ಕನ್ನಡ ಸಾಹಿತ್ಯ ಪರಿಷತ್ತು ಎನ್ನುವ ‘ಜರಿರುಮಾಲು’ ಮತ್ತು ಸಾಂಸ್ಕೃತಿಕ ನಿಷ್ಕ್ರಿಯತೆ..

Update: 2020-02-08 18:16 GMT

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಮಾಜಿಕ ಒಳಗೊಳ್ಳುವಿಕೆ ಇಲ್ಲದಿರುವುದು ಮತ್ತು ಆಳುವ ಪ್ರಭುತ್ವದ ಪರವಾಗಿ ನಿಲ್ಲುವುದು ಕನ್ನಡ ಸಾಂಸ್ಕೃತಿಕ ವಿವೇಕಕ್ಕೆ ಮಾಡುತ್ತಿರುವ ಮೋಸ. ಇದನ್ನು ಆಗಾಗ ಮಾಡುತ್ತಲೇ ಬಂದಿದೆ. ಇಂದು ಆಳುವ ವ್ಯವಸ್ಥೆಯನ್ನು ಪ್ರಶ್ನೆ ಮಾಡುವ ಕನ್ನಡ ಸಾಹಿತಿ ಬರಹಗಾರರ ಅಭಿವ್ಯಕ್ತಿ ಸ್ವಾತಂತ್ರವೇ ಅಪಾಯದಲ್ಲಿರುವುದು ಕನ್ನಡದ ನಿಜವಾದ ಸಮಸ್ಯೆಗಳಲ್ಲೊಂದು. ಆದರೆ ಇಂತಹ ಸಂದರ್ಭಗಳಲ್ಲಿಯೂ ಕನ್ನಡದ ಬರಹಗಾರರ ಜೊತೆ ನಿಲ್ಲದೆ ತನ್ನ ಮೊದಲ ಹೊಣೆಗಾರಿಕೆಯಿಂದಲೇ ನುಣುಚಿಕೊಂಡಿರುವುದು ಅಪಾಯಕಾರಿ.

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ನಿಷ್ಕ್ರಿಯತೆಯ ಕನ್ನಡಿಯಾಗಿ ಎರಡು ಮುಖ್ಯ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಮೊದಲನೆಯದು ಜನರಿಂದ ಆಯ್ಕೆಯಾದ ಸರಕಾರವೊಂದು ತನ್ನ ಪಕ್ಷ ಸಿದ್ಧಾಂತದ ವಿರೋಧಿ ಎನ್ನುವ ಕಾರಣಕ್ಕಾಗಿ ಚಿಕ್ಕಮಗಳೂರಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಕಲ್ಕುಳಿ ವಿಠಲ ಹೆಗ್ಗಡೆಯವರ ಆಯ್ಕೆಯನ್ನು ವಿರೋಧಿಸಿತ್ತು. ಅನುದಾನವನ್ನು ತಡೆಹಿಡಿಯುವಂತೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಆದೇಶಿಸಿತ್ತು. ಅನೇಕ ವರ್ಷಗಳ ಕಾಲ ಸರಕಾರಿ ಕೆಲಸದಲ್ಲಿ ಅಧಿಕಾರಿಯಾಗಿದ್ದ ಮನುಬಳಿಗಾರರು; ತಾವು ಸಾಹಿತ್ಯ ಪರಿಷತ್ತಿನ ಸಾಮಾನ್ಯ ಸದಸ್ಯರಿಂದ ಆಯ್ಕೆಯಾದವರು ಎನ್ನುವುದನ್ನು ಮರೆತರು. ಅಧಿಕಾರಿಯೊಬ್ಬರು ಸರಕಾರದ ಮರ್ಜಿಗೆ ಬಿದ್ದು ಆದೇಶ ಪಾಲಿಸುವಂತೆ ನಡೆದುಕೊಂಡರು. ಆದರೂ ಚಿಕ್ಕಮಗಳೂರಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಪ್ರಭುತ್ವಪ್ರಯೋಜಿತ ಬೆದರಿಕೆ ಇದ್ದಾಗಲೂ ಜನರ ದೇಣಿಗೆ ಹಣದಿಂದಲೇ ಯಶಸ್ವಿಯಾಗಿ ನಡೆಯಿತು. ಕಲ್ಕುಳಿ ವಿಠಳ ಹೆಗ್ಗಡೆಯವರ ಆಯ್ಕೆಯ ವಿಷಯದಲ್ಲಿ ಸಾಹಿತ್ಯ ಪರಿಷತ್ತು ಸ್ವಾಯತ್ತವಾಗಿ ನಡೆದುಕೊಳ್ಳುವ ಮೂಲಕ ತಾನು ಸರಕಾರದ ಕೈಗೊಂಬೆಯಲ್ಲ ಎಂದು ಸಾಬೀತುಪಡಿಸುವ ಅವಕಾಶವನ್ನು ಕಳೆದುಕೊಂಡಿತು. ಕಲ್ಕುಳಿ ವಿಠಲ ಹೆಗ್ಗಡೆಯವರು ಬರಹಗಾರರಾಗಿರುವಂತೆ ಸಾಮಾಜಿಕ ಮತ್ತು ಪರಿಸರ ಚಳವಳಿಗಳಲ್ಲಿ ಪ್ರಭುತ್ವವನ್ನು ಎದುರು ಹಾಕಿಕೊಂಡಿದ್ದ ವ್ಯಕ್ತಿತ್ವ. ಪರಿಷತ್ತು ಸಾಹಿತಿಯೊಬ್ಬ ಸಾಮಾಜಿಕ ಹೊಣೆಗಾರಿಕೆಯನ್ನು ಹೊರುವ ವ್ಯಕ್ತಿತ್ವವೂ ಆಗಿದ್ದಾಗ ಹೆಮ್ಮೆಪಟ್ಟು ಅಂತಹ ವ್ಯಕ್ತಿತ್ವಗಳನ್ನು ಬೆಂಬಲಿಸಿ ಜೊತೆಗಿರಲಾರದ ನಿಷ್ಕ್ರಿಯತೆ ಬೆಳೆಸಿಕೊಂಡಿರುವುದು ಇದೊಂದೆ ವಿಷಯದಲ್ಲಿ ಅಲ್ಲ. ಇನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆಯಾಗಿದ್ದ ಕವಿ ಎಚ್.ಎಸ್. ವೆಂಕಟೇಶಮೂರ್ತಿಯವರು ಪರವೋ, ವಿರೋಧವೋ ಮಾತಾಡಲೇಬೇಕಾದ ಈ ಸಂದರ್ಭದಲ್ಲೂ ಮಾತಾಡದೆ ವೌನವಾಗಿರುವುದು ಬರಹಗಾರನೊಬ್ಬನ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಅಗತ್ಯವಾಗಿ ಮಾತಾಡಲೇಬೇಕಾದ ಸಂದರ್ಭಗಳಲ್ಲಿಯಾದರು ಮಾತಾಡದ ಇಂತಹ ಸವಿನಯ ಬರಹಾಗಾರರಿಂದ ಕನ್ನಡದ ವಿವೇಕ ಪಡೆದುಕೊಳ್ಳುವುದಾದರು ಏನು? ನೇರವಾಗಿ ತಮ್ಮ ವೌನದ ನಡುವಳಿಕೆಯ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ತನ್ನನ್ನು ಅಧ್ಯಕ್ಷ ಪದವಿಗೆ ಆಯ್ಕೆಮಾಡಿದ್ದು ಸರಿ ಎನ್ನುವ ಸಮರ್ಥನೆಯನ್ನೇನೋ ನೀಡಿದ್ದಾರೆ. ಆದರೆ ಈ ಪ್ರಕರಣ ಭಾಷೆ, ಸಾಹಿತ್ಯ ಸಂಸ್ಕೃತಿಗಳಿಗೆ ದೊಡ್ಡ ಕೊಡುಗೆ ಕೊಟ್ಟಿದೆ ಎಂದು ಕರೆಯಿಸಿಕೊಳ್ಳುವ ಪರಿಷತ್ತು ಕನ್ನಡದ ಸಾಮಾಜಿಕ ಮತ್ತು ಸಂಸ್ಕೃತಿಗಳ ಬಿಕ್ಕಟ್ಟುಗಳಿಗೆ ಹೇಗೆ ಪ್ರತಿಕ್ರಿಯಿಸಿದೆ? ಸಾಮಾಜಿಕ ಬದ್ಧತೆಯ, ಸಾಮಾಜಿಕ ನ್ಯಾಯದ ವಿಷಯಗಳಿಗೆ ಹೇಗೆ ಪ್ರತಿಕ್ರಿಯಿಸಿದೆ? ಸಾಹಿತ್ಯ ಪರಿಷತ್ತು ಕನ್ನಡದ ಸಾಮಾಜಿಕ ವಿಷಯಗಳಲ್ಲಿ ಪ್ರಭುತ್ವದೊಂದಿಗೆ ಮುಖಮುಖಿಯಾಗಲೇ ಬೇಕಾದ ಸಂದರ್ಭಗಳಲ್ಲಿ ಹೇಗೆ ವರ್ತಿಸಿದೆ ಎನ್ನುವ ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ.

