ಮಾನವತೆಯ ಹೆಸರಲ್ಲಿ ಓದಿ ಓದಿ ಮರುಳಾಗಿ ಎಂದು ಹೇಳುವ ತೋರುಗಾಣಿಕೆಯ ಕತೆ

Update: 2020-02-08 12:18 GMT

ಕನ್ನಡದ ಜನಪ್ರಿಯ ಲೇಖಕ ವಸುಧೇಂದ್ರ ಅವರ ಈ ಕಾದಂಬರಿಯನ್ನು ಮೂರು ದಿನಗಳ ಹಿಂದೆ ಓದಿ ಮುಗಿಸಿದ್ದೆ. ಆದರೆ ಬರೆಯಲು ಸಮಯ ಸಿಕ್ಕಿರಲಿಲ್ಲ. ಇವತ್ತು ಬರೆಯಬೇಕೆಂದು ಕೂತು ಈ ಕೆಲ ಅಭಿಪ್ರಾಯಗಳನ್ನು ಬರೆದಿದ್ದೇನೆ.

ವಸುಧೇಂದ್ರರ ತೇಜೋ-ತುಂಗಭದ್ರಾ ಕಾದಂಬರಿ ಮೇಲೆ ಮೆಚ್ಚುಗೆಯ ಮಾತುಗಳನ್ನಾಡಿರುವವರೆಲ್ಲರೂ ಹೇಳುವಂತೆ ಕನ್ನಡ ಸಾಹಿತ್ಯದ ಮೈಲುಗಲ್ಲಿನ ಕೃತಿಯೇನಲ್ಲ.

ಪೋರ್ಚುಗೀಸರು, ವಿಜಯನಗರ ಅರಸರು ಮತ್ತು ಆದಿಲ್ ಶಾಹಿ ಅರಸರ ಸುಮಾರು 26 ವರ್ಷಗಳ ಇತಿಹಾಸವನ್ನು ನಮ್ಮ ಮುಂದೆ ತೆರೆದಿಡುವ ಕಾದಂಬರಿ.

ಪೋರ್ಚುಗಲ್‌ನ ಲಿಸ್ಬನ್‌ನಲ್ಲಿ ಆರಂಭವಾಗುವ ಕತೆ, ತೆಂಬಕಪುರ, ವಿಜಯನಗರ ಮತ್ತು ಗೋವಾದಲ್ಲಿ ನಡೆದು, ಕಡೆಗೆ ಗೋವಾದಲ್ಲಿ ಕೊನೆಗೊಳ್ಳುತ್ತದೆ.

ಪೋರ್ಚುಗಲ್‌ನ ಲಿಸ್ಬನ್‌ನಲ್ಲಿ ವಾಸವಾಗಿದ್ದ ಕೆಥೊಲಿಕ್ ಗೇಬ್ರಿಯಲ್ ಮತ್ತು ಯಹೂದಿ ಬೆಲ್ಲಾ ಹಾಗೂ ತೆಂಬಕಪುರದಲ್ಲಿ ಬಂದು ವಾಸಮಾಡುತ್ತಿದ್ದ ವೈಷ್ಣವ ಕೇಶವ ಮತ್ತು ತೆಂಬಕಪುರದ ನಿವಾಸಿ ಶೈವ ಹಂಪವ್ವ ಈ ಎರಡೂ ಜೋಡಿಗಳ ಪ್ರೇಮವನ್ನು ಪೊರ್ಚುಗೀಸ್, ಆದಿಲ್ ಶಾಹಿ ಅರಸರು ಮತ್ತು ವಿಜಯನಗರ ಅರಸರುಗಳ ಆಳ್ವಿಕೆಯ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಆಡಳಿತ ಅಂದರೆ ಇಡೀ ಪ್ರಭುತ್ವ ಹೇಗೆ ಸಾಮಾನ್ಯರ ಬದುಕನ್ನು ಸರ್ವನಾಶಮಾಡುತ್ತವೆ ಎಂಬುದನ್ನು ವಸುದೇಂದ್ರರ ಬರಹದ ಕೌಶಲ ಓದುಗನ ಮನವನ್ನು ಕಲಕಿ, ಮುಟ್ಟಿಸುತ್ತದೆ.

