರೆ, ಮುಳ್ಳಿನ ಹಾದಿಯಲ್ಲಿ ಸಜ್ಜನರಾಗಿ ನಡೆದುಕೊಳ್ಳುವಂತೆ ನನ್ನ ಮಕ್ಕಳಿಗೆ ನಾನು ಉಪದೇಶಿಸುತ್ತಿರುವಂತೆ ಭಾಸವಾಗುತ್ತದೆ. ನನ್ನ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಈಗ ಹೋರಾಡಬೇಕಾದ್ದು ನನ್ನ ಕರ್ತವ್ಯ ಎಂದು ನನಗನ್ನಿಸುತ್ತಿದೆ.’’
ರಾಜಕೀಯ ಪಕ್ಷಗಳು ತಮಗೆ ಸೂಕ್ತ ಮನ್ನಣೆ, ಪ್ರಾತಿನಿಧ್ಯಗಳನ್ನು ಕೊಡುತ್ತಿಲ್ಲ ಎನ್ನುವ ಅಸಮಾಧಾನ, ಮಹಿಳೆಯರೊಳಗೆ ಸುಪ್ತವಾಗಿರುವ ಕೋಪ ಆಕ್ರೋಶಗಳೂ ಮಹಿಳೆಯರು ‘ಕಾ’(ಸಿಎಎ) ವಿರೋಧಿ ಸತ್ಯಾಗ್ರಹಕ್ಕೆ ನದಿಯಂತೆ ಹರಿದು ಬರುತ್ತಿರಲು ಕಾರಣವಿದ್ದೀತು ಎನ್ನುವ ಅಭಿಪ್ರಾಯವೂ ಇದೆ. ಇದಕ್ಕೆ ಪುಷ್ಟಿ ಕೊಡುವಂಥ ಮಾತು ಮುಂಬೈಯಿಂದ ಕೇಳಿ ಬಂದಿದೆ. ಅಲ್ಲಿನ ವಕೀಲೆ ಮತ್ತು ಕ್ರಿಯಾವಾದಿ ಲಾರಾ ಜೆಸಾನಿ ಹೀಗೆ ಹೇಳುತ್ತಾರೆ:
‘‘ಮಹಿಳೆಯರಿಗೆ ಮಾನವ ಹಕ್ಕುಗಳ ಬಗ್ಗೆ ಹೆಚ್ಚಿನ ಕಾಳಜಿ ಇದೆ, ಅವರು ಅದಕ್ಕೆ ಹೆಚ್ಚಿನ ಬೆಲೆ ಕೊಡುತ್ತಾರೆ. ಏಕೆಂದರೆ ಇತಿಹಾಸದಲ್ಲಿ ಅವರು ಮಾನವ ಹಕ್ಕುಗಳಿಂದ ವಂಚಿತರು. ಸಿಎಎ ಕೋಮುಗಳ ಮಧ್ಯೆ ಒಡಕನ್ನು ಸೃಷ್ಟಿಸುತ್ತದೆ, ಅಷ್ಟೇ ಅಲ್ಲ ಪ್ರಥಮತಃ ಅದು ಬಾಧಿಸುವುದು ಮಹಿಳೆಯರನ್ನು, ಮೊದಲು ಅದರ ಪರಿಣಾಮವಾಗುವುದು ಮಹಿಳೆಯರ ಮೇಲೆ. ಪಿತೃಪ್ರಧಾನ ವ್ಯವಸ್ಥೆಯಿಂದಾಗಿ ಅನೇಕ ಯುವತಿಯರು ದಾಖಲೆಗಳಿಂದ ವಂಚಿತರು. ಹೆಣ್ಣುಮಕ್ಕಳು ಮದುವೆಯಾಗಿ ಹೋಗುವವರು, ಗಂಡನ ಮನೆಯವರು ಅವರ ಹಿತ ನೋಡಿಕೊಳ್ಳುತ್ತಾರೆ ಎಂಬ ಕಾರಣದಿಂದ ಅವರ ಕೈಗೆ ಯಾವ ದಾಖಲೆಗಳೂ ಸಿಗವುದಿಲ್ಲ. ತಮ್ಮ ಭೂಮಿಕಾಣಿ ಎಲ್ಲಿದೆ ಎನ್ನುವ ದಾಖಲೆಗಳೂ ಅವರ ಬಳಿ ಇರುವುದಿಲ್ಲ’’
ಹೈದರಾಬಾದ್‌ನಲ್ಲಿ ಜನವರಿ 4ರಂದು ಪೌರತ್ವ ತಿದ್ದುಪಡಿ ಶಾಸನದ ವಿರುದ್ಧ ‘ಮಿಲಿಯನ್ ಮಾರ್ಚ್’ ನಡೆಯುತ್ತದೆ. ಮುಖವಾಡಧಾರಿಗಳು ಜವಾಹರಲಾಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಸುದ್ದಿ ತಿಳಿದ ಕೆಲವೇ ನಿಮಿಷಗಳಲ್ಲಿ ಸ್ವಯಂ ಸ್ಫೂರ್ತಿಯಿಂದ ಸತ್ಯಾಗ್ರಹಿಗಳು ಪಾಲ್ಗೊಂಡ ಪ್ರತಿಭಟನೆ ಇದು. ‘ದಿ ಹಿಂದೂ’ ವರದಿ ಮಾಡಿರುವಂತೆ, ಇದರಲ್ಲಿ ಪಾಲ್ಗೊಂಡ ಆರ್ಷಿಯಾ ಸಯೀದ್ ಎಂಬ ವಿದ್ಯಾರ್ಥಿನಿಯೊಬ್ಬರು ಹೇಳುತ್ತಾರೆ:
‘‘ಸರಕಾರದ ಈ ಹೇಸಿಕೆಯ ನಡೆ ಈಗಾಗಲೇ ಅಮುಖ್ಯವಾಗಿರುವ ಸಮುದಾಯವನ್ನು ಮತದಾನದ ಹಕ್ಕಿನಿಂದ ವಂಚಿಸುವುದೇ ಆಗಿದೆ. ಇದು, ಅಭಿಪ್ರಾಯ ರೂಪಿಸುವಂಥ ಅಥವಾ ನಾಯಕತ್ವದ ಸ್ಥಾನಮಾನದ ಜಾಗಗಳಿಂದ ಮುಸ್ಲಿಮರನ್ನು ದೂರವಿಡುವ ಸಾಂಸ್ಥಿಕ ಹುನ್ನಾರವೇ ಆಗಿದೆ.’’
ಈ ಸತ್ಯಾಗ್ರಹ, ಪ್ರತಿಭಟನೆ ಕೇವಲ ಒಂದು ಸಮುದಾಯಕ್ಕೆ ಸಂಬಂಧಿಸಿದ್ದಲ್ಲ. ದೇಶವನ್ನು ಮತ್ತು ಅದರ ಬಹುತ್ವ ಲಕ್ಷಣವನ್ನು ಕಾಪಾಡುವುದೇ ಇದರ ಉದ್ದೇಶ ಎಂಬುದು ಬಹುತೇಕ ಮಂದಿಯ ಅಭಿಪ್ರಾಯವಾಗಿದೆ. ಹಾಗಿದ್ದಲ್ಲಿ ಮಹಿಳೆಯರನ್ನು, ವಿಶೇಷವಾಗಿ ಮನೆಯಲ್ಲೇ ಉಳಿಯಬಯಸುವ ಮುಸ್ಲಿಮ್ ಮಹಿಳೆಯರನ್ನು ಸತ್ಯಾಗ್ರಹದ ಮುಂಚೂಣಿಗೆ ಸೆಳೆದುತಂದಿರುವುದರ ಹಿಂದಿನ ಮರ್ಮವೇನು?
