ಸತ್ತವರೆಲ್ಲ ಪುನಃ ಜೀವ ಪಡೆದರೆ ಏನಾಗುತ್ತೆ?

Update: 2020-02-02 05:37 GMT

ಸಾವು ಒಂದು ರೀತಿಯಲ್ಲಿ ಎಲ್ಲರಿಗೂ ನೋವು ನೀಡುತ್ತದೆ. ಕೆಲ ಅವಘಡಗಳಿಂದ ಅದೆಷ್ಟೋ ಮಕ್ಕಳು ತಂದೆ ತಾಯಿಯರನ್ನು ಕಳೆದುಕೊಂಡು ಅನಾಥವಾಗಿದ್ದಾರೆ. ಹೀಗೆ ಸತ್ತವರೆಲ್ಲ ಪುನಃ ಜೀವ ಪಡೆದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ? ಹೌದು ಹೀಗೊಂದು ಪ್ರಶ್ನೆ ಸದಾ ಎಲ್ಲರನ್ನು ಕಾಡುತ್ತದೆ. ಸತ್ತವರೆಲ್ಲ ಜೀವ ಪಡೆದರೆ ಅನಾಥ ಮಕ್ಕಳೆಲ್ಲ ತಂದೆ ತಾಯಿ ಮಡಿಲು ಸೇರುತ್ತಾರೆ. ಸಾವನ್ನಪ್ಪಿದ ನಮ್ಮ ಪ್ರೀತಿ ಪಾತ್ರರನ್ನು ಪುನಃ ಭೇಟಿಯಾಗುವ ಅವಕಾಶ ದೊರೆಯುತ್ತದೆ. ಈ ಜಗತ್ತಿನಿಂದ ಮರೆಯಾದ ಸಮಾಜ ಸುಧಾರಕರನ್ನು, ಸ್ವಾತಂತ್ರ ಹೋರಾಟಗಾರರನ್ನು, ಮಹಾನ್ ನಾಯಕರನ್ನು, ಅಪ್ಪಟ ಮಾನವ ಪ್ರೇಮಿಗಳನ್ನು ಪುನಃ ಭೇಟಿಯಾಗುವ ಹಾಗೂ ಅವರ ಸ್ಫೂರ್ತಿದಾಯಕ ಮಾತುಗಳನ್ನು ಕೇಳುವ ಅವಕಾಶ ಮತ್ತೊಮ್ಮೆ ದೊರೆಯುತ್ತದೆ ಅಲ್ಲವೇ?. ಕಾಲ್ಪನಿಕವಾಗಿ ಇದು ಸರಿ ಎನಿಸದಿರದು. ಆದರೆ ವಾಸ್ತವವಾಗಿ ಇದು ಅನೇಕ ತೊಂದರೆಗಳನ್ನು ತಂದೊಡ್ಡುತ್ತದೆ. ಅದೇನೆಂದು ಒಂಚೂರು ಗಮನ ಹರಿಸೋಣ. ಇಂದು ಮನುಕುಲದ ಇತಿಹಾಸದಲ್ಲಿ ಇರುವುದಕ್ಕಿಂತ ಹೆಚ್ಚು ಜನರು ಭೂಮಿಯ ಮೇಲೆ ಬದುಕಿದ್ದಾರೆ. ಪ್ರಸ್ತುತ ಜಾಗತಿಕ ಜನಸಂಖ್ಯೆ 7.7 ಶತಕೋಟಿ ಆಗಿದೆ. ಇದು ಈ ಗ್ರಹದಲ್ಲಿ ಹಿಂದೆಂದೂ ಇರದ ಸಂಖ್ಯೆಯಾಗಿದೆ. 2,00,000 ವರ್ಷಗಳ ಹಿಂದಿನಿಂದ ಮನುಕುಲದ ಇತಿಹಾಸ ಗಮನಿಸಿದಾಗ ಜನಸಂಖ್ಯೆ ಕೇವಲ ಶೇ. 7 ರಷ್ಟಿತ್ತು. ಆಧುನಿಕ ಮಾನವ ವಿಕಾಸಗೊಂಡಂತೆ ಜನಸಂಖ್ಯೆ ಹೆಚ್ಚಳವಾಗುತ್ತ ಸಾಗಿತು. ಈಗ ಅದು 7.7 ಶತಕೋಟಿ ದಾಟುತ್ತಿದೆ. ಈಗಿರುವ ಜನಸಂಖ್ಯೆಗೆ ಸರಿಯಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿಲ್ಲ. ಇನ್ನು ಸತ್ತವರೆಲ್ಲ ಜೀವ ಪಡೆದರೆ ಏನಾಗುತ್ತೆ? ನೋಡೋಣ.

