ಕಲಿಯುವ ಹಾದಿಯಲ್ಲಿ ಸೋಲು ಕಲಿಸುವ ಪಾಠ

Update: 2020-02-07 18:37 GMT

ಪರೀಕ್ಷೆ ಹತ್ತಿರ ಬರುತ್ತಿರುವಾಗ, ವಿದ್ಯಾರ್ಥಿಗಳು ಕಾಯಿಲೆಗೆ ಈಡಾಗುವುದು ಸಾಮಾನ್ಯ. ಕಾಯಿಲೆಗೆ ಕಾರಣವೇನು? ಸೋಲುವ ಭಯ ಸಮಸ್ಯೆಗಳಿಗೆ, ಕಾಯಿಲೆಗಳಿಗೆ ಕಾರಣವಾದರೆ, ಸೋಲಿನ ನಂತರದ ಪರಿಣಾಮದ ಭಯ ಆತ್ಮಹತ್ಯೆಯಂತಹ ಅನಾಹುತಗಳಿಗೆ ಅವಕಾಶ ನೀಡಿಬಿಡುತ್ತದೆ. ಹಾಗಾದರೆ ಕಲಿಯುವ ಹಾದಿಯಲ್ಲಿ ಸೋಲನ್ನು ಮೀರುವ ತಂತ್ರ ಯಾವುದು? ಗೆಲ್ಲುವ ಹಾದಿ ಯಾವುದು?

ವಾರದ ಹಿಂದೆ ನಾನು ಕಲಿಸುವ ಕಾಲೇಜಿನ ಹುಡುಗಿಯೋರ್ವಳು ತಲೆ ನೋವೆಂದು ಮಂಕಾಗಿದ್ದಳು. ಸದಾ ಚಟುವಟಿಕೆಯಿಂದಿರುವ ಇವಳು ಡೆಸ್ಕಿಗೆ ತಲೆ ಇಟ್ಟು ಮಲಗಿದ್ದನ್ನು ನೋಡಿದಾಗಲೇ, ಸಮಸ್ಯೆಯ ಅಂದಾಜು ದೊರೆತಿತ್ತು. ಏಕೆಂದರೆ ಇದು ಫೆಬ್ರವರಿ ತಿಂಗಳು. ದ್ವಿತೀಯ ಪಿಯುಸಿ ಪರೀಕ್ಷೆಗಳು ಒಂದು ತಿಂಗಳು ದೂರವಿರುವ ಈ ಸಮಯದಲ್ಲಿ ತಲೆನೋವು, ಜ್ವರ, ಸುಸ್ತು, ತಲೆಸುತ್ತು ಇತ್ಯಾದಿಗಳು ಸಾಮಾನ್ಯವಾಗಿ ಕೇಳುವ ದೂರುಗಳಾಗಿರುತ್ತವೆ. ಪರೀಕ್ಷೆಯ ಭಯ; ಅದರಲ್ಲೂ ಪರೀಕ್ಷೆಯಲ್ಲಿ ಸೋಲುವ ಭಯ ವಿದ್ಯಾರ್ಥಿಗಳನ್ನು ಕಾಡುತ್ತದೆ. ಅದನ್ನು ನೇರವಾಗಿ ಹೇಗೆ ಹೇಳಿಕೊಳ್ಳಬೇಕೆಂದು ತಿಳಿಯದ ಅಥವಾ ತಿಳಿದರೂ ಹೇಳಲು ಭಯಪಟ್ಟು ಸುಮ್ಮನಾಗುವವರು ಹೆಚ್ಚು. ಆದರೆ ಶರೀರ ಮಾತ್ರ ಒಳಗಿರುವ ಭಯಕ್ಕೊಂದು ದಾರಿ ಸೃಷ್ಟಿಸುತ್ತದೆ-ಅವುಗಳೇ ಮೇಲೆ ಹೇಳಿದ ಕಾಯಿಲೆಗಳು.

