ಏಶಿಯಾಟಿಕ್ ರಿಜಿಸ್ಟ್ರೇಷನ್ ಆ್ಯಕ್ಟ್ ಮತ್ತು ಗಾಂಧೀಜಿಯ ಹೋರಾಟ

Update: 2020-02-02 04:41 GMT

ಬರೀ ಒಂದು ಕಂಬಳಿ ಹೊರತುಪಡಿಸಿ ಬೇರೇನೂ ಇಲ್ಲದ ಸುಮಾರು ಆರು ಸಾವಿರ ಸಂಖ್ಯೆಯ ಭಾರತೀಯ ಸ್ತ್ರೀ ಪುರುಷರು ಗಾಂಧೀಜಿಯ ನೇತೃತ್ವದಲ್ಲಿ ಮೆರವಣಿಗೆಯನ್ನು ಸಂಘಟಿಸಿದರು. ‘‘ನ್ಯಾಯಕ್ಕಾಗಿ ನಮ್ಮ ಹೋರಾಟ, ನಾವು ಯಾರಿಗೂ ತೊಂದರೆ ಕೊಡುತ್ತಿಲ್ಲ’’ ಎಂದರು ಗಾಂಧೀಜಿ. ಅದೊಂದು ಅದ್ಭುತ ದೃಶ್ಯವಾಗಿತ್ತು.ಇಡೀ ಜಗತ್ತು ಆಸಕ್ತಿಯಿಂದ ಇದನ್ನು ಗಮನಿಸುತ್ತಿತ್ತು.

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯ್ದೆಗಳ ವಿರುದ್ಧ ದೇಶದಲ್ಲಿ ಹೋರಾಟ, ಪ್ರತಿಭಟನೆಗಳು ತೀವ್ರವಾಗಿ ಮುಂದುವರಿಯುತ್ತಿರುವಂತೆಯೇ, 1906 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚು ಏಶಿಯನ್ ಸಮುದಾಯದ ವಿರುದ್ಧ ಹೆಚ್ಚು ಕಮ್ಮಿ ಇದೇ ಕಾನೂನನ್ನು ಹೋಲುವ ‘ಏಶಿಯಾಟಿಕ್ ರಿಜಿಸ್ಟ್ರೇಷನ್ ಆ್ಯಕ್ಟ್’ನ್ನು ದಕ್ಷಿಣ ಆಫ್ರಿಕಾ ಸರಕಾರ ಜಾರಿ ತಂದಾಗ ಅದರ ವಿರುದ್ಧ ಗಾಂಧೀಜಿಯ ನೇತೃತ್ವದಲ್ಲಿ ನಡೆದ ಹೋರಾಟದ ಹಾದಿ ಮತ್ತು ಪರಿಣಾಮವೇನಾಯಿತೆಂಬುವುದನ್ನು ನೋಡೋಣ.

ದಕ್ಷಿಣ ಆಫ್ರಿಕಾದ ಟ್ರಾನ್ಸ್ ವಾಲಾ ಪ್ರಾಂತ ಏಶಿಯನ್ನರು ಅದರಲ್ಲೂ ಪ್ರಮುಖವಾಗಿ ಭಾರತೀಯರು ಅನೇಕ ದಶಕಗಳಿಂದ ವಾಸಿಸುತ್ತಿದ್ದ ಪ್ರದೇಶವಾಗಿತ್ತು. ಅಲ್ಲಿನ ಸರಕಾರ ಭಾರತೀಯರನ್ನು ತುಂಬಾ ಅವಮಾನಕ್ಕೀಡು ಮಾಡುವಂತಹ ಒಂದು ಕಾಯ್ದೆಯನ್ನು ತಂದಿತು. ಅದರ ಪ್ರಕಾರ ಪ್ರತಿಯೊಬ್ಬ ಭಾರತೀಯನೂ ಎಂಟು ವರ್ಷದ ಮೇಲ್ಪಟ್ಟ ಗಂಡು, ಹೆಣ್ಣು ತಮ್ಮ ಹೆಸರನ್ನು ಏಶ್ಯ ಖಂಡಕ್ಕೆ ಸಂಬಂಧಪಟ್ಟ ರಿಜಿಸ್ಟ್ರಾರರ ದಾಖಲೆ ಪುಸ್ತಕದಲ್ಲಿ ನೋಂದಣಿ ಮಾಡಿಕೊಳ್ಳಬೇಕು ಹಾಗೂ ಆ ಬಗ್ಗೆ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು. ರಿಜಿಸ್ಟ್ರಾರನು ಅರ್ಜಿದಾರನ ಮೈಮೇಲಿನ ಮಹತ್ವದ ಗುರುತಿನ ಚಿಹ್ನೆಗಳನ್ನು ಟಿಪ್ಪಣಿ ಮಾಡಿಕೊಳ್ಳಬೇಕು ಹಾಗೂ ಬೆರಳಚ್ಚನ್ನು ಪಡೆದುಕೊಳ್ಳಬೇಕು. ನಿಗದಿತ ದಿನದೊಳಗೆ ತಮ್ಮ ದಾಖಲೆ ನೋಂದಾವಣೆಗೆ ಅರ್ಜಿ ಸಲ್ಲಿಸಲು ತಪ್ಪಿದವರು ಟ್ರಾನ್ಸ್ ವಾಲಾದಲ್ಲಿ ವಾಸಿಸುವ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತಿತ್ತು. ಅರ್ಜಿ ಸಲ್ಲಿಸಲು ತಪ್ಪಿದಲ್ಲಿ ದಂಡ ವಿಧಿಸಬಹುದು ಅಥವಾ ಸೆರೆಮನೆಗೆ ಕಳುಹಿಸಬಹುದೆಂದು ಘೋಷಿಸಲಾಯಿತು.