 ನಮ್ಮ ಗ್ರಹವು 10 ಶತಕೋಟಿ ಜನರನ್ನು ಹೊರುವಷ್ಟು ಸಾಮರ್ಥ್ಯ ಹೊಂದಿದೆ ಎಂದು ಕೆಲ ವಿಜ್ಞಾನಿಗಳು ಅಂದಾಜಿಸಿದ್ದಾರೆ. ಒಂದು ಸಮೀಕ್ಷೆ ಪ್ರಕಾರ 2100ರೊಳಗೆ ನಾವು ಆ ಸಂಖ್ಯೆಯನ್ನು ತಲುಪುತ್ತೇವೆ ಎಂದು ಕೂಡಾ ಹೇಳಿದ್ದಾರೆ. ಅಂದರೆ ಭೂಮಿಯಲ್ಲಿ ನಿರ್ದಿಷ್ಟ ಸಂಖ್ಯೆಯ ಜನರಿಗೆ ಮಾತ್ರ ವಾಸಿಸಲು ಅವಕಾಶ ಇದೆ ಎಂದಂತಾಯಿತು. ಈಗಿರುವ ಜನರಿಗೆ ಕೆಲ ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚು ಕಪ್ ಕಾಫಿ ದೊರೆಯಲಾರದು. ಇನ್ನು ಸತ್ತವರೆಲ್ಲ ಎದ್ದು ಬಂದರೆ ಗತಿಯೇನು?

ಸತ್ತವರೆಲ್ಲ ಜೀವ ಪಡೆದು ಬಂದರೆ ಉಂಟಾಗುವ ಮೊದಲ ಸಮಸ್ಯೆ ಎಂದರೆ ಆಹಾರದ ಸಮಸ್ಯೆ. ಮಾನವ ಇತಿಹಾಸ ಗಮನಿಸಿದರೆ ಬಹುತೇಕ ಮಾನವರು ಗ್ರಾಮೀಣ ಪ್ರದೇಶದಲ್ಲಿಯೇ ವಾಸಿಸಿರುವುದು ಕಂಡು ಬರುತ್ತದೆ. ಪ್ರಾಯಶಃ ಮಾನವರೆಲ್ಲ ಪುನರುತ್ಥಾನಗೊಂಡರೆ ಅವರೆಲ್ಲ ಗ್ರಾಮೀಣ ಪ್ರದೇಶಕ್ಕೆ ಮರಳುತ್ತಾರೆ. ಹಾಗೆ ಬಂದವರಿಗೆಲ್ಲ ಸಾಕಾಗುವಷ್ಟು ಸ್ಥಳ ದೊರೆಯಬಹುದಾದರೂ ಆಹಾರಕ್ಕಾಗಿ ಸಾಕಷ್ಟು ಭೂಮಿ ಇಲ್ಲದಿರುವುದು ಸಮಸ್ಯೆಯಾಗುತ್ತದೆ. ವಿಶ್ವದ ಕೃಷಿಯೋಗ್ಯ ಭೂಮಿಯಲ್ಲಿ ಶೇ.7ರಷ್ಟು ಮಾತ್ರ ಆಹಾರ ಬೆಳೆಯುತ್ತೇವೆ. ಈಗಿನ ನೂರು ಶತಕೋಟಿ ದಾಟಿದ ಜನಸಂಖ್ಯೆಗೆ ಆಹಾರ ಒದಗಿಸುವುದು ಕಷ್ಟವೇ ಆಗಿರುವಾಗ ಸತ್ತವರೆಲ್ಲ ಬದುಕಿದರೆ ಅವರಿಗೆ ಆಹಾರ ಎಲ್ಲಿಂದ ತರುವುದು ಎಂಬುದೇ ಸಮಸ್ಯೆಯಾಗುತ್ತದೆ.