ಪರೀಕ್ಷೆ ಹತ್ತಿರ ಬರುತ್ತಿರುವಾಗ, ಮನೆಯ ಮಗು ಹೀಗೆ ಕಾಯಿಲೆಗೆ ಈಡಾಗುವುದನ್ನು ನೋಡಲಾಗದೆ ಪೋಷಕರು ವೈದ್ಯರ ಬಳಿ ಓಡುತ್ತಾರೆ; ವೈದ್ಯರು ಚಿಕಿತ್ಸೆ ನೀಡುತ್ತಾರೆ. ಸ್ವಲ್ಪಸರಿಯಾದ ಹಾಗೆ, ಸ್ವಲ್ಪಸರಿಹೋಗದ ಹಾಗೆ ಕಾಯಿಲೆ ಉಳಿದು ಬಿಡುತ್ತದೆ. ಕಾಳಜಿಯಿರುವ ವೈದ್ಯರು ಮಗುವಿನ ಜೊತೆ ಮಾತನಾಡುತ್ತಾ, ಅದರ ಒಳಗಿರುವ ಭಯವನ್ನು ಅರ್ಥ ಮಾಡಿಕೊಂಡು ಸೂಕ್ತ ಧೈರ್ಯ ಹೇಳಿ ಕಾಯಿಲೆಯ ಮೂಲವಾದ ಮನಸ್ಸನ್ನು ಸರಿಪಡಿಸುತ್ತಾರೆ. ಕಾಯಿಲೆಯ ಈ ಮುಖದ ಕುರಿತು ಕಾಳಜಿಯಿರದ ವೈದ್ಯರು ಒಂದಷ್ಟು ಮಾತ್ರೆಗಳನ್ನೋ ಟಾನಿಕ್‌ನಂತಹ ಔಷಧಿಗಳನ್ನು ನೀಡಿ ಸುಮ್ಮನಾಗುತ್ತಾರೆ. ಸೋಲುವ ಭಯ ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವಾದರೆ, ಸೋಲಿನ ನಂತರದ ಪರಿಣಾಮದ ಭಯ ಆತ್ಮಹತ್ಯೆಯಂತಹ ಅನಾಹುತಗಳಿಗೆ ಅವಕಾಶ ನೀಡಿಬಿಡುತ್ತದೆ. ಸೋಲು ಎಂತಹವರನ್ನೂ ಅಲುಗಾಡಿಸಿಬಿಡುತ್ತದೆ. ಆದರೆ ಇದೇ ಸೋಲು ಭೂಮಿಯ ಮೇಲಿರುವ ಎಲ್ಲಾ ಜೀವಿಗಳನ್ನು ಸಬಲಗೊಳಿಸಿದೆ! ಏಕೆಂದರೆ, ಸೋಲುಗಳು ಇಲ್ಲಿ ಕಲಿಯುವ ಹಾದಿಯ ಪಾಠಗಳಾಗಿವೆ. ಯಾವ ಜೀವಿ ಸೋಲು ಕಲಿಸಿದ ಪಾಠವನ್ನು ಅರ್ಥ ಮಾಡಿಕೊಂಡಿತೋ, ಅಂತಹ ಜೀವಿ ಭೂಮಿಯ ಮೇಲೆ ತನ್ನ ಸಂತತಿಯನ್ನು ಗಟ್ಟಿಯಾಗಿ ಸ್ಥಾಪಿಸಿಕೊಂಡಿದೆ; ಯಾವ ಜೀವಿ ಸೋಲು ಕಲಿಸಿದ ಪಾಠವನ್ನು ಅರ್ಥ ಮಾಡಿಕೊಳ್ಳಲಿಲ್ಲವೋ, ಅದು ಸಂಪೂರ್ಣವಾಗಿ ನಶಿಸಿ ಹೋಗಿದೆ. ಉದಾಹರಣೆಗೆ ಇಂದು ಜಗತ್ತನ್ನು ಬೆದರಿಸುತ್ತಿರುವ ಕೊರೋನ ವೈರಸ್ ಕಥೆಯನ್ನೇ ನೋಡೋಣ.

