ಕೋಳಿ ಮಾಂಸದಲ್ಲಿ ‘ಕೊರೋನಾ’ ಇದೆಯೇ ?: ವದಂತಿಗಳ ಬಗ್ಗೆ ರಾಜ್ಯ ಸರಕಾರ ಹೇಳಿದ್ದು ಹೀಗೆ...

Update: 2020-02-15 15:04 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ. 15: ಇತ್ತೀಚೆಗೆ ಚೀನಾ ದೇಶದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್ ಸೋಂಕು ಕೋಳಿಗಳಿಂದ ಹರಡುತ್ತದೆ ಎಂಬ ವದಂತಿ ಹಾಗೂ ತಪ್ಪು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಈ ವದಂತಿಗೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ ಸರಕಾರ ಸ್ಪಷ್ಟನೆ ನೀಡಿದ್ದು, ಕೋಳಿ ಮಾಂಸದಲ್ಲಿ ಕೊರೋನಾ ಸೋಂಕು ಇಲ್ಲ ಎಂದು ತಿಳಿಸಿದೆ.  

ನಮ್ಮ ದೇಶದಲ್ಲಿ ಕೋಳಿಗಳಿಗೆ ಕೊರೋನಾ ವೈರಾಣು ಸೋಂಕು ಕಾಣಿಸಿಕೊಂಡ ಬಗ್ಗೆ ಇದುವರೆಗೆ ಯಾವುದೇ ವರದಿಗಳಿಲ್ಲ ಹಾಗೂ ಈ ವೈರಾಣು ಸೋಂಕು ಹರಡುವಿಕೆಯಲ್ಲಿ ಕೋಳಿಗಳ ಪಾತ್ರವೇನೂ ಇಲ್ಲ. ಸೋಂಕು-ಪೀಡಿತ ಮನುಷ್ಯರ ಸಂಪರ್ಕದಿಂದ ಮಾತ್ರ ಈ ಸೋಂಕು ಇತರರಿಗೆ ಹರಡುತ್ತದೆ ಎಂದು ಸ್ಪಷ್ಟನೆ ನೀಡಿದೆ.

ಸಾಮಾನ್ಯವಾಗಿ ಕೋಳಿ ಮಾಂಸವನ್ನು 100 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಬೇಯಿಸಲಾಗುತ್ತದೆ. ಈ ಉಷ್ಣತೆಯಲ್ಲಿ ಯಾವುದೇ ವೈರಾಣುಗಳು ಬದುಕುಳಿಯಲು ಸಾಧ್ಯವಿಲ್ಲ. ಆದುದರಿಂದ, ಸಾರ್ವಜನಿಕರು ಕೊರೋನಾ ವೈರಾಣು ಸೋಂಕು ಕೋಳಿಗಳಿಂದ ಹರಡುತ್ತದೆ ಎಂಬ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಲಾಗಿದೆ. ಈ ರೀತಿಯ ವದಂತಿಗಳನ್ನು ಹರಡುವುದರಿಂದ ಸಾರ್ವಜನಿಕ ಉತ್ತಮ ಪೌಷ್ಟಿಕಾಂಶ ನೀಡುವ ನೀಡುವ ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಯ ಮೇಲೆ ಗಣನೀಯ ದುಷ್ಪರಿಣಾಮಗಳಾಗುತ್ತವೆ. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಬಾಣಂತಿಯರು, ಪೋಷಕಾಂಶ ಕೊರತೆಯಿಂದ ನರಳುತ್ತಿರುವ ಹಿನ್ನೆಲೆಯಲ್ಲಿ ಇಂತಹ ವದಂತಿಗಳು ಸಾಮಾಜಿಕ ಸ್ವಾಸ್ಥ್ಯವನ್ನು ಮತ್ತಷ್ಟು ಹದಗೆಡಿಸುತ್ತಿವೆ ಎಂದು ತಿಳಿಸಲಾಗಿದೆ.

ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಕೋಳಿ ಮಾಂಸ ಮತ್ತು ಮೊಟ್ಟೆ ಉತ್ತಮ ಪ್ರೊಟೀನ್ ಪೂರೈಸುವ ಆಹಾರವಾಗಿವೆ. ಯಾರೂ ಇಂತಹ ವದಂತಿಗಳನ್ನು ಹರಡಬಾರದು ಎಂದು ಪಶು ಸಂಗೋಪನಾ ಮತ್ತು ಮೀನುಗಾರಿಕಾ ಇಲಾಖೆ ಸರಕಾರದ ಕಾರ್ಯದರ್ಶಿ ಎ.ಬಿ. ಇಬ್ರಾಹೀಂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-23418075 ಮತ್ತು 23416431, ಸಹಾಯವಾಣಿ: 1800 425 012 ಹಾಗೂ 2341 7100 ಅನ್ನು ಸಂಪರ್ಕಿಸಬಹುದು ಎಂದು ಎ.ಬಿ ಇಬ್ರಾಹೀಂ ಅವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News