ನಮ್ಮೊಳಗಿನ ಬಿಡುಗಡೆಯ ಕೂಗು 'ಆಝಾದಿ'

Update: 2020-02-09 05:03 GMT

ಗಾಂಧೀಜಿಯನ್ನು ಕೊಂದ ತುಪಾಕಿ ಈಗಲೂ ಆ ಧರ್ಮಾಂಧರ ಕರಗಳಲ್ಲಿಯೇ ಭದ್ರವಾಗಿದೆ. ನಾವು ಮಗದೊಮ್ಮೆ ಎದೆಯೊಡ್ಡುವುದು ಮೂರ್ಖತನವಾಗುತ್ತದೆ.ಇದು ದೇಶ ‘‘ಆಝಾದಿ ಕಾಮಿಲ್’’ ‘‘ಪೂರ್ಣ ಸ್ವರಾಜ್ಯ’’ ಪಡೆಯಲು ಸೂಕ್ತ ಕಾಲ. ಕಾಲ ಮಿಂಚುವ ಮುನ್ನ ಎಚ್ಚೆತ್ತುಗೊಂಡು ಭಾರತೀಯತೆಯನ್ನು ಕಾಪಾಡುವ ಹಾದಿಯಲ್ಲಿ ಸದಾ ಆಝಾದಿ ಘೋಷಣೆಯು ಪ್ರತಿಧ್ವನಿಸುತ್ತಿರಲಿ. ‘‘ಹಮ್ ಲೇಕೆ ರಹೇಂಗೆ ಆಝಾದಿ’’ ಕೂಗು ಚಿರಾಯುವಾಗಲಿ.

‘ಆಝಾದಿ’ ಘೋಷಣೆ ದೇಶದೆಲ್ಲೆಡೆ ಅನುರಣಿಸುತ್ತಿದೆ. ದಿಲ್ಲಿ, ಗಲ್ಲಿ, ಹಳ್ಳಿ ಎಂಬ ಎಲ್ಲೆಯನ್ನು ಮೀರಿ ಎಲ್ಲರಲ್ಲೂ, ಎಲ್ಲೆಲ್ಲಿಯೂ ‘ಆಝಾದಿ’ ಕೂಗು ಒಕ್ಕೊರಲಿನಿಂದ ಮೊಳಗುತ್ತಿದೆ. ಅಧಿಕಾರ ಶಾಶ್ವತವೆಂಬ ಭ್ರಮೆಯಲ್ಲಿ ಭವ್ಯ ಭಾರತದ ಅಸ್ಮಿತೆಗೆ ಧಕ್ಕೆ ತರಲು ಹೊರಟಿರುವವರ ಕುರ್ಚಿಗೆ ಆಝಾದಿ ಘೋಷಣೆಯ ಬಿಸಿ ಚೆನ್ನಾಗಿ ತಗುಲಿದೆ. ಪ್ರತಿಭಟನೆಗಳಲ್ಲಿ ಜಮಾಯಿಸುವ ಜನಸ್ತೋಮಗಳ ಅಂತರಾಳದಲ್ಲಿ ಒಂದು ವಿಶಿಷ್ಟವಾದ ಕಿಚ್ಚನ್ನು ಹೊತ್ತಿಸಿಬಿಡಬಲ್ಲ ಛಾತಿಯೊಂದಿಗೆ ಕ್ರಾಂತಿಯ ಹುರುಪನ್ನು ತುಂಬಬಲ್ಲ ಈ ಘೋಷಣೆಯು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುತ್ತಿದೆ. ಪುಟಾಣಿ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರು ಆಝಾದಿ ಕೂಗುವ ದೃಶ್ಯಗಳು ಎಲ್ಲೆಲ್ಲಿಯೂ ರಾರಾಜಿಸುತ್ತಿದ್ದರೆ, ಪ್ರತಿಭಟನೆಗಳು ಈ ಘೋಷಣೆಗಳಿಲ್ಲದೆ ಅಪೂರ್ಣವೆಂಬ ತೀರ್ಮಾನಕ್ಕೆ ಜನರು ತಲುಪಿಯಾಗಿದೆ. ಒಂದೆಡೆ ಆಝಾದಿ ಕೂಗುವವರು ದೇಶದ್ರೋಹಿಗಳೆಂಬ ಅಪಕ್ವ ವಾದವು ಸದ್ದುಮಾಡಲಾಗದೆ ನಿಷ್ಕ್ರಿಯಗೊಂಡರೆ ಮತ್ತೊಂದೆಡೆ ಜನಾಕ್ರೋಶದ ಇಂಧನವಾಗಿ, ಜನಮಾನಸದಲ್ಲಿ ಅಚ್ಚಾಗಿ, ಅಚ್ಚುಮೆಚ್ಚಿನ ಘೋಷಣೆಯಾಗಿ ‘ಆಝಾದಿ’ನೆಲೆನಿಂತಿದೆ. ‘‘ತುಮ್ ಕುಚ್ಬಿ ಕರ್ಲೋ ಆಝಾದಿ ಹಮ್ ನಹೀ ಚುಪೇಗೆ ಆಝಾದಿ’’ ಎನ್ನುವಾಗಲೆಲ್ಲಾ ಸೆಟೆದು ನಿಲ್ಲುವ ರೋಮಗಳು ಅಧಿಕಾರಿಸ್ಥಾಯಿಗಳ ಹುಟ್ಟಡಗಿಸುವ ಗಟ್ಟಿಯ ಧ್ವನಿಯಾಗಿ ಬದಲಾಗಿರುವುದಕ್ಕೆ ದೇಶದ ಬೀದಿಗಳು, ಶಾಲಾ ಕಾಲೇಜು ಕ್ಯಾಂಪಸ್‌ಗಳು, ಸಾಮಾಜಿಕ ಜಾಲತಾಣಗಳು, ಪ್ರತಿಭಟನಾ ಸಮಾರಂಭಗಳು ಜೀವಂತ ಸಾಕ್ಷಿಯಾಗಿ ನಿಂತಿವೆ. ಜನಮನ್ನಣೆಯನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಆಝಾದಿ ಘೋಷಣೆಯು ಹುಟ್ಟಿಕೊಂಡದ್ದು ಸದ್ಯದ ದೇಶದ ಪರಿಸ್ಥಿತಿಗೆ ಸಮಾನವೆನಿಸುವ ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಎಂಬುವುದು ಚೇತೋಹಾರಿ ಸಂಗತಿಗಳಲ್ಲೊಂದು.

