ಕನ್ನಡಕಧಾರಿಯ ತಲ್ಲಣಗಳು

Update: 2020-02-15 17:49 GMT

ನಾನು ಆ ದಿನದ ಕೊನೆಯ ತರಗತಿ ಕೆಮೆಸ್ಟ್ರಿ ಲ್ಯಾಬ್‌ನಲ್ಲಿದ್ದೆ. ಎಸೆಸೆಲ್ಸಿಗೆ ಒಳ್ಳೆಯ ಮಾರ್ಕ್ ತಗೊಂಡಿದ್ದ ತಪ್ಪಿಗೆ ವಿಜ್ಞಾನದ ಸಹಜ ಆಸೆ ಹುಟ್ಟಿ ಸೇರ್ಪೆಡೆಗೊಂಡು ಇಂಗ್ಲಿಷ್ ಕೈ ಹಿಡಿಯದೆ ಪರದಾಡಬೇಕಾಗಿತ್ತು. ಬಹುಶಃ ಅದು ಫೀನೈಲ್ ಟೆಸ್ಟ್ ಇರಬೇಕು. ಅಷ್ಟೂ ನೆನಪಿರುತ್ತಿದ್ದರೆ ನಾನು ಯಾಕೆ ರಸಾಯನ ಶಾಸ್ತ್ರ ಪಿಯುಸಿಯಲ್ಲಿ ಕಷ್ಟಪಟ್ಟು ಪಾಸ್ ಮಾಡಿಕೊಳ್ಳಬೇಕಾಗಿತ್ತು. ಕೊಟ್ಟಿದ್ದ ಹರಳುಗಳ ಸ್ಯಾಂಪಲ್ ಪಡೆದು ಅದು ಯಾವ ರಾಸಯನಿಕವೆಂದು ಕಂಡು ಹಿಡಿಯಬೇಕಿದ್ದ ಪೇಚಿಗೆ ನಾವು ಸಿಲುಕುತ್ತಿದ್ದೆವು. ಆ ಕತ್ತಲ ಕೊನೆಯ ಕೊಠಡಿ ನಿಜಕ್ಕೂ ಭಯ ಹುಟ್ಟಿಸಿ ಬಿಡುತ್ತಿತ್ತು. ಸದಾ ಕಿಟಕಿ ಬಾಗಿಲು ಮುಚ್ಚಿರುತ್ತಿದ್ದ ಆ ಕೊಠಡಿಯಲ್ಲಿ ಮಿಣಿ ಮಿಣಿ ಉರಿಯುವ ಬಲ್ಬ್ ಕಂಡರೆ ಆಸ್ಪತ್ರೆಯ ತೀವ್ರ ನಿಗಾ ಘಟಕದ ನಿಶ್ಯಬ್ದ ಅಲ್ಲಿ ನೆಲೆಸುತ್ತಿತ್ತು. ಮೊದಲೇ ವಿಜ್ಞಾನ ವಿದ್ಯಾರ್ಥಿಗಳೆಂದರೆ ಬಾಯಿ ಬಾರದವರು, ಕೊಟ್ಟ ಕೆಲಸ ಚಾಚೂ ತಪ್ಪದೆ ಮಾಡುವವರೆಂಬ ಮೂದಲಿಕೆ. ಅಪ್ಪಟ ವಿಜ್ಞಾನಿಗಳ ಸಂಪ್ರದಾಯ ಸಂಸ್ಕಾರಗಳ ಜಿದ್ದಿಗೆ ಬಿದ್ದು ನಾವು ಸುಯಿಲೆತ್ತಲೂ ಆಗದಷ್ಟು ಕೆಲಸಗಳನ್ನು ಮೈ ಮೇಲೆಳೆದುಕೊಂಡು ವಿಲವಿಲ ಒದ್ದಾಡುತ್ತಿದ್ದೆವು. ನನ್ನ ಪ್ರಯೋಗಕ್ಕೆಂದು ಹೈಡ್ರೋಕ್ಲೋರಿಕ್ ಆಸಿಡನ್ನು ದುರ್ಬಲಗೊಳಿಸಿ ಏನೇನೋ ಕಲಸುಮೇಲೋಗರ ಮಾಡಿಯಾಗಿತ್ತು. ಅಷ್ಟರಲ್ಲೇ ಸ್ಪ್ರೈಟ್ ಬಾಟಲ್ ಮುಚ್ಚಲು ತೆಗೆದಂತೆ ಪ್ರಣಾಳದೊಳಗಿನ ದ್ರಾವಣ ಹೊಗೆಯೆದ್ದು ಉಕ್ಕತೊಡಗಿತು. ನೋಡ ನೋಡುತ್ತಿದ್ದಂತೆ ಬುಸ್ಸೆಂದೆದ್ದ ಆ ಬಿಳಿ ದ್ರಾವಣ ಕಣ್ಣಿಗೆ ರಾಚಿ ಬಿಟ್ಟಿತು. ಮುಂದೆ ಕಣ್ಣು ಉರಿ, ವಿಪರೀತ ತರಚು. ತಕ್ಷಣ ಅಲ್ಲೇ ಇದ್ದ ನೀರಿನ ನಲ್ಲಿ ತಿರುಗಿಸಿ ಕಣ್ಣಿಗೆ ಒಂದೇ ಸಮನೆ ನೀರು ಹೊಡೆದುಕೊಳ್ಳತೊಡಗಿದೆ. ಮನದೊಳಗೆ ಅದಾಗಲೇ ಅವ್ಯಕ್ತ ಭಯವೊಂದು ಗುಟುರು ಹಾಕಿಯಾಗಿತ್ತು. ಸೋಡಿಯಂ ನೀರಿನಲ್ಲಿ ಬರ್ರೆಂದು ಓಡಿ ಕರಗುವುದನ್ನು ಕಣ್ಣಾರೆ ಕಂಡಿದ್ದ ನನಗೆ ಯಾವುದೋ ಅಪಾಯ ಕಾದಿದೆಯೆಂದು ಒಳ ಮನಸ್ಸು ಹೇಳುತ್ತಲೇ ಇತ್ತು. ಕಣ್ಣು ಅದಾಗಲೇ ಕೆಂಪಾಗಿದ್ದು ಕಂಡಂತೆಯೇ ಉಳಿದ ಸಹಪಾಠಿಗಳು ಅಧ್ಯಾಪಕರಿಗೆ ವಿಷಯ ಅರುಹಿದರು. ಅಲ್ಲೇ ಹತ್ತಿರದ ಟೇಬಲ್‌ನಲ್ಲಿ ಚಯರ್ ಹಾಕಿ ಕುಳಿತು ಗಡದ್ದು ನಿದ್ದೆ ಬಾರಿಸುತ್ತಿದ್ದ ಮೇಸ್ಟ್ರು ಕಣ್ಣುಜ್ಜುತ್ತಾ ಬಂದು ನೋಡಿದವರೇ, ಚೆನ್ನಾಗಿ ಕಣ್ಣು ತೊಳೆದು ಬಿಡು ಎಂದು ಪುಕ್ಕಟೆ ಸಲಹೆ ಕೊಟ್ಟರು. ಅದಾಗಲೇ ಮುಖ ತೊಳೆದ ನೀರು ಗಲ್ಲದಿಂದ ಇಳಿಯುತ್ತಿದ್ದರಿಂದ ಅವರ ಸಮಾಧಾನಕ್ಕಾಗಿ ಇನ್ನೆರಡು ಬಾರಿ ಕಣ್ಣು ತೊಳೆದುಕೊಂಡೆ. ಪುಣ್ಯಕ್ಕೆ ರೋಗಿ ಅನ್ನುವ ಕಾರಣಕ್ಕೆ ಆ ದಿನ ಪ್ರಯೋಗದ ಫಲಿತಾಂಶ ಕೊಡಬೇಕಾಗಿ ಬರಲಿಲ್ಲ.