 ಅರ್ಜಿದಾರನಿಗೆ ಕೊಟ್ಟ ದಾಖಲೆಗೆ ಸಂಬಧಿಸಿದ ಪ್ರಮಾಣ ಪತ್ರವನ್ನು ಎಂದಾದರೂ, ಎಲ್ಲಿಯಾದರೂ ಯಾವುದೇ ಪೊಲೀಸ್ ಅಧಿಕಾರಿ ಕೇಳಿದರೆ ನೀಡಬೇಕು, ಈ ಪ್ರಮಾಣ ಪತ್ರಗಳನ್ನು ಪರಿಶೀಲಿಸಲು ಖಾಸಗೀ ಮನೆಗಳಿಗೂ ಪೊಲೀಸರು ಪ್ರವೇಶಿಸಬಹುದಾಗಿತ್ತು. ಜಗತ್ತಿನ ಯಾವುದೇ ಕಡೆ ಇರದ, ಪಕ್ಷಪಾತೀ ಧೋರಣೆಯ, ಸ್ವತಂತ್ರ ಮಾನವನ ಹಕ್ಕನ್ನು ಕಸಿದುಕೊಳ್ಳುವ ಈ ಅನಾಗರಿಕ ಕಾನೂನು ಭಾರತೀಯ ಸಮುದಾಯವನ್ನು ಕೆರಳಿಸಿತು. ಇದನ್ನು ಒಟ್ಟಾಗಿ ಎದುರಿಸಿಯೇ ತೀರಬೇಕೆಂದು ನಿರ್ಧರಿಸಿ ಗಾಂಧೀಜಿಯ ನೇತೃತ್ವದಲ್ಲಿ ಹೋರಾಟ ನಡೆಸಲು ತೀರ್ಮಾನಿಸಿದರು. ಕಾಯ್ದೆ ಜಾರಿಯಾದ ಮರು ದಿನವೇ ಗಾಂಧೀಜಿಯವರು ಭಾರತೀಯ ಪ್ರಮುಖರ ಸಭೆಯೊಂದನ್ನು ಕರೆದು ಶಾಸನದ ಕರಾಳತೆ ಮತ್ತು ಅದು ಬೀರುವ ಪರಿಣಾಮವನ್ನು ಎಳೆಎಳೆಯಾಗಿ ಬಿಡಿಸಿ ವಿವರಿಸಿದರು. ಅದರ ಗಂಭೀರತೆಯನ್ನು ಅರಿತವನೊಬ್ಬ ಕೋಪೋದ್ರಿಕ್ತನಾಗಿ ನುಡಿದ: ‘‘ನನ್ನ ಹೆಂಡತಿಯ ಪ್ರಮಾಣಪತ್ರವನ್ನು ಯಾರಾದರೂ ಕೇಳ ಬಂದರೆ ಸ್ಥಳದಲ್ಲೇ ಆತನಿಗೆ ಗುಂಡು ಹಾಕಿ ಆ ಮೇಲೆ ಬಂದದ್ದನ್ನು ನೋಡಿಕೊಳ್ಳುತ್ತೇನೆ’’ ಗಾಂಧಿ ಆತನನ್ನು ಸಮಧಾನಪಡಿಸಿದರು. ಮುಂದೆ ಸಾರ್ವಜನಿಕ ಸಭೆಯೊಂದನ್ನು ನಡೆಸಲು ತೀರ್ಮಾನಿಸಿದರು. ಹಾಗೆಯೇ 1906 ಸೆಪ್ಟಂಬರ್ 11 ರಂದು ಸಭೆ ಸೇರಿ ಆ ಶಾಸನವನ್ನು ಎಲ್ಲರೂ ತಿರಸ್ಕರಿಸಬೇಕು, ಯಾರೂ ಆ ಕಾನೂನನ್ನು ಪಾಲಿಸಬಾರದು. ಇದರ ಆಜ್ಞಾಭಂಗಕ್ಕಾಗಿ ತಮ್ಮ ಮೇಲೆ ವಿಧಿಸಬಹುದಾದ ಯಾವುದೇ ಶಿಕ್ಷೆಯನ್ನು ಅನುಭವಿಸಲು ಸಿದ್ಧರೆಂಬ ನಿರ್ಧಾರಕ್ಕೆ ಬಂದರು.

