ಓಡಿ ಹೋದವರು...!

Update: 2020-02-02 05:02 GMT

ಕ್ರಿಸ್ಮಸ್ ಹಬ್ಬಕ್ಕೆ ಇನ್ನು ಕೆಲವೇ ಗಂಟೆಗಳು ಉಳಿದಿದ್ದವು. ಊರಿನ ಬೀದಿಗಳು ಜಗಮಗಿಸುವ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದವು. ಪ್ರತಿ ಮನೆಯಲ್ಲೂ ಹಬ್ಬದ ಸಡಗರ. ಪ್ಲಮ್ ಕೇಕು, ವೈನು ಹಾಗೂ ಇತರ ಕ್ರಿಸ್ಮಸ್ ತಿನಿಸುಗಳ ಘಮಲು ಇಡೀ ಊರಿನಾದ್ಯಂತ ಹಬ್ಬಿತ್ತು. ಇನ್ನು ಕೆಲವು ಮನೆಗಳಂತೂ ಆಗಲೇ ಅವರೆಕಾಯಿಯನ್ನು ಮಧ್ಯಾಹ್ನವೇ ನೀರಿನಲ್ಲಿ ನೆನೆಸಿಟ್ಟು, ಸುಲಿದು ಕೋಳಿಮಾಂಸದ ಸಾರು ಮಾಡುತ್ತಿದ್ದುದು ಗುಟ್ಟಾಗಿ ಉಳಿದಿರಲಿಲ್ಲ. ಊರಿನ ಇಷ್ಟೆಲ್ಲಾ ಗಜಿಬಿಜಿಯ ನಡುವೆಯೂ ಚರ್ಚಿನ ಕೂಗಳತೆಯ ದೂರದಲ್ಲಿದ್ದ ಮೇರಮ್ಮನ ಮನೆಯಲ್ಲಿ ಮಾತ್ರ ನೀರವ ಮೌನ ಆವರಿಸಿಕೊಂಡಿತ್ತು. ಮನೆಯಲ್ಲಿನ ಲೈಟುಗಳನ್ನು ಆರಿಸಿ, ಮೊಂಬತ್ತಿಯ ದೀಪದ ಬೆಳಕಿನಲ್ಲಿ ಗೋಡೆಯಲ್ಲಿದ್ದ ಶಿಲುಬೆಗೆ ಮುಖಮಾಡಿಕೊಂಡು ಗಾಢವಾಗಿ ಯೋಚಿಸುತ್ತಿದ್ದ ಮೇರಮ್ಮನ ಮುಖದಲ್ಲಿ ಯಾವುದೇ ಭಾವನೆಗಳಿರಲಿಲ್ಲ. ಜೀವನ ಪೂರ್ತಿ ಗೇಯ್ದು ಬಹಳ ಜತನದಿಂದ ಮಕ್ಕಳನ್ನು ಸಲಹಿದ ಅವಳ ದೇಹವು ಹಣ್ಣಾಗಿ, ಕೃಷವಾಗಿತ್ತು. ಬದುಕಿನ ಚಾಟಿಯ ಹೊಡೆತಗಳಿಗೆ ಸಿಕ್ಕಿ ಜರ್ಜರಿತವಾಗಿದ್ದ ಮೇರಮ್ಮನ ಮೈಮನಗಳು ಬದುಕಿನಲ್ಲಿ ವಸಂತದ ಆಗಮನದ ಆಸೆಯನ್ನು ಕೈಚೆಲ್ಲಿ ವರ್ಷಗಳೇ ಸರಿದಿದ್ದವು. ಹೀಗೆ ಸುಮಾರು ಹೊತ್ತು ತನ್ನ ಆಲೋಚನೆಗಳಲ್ಲಿ ಮುಳುಗಿದ್ದ ಮೇರಮ್ಮನನ್ನು ವಾಸ್ತವಕ್ಕೆ ಮರಳಿಸಿದ್ದು ಮಾತ್ರ ಚರ್ಚಿನ ಘಂಟೆಯ ಸದ್ದು. ಜೈಲಿನಲ್ಲಿದ್ದ ತನ್ನ ಮಗ ರಾಬರ್ಟ್‌ನನ್ನು ಇಂದು ಸಂಧಿಸಿ ಬಂದಾಗಿನಿಂದ ಆಕೆಯ ಹೆಂಗರುಳು ಕ್ಷಣ ಕ್ಷಣಕ್ಕೂ ಪರಿತಾಪವನ್ನನುಭವಿಸುತ್ತಿತ್ತು. ಇದೆಲ್ಲಾ ಅದೆಷ್ಟು ವೇಗವಾಗಿ ನನ್ನ ಕಣ್ಣಮುಂದೆಯೇ ನಡೆದುಹೋಯಿತು ಎನ್ನುಕೊಳ್ಳುತ್ತಿರುವಾಗಲೇ ಮೇರಮ್ಮನ ತಲೆಯಲ್ಲಿ ಮೂರು ತಿಂಗಳ ಹಿಂದೆ ನಡೆದ ಒಂದು ಘಟನೆ ಮತ್ತೆ ಮತ್ತೆ ಅವಳನ್ನು ಕಾಡಲಾರಂಭಿಸಿತ್ತು.

ಅಂದು ಸಂಜೆ ಮೇರಮ್ಮ ಹಸುಗಳಿಗೆ ಹುಲ್ಲುತಂದು ಹಾಕಿ, ಹಾಲು ಕರೆಸಿ, ಅವುಗಳನ್ನು ಮನೆಯ ಮುಂದಿನ ಗೂಟಕ್ಕೆ ಕಟ್ಟಿ, ಮನೆಯೊಳಕ್ಕೆ ಬಂದಾಗ ಅದಾಗಲೇ ರಾಬರ್ಟ್ ಮನೆಗೆ ಬಂದು, ತನ್ನ ಮೊಬೈಲಿನಲ್ಲಿ ಮುಳುಗಿಹೋಗಿದ್ದ. ರಾಬರ್ಟ್ ಒಬ್ಬ ಪ್ಲಂಬರ್. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಈತ ಅದೇ ಊರಿನ ಕಿರ್ನಾಕು ಗಾಬ್ರಿಯೇಲನ ಮಗಳನ್ನು ಪ್ರೀತಿ ಮಾಡುತ್ತಿದ್ದುದು ಹೆಚ್ಚುಕಮ್ಮಿ ಇಡೀ ಊರಿಗೆ ತಿಳಿದಿತ್ತು. ಮೇಲ್ನೋಟಕ್ಕೆ ಇದಕ್ಕೆ ಯಾರ ವಿರೋಧವು ಇರಲಿಲ್ಲವಾದರೂ ಕಿರ್ನಾಕು ಗಾಬ್ರಿಯೇಲನ ಹೆಂಡತಿ ರೀಟಾ ಇದಕ್ಕೆ ಬಿಲ್ಕುಲ್ ಒಪ್ಪಿರಲಿಲ್ಲ. ಕಿರ್ನಾಕುವಿನ ಹೆಂಡತಿ ರೀಟಾ ಬಯಲುಸೀಮೆಯವಳು. ಜಗಳಗಂಟಿಯಾದ ಇವಳ ಹತ್ತಿರ ಅವಳ ಮನೆಯ ಅಕ್ಕಪಕ್ಕದ ಒಂದೆರಡು ಮನೆಯ ಹೆಂಗಸರು ಮಾತನಾಡುತ್ತಿದ್ದರಷ್ಟೆ. ಸ್ವತಃ ಕಿರ್ನಾಕು ಗಾಬ್ರಿಯೇಲನ ಅಕ್ಕತಂಗಿಯರಿಗೆ ಅವಳನ್ನು ಕಂಡರೆ ಆಗುತ್ತಿರಲಿಲ್ಲ. ಇನ್ನು ಇತ್ತೀಚೆಗೆ ಕಿರ್ನಾಕು ಗಾಬ್ರಿಯೇಲನ ಹೆಂಡತಿ ರೀಟಾ ಊರಿನ ಒಬ್ಬ ಯುವಕನನ್ನು ಇಟ್ಟುಕೊಂಡಿದ್ದಾಳೆ ಎಂಬುದು ಊರಿನಲ್ಲಿ ಚಾಲ್ತಿಯಲ್ಲಿದ್ದ ಬಿಸಿಬಿಸಿ ಸುದ್ದಿ. ಅದು ಸುಳ್ಳೋ ನಿಜವೋ ಆದರೆ ರೀಟಾ ಮಾತ್ರ ತನ್ನ ಮಗಳು ಕೆನಿಶಾಳಿಗೆ ತಾನು ಇಟ್ಟುಕೊಂಡಿದ್ದ ಯುವಕನಿಗೇ ಕೊಟ್ಟು ಮದುವೆ ಮಾಡಿಕೊಡಬೇಕು ಎಂದು ಯೋಚಿಸುತ್ತಿದ್ದುದು ಮಾತ್ರ ಸುಳ್ಳಲ್ಲ. ಈ ಮದುವೆ ಸ್ವತಃ ಕೆನಿಶಾಳಿಗೂ ಇಷ್ಟವಿಲ್ಲದ ಕಾರಣ ಆಕೆ ಪದೇ ಪದೇ ರಾಬರ್ಟ್‌ನಿಗೆ ಮನೆಯಿಂದ ಓಡಿಹೋಗೋಣ ಬಾ ಎಂದು ಪೀಡಿಸುತ್ತಿದ್ದಳು.

