ನನ್ನ ಪ್ರಕಾರ, ಭಾರತದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ: ಅಸ್ಘರ್ ವಜಾಹತ್
ಸುಮಾರು ನಲವತ್ತು ಕೃತಿಗಳನ್ನು ಪ್ರಕಟಿಸಿರುವ 73ರ ಹರೆಯದ ಖ್ಯಾತ ಹಿಂದಿ ಲೇಖಕ ಅಸ್ಘರ್ ವಜಾಹತ್ ಅವರ ಜತೆ ನಡೆಸಿದ ಸಂದರ್ಶನದ ಆಯ್ದ ಭಾಗಗಳಿವು. ನಾಟಕ, ಕಾದಂಬರಿ, ಸಣ್ಣ ಕಥಾ ಸಂಗ್ರಹ, ಸಾಹಿತ್ಯ ವಿಮರ್ಶೆ ಹಾಗೂ ಪ್ರವಾಸ ಕಥನಗಳನ್ನು ಬರೆದಿರುವ ವಜಾಹತ್ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಇಲ್ಲಿ ಜಾಮಿಯಾ ಮಿಲ್ಲಿಯಾ ಹಾಗೂ ತನ್ನ ನಾಟಕಗಳು ಯಾಕೆ ಇನ್ನೂ ಜನರನ್ನು ಉದ್ದೀಪಿಸುತ್ತದೆ ಎಂಬ ಬಗ್ಗೆ ಮಾತಾಡಿದ್ದಾರೆ.
ಬ್ರಿಟಿಷರು ನಮಗೆ ಅವಸರದಲ್ಲಿ ಸ್ವಾತಂತ್ರ್ಯ ನೀಡಿ ಹೊರಟು ಹೋದರು. ಅವರಿಂದ ನಮಗೆ ಒಂದು ಡೊಮಿನಿಯನ್ ರಾಷ್ಟ್ರ ದೊರಕದ್ದಿದ್ದರೆ ನಮಗೆ ಚರ್ಚಿಸಲು ಸಾಕಷ್ಟು ಸಮಯ ಸಿಗುತ್ತಿತ್ತು. ನಮ್ಮ ಅವಶ್ಯಕತೆಗಳಿಗೆ, ಪರಂಪರೆಗಳಿಗೆ ಹೊಂದುವಂತಹ ಒಂದು ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿತ್ತು.
ಪ್ರಶ್ನೆ: ನಿಮ್ಮ ನಾಟಕ ‘ಗಾಂಧಿ@ಗೋಡ್ಸೆ ಡಾಟ್ ಕಾಮ್’ ರಾಜ್‌ಕುಮಾರ್ ಸಂತೋಷಿ ಅವರ ನಿರ್ದೇಶನದಲ್ಲಿ ಸಿನೆಮಾ ಆಗುತ್ತಿದೆ. ಯಾವ ಕಾರಣಕ್ಕಾಗಿ ಅದು ಇಂದಿಗೆ ಪ್ರಸ್ತುತವಾಗಿದೆ?
