ಈ ದಶಕವನ್ನಾಳಲಿರುವ ‘ಫಿಫ್ತ್ ಎಸ್ಟೇಟ್’

Update: 2020-02-11 18:30 GMT

‘‘ನಾನು ಮತ್ತು ನನ್ನ ಜನರಷ್ಟೇ ಶ್ರೇಷ್ಠ, ನನ್ನ ಮತ್ತು ನನ್ನ ಜನರ ನಂಬಿಕಗಳೇ ಶ್ರೇಷ್ಠ, ಉಳಿದ ಎಲ್ಲವೂ ಕನಿಷ್ಠ’’ ಎನ್ನುವ ಧೋರಣೆಯನ್ನೇ ‘ಟ್ರೈಬಲ್ ಮನೋಧೋರಣೆ’ ಎಂದು ಸಮಾಜ ವಿಜ್ಞಾನಿ ಯುವಲ್ ನೋಹ್ ಹರಾರಿ ಅಭಿಪ್ರಾಯ ಪಡುತ್ತಾರೆ. ಮಾಡುವ ಊಟ ಮತ್ತು ಧರಿಸುವ ಬಟ್ಟೆಗಳ ಮೂಲಕ ಒಳ್ಳೆಯವರು ಮತ್ತು ಕೆಟ್ಟವರನ್ನು ಗುರುತಿಸುವ ಮನೋಧೋರಣೆಗಳಿಗೆ ಈ ಫಿಫ್ತ್ ಎಸ್ಟೇಟ್ ಸಾಕಷ್ಟು ಅವಕಾಶವನ್ನು ನೀಡಿದೆ, ನೀಡುತ್ತಿದೆ ಮತ್ತು ನೀಡುತ್ತದೆ. ಈ ಬಗ್ಗೆ ಎಚ್ಚೆತ್ತುಕೊಳ್ಳದೆ ಹೋದರೆ, ‘ಟ್ರೈಬಲ್ ಮನಸ್ಥಿತಿ’ಗೆ ಬಲಿಯಾಗಿ ಒಬ್ಬರನ್ನೊಬ್ಬರು ನಿರ್ನಾಮ ಮಾಡಿಕೊಳ್ಳುತ್ತೇವೆ.

2020ರ ದಶಕ ಮಾನವ ಕುಲದ ಇತಿಹಾಸದಲ್ಲಿ ಬಹಳ ಮುಖ್ಯವಾಗಲಿದೆ. ಇದೊಂದು ‘ಮಾಡು ಇಲ್ಲವೇ ಮಡಿ’ ದಶಕವಾಗಲಿದೆ ಎಂಬುದು ಅನೇಕ ತಜ್ಞರ ಅಭಿಪ್ರಾಯ. ಇದಕ್ಕೆ ಸಕಾರಣಗಳಿವೆ. 2018ರಲ್ಲಿ ತೀರಿಕೊಂಡ ಪ್ರಸಿದ್ಧ ವಿಜ್ಞಾನಿ ಸ್ಟೀಫನ್ ಹಾಕಿಂಗ್ ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಮನುಷ್ಯರಿಗೆ ಹೆಚ್ಚೆಂದರೆ ನೂರು ವರ್ಷ ಅವಕಾಶವಿರಬಹುದು ಎಂದು ಹೇಳಿದ್ದರು. 2006ರಲ್ಲಿ ಅವರು ‘‘ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಪ್ರಾಕೃತಿಕವಾಗಿ ಗೊಂದಲದ ಗೂಡಾಗಿರುವ ಮಾನವ ಜನಾಂಗ ಮುಂದಿನ ನೂರು ವರ್ಷಗಳಲ್ಲಿ ಬದುಕುಳಿಯುವ ಸಾಧ್ಯತೆಗಳು ಇವೆಯೇ? ನನಗಂತೂ ಉತ್ತರ ಗೊತ್ತಿಲ್ಲ. ಉತ್ತರ ಗೊತ್ತಿಲ್ಲದ ಕಾರಣಕ್ಕಾಗಿಯೇ ನಾನು ಈ ಪ್ರಶ್ನೆ ಕೇಳುತ್ತಿರುವೆ. ಜನರು ಇದರ ಕುರಿತು ಆಲೋಚಿಸಲಿ. ಭವಿಷ್ಯದಲ್ಲಿ ಅಪಾಯ ಕಾದಿದೆ ಎನ್ನುವುದರ ಅರಿವು ಅವರಿಗಿರಲಿ ಎನ್ನುವುದೇ ನನ್ನ ಪ್ರಶ್ನೆಯ ಉದ್ದೇಶ’’ ಎಂದಿದ್ದರು.

