ಮಾನವರು ಶೀತರಕ್ತ ಜೀವಿಗಳಾಗಿದ್ದರೆ ಏನಾಗುತ್ತಿತ್ತು!

Update: 2020-02-08 13:42 GMT

ನಾವು ವಾಸಿಸುವ ಭೂಮಿ ಒಂದು ವಿಶಿಷ್ಟವಾದ ಗ್ರಹ. ಒಂದೆಡೆ ಅತಿ ಶೀತ ಇನ್ನೊಂದೆಡೆ ಅತಿ ಉಷ್ಣ ಮತ್ತೊಂದೆಡೆ ಸಮಶೀತೋಷ್ಣ. ಮಾನವರಾದ ನಾವು ಈ ಮೂರೂ ಪ್ರದೇಶಗಳಲ್ಲಿ ವಾಸಿಸುತ್ತೇವೆ. ಆದರೆ ಕೆಲವು ಜೀವಿಗಳು ತಾವು ವಾಸಿಸುವ ವಾತಾವರಣಕ್ಕೆ ಮಾತ್ರ ಹೊಂದಿಕೊಂಡಿರುತ್ತವೆ. ಬೇರೆ ವಾತಾವರಣದಲ್ಲಿ ಅವು ಬದುಕಲಾರವು. ಪ್ರತಿ ಪ್ರಾಣಿಯ ಆಂತರಿಕ ದೇಹದ ಉಷ್ಣತೆ ಬೇರೆ ಬೇರೆಯಾಗಿರುತ್ತದೆ. ದೇಹದ ಆಂತರಿಕ ಉಷ್ಣತೆಯನ್ನು ರಕ್ತವು ನಿರ್ಧರಿಸುತ್ತದೆ. ದೇಹದಲ್ಲಿ ಹರಿಯುವ ರಕ್ತದ ಆಧಾರದ ಮೇಲೆ ಪ್ರಾಣಿಗಳನ್ನು ಉಷ್ಣರಕ್ತ ಪ್ರಾಣಿ (ಎಂಡೋಥೆರ್ಮಿಕ್ ಹೋಮಿಯೋಥರ್ಮ್ಸ್) ಅಥವಾ ಶೀತರಕ್ತ ಪ್ರಾಣಿ (ಎಕ್ಟೋಥೆರ್ಮಿಕ್ ಪೋಕಿಲೋಥೆರ್ಮ್ಸ್)ಎಂದು ವಿಂಗಡಿಸುತ್ತೇವೆ. ಮಾನವರಾದ ನಾವು ಉಷ್ಣರಕ್ತ ಪ್ರಾಣಿಗಳಾಗಿದ್ದು, ಎಲ್ಲಾ ಪ್ರದೇಶಗಳಲ್ಲಿ ವಾಸಿಸಬಹುದಾಗಿದೆ. ಒಂದು ವೇಳೆ ರಾತ್ರಿ ಕಳೆದು ಬೆಳಕು ಮೂಡುವ ವೇಳೆಗೆ ನಮ್ಮ ರಕ್ತವು ಶೀತರಕ್ತವಾದರೆ ಏನಾಗುತ್ತದೆ? ಎಂಬ ಪ್ರಶ್ನೆ ಮೂಡುವುದು ಸಹಜ. ನಾವು ಶೀತರಕ್ತ ಜೀವಿಗಳಾಗಿದ್ದರೆ ತುಂಬಾ ಸ್ವಾರಸ್ಯಕರ ಸಂಗತಿಗಳನ್ನು ಅನುಭವಿಸಬೇಕಾಗುತ್ತಿತ್ತು. ನಾವು ಶೀತರಕ್ತ ಜೀವಿಗಳಾಗಿದ್ದರೆ ನಮ್ಮ ದಿನಸಿ (ಕಿರಾಣಿ) ಅಂಗಡಿಯ ಬಿಲ್ ಕಡಿಮೆಯಾಗುತ್ತಿತ್ತು. ಏಕೆಂದರೆ ನಮ್ಮ ಆಹಾರ ಸೇವನೆಯ ಪ್ರಮಾಣ ಕಡಿಮೆಯಾಗುತ್ತಿತ್ತು. ಸರೀಸೃಪಗಳ ರಾಜ ಎಂದು ಕರೆಯಲ್ಪಡುವ ಮೊಸಳೆ ಅತೀದೊಡ್ಡ ಶೀತರಕ್ತ ಪ್ರಾಣಿ. ಮೊಸಳೆ ಏನನ್ನೂ ತಿನ್ನದೇ ಒಂದು ವರ್ಷದವರೆಗೆ ಜೀವಿಸಬಲ್ಲದು. ಆದರೂ ಅದನ್ನು ನಿರ್ದಯಿ ಕೊಲೆಗಾರ ಎಂದು ಬಿಂಬಿಸಲಾಗಿದೆ. ಮೊಸಳೆ ಒಮ್ಮೆ ಆಹಾರ ಸೇವಿಸಿದರೆ ಒಂದು ವಾರದವರೆಗೂ ಇನ್ನೊಂದು ಆಹಾರ ಸೇವಿಸುವುದಿಲ್ಲ. ಆದರೆ ನಾವು ಈಗ ದಿನಕ್ಕೆ ಮೂರುಬಾರಿ ಊಟ ಮಾಡುತ್ತೇವೆ. ನಾವೇನಾದರೂ ಶೀತರಕ್ತ ಪ್ರಾಣಿಗಳಾಗಿದ್ದರೆ ಈಗಿನ ಆಹಾರ ಪ್ರಮಾಣ ಕಡಿಮೆಯಾಗುತ್ತಿತ್ತು. ಆಗ ಜಗತ್ತಿನ ಎಲ್ಲರಿಗೂ ಆಹಾರ ದೊರೆಯುತ್ತಿತ್ತು. ಯಾರೂ ಹಸಿವಿನಿಂದ ಬಳಲುತ್ತಿರಲಿಲ್ಲ. ನಾವು ಶೀತರಕ್ತ ಜೀವಿಗಳಾಗಿದ್ದರೆ ಶೀತಪ್ರದೇಶಗಳಲ್ಲಿ ನಮ್ಮ ಜೀವನ ಕಷ್ಟವಾಗುತ್ತಿತ್ತು. ನಾವು ಈಗ ಉಷ್ಣ ರಕ್ತಜೀವಿಗಳಾಗಿದ್ದರಿಂದ ವಾತಾವರಣಕ್ಕನುಗುಣವಾದ ಉಡುಪು ಧರಿಸುವ ಮೂಲಕ ಯಾವುದೇ ಪ್ರದೇಶದಲ್ಲಿಯಾದರೂ ಬದುಕಬಹುದು. ಉಷ್ಣ ರಕ್ತಜೀವಿಗಳು ಶೀತ ವಾತಾವರಣದಲ್ಲೂ ಸಹ ದೇಹದ ಉಷ್ಣತೆಯನ್ನು 370 ಸೆಲ್ಸಿಯಸ್‌ನಷ್ಟು ಕಾಪಾಡಿಕೊಳ್ಳುತ್ತವೆ. ಆದರೆ ಶೀತರಕ್ತ ಜೀವಿಗಳು ತಾವು ವಾಸಿಸುವ ಪರಿಸರದ ಉಷ್ಣತೆಗಿಂತ ಹೆಚ್ಚಿನ ಉಷ್ಣತೆ ಕಾಯ್ದುಕೊಳ್ಳಲಾರವು. ನಾವು ಶೀತರಕ್ತ ಜೀವಿಗಳಾದರೆ ಅಂಟಾರ್ಟಿಕಾದಂತಹ ಶೀತ ಪ್ರದೇಶದಲ್ಲಿ ನಮ್ಮ ಜೀವನ ಕಷ್ಟವಾಗುತ್ತದೆ. ಶೀತರಕ್ತ ಜೀವಿಗಳಾಗಿದ್ದರೆ ಧ್ರುವ ಪ್ರದೇಶಗಳಲ್ಲಿ ವಾಸಿಸಲಾಗುತ್ತಿರಲಿಲ್ಲ. ಕೇವಲ ಸಮಭಾಜಕ ಪ್ರದೇಶಗಳಲ್ಲಿ ಮಾತ್ರ ಓಡಾಡುತ್ತಾ ಇರಬೇಕಾಗುತ್ತದೆ.

ಬಹುಮುಖ್ಯವಾದ ಇನ್ನೊಂದು ವಿಷಯವೇನೆಂದರೆ, ನಾವು ಪ್ರತಿನಿತ್ಯ ಆಹಾರದ ಮೂಲಕ ಶೇ.20 ರಷ್ಟು ಕ್ಯಾಲೋರಿ ಶಕ್ತಿಯನ್ನು ಪಡೆಯುತ್ತೇವೆ. ಮಾನವನ ಮೆದುಳು ದೇಹದ ಶಕ್ತಿಯ ಶೇ. 20 ರಷ್ಟು ಕ್ಯಾಲೋರಿ ಶಕ್ತಿಯನ್ನು ಬಳಸುತ್ತದೆ. ನಮ್ಮ ಈಗಿನ ದೈನಂದಿನ ಆಹಾರದಲ್ಲಿ ಕ್ಯಾಲೋರಿ ಸೇವನೆ ಪ್ರಮಾಣಕ್ಕೆ ಸಮವಾಗುತ್ತದೆ. ಒಂದು ವೇಳೆ ನಾವು ಶೀತರಕ್ತ ಪ್ರಾಣಿಗಳಾಗಿದ್ದು, ವಾರಕ್ಕೆ ಒಂದು ಅಥವಾ ಎರಡು ಬಾರಿ ಆಹಾರ ಸೇವಿಸುವಂತಿದ್ದರೆ, ನಮ್ಮ ಮೆದುಳಿಗೆ ಶೇ.20 ಕ್ಯಾಲೋರಿ ಶಕ್ತಿಯನ್ನು ಸರಬರಾಜು ಮಾಡಲು ಆಗುತ್ತಿರಲಿಲ್ಲ. ಮಾನವನ ಮೆದುಳಿಗೆ ನಿಗದಿತ ಪ್ರಮಾಣದ ಶಕ್ತಿಯು ಸರಬರಾಜಾದರೆ ಮಾತ್ರ ಅವನ ಬುದ್ಧಿ ಚುರುಕಾಗಿರಲು ಸಾಧ್ಯ. ಕಡಿಮೆ ಪ್ರಮಾಣದ ಕ್ಯಾಲೋರಿ ಮೆದುಳಿಗೆ ಸರಬರಾಜಾಗಿದ್ದರೆ ಇಷ್ಟೊಂದು ವಿಕಾಸ ಹೊಂದಲು ಸಾಧ್ಯವಿರಲಿಲ್ಲ ಹಾಗೂ ಖಂಡಿತವಾಗಿಯೂ ಸಾಮಾಜಿಕ ಜೀವಿಯಾಗಲು ಸಾಧ್ಯವಿರಲಿಲ್ಲ ಎಂಬುದನ್ನು ಗಮನಿಸಬೇಕು. ಅಲ್ಲದೇ ಕಡಿಮೆ ಬುದ್ಧಿಶಕ್ತಿ ಇದ್ದಿದ್ದರೆ, ಕೃಷಿ, ಕಟ್ಟಡಗಳು, ಸೇತುವೆಗಳು ಹಾಗೂ ಇನ್ನಿತರ ನಿರ್ಮಾಣಗಳಂತಹ ಆವಿಷ್ಕಾರಗಳನ್ನು ಮಾಡಲು ಸಾಧ್ಯವಿರಲಿಲ್ಲ. ನಾವು ಶೀತರಕ್ತ ಜೀವಿಗಳಾಗಿದ್ದರೆ ಪದೇ ಪದೇ ವೈದ್ಯರಲ್ಲಿಗೆ ಹೋಗುವ ಕಾಟ ತಪ್ಪುತ್ತಿತ್ತು. ಉಷ್ಣರಕ್ತ ಜೀವಿಗಳಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳಂತಹ ಸೂಕ್ಷ್ಮಜೀವಿಗಳು ಸುಲಭವಾಗಿ ಆಶ್ರಯ ಪಡೆಯುತ್ತವೆ. ಆದರೆ ಶೀತರಕ್ತ ಜೀವಿಗಳ ದೇಹದಲ್ಲಿ ಅವುಗಳು ಬದುಕಲಾರವು. ನಾವು ಶೀತರಕ್ತ ಪ್ರಾಣಿಗಳಾಗಿದ್ದರೆ, ಹೆಚ್ಚು ಆಹಾರ ಸೇವಿಸುತ್ತಿರಲಿಲ್ಲ. ಹಾಗಾಗಿ ಹಸಿವಿನಿಂದ ಯಾರೂ ಬಳಲುತ್ತಿರಲಿಲ್ಲ. ಆಗ ಬಹುತೇಕ ಮಾನವರೆಲ್ಲರೂ ಸೋಮಾರಿಗಳಾಗಿ ಕಾಲ ಕಳೆಯುತ್ತಿದ್ದರು. ಕನಿಷ್ಠ ಮೂಲಭೂತ ಅವಶ್ಯಕತೆಗಳನ್ನೂ ಸಹ ಪೂರೈಸಿಕೊಳ್ಳಲು ಯಾರೂ ಶ್ರಮಪಡುತ್ತಿರಲಿಲ್ಲ. ಯಾರೂ ಆಸ್ತಿ ಹಾಗೂ ಸಂಪತ್ತು ಗಳಿಕೆಗಾಗಿ ಹೋರಾಡುತ್ತಲೇ ಇರುತ್ತಿರಲಿಲ್ಲ. ಅಲ್ಲವೇ?

Writer - ಆರ್.ಬಿ. ಗುರುಬಸವರಾಜ

contributor

Editor - ಆರ್.ಬಿ. ಗುರುಬಸವರಾಜ

contributor

Similar News