ಗಾಂಧಿ ಮತ್ತು ಗಾಂಧೀಯತೆಯ ಪ್ರಸ್ತುತತೆ
ಗುಜರಾತ್‌ನ ಹಳ್ಳಿಯೊಂದರ ಹುಡುಗ ರಾತ್ರಿಬೆಳಗಾಗುವುದರಲ್ಲಿ ಮಹಾತ್ಮನಾಗಲಿಲ್ಲ. ಅವರನ್ನು ಅಷ್ಟೊಂದು ಎತ್ತರಕ್ಕೆ ಕೊಂಡೊಯ್ದಿದ್ದು ಅವರ ನಿಸ್ವಾರ್ಥ ಹೋರಾಟಗಳು ಹಾಗೂ ಸಹಜೀವಿಗಳೆಡೆಗಿದ್ದ ಪ್ರೀತಿ. ಗಾಂಧಿಯೆಂಬ ಶಾಂತಿದೂತನ ನಿಷ್ಕಳಂಕ ವ್ಯಕ್ತಿತ್ವವನ್ನು ಯಾರಾದರು ಅನುಮಾನಿಸಲಾದೀತೇ? ಆ ದಿನಮಾನಗಳಲ್ಲಿ ದೇಶದ ಮೂಲೆಮೂಲೆಯಲ್ಲಿ ಬೆರಗು ಹುಟ್ಟಿಸಿದ್ದ ಗಾಂಧಿ ತಮ್ಮ ಪ್ರತಿಭಟನೆಯ ಅಸ್ತ್ರವಾಗಿ ಬಳಸಿಕೊಂಡ ಅಹಿಂಸಾ ಮಾರ್ಗದಿಂದ ಜಗತ್ತೇ ಅವರತ್ತ ನೋಡುವಂತಾಯಿತು. ಹಾಗಾಗಿಯೇ ಇಂದಿಗೂ ಗಾಂಧಿಯವರನ್ನು ಹಲವಾರು ವಿದೇಶಿ ನಾಯಕರು ತಮ್ಮ ಸಾಧನೆಯ ಸ್ಫೂರ್ತಿಯೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಈ ನಮ್ಮ ನೆಲದಲ್ಲ್ಲಿ ಗಾಂಧಿ ಹುಟ್ಟಿ ಒಂದೂವರೆ ಶತಮಾನವಾಗಿದೆ. ಅವರು ನಮ್ಮನ್ನು ಬಿಟ್ಟುಹೋಗಿಯೇ ಏಳುದಶಕಗಳು ಕಳೆಯುತ್ತಿವೆ. ಅಲ್ಲಿಂದ ಇಲ್ಲಿಯವರೆಗೂ ಊಹಿಸಲಾಗದಷ್ಟು ಬದಲಾವಣೆಗಳಾಗಿವೆ. ಕಾಲಚಕ್ರದ ನಾಗಾಲೋಟದಲ್ಲಿ ಗಾಂಧಿಯೆಂಬ ಬೆಳಕು ಮಸುಕಾಗುತ್ತಿದೆಯೇನೋ ಎಂಬ ಅನುಮಾನ ಹುಟ್ಟುತ್ತದೆ. ಪ್ರತಿಯೊಬ್ಬ ದೇಶವಾಸಿಯ ಎದೆಯಾಳದಲ್ಲಿ ಸಾಕ್ಷಿಪ್ರಜ್ಞೆಯಾಗಿ ಕಾಡಬೇಕಾದ ಗಾಂಧೀಜಿಯವರ ನೆನಪಿನ ಪ್ರಸ್ತುತತೆಯನ್ನು ಭಾರತೀಯರಾದ ನಾವೆಲ್ಲರೂ ಅರಿಯಲೇಬೇಕಾದ ಸಂಕ್ರಮಣಕಾಲವಿದು.