ತಮ್ಮ ಈ ಚಳವಳಿಗೆ ಯಾವ ಹೆಸರನ್ನು ನಿಡಬೇಕೆಂಬ ಆಲೋಚನೆಯಲ್ಲಿದ್ದಾಗ ಸ್ವತಃ ಗಾಂಧಿಯವರೇ ಇದಕ್ಕೆ ‘‘ಪ್ಯಾಸಿವ್ ರಿಜಿಸ್ಟರ್’’(ನಿಷ್ಕ್ರಿಯ ವಿರೋಧ) ಎಂಬ ಪದವನ್ನು ಆರಿಸಿಕೊಂಡರು. ಹೋರಾಟ ಮುಂದುವರಿಯಿತು. ಆಗ ಕೆಲವರು ಈ ವಿದೇಶಿ ನುಡಿಕಟ್ಟು ಬೇಡ ಎಂದರು. ಕೆಲವರು ‘ಸಾದಗ್ರಹ’ ಎಂಬ ಪದವನ್ನು ಸೂಚಿಸಿದರು. ಇದು ಪೂರ್ಣ ಅರ್ಥ ಬಿಂಬಿಸುವ ಪದವಲ್ಲವಾದ್ದರಿಂದ ‘ಸತ್ಯಾಗ್ರಹ’ ಎಂಬ ಪದವನ್ನು ಒಪ್ಪಿಕೊಳ್ಳಲಾಯಿತು. ಹೀಗೆ ಮೊತ್ತ ಮೊದಲು ‘ಸತ್ಯಾಗ್ರಹ’ ಎಂಬ ಪದ ಬಳಕೆಯಾಯಿತು. ಇದರ ಅರ್ಥ ‘‘ಸತ್ಯ ಮತ್ತು ಅಹಿಂಸೆಯಿಂದ ಹುಟ್ಟಿದ ಶಕ್ತಿ’’.