ಕನ್ನಡ ಸಾಹಿತ್ಯ ಪರಿಷತ್ತು ಸಾಮಾಜಿಕ ಬದ್ದತೆಯ ವಿಷಯಗಳಲ್ಲಿ ವಿವೇಕದಿಂದ ಸ್ಪಂದಿಸಿರುವುದು ತೀರಾ ಕಡಿಮೆ. ಆಧುನಿಕ ಕರ್ನಾಟಕದಲ್ಲಿ ಕನ್ನಡದ ಕೆಲಸಗಳಿಗಾಗಿ ಆರಂಭಗೊಂಡ ತೀರಾ ಹಳೆಯ ಸಾಹಿತ್ಯ ಕೇಂದ್ರಗಳಲ್ಲಿ ಎರಡನೆಯದು ಪರಿಷತ್ತು. ಆದರೆ ಅದು ತನ್ನ ಪರಂಪರೆಯ ಪ್ರಭಾವಳಿ ಮತ್ತು ಸ್ವಾಯತ್ತತೆ ಶಕ್ತಿ ಈ ಎರಡನ್ನು ತನ್ನ ಅಂತಸತ್ವವಾಗಿಸಿಕೊಳ್ಳದ ನಿಷ್ಕ್ರಿಯ ರೂಪಕದಂತೆ ಬದಲಾಗಿಬಿಟ್ಟಿದೆ. ಹಾಗೆ ನೋಡಿದರೆ ಮೊದಲಿನಿಂದಲೂ ಪ್ರಭುತ್ವಪೋಷಿತ ಸಾಹಿತ್ಯ ಕೇಂದ್ರವಾಗಿಯೇ ಕೆಲವು ಅಪವಾದಗಳ ಹೊರತಾಗಿ ಪರಿಷತ್ತು ಉಳಿದಿದೆ. 105 ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಏಕೀಕರಣದಲ್ಲಿ ದೊಡ್ಡ ಪಾತ್ರವಹಿಸಿದೆ ಎನ್ನುವಂತೆ ಭ್ರಮೆಯಿದೆ. ಆದರೆ ಕರ್ನಾಟಕ ಏಕೀಕರಣದಲ್ಲಿ ಸಾಹಿತ್ಯ ಪರಿಷತ್ತಿನ ಪಾತ್ರ ತೀರಾ ಚಿಕ್ಕದು, ಅದು ಸ್ವಾತಂತ್ರ ಹೋರಾಟದ ಕೊನೆಯ ಘಟ್ಟದಲ್ಲಿಯಷ್ಟೇ ಹೆಚ್ಚು ಮಾತಾಡಿದೆ. ಇದಕ್ಕೆ ಕಾರಣ ಸ್ಪಷ್ಟವಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಆರಂಭಿಸಿದ್ದರ ಹಿನ್ನೆಲೆಯಲ್ಲಿ ಕರ್ನಾಟಕ ಏಕೀಕರಣದ ಯಾವ ಉದ್ದೇಶವೂ ಇರಲಿಲ್ಲ. ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಬೇಕೆನ್ನುವುದು ಮೈಸೂರು ಸಂಸ್ಥಾನದ ಆಡಳಿತ, ಅಭಿವದ್ಧಿ ಮತ್ತು ಶೈಕ್ಷಣಿಕ ಸಂಗತಿಗಳನ್ನು ಆಧುನೀಕರಿಸಲು ರೂಪಿಸಿದ ಎಕಾನಮಿಕ್ ಕಾನ್ಫರೆನ್ಸ್‌ನಿಂದ ಹೊರಟ ಒಂದು ಯೋಜನೆಯಾಗಿತ್ತು. ಇದಕ್ಕೆ ಅಂದಿನ ಆದುನಿಕ ಇಂಗ್ಲಿಷ್ ಶಿಕ್ಷಣ ಪಡೆದ ಮೊದಲ ತಲೆಮಾರಿನ ಮೇಲುಜಾತಿ ಜನರ ಆಕಾಂಕ್ಷೆಗಳು ಕೂಡ ಕಾರಣವಾಗಿತ್ತು. ಈ ಆಕಾಂಕ್ಷೆಗಳ ಹಿನ್ನೆಲೆಯಲ್ಲಿ; ಹರಿದು ಹಂಚಿಹೋಗಿದ್ದ ಕನ್ನಡದ ಪ್ರದೇಶಗಳ ಕನ್ನಡ ಭಾಷೆಯನ್ನು ಶೈಕ್ಷಣಿಕವಾಗಿ, ಸಾಹಿತ್ಯಕವಾಗಿ ಮತ್ತು ಭಾಷಿಕವಾಗಿ ಮೈಸೂರು ಸಂಸ್ಥಾನದ ಸಾಂಸ್ಕೃತಿಕ ಏಕರೂಪೀಕರಣಕ್ಕೆ ತರುವುದು ಮತ್ತು ಪ್ರಮಾಣೀಕರಿಸುವುದಷ್ಟೇ ಉದ್ದೇಶವಿತ್ತು. ಇದರಿಂದಾಗಿಯೇ ಕರ್ನಾಟಕದ ಏಕೀಕರಣಕ್ಕಾಗಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಆಲೂರು ವೆಂಕಟರಾಯರು 1938ರಲ್ಲಿ ಪರಿಷತ್ತು ಹೊರಗಿನ ಕನ್ನಡಿಗ ಸದಸ್ಯರನ್ನು ತಾರತಮ್ಯದಿಂದ ನೋಡುತ್ತದೆ ಮತ್ತು ಗಡಿನಾಡುಗಳ ಪ್ರಶ್ನೆಗೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಆಪಾದಿಸಿ ರಾಜೀನಾಮೆ ಕೊಟ್ಟುಹೊರಬಂದಿದ್ದರು.