ಇಂದಿಗೂ ಗಾಂಧಿ ಎನ್ನುವ ಪದ ಕಿವಿಗೆ ಬಿದ್ದೊಡನೆ ಕೆಲವರಿಗಾದರೂ ಮೈಮನವೆಲ್ಲ ಪುಳಕಗೊಳ್ಳುತ್ತದೆ. ಶಾಲಾದಿನಗಳಲ್ಲಿ ಗಾಂಧೀಜಿಯ ಬಗ್ಗೆ ಮೂಡಿದ ಪ್ರೀತಿ ನಮ್ಮಂತಹವರಿಗೆ ಇವತ್ತಿಗೂ ಕಡಿಮೆಯಾಗಿಲ್ಲ. ಅವರನ್ನು ಆಳವಾಗಿ ಓದಿಕೊಂಡಂತೆ ಮತ್ತಷ್ಟು ಅವರೆಡೆಗಿನ ಅಭಿಮಾನ ಇಮ್ಮಡಿಗೊಳ್ಳತ್ತಲೇ ಹೋಗುತ್ತಿದೆ. ಅವರ ಸ್ವಾರ್ಥವಿಲ್ಲದ ಹೋರಾಟ ವಿಶ್ವಕ್ಕೆ ಮಾದರಿಯಾಗಿರುವಾಗ ಇದರ ನಿಜವಾದ ಫಲಾನುಭವಿಗಳಾದ ನಾವು ಅದನ್ನೊಪ್ಪದಿರಲು ಕಾರಣಗಳಿವೆಯೇ?. ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದ, ಈಗಲೂ ಹಾತೊರೆಯುತ್ತಿರುವ ಹಲವಾರು ನಾಯಕರೆದುರು ಕೇವಲ ರಾಷ್ಟ್ರಕ್ಕಾಗಿ ಮಾತ್ರ ತಮ್ಮನ್ನುತಾವು ಅರ್ಪಿಸಿಕೊಂಡ ಗಾಂಧಿ ಭಾರತೀಯರಾದ ನಮಗೆ ಸದಾ ಪ್ರಸ್ತುತವೆನ್ನಿಸುವುದಿಲ್ಲವೇ?. ಮೋಹನದಾಸ ಕರಮಚಂದ ಗಾಂಧಿ ಎಂಬ ತುಂಡುಡುಗೆಯ ಫಕೀರ, ಬುದ್ಧ ಮತ್ತು ಬಸವನ ನಂತರ ಜಗತ್ತು ಕಂಡ ಮಹಾನ್ ಅಹಿಂಸಾ ಪ್ರವರ್ತಕ ಎಂದರೆ ತಪ್ಪಾಗಲಾರದು.
ಕ್ರಿ.ಶ.1869ರ ಅಕ್ಟೋಬರ್2 ರಂದು ಸ್ಥಿತಿವಂತ ಕುಟುಂಬದಲ್ಲಿ ಹುಟ್ಟಿದ ಗಾಂಧಿ ಅವರ ಜೀವಿತದವರೆಗೂ ಆದರ್ಶಗಳನ್ನು ಪಾಲನೆ ಮಾಡುತ್ತಲೇ ಬದುಕಿದ್ದವರು. ಅವರು ಸ್ವಾರ್ಥಕ್ಕೆ ಅಥವಾ ದುರಾಸೆಗೆ ಬಿದ್ದಿದ್ದರೆ ಅಂದಿನ ಆಂಗ್ಲ ಸರಕಾರದಲ್ಲಿ ದೊಡ್ಡಹುದ್ದೆಯನ್ನೇ ಅಲಂಕರಿಸಬಹುದಿತ್ತು. ದೇಶ ಸ್ವತಂತ್ರಗೊಂಡ ಕೂಡಲೇ ತಾನು ಬಯಸಿದ ಪದವಿಯನ್ನು ಪಡೆದು ತನ್ನ ಮಕ್ಕಳನ್ನು ಅತ್ಯುನ್ನತ ಸ್ಥಾನಗಳಲ್ಲಿ ಕೂರಿಸಬಹುದಿತ್ತು. ಆದರೆ ಹಾಗೆ ಮಾಡಿದ್ದರೆ ಅವರು ರಾಷ್ಟ್ರಪಿತನಾಗಿ ಉಳಿಯುತ್ತಿರಲಿಲ್ಲ. ಮಹಾತ್ಮನೆಂದು ಕರೆಸಿಕೊಳ್ಳಲು ಅರ್ಹರಾಗುತ್ತಿರಲಿಲ್ಲ. ಇಂತಹದ್ದನ್ನು ಬಯಸದಿರುವ ಕಾರಣಕ್ಕಾಗಿಯೇ ಗಾಂಧಿ ಜಗತ್ತಿನೆದುರು ಇವತ್ತಿಗೂ ದೊಡ್ಡವರಾಗುತ್ತಲೇ ಹೋಗುತ್ತಿರುವುದು. ಅವರೆಂದೂ ಹೊಗಳಿಕೆಗಳಿಗೆ ಕಿವಿಯಾಗುತ್ತಿರಲಿಲ್ಲ ಎನ್ನುವ ಸತ್ಯ ‘‘ಮಹಾತ್ಮಾ ಎನ್ನುವ ಬಿರುದು ನನಗೆ ನೋವನ್ನುಂಟು ಮಾಡಿದೆ ಹಾಗೂ ಇದರಿಂದ ನಾನು ಒಂದು ಕ್ಷಣವೂ ಉಬ್ಬಿಹೋದ ನೆನಪಿಲ್ಲ’’ ಎಂದು ತಮ್ಮ ಆತ್ಮಕತೆಯಲ್ಲಿ ಹೇಳಿಕೊಂಡಿರುವ ಮಾತು ಸಾಕ್ಷೀಕರಿಸುತ್ತದೆ.