ಸರಕಾರವು ಕಾಯ್ದೆಯಿಂದ ಒಂದಿಂಚೂ ಹಿಂದೆ ಸರಿಯಲು ಸಿದ್ಧವಿರಲಿಲ್ಲ. ಎಷ್ಟೇ ಪ್ರಯತ್ನಿಸಿಸ್ದರೂ ಲಕ್ಷಗಟ್ಟಲೆ ಏಶಿಯನ್ ಸಮುದಾಯದಲ್ಲಿ ಕೇವಲ ಬೆರಳೆಣಿಕೆಯ ಸಂಖ್ಯೆಯಲ್ಲಿ ಮಾತ್ರ ಮಂದಿ ನೋಂದಾಯಿಸಿಕೊಂಡದ್ದನ್ನು ಮನಗಂಡು, ಇದನ್ನು ವಿರೋಧಿಸುವ ಪ್ರಮುಖರನ್ನು ಬಂಧಿಸಲು ನಿರ್ಧರಿಸಿದರು. ಈ ಪೈಕಿ ಜರ್ಮಿಸ್ಟನ್‌ನಲ್ಲಿ ವಾಸಿಸುತ್ತಿದ್ದ ಪಂಡಿತ್ ರಾಮ ಸುಂದರ್ ಪ್ರಮುಖರಾಗಿದ್ದರು. ಉತ್ತಮ ಭಾಷಣಕಾರರಾಗಿದ್ದ ಇವರು ವಿವಿಧೆಡೆ ತೀಕ್ಷ್ಣವಾದ ಭಾಷಣಗಳನ್ನು ಮಾಡಿದರು. ಇವರನ್ನು ಬಂಧಿಸಿ ಸುಮಾರು ಒಂದು ತಿಂಗಳ ಕಾಲ ಸೆರೆಯಲ್ಲಿಡಲಾಯಿತು. ಆದರೆ ಅವರ ಬಂಧನದಿಂದ ಯಾರೂ ವಿಚಲಿತರಾಗಲಿಲ್ಲ. ಹೋರಾಟ ಮತ್ತಷ್ಟು ಕಾವೇರಿತು. ನೂರಾರು ಮಂದಿ ಜೈಲಿಗೆ ಹೋಗಲು ಸಿದ್ದರಾದರು. ನ್ಯಾಯಾಧೀಶರು ಪ್ರತಿಯೊಂದು ಮೊಕದ್ದಮೆಯನ್ನು ಪ್ರತ್ಯೇಕವಾಗಿ ತನಿಖೆ ನಡೆಸಿ ಎಲ್ಲ ಅಪರಾಧಿಗಳೂ ನಲ್ವತ್ತು ತಾಸುಗಳಲ್ಲಿ ಟ್ರಾನ್ಸ್ ವಾಲಾ ಬಿಟ್ಟು ತೆರಳಬೇಕೆಂದು ಆದೇಶಿಸಿದರು. ಆದರೆ ಕಾಲಮಿತಿ ಅದಾಗಲೇ ಮುಗಿಯುವುದರಲ್ಲಿತ್ತು. ಕೋರ್ಟ್‌ಗೆ ಹಾಜರಾಗಲು ಸೂಚಿಸಲಾಯಿತು. ಆದರೆ ಗಾಂಧೀಜಿ ಮತ್ತು ಅವರ ತಂಡಕ್ಕೆ ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳುವುದೇನೂ ಇರಲಿಲ್ಲ. ಆಜ್ಞೆಯನ್ನು ಉಲ್ಲಂಘಿಸಿದ್ದಕ್ಕಾಗಿ ಎಲ್ಲರನ್ನೂ ಬಂಧಿಸಲಿ ಎಂಬುವುದು ಅವರ ಸವಾಲಾಗಿತ್ತು. ನಿರೀಕ್ಷೆಯಂತೆಯೇ ಗಾಂಧೀಜಿ ಬಂಧಿಸಲ್ಪಟ್ಟರು. ಸೆರೆಮನೆಯಲ್ಲಿ ಸ್ವಂತದ ಬಟ್ಟೆಗಳನ್ನು ತೆಗೆದು ಹಾಕಿ ಜೈಲಲ್ಲಿ ನೀಡುವ ಕೊಳಕು ಬಟ್ಟೆಯನ್ನೇ ಉಡಬೇಕಾಯಿತು. ಸ್ವಲ್ಪ ದಿನಗಳಲ್ಲೇ ಇತರ ಭಾರತೀಯರೂ ಜೈಲಲ್ಲಿ ಅವರ ಸಹವಾಸಿಯಾದರು.