‘‘ಇದು ಒಂದು ಸಮುದಾಯ ಕೇಂದ್ರಿತ ವಿಷಯವಲ್ಲ. ಇದು ಮೀಸಲಾತಿ ಬಗ್ಗೆಯಲ್ಲ, ತ್ರಿವಳಿ ತಲಾಖ್ ಬಗ್ಗೆಯಲ್ಲ ಅಥವಾ ಮುಸ್ಲಿಮ್ ಸಮುದಾಯದ ಕಾನೂನಿನ(ಮುಸ್ಲಿಮ್ ಪರ್ಸನಲ್ ಲಾ) ಬಗ್ಗೆಯೂ ಅಲ್ಲ. ಇದು ಶುದ್ಧಾಂಗವಾಗಿ ಭಾರತೀಯರ ಮತ್ತು ಸಂವಿಧಾನದ ಅಸ್ತಿತ್ವಕ್ಕೆ ಸಂಬಂಧಿಸಿದ್ದು. ಸಂವಿಧಾನ ಸುರಕ್ಷಿತವಾಗಿದ್ದರೆ, ಮುಸ್ಲಿಮರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಸುರಕ್ಷಿತ. ಸಾಕ್ಷ್ಯಾಧಾರ ಪೂರೈಸುವ ಹೊಣೆಭಾರವನ್ನು ಸರಕಾರ ಭಾರತದ ಪ್ರಜೆಗಳ ತಲೆಗೆ ಕಟ್ಟಿದೆ. ಆದ್ದರಿಂದಲೇ ಸಮಾಜದ ವಿವಿಧ ವರ್ಗಗಳಿಗೆ ಸೇರಿದ ಚೊಚ್ಚಲು ಪ್ರತಿಭಟನಾಕಾರರನ್ನು ನೀವಿಲ್ಲಿ ನೋಡುತ್ತಿದ್ದೀರಿ.’’ * * *
‘‘ಈ ಪ್ರತಿಭಟನೆ ಹಿಂದೂ ಅಥವಾ ಮುಸ್ಲಿಮರ ಬಗ್ಗೆಯಲ್ಲ. ಇದು ಸಮಾನತೆ ಕುರಿತದ್ದು....ಮಸೂದೆಯನ್ನು ಅಂಗೀಕರಿಸಬಾರದಿತ್ತು. ಪ್ರತಿಯೊಂದು ಪ್ರತಿಭಟನೆಯೂ ಮಹತ್ವಪೂರ್ಣವಾದುದು..’’
* * *
‘‘ನನ್ನ ತಂದೆಯೂ ಸೇರಿದಂತೆ ನಮ್ಮ ಇಡೀ ಕುಟುಂಬ ಇಲ್ಲಿದೆ. ಇದು ಅಸ್ತಿತ್ವದ ಪ್ರಶ್ನೆ. ಹೇಳಿ, ಈ ಕಾನೂನುಗಳಿಂದ ಪಾರಾಗಲು ನಾವು ಎಲ್ಲಿಗೆ ಹೋಗಬೇಕು? ಪಾಕಿಸ್ತಾನ ಅಥವಾ ಆಫ್ಘಾನಿಸ್ತಾನ? ನಾವು ಭಾರತೀಯರು. ನಮ್ಮ ಸಮಸ್ತವೂ ಇಲ್ಲಿದೆ. ಇದು ನಮಗೆ ಸರ್ವಸ್ವ.’’
-ಸತ್ಯಾಗ್ರಹದಲ್ಲಿ ಪಾಲ್ಗೊಂಡವರು ಮನಬಿಚ್ಚಿ ಆಡಿರುವ ಮಾತುಗಳು ಇವು. ದಿಲ್ಲಿಯ ಶಾಹೀನ್ ಬಾಗ್ ಇರಲಿ, ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್ ಎಲ್ಲೆಡೆಗಳಲ್ಲೂ ಇದೇ ಮಾತು. ಸತ್ಯಾಗ್ರಹಿಗಳಲ್ಲಿ ಅಭಿಪ್ರಾಯಭೇದವಿಲ್ಲ. ಧಾರ್ಮಿಕ ಪಕ್ಷಪಾತ ಮತ್ತು ಅಸಮಾನತೆ ಎಸಗುವ ಈ ಸಂವಿಧಾನಬಾಹಿರ ಶಾಸನ ರದ್ದಾಗಬೇಕೆಂಬುದು ಇವರೆಲ್ಲರ ಸ್ಪಷ್ಟ ಅಭಿಮತ, ಉದ್ದೇಶ, ಗುರಿ. ಸಿಎಎ, ಉದ್ದೇಶಿತ ರಾಷ್ಟ್ರೀಯ ಪೌರರ ನೋಂದಣಿ(ಎನ್‌ಆರ್‌ಸಿ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ಇವುಗಳ ವಿರುದ್ಧ ಸಂಸತ್ತಿನಲ್ಲಿ ಹಲವಾರು ರಾಜಕೀಯ ಪಕ್ಷಗಳು ಜೋರು ದನಿಯಲ್ಲಿ ಪ್ರತಿಭಟಿಸಿದವು. ಸಾಹಿತಿಗಳು, ನಿವೃತ್ತ ನ್ಯಾಯಾಧೀಶರು, ನಿವೃತ್ತ ಸೇನಾಧಿಕಾರಗಳು, ವಿಜ್ಞಾನಿಗಳು, ವಕೀಲರು, ಪತ್ರಕರ್ತರು ಮೊದಲ್ಗೊಂಡು ದೇಶದ ಮೇಧಾವಿಗಳು ಇದರ ವಿರುದ್ಧ ದನಿ ಎತ್ತಿದರು, ಸರಕಾರಕ್ಕೆ ಮನವಿ ಪತ್ರ ಬರೆದರು. ಪೌರತ್ವ ತಿದ್ದುಪಡಿ ಶಾಸನದ ಸಂವಿಧಾನಾತ್ಮಕ ಸಿಂಧುತ್ವ ಪ್ರಶ್ನಿಸಿ ನೂರನಲವತ್ನಾಲ್ಕು ಮಂದಿ ಸುಪ್ರೀಂ ಕೋರ್ಟಿನ ಮೊರೆಹೊಕ್ಕಿದ್ದಾರೆ. ಸುಪ್ರೀಂ ಕೋರ್ಟ್ ಯಥಾಸಾವಕಾಶ ಅರ್ಜಿಗಳನ್ನು ವಿಚಾರಣೆಗೆತ್ತಿಕೊಂಡಿದೆ.
ಇವೆಲ್ಲ ರಾಜಕಾರಣದ ಮಾಮೂಲಿನ ಪ್ರಕ್ರಿಯೆ ಎಂಬಂತಲೇ ಸರಕಾರಕ್ಕೆ ತೋರಿರಬೇಕು. ಆದರೆ ಭಾರತೀಯ ಒಕ್ಕೂಟದ ಅಂಗವಾದ ರಾಜ್ಯಗಳು ವಿರೋಧ ವ್ಯಕ್ತಪಡಿಸಿ ವಿಧಾನಸಭೆಗಳಲ್ಲಿ ನಿರ್ಣಯ ಅಂಗೀಕರಿಸಿದಾಗ ಪೌರತ್ವ ತಿದ್ದುಪಡಿ ಶಾಸನ ವಿರೋಧಿ ದನಿಗೆ ಹೊಸ ಟೊಂಗೆ ಮೂಡಿತು. ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಶಾಹೀನ್‌ಬಾಗ್ ಮಾತೆ, ಮಾತಾಮಹಿಯರು, ದೇಶದ ವಿವಿಧೆಡೆಗಳಲ್ಲಿ ಗೃಹಿಣಿಯರು, ಉದ್ಯೋಗಸ್ಥ ಮಹಿಳೆಯರು ರಾಷ್ಟ್ರಧ್ವಜ ಮತ್ತು ಸಂವಿಧಾನದ ಪ್ರತಿಗಳನ್ನು ಹಿಡಿದು ಬೀದಿಗಿಳಿದು ಗಾಂಧಿ ಮಾದರಿ ಸತ್ಯಾಗ್ರಹ ಪ್ರಾರಂಭಿಸಿದಾಗ ಪೌರತ್ವ ತಿದ್ದುಪಡಿ ಶಾಸನ ವಿರೋಧಿ ಪ್ರತಿಭಟನೆಯ ಬಣ್ಣ, ಲಕ್ಷಣಗಳೇ ಬದಲಾದವು. ಮಾಮೂಲಿನ ರಾಜಕೀಯ ಪ್ರಕ್ರಿಯೆಯ ಛಾಪು ಹೋಗಿ, ಪ್ರತಿಭಟನೆ ಮಾಮೂಲಿ ರಾಜಕೀಯ ಪ್ರೇರಿತವಲ್ಲದ ಜನಾಂದೋಲನದ ರೂಪ ಪಡೆಯಿತು. ಸಂವಿಧಾನದ ಪೀಠಿಕೆಯಲ್ಲಿರುವ ‘‘ಭಾರತದ ಜನತೆಯಾದ ನಾವು...’’ಎನ್ನುವ ಘೋಷವಾಕ್ಯ ಈ ಸತ್ಯಾಗ್ರಹದಲ್ಲಿ ಮೂರ್ತರೂಪ ಪಡೆದು ಯಾವುದೇ ರಾಜಕೀಯದ ಹಂಗಿಲ್ಲದ ಜನ ಪ್ರವಾಹದೋಪಾದಿ ಹರಿದು ಬಂದರು, ತಮ್ಮ ಸಮಾನತೆಯ ಹಕ್ಕನ್ನು ರಕ್ಷಿಸಿಕೊಳ್ಳಲು. ಈ ಸತ್ಯಾಗ್ರಹಿಗಳು ಕೈಯಲ್ಲಿ ಸಂವಿಧಾನವನ್ನು ಹಿಡಿದುಕೊಂಡು ಸರಕಾರದ ಮುಖಕ್ಕೆ ಹೊಡೆದಂತೆ ಸತ್ಯವನ್ನು ಮಾತನಾಡುತ್ತಿದ್ದಾರೆ.