ಗಾಂಧೀಜಿಯವರು ಅನುಸರಿಸಿದ ಪ್ರತಿಯೊಂದು ಮಾರ್ಗಗಳನ್ನು ತನ್ನ ಬದುಕಿನ ಹಾದಿಯ ಪ್ರಯೋಗಗಳೆಂದೇ ಹೇಳಿಕೊಂಡಿದ್ದಾರೆ. ಹಾಗೆಂದು ತಾನು ಮಾಡಿದ್ದೆಲ್ಲ ಇತರರಿಗೂ ಸರಿಯೆನಿಸಬೇಕು ಎನ್ನುವ ಮನೋಭಾವ ಅವರಲ್ಲಿರಲಿಲ್ಲ. ನನ್ನ ಪ್ರಯೋಗಗಳು ಕೊನೆಯ ತೀರ್ಮಾನಗಳೆಂದಾಗಲೀ ನಿರ್ದೋಷವಾದುದವೆಂದಾಗಲೀ ನಾನು ಹೇಳುವುದಿಲ್ಲವೆಂದು ಅವರೇ ತಿಳಿಸಿದ್ದಾರೆ. ಸ್ವತಃ ಬರಹಗಾರರಾಗಿದ್ದ ಗಾಂಧಿಯವರು ಅವರ ಆತ್ಮಕತೆಯಲ್ಲಿ ಹಲವಾರು ಘಟನೆಗಳನ್ನು ದಾಖಲಿಸದಿರಬಹುದಿತ್ತು ಹಾಗೂ ಕೆಲವು ಕಪೋಲಕಲ್ಪಿತ ವಿಷಯಗಳನ್ನು ಸೇರಿಸಿ ಇನ್ನಷ್ಟು ವೈಭವೀಕರಿಸಿಕೊಳ್ಳಬಹುದಾಗಿತ್ತು. ಆದರೆ ಅವರು ಹಾಗೆ ಮಾಡದೆ ಎಲ್ಲವನ್ನೂ ತೆರೆದಿಟ್ಟಿರುವುದನ್ನು ನೋಡಿದಾಗ ಅವರಲ್ಲಿನ ಪ್ರಾಮಾಣಿಕತೆ ಮತ್ತು ಸತ್ಯನಿಷ್ಠೆ ಎಷ್ಟೊಂದು ಪ್ರಖರವಾಗಿತ್ತೆಂಬುದು ಅನಾವರಣವಾಗುತ್ತದೆ. ಇದರಿಂದಲೇ ಮಹಾತ್ಮಾ ಗಾಂಧಿಯವರ ನಡೆ-ನುಡಿ ಹಿಂದಿಗಿಂತಲೂ ಇಂದು ಹೆಚ್ಚು ಅಗತ್ಯವೆನಿಸುವುದು.