ಕತೆಕಟ್ಟುವ ಕಲೆಗಾರಿಕೆ ಮತ್ತು ಕೌಶಲ ಮತ್ತು ಓದುಗರನ್ನು ಮರುಳು ಮಾಡುವ ವಿಚಾರದಲ್ಲಿ ಎಸ್.ಎಲ್. ಭೈರಪ್ಪನವರನ್ನು ಹೊರತುಪಡಿಸಿದರೆ ವಸುಧೇಂದ್ರರೇ ಆನಂತರದವರು ಅನ್ನಿಸುತ್ತೆ.

ಈ ಕಾದಂಬರಿಯ ವಸ್ತು ಮಧ್ಯಕಾಲೀನ ಸಮಾಜದ್ದು. ಅಂದರೆ 15 ಮತ್ತು 16 ನೆಯ ಶತಮಾನದ್ದು ಐತಿಹಾಸಿಕವಾದದ್ದು. ಐತಿಹಾಸಿಕ ವಸ್ತುವನ್ನು ತೆಗೆದುಕೊಂಡು ಕಾದಂಬರಿ ಬರೆಯುವುದು ಕನ್ನಡದಲ್ಲಿ ಹೊಸತೇನಲ್ಲ. ಆದರೆ ಚರಿತ್ರೆಯನ್ನು ನೀವು ಒಬ್ಬ ಲೇಖಕನಾಗಿ ಹೇಗೆ ನಿಭಾಯಿಸಿದ್ದೀರಿ ಎಂಬುದು ಬಹಳ ಮುಖ್ಯವಾದದ್ದು.

ಏಕೆಂದರೆ ಒಟ್ಟು ಚರಿತ್ರೆಯೇ ಅನೇಕ ಬಗೆಯ ಅಪಗ್ರಹಿಕೆಗಳ ಕಥೆ. ಚರಿತ್ರೆಯ ನಿರ್ಮಾಣದಲ್ಲಿ ಯಾವುದೋ ಕೆಲವೊಂದು ಆಯ್ಕೆ ಮಾಡಲಾಗುತ್ತದೆ.ಕೆಲವೊಂದು ಬಿಡಲಾಗುತ್ತದೆ. ಈ ಸೇರ್ಪಡೆ- ಬೇರ್ಪಡೆಗಳ ಸೂಕ್ಷ್ಮ ಅಧ್ಯಯನದಿಂದ ಮಾತ್ರ ಚರಿತ್ರೆಯ ರಹಸ್ಯ ತಿಳಿಯುತ್ತದೆ ಎಂದು ವಿಮರ್ಶಕ ಡಿ.ಆರ್. ನಾಗರಾಜ್ ಅವರು ಹೇಳುತ್ತಾರೆ.

ಡಿ.ಆರ್.ಎನ್. ಅವರ ಮಾತಿನಂತೆ ಚರಿತ್ರೆಯ ಅಪಗ್ರಹಿಕೆಗಳ ಕತೆಯನ್ನು ಒಬ್ಬ ಲೇಖಕ ಚರಿತ್ರೆಯ ಮುನ್ನಡೆಗೆ ಅಥವಾ ವಿಕೃತಿಗೂ ಬಳಸಿಕೊಳ್ಳಬಹುದು. ವಸುಧೇಂದ್ರರ ‘ತೇಜೋ-ತುಂಗಭದ್ರಾ’ ಕಾದಂಬರಿ ಮೇಲ್ನೋಟಕ್ಕೆ ಧರ್ಮ ಸಹಿಷ್ಣುತೆ - ಧರ್ಮಾಂಧತೆ, ಮಾನವತಾವಾದ, ಜನಸಾಮಾನ್ಯರ ಬದುಕಿನ ಕಾಳಜಿಯನ್ನು, ಅಂದಿನ ಬರ್ಬರ ರಾಜಕೀಯ ವಾಸ್ತವತೆಗಳ ನಡುವೆ ಎತ್ತಿ ಹಿಡಿಯುವ ಕತೆಯಾಗಿ ಕಂಡರೂ, ಆಳದಲ್ಲಿ ಇಂದು ಅಖಿಲ ಭಾರತ ಮಟ್ಟದಲ್ಲಿ ಬೃಹತ್ ರೂಪು ಪಡೆದು ನಿಂತಿರುವ ಹಿಂದುತ್ವ ಅಥವಾ ಹಿಂದೂ ಮತೀಯವಾದಿ ಭಾವನೆಗಳನ್ನು ಉಗ್ರವಾಗಿ ಪ್ರತಿಪಾದಿಸದೆ, ಉದಾರವಾದಿ ಹಿಂದುತ್ವದ ಭಾವನೆಗಳನ್ನು ಸೂತ್ರೀಕರಿಸುವ ಕ್ರಿಯೆಯೊಡನೆಯೇ ಕಾದಂಬರಿ ರೂಪು ಪಡೆದಿದೆ.