ಕೆಲವು ವರ್ಷಗಳ ಹಿಂದೆ ಜಗತ್ತನ್ನು ನಡುಗಿಸಿದ್ದ ಸಾರ್ಸ್ ಜ್ವರದ ಸಹೋದರ ಈ ವೈರಸ್. ಮನುಷ್ಯನಿಗೆ ಕಾಯಿಲೆ ತರುವ ಎರಡು ಪ್ರಮುಖ ಜೀವಿಗಳು-ವೈರಸ್ ಮತ್ತು ಬ್ಯಾಕ್ಟೀರಿಯ. ಈ ಎರಡರಲ್ಲಿ ವೈರಸ್ ಅನ್ನು ಜೀವಿ ಎಂದು ಹೇಳುವುದು ಕಷ್ಟ ಎನ್ನುವ ಸ್ಥಿತಿಯಲ್ಲಿ ಇರುತ್ತದೆ. ಇದಕ್ಕೆ ಅನುಕೂಲಕರವಲ್ಲದ ಜೀವಕೋಶ ಸಿಗದ ಹೊರತು, ಇದಕ್ಕೆ ಜೀವವಿರುವುದಿಲ್ಲ! ಅನುಕೂಲಕರವಾದ ಜೀವಕೋಶ ಸಿಕ್ಕ ಒಡನೆಯೇ, ಅದನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ಜೀವಕೋಶಗಳಲ್ಲಿರುವ ಡಿಎನ್‌ಎ/ಆರ್‌ಎನ್‌ಎಗಳನ್ನು ತನ್ನ ಅನುಕೂಲಕ್ಕೆ ಬದಲಿಸಿಕೊಳ್ಳುವ ಈ ಜೀವಿ, ಮರುಗಳಿಗೆಯಲ್ಲೇ ತನ್ನ ಸಂತತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ಹೀಗೆ ಜನ್ಮ ಪಡೆದ ಹಲವಾರು ಮರಿ ವೈರಸ್‌ಗಳು ಇತರ ಕೋಶಗಳ ಮೇಲೆ ದಾಳಿಯನ್ನು ಮುಂದುವರಿಸುತ್ತದೆ; ಇತ್ತ ದಾಳಿಗೆ ಒಳಗಾದ ಕೋಶವು ಪೂರ್ಣವಾಗಿ ಸತ್ತು ಹೋಗುತ್ತದೆ. ಸತ್ತು ಹೋದ ಕೋಶವನ್ನು ತ್ಯಜಿಸಿ, ಹೊಸದೊಂದು ಕೋಶವನ್ನು ಪ್ರವೇಶಿಸುವ ವೈರಸ್ ತನ್ನ ಸಂತತಿಯನ್ನು ಮುಂದುವರಿಸುತ್ತಾ ಸಾಗುತ್ತದೆ.