ಅಧಿಕಾರದ ಗದ್ದುಗೆಯೇರುವ ಅಂತಿಮ ಗುರಿಗಾಗಿಯೇ ರಾಜಕಾರಣ ಮಾಡುತ್ತಿರುವುದು ಎಂಬುದನ್ನು ಕ್ಷಣಕ್ಷಣಕ್ಕೂ ಸಾಬೀತು ಮಾಡುತ್ತಿರುವ ಹಾಗೂ ಸ್ವಾರ್ಥ ಮತ್ತು ಸ್ವಜನಪಕ್ಷಪಾತವನ್ನೇ ರಕ್ತಗತ ಮಾಡಿಕೊಂಡಿರುವ ನಮ್ಮ ಈಗಿನ ನಾಯಕರು ರಾಜಕಾರಣವೆಂದರೆ ಏನೆಂಬುದನ್ನು ಗಾಂಧಿಯವರನ್ನು ಅರ್ಥೈಸಿಕೊಳ್ಳುವುದರಿಂದ ತಿಳಿದುಕೊಳ್ಳಬೇಕು. ಅಪ್ಪಟ ರಾಜಕಾರಣಿಯಾಗಿದ್ದ ಗಾಂಧಿ ಯಾವತ್ತೂ ಅಧಿಕಾರ ಅನುಭವಿಸಬೇಕೆಂಬುದನ್ನು ಕನಸುಮನಸಿನಲ್ಲಿಯೂ ಯೋಚಿಸಿರಲಿಲ್ಲ. ರಾಷ್ಟ್ರವನ್ನು ದಾಸ್ಯಸಂಕೋಲೆಯಿಂದ ವಿಮುಕ್ತಿಗೊಳಿಸಬೇಕು, ದೀನಾತಿದೀನರ ಸೇವೆ ಮಾಡಬೇಕು ಎನ್ನುವ ಮಾನವೀಯ ಕಳಕಳಿ ಅವರನ್ನು ಜನಸಾಮಾನ್ಯರ ಮನದಲ್ಲಿ ಮಹಾತ್ಮನನ್ನಾಗಿ ನೆಲೆಗೊಳಿಸಿತು.
ಗುಜರಾತ್‌ನ ಹಳ್ಳಿಯೊಂದರ ಹುಡುಗ ರಾತ್ರಿಬೆಳಗಾಗುವುದರಲ್ಲಿ ಮಹಾತ್ಮನಾಗಲಿಲ್ಲ. ಅವರನ್ನು ಅಷ್ಟೊಂದು ಎತ್ತರಕ್ಕೆ ಕೊಂಡೊಯ್ದಿದ್ದು ಅವರ ನಿಸ್ವಾರ್ಥ ಹೋರಾಟಗಳು ಹಾಗೂ ಸಹಜೀವಿಗಳೆಡೆಗಿದ್ದ ಪ್ರೀತಿ. ಗಾಂಧಿಯೆಂಬ ಶಾಂತಿದೂತನ ನಿಷ್ಕಳಂಕ ವ್ಯಕ್ತಿತ್ವವನ್ನು ಯಾರಾದರು ಅನುಮಾನಿಸಲಾದೀತೇ? ಆ ದಿನಮಾನಗಳಲ್ಲಿ ದೇಶದ ಮೂಲೆಮೂಲೆಯಲ್ಲಿ ಬೆರಗು ಹುಟ್ಟಿಸಿದ್ದ ಗಾಂಧಿ ತಮ್ಮ ಪ್ರತಿಭಟನೆಯ ಅಸ್ತ್ರವಾಗಿ ಬಳಸಿಕೊಂಡ ಅಹಿಂಸಾ ಮಾರ್ಗದಿಂದ ಜಗತ್ತೇ ಅವರತ್ತ ನೋಡುವಂತಾಯಿತು. ಹಾಗಾಗಿಯೇ ಇಂದಿಗೂ ಗಾಂಧಿಯವರನ್ನು ಹಲವಾರು ವಿದೇಶಿ ನಾಯಕರು ತಮ್ಮ ಸಾಧನೆಯ ಸ್ಫೂರ್ತಿಯೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಈಗಲೂ ಅಲ್ಲೊಮ್ಮೆ ಇಲ್ಲೊಮ್ಮೆ ಸಾಮಾಜಿಕ ಬಹಿಷ್ಕಾರಗಳಂತಹ ಮಾನವೀಯ ವಿರೋಧಿ ಘಟನೆಗಳು ನಡೆಯುತ್ತಿರುವುದನ್ನು ಕಾಣುತ್ತೇವೆ. ಅಂತಹ ಅನಿಷ್ಟಗಳ ಬಗ್ಗೆ ಪ್ರಜ್ಞಾವಂತ ಸಮಾಜ ತೀಕ್ಷ್ಣವಾಗಿ ಖಂಡಿಸುತ್ತದೆ ಎಂಬುದು ಕೂಡ ನಿಜವಾದದ್ದೆ. ಆದರೆ ಇಂತಹ ಬಹಿಷ್ಕಾರಕ್ಕೆ ಒಂದೊಮ್ಮೆ ರಾಷ್ಟ್ರಪಿತ ಗಾಂಧಿಯೂ ಕೂಡ ಗುರಿಯಾಗಿದ್ದರೆಂಬುದು ಹಲವರಿಗೆ ತಿಳಿದಿಲ್ಲ. ವಿದ್ಯಾಭ್ಯಾಸದ ಸಲುವಾಗಿ ಗಾಂಧಿಯವರು ವಿದೇಶಕ್ಕೆ ಹೊರಟಾಗ, ಜಾತಿ ಮುಖಂಡರು ವಿದೇಶಕ್ಕೆ ಹೋಗುವುದು ತಮ್ಮ ಧರ್ಮಪಾಲನೆಗೆ ತಕ್ಕುದ್ದಲ್ಲವಾದುದರಿಂದ ನೀನು ಹೋಗ ಕೂಡದೆಂದು ಬೆದರಿಕೆಯೊಡ್ಡುತ್ತಾರೆ. ಇವರ ಮಾತನ್ನು ಒಪ್ಪದ ಗಾಂಧೀಜಿಯವರಿಗೆ ಮತ್ತು ಅವರ ಪ್ರಯಾಣಕ್ಕೆ ಸಹಕರಿಸುವವರಿಗೆ ಜಾತಿಯಿಂದ ಬಹಿಷ್ಕಾರ ಹಾಕುತ್ತಾರೆ. ಈ ಘಟನೆ ಅವರ ಹೋರಾಟದ ಮೊದಲ ಹೆಜ್ಜೆಯಾಗುತ್ತದೆ. ವಿದ್ಯಾರ್ಥಿಯಾಗಿದ್ದಾಗಲೇ ಗಾಂಧಿ ಇಂತಹ ಜೀವವಿರೋಧಿ ಘಟನೆಯನ್ನು ಧಿಕ್ಕರಿಸಿದ್ದು ಅವರಲ್ಲಿದ್ದ ನಾಯಕತ್ವದ ಗುಣವನ್ನು ಹಾಗೂ ವೈಚಾರಿಕತೆಯ ಪರಿಜ್ಞಾನವನ್ನು ತೋರಿಸುತ್ತದೆ.
ದೇವರಲ್ಲಿ ಅಪಾರ ಶ್ರದ್ಧೆಯಿದ್ದ ಗಾಂಧಿಯವರು ಸತ್ಯವೇ ದೇವರೆಂದು ಕೊನೆಯವರೆಗೂ ಬಲವಾಗಿ ನಂಬಿದ್ದರು. ಹಾಗೆಂದು ಎಂದಿಗೂ ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಅನಾಚಾರಗಳನ್ನು ಸಹಿಸುತ್ತಿರಲಿಲ್ಲ. ಜನರ ಸೇವೆಯೇ ಜನಾರ್ದನನ ಸೇವೆಯೆಂಬುದನ್ನು ಗಾಂಧಿಯವರು ತಮ್ಮ ದಿನನಿತ್ಯದ ಆಚರಣೆಯಲ್ಲಿ ಅಳವಡಿಸಿಕೊಂಡು ನುಡಿದಂತೆಯೆ ನಡೆಯುತ್ತಿದ್ದ ಸಂತ ಎಂದರೆ ತಪ್ಪಾಗಲಾರದು.