 ಇದಕ್ಕೆ ಬಹುಮುಖ್ಯ ಕಾರಣವೆಂದರೆ ಲೇಖಕರು ಕಾದಂಬರಿಯ ಬರವಣಿಗೆಗೆ ಆಯ್ಕೆ ಮಾಡಿಕೊಂಡಿರುವ ವಿಜಯನಗರ ಸಾಮ್ರಾಜ್ಯದ ಕಾಲ (ಈ ಕಾಲವನ್ನುRise of Hinduism ಎಂದು ಕರೆಯಲಾಗುತ್ತದೆ) ಮತ್ತು ಚರಿತ್ರೆಯ ವಸ್ತುವನ್ನು ಆಯ್ದುಕೊಂಡು ಅದನ್ನು ಬಹಳ ಜಾಣತನದಿಂದ ನಿಭಾಯಿಸುವ ಮತ್ತು ಮೇಲೆ ಹೇಳಿದ ಅಜೆಂಡಾವನ್ನು ಪ್ರತಿಷ್ಠಾಪಿಸುವ ಕೆಲಸವನ್ನು ಮಾಡುತ್ತಲೇ ಆಳದಲ್ಲಿ ಮುಸ್ಲಿಮ್ ವಿರೋಧಿ ಮತ್ತು ಕ್ರೈಸ್ತ ವಿರೋಧಿ ತಾತ್ವಿಕತೆಯನ್ನು ಒಳಗೊಂಡಿದೆ.

ವಸುಧೇಂದ್ರರು ಈ ಕಾದಂಬರಿ ಬರೆಯುವುದಕ್ಕೆ ಮಾಡಿದ ಸಂಶೋಧನೆ ಮತ್ತು ಅಧ್ಯಯನದ ಬಗೆಗೆ ಅವರ ಇಂಟರ್ ವ್ಯೆಗಳಲ್ಲಿ ಹೇಳಿಕೊಂಡಿದ್ದಾರೆ. ನಾನು ವಿಜಯನಗರ ಸಾಮ್ರಾಜ್ಯದ, ಪೋರ್ಚುಗೀಸ್ ಸಾಮ್ರಾಜ್ಯದ, ಆದಿಲ್ ಶಾಹಿಗಳ ಆಡಳಿತದ ಸಾಮಾನ್ಯರ ಬದುಕನ್ನು ತಿಳಿಸಲೆಂದೇ ಕಾದಂಬರಿ ಬರೆದದ್ದು ಎಂದು. ಲೇಖಕನೊಬ್ಬ ಹೀಗೆ ಪೂರ್ವಯೋಜಿತ, ಸಿದ್ಧವಸ್ತುವನ್ನು ಬಳಸುವುದು, ಸಮಕಾಲೀನ ರಾಜಕೀಯ ಆಶಯವನ್ನು ಈಡೇರಿಸುವ ತಂತ್ರವಾಗಿ ನನಗೆ ಈ ತೇಜೋ-ತುಂಗಭದ್ರಾ ಕಾದಂಬರಿ ಕಾಣುತ್ತದೆಯೇ ಹೊರತು ಸೃಜನಶೀಲ ಕಲಾಕೃತಿಯಾಗಿ ಕಾಣುವುದಿಲ್ಲ.

ಇದೇ ಕೆಲಸವನ್ನು ಈ ಹಿಂದೆ ಗಳಗನಾಥರು ಮಾಧವ ಕರುಣಾ ವಿಲಾಸ ಎಂಬ ವಿಜಯನಗರ ಅರಸರ ಕತೆಯನ್ನು ಹೇಳುವ ಕಾದಂಬರಿ ಮೂಲಕ ಮಾಡಿದ್ದರು.ಆನಂತರ ಎಸ್. ಎಲ್. ಭೈರಪ್ಪನವರು ‘ಆವರಣ’ ಮೂಲಕ ಮಾಡಿರುವುದು ಚಾರಿತ್ರಿಕವಾಗಿ ಆಕಸ್ಮಿಕವೇನಲ್ಲ ಅನ್ನಿಸುತ್ತೆ.

ಏಕೆಂದರೆ ತೇಜೋ-ತುಂಗಭದ್ರಾ ಕಾದಂಬರಿಕಾರರ ಘೋಷಿತ ತಾತ್ವಿಕತೆಗೂ,ಅವರ ಕಾದಂಬರಿಯ ಕಥನ ನಿರ್ವಹಿಸುವ, ಕಟ್ಟಿಕೊಡುವ ಸತ್ಯಗಳಿಗೂ ಅಂತರ ಇರುವುದು.

ಮೇಲಿನ ಮಾತುಗಳಿಗೆ ಕಾದಂಬರಿಯಿಂದಲೇ ನಿದರ್ಶನ ಕೊಡುವುದಾದರೆ...

1) ಪೋರ್ಚುಗೀಸರ ಮತಾಂತರ ಪ್ರಕ್ರಿಯೆ ಹಾಗೂ ಆದಿಲ್ ಶಾಹಿಗಳ ಮತಾಂತರ ಪ್ರಕ್ರಿಯೆಯನ್ನು ಓದುಗನ ಕಣ್ಣಿಗೆ ಕಟ್ಟಿ, ಮನಸ್ಸಿನ ಆಳದಲ್ಲಿ ಉಳಿಯುವ ಹಾಗೆ ವರ್ಣಿಸುವ ಲೇಖಕರು ಕೃಷ್ಣದೇವರಾಯನು ಮಾಡುತ್ತಿದ್ದ ‘ವೈಷ್ಣವೀಕರಣ’ ದ ಬಗೆಗೆ ಅದ್ಯಾಕೋ ಬಹಳ ನಿರಾಸಕ್ತಿ ವಹಿಸುತ್ತಾರೆ ಮತ್ತು ಕೃಷ್ಣದೇವರಾಯನನ್ನು ಧರ್ಮ ಸಹಿಷ್ಣುವಾಗಿ ಚಿತ್ರಿಸುತ್ತಾರೆ.

ಮಧ್ಯಕಾಲೀನ ಕರ್ನಾಟಕ ಅಥವಾ ದಖನ್ ಪ್ರದೇಶ ಬಹಳ ಹಿಂದಿನಿಂದಲೂ ಧಾರ್ಮಿಕ ಸಹಿಷ್ಣುತೆಗೆ ಹೆಸರಾಗಿದದ್ದು. ಆದರೆ ಇಲ್ಲಿ ಲೇಖಕರು ಆದಿಲ್ ಶಾಹಿಗಳ ಮತಾಂತರ ಪ್ರಕ್ರಿಯೆ ಕ್ರೌರ್ಯವನ್ನು ವಿವರಿಸುತ್ತಾ ವಿಜಯನಗರ ಬಿಟ್ಟರೆ ಉಳಿದ ಪ್ರದೇಶ ಅಷ್ಟು ಸುರಕ್ಷಿತವಲ್ಲ ಎಂಬಂತೆ ಹೇಳುತ್ತಾರೆ.

ಮುಸ್ಲಿಮರಿಗೂ, ಕ್ರಿಶ್ಚಿಯನ್ನರಿಗೂ ವಿಜಯನಗರ ಸಾಮ್ರಾಜ್ಯ ಮಾತ್ರ ಸುರಕ್ಷಿತ ಉಳಿದವು ಅಲ್ಲ ಎನ್ನುತ್ತಾರೆ. ಇದು ಕೊಂಚ ಚರಿತ್ರೆಯ ಅಪಗ್ರಹಿಕೆ ಅನ್ನಿಸುತ್ತೆ.

2) ವಿಜಯನಗರ ಸಾಮ್ರಾಜ್ಯದ ಬಗ್ಗೆ ವಿದೇಶಿ ಬರಹಗಾರರು ಹೇಳಿದ್ದ ಬೀದಿ ಬೀದಿಗಳಲ್ಲಿ ಮುತ್ತು ರತ್ನವನ್ನು ಮಾರುತ್ತಿದ್ದರು. ಈ ಸಾಮ್ರಾಜ್ಯ ಅತ್ಯಂತ ಸಂಪತ್ಭರಿತ ರಾಜ್ಯವಾಗಿತ್ತು, ಯಾವುದೇ ಸಮಸ್ಯೆಗಳು ಇಲ್ಲಿ ಇರಲಿಲ್ಲ ಎಂಬ ಉತ್ಪ್ರೇಕ್ಷೆಯ ಮಾತುಗಳನ್ನು ಲೇಖಕರು ನಿಜವೆಂದು ಪೂರ್ಣವಾಗಿ ನಂಬಿ ಅದನ್ನು ಕಾದಂಬರಿಯಲ್ಲಿ ಅವಕಾಶ ಸಿಕ್ಕ ಕಡೆಯಲ್ಲೆಲ್ಲಾ ಪಾತ್ರಗಳ ಮೂಲಕ ಹೇಳಿಸುತ್ತಾ ಓದುಗರನ್ನು ನಂಬಿಸುವ ಕೆಲಸ ಮಾಡಿರುವುದು.