ಏಕೀಕರಣೋತ್ತರ ಕರ್ನಾಟಕ ರಾಜ್ಯ ರೂಪುಗೊಂಡ ನಂತರ ಕನ್ನಡ ಸಾಹಿತ್ಯ ಪರಿಷತ್ತಿಗೆ ಸರಕಾರದಿಂದ ಬರುವ ಅನುದಾನ ಮತ್ತಷ್ಟು ಹೆಚ್ಚಾಗಿತ್ತು. ಪರಿಷತ್ತು ಮಾಡುತ್ತಿದ್ದ ಅನೇಕ ಕೆಲಸಗಳನ್ನು ಮಾಡಲು ಸರಕಾರಗಳು ಪ್ರತ್ಯೇಕವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಂತಹವನ್ನು ಮಾಡಿದವು. ಇದರ ನಂತರವಾದರು ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕಾರ್ಯಶೈಲಿ ಬದಲಾಯಿಸಿಕೊಳ್ಳುವ ಕಡೆಗೆ ಚಲಿಸಿಲ್ಲ. ಜನರ ದೇಣಿಗೆ, ಸರಕಾರದ ಅನುದಾನ ಇವೆರಡನ್ನೂ ಪಡೆದು ಸ್ವಾಯತ್ವವಾಗಿ ಸಾಹಿತ್ಯ ಮತ್ತು ಭಾಷೆಯ ವಿಷಯಗಳಾಚೆಗೆ ಕನ್ನಡತ್ವವನ್ನು ಸಾಮಾಜಿಕ ನೆಲೆಗಳಿಂದ ರೂಪಿಸಬಹುದಿತ್ತು. ಆದರೆ ವಾರ್ಷಿಕ ಸಮ್ಮೇಳನಗಳನ್ನು ತಾಲೂಕು, ಜಿಲ್ಲಾ, ರಾಜ್ಯ ಮಟ್ಟಗಳಲ್ಲಿ ಆಯೋಜಿಸುವುದು, ಪುಸ್ತಕ ಪ್ರಕಟನೆ, ಸಾಹಿತಿಗಳಿಗೆ ಪ್ರಶಸ್ತಿ ನೀಡುವುದು ಇಂತಹವನ್ನೇ ಮುಖ್ಯ ಕಾರ್ಯವಾಗಿಸಿಕೊಂಡಿತು. ಇದನ್ನೇ ಕನ್ನಡ ಉಳಿಸುವ ಬೆಳೆಸುವ ಸೇವೆ ಎಂದು ಭಾವಿಸಿಕೊಂಡಿತು. ಕನ್ನಡಕ್ಕೆ ಜಾಗತೀಕರಣ ತಂದೊಡ್ಡಿರುವ ಬಿಕ್ಕಟ್ಟು, ಜಾಗತೀಕರಣೋತ್ತರ ಸಂದರ್ಭದಲ್ಲಿ ಹಿಂದೆ ಸರಿದ ಜನಪರಚಳವಳಿಗಳೂ, ಮುಚ್ಚಿದ ಸರಕಾರಿ ಶಾಲೆಗಳು, ಇಂಗ್ಲಿಷ್ ಹೇರಿಕೆ, ಅಸಹನೀಯವಾಗಿ ಬೆಳೆದ ಮತೀಯವಾದ, ಶಿಕ್ಷಣದ ಖಾಸಗೀಕರಣ, ರೈತರ ಆತ್ಮಹತ್ಯೆ, ಉದ್ಯೋಗದಲ್ಲಿ ಕನ್ನಡಿಗರಿಗೆ ಆಗುತ್ತಲೇ ಬಂದಿರುವ ಅನ್ಯಾಯ ಇವಾವುವೂ ಕನ್ನಡದ ಸಮಸ್ಯೆಗಳು ಅನಿಸಲಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರಲ್ಲಿರುವ ಸಾಹಿತ್ಯದ ಆಚೆಗೆ ಇರುವ ಕನ್ನಡನಾಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸವಾಲುಗಳನ್ನು ಇದುವರೆಗೂ ಗಂಭೀರವಾಗಿ ಪರಿಗಣಿಸಿದ್ದೂ ಇಲ್ಲ, ಸಮಸ್ಯೆಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿದ್ದಿಲ್ಲ. ಸಮ್ಮೇಳನಗಳ ಅಧ್ಯಕ್ಷ ಭಾಷಣಗಳಲ್ಲಿ ಕನ್ನಡಕ್ಕೆ ಇದು ಆಗಬೇಕು ಎಂದು ಎಲ್ಲರೂ ಪುನರಾವರ್ತಿತವಾಗಿ ಹೇಳುವುದಕ್ಕೆ ನಿರ್ಣಯಗಳನ್ನು ಪಾಸು ಮಾಡಿದ್ದು ಬಿಟ್ಟರೆ ಇನ್ನು ಯಾವುದೇ ರಚನಾತ್ಮಕ ಜವಾಬ್ದಾರಿಗಳನ್ನು ಪರಿಷತ್ತು ಹೊರಲಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಯ್ಕೆಗೆ ಜಾತಿ, ಹಣ ಬಲಗಳು, ಭ್ರಷ್ಟಾಚಾರಗಳೆಲ್ಲ ಅನೇಕ ಸಾರಿ ನಿರ್ಣಾಯಕ ವಿಷಯಗಳಾಗಿದ್ದು, ಕನ್ನಡದ ಹೆಸರಿನ ಸಂಸ್ಥೆಯೊಂದರ ಘನತೆಗೆ ವಿರುದ್ಧವಾದದ್ದು. ಆದರೆ ಅಧಿಕಾರ ರಾಜಕಾರಣದ ಎಲ್ಲ ಕಾಯಿಲೆಗಳು, ದೌರ್ಬಲ್ಯಗಳು ಪರಿಷತ್ತಿಗೆ 80ರ ದಶಕದಿಂದೀಚೆಗೆ ವ್ಯಾಪಿಸಿಕೊಂಡು ಸಾಹಿತ್ಯ ಪರಿಷತ್ತು ನೈತಿಕವಾಗಿ ಕುಸಿದಿದೆ. ಕನ್ನಡ ಸಾಹಿತ್ಯ ಪರಿಷತ್ತು-ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ ಎನ್ನುವ ಸಂಶೋಧನ ಗ್ರಂಥದಲ್ಲಿ ಡಾ. ಎಂ.ಎಲ್ ಶಂಕರಲಿಂಗಪ್ಪನವರು 80ರ ದಶಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯ ರಾಜಕಾರಣದ ಘಟನೆಯನ್ನು ದಾಖಲಿಸುತ್ತಾರೆ. ಹಂಪನಾ ಅವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ರೀತಿ ಬಹುದೊಡ್ಡ ವಿವಾದಕ್ಕೆ ಕಾರಣವಾಯಿತು. ಈಗಿನಷ್ಟು ಬಲವಾದ ನಿಯಮಗಳಿಲ್ಲದಿದ್ದ ಆ ಕಾಲದಲ್ಲಿ ಎರಡನೇ ಬಾರಿ ಅವರು ಅಧ್ಯಕ್ಷತೆಗೆ ಸ್ಪರ್ಧಿಸಿದ್ದಾಗ ಏಕಾಏಕಿ ಸದಸ್ಯತ್ವ ಸಂಖ್ಯೆ ನಲವತ್ತ ಮೂರು ಸಾವಿರಕ್ಕೆ ಏರಿತು. (ಹೀಗೆ ಏರಲು ಅವಕಾಶವಿರುದಂತೆ ಏನಾದರೂ ನಿಯಮ ರೂಪಿಸಬೇಕೆಂದು ಸ್ವತಃ ಹಂಪನಾ ಅವರೇ ಒಂದು ವರ್ಷದ ಹಿಂದೆ ಹೇಳಿದ್ದು ನಿಜ. ಆದರೆ ಅದನ್ನು ಕಾರ್ಯಗತಗೊಳಿಸುವಲ್ಲಿ ಅವರು ಅಷ್ಟು ಆಸಕ್ತಿ ತೋರಲಿಲ್ಲ. ಉಳಿದವರು ಯಾರೂ ಅದರತ್ತ ಮನಸ್ಸು ಹಾಕಿರಲಿಲ್ಲ). ಹಂಪನಾ ಅವರ ವಿರುದ್ಧ ಆಗ ಅವರ ಗುರು, ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ, ದೇ. ಜವರೇಗೌಡ ಸ್ಪರ್ಧಿಸಿದರು. ಸಾವಿರಾರು ಮತಪತ್ರಗಳು ಖೊಟ್ಟಿ ಮುದ್ರಣದ್ದು ಎಂದು ಚುನಾವಣಾಧಿಕಾರಿ ತೀರ್ಮಾನಿಸಿ ಅವರನ್ನು ತಿರಸ್ಕರಿಸಿದರು. ಹಂಪನಾ ಅವರೇ ಆಯ್ಕೆಯಾದರು. ವಿರೋಧಿಗಳು ಕೋರ್ಟಿಗೆ ಹೋದರು. ಚುನಾವಣೆಯಲ್ಲಿ ಅಕ್ರಮವೇನೂ ನಡೆದಿಲ್ಲವೆಂದೂ, ಹಂಪನಾ ಅವರ ಆಯ್ಕೆ ಕ್ರಮಬದ್ಧವೆಂದೂ ಹೈಕೋರ್ಟು ಸಾರಿ ಹೇಳಿತು. ಇಂದಿಗೂ ಕೆಲವು ಅಪವಾದಗಳ ಹೊರತಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳು ಇದೇ ಮಾದರಿಯಲ್ಲೇ ನಡೆಯುತ್ತಿವೆ. ಪರಿಷತ್ತಿನಲ್ಲಿ ವ್ಯಾಪಕವಾದ ಹಣದ ದುರ್ಬಳಕೆಯಾಗಿ ಸರಕಾರವೇ ಮಧ್ಯೆ ಪ್ರವೇಶಿಸಿ 1987ರಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಒಂದು ಬಿಳಿಚುಕ್ಕೆ.