► ದೇಶದ್ರೋಹಕ್ಕಾಗಿ ಗೋಡ್ಸೆ ಜೊತೆ ಗಾಂಧಿ ಜೈಲಿನಲ್ಲಿರುವ ದೃಶ್ಯದೊಂದಿಗೆ ನಾಟಕ ಆರಂಭವಾಗುತ್ತದೆ. ಗೋಡ್ಸೆಯ ದ್ವೇಷದ ಮೂಲ ಎಲ್ಲಿದೆ ಎಂದು ತಿಳಿಯಲು ಗಾಂಧಿ ಅವನ ಜೊತೆ ಮಾತಿಗಿಳಿಯುತ್ತಾರೆ. ಹೀಗೆ ನಾಟಕವು ಗಾಂಧಿ ಮತ್ತು ಗೋಡ್ಸೆ ನಡುವಿನ ಒಂದು ಸಂವಾದವಾಗಿದೆ. ಇವತ್ತು ಜನರು ತಮ್ಮ ಸಿದ್ಧಾಂತಗಳಿಂದಾಗಿ ಎರಡು ಅತಿರೇಕಗಳ ನಡುವೆ ವಿಭಜಿಸಲ್ಪಟ್ಟಿರುವುದನ್ನು ನೋಡುವಾಗ ಆ ವಿಭಜನೆಯನ್ನು ಕೇವಲ ಸಂವಾದದ ಮೂಲಕವಷ್ಟೇ ನಾವು ಬಗೆಹರಿಸಲು ಸಾಧ್ಯ ಅನ್ನಿಸುತ್ತದೆ. ಈ ನಾಟಕ ಪ್ರಕಟವಾದಂದಿನಿಂದ ವಿವಾದಾಸ್ಪದವಾಗಿಯೇ ಇದೆ. ಅದು ಬೇರೆ ಹಲವು ವಿಷಯಗಳನ್ನು ಹೇಳುತ್ತ ಗೋಡ್ಸೆಯನ್ನು ಒಂದು ಜನಪ್ರಿಯ ಪಾತ್ರವಾಗಿ ಚಿತ್ರಿಸುತ್ತದೆ. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ನಾನು ಸತ್ಯವನ್ನಷ್ಟೇ ಚಿತ್ರಿಸಿದ್ದೇನೆ.
ಪ್ರ: ನೀವು ಅಲಿಗಡ ಮುಸ್ಲಿಮ್ ಯೂನಿವರ್ಸಿಟಿ (ಎಎಂಯು) ಮತ್ತು ಜವಾಹರಲಾಲ್ ನೆಹರೂ ಯುನಿವರ್ಸಿಟಿ (ಜೆಎನ್‌ಯು)-ಎರಡೂ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿದ್ದೀರಿ. ನೀವು ಮೊದಲು ಸೇವೆ ಸಲ್ಲಿಸಿದ್ದು ಜಾಮಿಯಾದಲ್ಲಿ ಹಿಂದಿ ಪ್ರಾಧ್ಯಾಪಕರಾಗಿ. 2013ರಲ್ಲಿ ಸೇವೆಯಿಂದ ನಿವೃತ್ತರಾದ ಬಳಿಕ ನೀವು ಅಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದೀರಿ. ಈಗ ಈ ಎರಡೂ ಸಂಸ್ಥೆಗಳು ವಿವಾದಗಳ ಕೇಂದ್ರವಾಗಿವೆ.
► ಈ ವಿಶ್ವವಿದ್ಯಾನಿಲಯಗಳು ದ್ವೇಷ ಅಥವಾ ಒಂದು ನಿರ್ದಿಷ್ಟ ಸಿದ್ಧಾಂತವನ್ನು ಹುಟ್ಟು ಹಾಕುವ, ಹರಡುವ ಸಂಸ್ಥೆಗಳೆಂದು ಇವುಗಳಿಗೆ ಹಣೆಪಟ್ಟಿ ಅಂಟಿಸುವ ಮೊದಲು, ಈ ಪ್ರತಿಯೊಂದು ವಿಶ್ವವಿದ್ಯಾನಿಲಯದ ಇತಿಹಾಸ ಹಾಗೂ ಅದರ ಪರಂಪರೆ, ಅದು ದೇಶಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಬೇಕಾಗಿತ್ತು, ಪರಿಶೀಲಿಸಬೇಕಾಗಿತ್ತು. ನಿಜ ಹೇಳಬೇಕೆಂದರೆ ಜಾಮಿಯ ವಿವಿಯನ್ನು ಸ್ಥಾಪಿಸಲು ಮೂಲ ಕಾರಣ ಗಾಂಧೀಜಿ. ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯನ್ನು ತಿರಸ್ಕರಿಸಬೇಕೆಂದು ಗಾಂಧೀಜಿ ನೀಡಿದ ಕರೆಗೆ ಪ್ರತಿಕ್ರಿಯೆಯಾಗಿ ಜಾಮಿಯ ವಿವಿಯನ್ನು ಸ್ಥಾಪಿಸಲಾಯಿತು. ಬ್ರಿಟಿಷ್ ಶಿಕ್ಷಣ ಪದ್ಧತಿಯ ಕುರಿತು ಗಾಂಧೀಜಿ ಎಎಂಯುನಲ್ಲಿ ಒಂದು ಉಪನ್ಯಾಸ ನೀಡಿದರು. ಅವರ ಭಾಷಣ ಎಎಂಯು ಆಡಳಿತ ಮಂಡಳಿಯನ್ನು ಎರಡು ಗುಂಪುಗಳಾಗಿ ವಿಭಜಿಸಿತು. ಗಾಂಧೀಜಿಯನ್ನು ಬೆಂಬಲಿಸಿದ ಗುಂಪು ಜಾಮಿಯಾವನ್ನು ರೂಪಿಸಿತ್ತು. ಅದು ಅವರ ಕಾಲಕ್ಕೆ ಬಹಳ ಮುಂದೆ ಇದ್ದ ಒಂದು ಸಂಸ್ಥೆ. ಜಾತ್ಯತೀತ, ಸ್ವತಂತ್ರ ಹಾಗೂ ಪ್ರಜಾಸತ್ತಾತ್ಮಕ ಸಂಸ್ಥೆ ಅದಾಗಿತ್ತು. ಗಾಂಧೀಜಿಯವರ ಪುತ್ರ ದೇವದಾಸ್ ಅದರ ಮೊದಲ ಹಿಂದಿ ಶಿಕ್ಷಕರಾಗಿದ್ದರು. ಅಲ್ಲಿ ವಿದ್ಯಾರ್ಥಿಗಳಿಗೆ ಅವರದ್ದೇ ಆದ ನಗರಸಭೆ, ಪೊಲೀಸ್ ಸಾರಿಗೆ ನಿಯಮಗಳಿದ್ದವು. ಅವರು ಅವರದ್ದೇ ಆದ ಒಂದು ಬ್ಯಾಂಕ್ ನಡೆಸುತ್ತಿದ್ದರು. ಜಾಮಿಯಾ ಒಂದು ಸ್ವ-ಸಂಪೂರ್ಣ ಸೆಲ್ಫ್ -ಸಫೀಶಿಯಂಟ್ ಹಳ್ಳಿಯ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ವಿದ್ಯಾರ್ಥಿಗಳು ರಾತ್ರಿ ವೇಳೆ ಸಮೀಪದ ಹಳ್ಳಿಯಲ್ಲಿ ಬೋಧಿಸುವ ಮೂಲಕ ಪ್ರೌಢ ಶಿಕ್ಷಣ ಮುಂದುವರಿಯಲು ನೆರವಾಗುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಪರಿಸ್ಥಿತಿ ಬದಲಾಯಿತು. ಆದರೆ ಮೂಲ ಆಶಯ, ಸ್ಫೂರ್ತಿ, ಚೈತನ್ಯ ಅಂದು ಇದ್ದ ಹಾಗೆ ಈಗಲೂ ಉಳಿದಿದೆ. ಜಾಮಿಯಾ ಒಂದು ಮುಸ್ಲಿಮ್ ಸಂಸ್ಥೆ ಇರಬಹುದು. ಆದರೆ ವಿವಿಯ ಪ್ರವೇಶ ಅರ್ಜಿಯಲ್ಲಿ ಇಂದಿಗೂ ಧರ್ಮವನ್ನು ಉಲ್ಲೇಖಿಸುವ, ವಿದ್ಯಾರ್ಥಿ ಯಾವ ಧರ್ಮಕ್ಕೆ ಸೇರಿದವನೆಂದು ಕೇಳುವ ಒಂದು ಸೆಕ್ಷನ್ ಇಲ್ಲ.
ಪ್ರ: ವಿವಿಯ ವಿದ್ಯಾರ್ಥಿಗಳ ಮೇಲೆ ದಾಳಿ ನಡೆದಾಗ ನೀವು ಕ್ಯಾಂಪಸ್‌ನಲ್ಲಿ ಇದ್ದಿರಾ?