ಮನೆಗೆ ಹೋಗಿ ಎಂದು ಎಲ್ಲರಿಗಿಂತ ಬೇಗ ಮನೆಗೆ ಕಳುಹಿಸಿ ಕೊಟ್ಟಿದ್ದರಿಂದ ನಾನೂ ಬೇಗನೆ ಬಂದು ಹಾಸ್ಟೆಲ್ ತಲುಪಿದೆ. ಸಂಜೆ ಕಳೆಯುವ ಹೊತ್ತಿಗೆ ಕಣ್ಣು ಇನ್ನಷ್ಟು ಕೆಂಪಾಗಿ ಬಿಟ್ಟಿತ್ತು. ಅಷ್ಟರಲ್ಲಿ ಹಾಸ್ಟೆಲ್ ತುಂಬಾ ಮಾತಾಗಿ ಹಿರಿಯ ಹಾಸ್ಟೆಲ್ ವಿದ್ಯಾರ್ಥಿಯೊಬ್ಬ ನನ್ನನ್ನು ಮಂಗಳೂರಿಗೆ ಆಸ್ಪತ್ರೆಗೆಂದು ಕರೆದುಕೊಂಡು ಬಂದ. ಆ ದಿನವೇ ಬ್ರೆಝಿಲ್ - ಜರ್ಮನಿ ವಿಶ್ವಕಪ್ ಫುಟ್ಬಾಲ್ ಇದ್ದಿದ್ದರಿಂದ ಒಂದು ಆಸ್ಪತ್ರೆಯಲ್ಲಿ ಯಾವ ಕೇರಳದ ಡಾಕ್ಟರನ್ನೂ ಕಾಣಲಿಲ್ಲ. ಇನ್ನೊಂದು ಆಸ್ಪತ್ರೆಗೆ ಹೋದರೆ ಅಲ್ಲಿ ಅದಾಗಲೇ ಕೆಲಸ ಮುಗಿದು ಹೊರಟು ಹೋಗಿದ್ದ ಡಾಕ್ಟರೊಬ್ಬರನ್ನು ಫೋನ್‌ಮಾಡಿ ಕರೆಸಲಾಗಿತ್ತು. ಅವರೇನೋ ದ್ರಾವಣದಿಂದ ಕಣ್ಣು ತೊಳೆಯುವಂತೆ ನರ್ಸ್‌ಗಳಲ್ಲಿ ಕೇಳಿಕೊಂಡರು. ಅದೂ ಜರುಗಿತು. ಆ ಬಳಿಕ ಕಣ್ಣಿಗೆ ಕಣ್ಣುರಿ, ತರಚುವಿಕೆ ನಿಂತು ಹೋಯಿತು. ಮತ್ತೆ ಯಾವ ತೊಂದರೆಯೂ ನನ್ನ ಗಮನಕ್ಕೆ ಬರಲಿಲ್ಲ.

ಸ್ವಲ್ಪ ದಿನಗಳ ನಂತರ ಸಣ್ಣಗೆ ತಲೆ ನೋವೊಂದು ಆವರಿಸಿಕೊಳ್ಳತೊಡಗಿತು. ಕಣ್ಣಿನಲ್ಲಿ ಸಣ್ಣ ಕಲೆಗಳು ರೆಟಿನಾದ ಮೇಲೆ ಇದ್ದು ಅವು ಬೆಳಕನ್ನು ಚದುರುವ ಕಾರಣಕ್ಕೆ ತಲೆ ನೋವು ಕಾಣಿಸಿಕೊಂಡು ಬಿಟ್ಟಿತ್ತು. ಹಾಗಂತ ಹೇಳಿದ್ದು ಓರ್ವ ಸಾಯಿಬಾಬ ಭಕ್ತ ಕಣ್ಣು ವೈದ್ಯ. ಕೊನೆಗೆ ಅದುವೇ ನನಗೆ ಕನ್ನಡಕ ಭಾಗ್ಯವನ್ನು ಕೊಡ ಮಾಡಿತು. ನನಗೆ ಮೊದಲ ಬಾರಿಗೆ ಕನ್ನಡಕ ಹಾಕುವ ಗತಿ ಬಂದಿದ್ದು ಹೀಗೆ. ಕನ್ನಡಕ ಬಂದ ಬಳಿಕ ಅದು ಬಿಟ್ಟು ಇರಲಾಗದಷ್ಟು ನಂಟು ಬೆಳೆಯತೊಡಗಿತು. ಆಗ ಕನ್ನಡಕ ಹಾಕಿಕೊಳ್ಳುವುದೆಂದರೆ ಎಲ್ಲರಿಗೂ ಏನೋ ಒಂಥರಾ ಆಸೆ. ಅದರಲ್ಲಿ ಹೆಚ್ಚೇನು ಪಾಯಿಂಟು ಇರದಿದ್ದರಿಂದ ಅವರೆಲ್ಲಾ ಹಾಕಿಕೊಳ್ಳಲು ಕೇಳಿಕೊಂಡು, ನಾನಿಲ್ಲದಾಗ ನನ್ನ ಬೆನ್ನ ಹಿಂದೆ ‘ಅವನು ಶೋಕಿಗಾಗಿ ಹಾಕಿಕೊಳ್ಳುತ್ತಾನೆಂದು’ ಮಾತನಾಡಿಕೊಳ್ಳುತ್ತಿದ್ದರು. ಅಲ್ಲಿಂದಲೇ ಕನ್ನಡಕದ ಕಂಟಕಕ್ಕೆ ನಾಂದಿಯಾಯಿತು.