ಕರ್ನಾಟಕದಾದ್ಯಂತ 1982ರಲ್ಲಿ ಗೋಕಾಕ್ ವರದಿಯ ಅನುಷ್ಠಾನಕ್ಕೆ ದೊಡ್ಡ ಮಟ್ಟದಲ್ಲಿ ಚಳವಳಿ ಪ್ರಾರಂಭವಾಗಿತ್ತು. ಆದರೆ ಆಶ್ಚರ್ಯವೆನ್ನುವಂತೆ ಕನ್ನಡ ಸಾಹಿತ್ಯ ಪರಿಷತ್ತು ವೌನವಹಿಸಿತ್ತು. ಕನ್ನಡ ಭಾಷೆಯನ್ನು ಕಲಿಕಾ ಭಾಷೆಯಾಗಿಸುವ ಮುಖ್ಯ ಉದ್ದೇಶಗಳಲ್ಲಿ ಒಂದನ್ನಾಗಿಸಿಕೊಂಡು ಆರಂಭಗೊಂಡಿದ್ದ ಪರಿಷತ್ತು ಕಾಲದ ಪರೀಕ್ಷೆಯಾದ ಗೋಕಾಕ್ ಚಳವಳಿಯಂತಹ ಇಡೀ ಕರ್ನಾಟಕದ ಜನರ ಪಾಲ್ಗೊಳ್ಳುವಿಕೆಯಿದ್ದ ಚಳವಳಿಯಲ್ಲಿ ಜನರ ಜೊತೆ ನಿಲ್ಲದೆ ಪ್ರಭುತ್ವಪರವಾಗಿತ್ತು. ಅಂದಿನ 70 ಮತ್ತು 80ರ ದಶಕದ ದಲಿತ ಮತ್ತು ರೈತ ಚಳವಳಿಗಳಂತಹವು ತೀವ್ರವಾಗಿದ್ದಾಗಲೂ ಸಾಹಿತ್ಯ ಪರಿಷತ್ತು ಕನ್ನಡದ ಸಾಮಾಜಿಕ ಅಂತಸತ್ವಗಳಿಗೆ ಸ್ಪಂದಿಸದೆ ಜಡ್ಡುಗಟ್ಟಿತ್ತು.

 ಸೆಕ್ಸ್ಯುಲರ್ ನೆಲೆಯಲ್ಲಿ ಕನ್ನಡತ್ವವನ್ನು ರೂಪಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ವಿವೇಕವಾಗಿ ಕೆಲಸ ಮಾಡಬೇಕಿತ್ತು. ಆದರೆ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಮತ್ತು ಅದರ ಬದ್ಧತೆಗಳು ಅಧ್ಯಕ್ಷ ಪದವಿಗೆ ಯಾರು ಆಯ್ಕೆಯಾಗುತ್ತಾರೆ ಎನ್ನುವುದರ ಮೇಲೆ ನಿಂತಿರುತ್ತದೆ. ಕರ್ನಾಟಕದಲ್ಲಿ ಎರಡನೇ ಅತಿ ಹೆಚ್ಚು ಜನ ಮಾತನಾಡುವ ಭಾಷೆಯಾದ ಉರ್ದುವನ್ನು ಕನ್ನಡ ಸಾಹಿತ್ಯ ಪರಿಷತ್ತು ಸೌಹಾರ್ದದ ನೆಲೆಯಲ್ಲಿ ನೋಡದ್ದರ ದುರಂತ ಪರಿಣಾಮವೊಂದು ಕರ್ನಾಟಕ ಚರಿತ್ರೆಯಲ್ಲಿ ಘಟಿಸಿದೆ. ದೂರದರ್ಶನದಲ್ಲಿ 1994ರಲ್ಲಿ ಉರ್ದು ವಾರ್ತೆ ಪ್ರಸಾರವಾಗಲು ಶುರುವಾಗಿತ್ತು. ಇದರಿಂದ ಕನ್ನಡಕ್ಕೆ ಪ್ರಾಶಸ್ತ್ಯ ಹೋಗುತ್ತದೆನ್ನುವ ಹುಸಿ ಆತಂಕದಿಂದ ಕನ್ನಡ ಶಕ್ತಿ ಕೇಂದ್ರದ ಜೊತೆ ಸೇರಿದ್ದ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ಕನ್ನಡಿಗರು ಕನ್ನಡ ರಕ್ಷಣೆಗೆ ಮುಂದಾಗಬೇಕೆಂದು ದೊಡ್ಡ ಹೋರಾಟ ನಡೆಸಿದ್ದರು. ಈ ಹೋರಾಟದ ಫಲ 25 ಜನ ಅಮಾಯಕರು ಘರ್ಷಣೆಯಲ್ಲಿ ಕೊಲೆಯಾದರು. ನಂತರ ಸರಕಾರ ಉರ್ದು ವಾರ್ತೆ ಪ್ರಸಾರದಿಂದ ಹಿಂದೆ ಸರಿದಿತ್ತು. ಉರ್ದು ವಾರ್ತೆ ಪ್ರಸಾರ ವಿರೋಧಿ ಹೋರಾಟದಲ್ಲಿ ಕನ್ನಡದ ಭಾಷಾ ಪ್ರೇಮದ ತೀವ್ರತೆಗಿಂತಲೂ ಮತೀಯ ನೆಲೆಯ ಅಸಹನೆ ಇರುವುದು ಕಾಣುತ್ತದೆ. ಉರ್ದುವಿನ ಜೊತೆಗೆ ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆಯ ಕೊಡುಕೊಳ್ಳುವಿಕೆಗಳ ಅರಿವಿಲ್ಲದವರು ಮತ್ತು ಉರ್ದುವನ್ನು ಒಂದು ಧರ್ಮದ ಭಾಷೆಯಾಗಿಯಷ್ಟೇ ನೋಡುವ ಮತೀಯವಾದಿ ಮನುಷ್ಯರು ವರ್ತಿಸುವಂತೆ ಪರೋಕ್ಷವಾಗಿ ಸಾಹಿತ್ಯ ಪರಿಷತ್ತು ಅಂದು ವರ್ತಿಸಿತ್ತು. ಇಂದಿಗೂ ಉರ್ದುವನ್ನು, ಉರ್ದು ಮಾತನಾಡುವವರನ್ನು ವಲಸಿಗ ಭಾಷಿಕರಂತೆ ನೋಡುವ ಮಾದರಿಗಳು ಕನ್ನಡ ಚಳವಳಿಗಳಲ್ಲಿ ಉಳಿದುಹೋಗಿದೆ.

ಸಾಮಾಜಿಕ ನ್ಯಾಯದ ಪ್ರಶ್ನೆಗಳ ವಿಚಾರದಲ್ಲಿಯೂ ಸಾಹಿತ್ಯ ಪರಿಷತ್ತಿನ ಸಾಂಸ್ಥಿಕ ಸೋಲು ಎದ್ದುಕಾಣಿಸುತ್ತಿದೆ. ಕನ್ನಡ ಸಾಹಿತ್ಯ, ಭಾಷೆ ವಿಚಾರಗಳಲ್ಲಿ ಪರಿಷತ್ತಿನ ಪಾತ್ರ ದೊಡ್ಡದೆ ಆದರೂ, ಸಾಮಾಜಿಕ ನ್ಯಾಯದ ವೌಲ್ಯಗಳನ್ನು ತನ್ನ ಸಾಂಸ್ಥಿಕ ನೆಲೆಯಲ್ಲಿ ತಂದು ಆಚರಿಸುವಲ್ಲಿ ಸೋತಿದೆ. ಪರಿಷತ್ತಿಗೆ ಸಾಮಾಜಿಕ ನ್ಯಾಯದ ಪ್ರಶ್ನೆಗಳು ಆದ್ಯತೆಯ ವಿಷಯಗಳಲ್ಲ, ಕೇವಲ ಕನ್ನಡ ಸೇವೆಯೇ ತನ್ನ ಆದ್ಯತೆ ಎಂದುಕೊಳ್ಳಬಹುದು. ಆದರೆ ಎಲ್ಲವನ್ನು ಒಳಗೊಳ್ಳುವ ಕನ್ನಡತ್ವವೆನ್ನುವ ವಿವೇಕವೇ ದೊಡ್ಡದಿರುವಾಗ, ಕೇವಲ ಸಾಹಿತ್ಯ ಸೇಮೊಂದರಿಂದಲೇ ಕನ್ನಡತ್ವವನ್ನು ಕಟ್ಟಲಾಗುವುದಿಲ್ಲ ಎನ್ನುವ ಅರಿವು ಅಗತ್ಯವಾಗಿರಬೇಕಿದೆ. ಆದರೆ ಇದನ್ನು ಸಾಹಿತ್ಯ ಪರಿಷತ್ತು ರೂಪಿಸಿಕೊಳ್ಳುವಲ್ಲಿ ಸೋತಿದೆ. ಸಾಹಿತ್ಯ ಮತ್ತು ಸಾಹಿತಿ ಸೆಕ್ಯೂಲರ್ ಆಗಿ ಆಲೋಚಿಸುವುದೆಂದರೆ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ತನ್ನ ಕ್ರಿಯೆಯ ಭಾಗವಾಗಿಸಿಕೊಳ್ಳುವುದು ಎನ್ನುವುದರ ಅರಿವು ಪರಿಷತ್ತಿಗಿರಬೇಕಿದೆ. ಕನ್ನಡದ ಅನೇಕ ಸಾಹಿತಿಗಳು ಇದನ್ನೇ ತೀವ್ರವಾಗಿ ತಮ್ಮ ಬರಹಗಳಲ್ಲಿ ಧ್ಯಾನಿಸಿದ್ದಾರೆ. ಆದರೆ ಸಾಹಿತ್ಯ ಪರಿಷತ್ತು ಎಂದಾದರು ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯಂತಹ ಪ್ರಶ್ನೆಗಳನ್ನು ತನ್ನ ನಡೆಯಲ್ಲಿ ರೂಪಿಸಿಕೊಂಡಿರುವುದು ಎಲ್ಲೂ ಎದ್ದು ಕಾಣಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಸರಕಾರದ ಆರ್ಥಿಕ ಬೆಂಬಲ ಪಡೆದು ಕೆಲಸ ನಿರ್ವಹಿಸಬೇಕಾದ ಜನರ ಸ್ವಾಯತ್ತ ಸಂಸ್ಥೆಯೊಂದು ಸಾಮಾಜಿಕ ಒಳಗೊಳ್ಳುವಿಕೆಯ ವಿಷಯಗಳಲ್ಲಿ ಅಸೂಕ್ಷ್ಮವಾಗಿರುವುದು ಆಕಸ್ಮಿಕವೇನು ಅಲ್ಲ. ಏಕೆಂದರೆ ಕನ್ನಡ ಸಾಹಿತ್ಯ ಪರಿಷತ್ತು ಮೇಲುಜಾತಿಯವರ ಕೈಯಲ್ಲೇ ಇದೆ. ಮನುಬಳಿಗಾರರನ್ನು ಒಳಗೊಂಡಂತೆ ಇದುವರೆಗೂ 25ಮಂದಿ ಅಧ್ಯಕ್ಷರಾಗಿದ್ದಾರೆ. ಎಲ್ಲರೂ ಗಂಡಸರೇ ಮತ್ತು ಮೇಲುಜಾತಿಗಳ ಹಿನ್ನೆಲೆಯವರು. ಅದರಲ್ಲೂ ಶೇಕಡ 60ಕ್ಕೂ ಹೆಚ್ಚು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಉಳಿದವರಲ್ಲಿ ಲಿಂಗಾಯತ, ವಕ್ಕಲಿಗ, ಒಬ್ಬರು ಮೇಲುಜಾತಿ ಕ್ರಿಶ್ಚಿಯನ್, ಮತ್ತೊಬ್ಬರು ಜೈನ ಸಮುದಾಯಕ್ಕೆ ಸೇರಿದವರು. ಇದುವರೆಗೂ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆವಹಿಸಿದವರ ಸಾಮಾಜಿಕ ಹಿನ್ನೆಲೆಗಳೂ ಹೀಗೇ ಇವೆ. 