ಇನ್ನೊಂದು ಪ್ರಮುಖ ಸಮಸ್ಯೆ ಎಂದರೆ ವಸತಿ. ಈಗಿನ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ವಸತಿ ವ್ಯವಸ್ಥೆ ಕಲ್ಪಿಸಲು ಸರಕಾರಗಳು ಹೆಣಗಾಡುತ್ತಿವೆ. ಇನ್ನು ಸತ್ತವರಿಗೆ ಎಲ್ಲಿ ಒದಗಿಸುವುದು ಎಂಬ ಸಮಸ್ಯೆ ತಲೆದೋರುತ್ತದೆ. ಒಂದು ವೇಳೆ ಎಲ್ಲರಿಗೂ ವಸತಿ ಒದಗಿಸುವ ಯೋಜನೆಯನ್ನು ಸರಕಾರ ಜಾರಿಗೆ ತಂದದ್ದೇ ಆದರೆ, ಕೃಷಿ ಜಮೀನಿನಲ್ಲಿಯೇ ವಸತಿ ಕಲ್ಪಿಸಬೇಕಾಗುತ್ತದೆ. ಇದರಿಂದ ಮತ್ತಷ್ಟು ಆಹಾರ ಸಮಸ್ಯೆ ಉಂಟಾಗುತ್ತದೆ. ಈಗಿನ ಜನಸಂಖ್ಯೆಗೆ ಅನುಗುಣವಾಗಿ ಬಟ್ಟೆ ವ್ಯವಸ್ಥೆ ಇದೆ. ಆದರೆ ಸತ್ತವರೆಲ್ಲ ಬದುಕಿದರೆ ಅವರಿಗೂ ಬಟ್ಟೆ ಒದಗಿಸಲು ಇನ್ನಷ್ಟು ವೆಚ್ಚ ಮಾಡಬೇಕಾಗುತ್ತದೆ. ಇದರಿಂದ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಬೆಲೆಗಳು ಇನ್ನಷ್ಟು ತುಟ್ಟಿಯಾಗುತ್ತವೆ. ಇವೆಲ್ಲಕ್ಕಿಂತ ಗಂಭೀರವಾದ ಪರಿಣಾಮವನ್ನು ಎಲ್ಲರೂ ಎದುರಿಸಬೇಕಾಗುತ್ತದೆ. ಅದೇನೆಂದರೆ, ಈಗಿನ ತಂದೆ ತಾಯಿಯರನ್ನೇ ಪಾಲನೆ ಪೋಷಣೆ ಮಕ್ಕಳು, ಸತ್ತವರು ಜೀವ ಪಡೆದು ಬಂದರೆ ಅವರನ್ನು ಪೋಷಿಸುವರೇ? ಹೌದು. ಇದು ಎಲ್ಲಕ್ಕಿಂತ ಗಂಭೀರ ಸಮಸ್ಯೆಯಾಗಿದೆ. ಬಹುತೇಕ ಪಾಲಕರು ಈಗಾಗಲೇ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಸತ್ತವರು ಎದ್ದು ಬಂದರೆ ಈ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳೆಲ್ಲ ತುಂಬಿ ತುಳುಕತೊಡಗುತ್ತವೆ.

Writer - ಆರ್. ಬಿ. ಗುರುಬಸವರಾಜ

contributor

Editor - ಆರ್. ಬಿ. ಗುರುಬಸವರಾಜ

contributor

Similar News