ಒಮ್ಮೆ ನಾನು ಯಾವುದೋ ದೊಡ್ಡ ಸಮ್ಮೇಳನಕ್ಕೆ ಹೊರಟಿದ್ದೆ. ಜನ ಸಂದಣಿ ಅಧಿಕಗೊಂಡಾಗ ನನ್ನ ಚಪ್ಪಲಿಗಿಂತಲೂ ನಾನು ಹೆದರಿದ್ದು ನನ್ನ ಕನ್ನಡಕಕ್ಕೆ. ಹಾಗೇ ಸಂಜೆವರೆಗೂ ನನ್ನ ಬಳಿಯೇ ಇದ್ದ ಕನ್ನಡಕ ಮುಖ ತೊಳೆಯಲೆಂದು ಕುಳಿತುಕೊಂಡಾಗ ಅಲ್ಲೇಲ್ಲೋ ಇಟ್ಟ ನೆನಪು. ಮತ್ತೆ ಅಲ್ಲೇ ಮರೆತು ಬಂದಿರಬೇಕು. ಸುಮಾರು ಹೊತ್ತು ಕಳೆದು ಮತ್ತೆ ನೆನಪಾಗಿ ತಡಕಾಡಿದರೆ ಕನ್ನಡಕದ ಪತ್ತೆಯಿಲ್ಲ. ತಿರುಗಿ ಏನೋ ನೆನಪು ಬಂದು ಹುಡುಕಿದರೆ ಅಲ್ಲೂ ಇಲ್ಲ. ಸಮ್ಮೇಳನ ತುಂಬಾ ನಿಧಿ ಕಳೆದುಕೊಂಡವನಂತೆ ನಾನು ಪರಿತಪಿಸುತ್ತಲೇ ಹಿಂದಿರುಗಬೇಕಾಗಿತ್ತು.

ಆ ಬಳಿಕ ಕನ್ನಡಕ ಹಾಕಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ಒಂದು ತಿಂಗಳು ಹಾಗೇಯೇ ಕಳೆಯಿತು. ಮತ್ತೆ ತಲೆನೋವು ಪ್ರಾರಂಭವಾದಂತೆನಿಸಿ, ಮತ್ತೊಂದು ಕನ್ನಡಕ ಮಾಡಿಸಿಕೊಂಡೆ. ಅವನ್ನು ಜೋಪಾನವಾಗಿ ಎತ್ತಿಡಲು ನಾನು ಪಡುವ ಪಾಡು ದೇವರಿಗೆ ಪ್ರೀತಿ. ಒಮ್ಮೆ ಅದನ್ನು ಅಂಗಿ ಕಿಸೆಯಲ್ಲಿ ಇಟ್ಟಿದ್ದೆ. ಅಷ್ಟರಲ್ಲೇ ಓಡುತ್ತಾ ಬಂದ ಸಹಪಾಠಿಯೊಬ್ಬ ಬಲವಾಗಿ ಬಂದು ಡಿಕ್ಕಿ ಹೊಡೆದು ಬಿಟ್ಟ. ಎದೆ ಗೂಡಿಗೆ ಆ ಪೆಟ್ಟು ಬಲವಾಗಿ ನಾಟಿದರೂ ನನಗೆ ಹೆಚ್ಚು ದಿಗಿಲಿದಾದ್ದು ಕನ್ನಡಕದ ಬಗ್ಗೆ. ಕಿಸೆಯಿಂದ ಜಾರಿದ ಕನ್ನಡಕ ತಲೆ ಕೆಳಗಾಗಿ ದೊಪ್ಪೆಂದು ಬಿತ್ತು. ಡವಗುಟ್ಟುತ್ತ ಕನ್ನಡಕ ಹೆಕ್ಕಿಕೊಂಡೆ. ಅಷ್ಟಕ್ಕೇ ಅದರ ಒಂದು ಕೈ ಪಾರ್ಶ್ವವಾಯು ರೋಗಿಯಂತೆ ಕೆಳಕ್ಕೆ ವಾಲಿ ವಿಕಾರವಾಗಿ ತೋರತೊಡಗಿತ್ತು. ಅದನ್ನು ಹೇಗೂ ಬೆಂಡು ತೆಗಿಸಿ ಕಣ್ಣಿಗಿಟ್ಟುಕೊಂಡರೆ ಒಂದು ಕಡೆ ಹೆಚ್ಚು ಬಾರ ತೂಗಿದಂತೆ ಭಾಸವಾಗಿತ್ತು. ಅದನ್ನೆಲ್ಲೋ ಮೂಲೆಗೆಸೆದು ಮತ್ತೆರಡು ತಿಂಗಳು ದೂಡಿದೆ. ಆಗೆಲ್ಲಾ ಕ್ರಿಕೆಟ್ ಆಡಲು ಮೈದಾನಕ್ಕೆ ಹೋಗುತ್ತಿದ್ದುದರಿಂದ ನಾನು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗುತ್ತಿದ್ದೆ. ಇತ್ತೀಚೆಗೆ ಹೊಡಿ-ಬಡಿ ಆಟಕ್ಕೆ ಮಗ್ಗುಲು ಬದಲಿಸಿದೆ. ನನ್ನೊಳಗಿನ ಈ ತಕ್ಷಣದ ಬದಲಾವಣೆಗೂ ಕಾರಣವಿತ್ತು. ಹಿಂದಿನಂತೆ ನನಗೆ ವೇಗದ ಚೆಂಡು ಕಾಣಿಸುತ್ತಿರಲಿಲ್ಲವಾದ್ದರಿಂದ ಪ್ರತೀ ಚೆಂಡನ್ನು ವೀಕ್ಷಿಸಿ ಸಿಂಗಲ್ಸ್ ತೆಗೆಯುವುದು ಸುಲಭವಿರಲಿಲ್ಲ. ಬ್ಲೈಂಡ್ ಹೊಡೆತಗಳು ಅಧಿಕವಾಗತೊಡಗಿತು. ಆ ಬಳಿಕ ಕೆಟ್ಟ ಬ್ಯಾಟ್ಸ್ ಮ್ಯಾನ್ ಆಗಿ ಗುರುತಿಸಿಕೊಳ್ಳತೊಡಗಿದೆ.

ಆಗೆಲ್ಲಾ ಕಳಪೆ ಫಾರ್ಮ್‌ನಿಂದ ಮರಳಿದ ವಿರೇಂದ್ರ ಸೆಹ್ವಾಗ್ ಕನ್ನಡಕ ಹಾಕಿ ಬ್ಯಾಟಿಂಗಿಗಿಳಿಯುತ್ತಿದ್ದುದು ಕಂಡಾಗ ನನಗೂ ಕನ್ನಡಕ ಹಾಕಿ ಆಡಬೇಕೆಂದೆನಿಸಿ ಬಿಡುತ್ತಿತ್ತು. ನ್ಯೂಝಿಲ್ಯಾಂಡ್‌ನ ಡೇನಿಯಲ್ ವೆಟೋರಿ ಕಣ್ಣುಗಳಿಂದ ತಪ್ಪಿಸಿಕೊಳ್ಳದ ಕನ್ನಡಕವನ್ನು ನೋಡುವಾಗ, ಅವನ ಬದುಕೂ ಅದಕ್ಕೆ ಅಂಟಿ ಹೋಗಿದ್ದು ನೆನೆದರೆ ಕನ್ನಡಕದ ಬೆಲೆ ಎಷ್ಟಿದೆಯೆಂದು ಅರಿವಿಗೆ ಬಂತು. ಆಗೆಲ್ಲಾ ಕನ್ನಡಕ ಇಟ್ಟೇ ಆಡುತ್ತಿದ್ದ ನನ್ನ ಸಹಪಾಠಿಯೊಬ್ಬನಿದ್ದ. ರಾತ್ರಿ ಮಲಗುವಾಗ ಕನ್ನಡಕ ಹಾಕಿಯೇ ಮಲಗ ಬೇಕಿದ್ದಷ್ಟು ದೃಷ್ಟಿದೋಷ ಅವನನ್ನು ಕಾಡುತ್ತಿತ್ತು. ಅವನ ಕಷ್ಟ ನಮಗೆಲ್ಲಾ ನಗು ತರುತ್ತಿತ್ತು. ಬೆಳಗ್ಗೆದ್ದು ಮೊದಲು ಆತ ಕನ್ನಡಕ ಹುಡುಕುತ್ತಿದ್ದ. ರಾಶಿ ಬಿದ್ದ ಅಷ್ಟೂ ರಾಶಿ ಹೊದಿಕೆಗಳ ನಡುವೆ ಅದು