85 ಸಮ್ಮೇಳನಗಳಲ್ಲಿ ಇದುವರೆಗೂ ಮಹಿಳಾ ಸಾಹಿತಿಗಳು ಅಂತ ಆಯ್ಕೆಯಾದವರು ಕೇವಲ ನಾಲ್ಕು ಮಂದಿ ಮಾತ್ರ. ಒಬ್ಬರು ದಲಿತ, ಒಬ್ಬರು ಮುಸ್ಲಿಮ್ ಮಾತ್ರ ಆಯ್ಕೆಯಾಗಿದ್ದರು. ಜಾತಿ, ಧರ್ಮ, ಲಿಂಗ ಅಸಮಾನತೆಯ ನೆಲದಲ್ಲಿ ಎಲ್ಲ ಜನ ಸಮುದಾಯಗಳನ್ನು ಒಳಗೊಳ್ಳದ ಪರಿಷತ್ತು ಕನ್ನಡತ್ವವನ್ನು ಯಾವ ನೆಲೆಯಿಂದ ರೂಪಿಸಲು ಸಾಧ್ಯವಾದೀತು?

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಮಾಜಿಕ ಒಳಗೊಳ್ಳುವಿಕೆ ಇಲ್ಲದಿರುವುದು ಮತ್ತು ಆಳುವ ಪ್ರಭುತ್ವದ ಪರವಾಗಿ ನಿಲ್ಲುವುದು ಕನ್ನಡ ಸಾಂಸ್ಕೃತಿಕ ವಿವೇಕಕ್ಕೆ ಮಾಡುತ್ತಿರುವ ಮೋಸ. ಇದನ್ನು ಆಗಾಗ ಮಾಡುತ್ತಲೇ ಬಂದಿದೆ. ಇಂದು ಆಳುವ ವ್ಯವಸ್ಥೆಯನ್ನು ಪ್ರಶ್ನೆ ಮಾಡುವ ಕನ್ನಡ ಸಾಹಿತಿ ಬರಹಗಾರರ ಅಭಿವ್ಯಕ್ತಿ ಸ್ವಾತಂತ್ರವೇ ಅಪಾಯದಲ್ಲಿರುವುದು ಕನ್ನಡದ ನಿಜವಾದ ಸಮಸ್ಯೆಗಳಲ್ಲೊಂದು. ಆದರೆ ಇಂತಹ ಸಂದರ್ಭಗಳಲ್ಲಿಯೂ ಕನ್ನಡದ ಬರಹಗಾರರ ಜೊತೆ ನಿಲ್ಲದೆ ತನ್ನ ಮೊದಲ ಹೊಣೆಗಾರಿಕೆಯಿಂದಲೇ ನುಣುಚಿಕೊಂಡಿರುವುದು ಅಪಾಯಕಾರಿ. ನಲವತ್ತರ ದಶಕದಲ್ಲಿಯೇ ಪರಿಷತ್ತಿನ ಕಾರ್ಯವೈಖರಿ ನೋಡಿ ಪತ್ರಕರ್ತರೊಬ್ಬರು ಜರಿರುಮಾಲುಗಳ ಪರಿಷತ್ತು ಎಂದು ಜರಿದಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಇಂದಿಗೂ ಜರಿರುಮಾಲುಗಳ ಪರಿಷತ್ತಾಗಿಯೇ ಉಳಿದುಬಿಟ್ಟಿದೆ. ಜೊತೆಗೆ ಅಧಿಕಾರವಂತರ ರಾಜಕಾರಣದ ದಾಳವಾಗಿಯೂ ಬಳಕೆಯಾಗುತ್ತ ಸೆಕ್ಯುಲರ್ ನೆಲೆಯ ಕನ್ನಡ ಕಟ್ಟುವ ಕೆಲಸಗಳಿಗೆ ಪರೋಕ್ಷವಾಗಿ ತೊಡಕಾಗುವ ಕಡೆಗೆ ಮುಖಮಾಡಿರುವುದು ಪರಿಷತ್ತು ಬಂದು ತಲುಪಿರುವ ನಿಲ್ದಾಣ ಯಾವುದು ಎಂಬುದನ್ನು ಸ್ಪಷ್ಟಗೊಳಿಸಿದೆ.

Writer - ಮಂಜುನಾಥ ಎಂ. ಆನೇಕಲ್

contributor

Editor - ಮಂಜುನಾಥ ಎಂ. ಆನೇಕಲ್

contributor

Similar News