ಹಾಕಿಂಗ್‌ರ ಮಾತುಗಳು ಅರ್ಥವಾಗಬೇಕಿದ್ದರೆ, ನಮ್ಮ ಸುತ್ತಲಿನ ವಾಸ್ತವಗಳೆಡೆ ಒಮ್ಮೆ ನೋಡಬೇಕಾಗುತ್ತದೆ. ಹದಿನಾಲ್ಕು ವರ್ಷಗಳ ಹಿಂದೆ ಆಡಿದ್ದ ಅವರ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. ಅದೇ ಪ್ರಶ್ನೆಯನ್ನು ಇಂದು ಮತ್ತೆ ಕೇಳಿಕೊಂಡರೆ, ಪರಿಸ್ಥಿತಿ ಇನ್ನೂ ಸಂಕೀರ್ಣಗೊಂಡಿದೆ ಎನ್ನುವುದು ಅರಿವಾಗುತ್ತದೆ. ಗೊಂದಲ ಇನ್ನೂ ಹೆಚ್ಚಾಗಿದೆ. 2006ಕ್ಕೆ ಮೊದಲು ಸಾರ್ಸ್ ಸೋಂಕು ಜಗತನ್ನು ಕಾಡಿದ್ದರೆ, 2020ರಲ್ಲಿ ನೊವಲ್ ಕೊರೋನ ವೈರಸ್ ಕಾಡುತ್ತಿದೆ; ಈಗಾಗಲೇ ಇದರಿಂದ ಸಾಯುವವರ ಸಂಖ್ಯೆ ಸಾವಿರವನ್ನು ದಾಟುತ್ತ್ತಿದ್ದರೂ, ಪರಿಹಾರ ಮಾತ್ರ ಸ್ಪಷ್ಟವಾಗಿಲ್ಲ. ಜನರನ್ನು ಒಂದೇ ಜಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಡಿ, ಸೋಂಕು ಹರಡುವ ಸಾಧ್ಯತೆ ಇರುತ್ತದೆ ಎಂದು ಸರಕಾರಗಳು ಸೂಚಿಸುತ್ತಿದ್ದರೆ, ನಮ್ಮ ನೆರೆಯ ದೇಶವೊಂದರಲ್ಲಿ ದೇವರ ಮೆರವಣಿಗೆಯನ್ನು ಮಾಡಲೇಬೇಕೆಂದು ಹಠಕ್ಕೆ ಬಿದ್ದು ಸಾವಿರಾರು ಮಂದಿ ಒಂದೆಡೆ ದಿನವಿಡೀ ಸೇರಿದ್ದರು! ಆ ದೇಶದಲ್ಲಿ ಕೊರೋನ ವೈರಸ್‌ನ ಸೋಂಕಿಗೆ ಒಳಗಾಗಿರುವವರ ಸಂಖ್ಯೆ ಈಗಾಗಲೇ ಸಾವಿರವನ್ನು ದಾಟಿದೆ. ಹಾಕಿಂಗ್ ಹೇಳಿದ್ದ ಗೊಂದಲದ ಗೂಡು ಸನ್ನಿವೇಶ ಇದಾಗಿದೆ. ದೇವರ ಮೆರವಣಿಗೆಯ ಹಿಂದೆ ಕುತೂಹಲಕಾರಿ ಅಂಶವೊಂದಿದೆ. ನಮ್ಮ ಆಚರಣೆಯನ್ನು ಹತ್ತಿಕ್ಕುವ ಉದ್ದೇಶದಿಂದ ಸರಕಾರ ಈ ಕ್ರಮಕೈಗೊಂಡಿದೆ ಎಂದು ಸೇರಿದ್ದವರು ಭಾವಿಸಿದರು. ಏಕೆಂದರೆ ಇವರು ಆ ದೇಶದಲ್ಲಿ ಧಾರ್ಮಿಕವಾಗಿ ಅಲ್ಪಸಂಖ್ಯಾತರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಯಿತು. ಏನೇ ಆದರೂ ದೇವರ ಕಾರ್ಯ ನಿಲ್ಲಬಾರದು ಎಂದು ತೀಮಾರ್ನಿಸಿಕೊಂಡ ಇವರು ಕಾನೂನು ಮುರಿದು ಒಂದೆಡೆ ಸೇರಿದರು; ಆಚರಣೆಯ ನಂತರ ಗೆಲುವಿನ ಹೇಳಿಕೆಗಳನ್ನು, ಚಿತ್ರಗಳನ್ನು ಅದೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಧರ್ಮದ ಹೆಸರಿನಲ್ಲಿ ಸಮಸ್ಯೆ ಇನ್ನೊಂದಿಷ್ಟು ಸಂಕೀರ್ಣವಾಗದಿರುವಂತೆ ನೋಡಿಕೊಂಡ ಆ ದೇಶದ ಸರಕಾರ, ಈಗ ಮುಂದಿನ ದಿನಗಳನ್ನು ಆತಂಕದಿಂದ ಎದುರು ನೋಡುತ್ತಿದೆ; ಸೋಂಕಿನ ಹರಡುವಿಕೆ ಹೆಚ್ಚಾಗದಿರಲಿ ಎನ್ನುವ ನಿರೀಕ್ಷೆಯೊಂದಿಗೆ ಈಗ ಕಾಯುತ್ತಿದೆ.