ದೇಶದಲ್ಲಿ ಬ್ರಿಟಿಷರ ದಬ್ಬಾಳಿಕೆಯ ಕಬಂದ ಬಾಹುಗಳಿಂದ ಕಳಚಿಕೊಳ್ಳುವ ಉತ್ಸಾಹ ಚಿಗುರೊಡೆದು ಹೆಮ್ಮರವಾಗಿ ಬೆಳೆದಿದ್ದ ಕಾಲ. ಬ್ರಿಟಿಷರಿಂದ ‘ಆಝಾದಿ ಕಾಮಿಲ್’ ‘ಪೂರ್ಣ ಸ್ವಾತಂತ್ರ’ ಪಡೆಯಬೇಕೆಂಬ ಘೋಷಣೆಯನ್ನು ಮೊತ್ತಮೊದಲು 1921 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಹ್ಮದಾಬಾದ್ ಅಧಿವೇಶನದಲ್ಲಿ ಮೊಳಗಿಸಿದ್ದು ಮೌಲಾನಾ ಸೆಯ್ಯದ್ ಫಝಲುಲ್ ಹಸನ್ ಎಂಬ ಸ್ವಾತಂತ್ರ ಹೋರಾಟಗಾರ. ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಇದರ ನಾಯಕರಾಗಿದ್ದ ಇವರು ಪ್ರಸಿದ್ಧ ಉರ್ದು ಕವಿಗಳೂ ಆಗಿದ್ದರು. ‘ಹಝ್ರತ್ ಮೊಹನಿ’ ಎಂಬ ಕಾವ್ಯನಾಮದಿಂದ ಜನಪ್ರಿಯರಾಗಿದ್ದ ಮೌಲಾನರು ಉರ್ದು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು. ‘ಇಂಕ್ವಿಲಾಬ್ ಝಿಂದಾಬಾದ್’ ಎಂಬ ಸದಾಕಾಲವೂ ಕ್ರಾಂತಿಯನ್ನು ಚಿರಾಯುವಾಗಿಸುವ ಘೋಷಣೆಯನ್ನು ಕೊಡಮಾಡಿದ ಕೀರ್ತಿಗೆ ಪಾತ್ರರಾದವರು. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ತನ್ನ ಲೇಖನಿಯ ಮೂಲಕ ಗುಡುಗಿದ ಇವರು ಬಿಳಿಯರ ಷಡ್ಯಂತ್ರಗಳನ್ನು ಬಯಲಿಗೆಳೆಯುವ ಸಲುವಾಗಿಯೇ ಉರ್ದು-ಇ-ಮುಅಲ್ಲಾ ಎಂಬ ನಿಯತಕಾಲಿಕೆಯನ್ನು 1903ರಲ್ಲಿ ಅಲಿಗಡ ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕ ಸಮಸ್ಯೆ ಇದ್ದಾಗಿಯೂ ತನ್ನ ಅವಿರತ ಶ್ರಮದಿಂದ ಪ್ರಕಟಿಸುತ್ತಿದ್ದರು. ಭಾರತದಲ್ಲೇ ಉರ್ದು ಭಾಷೆಯಲ್ಲಿ ಪ್ರಕಟವಾದ ಅತ್ಯುತ್ತಮ ಸಾಹಿತ್ಯ ಮತ್ತು ರಾಜಕೀಯ ನಿಯತಕಾಲಿಕವಾಗಿತ್ತದು. ಬ್ರಿಟಿಷರ ಧೋರಣೆಯ ವಿರುದ್ಧ ಲೇಖನಿ ಚಲಾಯಿಸಿದ ಕಾರಣದಿಂದ ಜೈಲುವಾಸವನ್ನು ಅನುಭವಿಸುವ ಸನ್ನಿವೇಶ ಉಂಟಾಗಿಯೂ ಕಿಂಚಿತ್ತೂ ಕುಗ್ಗದೆ ಮುನ್ನುಗ್ಗಲು ಅವರ ಬದುಕು ತೋರಿದ ಧೈರ್ಯ, ದೃಢತೆ ಮತ್ತು ಅವರಲ್ಲಿದ್ದ ಬದ್ಧತೆ ಈ ಕಾಲದ ಯುವಕರಿಗೆ ಸರ್ವಾಧಿಕಾರಿ ಸರಕಾರದ ವಿರುದ್ಧ ಹೋರಾಡಲು ದಾರಿದೀಪವಾಗಿ ಇಂದಿಗೂ ಬೆಳಗುತ್ತಿದೆ. ಅವರ ಅಭಿಲಾಷೆಯಂತೆ ಆಝಾದಿ ಘೋಷಣೆಯನ್ನು ಜನಕೋಟಿಗಳು ತಮ್ಮ ಹೃದಯಂತರಾಳಕ್ಕೆ ಇಳಿಸಿಕೊಂಡು ಒಕ್ಕೊರಲಿನಿಂದ ಆಝಾದಿ ಘೋಷಿಸುತ್ತಿದ್ದರೆ ಆ ಗರ್ಜನೆಯ ಸದ್ದು ಗದ್ದುಗೆಯೇರಿದವರ ಬುಡವನ್ನು ಅಲುಗಾಡಿಸುತ್ತಿದೆ.