 ಇದ್ಯಾವುದೂ ಫಲಿಸದಾದಾಗ ಉಪಾಯದಿಂದ ಈ ಕಾನೂನನ್ನು ಜಾರಿಗೊಳಿಸಲು ಯತ್ನಿಸಿದ ಸರಕಾರವು ಗಾಂಧೀಜಿಯವರೊಂದಿಗೆ ಒಂದು ಹೊಸ ಒಪ್ಪಂದದ ಆಫರ್ ನೀಡಿದರು. ಅದರ ಪ್ರಕಾರ ಭಾರತೀಯರು ಯಾವುದೇ ಕಾಯ್ದೆಗೆ ಒಳಪಡದೆ ಸ್ವಇಚ್ಛೆಯಿಂದ ಈ ನೋಂದಾವಣೆ ಮಾಡಿಕೊಳ್ಳಬೇಕು. ಹೀಗೆ ಮಾಡಿಕೊಂಡರೆ ಈ ಕಪ್ಪು ಕಾಯ್ದೆಯನ್ನು ರದ್ದುಗೊಳಿಸಲಾಗುವುದು ಎಂಬುದಾಗಿತ್ತು. ಈ ಒಪ್ಪಂದವನ್ನು ಅಂಗೀಕರಿಸಿದರೆ ಬಂಧಿತರನ್ನು ನಿಶ್ಶರ್ತವಾಗಿ ಬಿಡುಗಡೆಗೊಳಿಸಲಾಗುವುದು ಎಂಬ ಔದಾರ್ಯವನ್ನು ಪ್ರಕಟಿಸಲಾಯಿತು. ಪ್ರಿಟೋರಿಯಾದಲ್ಲಿ ಜನರಲ್ ಸ್ಮಟ್ಸ್‌ನೊಂದಿಗೆ ಈ ಒಪ್ಪಂದದ ಮಾತುಕತೆಗಾಗಿ ಗಾಂಧೀಜಿಯವರನ್ನು ಸೆರೆಮನೆಯಿಂದ ಕರೆದುಕೊಂಡು ಹೋಗಲಾಯಿತು. ಜನರಲ್ ಸ್ಮಟ್ಸ್ ಕಪ್ಪು ಕಾಯ್ದೆಯನ್ನು ಹಿಂದೆಗೆದುಕೊಳ್ಳುವ ವಾಗ್ದಾನವಿತ್ತ ಹಿನ್ನೆಲೆಯಲ್ಲಿ ಗಾಂಧೀಜಿಯವರು ಈ ಒಪ್ಪಂದಕ್ಕೆ ಸಹಿ ಹಾಕಿದರು. ಆದರೆ ಗಾಂಧೀಜಿಯ ನಡೆಗೆ ಭಾರತೀಯ ಸಮುದಾಯದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಯಿತು. ಕೆಲವರು ಅವರನ್ನು ಬೆಂಬಲಿಸಿದರೆ, ಸ್ಮಟ್ಸ್ ನಂಬಿಕೆಗೆ ಅರ್ಹನಲ್ಲವೆಂದು ಭಾವಿಸಿ ಗಾಂಧೀಜಿಯ ನಿಲುವನ್ನು ವಿರೋಧಿಸಿದರು. ಮೀರ್ ಆಲಂ ಎಂಬ ಓರ್ವ ಪಠಾಣ ನಂತೂ ಕ್ರುದ್ಧನಾಗಿ: ‘‘ಬೆರಳಚ್ಚು ನೀಡುವುದು ಕ್ರಿಮಿನಲ್‌ಗಳು ಮಾತ್ರ ಎಂದು ಹೇಳಿದ್ದು ನೀವು, ಈ ಕಪ್ಪು ಕಾನೂನನ್ನು ಸುತಾರಾಂ ಒಪ್ಪಬಾರದೆಂದು ಹೇಳಿದವರೇ ನೀವು, ಇದೀಗ ಇದ್ದಕ್ಕಿದ್ದಂತೆ ನೀವು ವಿಮುಖರಾಗುವುದೆಂದರೆ ಏನರ್ಥ’’ ಎಂದು ತರಾಟೆಗೆ ತೆಗೆದುಕೊಂಡನು. ಮರು ದಿವಸ ಗಾಂಧೀಜಿಯವರು ತನ್ನ ಜನರೊಂದಿಗೆ ನೋಂದಾವಣೆಗಾಗಿ ನೋಂದಾವಣಿ ಕಚೇರಿಗೆ ತೆರಳುತ್ತಿದ್ದಾಗ ಮೀರ್ ಆಲಂ ದೊಣ್ಣೆಯಿಂದ ಬಲವಾಗಿ ಅವರ ತಲೆಗೆ ಹೊಡೆದ. ತನ್ನವರು