ವೈರಸ್‌ನ ಕುರಿತು ಇಷ್ಟೆಲ್ಲಾ ಜ್ಞಾನವನ್ನು ಕಲೆಹಾಕಿರುವ ಸಂಶೋಧಕರು, ವೈರಸ್‌ಗೆ ಪ್ರತಿ ಔಷಧಿಯನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿರುವರಾದರೂ, ಅಂತಹ ಹೇಳಿಕೊಳ್ಳುವಂತಹ ಯಶಸ್ಸು ಲಭ್ಯವಾಗಿರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ವೈರಸ್ ವಿಕಾಸದ ಹಾದಿಯಲ್ಲಿ ಸೋಲಿನಿಂದ ಕಲಿತಿರುವ ಪಾಠವಾಗಿರುತ್ತದೆ. ದಾಳಿಗೆ ಈಡಾದ ಕೋಶಗಳ ಡಿಎನ್‌ಎಗಳನ್ನು ಬದಲಿಸುವ ವೈರಸ್‌ಗಳ ಮೇಲೆ ವೈದ್ಯರು ಪೂರ್ಣ ಎನಿಸುವಷ್ಟು ಯಶಸ್ಸು ಗಳಿಸಿದ್ದಾರೆ. ಆದರೆ ಆರ್‌ಎನ್‌ಎ ಹಂತದಲ್ಲಿ ಬದಲಾವಣೆಗಳನ್ನು ತರುವ ವೈರಸ್‌ಗಳು ಇನ್ನೂ ವೈದ್ಯರ ಹಿಡಿತಕ್ಕೆ ದಕ್ಕಿಲ್ಲ. ಕಾರಣ, ಈ ಜೀವಿಗಳು (ರೋಗಗಳು) ಆರ್‌ಎನ್‌ಎ ಹಂತದಲ್ಲಿ ತರುವ ಬದಲಾವಣೆಗಳು ಅರ್ಥವಾಗಿವೆಯಾದರೂ, ಇಲ್ಲಿ ನಡೆಯುವ ಕ್ಷಿಪ್ರಗತಿಯ ಚಲನೆ ಮತ್ತು ಬದಲಾವಣೆಗಳು ಪ್ರತಿ ಅಸ್ತ್ರವನ್ನು ಸೃಷ್ಟಿಸುವ ವಿಜ್ಞಾನಿಗಳ ಪ್ರಯತ್ನವನ್ನು ನಿರುಪಯುಕ್ತಗೊಳಿಸುತ್ತದೆ. ಇಂದು ಸೃಷ್ಟಿಯಾದ ವೈರಸ್‌ನ ರಚನೆ, ಕೆಲವೇ ಗಂಟೆಗಳಲ್ಲೇ ಹೊಸ ಸ್ವರೂಪವನ್ನು ಪಡೆದುಕೊಂಡಿರುತ್ತದೆ! ಹೀಗಾಗಿ ಈ ರೋಗಕಾರಕ ವೈರಸ್‌ಗಳನ್ನು ಪತ್ತೆ ಹಚ್ಚುವುದು ಕಷ್ಟ, ಪತ್ತೆ ಹಚ್ಚಿದರೂ, ಚಿಕಿತ್ಸೆ ರೂಪಿಸುವುದು ಇನ್ನೂ ಕಷ್ಟ.

ಡಾರ್ವಿನ್ ಮಂಡಿಸಿದ ವಿಕಾಸ ಸಿದ್ಧಾಂತ ಹಾದಿಯನ್ನು ಹಿಡಿದು ಹೋದರೆ, ವೈರಸ್‌ನ ಈ ಗುಣದ ಮೂಲ ಕಾರಣ ನಮಗೆ ತಿಳಿಯುತ್ತದೆ. ಎಲ್ಲ ಜೀವಿಗಳಂತೆ ಬದುಕಲು ಬಯಸುವ ವೈರಸ್‌ಗಳನ್ನು, ಅದರ ಪ್ರಭಾವಕ್ಕೆ ಒಳಗಾದ ಜೀವಿಯು ತಾನು ಬದುಕಬೇಕೆಂಬ ಹಂಬಲದಿಂದ, ಹಿಡಿತ ಸಾಧಿಸ ಬಯಸುತ್ತಿರುವ ವೈರಸ್‌ಗೆ ಪ್ರತಿಯಾಗಿ ಮತ್ತೊಂದು ದಾರಿಯನ್ನು ಪತ್ತೆಹಚ್ಚಿಕೊಂಡಿರುತ್ತದೆ. ಕಾಯಿಲೆ ಭರಿಸುವ ವೈರಸ್ ಕೋಶದ ಮೇಲೆ ಆಕ್ರಮಣ ಮಾಡಿದ ಕೂಡಲೇ, ಆ ಕೋಶದ ಸುತ್ತ ಸುರಕ್ಷತಾ ವಲಯ ನಿರ್ಮಿಸಿ, ಉಳಿದ ಕೋಶಗಳಿಗೆ ವೈರಸ್ ತಲುಪದಂತೆ ನೋಡಿಕೊಳ್ಳುವ ಪ್ರಯತ್ನಗಳು ತ್ವರಿತಗತಿಯಲ್ಲಿ ಜರುಗುತ್ತವೆ. ಇದಕ್ಕೆ ಪ್ರತಿಯಾಗಿ ವೈರಸ್ ಕೂಡ, ರೋಗನಿರೋಧಕ ವ್ಯವಸ್ಥೆಯು ಸೃಷ್ಟಿಸುವ ಸುರಕ್ಷಾ ಕವಚವನ್ನು ಭೇದಿಸುವ ಕೆಲಸಕ್ಕೆ ಕೈಹಾಕುತ್ತದೆ. ತನ್ನ ಸ್ವರೂಪವನ್ನೇ ಬದಲಿಸಿಕೊಂಡು, ರೋಗನಿರೋಧಕ ವ್ಯವಸ್ಥೆಯನ್ನು ಮೋಸಗೊಳಿಸುತ್ತದೆ! ಈ ವೈರಸ್‌ಗಳು ಇಷ್ಟೆಲ್ಲಾ ಚಲಾಕಿತನವನ್ನು ತೋರಿದರೂ, ಸಾಮಾನ್ಯವಾಗಿ ಮನುಷ್ಯನಲ್ಲಿ ಸಹಜವಾಗಿರುವ ರೋಗನಿರೋಧಕ ಶಕ್ತಿಯೇ ವೈರಸ್ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸುತ್ತದೆ. ಆದರೆ, ಎಲ್ಲಾ ಸಮಯದಲ್ಲಿ ಹೀಗೆ ಸಂಭವಿಸುವುದಿಲ್ಲ. ಎಚ್‌ಐವಿ(ಏಡ್ಸ್), ಎಬೋಲಾ ಮತ್ತು ಕೊರೋನ ವೈರಸ್‌ಗಳಂತಹ ವಿಷಯದಲ್ಲಿ ಮಾತ್ರ ಮನುಷ್ಯ ಶರೀರದಲ್ಲಿರುವ ಸಹಜ ರೋಗನಿರೋಧಕ ಶಕ್ತಿ ಸೋತು ಸುಣ್ಣವಾಗುತ್ತದೆ. ಬಹುಶಃ ಹೀಗೆ ಒಂದೆರಡು ತಲೆಮಾರು ಕಳೆದ ನಂತರ ಇವುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಮಾನವ ಶರೀರ ಸಹಜವಾಗಿ ಪಡೆದರೂ ಪಡೆಯಬಹುದು.