ಮೇಲಿನ ಉದಾಹರಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮತ್ತೊಂದು ಬೆಳವಣಿಗೆ ನಮಗೆ ಕಾಣಸಿಗುತ್ತದೆ: ಸಾಮಾಜಿಕ ಜಾಲತಾಣಗಳು ಜನರನ್ನು ಪೂರ್ಣವಾಗಿ ಪ್ರಭಾವಿಸುವ ಸ್ಥಿತಿಯನ್ನು ತಲುಪಿವೆ. ಈ ಸಾಮಾಜಿಕ ಜಾಲತಾಣಗಳನ್ನು ಒಟ್ಟಾರೆಯಾಗಿ ‘ಫಿಫ್ತ್ ಎಸ್ಟೇಟ್’ ಎಂದು ಹೆಸರಿಸಲಾಗಿದೆ. ಇದರ ಪ್ರಭಾವದ ಮುಂದೆ ‘ಫೋರ್ತ್‌ ಎಸ್ಟೇಟ್’ ಅಂದರೆ ಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳು ಪೂರ್ಣವಾಗಿ ದುರ್ಬಲಗೊಂಡಿವೆ. ಒಂದು ಸಮೀಕ್ಷೆಯ ಪ್ರಕಾರ ಶೇ. 85ರಷ್ಟು ಯುವಜನರಿಗೆ(30ರ ಒಳಗಿನ ವಯಸ್ಸಿನವರು) ಅಂತರ್ಜಾಲವು ಸುದ್ದಿಯ ಮೂಲವಾಗಿದೆೆ; ಜನ ಸಾಮಾನ್ಯರಲ್ಲಿ ಶೇ. 50ರಷ್ಟು ಜನರು ಟಿವಿ ಮೂಲಕ ಸುದ್ದಿಯನ್ನು ಪಡೆದುಕೊಂಡರೆ, ಪತ್ರಿಕೆಗಳನ್ನು ಅವಲಂಬಿಸುವವರ ಸಂಖ್ಯೆ ಕೇವಲ ಶೇ. 15 ಮಾತ್ರವಿದೆ.