‘‘ನನ್ನ ಜೀವನವೇ ನನ್ನ ಸಂದೇಶ’’ವೆಂದು ಹೇಳಿರುವ ಗಾಂಧೀಜಿಯವರ ಮಾತನ್ನು ಒಪ್ಪಲೇಬೇಕು. ಅವರು ನಡೆದ ಹಾದಿ, ನುಡಿದ ಮಾತು, ಅಳವಡಿಸಿಕೊಂಡಿದ್ದ ತತ್ವಗಳು ಹಾಗೂ ವಿಚಾರಗಳು ಮುಚ್ಚುಮರೆಯಿಲ್ಲದೆ ಅನುಸರಿಸಲು ಯೋಗ್ಯವಾದ ಜೀವನ ಪಾಠಗಳಾಗಿವೆ. ಗಾಂಧಿ ಜಾತಿ-ಧರ್ಮಗಳೊಳಗಿನ ಅಸಹಿಷ್ಣುತೆ, ಅಸಮಾನತೆ, ಅಸ್ಪಶ್ಯತೆ ಮುಂತಾದ ಸಾಮಾಜಿಕ ಅನಿಷ್ಟಗಳನ್ನು ಅಳಿಸುವ ಪ್ರಯತ್ನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದವರು. ಸ್ವಾವಲಂಬನೆಯ ಮೂಲಕ ಪ್ರತಿಯೊಂದು ಗ್ರಾಮಗಳು ಸ್ವರಾಜ್ಯಗಳಾಗಬೇಕೆಂದು ಕನಸುಕಂಡವರು. ಗುಡಿಕೈಗಾರಿಕೆಗಳಿಗೆ ಶಕ್ತಿಯನ್ನು ತುಂಬುವ ಮೂಲಕ ಆರ್ಥಿಕ ಸುಸ್ಥಿರತೆಯನ್ನು ಕಾಪಾಡಿಕೊಳ್ಳಬೇಕೆಂಬ ಗುಟ್ಟನ್ನು ಹೇಳಿಕೊಟ್ಟವರು. ಸರ್ವೋದಯದ ಮೂಲಮಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನರ ಜೀವನ ಮಟ್ಟವನ್ನು ಉತ್ತಮಪಡಿಸಬಹುದೆಂದು ತಿಳಿಸಿಕೊಟ್ಟವರು. ಹೀಗಾಗಿಯೇ ಮಹಾತ್ಮಾ ಗಾಂಧಿಯವರು ಕೇವಲ ಸ್ವಾತಂತ್ರ್ಯ ಹೋರಾಟಗಾರರಲ್ಲ, ಸಮಾಜದ ಪ್ರಗತಿಗೆ ಸಿದ್ಧಸೂತ್ರಗಳನ್ನು ಹುಡುಕಿಕೊಟ್ಟ ಆರ್ಥಿಕತಜ್ಞ ಹಾಗೂ ಸಮಾಜವಿಜ್ಞಾನಿಯೂ ಕೂಡ.
ಆರ್ಥಿಕ ಕುಸಿತದಿಂದ ಕಂಗಾಲಾಗಿರುವ ಇತರ ದೇಶಗಳಿಗೆ ಹೋಲಿಸಿದರೆ ಭಾರತ ಇತ್ತೀಚಿನವರೆಗೂ ಸುಸ್ಥಿರವಾಗಿಯೇ ಉಳಿದಿದ್ದುದಕ್ಕೆ ಕಾರಣವಾಗಿರುವುದು ನಮ್ಮ ಗ್ರಾಮೀಣ ಚಟುವಟಿಕೆಗಳ ತಳಹದಿಯ ತಿರುಳು ಎಂಬುದನ್ನು ಅಲ್ಲಗಳೆಯಲಾದೀತೆ?. ಇದರ ಮೂಲ ಪ್ರೇರಣಾಶಕ್ತಿ ಗಾಂಧಿಯವರ ದೂರದೃಷ್ಟಿಯ ಕೊಡುಗೆ ಎನ್ನುವುದನ್ನು ಕೂಡ ಮರೆಯುವಂತಿಲ್ಲ. ಆದ್ದರಿಂದಲೇ ಗಾಂಧಿಯವರನ್ನು ಬೇರೆಯವರೊಂದಿಗೆ ಹೋಲಿಸಲು ಸಾಧ್ಯವಾಗದು. ಸತ್ಯ ಮತ್ತು ಅಹಿಂಸೆ ಎಂಬ ಜೀವಕಂಟಕವಲ್ಲದ ಅಸ್ತ್ರಗಳನ್ನು ಹಿಡಿದು ಆಂಗ್ಲರನ್ನು ಮಣಿಸಿದ ಗಾಂಧಿಯೆಂಬ ಮೇರುವ್ಯಕ್ತಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬಾಳಿದವರು. ನಾಥೂರಾಮನೆಂಬ ನರಹಂತಕನ ಗುಂಡಿಗೆ ಎದೆಯೊಡ್ಡಿ ಅಸುನೀಗುವ ಕೊನೆಯ ಕ್ಷಣದವರೆಗೂ ದೇಶಕ್ಕಾಗಿ, ಜನರಿಗಾಗಿ ಅವಿರತವಾಗಿ ದೇಹದಂಡಿಸಿ ದುಡಿದ ತುಂಡುಬಟ್ಟೆಯುಟ್ಟಿದ್ದ ಈ ಫಕೀರನನ್ನು ಭಾರತದ ರಾಷ್ಟ್ರಪಿತನೆನ್ನುವುದರಲ್ಲಿ ದೋಷವಿದೆಯೇನು?.