ಮಗುಮ್ಮಾಗಿ ಮಲಗಿರುತ್ತಿತ್ತು. ಅವನನ್ನು ಪೇಚಿಗೆ ಸಿಲುಕಿಸಲು ಕೆಲವರು ಅವನ ಕನ್ನಡಕವನ್ನು ಎಲ್ಲಾದರೂ ಅಡಗಿಸಿಡುತ್ತಿದ್ದರು. ಗುಳಿ ಬಿದ್ದ ಕಣ್ಣುಗಳಲ್ಲೇ ಅವನು ಅದನ್ನು ಹುಡುಕುವುದನ್ನು ನೋಡಿ ನಗುತ್ತಿದ್ದ ವಿಘ್ನ ಸಂತೋಷಿಗಳೂ ಇದ್ದರು. ಆಡುವಾಗ ಆತ ಕನ್ನಡಕ ಹಾಕಿರದಿದ್ದರೆ ಚೆಂಡು ಎಷ್ಟು ಸಾವಕಾಶವಾಗಿ ಬಂದರೂ ಅದನ್ನು ಬಾರಿಸಲಾಗದೆ ಎಲ್ಲೆಲ್ಲಿಗೋ ಬೀಸಿ ನಗೆಪಾಟಲಾಗುತ್ತಿದ್ದುದು ನೋಡಿದರೆ ಅಯ್ಯೋ ಪಾಪ ಅನಿಸಿಬಿಡುತ್ತಿತ್ತು.

ಅದೊಂದು ಮಳೆಗಾಲ. ರುಮುರುಮು ಸುರಿಯುತ್ತಿದ್ದ ಮಳೆ. ಆ ದಿನ ತರಗತಿಗೆ ತಡವಾಗಿ ಬಂದ ಅವನು ದೃಷ್ಟಿಗಾಗಿ ಕನ್ನಡಕ ಹಾಕಿಕೊಳ್ಳುತ್ತಿದ್ದುದರಿಂದ ನಾವು ಅವನನ್ನು ಸೋಡಾಬುಡ್ಡಿ ಎಂದು ಕರೆಯುತ್ತಿದ್ದೆವು. ಅವನಿಗೆ ದೃಷ್ಟಿ ಅತೀ ಕಡಿಮೆ ಇದ್ದುದರಿಂದ ತುಸು ದಪ್ಪವಾದ ಲೆನ್ಸ್ ಹಾಕಿಸಿಕೊಂಡಿದ್ದೇ ಹಾಗೆ ಕರೆಯಲು ಕಾರಣ. ಛತ್ರಿ ಇದ್ದರೂ ಅವನ ಯುನಿಫಾರ್ಮ್ ಪೂರ್ತಿ ತೋಯ್ದು ಹೋಗಿತ್ತು. ಅವನ ಅವತಾರ ಕಂಡ ಅಧ್ಯಾಪಕರಿಗೆ ಚಳಿಯೆದ್ದು ತರಗತಿಯೊಳಗೆ ಬಿಟ್ಟು ಕೊಂಡರು. ಬಂದು ಹತ್ತಿರ ಕುಳಿತವನೇ ವಿಪರೀತ ಚಡಪಡಿಸತೊಡಗಿದ. ಅವನ ದಿಗಿಲಿಗೆ ಕಾರಣ ಕೇಳಿದರೆ ನನಗೆ ಎಡಗಣ್ಣು ಸಂಪೂರ್ಣ ಕಾಣುತ್ತಲೇ ಇಲ್ಲವೆಂದು ಸಬೂಬು ಹೇಳಿದ. ನೋಡಿದರೆ, ಎಡಗಣ್ಣಿನ ಮೇಲೆ ಬಳಿ ಖಾಲಿ ಫ್ರೆಮು!. ಆ ಜಡಿ ಮಳೆಗೆ ಅವನ ಒಂದು ಕಣ್ಣಿನ ಲೆನ್ಸೇ ನೀರಲ್ಲಿ ಬಿದ್ದು ಕೊಚ್ಚಿ ಹೋಗಿತ್ತು. ನಮಗೆ ಆ ಪರಿಸ್ಥಿತಿ ಕಂಡು ಜೋರಾಗಿ ನಗತೊಡಗಿದೆವು. ಆದರೆ ಆ ಪರಿಸ್ಥಿತಿಯ ಗಾಂಭೀರ್ಯ ನಮಗ್ಯಾರಿಗೂ ಅರ್ಥವಾಗಲೇ ಇಲ್ಲ.