ಬಹುಶಃ ಲೇಖಕರು ಕಾದಂಬರಿಯನ್ನು ಬರೆಯುವ ಪೂರ್ವದಲ್ಲಿ ಮೈಸೂರು ಗೆಜೆಟಿಯರ್ ಸಿ. ಹಯವದನರಾವ್ ಅವರ ಸಂಪಾದನೆಯ ಕೃತಿಯನ್ನು ನೋಡಿಲ್ಲವೆನಿಸುತ್ತದೆ.ಅದರಲ್ಲಿ ವಿಜಯನಗರ ಅರಸ ಕೃಷ್ಣದೇವರಾಯನ ಆಡಳಿತದಲ್ಲಿ ಯುದ್ಧದಿಂದ ಬೇಸರಗೊಂಡಿದ್ದ ಆಯಗಾರರು ತೆರಿಗೆ ಹಣವನ್ನು ಕಟ್ಟಲಾಗದೆ ವಿಜಯನಗರ ತೊರೆದು ಗುಳೆ ಹೋಗುವ ವಿವರಗಳಿವೆ.

3) ಕಾದಂಬರಿಯ ಬಹುಮುಖ್ಯ ಪಾತ್ರವಾದ ಗೇಬ್ರಿಯಲ್ (ಬೆಲ್ಲಾಳ ಪ್ರಿಯಕರ)ಮುಂದೆ ಆದಿಲ್ ಶಾಹಿಗಳ ಕೈಗೆ ಸಿಕ್ಕಿ ಮತಾಂತರಗೊಂಡು ಅಹ್ಮದ್ ಖಾನ್ ಆಗಿ ಮೂಗು - ಕಿವಿ ಕಳೆದುಕೊಂಡು, ತೆಂಬಕಪುರದ ಜನಗಳ ಬಾಯಲ್ಲಿ ಅಮ್ಮದಕಣ್ಣನಾಗಿ ಇದ್ದವನು, ಅಕಸ್ಮಾತ್ ಕಾದಂಬರಿಯ ಮತ್ತೊಂದು ಮುಖ್ಯ ಪಾತ್ರ ಹಂಪವ್ವಳ ಪರಿಚಯವಾಗಿ, ಮುಂದೆ ಆ ಪರಿಚಯ ಆತ್ಮೀಯವಾಗಿ ಕಡೆಗೆ ಇತ್ತ ಅಮ್ಮದಕಣ್ಣ ತನ್ನ ಪ್ರೇಯಸಿ ಬೆಲ್ಲಾಳಿಂದ ದೂರವಾಗಿ, ಅತ್ತ ಹಂಪವ್ವಳೂ ತನ್ನ ಗಂಡ ಕೇಶವನನ್ನು ಕಳೆದುಕೊಂಡು, ತನ್ನ ಜೀವ ಉಳಿಸಿಕೊಳ್ಳಲು ಸತಿ ಚಿತೆಯಿಂದ ತಪ್ಪಿಸಿಕೊಂಡು ಬಂದಾಗ ತನ್ನ ಜೀವ ಕಾಪಾಡಿದ ಅಮ್ಮದಕಣ್ಣನ ಬಗ್ಗೆ ಪ್ರೇಮ ಮೂಡಿ ಕಡೆಗೆ ತನ್ನನ್ನು ತಾನು ಆತನಿಗೆ ಅರ್ಪಿಸಿಕೊಳ್ಳಲೂ ಒಂದು ಹೆಣ್ಣಾಗಿ ಮುಂದೆ ಬಂದರೂ, ಗಂಡಾಗಿ ಏಕಾಂತ ಸಿಕ್ಕರೂ ಅಮ್ಮದಕಣ್ಣ ಅವಳಿಂದ ದೂರವಾಗಿಯೇ ಉಳಿಯುತ್ತಾನೆ. ಕಡೆಗೆ ತನ್ನನ್ನು ಬಿಟ್ಟು ಹೋಗಬೇಡ ಎಂದು ಹಂಪವ್ವ ಬೇಡಿಕೊಂಡರೂ ಆ ಸಂಬಂಧಕ್ಕೆ ಅಮ್ಮದಕಣ್ಣ ಸಿದ್ಧನಿರಲಿಲ್ಲ ಎಂದೇ ಲೇಖಕರು ಹೇಳುತ್ತಾರೆ. ಕಡೆಗೂ ಈ ಎರಡೂ ಜೀವಗಳು ಒಂದಾದವೊ ಇಲ್ಲವೊ ಎಂಬುದನ್ನು ಹೇಳುವುದೇ ಇಲ್ಲ.