► ಇಲ್ಲ ನಾನಾಗ ಅಲ್ಲಿರಲಿಲ್ಲ. ಅಲ್ಲಿ ಏನು ನಡೆಯಿತೋ ಅದು ದುಃಖದ ವಿಷಯ, ಬೇಸರದ ಸಂಗತಿ. ವಿವಿಯ ಕ್ಯಾಂಪಸ್‌ನೊಳಗೆ ಕಿಡಿಗೇಡಿಗಳಿದ್ದಾರೆ ಎಂದು ಪೊಲೀಸರು ನಿಜವಾಗಿಯೂ ನಂಬಿದ್ದರೆ, ನಿಜವಾಗಿಯೂ ಭಾವಿಸಿದ್ದರೆ ಪರಿಸ್ಥಿತಿಯನ್ನು ನಿಭಾಯಿಸಲು ಇತರ ಕೆಲವು ಕ್ರಮಗಳು, ದಾರಿಗಳು ಇದ್ದವು. ಮಕ್ಕಳನ್ನು ಬೆದರಿಸುವುದು, ಟೆರರೈಸ್ ಮಾಡುವುದು, ಗ್ರಂಥಾಲಯಕ್ಕೆ ಹಾನಿ ಮಾಡುವುದು, ಹೆಣ್ಣು ಮಕ್ಕಳನ್ನು ಥಳಿಸುವುದು... ಅಲ್ಲಿ ನಡುವೆ ಇದನ್ನೆಲ್ಲಾ ನೋಡುವಾಗ ಮನಸ್ಸಿಗೆ ನೋವಾಗುತ್ತದೆ. ನಮ್ಮ ಸಂಸ್ಥೆಯನ್ನು ಹಾಗೂ ಎಎಂಯುವನ್ನು ಮುಚ್ಚಿ ಬಿಡಲು ಸರಕಾರ ಕಾರಣಗಳನ್ನು ಹುಡುಕುತ್ತಿದ್ದೆಯೋ ಏನೋ ಅನ್ನಿಸುತ್ತಿದೆ. ಹೀಗೆ ಮುಚ್ಚಿಬಿಡುವುದು ಸುಲಭ. ಯಾಕೆಂದರೆ ನಮಗೆ ಅನುದಾನ ನೀಡುತ್ತಿರುವುದು ಕೇಂದ್ರ ಸರಕಾರ. ನನಗೆ ಈಗಿನ ಪರಿಸ್ಥಿತಿಯನ್ನು ನೋಡುವಾಗ ಜಾಮಿಯಾ ಮೊದಲ ಕುಲಪತಿಯಾಗಿದ್ದ ಡಾ. ಝಾಕೀರ್ ಹುಸೈನ್ ನೆನಪಾಗುತ್ತಾರೆ. ತನಗೆ ಹೊಸ ಕಟ್ಟಡಗಳನ್ನು ಉದ್ಘಾಟಿಸಲು ಭಯವಾಗುತ್ತದೆ; ಯಾಕೆಂದರೆ ಬಹಳಷ್ಟು ವೇಳೆ ಅವುಗಳನ್ನು ಯಾವ ವಿಚಾರಗಳ ಚಿಂತನೆಗಳ ನೆಲೆಯಲ್ಲಿ ನಿರ್ಮಿಸಲಾಗಿತ್ತೋ ಅವು ಚಿಂತನೆಗಳ ಗೋರಿಗಳಾಗುತ್ತವೆ ಎಂದು ಅವರು ಹೇಳಿದ್ದರು.
ಪ್ರ: ನಿಮ್ಮ ಕೃತಿ ‘ಜಿಸ್ ಲಾಹೋರ್ ನಯೀ ದೇಖಿಯಾ, ಓ ಜಮ್ಯಾಲ್ ನಯೀ’ (1989) ದೇಶದ ವಿಭಜನೆಯ ಬಳಿಕ ಲಾಹೋರ್‌ನಲ್ಲಿ ಉಳಿಯುವ, ಆದರೆ ಬಳಿಕ ಕೋಮುವಾದಿ ಜನರ ಸಿಟ್ಟಿಗೆ ಗುರಿಯಾಗುವ ಒಬ್ಬಳು ಹಿಂದೂ ಮಹಿಳೆಯ ಕಥೆ ಹೇಳುತ್ತದೆ. ದೇಶದ ವಿಭಜನೆ ನಡೆದು ನಲವತ್ತು ವರ್ಷಗಳ ಬಳಿಕ ವಿಭಜನೆಯ ಕಡೆಗೆ ಮತ್ತೆ ನೀವು ತಿರುಗಿ ನೋಡಲು ಏನು ಕಾರಣ?