‘ಆಝಾದೀ ಕಾಮಿಲ್’ ‘ಪೂರ್ಣ ಸ್ವರಾಜ್ಯ’ವೆಂಬ ನಿರ್ಣಯವನ್ನು ಮಂಡಿಸಿದ ಮೌಲಾನರಿಗೆ ಪ್ರಥಮ ಹಂತದಲ್ಲಿ ಸ್ವತಃ ಗಾಂಧೀಜಿಯವರು ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸದಿದ್ದರೂ ಭಾರತ ಸ್ವಾತಂತ್ರ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದ ಯುವಕರ ಒತ್ತಾಯದ ಮೇರೆಗೆ ಒಪ್ಪಿಕೊಂಡರು.ತದನಂತರ ಆ ಘೋಷಣೆಯನ್ನು ಹಿಂದಿವತ್ಕರಿಸಿ ‘ಪೂರ್ಣ ಸ್ವರಾಜ್ಯ’ ಎಂದು ಬದಲಾಯಿಸಲಾಯಿತು. ಭಾರತದ ಮೇಲೆ ಬ್ರಿಟಿಷರ ಪ್ರಾಬಲ್ಯವನ್ನು ಬಹಿರಂಗವಾಗಿ ವಿರೋಧಿಸಿದ ಮೌಲಾನರು, ಬಾಬಾ ಸಾಹೇಬ್ ಅಂಬೇಡ್ಕರರ ಆತ್ಮೀಯ ಸ್ನೇಹಿತರಲ್ಲೊಬ್ಬರು.ಸಂವಿಧಾನ ಸಭೆಯಲ್ಲಿ ಭಾರತದ ಕಬ್ಬಿಣದ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲರನ್ನು ಪ್ರಶ್ನಿಸಿದ ಅವರ ಮಾತುಗಳು ಚರಿತ್ರೆಯ ಪುಟಗಳಲ್ಲಿ ಅಚ್ಚಳಿಯದೆ ದಾಖಲಾಗಿದೆ ಮತ್ತು ಅದು ಹೊಸ ಪೀಳಿಗೆಗೆ ದಮನಕಾರಿ ಆಡಳಿತದ ವಿರುದ್ಧ ಸಿಡಿಯುವ,ಪ್ರಶ್ನಿಸುವ,ಬುನಾದಿಯನ್ನು ಹಾಕಿಕೊಟ್ಟಿದೆ. ಮುಸ್ಲಿಮರು ಇಂದು ಅನಾಥರು ಎಂದು ನೀವು ಭಾವಿಸಬಾರದು.ಎಲ್ಲಾ ವಿವಾದಗಳ ವಿರುದ್ಧ ಮುಸ್ಲಿಮರು ಮತ್ತು ಶೋಷಿತ ವರ್ಗಗಳ ಹಕ್ಕುಗಳನ್ನು ಸಂರಕ್ಷಿಸಲು ನಾನು ಸದಾ ಸಿದ್ಧನಿರುತ್ತೇನೆ ಮತ್ತು ನನ್ನ ಕೊನೆಯುಸಿರಿನವರೆಗೂ ಅವರ ಪರವಾಗಿ ಹೋರಾಡುತ್ತೇನೆ. ಎಂದು ಗರ್ಜಿಸಿದ್ದರು ಹಝ್ರತ್ ಮೊಹನಿಯವರು.