ಅವರನ್ನು ರಕ್ಷಿಸುವ ತನಕ ಹೊಡೆಯುತ್ತಲೇ ಇದ್ದ. ಪ್ರಜ್ಞೆ ಕಳೆದು ಬಿದ್ದ ಅವರನ್ನು ಎತ್ತಿಕೊಂಡು ಒಯ್ಯಲಾಯಿತು. ಎಚ್ಚರವಾದಾಗ ಅವರೊಬ್ಬ ಇಂಗ್ಲಿಷ್ ವ್ಯಕ್ತಿಯ ಮನೆಯಲ್ಲಿದ್ದರು. ಎಚ್ಚರವಾದಾಗ ಮೀರ್ ಆಲಂನ ಬಗ್ಗೆ ವಿಚಾರಿಸಿ ಯಾವುದೇ ಕಾರಣಕ್ಕೂ ಅವನ ಮೇಲೆ ಕಾನೂನು ಕ್ರಮ ಜರುಗಿಸಬಾರದೆಂದು ಸೂಚಿಸಿದರು. ಚೇತರಿಸಿದ ನಂತರ ತನ್ನ ಬೆಂಬಲಿಗರೊಂದಿಗೆ ಒಪ್ಪಂದದ ಪಾಲನೆಯಂತೆ ನೋಂದಾವಣೆ ಅಧಿಕಾರಿಯನ್ನು ಕಂಡು ಬೆರಳಚ್ಚು ಮತ್ತಿತರ ವಿವರಗಳನ್ನು ನೀಡಿದರು. ‘‘ಒಪ್ಪಂದವನ್ನು ಗೌರವಿಸುವುದು ನಮ್ಮ ಕೆಲಸ. ಅವರೇನಾದರೂ ಕಾನೂನನ್ನು ರದ್ದುಗೊಳಿಸದೆ ಒಪ್ಪಂದವನ್ನು ಮುರಿದರೆ ಮತ್ತೆ ಸತ್ಯಾಗ್ರಹಕ್ಕೆ ಇಳಿಯುವ ಆಯ್ಕೆ ನಮಗೆ ತೆರೆದೇ ಇದೆ ಎಂದವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು. ಹೀಗೆ ಅನೇಕ ಭಾರತೀಯರು ಪ್ರಮಾಣಪತ್ರ ಪಡೆದುಕೊಂಡರು. ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಗಾಂಧೀಜಿಯವರು ಈ ಒಪ್ಪಂದವನ್ನು ನೆರವೇರಿಸಿದರೂ ಸರಕಾರ ಮಾತ್ರ ಈ ಕಾಯ್ದೆಯನ್ನು ಹಿಂದೆಗೆದುಕೊಳ್ಳದೆ ದ್ರೋಹ ಬಗೆಯಿತು. ಜೊತೆಗೆ ಭಾರತೀಯರ ಮೇಲೆ ದುಬಾರಿ ತಲೆಗಂದಾಯವನ್ನು ವಿಧಿಸಿತು. ಗಾಂಧೀಜಿ ಮತ್ತೆ ಸತ್ಯಾಗ್ರಹವನ್ನು ಪುನರಾರಂಭಿಸಿದರು. ಸುಮಾರು ಎರಡು ಸಾವಿರ ಭಾರತೀಯರು ಸಾರ್ವಜನಿಕವಾಗಿ ದೊಡ್ಡ ಬೆಂಕಿ ಉರಿಸಿ ತಾವು ಪಡೆದ ಪ್ರಮಾಣ ಪತ್ರಗಳನ್ನು ಸುಟ್ಟು ಹಾಕಿದರು. ಈ ಹೋರಾಟದ ಅವಧಿಯಲ್ಲಿ ಮತ್ತೆ ಗಾಂಧಿ ಮತ್ತು ಬೆಂಬಲಿಗರನ್ನು ಸೆರೆಗೆ ತಳ್ಳಲಾಯಿತು. ಗಾಂಧೀಜಿಯವರು ತಮ್ಮ ವಕೀಲಿ ವೃತ್ತಿಯನ್ನು ತ್ಯಜಿಸಿ ಪೂರ್ಣಪ್ರಮಾಣದ ಹೋರಾಟದಲ್ಲಿ ತೊಡಗಿಕೊಂಡರು. ಈ ಮಧ್ಯೆ ದಕ್ಷಿಣ ಆಫ್ರಿಕಾದ ನ್ಯಾಯಾಲಯವು ಭಾರತೀಯ ಹಿಂದೂ, ಮುಸ್ಲಿಮ್, ಫಾರ್ಸಿ ಮದುವೆಗಳೆಲ್ಲ ಕಾನೂನು ಬಾಹಿರವೆಂದು ಘೋಷಿಸಿತು. ಸರಕಾರವೂ ಇದನ್ನು ಬೆಂಬಲಿಸಿತು. ಭಾರತೀಯ ಸ್ತ್ರೀತ್ವಕ್ಕೆ ಆದ ಈ ಅಪಮಾನವನ್ನು ಕಸ್ತೂರ್ಬಾ ಅವರನ್ನೂ ನೋಯಿಸಿತು. ಅವರೂ ಮೊಟ್ಟ ಮೊದಲ ಸ್ತ್ರೀಯಾಗಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಅವರನ್ನೂ ದಸ್ತಗಿರಿ ಮಾಡಲಾಯಿತು. ಪ್ರಮಾಣ ಪತ್ರವಿಲ್ಲದವರು ಟ್ರಾನ್ಸ್ ವಾಲಾ ಗಡಿಯನ್ನು ದಾಟುವಂತಿರಲಿಲ್ಲ. ಬರೀ ಒಂದು ಕಂಬಳಿ ಹೊರತುಪಡಿಸಿ ಬೇರೇನೂ ಇಲ್ಲದ ಸುಮಾರು ಆರು ಸಾವಿರ ಸಂಖ್ಯೆಯ ಭಾರತೀಯ ಸ್ತ್ರೀ ಪುರುಷರು ಗಾಂಧೀಜಿಯ ನೇತೃತ್ವದಲ್ಲಿ ಮೆರವಣಿಗೆಯನ್ನು ಸಂಘಟಿಸಿದರು. ‘‘ನ್ಯಾಯಕ್ಕಾಗಿ ನಮ್ಮ ಹೋರಾಟ, ನಾವು ಯಾರಿಗೂ ತೊಂದರೆ ಕೊಡುತ್ತಿಲ್ಲ’’ ಎಂದರು ಗಾಂಧೀಜಿ. ಅದೊಂದು ಅದ್ಭುತ ದೃಶ್ಯವಾಗಿತ್ತು.ಇಡೀ ಜಗತ್ತು ಆಸಕ್ತಿಯಿಂದ ಇದನ್ನು ಗಮನಿಸುತ್ತಿತ್ತು. ಗಾಂಧೀಜಿ ಮತ್ತೆ ಸೆರೆಯಾದರು. ಸತ್ಯಾಗ್ರಹಿಗಳ ಮೇಲೆ ಲಾಠಿ ಬೀಸಲಾಯಿತು. ಆದರೆ ಹೋರಾಟ ಮುಂದುವರಿಯುತ್ತಲೇ ಇತ್ತು. ಕೊನೆಗೆ ಭಾರತೀಯರು ಜಯಶಾಲಿಯಾದರು. ಕಪ್ಪು ಕಾಯ್ದೆ ತನ್ನಿಂದ ತಾನೆ ಮಹತ್ವ ಕಳೆದುಕೊಂಡು ಬಿಟ್ಟಿತು. ದಾಖಲೆ ನೋಂದಾಯಿಸದವರ ಮೇಲೆ ಗಂಭೀರ ಪರಿಣಾಮವುಂಟಾಗಲಿಲ್ಲ. ವಿವಾಹಗಳನ್ನು ಕಾನೂನು ಬದ್ಧಗೊಳಿಸಲಾಯಿತು. ತಲೆಗಂದಾಯವನ್ನು ರದ್ದುಗೊಳಿಸಲಾಯಿತು. ಇತರ ಬೇಡಿಕೆಗಳನ್ನೂ ರದ್ದುಗೊಳಿಸಲಾಯಿತು. 1905ರಲ್ಲಿ ಗಾಂಧೀಜಿಯವರು ಭಾರತಕ್ಕೆ ಹಿಂದಿರುಗಿದರು. ದೇಶದ ಸ್ವಾತಂತ್ರ ಸಂಗ್ರಾಮದಲ್ಲಿ ಸುಮಾರು ಮೂವತ್ತು ವರ್ಷಗಳ ಕಾಲ ತಮ್ಮನ್ನು ತೊಡಗಿಸಿಕೊಂಡರು.

Writer - ಅಬ್ದುಲ್ ರಝಾಕ್ ನಾವೂರು

contributor

Editor - ಅಬ್ದುಲ್ ರಝಾಕ್ ನಾವೂರು

contributor

Similar News