ಸಾಮಾನ್ಯವಾಗಿ ಮಗ ಮನೆಗೆ ಬರುತ್ತಿದ್ದುದು ರಾತ್ರಿ ಎಂಟು ಗಂಟೆಯ ನಂತರ. ಇವತ್ತು ಆರು ಗಂಟೆಗೇ ಮನೆಗೆ ಬಂದಿದ್ದ ಮಗನನ್ನು ನೋಡಿದ ಮೇರಮ್ಮನಿಗೆ ಆಶ್ಚರ್ಯವಾದರೂ ಕೊಂಚ ಸಂತೋಷವಾಯಿತು. ಆದರೆ ರಾಬರ್ಟ್‌ನ ಮುಖ ಪೇಲವವಾಗಿದ್ದನ್ನು ಕಂಡ ಮೇರಮ್ಮ..

‘‘ರಾಬು... ಯಾಕಪ್ಪ ಒಂಥರಾ ಇದ್ದಿಯಾ?’’

‘‘ಏನಿಲ್ಲ.. ಸ್ವಲ್ಪ ತಲೆನೋವು. ಬೆಳಗ್ಗೆಯಿಂದ ಬಿಸಿಲಲ್ಲಿ ಕೆಲಸ ಅಲ್ವಾ.. ಅದಕ್ಕೆ ಅನ್ಸುತ್ತೆ...’’ ರಾಬರ್ಟ್ ಮೊಬೈಲನ್ನು ನೋಡುತ್ತಲೇ ಉತ್ತರಿಸಿದ.

‘‘ತಲೆಗೆ ಸ್ವಲ್ಪ ಹಳ್ಳೆಣ್ಣೆ ಹಚ್ಲಾ ಮಗಾ...? ಸರಿಹೋಗುತ್ತೆ!’’ ಮೇರಮ್ಮ ತುಸು ಮೆಲುದನಿಯಲ್ಲಿ ಕೇಳಿದಳು.