ಅಂದರೆ ಲೇಖಕರಿಗೆ ಈ ಎರಡು ಭಿನ್ನ ಧರ್ಮೀಯರನ್ನು ಒಂದು ಮಾಡಬೇಕೆನ್ನುವ ಧೋರಣೆ ಯಾಕೊ ಮನಸ್ಸಿಗೆ ಒಪ್ಪಿತವಾಗಿಲ್ಲ. ಆಳದಲ್ಲಿ ಈ ಧರ್ಮಕೆಡಿಸಲು, (ಹಂಪಮ್ಮ ಒಪ್ಪಿದರೂ) ಲೇಖಕರ ಮನಸ್ಸು ಒಪ್ಪುವುದೇ ಇಲ್ಲ.

4) ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ವಿಮರ್ಶಕ ನಟರಾಜ್ ಹುಳಿಯಾರರು ಸಾಹಿತ್ಯ ಸಾಮಾನ್ಯರ ಸಖ ಆಗಿದೆಯೇ? ಎಂಬ ಲೇಖನದಲ್ಲಿ ಸಾಹಿತ್ಯ ಜನರ ಸಂಗಾತಿಯಾಗುವುದೆಂದರೆ ಜನರಿಗೆ ರೈಲು ಹತ್ತಿಸುವುದಲ್ಲ. ಕತೆಯಲ್ಲೊ, ಕಾದಂಬರಿಯಲ್ಲೊ ಕೃತಕವಾದ ಕೊನೆಯನ್ನು ಸೃಷ್ಟಿಸಿ ಸಾಮಾನ್ಯ ಗೆಲ್ಲುವಂತೆ ಮಾಡಿ ಹುಸಿ ಸಮಾಧಾನ ಪಡೆಯುವುದಾಗಲಿ, ನೀಡುವುದಾಗಲಿ ಅಲ್ಲ. ಇಂಥ ದುರ್ಬಲ ಬರವಣಿಗೆ ಕಾಲದ ಓಟದಲ್ಲಿ ನಿಲ್ಲುವುದಿಲ್ಲ ಎಂಬುದಕ್ಕೆ ನಮ್ಮ ಕಣ್ಣೆದುರೇ ಬಿಟ್ಟು ಹೋದ ನೂರಾರು ಪುಸ್ತಕಗಳಿವೆ ಎಂಬ ಮಾತುಗಳು ಈ ಕಾದಂಬರಿಯ ಅಂತ್ಯದ ಬಗ್ಗೆಯೇ ಹೇಳಿರುವ ಮಾತುಗಳೆಂದು ನನಗೆ ಅನ್ನಿಸಿವೆ.

5) ಈ ಕಾದಂಬರಿಯಲ್ಲಿ ಬರುವ ಮಾಪಳ ಮತ್ತು ತೆಂಬಕ್ಕಳ ಮಗಳಾದ ಈಶ್ವರಿ ಎನ್ನುವ ಎಂಟು/ ಹತ್ತು ವರ್ಷದ ಮಗುವಿಗೆ ಹಿಂಸೆಯನ್ನು ತೋರಿಸುವ (ಎರಡು-ಮೂರು ದೃಶ್ಯಗಳಿವೆ) ಮತ್ತು ಕಡೆಗೆ ಹಿಂಸೆ ಮತ್ತು ಕ್ರೌರ್ಯವನ್ನು ಆ ಮಗು ಒಂದು ರೀತಿಯಲ್ಲಿ ಎಂಜಾಯ್ ಮಾಡುವ ದೃಶ್ಯಗಳನ್ನು ಲೇಖಕರು ಕಟ್ಟಿಕೊಡುತ್ತಾರೆ.