ಹಾಗಾಗಿ 2020ರ ದಶಕವನ್ನು ಫಿಫ್ತ್ ಎಸ್ಟೇಟ್ ದಶಕವೆಂದು ಕರೆಯಬೇಕೆಂದು ಸಾಮಾಜಿಕ ಸಂಶೋಧಕರಾದ ಚಿರ್ ಶರ್ಮಾ ವಾದಿಸುತ್ತಾರೆ. ಇವರ ಪ್ರಕಾರ ಫೇಸ್‌ಬುಕ್, ಗೂಗಲ್, ವಾಟ್ಸ್‌ಆ್ಯಪ್, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳು 2030ರ ವೇಳೆಗೆ ಸಂಪೂರ್ಣವಾಗಿ ಜನರ ಸುದ್ದಿಯ ಮೂಲಗಳಾಗಲಿವೆ; ಅವರ ಬದುಕಿನಲ್ಲಿ ನಿರ್ಧಾರಕ ಪಾತ್ರವನ್ನು ನಿರ್ವಹಿಸಲಿವೆ. ಕಳೆದ ಮೂರು ಶತಮಾನಗಳಿಂದ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತಾ ಬಂದಿದ್ದ ಸ್ವತಂತ್ರ ಮಾಧ್ಯಮ ಮನುಷ್ಯಕುಲದ ಅನೇಕ ಸಮಸ್ಯೆಗಳ ನಿವಾರಣೆಗೆ ಕಾರಣವಾಗಿತ್ತು. ಪ್ರಜಾಪ್ರಭುತ್ವ ಮೌಲ್ಯಗಳ ಪೋಷಣೆಯನ್ನು ಮಾಡುತ್ತಾ, ಮಹಾಯುದ್ಧಗಳ ನಡುವೆ, ಅಣು ಬಾಂಬ್‌ಗಳ ಭಯದ ನೆರಳಿನ ನಡುವೆಯೇ ಮನುಷ್ಯನ ಬದುಕನ್ನು ಸಕಾರಾತ್ಮಕವಾಗಿ ಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿತ್ತು.

ಹಾಗೆ ನೋಡಿದರೆ, ಪತ್ರಿಕೆಗಳಿಗೆ ‘ಫೋರ್ತ್‌ ಎಸ್ಟೇಟ್’ ಎಂಬ ಹೆಸರು ದೊರೆತಿದ್ದೇ ಇಂಗ್ಲೆಂಡಿನ ಸಂಸತ್ತಿನ ಭಾಷಣವೊಂದರಲ್ಲಿ! 1787ರಲ್ಲಿ ಇಂಗ್ಲೆಂಡಿನ ಎಂ.ಪಿ. ಯಾಗಿದ್ದ ಎಡ್ಮಂಡ್ ಬ್ರೂಕ್ ಮಾತನಾಡುತ್ತಾ ‘‘ನಮ್ಮ ಸಮಾಜದ ಮೂರು ಭಾಗಗಳಾದ ರಾಣಿ(ಆಡಳಿತ), ಶಾಸಕರು(ಶಾಸಕಾಂಗ) ಮತ್ತು ಜನ ಸಾಮಾನ್ಯರು(ಮತದಾರರು) ಜೊತೆಗೆ ಇರುವ ಪತ್ರಿಕೆಗಳು ನಾಲ್ಕನೇ ಅಂಗವಾಗಿವೆ(ಫೋರ್ತ್‌ ಎಸ್ಟೇಟ್)’’ ಎಂದರೆಂದು ದಾಖಲೆಗಳಿವೆ. ಇದೇ ಇಂಗ್ಲೆಂಡಿನ ಪತ್ರಿಕೆಗಳ ಇತಿಹಾಸ ಮಾಧ್ಯಮಗಳ ಸ್ವಂತ್ರ ಇರುವಿಕೆಯ ಇತಿಹಾಸವೂ ಆಗಿದೆ.