ನಾನೊಬ್ಬ ಸೂಫಿ ಮುಅ’ಮಿನ್ ಮತ್ತು ಮುಸ್ಲಿಮ್ ಕಮ್ಯೂನಿಸ್ಟ್ ಎನ್ನುತ್ತಿದ್ದ ಮೌಲಾನರ ಹಣೆಯಲ್ಲಿದ್ದ ನಮಾಝಿನ ಕುರುಹು ಅವರೊಬ್ಬ ಕರ್ಮಠ ಮುಸ್ಲಿಮ್ ವಿಶ್ವಾಸಿ ಎಂಬುವುದನ್ನು ಸಾರಿ ಹೇಳುತ್ತಿತ್ತು. ಅಗ್ಗದ ಉಡುಪುಗಳನ್ನೂ ಟರ್ಕಿಯ ವಿಶಿಷ್ಟ ವಿನ್ಯಾಸದ ಟೋಪಿಯನ್ನೂ ಧರಿಸುತ್ತಿದ್ದ ಮೊಹಾನಿಯವರು ಒಮ್ಮೆಯೂ ಮೂರನೇ ದರ್ಜೆಯ ವಿಭಾಗದಲ್ಲಿ ಹೊರತು ಪ್ರಯಾಣಿಸುತ್ತಿರಲಿಲ್ಲ. ಗೆಳೆಯರು ಕೇಳಿದರೆ ನಾಲ್ಕನೇ ದರ್ಜೆ ಇಲ್ಲವಲ್ಲ ಎಂದು ಸರಳವಾಗಿ ಹೇಳುತ್ತಿದ್ದರಂತೆ. ಭಾರತದ ಸ್ವಾತಂತ್ರ ಚಳವಳಿಯ ಮುಂಚೂಣಿಯಲ್ಲಿದ್ದ ಇವರು 1922ರಲ್ಲಿ ಕಾಂಗ್ರೆಸ್ ಮತ್ತು ಖಿಲಾಫತ್ ಚಳುವಳಿಯ ಸಂಯೋಜಿತ ಪ್ರಯತ್ನಗಳಿಂದ ಪ್ರಾರಂಭಿಸಲಾದ ಅಸಹಕಾರ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಸ್ವರಾಜ್ ಕಲ್ಪನೆಯ ಹೃದಯವೆಂದೇ ಕರೆಯಲ್ಪಡುವ ಸ್ವದೇಶಿ ಚಳವಳಿಯ ಭಾಗವಾಗಿ ಭಾರತೀಯ ಉತ್ಪನ್ನಗಳು ಜನರಿಗೆಟುಕುವಂತೆ ಮಾಡುವ ಸಲುವಾಗಿ ಸ್ವದೇಶಿ ಸ್ಟೋರ್ ಎಂಬ ಸಣ್ಣ ಕಿರಾಣಿ ಅಂಗಡಿಯನ್ನು ಪ್ರಾರಂಭಿಸಿ ಅದರ ಜವಾಬ್ದಾರಿಯನ್ನು ತನ್ನ ಪತ್ನಿ ನಿಶಾ ಬೇಗಂ ಅವರಿಗೆ ವಹಿಸಿದ್ದರು. ಮೌಲಾನರು ಜೈಲುವಾಸವಿದ್ದ ಆ ದಿನಗಳಲ್ಲಿ ಅವರ ಕುಟುಂಬ ಆರ್ಥಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಮನಗಂಡು ಧನಸಹಾಯ ಮಾಡಬಂದವರಲ್ಲಿ ನಿಶಾ ಬೇಗಂ ಹೀಗೆ ಹೇಳಿದ್ದರಂತೆ ನೀವುಗಳು ನನ್ನ ಪತಿಯಲ್ಲಿ ಅಪಾರವಾದ ಗೌರವವುಳ್ಳವರಾದರೆ ಅವರ ಪುಸ್ತಕಗಳನ್ನು ಕೊಂಡು ಓದಿರಿ ಅವರಿಗೆ ನೀವು ತೋರುವ ಶ್ರೇಷ್ಠ ಗೌರವ ಅದಾಗಿರುತ್ತದೆ ಎಂದು ಕಟುವಾಗಿಯೇ ಸಹಾಯವನ್ನು ತಿರಸ್ಕರಿಸಿ ಸ್ವಾಭಿಮಾನವನ್ನು ಪಣಕ್ಕಿಡದೆ ಪತಿಷ್ಠೆಯಿಂದ ಬದುಕಿದ ಆದರ್ಶ ದಂಪತಿಗಳವರು.ಅವರ ಧ್ಯೇಯವಾಕ್ಯವಾಗಿದ್ದ ‘ಆಝಾದಿ ಕಾಮಿಲ್’ ಇಂದು ದೇಶದಲ್ಲಿ ಉಂಟುಮಾಡಿದ ಚಲನವಲನಗಳನ್ನು ಗಮನಿಸುವಾಗ ದೇಶದ ಹಿತಕ್ಕಾಗಿ ದುಡಿದು ಮಡಿದವರ ಶ್ರಮದ ಫಸಲು ಈ ಕಾಲಕ್ಕೂ ಬಾಕಿಯಾಗಿದೆಯೆಂಬ ಸಣ್ಣ ಸಂತೃಪ್ತಿ ಮೂಡುತ್ತದೆ.