(ತನ್ನ ತಂದೆಯನ್ನು ಕೊಂದಿದ್ದ, ಈಗ ತಂದೆಯ ಸ್ಥಾನದಲ್ಲಿದ್ದ ಕೇಶವ ಲೆಂಕನಾಗಿ ಆತ್ಮಾರ್ಪಣೆಗೊಂಡ ಸಂದರ್ಭದಲ್ಲಿ ಎಂಟು ವರ್ಷದ ಮಗು ಈಶ್ವರಿ ಅತ್ಯಂತ ಉತ್ಸಾಹದಿಂದ ಚಪ್ಪಾಳೆ ತಟ್ಟಿ ನಮ್ಮಪ್ಪನ್ನು ಕೊಂದಿದ್ದು ಈತನೇ ಎಂದು ಕೂಗಿದಳು)

ಇದು ನಿಜಕ್ಕೂ ಆಘಾತಕರವಾದದ್ದು. ಒಬ್ಬ ಸೃಜನಶೀಲ ಲೇಖಕ ಹಿಂಸೆ ಮತ್ತು ಕ್ರೌರ್ಯವನ್ನು ಆ ಎಳೆ ಮನಸ್ಸುಗಳಿಂದ ದೂರವಿರಿಸಬೇಕಲ್ಲವೇ? ಆದರೆ ಅದು ಇಲ್ಲಿ ಆಗಿಲ್ಲ. ಇದೇ ಲೇಖಕರು ಹಿಂದೊಮ್ಮೆ ಪತ್ರಿಕೆಯೊಂದರಲ್ಲಿ ಹಿಂಸೆಯನ್ನು ಮಕ್ಕಳ ಕಣ್ಣಿಂದ ದೂರವಿಡಬೇಕೆಂದು ಬರೆದಿದ್ದರು.

6) ಈ ಕಾದಂಬರಿಯಲ್ಲಿ ಶೈವ ಮತ್ತು ವೈಷ್ಣವರ ಧಾರ್ಮಿಕ ಸಂಘರ್ಷದಲ್ಲಿ ಪ್ರಭುತ್ವ ಪರವಾಗಿದ್ದ ವೈಷ್ಣವದ ಗೆಲುವನ್ನೇ ಎತ್ತಿ ಹಿಡಿಯಲು ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ. ಶೈವನಾದ ಮಾಪಳನಾಯಕ ವೈಷ್ಣವನಾದ ಕೇಶವನ ಮುಂದೆ ಸೋಲುವುದು, ಸಾಯುವುದು. ಇಂತಹ ಕೆಲ ಅಂಶಗಳನ್ನು ಈ ಕಾದಂಬರಿಯಲ್ಲಿ ಒಪ್ಪಿಕೊಳ್ಳಲುಸಾಧ್ಯವಿಲ್ಲ.

ಈ ಕಾದಂಬರಿಯಲ್ಲಿ ಲೇಖಕರು ಗೇಬ್ರಿಯಲ್ ಮತ್ತು ಬೆಲ್ಲಾಳ ಪ್ರೇಮದ ಏಕಾಂತದ ವಿವರಗಳನ್ನು ಕಟ್ಟಿಕೊಡುವ ದೃಶ್ಯಗಳು, ಕೇಶವ ಮತ್ತು ಹಂಪಮ್ಮಗಳ ನಡುವಿನ ಪ್ರೇಮ ಮತ್ತು ಅವರ ನಡುವಿನ ಸಂಭಾಷಣೆ. ಗೇಬ್ರಿಯಲ್ ಮತ್ತು ಅಗ್ವೇದಾಳ ನಡುವಿನ ಮಾತುಕತೆ, ಅವರ ನಡುವಿನ ಹಾಗೂ ಜಾಕೋಮ್‌ನ ನಡುವಿನ ಮಾನವೀಯ ಸಂಬಂಧ, ಹಣುಮ ಮತ್ತು ಅವನ ಮಡದಿಯ ಸಂಬಂಧದ ದುರಂತದ ಕತೆ. ಗುಣಸುಂದರಿ ಮತ್ತು ಚಂಪಕ್ಕಗಳ ಪಾತ್ರದ ಕಟ್ಟುವಿಕೆ, ಕ್ರೂರ ಸತಿ ಪದ್ಧತಿಯ ವಿವರಗಳು ಕಾದಂಬರಿ ಓದಿ ಮುಗಿಸಿದರೂ ನಮ್ಮನ್ನು ಬಿಡದೆ ಕಾಡುತ್ತವೆ. ಆ ಮಟ್ಟಿಗೆ ಕಾದಂಬರಿಯ ಪಾತ್ರ ಚಿತ್ರಣ ಮತ್ತು ಕಥನ ಕೌಶಲ ವಸುಧೇಂದ್ರರ ತೇಜೋ-ತುಂಗಭದ್ರಾ ಕಾದಂಬರಿಯ ಯಶಸ್ಸು ಎನ್ನಬಹುದು.