ಅಮ್ಮನ ಮುಖವನ್ನೇ ದಿಟ್ಟಿಸಿದ ರಾಬರ್ಟ್‌ನಿಗೆ ಇನ್ನು ಕೊಂಚ ಹೊತ್ತಿನಲ್ಲಿ ತಾನು ಇವಳಿಂದ ದೂರ ಹೋಗುತ್ತಿರುವುದನ್ನು ನೆನೆದು ಸಂಕಟವಾದರೂ, ಅದ್ಯಾವುದನ್ನು ತೋರಿಸಿಕೊಳ್ಳದೆ...

‘‘ಅದೆಲ್ಲಾ ಏನೂ ಬೇಡಮ್ಮಾ... ಸ್ವಲ್ಪಹೊತ್ತು ನಿದ್ದೆ ಮಾಡಿದರೆ ಸರಿಹೋಗುತ್ತೆ,’’ಎಂದವನೇ ಅಮ್ಮನಿಗೆ ಊಟ ಬಡಿಸಲು ಹೇಳಿದ.

ರಾಬರ್ಟ್ ಊಟ ಮಾಡುತ್ತಿರುವಾಗಲೇ ಅವನಿಗೆ ಮೇಲಿಂದ ಮೇಲೆ ಕರೆಗಳು ಬರಲಾರಂಭಿಸಿದವು. ಒಂದೆರಡು ಬಾರಿ ಮಾತನಾಡಿ ಕಾಲ್ ಕಟ್ ಮಾಡಿದರೂ ಮತ್ತೆ ಮತ್ತೆ ರಿಂಗಣಿಸುತ್ತಿದ್ದ ಮೊಬೈಲನ್ನು ರಾಬರ್ಟನಿಗೆ ನೆಲಕ್ಕೆ ಬಡಿಯುವಷ್ಟು ಕೋಪ. ಇವನಿಗೆ ಓಡಿಹೋಗಲು ಸುತಾರಾಂ ಇಷ್ಟವಿಲ್ಲ. ಅದೆಷ್ಟೇ ದಿನವಾದರೂ ಇಲ್ಲೇ ಇದ್ದು ಊರಿನಲ್ಲೇ ಮದುವೆಯಾಗಬೇಕೆಂಬುದು ಅವನ ಆಸೆ. ಆದರೆ ಕೆನಿಶಾಳಿಗೆ ಅವಳ ಅಮ್ಮ ರೀಟಾಳ ಬಳಿ ಇರುವ ಒಂದೊಂದು ಕ್ಷಣವೂ ಕೆಂಡದ ಮೇಲೆ ನಡೆಯುವಂತೆ ಭಾಸವಾಗುತ್ತಿತ್ತು. ಹೇಗಾದರೂ ಸರಿ ಅಂದು ರಾತ್ರಿಯೇ ಅಲ್ಲಿಂದ ಓಡಿಹೋಗಿಬಿಡಬೇಕೆಂದು ಅವಳು ನಿರ್ಧರಿಸಿದ್ದಳು. ಅವಳ ಈ ನಿರ್ಧಾರದ ಪರಿಣಾಮ ರಾಬರ್ಟ್‌ನ ಮೇಲೆ ಬೀರೀತ್ತು. ಮತ್ತೊಂದು ಬಾರಿ ಮೊಬೈಲ್ ರಿಂಗಣಿಸಿದ್ದೇ ತಡ ಕಾಲ್ ರಿಸೀವ್ ಮಾಡಿ

‘‘ನನ್ನನ್ನು ಡಿಸ್ಟರ್ಬ್ ಮಾಡ್ಬೇಡ. ಫೋನ್ ಇಡೆ’’ ಎಂದು ಜೋರಾಗಿ ಹೇಳಿದವನೇ ಕಾಲ್ ಕಟ್ ಮಾಡಿದ.