ಒಂದಂತೂ ಸತ್ಯ. ಭೂಮಿಯ ಮೇಲಿರುವ ಅನೇಕಾನೇಕ ಜೀವರಾಶಿಗಳಲ್ಲಿ ಒಂದಾದ ವೈರಸ್ ಕೂಡ ಸೋಲಿನಿಂದ ಪಾಠ ಕಲಿಯುತ್ತಾ ಹೊಸ ತಂತ್ರಗಳನ್ನು ಹಣೆಯುತ್ತಾ ಬದುಕುಳಿಯುವ ತನ್ನ ಯತ್ನವನ್ನು ಮುಂದುವರಿಸುತ್ತಾ ಸಾಗುತ್ತದೆ. ಇದರ ವಿರುದ್ಧ ಹೋರಾಟ ಮಾಡುವ ಇತರ ಜೀವಿಗಳು ಸಹ ಸೋಲಿನಿಂದ ಪಾಠ ಕಲಿಯುತ್ತಾ ವಿಕಾಸದ ಹಾದಿಯಲ್ಲಿ ಹೊಸ ರೂಪಗಳನ್ನು ಪಡೆಯುತ್ತವೆ. ಹೀಗಿರುವಾಗ, ಮಕ್ಕಳಲ್ಲಿ ಸೋಲಿನ ಭಯವನ್ನು ಮಾತ್ರ ಮೂಡಿಸುವ ಶಾಲೆಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಜೀವ ವಿಕಾಸದ ಪಾಠವನ್ನು ಹೇಳುವ ಈ ವ್ಯವಸ್ಥೆ, ಸೋಲಿನ ಕುರಿತು ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ ಏಕೆ? ಇಡೀ ಭೂಮಿಯನ್ನೇ ಒಂದು ಕಲಿಸುವ-ಕಲಿಯುವ ಶಾಲೆ ಎಂದು ಪರಿಗಣಿಸಿದರೆ, ಇಂದು ಭೂಮಿಯ ಮೇಲಿರುವ ಎಲ್ಲಾ ಜೀವಿಗಳು ಕಲಿಯುವ ಹಾದಿಯಲ್ಲಿ ನಡೆದ ಸೋಲುಗಳಿಂದ ಪಾಠ ಕಲಿತ ಕಾರಣವೇ ಇಂದು ಜೀವಂತವಿರುವುದು! ಇದನ್ನು ದಿನಗಟ್ಟಲೇ ಪಾಠ ಹೇಳುವ ಶಿಕ್ಷಕರು ಮಾತ್ರ ಸೋಲಿನ ಕುರಿತಾಗಿ ಮಕ್ಕಳಲ್ಲಿ ಭಯ ಮೂಡಿಸುವ ಕೆಲಸವನ್ನು ಮಾಡುತ್ತಾರೆ.

