ನಿಮ್ಮ ಟೂಥ್‌ಪೇಸ್ಟ್ ನಿಮ್ಮನ್ನು ಅನಾರೋಗ್ಯಕ್ಕೆ ತುತ್ತಾಗಿಸಬಹುದು
ನೀವು ಪ್ರತಿದಿನವೂ ಎರಡು ಬಾರಿ ಹಲ್ಲುಜ್ಜುತ್ತೀರಾ? ಹಾಗಿದ್ದರೆ ನಿಮ್ಮ ಟೂಥ್‌ಪೇಸ್ಟ್ ಸುರಕ್ಷಿತವಾಗಿದೆ ಎನ್ನುವುದು ನಿಮಗೆ ಖಚಿತವಿದೆಯೇ? ನಾವು ಸಾಮಾನ್ಯವಾಗಿ ಬ್ರಾಂಡ್ ಹೆಸರು ಮತ್ತು ಜಾಹೀರಾತುಗಳಿಂದ ಪ್ರಭಾವಿತರಾಗಿ ಟೂಥ್‌ಪೇಸ್ಟ್ ಖರೀದಿಸುತ್ತೇವೆ,ಹೀಗಾಗಿ ಈ ಪ್ರಶ್ನೆಗೆ ಹೆಚ್ಚಿನವರ ಪ್ರಾಮಾಣಿಕ ಉತ್ತರ ‘ಇಲ್ಲ’ ಎಂದೇ ಆಗಿರುತ್ತದೆ ಎನ್ನುುದರಲ್ಲಿ ಅನುಮಾನವಿಲ್ಲ.
ನೀವು ಪ್ರತಿದಿನ ಬಳಸುವ ಟೂಥ್‌ಪೇಸ್ಟ್ ನಿಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನುಂಟು ಮಾಡಬಹುದು. ಸಾಂಪ್ರದಾಯಿಕ ಟೂಥ್‌ಪೇಸ್ಟ್ ಹೆಚ್ಚುವರಿಯಾಗಿ ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ ಮತ್ತು ಇವುಗಳನ್ನು ಟೂಥ್‌ಪೇಸ್ಟ್‌ನ್ನು ಹೆಚ್ಚು ಆಕರ್ಷಕವಾಗಿಸಲು ಮತ್ತು ಬಳಕೆಗೆ ಅರ್ಹವಾಗಿಸಲು ಬಳಸಲಾಗುತ್ತದೆ. ಹಲ್ಲುಗಳನ್ನುಜ್ಜಿದ ಬಳಿಕ ಟೂಥ್‌ಪೇಸ್ಟ್‌ನ್ನು ಬಾಯಿಯಿಂದ ಹೊರಗೆ ಉಗುಳುತ್ತೇವೆ,ಅದನ್ನು ನುಂಗುವುದಿಲ್ಲ. ಹೀಗಿರುವಾಗ ಅನಾರೋಗ್ಯದ ಪ್ರಶ್ನೆ ಎಲ್ಲಿಂದ ಬರುತ್ತದೆ ಎಂದು ನಿಮಗೆ ಅಚ್ಚರಿಯಾಗಿರಬಹುದು.
ನಾವು ಟೂಥ್‌ಪೇಸ್ಟ್‌ನ್ನು ಉಗುಳುತ್ತೇವೆ ನಿಜ,ಆದರೂ ಅದರಲ್ಲಿರುವ ರಾಸಾಯನಿಕಗಳು ನಮ್ಮ ಶರೀರವನ್ನು ಪ್ರವೇಶಿಸಿ ರಕ್ತವನ್ನು ತಲುಪಬಹುದು ಮತ್ತು ಅಂಗಾಂಗಗಳಿಗೆ ಹಾನಿಯನ್ನುಂಟು ಮಾಡಬಹುದು. ನಾವು ಟೂಥ್‌ಪೇಸ್ಟ್ ಬಳಸಿ ಹಲ್ಲುಜ್ಜಿದಾಗ ಅದರಲ್ಲಿರುವ ರಾಸಾಯನಿಕಗಳು ಬಾಯಿಯ ಚರ್ಮವನ್ನು ದಾಟಿ ಶರೀರವನ್ನು ಪ್ರವೇಶಿಸುತ್ತವೆ ಮತ್ತು ರಕ್ತದಲ್ಲಿ ಸೇರಿಕೊಂಡು ಶರೀರದಲ್ಲಿ ಸಂಗ್ರಹ ಗೊಳ್ಳುತ್ತವೆ ಹಾಗೂ ಕೆಲವು ನಿರ್ದಿಷ್ಟ ಅಡ್ಡಪರಿಣಾಮಗಳನ್ನುಂಟು ಮಾಡಬಹುದು.
