ಕೊಲೆಸ್ಟ್ರಾಲ್ ಅಪಾಯಗಳು
ಕೊಲೆಸ್ಟ್ರಾಲ್‌ನ ಅಪಾಯ ಇಂದು ಎಷ್ಟು ಸಾಮಾನ್ಯವಾಗಿಬಿಟ್ಟಿದೆ ಎಂದರೆ ಯುವಜನರು, ಮಧ್ಯವಯಸ್ಕರು ಮತ್ತು ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಎಚ್ಚರಿಕೆಯಿಂದಿರಬೇಕಿದೆ. ಅದು ಎಷ್ಟೊಂದು ಅಪಾಯಕಾರಿಯೆಂದರೆ ತನ್ನ ಬಗ್ಗೆ ಸ್ವಲ್ಪವೂ ಸುಳಿವು ಬಿಟ್ಟುಕೊಡದೆ ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ವುೂಲಕ ದಿಢೀರ್ ಪ್ರಕಟಗೊಳ್ಳುತ್ತದೆ.
ಶರೀರಕ್ಕೆ ಕೊಲೆಸ್ಟ್ರಾಲ್ ಅಗತ್ಯವಾಗಿದೆ ಎನ್ನುವುದು ಗಮನಿಸಬೇಕಾದ ಮುಖ್ಯ ಅಂಶವಾಗಿದೆ. ಅದು ಜೀವಕೋಶಗಳ ರಚನೆ ಮತ್ತು ಹಾರ್ಮೋನ್‌ಗಳಿಗೆ ಅಗತ್ಯವಾಗಿರುವ ರಾಸಾಯನಿಕ ಸಂಯುಕ್ತವಾಗಿದೆ. ಆದರೆ ಶರೀರದಲ್ಲಿ ಈ ಕೊಲೆಸ್ಟ್ರಾಲ್ ಪ್ರಮಾಣಕ್ಕೂ ಒಂದು ಮಿತಿಯಿದೆ, ಈ ಮಿತಿಯನ್ನು ದಾಟಿದಾಗ ಮಾತ್ರ ಅದು ಶರೀರದ ಮೇಲೆ ದುಷ್ಪರಿಣಾಮಗಳನ್ನು ಬೀರಲು ಆರಂಭಿಸುತ್ತದೆ. ಅಧಿಕ ಕೊಲೆಸ್ಟ್ರಾಲ್ ಮಟ್ಟ ಇರುವವರು ಹೃದ್ರೋಗ, ಹೃದಯಾಘಾತ ಮತ್ತು ಬಾಹ್ಯ ಅಪಧಮನಿ ರೋಗ ಇವುಗಳಿಗೆ ತುತ್ತಾಗುವ ಹೆಚ್ಚಿನ ಅಪಾಯದಲ್ಲಿರುತ್ತಾರೆ.
ಅಧಿಕ ಕೊಲೆಸ್ಟ್ರಾಲ್ ಹೃದಯ ರಕ್ತನಾಳಗಳ ರೋಗಕ್ಕೆ ಕಾರಣವಾಗುತ್ತದೆ. ಕೊರೊನರಿ ಮತ್ತು ಕ್ಯಾರೊಟಿಡ್ ಅಪಧಮನಿಗಳು ಹೆಚ್ಚುವರಿ ಕೊಲೆಸ್ಟ್ರಾಲ್ ಸಂಗ್ರಹಗೊಳ್ಳಲು ಪ್ರಶಸ್ತ ತಾಣಗಳಾಗಿವೆ. ಇವುಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹಗೊಂಡಾಗ ಈ ರಕ್ತನಾಳಗಳು ಕಿರಿದಾಗಿ ರಕ್ತಸಂಚಾರಕ್ಕೆ ವ್ಯತ್ಯಯವುಂಟಾಗುತ್ತದೆ. ಕೊರೊನರಿ ಅಪಧಮನಿಯಲ್ಲಿ ಇಂತಹ ಬೆಳವಣಿಗೆಯುಂಟಾದಾಗ ಅದು ಆ್ಯಂಜಿನಾ ಅಥವಾ ಮಯೊಕಾರ್ಡಿಯಲ್ ಇನ್ಫಾರ್ಕ್ಷನ್‌ಗೆ ಕಾರಣವಾಗುತ್ತದೆ ಮತ್ತು ಕ್ಯಾರೊಟಿಡ್‌ಅಪಧಮನಿಗಳ ಪ್ರಕರಣದಲ್ಲಿ ಅದು ಆಘಾತಕ್ಕೆ ಕಾರಣವಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ತಾನಾಗಿಯೇ ಹೃದಯ ಬಡಿತದ ದರದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ, ಆದರೆ ಅದು ಹೃದಯದ ಅಪಧಮನಿಗಳಲ್ಲಿ ಸಂಗ್ರಹಗೊಂಡರೆ ಹೃದಯಾಘಾತಕ್ಕೆ ಕಾರಣವಾಗುತ್ತದೆ, ಹೃದಯವು ರಕ್ತವನ್ನು ಪಂಪ್‌ಮಾಡುವ ಪ್ರಕ್ರಿಯೆ ನಿಧಾನಗೊಳ್ಳುತ್ತದೆ ಮತ್ತು ಆಗ ಹೃದಯ ಬಡಿತದಲ್ಲಿ ಏರುಪೇರಾಗುತ್ತದೆ.
ಅನಾರೋಗ್ಯಕ್ಕೆ ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ಹೇಳುವುದಕ್ಕೂ ಕಾರಣವಿದೆ. ಅಧಿಕ ಕೊಲೆಸ್ಟ್ರಾಲ್ ದೀರ್ಘ ಕಾಲದಲ್ಲಿ ಹೃದಯ ಮತ್ತು ಮೆದುಳಿಗೆ ರಕ್ತವನ್ನು ಪೂರೈಸುವ ರಕ್ತನಾಳಗಳಲ್ಲಿ ತಡೆಗಳನ್ನು ಸೃಷ್ಟಿಸಬಹುದು. ಹೀಗಾಗಿ ಇದನ್ನು ತಡೆಯಲು ಆರಂಭಿಕ ಹಂತದಲ್ಲಿಯೇ ಚಿಕಿತ್ಸೆಯು ಅಗತ್ಯವಾಗಿದೆ.
ನಮ್ಮ ಶರೀರದಲ್ಲಿ ಒಟ್ಟು ಕೊಲೆಸ್ಟ್ರಾಲ್ ಪ್ರಮಾಣ 200 ಎಂಜಿ/ಡಿಎಲ್‌ಗಿಂತ ಕಡಿಮೆಯಿರಬೇಕು. ಎಲ್‌ಡಿಎಲ್ ಕೊಲೆಸ್ಟ್ರಾಲ್ 100 ಎಂಜಿ/ಡಿಎಲ್‌ಗಿಂತ ಕಡಿಮೆ ಮತ್ತು ಎಚ್‌ಡಿಎಲ್ ಕೊಲೆಸ್ಟ್ರಾಲ್ 40 ಎಂಜಿ/ಡಿಎಲ್‌ಗಿಂತ ಹೆಚ್ಚಿರಬೇಕು. ಕೊಲೆಸ್ಟ್ರಾಲ್ ಮುಖ್ಯವಾಗಿ ಯಕೃತ್ತಿನಲ್ಲಿರುವ ಕಿಣ್ವಗಳಿಂದ ಸಂಸ್ಕರಿಸಲ್ಪಡುತ್ತದೆ. ಆಹಾರದ ಮೂಲಕ ಭಾಗಶಃ ಕೊಲೆಸ್ಟ್ರಾಲ್ ನಮ್ಮ ಶರೀರವನ್ನು ಸೇರಿಕೊಳ್ಳುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರಿಸಲು ಕೊಲೆಸ್ಟ್ರಾಲ್ ಅಂಶಗಳು ಹೆಚ್ಚಿರುವ ಆಹಾರ ಗಳನ್ನು ಸೇವಿಸುವುದನ್ನು ಕಡಿಮೆಮಾಡಬೇಕು.