ಸೌದಿ ಅರೇಬಿಯಾದ ತತ್ವಶಾಸ್ತ್ರಜ್ಞ ನಾಯಿಫ್ ಅಲ್ ರೌದಾನ್ ‘‘ಫಿಫ್ತ್ ಎಸ್ಟೇಟ್ ಕಟ್ಟುವ ಕಾರ್ಯವನ್ನು ಅನೇಕ ಸಮಾಜಗಳಲ್ಲಿ ಯಶಸ್ವಿಯಾಗಿ ನಿರ್ವಹಿಸಲಿದೆ. ಧಾರ್ಮಿಕ ಮುಂಖಡರು, ಆಳುವ ಅರಸರು/ರಾಜಕಾರಣಿಗಳು, ಜನಸಾಮಾನ್ಯರು ಮತ್ತು ಮಾಧ್ಯಮಗಳು ಇರುವ ನಾಲ್ಕು ವ್ಯವಸ್ಥೆಗಳ ನಡುವೆ ಸಾಮಾಜಿಕ ಜಾಲತಾಣಗಳಿರುವ ಈ ಐದನೇ ವ್ಯವಸ್ಥೆಯ ಪ್ರವೇಶ ಆರೋಗ್ಯಕರ ಬೆಳವಣಿಗೆ’’ ಎನ್ನುತ್ತಾರೆ. ವೃತ್ತಿಯಿಂದ ನರಶಸ್ತ್ರ ಚಿಕಿತ್ಸಕರಾದ ನಯಾಫ್ ಮನುಷ್ಯನ ನರಮಂಡಲದ ಅಧ್ಯಯನವನ್ನು ತತ್ವಶಾಸ್ತ್ರದೊಂದಿಗೆ ಬೆಸೆಯುವ ಕಾರ್ಯವನ್ನು ಮಾಡುತ್ತಿರುವವರು. ಕಳೆದ ದಶಕದಲ್ಲಿ ಅರಬ್ ಪ್ರಪಂಚದಲ್ಲಿ ನಡೆದ ಅನೇಕ ರಾಜಕೀಯ ಬದಲಾವಣೆಗಳಿಗೆ(ಅರಬ್ ಸ್ಪ್ರಿಂಗ್ಸ್) ಸಾಮಾಜಿಕ ಜಾಲತಾಣಗಳು ಪ್ರೇರಕ ಶಕ್ತಿಗಳಾಗಿ ಕಾರ್ಯನಿರ್ವಹಿಸಿದ ಉದಾಹರಣೆಗಳಿವೆ. ಆದರೆ ಇವರ ಆಶಾವಾದವನ್ನು ಪೂರ್ಣವಾಗಿ ಒಪ್ಪಿಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ.

ಮೇಲೆ ನಾವು ತೆಗೆದುಕೊಂಡ ದೇವರ ಮೆರವಣಿಗೆಯ ಉದಾಹರಣೆ ನಯಾಫ್ ಅವರ ಆಶಾವಾದವನ್ನು ಹುಸಿಗೊಳಿಸುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಲು ಇನ್ನೊಂದಿಷ್ಟು ಪೂರಕ ಮಾಹಿತಿ ನಮಗೆ ಬೇಕಿದೆ. ಕೊರೋನ ವೈರಸ್‌ನಂತಹ ಸೋಂಕುಗಳನ್ನು ಹರಡದಂತೆ ತಡೆಯಲು ವೈದ್ಯ ವಿಜ್ಞಾನ ರೀತಿ ನೀತಿಗಳನ್ನು ರೂಪಿಸಿರುತ್ತದೆ. ಸೋಂಕು ಕ್ಷೇತ್ರದಲ್ಲಿ ಸಾಕಷ್ಟು ಪರಿಶ್ರಮವಿರುವ ವೈದ್ಯ ವಿಜ್ಞಾನಿಗಳು ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ ವಿಶ್ವ ಆರೋಗ್ಯ ಸಂಸ್ಥೆಯ ನಾಯಕತ್ವದಲ್ಲಿ ಎಲ್ಲರೂ ಅನುಸರಿಸಬೇಕಿರುವ ನಿರ್ದಿಷ್ಟ ನಿಯಮಗಳನ್ನು ರೂಪಿಸಿರುತ್ತಾರೆ; ಇದನ್ನು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್(ಎಸ್.ಒ.ಪಿ.) ಎನ್ನುತ್ತಾರೆ. ಈ ಎಲ್ಲಾ ಕ್ರಮಗಳು ವೈಜ್ಞಾನಿಕ ಚಿಂತನೆಗೆ ಒಡ್ಡಿಕೊಂಡಿರುತ್ತವೆ ಮತ್ತು ಯಾವುದೇ ಸಂದರ್ಭದಲ್ಲೂ ಮರುಪರಿಶೀಲನೆಗೆ ಮುಕ್ತವಾಗಿರುತ್ತವೆ; ಯಾವುದೇ ನಂಬಿಕೆಯ ಅಂಶ ಇಲ್ಲಿ ಗೌಣವಾಗಿರುತ್ತದೆ. ವಿಶ್ವದ ಆರೋಗ್ಯ ಸಂಸ್ಥೆಯ ಸದಸ್ಯ ದೇಶವಾಗಿರುವ ಯಾವುದೇ ದೇಶದ ಸರಕಾರ ಇದನ್ನು ಅನುಸರಿಸುವ ಹೊಣೆಗಾರಿಕೆಯನ್ನು ಹೊಂದಿರುತ್ತದೆ; ಇಂತಹ ಅನುಸರಣೆಯ ಫಲದಿಂದಲೇ ಇಂದು ಮನುಷ್ಯನನ್ನು ಕಾಡುತ್ತಿದ್ದ ಅನೇಕ ರೋಗಗಳನ್ನು ನಿವಾರಿಸಿಕೊಳ್ಳಲು ಅವಕಾಶವಾಗಿದೆ. ಕೊರೋನ ವೈರಸ್ ಅನ್ನು ನಿಯಂತ್ರಿಸಲು ಇಂತಹ ಕ್ರಮದ ಅಳವಡಿಕೆ ಅನಿವಾರ್ಯ. ಇಂತಹ ಸಂದರ್ಭಗಳಲ್ಲಿ ಮಾಧ್ಯಮಗಳು ಎಸ್.ಒ.ಪಿ.ಯ ಅನಸರಣೆಯ ಬೆಂಬಲಕ್ಕೆ ನಿಲ್ಲುತ್ತವೆ; ಇದನ್ನೇ ಪತ್ರಿಕಾ ಧರ್ಮ(ಮಾಧ್ಯಮದ ಎಸ್.ಒ.ಪಿ.) ಎನ್ನುತ್ತೇವೆ.