ಮಗನ ಈ ವರ್ತನೆಯಿಂದ ಗಾಬರಿಗೊಂಡ ಮೇರಮ್ಮ ‘‘ಏನಾಯ್ತು ರಾಬು..? ಯಾರದು ಫೋನಿನಲ್ಲಿ..?’’ ಆತಂಕದಿಂದ ಕೇಳಿದಳು.

‘‘ನನಗೆ ಸ್ವಲ್ಪ ಕೆಲ್ಸ ಇದೆ, ಎಮರ್ಜೆನ್ಸಿ. ನಾಳೆ ಬೆಳಗ್ಗೆ ಮನೆಗೆ ಬರ್ತೀನಿ. ನೀನು ಹುಷಾರಾಗಿ ಮಲಗು’’ ಎಂದು ಹೇಳಿ ಹೊರಟವನು ಮತ್ತೆ ಸಿಕ್ಕಿದ್ದು ಮಾತ್ರ ಜೈಲಿನಲ್ಲಿ.

ರಾತ್ರೋರಾತ್ರಿ ರಾಬರ್ಟ್ ಮತ್ತು ಕೆನಿಶಾ ಓಡಿಹೋಗಿದ್ದು ಬೆಳಕರಿಯುವಷ್ಟರಲ್ಲಿ ಇಡೀ ಊರಿಗೆ ಗೊತ್ತಾಗಿತ್ತು. ಅಕ್ಕಪಕ್ಕದ ಮನೆಯವರು, ರಸ್ತೆಯಲ್ಲಿ ಹೋಗುವವರಾದಿಯಾಗಿ ಎಲ್ಲರೂ ಮೇರಮ್ಮನನ್ನು ಕಂಡೊಡನೆ ‘‘ಮೇರಮ್ಮ ನಿನ್ ಮಗ ಹುಡ್ಗೀನ್ ಕರ್ಕೊಂಡು ಓಡೋಗ್ಬುಟ್ನಂತೆ,’’ ಎಂದು ಕೇಳಿದಾಗಲೆಲ್ಲಾ ಮೇರಮ್ಮ ಕನಲಿಹೋಗುತ್ತಿದ್ದಳು.

ಅತ್ತ ಕಿರ್ನಾಕು ಗಾಬ್ರಿಯೇಲನ ಹೆಂಡತಿ ರೀಟಾ ತನ್ನ ಮಗಳು ಅವನೊಂದಿಗೆ ಓಡಿಹೋಗಿದ್ದು ತಿಳಿದ ತಕ್ಷಣವೇ ಪೊಲೀಸ್ ಸ್ಟೇಷನ್‌ಗೆ ಹೋಗಿ ‘‘ನನ್ನ ಮಗಳು ಅಪ್ರಾಪ್ತೆ. ಅವಳ ಮನಸ್ಸನ್ನು ಕೆಡಿಸಿ, ರಾಬರ್ಟ್ ಅವಳನ್ನು ಕರೆದುಕೊಂಡು ಓಡಿಹೋಗಿದ್ದಾನೆ’’ ಎಂದು ಕೇಸು ಮಾಡಿಬಿಟ್ಟಳು. ಎರಡು ತಿಂಗಳ ಸತತ ಹುಡುಕಾಟದ ನಂತರ ರಾಬರ್ಟ್ ಹಾಗೂ ಕೆನಿಶಾಳನ್ನು ಪೊಲೀಸ್ ಪತ್ತೆಹಚ್ಚಿ ಹುಡುಗಿಯನ್ನು ಸಮಾಲೋಚನಾ ಕೇಂದ್ರಕ್ಕೆ ಕಳಿಸಿ, ರಾಬರ್ಟ್‌ನನ್ನು ಜೈಲಿಗೆ ಹಾಕಿದ್ದಾರೆ. ಮಗನನ್ನು ಪೊಲೀಸ್ ಪತ್ತೆ ಹಚ್ಚಿದ್ದಾರೆ ಎಂದು ತಿಳಿದ ತಕ್ಷಣವೇ ಮೇರಮ್ಮ ಊರಿನ ಹಿರಿಯರು, ಪುಡಿ ರಾಜಕಾರಣಿಗಳಾದಿಯಾಗಿ ಎಲ್ಲರನ್ನೂ ಕಾಡಿ ಬೇಡಿ ‘‘ನನ್ನ ಮಗನನ್ನು ಬಿಡುಗಡೆ ಮಾಡಿಸಿ’’ ಎಂದು ಗೋಗರೆದರೂ ಸಹ ಯಾರಿಂದಲೂ ಸಹ ಆಕೆಯ ಮಗನನ್ನು ಬಿಡಿಸಲಾಗಲಿಲ್ಲ. ಮೇರಮ್ಮನ ಯೋಚನಾ ಲಹರಿ ಇನ್ನಷ್ಟು ಆಳಕ್ಕೆ ಇಳಿದು ಗತಕಾಲದ ನೆನಪುಗಳನ್ನು ಮೆಲುಕು ಹಾಕುತ್ತಿತ್ತು. ಒಂದೊಂದು ನೆನಪುಗಳು ಅವಳ ಬದುಕಿನಲ್ಲಿ ನೋವಿನ ಛಾಯೆಯನ್ನು ಮೂಡಿಸಿದ್ದವೇ ಹೊರತು, ಮೇರಮ್ಮ ಮದುವೆಯಾದಾಗಿನಿಂದಲೂ ತನ್ನ ಪಾಲಿಗೆ ಸುಖ ಎನ್ನುವುದು ಗಗನದ ತಾರೆ ಎಂದೇ ಭಾವಿಸಿದ್ದಳು.