ಏಕೆ ಈ ರೀತಿಯ ಸಂದರ್ಭ ಮೂಡಿದೆ? ಇದಕ್ಕೆ ಬಹುಮುಖ್ಯವಾದ ಕಾರಣ ಕಲಿಯುವ-ಕಲಿಸುವ ಪ್ರಕ್ರಿಯೆಗಿಂತ, ಕಲಿಕೆಯ ಪರಿಣಾಮವನ್ನು ಅಳೆಯುವ ವಿಧಾನಗಳಲ್ಲಿ ಒಂದಾದ ಪರೀಕ್ಷೆಗೆ ಅನಗತ್ಯ ಮನ್ನಣೆ ನೀಡಿರುವುದು. ಆದರೆ ಸೋಜಿಗದ ಸಂಗತಿ ಏನೆಂದರೆ, ತಾತ್ವಿಕ ಹಂತದಲ್ಲಿ ಯಾವುದೇ ದೋಷವಿರುವುದಿಲ್ಲ! ಪ್ರಾಯೋಗಿಕ ಹಂತದಲ್ಲಿ ಮಾತ್ರ ದೋಷವಿದೆ. ನೀವು ನಮ್ಮ ದೇಶದ ಯಾವುದೇ ಶಿಕ್ಷಕರ ತರಬೇತಿ ಕಾಲೇಜಿನ ಪಠ್ಯಪುಸ್ತಕ ತೆಗೆದು ನೋಡಿ: ಮಕ್ಕಳ ಕಲಿಕೆ ಏಕ ಪ್ರಕಾರವಾಗಿರುವುದಿಲ್ಲ, ಮಕ್ಕಳು ಭಿನ್ನ ಭಿನ್ನ ಸಾಮರ್ಥ್ಯಗಳನ್ನು ಹೊಂದಿರುತ್ತಾರೆ, ಕಲಿಕೆ ಎನ್ನುವುದನ್ನು ಸಮಗ್ರವಾಗಿ ನೋಡಬೇಕಾಗುತ್ತದೆ, ಕಲಿಕೆ ವರ್ತನೆಯಲ್ಲಿ ಕಾಣಿಸಿದಾಗ ಮಾತ್ರ ಅದು ನಿಜದ ಕಲಿಕೆಯಾಗುತ್ತದೆ ಇತ್ಯಾದಿ ಹೇಳಿಕೆಗಳು ಮತ್ತು ಚರ್ಚೆಗಳು ಇರುತ್ತವೆ. ತರಬೇತಿ ಅವಧಿಯಲ್ಲಿ ಬೋಧಿಸುವ ಶಿಕ್ಷಣ ಶಾಸ್ತ್ರದಲ್ಲಿ ಪರೀಕ್ಷೆಯ ಭಯವನ್ನು ತರದಿರುವ ವಿಧಾನಗಳನ್ನು ತರಗತಿಯಲ್ಲಿ ಬಳಸುವ ಕುರಿತೇ ಹೆಚ್ಚು ಚರ್ಚೆಯಿರುತ್ತದೆ. ಇದರ ಕುರಿತು ಭಾವಿ ಶಿಕ್ಷಕರಿಗೆ ಪರೀಕ್ಷೆಗಳು ಇರುತ್ತವೆ. ಈ ಎಲ್ಲಾ ಪರೀಕ್ಷೆಗಳನ್ನು ಎದುರಿಸಿ ಪಾಸಾಗಿ ಬರುವ ಭಾವಿ ಶಿಕ್ಷಕರು ಹಾಲಿ ಶಿಕ್ಷಕರಾಗಿ, ಪರೀಕ್ಷೆಯ ಭಯವನ್ನು ಬಿತ್ತಿ ಬೆಳೆಯುವ ಕಾರ್ಯದಲ್ಲಿ ಸುಲಭವಾಗಿ ತೊಡಗಿಕೊಳ್ಳುತ್ತಾರೆ.