ಟೂಥ್‌ಪೇಸ್ಟ್ ರಾಸಾಯನಿಕಗಳ ಮಿಶ್ರಣವಾಗಿದ್ದು ನಿಮ್ಮ ನಗುವನ್ನು ಸುಂದರಗೊಳಿಸಲು ಮತ್ತು ಬಾಯಿಯ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಆದರೆ ಇದರಲ್ಲಿ ಬಳಸಲಾಗುವ ಎಲ್ಲ ರಾಸಾಯನಿಕಗಳೂ ಆರೋಗ್ಯಕ್ಕೆ ಒಳ್ಳೆಯವಲ್ಲ. ಆರೋಗ್ಯಕ್ಕೆ ಕೆಡುಕನ್ನುಂಟು ಮಾಡುವ ಕೆಲವು ರಾಸಾಯನಿಕಗಳೂ ಟೂಥ್‌ಪೇಸ್ಟ್‌ನಲ್ಲಿದ್ದು,ಈ ಬಗ್ಗೆ ಮಾಹಿತಿ ಇಲ್ಲಿದೆ. ಮುಂದಿನ ಸಲ ಟೂಥ್‌ಪೇಸ್ಟ್ ಖರೀದಿಸುವಾಗ ಇದು ನಿಮಗೆ ಗೊತ್ತಿರಲಿ.
ಟ್ರೈಕ್ಲೋಸಾನ್
ಬ್ಯಾಕ್ಟೀರಿಯಾ ನಿರೋಧಕ ರಾಸಾಯನಿಕವಾಗಿರುವ ಟ್ರೈಕ್ಲೋಸಾನ್ ಅನ್ನು ಅದು ಜಿಂಜಿವೈಟಿಸ್ ಅಥವಾ ವಸಡಿನ ಉರಿಯೂತದ ವಿರುದ್ಧ ಹೋರಾಡುತ್ತದೆ ಎಂಬ ಪ್ರತಿಪಾದನೆಯೊಂದಿಗೆ ಮಾರಾಟ ಮಾಡಲಾಗುತ್ತದೆ. ಆದರೆ ಟ್ರೈಕ್ಲೋಸಾನ್ ಶರೀರದ ಬ್ಯಾಕ್ಟೀರಿಯಾ ನಿರೋಧಕತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಮತ್ತು ಅಂತಃಸ್ರಾವಕ ವ್ಯವಸ್ಥೆಯಲ್ಲಿ ವ್ಯತ್ಯಯವನ್ನು ಹೆಚ್ಚಿಸುತ್ತದೆ. ಇದು ಮೂಳೆ ವಿರೂಪತೆಯಿಂದ ಹಿಡಿದು ಅಪರೂಪಕ್ಕೆ ಕ್ಯಾನ್ಸರ್‌ವರೆಗೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಸೋಡಿಯಂ ಲಾರಿಲ್ ಸಲ್ಫೇಟ್
(ಎಸ್‌ಎಲ್‌ಎಸ್)
ಸೋಡಿಯಂ ಲಾರಿಲ್ ಈಥರ್ ಸಲ್ಫೇಟ್ (ಎಸ್‌ಎಲ್‌ಇಎಸ್) ಎಂದೂ ಕರೆಯಲಾಗುವ ಈ ರಾಸಾಯನಿಕವು ನಮ್ಮ ನಾಲಿಗೆಯ ಮೇಲಿರುವ ಫಾಸ್ಫೊಲಿಪಿಡ್‌ಗಳನ್ನು ವಿಭಜಿಸುತ್ತದೆ. ಇದೇ ಕಾರಣದಿಂದ ಹಲ್ಲುಜ್ಜಿದ ತಕ್ಷಣ ಯಾವುದೂ ರುಚಿ ಎನಿಸುವುದಿಲ್ಲ.
ಕೃತಕ ಸಿಹಿಕಾರಕಗಳು
ಟೂಥ್‌ಪೇಸ್ಟ್‌ಗೆ ಸಿಹಿ ರುಚಿ ನೀಡಲು ಬಳಸಲಾಗುವ ಅಸ್ಪರ್‌ಟೇಮ್ ಅಸ್ಪರ್ಟಿಕ್ ಆ್ಯಸಿಡ್ ಮತ್ತು ಫಿನೈಲ್‌ಅಲನೈನ್‌ಗಳಿಂದ ತಯಾರಾಗಿರುತ್ತದೆ. ಫಿನೈಲ್‌ಅಲನೈನ್ ಬಳಕೆಯಾದಾಗ ಮಿಥೆನಾಲ್ ಆಗಿ ವಿಭಜಿಸಲ್ಪಡುತ್ತದೆ. ಆದರೆ ನಮ್ಮ ಶರೀರಕ್ಕೆ ಮಿಥೆನಾಲ್‌ನ್ನು ಅದರ ಹಾನಿರಹಿತ ರೂಪವಾದ ಫಾರ್ಮಿಕ್ ಆ್ಯಸಿಡ್‌ನ್ನಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. ಈ ಮಿಥೆನಾಲ್ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮವನ್ನುಂಟು ಮಾಡುತ್ತದೆ.
ಫ್ಲೋರೆಡ್
ಈ ರಾಸಾಯನಿಕವು ನಮ್ಮ ಶರೀರದಲ್ಲಿ ನರಶಾಸ್ತ್ರೀಯ ಮತ್ತು ಅಂತಃಸ್ರಾವಕ ಕಾರ್ಯ ನಿರ್ವಹಣೆಗೆ ಅಡ್ಡಿಯನ್ನುಂಟು ಮಾಡಬಲ್ಲದು. ಹಲ್ಲುಜ್ಜುವಾಗ ದೊಡ್ಡ ಪ್ರಮಾಣದಲ್ಲಿ ಪೇಸ್ಟ್‌ನ್ನು ನುಂಗುವ ಮಕ್ಕಳು ಹಲ್ಲುಗಳನ್ನು ವಿರೂಪಗೊಳಿಸುವ ಫ್ಲೋರೊಸಿಸ್‌ಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಫ್ಲೋರೈಡ್‌ಗೆ ಅತಿಯಾಗಿ ಒಡ್ಡಿಕೊಂಡರೆ ಅದು ಹಲ್ಲುಗಳ ಬಣ್ಣಗೆಡುವಿಕೆ ಮತ್ತು ಮೂಳೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಪ್ರೊಪಿಲಿನ್ ಗ್ಲೆಕಾಲ್
ಇಂಡಸ್ಟ್ರಿಯಲ್ ಗ್ರೇಡಿಂಗ್ ಹೊಂದಿರುವ ಇದು ಒಂದು ವಿಧದ ಖನಿಜ ತೈಲವಾಗಿದ್ದು, ಘನೀಕರಣರೋಧಕ, ಬಣ್ಣಗಳು ಮತ್ತು ಎನಾಮಲ್‌ಗಳಲ್ಲಿ ಹಾಗೂ ವಿಮಾನಗಳಿಗೆ ಹಿಮನಿವಾರಕವಾಗಿ ಬಳಕೆಯಾಗುತ್ತದೆ. ಈ ರಾಸಾಯನಿಕವು ಚರ್ಮ, ಕಣ್ಣು ಮತ್ತು ಶ್ವಾಸಕೋಶಗಳಲ್ಲಿ ಉರಿಯನ್ನುಂಟು ಮಾಡುತ್ತದೆ. ಅದು ಶರೀರದಲ್ಲಿಯ ಅಂಗಾಂಗ ವ್ಯವಸ್ಥೆಯನ್ನು ನಂಜಿಗೂ ಗುರಿ ಮಾಡಬಹುದು.
ಡೆಇಥನೋಲಮೆನ್ (ಡಿಇಎ)
ಹಲವಾರು ಟೂಥ್‌ಪೇಸ್ಟ್‌ಗಳಲ್ಲಿ ಕಂಡು ಬರುವ ಡಿಇಎ ಹಾರ್ಮೋನ್ ವ್ಯತ್ಯಯವನ್ನುಂಟು ಮಾಡುತ್ತದೆ. ಅದು ಇತರ ಘಟಕಗಳೊಂದಿಗೆ ಪ್ರತಿವರ್ತಿಸಿ ಎನ್-ನೈಟ್ರೋಸೋಡೈಇಥನೋಲಮೈನ್ (ಎನ್‌ಡಿಇಎ) ಅನ್ನು ಉತ್ಪಾದಿಸುತ್ತದೆ. ಇದು ಕ್ಯಾನ್ಸರ್‌ಕಾರಕ ರಾಸಾಯನಿಕವಾಗಿದ್ದು,ಹೊಟ್ಟೆ, ಅನ್ನನಾಳ, ಯಕೃತ್ತು, ಮೂತ್ರಕೋಶ ಇತ್ಯಾದಿಗಳ ಕ್ಯಾನ್ಸರ್‌ನೊಂದಿಗೆ ತಳುಕು ಹಾಕಿಕೊಂಡಿದೆ.