ಇಂತಹ ಮೇರುವ್ಯಕ್ತಿಯ ವ್ಯಕ್ತಿತ್ವಕ್ಕೇ ಮಸಿಬಳಿದು ಖುಶಿಪಡುವ ಮನಸ್ಸುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಆತಂಕವೆನಿಸುತ್ತಿದೆ. ಇಂತಹವರ ನಡುವೆಯೂ ಗಾಂಧೀಜಿ ನಮ್ಮ ರಾಷ್ಟ್ರಕ್ಕಷ್ಟೇ ಸೀಮಿತವಾಗದೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸ್ವೀಕೃತವಾಗುತ್ತಿರುವುದನ್ನು ನೋಡಿದಾಗ ಹಿತ್ತಲಗಿಡ ಮದ್ದಲ್ಲ ಎನ್ನುವ ಮಾತು ನೆನಪಾಗುತ್ತದೆ. ಪೂರ್ವಾಗ್ರಹಗಳನ್ನು ದೂರವಿಟ್ಟು ಗಾಂಧಿಯವರನ್ನು ಮನದಾಳಕ್ಕೆ ಬಿಟ್ಟುಕೊಂಡರೆ ನಮ್ಮೆಳಗಿನ ಕೆಲವು ಭ್ರಮೆ ಹುಟ್ಟಿಸಿ ಭವಿಷ್ಯವನ್ನು ವಿನಾಶ ಮಾಡುವ ದುರ್ಬಯಕೆಗಳಿಗೆ ಕಡಿವಾಣ ಹಾಕಿಕೊಳ್ಳಲು ಸಾಧ್ಯವಾದೀತು. ಏಕೆಂದರೆ ‘‘ಒಬ್ಬರಿಗೆ ಯಾವುದು ಸಾಧ್ಯವೋ ಅದು ಎಲ್ಲರಿಗೂ ಸಾಧ್ಯವೆಂದು ನಾನು ಯಾವಾಗಲೂ ನಂಬಿದ್ದೇನೆ’’ ಎಂದು ಗಾಂಧಿಯವರೇ ಹೇಳಿದ್ದಾರೆ. ಹುಚ್ಚುಕುದುರೆಯ ಬೆನ್ನೇರಿ ಗೊತ್ತುಗುರಿಯಿಲ್ಲದೆ ವೇಗಾತಿವೇಗದಲ್ಲಿ ಓಡುತ್ತಿರುವ ನಮಗೆ ದಾರಿ ಕಾಣಿಸಲು ಗಾಂಧಿಯೆಂಬ ಹಣತೆಯ ಅಗತ್ಯತೆ ಇದೆಯೋ ಇಲ್ಲವೋ ಎನ್ನುವ ಕುರಿತು ಮರುಚಿಂತನೆ ಮಾಡಲು ಈ ಸಮಯ ಸೂಕ್ತವೆನಿಸುತ್ತದೆ. ಗಾಂಧೀಜಿಯವರೂ ನಮ್ಮನಿಮ್ಮಂತೆ ಮನುಷ್ಯರೆಂದು ನೋಡಿದಾಗ, ನಮಗೆ ಅವರೊಳಗಿನ ಮಾನವೀಯ ವೌಲ್ಯಗಳು ಮಾದರಿಯಾಗುತ್ತವೆ ಹಾಗೂ ಅವರ ಬದುಕು ನಮ್ಮೆಲ್ಲರಿಗೂ ಆದರ್ಶವಾಗುತ್ತದೆ.
