‘ಮಧುಮೇಹ’ದ ಜೊತೆಗೆ ಸಹಬಾಳ್ವೆಯನ್ನು ಕಲಿಸಿಕೊಡುವ ಕೃತಿ

Update: 2020-02-14 11:35 GMT

ಯಾವುದೇ ಸಿಹಿ ಸುದ್ದಿಗಳನ್ನು ಬಾಯಿಗೆ ಸಕ್ಕರೆ ಹಾಕಿ ಸಂಭ್ರಮಿಸುವ ದೇಶ ನಮ್ಮದು. ನಮ್ಮ ಖುಷಿ, ಸಂತೋಷ, ಹಬ್ಬ, ಹರಿದಿನಗಳಲ್ಲಿ ಸಕ್ಕರೆಯ ಪಾತ್ರ ಬಹುದೊಡ್ಡದು. ಆದರೆ ಇಂದಿನ ದಿನಗಳಲ್ಲಿ ಸಕ್ಕರೆಗೆ ಹೆದರುತ್ತಾ ಬದುಕುತ್ತಿರುವ ಬಹುದೊಡ್ಡ ಸಮುದಾಯವಿದೆ. ಯಾರಿಗಾದರೂ ಸಕ್ಕರೆ ಕಾಯಿಲೆ ಬಂತೆಂದರೆ ಅವರ ಬದುಕಲ್ಲಿ ಕಹಿದಿನಗಳು ಆರಂಭವಾಯಿತು ಎಂದೇ ಅರ್ಥ. ಭಾರತದ ಅಗೋಚರ ಶತ್ರುವಾಗಿ ಈ ಸಕ್ಕರೆ ಕಾಯಿಲೆ ಕಾಡುತ್ತಿದೆ. ಯಾವ ಸಕ್ಕರೆ ನಮ್ಮ ಬದುಕಲ್ಲಿ ಸಿಹಿಯನ್ನು ಒದಗಿಸಬೇಕಿತ್ತೋ ಅದೇ ಸಕ್ಕರೆ ನಮ್ಮನ್ನು ಅನಾರೋಗ್ಯ, ಸಾವಿನೆಡೆಗೆ ಕೊಂಡೊಯ್ಯುವ ಮಟ್ಟಕ್ಕೆ ಸಮಸ್ಯೆಯಾಗಿ ಕಾಡುತ್ತಿದೆ. ಸಕ್ಕರೆ ಕಾಯಿಲೆ ಬಂತೆಂದರೆ ಸಾಕು, ರೋಗಿ ಸಂಪೂರ್ಣ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ. ತನ್ನ ನಾಲಗೆ ಚಪಲ ಮತ್ತು ಕಾಯಿಲೆ ಇದರ ನಡುವಿನ ಸಂಘರ್ಷದಲ್ಲಿ ರೋಗಿ ಹಣ್ಣಾಗಿ ಬಿಡುತ್ತಾನೆ. ಇಂತಹ ಸಕ್ಕರೆ ಕಾಯಿಲೆಯನ್ನು ಹೇಗೆ ಎದುರಿಸುವುದು ಎನ್ನುವ ನಿಟ್ಟಿನಲ್ಲಿ ಡಾ. ವಿ. ಲಕ್ಷ್ಮೀನಾರಾಯಣ್, ಡಾ. ಸೂರಜ್ ತೇಜಸ್ವಿ ಬರೆದಿರುವ ‘ಮಧುಮೇಹ -ಭಾರತದ ಅಗೋಚರ ಶತ್ರು’ ಒಂದು ಅತ್ಯಮೂಲ್ಯ ವೈದ್ಯಕೀಯ ಕೃತಿಯಾಗಿದೆ. ಇದೊಂದು ಮಧುಮೇಹ ಕುರಿತ ಸಮಗ್ರ ಕೈ ಪಿಡಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಧುಮೇಹದಿಂದಾಗುವ ಹತ್ತು ತೊಡಕುಗಳು ಮತ್ತು ಮೂರು ನಿವಾರೋಣೋಪಾಯಗಳನ್ನು ತಿಳಿಸಿಕೊಡುವ ಬೃಹತ್ ಕೃತಿ ಕೂಡ ಹೌದು. ವಿಶ್ವದಲ್ಲೇ ಭಾರತ ಸಕ್ಕರೆ ಕಾಯಿಲೆಯ ಬೃಹತ್ ಗೋದಾಮು. ಇಲ್ಲಿ 69.2 ಮಿಲಿಯನ್ ಮಧುಮೇಹಿಗಳಿದ್ದಾರೆ. ಇದಕ್ಕೂ ಹೆಚ್ಚಾಗಿ 77.4 ಮಿಲಿಯನ್‌ನಷ್ಟು ಜನರಲ್ಲಿ ಪೂರ್ವಭಾವಿ ಮಧುಮೇಹವಿದೆ ಎಂದು ಅಧ್ಯಯನ ಹೇಳುತ್ತದೆ. ಹಲವರು ಮಧುಮೇಹದ ಕುರಿತಂತೆ ಸೂಕ್ತ ಮಾಹಿತಿಗಳಿಲ್ಲದೆ ಅಪಾಯಗಳನ್ನು ಎದುರು ಗೊಳ್ಳುತ್ತಿದ್ದಾರೆ. ಈ ಕೃತಿ ನಿಮಗೆ ನಿಮ್ಮ ಆರೋಗ್ಯದ ಕುರಿತಂತೆ ಹತ್ತು ಹಲವು ಮಾಹಿತಿಗಳನ್ನು ನೀಡುವುದು ಮಾತ್ರವಲ್ಲ, ರೋಗದ ಕುರಿತಂತೆ ನಿಮಗಿರುವ ಅಜ್ಞಾನವನ್ನೂ ತೊಲಗಿಸುತ್ತದೆ. ಆತ್ಮವಿಶ್ವಾಸದಿಂದ ರೋಗ ಎದುರಿಸಿ ಆರೋಗ್ಯವಂತರಾಗಿ ಬದುಕುವುದನ್ನು ಕಲಿಸುತ್ತದೆ.