► ಎರಡು ಬೇರೆ ಬೇರೆ ಧರ್ಮಗಳಿಗೆ ಸೇರಿದ ಜನರು ಒಟ್ಟಾಗಿ ಬದುಕಲು ಸಾಧ್ಯವಿಲ್ಲ ಎಂಬುದನ್ನು ನೀವು ಒಪ್ಪಿಕೊಂಡ ಮೇಲೆ ಎರಡು ಬೇರೆ ಬೇರೆ ಸಿದ್ಧಾಂತಗಳನ್ನು ಒಪ್ಪಿಕೊಂಡಿರುವ ಜನರು ಕೂಡ ಒಟ್ಟಾಗಿ ಬದುಕಲು ಸಾಧ್ಯವಿಲ್ಲ ಎಂಬುದನ್ನು ಕೂಡ ನೀವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಇಷ್ಟಕ್ಕೂ ಧರ್ಮವೆಂದರೇನು ಹೇಳಿ? ಅದೊಂದು ವಿಚಾರ, ಒಂದು ಐಡಿಯಾ. ನೀವು ಒಮ್ಮೆ ಇದನ್ನು ಒಪ್ಪಿಕೊಂಡಿರಿ ಎಂದರೆ ಅದು ನಿಮ್ಮ ಅಭಿಪ್ರಾಯವನ್ನು ಒಪ್ಪದಿರುವ ಯಾವನೇ ವ್ಯಕ್ತಿ ‘ಇತರ’ ಆಗುತ್ತಾನೆ. ಪಾಕಿಸ್ತಾನ ಇದಕ್ಕೆ ಒಂದು ಉದಾಹರಣೆ-ಅದು ಒಂದು ಮುಸ್ಲಿಮ್ ರಾಷ್ಟ್ರವಾಯಿತು. ಆದರೆ ಬಹುಸಂಖ್ಯಾತರಾದ ಸುನ್ನಿಗಳು ಇತರ ಮುಸ್ಲಿಮ್ ಪಂಥಗಳನ್ನು ಒಪ್ಪಿಕೊಂಡರೇ?
ಪ್ರ: ಈಗ ಎನ್‌ಆರ್‌ಸಿ ಮತ್ತು ಸಿಎಎಯ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿರುವಾಗ ಭಾರತ ಕೂಡ ಧಾರ್ಮಿಕ ಅಸಹಿಷ್ಣುತೆಯ ಭವಿಷ್ಯದ ಕಡೆಗೆ ಸಾಗುತ್ತಿದೆಯೇ ಎಂಬ ಭಯ ದಿನೇ ದಿನೇ ಹೆಚ್ಚಾಗುತ್ತಿದೆ. ನೀವು ಈ ನಾಟಕ ಬರೆದಾಗ ಭಾರತದಲ್ಲಿ ಇಂತಹ ಒಂದು ಭವಿಷ್ಯ ಬರಬಹುದೆಂದು ಊಹಿಸಿದ್ದೀರಾ?