ಮರೆತ ಮಾತು
ಗಾಂಧಿಯನ್ನು ಅರಿಯದೆ ಅವರ ವ್ಯಕ್ತಿತ್ವವನ್ನೇ ಹರಾಜಿಗಿಡುವವರಿಗೆ ಗಾಂಧೀಯತೆ ಅರ್ಥವಾಗುವುದಿಲ್ಲ. ಸ್ವಾರ್ಥಸಾಧನೆಗಾಗಿ ಜನಸಾಮಾನ್ಯರ ಮನಸ್ಸನ್ನು ಕದಡಿ ಸಾಮಾಜಿಕ ತಲ್ಲಣಗಳನ್ನೆಬ್ಬಿಸುವವರಿಗೂ ಗಾಂಧಿ ಬೇಕಾಗಿಲ್ಲ. ಆಯಾಯ ಕಾಲಘಟ್ಟದಲ್ಲಿ ಹುಟ್ಟಿಬರುವ ಸಾಮಾಜಿಕ ಸೇವಾಭಾವದ ವ್ಯಕ್ತಿಗಳನ್ನು ನಾವು ನಮ್ಮಿಳಗೆ ಬಿಟ್ಟುಕೊಳ್ಳುವುದಿಲ್ಲ. ಅವರು ಗತಿಸಿದ ನೂರಾರು ವರ್ಷಗಳಾದ ಮೇಲೆ ಗುಡಿಕಟ್ಟಿ ಆರಾಧಿಸುತ್ತೇವೆ. ಹಾಗಾಗಿಯೇ ನಮಗೆ ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧಿ, ಸರ್ವೋದಯದ ತಿರುಳನ್ನು ಉಣಬಡಿಸಿದ ಗಾಂಧಿ ಸರಳತೆಯನ್ನು ಹೇಳಿಕೊಟ್ಟ ಗಾಂಧಿ, ಅಧಿಕಾರಕ್ಕಾಗಿ ಹಪಹಪಿಸದ ಗಾಂಧಿ, ಅವಕಾಶವಿದ್ದರೂ ತನ್ನ ಹೆಂಡತಿ ಮಕ್ಕಳಿಗಾಗಿ ಹಣ ಮತ್ತು ಆಸ್ತಿ ಮಾಡಿಕೊಳ್ಳದ ಗಾಂಧಿ, ಕೇವಲ ತನ್ನ ಜಾತಿಗಾಗಿ ರಾಜಕಾರಣ ಮಾಡದ ಗಾಂಧಿ, ಸ್ವಾವಲಂಬನೆ, ಸ್ವಚ್ಛತೆ ಕಲಿಸಿದ ಗಾಂಧಿ ನೂರಾರು ವರ್ಷಗಳು ಕಳೆದ ಮೇಲೆ ಬುದ್ಧ ಮತ್ತು ಬಸವರಂತೆ ಯಾವುದೋ ಗುಡಿಯೊಳಗೆ ಪೂಜಿಸಿಕೊಳ್ಳುತ್ತಾರೆ. ಆ ದಿನಮಾನಗಳಲ್ಲಿ ಬದುಕುತ್ತಿರುವವರು ಪ್ರತಿಮೆಯ ಮುಂದೆ ನಿಂತು ಕೈಮುಗಿಯುತ್ತಾರೆ. ಅಲ್ಲಿಗೆ ಬುದ್ಧ ಮತ್ತು ಬಸವಣ್ಣನಂತೆ ಗಾಂಧಿಯೂ ದೇವರಾಗುತ್ತಾರೆ. ದೇವರಿಂದ ಮನುಷ್ಯ ಬಯಸುವುದಾದರೂ ಏನು?, ನಾವು ಮಾಡಿದ ಮೋಸ, ಕಳ್ಳತನ, ವಂಚನೆ, ಹಾದರ ಮುಂತಾದ ಪಾಪಗಳನ್ನು ಪರಿಹಾರ ಮಾಡೆಂದು ಅಲ್ಲವೇ?. ಮುಂದೊಂದು ದಿನ ಗಾಂಧಿಯೂ ಕೂಡ ಚಲನೆಯಿಲ್ಲದ, ಕ್ರಿಯೆಯಿಲ್ಲದ, ಜೀವವಿಲ್ಲದ ಘನವಾದ ದೇವರಾದಾರು ಎಂಬ ಭಯ ಸದಾ ಕಾಡುತ್ತಿರುತ್ತದೆ.