ಕಡೆಯದಾಗಿ ಗೆಳೆಯ ಜಯಶಂಕರ ಹಲಗೂರು ತನ್ನ ಪಿ.ಎಚ್.ಡಿ. ಪ್ರಬಂಧ ಕನ್ನಡ ಕಥನ ಸಾಹಿತ್ಯದಲ್ಲಿ ಕೋಮುವಾದದ ಪ್ರತಿನಿಧೀಕರಣದಲ್ಲಿ ಲೇಖಕನಾದವವನ ಬಗ್ಗೆ ಉಲ್ಲೇಖಿಸಿರುವ ಈ ಮಾತುಗಳು ಸಮಕಾಲೀನ ವರ್ತಮಾನವು ಭವಿಷ್ಯತ್ ಕಾಲದಲ್ಲಿ ಬಾಳುವವರಿಗೆ ಚರಿತ್ರೆಯೇ ಆಗಿ ಹಿಂದೆ ನಿಲ್ಲುವುದರಿಂದ ತಮ್ಮ ಕಾಲವನ್ನು ತಾವು ಪೂರ್ಣದೃಷ್ಟಿಯಲ್ಲಿ ಗ್ರಹಿಸುವ ಚಾರಿತ್ರಿಕ ಜವಾಬ್ದಾರಿ ಇರುತ್ತದೆ ಎಂಬುದನ್ನು ಬರಹಗಾರರು ಮರೆಯಬಾರದು. ಸಮಕಾಲೀನ ರಾಜಕೀಯ ಧೋರಣೆಗಳು ಸಂವೇದನಾಶೀಲ ಬರಹಗಾರರನ್ನು ಮರುಳುಗೊಳಿಸಿ ಸೆಳೆದುಕೊಳ್ಳುತ್ತವೆ. ಇದರಿಂದ ಪಾರಾಗಿ ಪೂರ್ಣದೃಷ್ಟಿಯಲ್ಲಿ ಲೋಕಾನುಭವವನ್ನು ಗ್ರಹಿಸುವ ಕಾಣ್ಕೆಯನ್ನು ಲೇಖಕ ದಕ್ಕಿಸಿಕೊಂಡು ಆ ಮೂಲಕ ಓದುಗರನ್ನು ಎತ್ತರಕ್ಕೆ ಕೊಂಡೊಯ್ಯಬೇಕು

ತೇಜೋ- ತುಂಗಭದ್ರಾ ಕಾದಂಬರಿಯ ಬಗೆಗೆ ಬರೆದ ಹಾಗೆ ನನಗೆ ಕಾಣಿಸಿದವು.ಏಕೆಂದರೆ ಆ ಪೂರ್ಣದೃಷ್ಟಿ ಈ ಕಾದಂಬರಿಯಲ್ಲಿ ಇಲ್ಲ.

ಇಡೀ ಕಾದಂಬರಿಯು ಒಬ್ಬ ಗಂಭೀರ ಅಧ್ಯಯನ ಶೀಲ ಸಂಶೋಧಕ ಚರಿತ್ರೆಯನ್ನು ಅದರ ಎಲ್ಲ ವಿವರಗಳನ್ನು ಹೊಂದಿಸಿಕೊಂಡು, ತನ್ನ ಕಥನ ಕಟ್ಟುವ ಜಾಣ್ಮೆಯ ಕಲೆಗಾರಿಕೆಯಿಂದ ಕಥೆ ಕಟ್ಟಿ ಓದುಗನ ಮುಂದೆ ಇಟ್ಟಂತೆ ಇದೆಯೇ ಹೊರತು, ಅದು ಸೃಜನಶೀಲ ಲೇಖಕನೊಬ್ಬನ ಆಳಕ್ಕೆ ಇಳಿದು, ಅದು ಅವನ ಅನುಭವವಾಗಿ ಬಿಚ್ಚಿಕೊಂಡಿಲ್ಲ ಅನ್ನಿಸಿತು.

Writer - ರೇಣುಕಾರಾಧ್ಯ ಎಚ್.ಎಸ್.

contributor

Editor - ರೇಣುಕಾರಾಧ್ಯ ಎಚ್.ಎಸ್.

contributor

Similar News