► ಬಾಬರಿ ಮಸೀದಿಯನ್ನು ಧ್ವಂಸಗೊಳಿಸುವ ಮೊದಲು ಧಾರ್ಮಿಕ ಅಸಹಿಷ್ಣುತೆಯ ಒಂದು ಭಾರತವನ್ನು ಬಹಳ ಜನ ಕಲ್ಪಿಸಿಕೊಂಡಿರಲಾರರು. ಬಾಬರಿ ಮಸೀದಿ ಧ್ವಂಸದ ನಂತರದ ವರ್ಷಗಳಲ್ಲಿ ಧರ್ಮದ ನೆಲೆಯಲ್ಲಿ ಜನರ ನಡುವೆ ವಿಭಜನೆ, ಅಡ್ಡಗೋಡೆಗಳು ಹೆಚ್ಚುತ್ತಿವೆ. ದೇಶಕ್ಕೆ ಸ್ವಾತಂತ್ರ್ಯ ಬರುವಾಗ, ಆಧುನಿಕ ಪ್ರಜಾಸತ್ತಾತ್ಮಕ ಭಾರತ ರೂಪುಗೊಳ್ಳುತ್ತಿದ್ದಾಗ ಏಕತೆ, ಜಾತ್ಯತೀತತೆ ಮತ್ತು ಅಂತರ್-ಸಾಂಸ್ಕೃತಿಕ ತಿಳಿವಳಿಕೆ ಭಾರತದ ಪರಿಕಲ್ಪನೆಯ ಮೂಲ ತಿರುಳು ಆಗಿತ್ತು ಮತ್ತು ಸಿಎಎ ಈ ಮೂಲ ತಿರುಳಿಗೆ ಬೆದರಿಕೆ ಒಡ್ಡುತ್ತಿದೆ. ಈಗಿನ ಸರಕಾರ ಸಂವಿಧಾನವನ್ನು ಬದಲಿಸದೆಯೇ ಅದನ್ನು ಬದಲಿಸಿದೆ. ಸರಕಾರದ ಕ್ರಿಯೆಗಳು, ಕ್ರಮಗಳು ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳಿಗೆ ವಿರುದ್ಧವಾಗಿವೆ. ಆದರೆ ಅವರು (ಸರಕಾರ) ಮಹಾತ್ಮಾ ಗಾಂಧಿಯನ್ನು ತಮ್ಮವರಾಗಿ (ಕೋ ಆಪ್ಟ್) ಮಾಡಿಕೊಂಡಿದ್ದಾರೆ ಮತ್ತು ಅವರನ್ನು ಪ್ರಶ್ನಿಸುವವರನ್ನೇ ಎದುರಿಸಲು ಗಾಂಧೀಜಿಯನ್ನು ಒಂದು ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದಕ್ಕೆ ಯಾರನ್ನು ದೂರುವುದು? ಎಡ ಹಾಗೂ ಸಮಾಜವಾದಿ ಚಳವಳಿಗಳು ಸತ್ತುಹೋಗಿವೆ. ಯಾಕೆಂದರೆ ಇವರು ಜನಸಮುದಾಯಗಳಿಗೆ ಕನೆಕ್ಟ್ ಆಗಿ ಉಳಿಯಲಿಲ್ಲ ಮತ್ತು ಪ್ರಜಾಪ್ರಭುತ್ವ ಎಂಥ ವ್ಯವಸ್ಥೆಯೆಂದರೆ ಅಲ್ಲಿ ವ್ಯಕ್ತಿಯ ಮೌಲ್ಯ ಮುಖ್ಯವಾಗುವುದಿಲ್ಲ, ವ್ಯಕ್ತಿಗಳ ಸಂಖ್ಯೆಯನ್ನಷ್ಟೇ ಎಣಿಕೆ ಮಾಡಲಾಗುತ್ತದೆ.
ಪ್ರ: ನೀವು ನಿಮ್ಮ ಪುಸ್ತಕ ‘ಭೀಡ್ ತಂತ್ರ’ದ ಮೂಲಕ ಹೇಳಲು ಪ್ರಯತ್ನಿಸುವುದು ಇದನ್ನೇ ಏನು?