ಇಷ್ಟಾಗಿಯೂ, ಸಮುದಾಯದ ಆರೋಗ್ಯದ ನಿರ್ವಹಣೆ ವಿಷಯ ಪೂರ್ಣವಾಗಿ ಪ್ರಶ್ನಾತೀತವಾಗಿಯೇನೂ ಉಳಿದಿಲ್ಲ. ಯಾವುದೇ ದೇಶದಲ್ಲಿ ಸೋಂಕು ಹರಡ ತೊಡಗಿದರೆ ಅದು ಶತ್ರು ದೇಶದ ಕುಯುಕ್ತಿಯ ಕೆಲಸವೇ ಇರಬೇಕೆಂಬ ಅನುಮಾನಗಳು ಇದ್ದೇ ಇರುತ್ತವೆ. ಶೀತಲ ಸಮರದ ಕಾಲಘಟ್ಟದಲ್ಲಿ ಶತ್ರು ದೇಶದ ಕಾಣದ ಕೈಗಳ ಪಾತ್ರದ ಕುರಿತು ಸಾಕಷ್ಟು ಚರ್ಚೆಗಳು ಅಧಿಕೃತವಾಗಿ ನಡೆದ ಉದಾಹರಣೆಗಳೂ ಇವೆ. ಆದರೆ ಈ ಎಲ್ಲಾ ಮಿತಿಗಳ ನಡುವೆ ಫೋರ್ತ್‌ ಎಸ್ಟೇಟ್‌ನ ಬೆಂಬಲದಿಂದ (ದಿನಪತ್ರಿಕೆಗಳಷ್ಟೇ ಅಲ್ಲದೆ ವಿವಿಧ ವಿಜ್ಞಾನಗಳಿಗೆ ಸಂಬಂಧಿಸಿದ ಸ್ವತಂತ್ರ ವೃತ್ತಿಯಾಧಾರಿತ ಪತ್ರಿಕೆಗಳಾದ ಜರ್ನಲ್‌ಗಳು ಇತ್ಯಾದಿ) ದ್ರೋಹದ ಸಿದ್ಧಾಂತಗಳಾಚೆಗೆ ಆಲೋಚಿಸುವುದನ್ನು ರೂಢಿಸಿಕೊಂಡು, ಒಟ್ಟಾರೆ ಮಾನವ ಸಮಾಜದ ಉನ್ನತಿಗೆ ಬೇಕಾದ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಾ ಬರಲಾಗಿದೆ.