ಒಂದೆರಡು ತಿಂಗಳಲ್ಲಿ ಎಷ್ಟೆಲ್ಲಾ ನಡೆದುಹೋಯಿತು? ನಾನು ನಂಬಿದ ಗಂಡ ನನ್ನನ್ನು ನಡುನೀರಿನಲ್ಲಿ ಕೈಬಿಟ್ಟುಹೋಗಿ ವರ್ಷಗಳೇ ಕಳೆದಿವೆ. ಅವನು ಬದುಕಿದ್ದಾನೋ ಇಲ್ಲವೋ ಎಂಬುದೂ ಗೊತ್ತಿಲ್ಲ. ಇನ್ನು ಕೊನೆಗಾಲಕ್ಕೆ ಒತ್ತಾಸೆಯಾಗುತ್ತಾನೆ ಎಂದು ನಂಬಿಕೊಂಡಿದ್ದ ಮಗ ಈಗ ನನ್ನ ನಂಬಿಕೆಗಳನ್ನೆಲ್ಲಾ ಹುಸಿಮಾಡಿ ಇಂದು ಜೈಲಿನಲ್ಲಿದ್ದಾನೆ. ಬದುಕು ಯಾಕೆ ನನ್ನ ಮೇಲೆ ಇಷ್ಟು ಕ್ರೂರವಾಗಿದೆ ಎಂದು ಯೋಚಿಸುತ್ತಲೇ ಮೇರಮ್ಮ ಶಿಲುಬೆಯ ಬುಡದಲ್ಲಿ ತನಗರಿವಿಲ್ಲದೆಯೇ ನಿದ್ರೆಗೆ ಜಾರಿದ್ದಳು. ಮತ್ತೆ ಮೇರಮ್ಮನಿಗೆ ಎಚ್ಚರವಾದಾಗ ಮುಂಜಾನೆ ನಸುಕಿನ ಜಾವದಲ್ಲಿ ಚರ್ಚು ಎಂದಿನಂತೆ ಗಂಟೆ ಬಾರಿಸುತ್ತಿತ್ತು.

Writer - ಅಜಯ್ ರಾಜ್

contributor

Editor - ಅಜಯ್ ರಾಜ್

contributor

Similar News