ಈ ಕೃತಿಯಲ್ಲಿ ಒಟ್ಟು ಮೂರು ಅಧ್ಯಾಯಗಳಿವೆ. ಮೊದಲ ಅಧ್ಯಾಯದ ಹೆಸರು ‘ಮಧುಮೇಹದ ಆಧಾರ ತತ್ವಗಳು’. ಮಧುಮೇಹದ ಇತಿಹಾಸವನ್ನು ಇದು ಹೇಳುತ್ತದೆ. ಸಕ್ಕರೆ ನಮ್ಮ ದೇಹದಲ್ಲಿ ಮಾಡುವ ಪರಿಣಾಮಗಳು, ಸಕ್ಕರೆ ರೋಗದ ವಿವರಗಳು, ಲಕ್ಷಣಗಳು, ಅದರಲ್ಲಿರುವ ವಿಧಗಳು, ಮಕ್ಕಳಲ್ಲಿ ಸಕ್ಕರೆ ರೋಗ...ಇತ್ಯಾದಿ ವಿವರಗಳನ್ನು ಈ ಅಧ್ಯಾಯ ನೀಡುತ್ತದೆ. ಎರಡನೆಯ ಅಧ್ಯಾಯ ‘ಮಧುಮೇಹದಿಂದ ಉದ್ಭವಿಸುವ ತೊಡಕುಗಳು’. ಅದು ನಮ್ಮ ಮೇಲೆ ಬೀರುವ ಬೇರೆ ಬೇರೆ ಪರಿಣಾಮಗಳನ್ನು ವಿವರವಾಗಿ ಈ ಅಧ್ಯಾಯ ತೆರೆದಿಡುತ್ತದೆ. ಹಲ್ಲು, ಕಣ್ಣು, ಹೃದಯ, ಕಿಡ್ನಿ...ಹೀಗೆ ಬೇರೆ ಬೇರೆ ಅವಯವಗಳಿಗೆ ಅದು ಹಾನಿ ಮಾಡುವ ಅಪಾಯಗಳನ್ನು ತಿಳಿಸುತ್ತದೆ. ಮೂರನೇ ಅಧ್ಯಾಯ ‘ಮಧುಮೇಹಕ್ಕೆ ಪರಿಹಾರಗಳು’. ಮೂರು ರೀತಿಯ ಪರಿಹಾರವನ್ನು ಪ್ರಮುಖವಾಗಿ ಇದು ಎತ್ತಿ ಹಿಡಿಯುತ್ತದೆ. ಪೌಷ್ಟಿಕ ಆಹಾರ, ಔಷಧೋಪಚಾರ, ವ್ಯಾಯಾಮ ಮತ್ತು ಯೋಗ. ಮಾನಸಿಕ ಒತ್ತಡಗಳನ್ನು ಮೀರಿ, ಮಧುಮೇಹದೊಂದಿಗೆ ಸಹಬಾಳ್ವೆ ಮಾಡುವ ಬಗೆಯನ್ನು ಇದು ವಿವರಿಸುತ್ತದೆ. ಇದು ಮಧುಮೇಹಿ ರೋಗಿಗಳಿಗೆ ಮಾತ್ರವಲ್ಲ, ಮನುಷ್ಯನ ಆರೋಗ್ಯದ ಕುರಿತಂತೆ ಕಾಳಜಿಯಿರುವ ಪ್ರತಿಯೊಬ್ಬರು ತಮ್ಮ ಜೊತೆಗೆ ಇರಿಸಿಕೊಳ್ಳಬೇಕಾದ ಕೃತಿಯಾಗಿದೆ.

ಸಪ್ನ ಬುಕ್ ಹೌಸ್ ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 313. ಮುಖಬೆಲೆ 230 ರೂಪಾಯಿ. ಆಸಕ್ತರು ಬೆಂಗಳೂರಿನ 40114455 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News