ಆದರೆ ಫಿಫ್ತ್ ಎಸ್ಟೇಟ್ ಈ ಕಾರ್ಯವನ್ನು ಮಾಡುತ್ತಿಲ್ಲ. ಇದು ಮನುಷ್ಯನಲ್ಲಿ ಇತ್ತೀಚಿನ ದಿನಗಳಲ್ಲಿ ಇಲ್ಲವಾಗುತ್ತಿದ್ದ ಟ್ರೈಬಲ್ ಮನೋಧೋರಣೆಗಳನ್ನು ಮತ್ತೆ ಮುನ್ನ್ನೆಲೆಗೆ ತರುತ್ತಿದೆ. ‘‘ನಾನು ಮತ್ತು ನನ್ನ ಜನರಷ್ಟೇ ಶ್ರೇಷ್ಠ, ನನ್ನ ಮತ್ತು ನನ್ನ ಜನರ ನಂಬಿಕಗಳೇ ಶ್ರೇಷ್ಠ, ಉಳಿದ ಎಲ್ಲವೂ ಕನಿಷ್ಠ’’ ಎನ್ನುವ ಧೋರಣೆಯನ್ನೇ ‘ಟ್ರೈಬಲ್ ಮನೋಧೋರಣೆ’ ಎಂದು ಸಮಾಜ ವಿಜ್ಞಾನಿ ಯುವಲ್ ನೋಹ್ ಹರಾರಿ ಅಭಿಪ್ರಾಯ ಪಡುತ್ತಾರೆ. ಮಾಡುವ ಊಟ ಮತ್ತು ಧರಿಸುವ ಬಟ್ಟೆಗಳ ಮೂಲಕ ಒಳ್ಳೆಯವರು ಮತ್ತು ಕೆಟ್ಟವರನ್ನು ಗುರುತಿಸುವ ಮನೋಧೋರಣೆಗಳಿಗೆ ಈ ಫಿಫ್ತ್ ಎಸ್ಟೇಟ್ ಸಾಕಷ್ಟು ಅವಕಾಶವನ್ನು ನೀಡಿದೆ, ನೀಡುತ್ತಿದೆ ಮತ್ತು ನೀಡುತ್ತದೆ. ಮುಂದಿನ ಒಂದೆರಡು ವರ್ಷಗಳೊಳಗೆ ನಾವು ಈ ಫಿಫ್ತ್ ಎಸ್ಟೇಟ್‌ನ ಬಳಕೆ ಕುರಿತು ಎಸ್.ಒ.ಪಿಯನ್ನು ರೂಪಿಸಿಕೊಳ್ಳದೆ ಹೋದರೆ, ‘ಟ್ರೈಬಲ್ ಮನಸ್ಥಿತಿ’ಗೆ ಬಲಿಯಾಗಿ ಒಬ್ಬರನ್ನೊಬ್ಬರು ನಿರ್ನಾಮ ಮಾಡಿಕೊಳ್ಳುತ್ತೇವೆ.

ಈ ವರೆಗೆ ಪ್ರಮುಖ ಪಾತ್ರ ನಿರ್ವಹಿಸಿದ ಫೋರ್ತ್‌ ಎಸ್ಟೇಟ್ ವ್ಯವಸ್ಥೆ ಶತಮಾನಗಳ ಅಂತರದಲ್ಲಿ ತನ್ನ ಎಸ್.ಒ.ಪಿ.ಯನ್ನು ರೂಪಿಸಿಕೊಂಡಿತ್ತು. ಆದರೆ ಫಿಫ್ತ್ ಎಸ್ಟೇಟ್ ವಿಚಾರದಲ್ಲಿ ನಮ್ಮ ಬಳಿ ದಶಕದಷ್ಟು ಸಮಯಾವಕಾಶ ಕೂಡ ಇಲ್ಲ. ಈ ಕುರಿತು ನಾವು ನೀವು ಅರ್ಥಮಾಡಿಕೊಂಡು, ಸಂಸತ್ತಿನಿಂದ ಆರಂಭಿಸಿ ನಮ್ಮ ಊರಿನ ಪಂಚಾಯತ್‌ವರೆಗೆ ಚರ್ಚಿಸಿ ಎಸ್.ಒ.ಪಿ.ಯನ್ನು ರೂಪಿಸಿಕೊಳ್ಳಬೇಕಿದೆ.

Writer - ಸದಾನಂದ ಆರ್.

contributor

Editor - ಸದಾನಂದ ಆರ್.

contributor

Similar News

ಜಗದಗಲ
ಜಗ ದಗಲ