ಶಾಹೀನ್ ಬಾಗ್ ಮಾತೆಯರು ಸೇರಿದಂತೆ ದೇಶದ ಎಲ್ಲೆಡೆಗಳಲ್ಲಿನ ಮಹಿಳೆ-ಪುರುಷ ಸತ್ಯಾಗ್ರಹಿಗಳ ಬೇಡಿಕೆ ಇಷ್ಟೆ: ಸರಕಾರ ಪ್ರತ್ಯಕ್ಷವಾಗಿ ತಮ್ಮ ಅಹವಾಲನ್ನು ಕೇಳಬೇಕು, ಪೌರತ್ವ ತಿದ್ದುಪಡಿ ಶಾಸನ ರದ್ದುಗೊಳಿಸಬೇಕು, ಎನ್‌ಆರ್‌ಸಿ, ಎನ್‌ಪಿಆರ್ ಆಲೋಚನೆಗಳನ್ನು ಬಿಡಬೇಕು. ಪೌರತ್ವ ತಿದ್ದುಪಡಿ ಶಾಸನದಿಂದ ಯಾರೊಬ್ಬರ ಪೌರತ್ವಕ್ಕೂ ಧಕ್ಕೆಬಾರದೆಂದು ಹೇಳುವ ಸರಕಾರಕ್ಕೆ ಜನರನ್ನು ಭೇಟಿಮಾಡಿ ಅವರ ಮನಸ್ಸಿನಲ್ಲಿ ಮೂಡಿರುವ ಸಂಶಯಗಳನ್ನು ನಿವಾರಿಸುವ ಕಾಳಜಿ ಇಲ್ಲ. ದಿಲ್ಲಿ ಚುನಾವಣೆ ಮುಗಿದರೆ ಶಾಹೀನ್ ಬಾಗ್ ಮಾತೆ, ಮಾತಾಮಹಿಯರು ಇರುವುದಿಲ್ಲ ಎನ್ನುವುದು ಸರಕಾರದ ಮತ್ತು ಬಿಜೆಪಿ ನಾಯಕರ ಅಂಬೋಣ. ಚುನಾವಣೆಯಲ್ಲಿ ತಮ್ಮ ಪಕ್ಷ ಗೆದ್ದು ಶಾಹೀನ್ ಬಾಗ್ ಸತ್ಯಾಗ್ರಹವನನ್ನು ಹೊಸಕಿಹಾಕಲಾಗುವುದು ಎನ್ನುವುದು ‘ಇರುವುದಿಲ್ಲ’ ಮಾತಿನ ಇಂಗಿತಾರ್ಥವಿರಬಹುದೇ?
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರು ಹೇಳಿರುವಂತೆ, ‘‘ಈ ಸತ್ಯಾಗ್ರಹ ಎರಡನೆಯ ಸ್ವಾತಂತ್ರ್ಯ ಹೋರಾಟದ ಆಯಾಮ ಪಡೆದುಕೊಂಡಿದೆ. ಶಾಹೀನ್ ಬಾಗ್, ಈ ‘ಆಝಾದಿ’ ಹೋರಾಟದ ರೂಪಕವಾಗಿದೆ.ರಾಷ್ಟ್ರವ್ಯಾಪಿಯಾಗಿರುವ ಈ ಜನಾಂದೋಲನದ ಮಾತೃ ವಿಳಾಸ: ನಂ.13-ಎ, ಶಾಹೀನ್ ಬಾಗ್ ಎನ್ನುತ್ತದೆ ಚರಿತ್ರೆ.