ಅಂದು ಮೊಹನೀಯವರು ಹಚ್ಚಿದ ಆಝಾದಿಯ ಕಿಡಿಯನ್ನು ಮತ್ತೆ ಭಾರತೀಯ ಸ್ತ್ರೀಸಮಾನತಾವಾದಿ ಮತ್ತು ಕಾರ್ಯಕರ್ತೆ ಕಮಲಾ ಭಾಸಿನ್ ಎಂಬಾಕೆ 1991 ರಲ್ಲಿ ಕೋಲ್ಕತಾದ ಜಾದವ್ಪರ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಮಹಿಳಾ ಅಧ್ಯಯನ ಸಮ್ಮೇಳನದಲ್ಲಿ ಆಝಾದಿಯ ಹೊಸ ಆವೃತ್ತಿಯನ್ನು ಪ್ರಸ್ತುತಪಡಿಸಿದರು. ಆಝಾದಿಗೆ ಒಂದು ಕವನದ ಧಾಟಿಯನ್ನು ನೀಡುವ ಮೂಲಕ ಮೇರಿ ಬಹ್ನೆ ಮಾಂಗೇ ಆಝಾದಿ ಮಾದರಿಯಲ್ಲಿ

ಪಾಕಿಸ್ತಾನದ ಸ್ತ್ರೀವಾದಿ ಚಳುವಳಿಗಳಿಂದ ಪ್ರೇರಣೆಯನ್ನು ಪಡೆದು ಕಮಲಾ ಭಾಸಿನ್ ಈ ಸಾಲುಗಳನ್ನು ಉದ್ಘೋಷಿಸಿದರು.ಉಳಿದ ಸಾಲುಗಳನ್ನು ತನ್ನ ತುಡಿತದ ಸೆಳೆಯನ್ನು ಸೇರಿಸಿ ತನ್ನದೇ ಆದ ಶೈಲಿಯಲ್ಲಿ ರೂಪಿಸಿದರು. ‘‘ಮೇರಿ ಬಹ್ನೆ ಮಾಮ್ ಗೇ ಆಝಾದಿ, ಮೇರಿ ಬಚ್ಚಿ ಮಾಂಗೇ ಆಝಾದಿ, ನಾರಿ ಕಾ ನಾರಾ ಆಝಾದಿ’’ ನನ್ನ ಸಹೋದರಿಯರು ಸ್ವಾತಂತ್ರವನ್ನು ಬಯಸುತ್ತಾರೆ, ನನ್ನ ಹೆಣ್ಣುಮಕ್ಕಳು ಸ್ವಾತಂತ್ರವನ್ನು ಬಯಸುತ್ತಾರೆ, ಮಹಿಳೆಯ ಧ್ಯೇಯವಾಕ್ಯ ಸ್ವಾತಂತ್ರ ಎಂದು ಅದು ವಿಸ್ತಾರಗೊಂಡು ಹೊಸ ರೂಪವನ್ನು ಪಡೆಯಿತು. ನಿರಂತರವಾಗಿ ಹೆಣ್ಣುಮಕ್ಕಳು ಅನುಭವಿಸುವ ಪುರುಷ ಪ್ರಾಬಲ್ಯದಿಂದ ಸ್ವಾತಂತ್ರವನ್ನು ಪಡೆಯಲೋಸುಗ ಪ್ರಾರಂಭಿಸಲಾದ ಆ ಚಳವಳಿಯಲ್ಲಿ ಬಳಸಲಾದ ಆಝಾದಿ ಘೋಷಣೆಯು ಬಳಿಕ ಮುಕ್ತಿಯನ್ನು ಆಗ್ರಹಿಸುವ ಶೋಷಿತ ವರ್ಗದ ಧ್ವನಿಯಾಗಿ ಮಾರ್ಪಾಡಾಯಿತು. ಹೀಗೆ ಮಾರ್ಪಾಟು ಹೊಂದಿದ ಆಝಾದಿ ಘೋಷಣೆಯು ಜಾಗತಿಕ ಮಟ್ಟದಲ್ಲಿ ವ್ಯಾಪಿಸಿ ಆಧುನಿಕ ಕ್ರಾಂತಿಕಾರಿಗಳ ಉಸಿರಾಗಿ ಬದಲಾಗಿದ್ದು ಸದ್ಯದ ವರ್ತಮಾನ.