► ಆ ಪುಸ್ತಕ ಪ್ರಜಾಪ್ರಭುತ್ವದ ಕುರಿತಾಗಿರುವ ಒಂದು ವಿಮರ್ಶೆ. ನನ್ನ ಪ್ರಕಾರ ಭಾರತದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ. ಒಂದು ಪ್ರಜಾಪ್ರಭುತ್ವ ಯೋಚಿಸುವ, ಕ್ರಿಯೆಯಲ್ಲಿ ತೊಡಗುವ ಜನರಿಂದ ರಚಿತವಾಗುವಂತಹದ್ದು; ಆದರೆ ಭೀಡ್ ತಂತ್ರ ಎಂಬುದು ಕೇವಲ ಒಂದು ಭೀಡ್, ಒಂದು ಗುಂಪು.ಅದು ಯೋಚಿಸದೆ ಕಾರ್ಯಪ್ರವೃತ್ತವಾಗುತ್ತದೆ, ಆಗ ಅದು ಒಂದು ಮಾಬ್ ಆಗುತ್ತದೆ.
ಪ್ರ: ನಿಮ್ಮ ಪ್ರಕಾರ ಪ್ರಜಾಪ್ರಭುತ್ವಕ್ಕೆ ಬೇರೆ ಏನು ಬದಲಿ ಪರ್ಯಾಯ ಸಾಧ್ಯವಿತ್ತು?
► ಬ್ರಿಟಿಷರು ನಮಗೆ ಅವಸರದಲ್ಲಿ ಸ್ವಾತಂತ್ರ್ಯ ನೀಡಿ ಹೊರಟು ಹೋದರು. ಅವರಿಂದ ನಮಗೆ ಒಂದು ಡೊಮಿನಿಯನ್ ರಾಷ್ಟ್ರ ದೊರಕದ್ದಿದ್ದರೆ ನಮಗೆ ಚರ್ಚಿಸಲು ಸಾಕಷ್ಟು ಸಮಯ ಸಿಗುತ್ತಿತ್ತು. ನಮ್ಮ ಅವಶ್ಯಕತೆಗಳಿಗೆ, ಪರಂಪರೆಗಳಿಗೆ ಹೊಂದುವಂತಹ ಒಂದು ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಸ್ವಾತಂತ್ರದ ಬೆನ್ನಿಗೆ ಸಾಮೂಹಿಕ ಮಟ್ಟದ ಸಾಮಾಜಿಕ ಸುಧಾರಣೆಗಳು ಮತ್ತು ಶಿಕ್ಷಣ ಆಗಬೇಕಿತ್ತು. ಆದರೆ ಸರಕಾರ ನಾಗರಿಕರನ್ನು ಮತದಾರರು ಎಂದಷ್ಟೇ ಪರಿಗಣಿಸಿತು. ಪರಿಣಾಮವಾಗಿ ಸ್ವಾತಂತ್ರ್ಯ ದೊರಕಿದ 70 ವರ್ಷಗಳ ಬಳಿಕವೂ ದೇಶದ ಜನರು ನೌಕರಿ ಮತ್ತು ಶಿಕ್ಷಣದ ಆಶ್ವಾಸನೆಗಳಿಗೆ ಮತ ನೀಡುತ್ತಿದ್ದಾರೆ. ಜವಾಹರಲಾಲ್ ನೆಹರೂ ಅವರ ಕಾಲದಲ್ಲಿ ಏನೋ ಅಷ್ಟಿಷ್ಟು ಸಮಾಜವಾದ ಅಸ್ತಿತ್ವದಲ್ಲಿತ್ತೋ ಅದು ಯಾವಾಗಲೂ ಸತ್ತು ಹೋಗಿ ಆಗಿದೆ.
ಪ್ರ: ಸೈದ್ಧಾಂತಿಕವಾಗಿ ನೀವು ಎಡಪಂಥದ ಪರವಾಗಿ ಇದ್ದೀರಾ?
ನಾನು ಎಡಪಂಥದ ವಿಚಾರಗಳನ್ನು ಬೆಂಬಲಿಸುತ್ತೇನೆ. ಆದರೆ ಭಾರತದ ಎಡಪಂಥವನ್ನು ಮುಕ್ತವಾಗಿಯೇ ಟೀಕಿಸುತ್ತೇನೆ. ಆ ಪಂಥದ ಅವನತಿಗೆ ಅದರಲ್ಲಿರುವ ಜನರೇ ಕಾರಣ.