ಫಾರ್ಮಾಲ್ಡಿ ಹೆಡ್
ಹಲವಾರು ಟೂಥ್‌ಪೇಸ್ಟ್ ಬ್ರಾಂಡ್‌ಗಳಲ್ಲಿ ಬಳಸಲಾಗುವ ಫಾರ್ಮಾಲ್ಡಿಹೈಡ್ ಜೀವಿಗಳಲ್ಲಿ ಕೊಳೆಯುವಿಕೆ ಪ್ರಕ್ರಿಯೆಯನ್ನು ತಡೆಯಲು ಬಳಸಲಾಗುವ ಸಾಮಾನ್ಯ ಸಂರಕ್ಷಕವಾಗಿದೆ. ಶವಗಳು ಕೆಡದಂತಿರಲೂ ಅದನ್ನು ಬಳಸಲಾಗುತ್ತದೆ. ಟೂಥ್‌ಪೇಸ್ಟ್ ನಲ್ಲಿ ಸಣ್ಣ ಪ್ರಮಾಣದಲ್ಲಿರುವ ಫಾರ್ಮಾಲ್ಡಿಹೈಡ್ ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಫಾರ್ಮಾಲ್ಡಿಹೈಡ್ ದಂತಕ್ಷಯ, ಕಾಮಾಲೆ, ಮೂತ್ರ ಪಿಂಡಗಳಿಗೆ ಹಾನಿ, ಯಕೃತ್ತಿಗೆ ಹಾನಿಯಂತಹ ತೊಂದರೆಗಳನ್ನುಂಟು ಮಾಡುತ್ತದೆ.
ಪ್ಯಾರಾಫಿನ್
ಟೂಥ್‌ಪೇಸ್ಟ್‌ನಲ್ಲಿರುವ ಪ್ಯಾರಾಫಿನ್ ಅದನ್ನು ನಯವಾಗಿಸುತ್ತದೆ. ಬಾಯಿಯ ಮತ್ತು ಹಲ್ಲುಗಳ ಹೆಚ್ಚಿನ ಆರೋಗ್ಯಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಟೂಥ್‌ಪೇಸ್ಟ್‌ನ್ನು ಬಳಸಬೇಕು ಮತ್ತು ಬಹಳ ಹೊತ್ತಿನವರೆಗೂ ಹಲ್ಲುಗಳನ್ನು ಉಜ್ಜಬೇಕು ಎಂಬ ತಪ್ಪುಗ್ರಹಿಕೆಯಿದೆ. ಪ್ಯಾರಾಫಿನ್ ಹೆಚ್ಚೆಚ್ಚು ಬಳಕೆಯಾದಷ್ಟೂ ಅದು ಹಲ್ಲುಗಳ ಮೇಲೆ ಕಲೆಗಳು,ಹೊಟ್ಟೆನೋವು,ವಾಕರಿಕೆ ಮತು್ತ ಮಲಬದ್ಧತೆಗೆ ಕಾರಣವಾಗುತ್ತದೆ.
ಗ್ಲಿಸರಿನ್ ಗ್ಲೆಕಾಲ್
ಕೆಲವೊಮ್ಮೆ ಹಲ್ಲುಜ್ಜುವಾಗ ವಾಕರಿಕೆಯುಂಟಾಗುತ್ತದೆಯೇ? ಟೂಥ್‌ಪೇಸ್ಟ್ ನಲ್ಲಿರುವ ಗ್ಲಿಸರಿನ್ ಗ್ಲೈಕಾಲ್ ಇದಕ್ಕೆ ಕಾರಣ. ಟೂಥ್‌ಪೇಸ್ಟ್ ಒಣಗಿ ಗಟ್ಟಿಯಾಗದಿರಲು ಇದನ್ನು ಬಳಸುತ್ತಾರೆ. ಇದು ಗೀಳಿಗೆ ಕಾರಣವಾಗುವ ರಾಸಾಯನಿಕವಾಗಿದ್ದು, ವಾಕರಿಕೆಯನ್ನುಂಟು ಮಾಡುತ್ತದೆ.
ಈ ರಾಸಾಯನಿಕಗಳು ಹಲವಾರು ವಿಧಗಳಲ್ಲಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಥೈರಾಯ್ಡೆ ಸಮಸ್ಯೆಗಳು, ಮೆದುಳು, ಮೂತ್ರಪಿಂಡ ಮತ್ತು ಹೃದಯ ಸಮಸ್ಯೆಗಳು,ಮಕ್ಕಳಲ್ಲಿ ಬುದ್ಧಿಮತ್ತೆ ಕುಸಿತ,ಬಾಯಿಹುಣ್ಣು, ಹಾರ್ಮೋನ್ ಅಸಮತೋಲನ, ವಾಯು ಮತ್ತು ಹೊಟ್ಟೆಯುಬ್ಬರ ಇತ್ಯಾದಿಗಳನ್ನುಂಟು ಮಾಡುತ್ತವೆ.