ಮತ್ತೆ ಆರಂಭದಲ್ಲಿ ಹೇಳಿದ ತಲೆ ನೋವಿನ ಘಟನೆಗೆ ಹಿಂದಿರುಗಿ ಬರುವ. ದ್ವಿತೀಯ ಪಿಯುಸಿ ಕಲಿಯುವ ಪ್ರಕ್ರಿಯೆಯಲ್ಲಿ ಈಗಾಗಲೇ ನಡೆದಿರುವ ಮೂರು ಪರೀಕ್ಷೆಗಳಲ್ಲಿ ಆಕೆ ಅನುಭವಿಸಿರುವ ಸೋಲುಗಳ ಕುರಿತು ಅವಳೊಂದಿಗೆ ಚರ್ಚಿಸಿದೆ. ಆ ಸೋಲುಗಳಿಂದ ಅವಳು ಕಲಿತ ಪಾಠಗಳ ಕುರಿತು ವಿಚಾರಿಸಿ, ಅವುಗಳನ್ನು ಒಂದೆಡೆ ಪಟ್ಟಿ ಮಾಡಿಸಿದೆ. ಆನಂತರ, ಪಟ್ಟಿಯ ಆಧಾರದ ಮೇಲೆ, ಮುಖ್ಯ ಪರೀಕ್ಷೆಯಲ್ಲಿ ಆಗಬಹುದಾದ ಸೋಲಿನ ಸಾಧ್ಯತೆಯ ಕುರಿತು ಆಲೋಚಿಸುವಂತೆ ಹೇಳಿದೆ. ಒಂದು ದಿನ ಬಿಟ್ಟು ಹೇಳಿದಳು: ‘‘ಸಾರ್, ನಾನು ನಿಗದಿತ ಸಮಯಕ್ಕೆ ಸರಿಯಾಗಿ ಬರೆಯಲು ಆಗದೆ, ಮುಖ್ಯ ಪರೀಕ್ಷೆಯಲ್ಲಿ ಸೋಲುವ ಸಾಧ್ಯತೆ ಇದೆ.’’ ಈ ಸೋಲನ್ನು ಮೀರಲು ಒಂದು ತಂತ್ರ ಹುಡುಕಿದೆವು- ಪ್ರತಿ ಅಂಕಕ್ಕೂ ಒಂದೂವರೆ ನಿಮಿಷ ಸಮಯ ನಿಗದಿ ಮಾಡಿದೆವು (100 ಅಂಕ = 150 ನಿಮಿಷಗಳು). ಎರಡು ದಿನಕ್ಕೆ ಒಮ್ಮೆ ಒಂದು ಪ್ರಶ್ನೆ ಪತ್ರಿಕೆಯನ್ನು ಸಮಯ ಪಾಲನೆ ದೃಷ್ಟಿಯಿಂದ ಬರೆದು ನೋಡುವುದು. ನಿಧಾನವಾಗಿ ಅವಳ ತಲೆನೋವು ಇಲ್ಲವಾಗುತ್ತಿದೆ. ಕಲಿಯುವ ಹಾದಿಯಲ್ಲಿ ಸೋಲು ಕಲಿಸುವ ಪಾಠಗಳು ಹೀಗೆಯೇ ಇರುತ್ತವೆ.

Writer - ಸದಾನಂದ ಆರ್.

contributor

Editor - ಸದಾನಂದ ಆರ್.

contributor

Similar News

ಜಗದಗಲ
ಜಗ ದಗಲ