ಪ್ರ: ಇವತ್ತು ಭಾಷೆಯನ್ನು ಕೂಡ ಕೋಮು ಗೊಳಿಸಲಾಗುತ್ತಿದೆ. ಇತ್ತೀಚೆಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಓರ್ವ ಮುಸ್ಲಿಮ್ ಸಂಸ್ಕೃತ ಶಿಕ್ಷಕನ ನೆರವಿಗೆ ಬರಲು ಅಸಾಧ್ಯವಾಯಿತು.
ಈ ಮೊದಲು, ಇದೆಲ್ಲ ಪೂರ್ವಗ್ರಹಗಳಿಗೆ ಸೀಮಿತವಾಗಿತ್ತು, ಸಾರ್ವಜನಿಕವಾಗಿ ಪ್ರತಿಭಟಿಸುವಂತಹ ವಿಷಯವಾಗಿರಲೇ ಇಲ್ಲ. ಉದಾಹರಣೆಗೆ, 1970ರ ದಶಕದಲ್ಲಿ ನಾನು ಹಿಂದಿ ಬೋಧಿಸುವುದಕ್ಕೆ ನನ್ನ ವರ್ತುಲಗಳಲ್ಲಿ ಸಹಮತ, ಬೆಂಬಲ ಇರಲಿಲ್ಲ. ನನ್ನಂತಹ ಇನ್ನೊಬ್ಬ ಶಿಕ್ಷಕನನ್ನು ಪಡೆಯುವ ಸಮಸ್ಯೆ ಆಗ ಎದುರಾಗಿತ್ತು. ನಾನು ಇದನ್ನು ಹಿಂದಿ ಬಗ್ಗೆ ಹೇಳುತ್ತೇನೆ ಮತ್ತು ಇದು ಉರ್ದುವಿನ ಬಗ್ಗೆಯೂ ಸತ್ಯ: ಈ ಭಾಷೆಗಳು ಜ್ಞಾನದ ಒಂದು ಭಾಷೆಯಾಗಲು ಅಸಮರ್ಥವಾದವು. ಅಗರ್ ಗ್ಯಾನ್ ಹೈ ತೋ ಸಮ್ಮಾನ್ ಹೈ (ಜ್ಞಾನ ವಿಶ್ವಾಸವನ್ನು ತರುತ್ತದೆ.) ಉದಾಹರಣೆಗೆ ಹಿಬ್ರೂವನ್ನೇ ತೆಗೆದುಕೊಳ್ಳಿ. ಅವರು ಒಂದು ಮೃತ ಭಾಷೆಯನ್ನು ತೆಗೆದುಕೊಂಡು ಅದು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತೆ ಮಾಡಿ ಅದನ್ನು ಒಂದು ಆಧುನಿಕ ಭಾಷೆಯಾಗಿ ಮಾಡಿದರು. ಹಿಂದಿ ಭಾಷೆಗಾಗಿ ಬಜೆಟ್‌ನಲ್ಲಿ ಸಾಕಷ್ಟು ಹಣ ಮಂಜೂರು ಮಾಡಲಾಗಿದೆಯಾದರೂ ಕಳೆದ ಐವತ್ತು-ಎಪ್ಪತ್ತು ವರ್ಷಗಳಲ್ಲಿ ಹಿಂದಿಯಲ್ಲಿ ನಡೆದಿರುವ ಕೆಲಸ ಬಹಳ ಕಡಿಮೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಒಂದು ಭಾಷೆಗೆ, ಭಾಷೆಯ ಅಭಿವೃದ್ಧಿಗೆ ಸರಕಾರ ಎಷ್ಟೇ ಹಣ ಮಂಜೂರು ಮಾಡಿದರೂ ಆ ಭಾಷೆಯಲ್ಲಿ ನಿರೀಕ್ಷಿತ ಕೆಲಸ ನಡೆದೇ ನಡೆಯುತ್ತದೆ ಎಂದು ಖಚಿತವಾಗಿ ಹೇಳುವುದಿಲ್ಲ.
ಕೃಪೆ: indianexpress.com