2015 ರಲ್ಲಿ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಜನಾಂಗೀಯ ಪ್ರತ್ಯೇಕತೆಯ ಹಿನ್ನೆಲೆಯಲ್ಲಿ ದಲಿತ, ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಕ್ಯಾಂಪಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಿಗೆ ಆಕ್ರೋಶದ ಸೆಳೆಯಾಗಿ ಮತ್ತೊಮ್ಮೆ ಆಝಾದಿ ಜೀವತಳೆಯಿತು. ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರರ ನಾಯಕತ್ವದಲ್ಲಿ ಹುಟ್ಟಿಕೊಂಡ ನವೀನ ಮಾದರಿಯ ಆಝಾದಿ ಘೋಷಣೆಯು ದೇಶದಾದ್ಯಂತ ಹರಡಿಕೊಂಡ ಪರಿ ಅಚ್ಚರಿಯುಟ್ಟಿಸುವಂತಹದ್ದು. ಈ ಕಾರಣಕ್ಕಾಗಿ ವಿದ್ಯಾರ್ಥಿ ನಾಯಕರಾದ ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ ಮತ್ತು ಕನ್ಹಯ್ಯ ಕುಮಾರ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಿ ಜೈಲಿಗೆ ಹಾಕಲಾಯಿತಾದರೂ ಅಂದು ಚಿಗುರನ್ನು ಚಿವುಟಿಹಾಕುವ ಆ ಪ್ರಯತ್ನ ವಿಫಲವಾಗಿ ಫೀನಿಕ್ಸ್ ಪಕ್ಷಿಯಂತೆ ಎದ್ದು ಬಂದ ಕನ್ಹಯ್ಯ ಭಾರತಕ್ಕೊಂದು ಭರವಸೆಯ ಬೆಳಕಾಗಿ ಕಂಡರು. ಬಳಿಕ ಉಳಿದಂತೆ ನಡೆದದ್ದೆಲ್ಲವೂ ಇತಿಹಾಸ ಪುಟದಲ್ಲಿ ದಾಖಲಾಗಬಲ್ಲ ಬೆಳವಣಿಗೆಗಳು. ಹಲವಾರು ಭಾಷೆಗಳಿಗೆ, ರೂಪಗಳಿಗೆ ತರ್ಜುಮೆಗೊಂಡ ಆಝಾದಿ ಘೋಷಣೆಯ ಸದ್ದು ಮತ್ತೆ ಮತ್ತೆ ಮಾರ್ದನಿಸಿ ಇಂದಿಗೆ ಭಾರತ ಎದುರಿಸುತ್ತಿರುವ ಈ ಅಘೋಷಿತ ತುರ್ತುಪರಿಸ್ಥಿತಿಗೆ ಆಶಾವಾದವಾಗಿ, ಆಸರೆಯಾಗಿ ಪರಿವರ್ತಿತಗೊಂಡಿದೆ. ಒಂದೆಡೆ ಆಝಾದಿ ಘೋಷಣೆಯು ಸರ್ವಾಧಿಕಾರ ಆಡಳಿತ, ಧರ್ಮಾದಾರಿತ ಶೋಷಣೆ, ಮನುವಾದ, ಜಾತೀವಾದ, ಪೊಲೀಸರ ದೌರ್ಜನ್ಯಗಳ ವಿರುದ್ಧ ಹೋರಾಡುವವರು ಎದೆತಟ್ಟಿ ಆಝಾದಿ ಕೂಗುತ್ತಿರುವ ಸಂಭ್ರಮವಾದರೆ ‘‘ಲೇ ಲೋ ಆಝಾದಿ’’ ಎಂದು ಲೇವಡಿ ಮಾಡುತ್ತಾ ಗುಂಡು ಹಾರಿಸುವ ಗೋಡ್ಸೆಯ ಸಂತತಿಗಳು ಮತ್ತೆ ಮತ್ತೆ ಗಾಂಧೀಜಿಯನ್ನು ಹತ್ಯೆಗೈಯ್ಯುತ್ತಿದ್ದಾರೆ. ಈ ಸನ್ನಿವೇಶದಲ್ಲಿ ಒಂದಂತೂ ಸ್ಪಷ್ಟವಾಗುತ್ತಿದೆ, ಗಾಂಧೀಜಿಯನ್ನು ಕೊಂದ ತುಪಾಕಿ ಈಗಲೂ ಆ ಧರ್ಮಾಂದರ ಕರಗಳಲ್ಲಿಯಲ್ಲಿಯೇ ಭದ್ರವಾಗಿದೆ. ನಾವು ಮಗದೊಮ್ಮೆ ಎದೆಯೊಡ್ಡುವುದು ಮೂರ್ಖತನವಾಗುತ್ತದೆ.ಇದು ದೇಶ ‘‘ಆಝಾದಿ ಕಾಮಿಲ್’’ ‘‘ಪೂರ್ಣ ಸ್ವರಾಜ್ಯ’’ ಪಡೆಯಲು ಸೂಕ್ತ ಕಾಲ. ಕಾಲ ಮಿಂಚುವ ಮುನ್ನ ಎಚ್ಚೆತ್ತುಗೊಂಡು ಭಾರತೀಯತೆಯನ್ನು ಕಾಪಾಡುವ ಹಾದಿಯಲ್ಲಿ ಸದಾ ಆಝಾದಿ ಘೋಷಣೆಯು ಪ್ರತಿಧ್ವನಿಸುತ್ತಿರಲಿ. ‘‘ಹಮ್ ಲೇಕೆ ರಹೇಂಗೆ ಆಝಾದಿ’’ ಕೂಗು ಚಿರಾಯುವಾಗಲಿ.

Writer - ಝುಬೈರ್ ಹಿಮಮಿ ಪರಪ್ಪು

contributor

Editor - ಝುಬೈರ್ ಹಿಮಮಿ ಪರಪ್ಪು

contributor

Similar News