ಇಷ್ಟೆಲ್ಲವೂ ಮಾತನಾಡಿ ಈ ಕನ್ನಡಕದ ಪೂರ್ವಾಪರಗಳ ಬಗ್ಗೆ ತಿಳಿದುಕೊಳ್ಳೋಣವೆಂದೆನಿಸಿತು. ಮೊದಲ ಬಾರಿಗೆ ಈ ಕನ್ನಡಕಗಳ ಉಪಾಯ ನೀಡಿದವನು, ‘ಸಾಲ್ವಿನೋ ಡಿ ಆರ್ಮೇಟ್’ ಅನ್ನುವ ಇಟಲಿಗ. ಅದು 1285ರ ಆಜುಬಾಜು. ಯಾರೋ ಸನ್ಯಾಸಿಗೆ ಕನ್ನಕದ ಬಗ್ಗೆ ತಿಳಿಸಿ ಬಿಟ್ಟ. ಅವನು ಭಕ್ತಾದಿಗಳಲ್ಲಿ ಹೇಳಿದಾಗ ಅದು ಪ್ರಚಾರಗೊಂಡಿತೆಂಬುದು ಇಂಟರ್ನೆಟ್ಟಿನ ಮಾಹಿತಿ. ಕನ್ನಡಕಗಳು ಆ ದಿನಗಳಿಗೆ ದೃಷ್ಟಿಗಾಗಿಯೇ ಬಳಸಲಾಗಿದೆ ಎಂದು ಹೇಳಲಾಗದು. ಕಾಲನ ಪರಿಭ್ರಮನೆಯು ಈ ಸಂಸ್ಕೃತಿಯನ್ನು ಜಾರ್ಜ್ ಬಿಡಲ್ ಆಯರಿ ಎನ್ನುವವನಿಗೆ ದಾಟಿಸಿತು. ಅದುವರೆಗೂ ಕನ್ನಡಕಗಳು ಅತೀ ದೊಡ್ಡ ಮತ್ತು ಭಾರದ ಮರದ ಫ್ರೇಮುಗಳಿಂದ ಬಂದಿಯಾಗಿದ್ದವುಗಳು, ಸರಾಗಗೊಂಡು ಕಿವಿಯಲ್ಲಿ ನೇತು ಹಾಕುವಂತೆ ಸುಲಭವಾದ ರಿಬ್ಬನ್ ಬಳಕೆಯ ಮೂಲಕ ಸುಧಾರಣೆಗೊಳ್ಳತೊಡಗಿದವು. ಸುಮಾರು 1827ನೇ ಇಸವಿಯಲ್ಲಿ ಶೋಕಿಗಾಗಿ ತಂಪು ಕನ್ನಡಕಗಳು (ಕೂಲಿಂಗ್ ಗ್ಲಾಸ್) ವಿಶಿಷ್ಟ ಪ್ರೇಮ್‌ನಲ್ಲಿ ದೇಶದ್ಯಾಂತ ಹುಟ್ಟಿಕೊಳ್ಳತೊಡಗಿದವು. ಈಗ ಉರುಟು ಕನ್ನಡಕಗಳು, ಚೌಕಾಕಾರ, ಆಯತಾಕಾರದ ವಿವಿಧ ಫ್ರೇಮುಗಳು ಫ್ಯಾಶನ್‌ನೊಳಗೆ ಬಂದಿಯಾಗಿದೆ.

ನಮ್ಮಲ್ಲೂ ಒಂದು ಮೂಢನಂಬಿಕೆ ಇತ್ತು. ಕನ್ನಡಕ ಹಾಕಿದವರೆಲ್ಲಾ ಇಂಟಲಿಜೆಂಟ್‌ಗಳು ಎಂದು. ಕನ್ನಡಕ ಹಾಕಿದವರೆಲ್ಲಾ ಶಾಲೆಯಲ್ಲಿ ಎದುರಿನ ಬೆಂಚಿನಲ್ಲಿ ಕುಳಿತಿರುತ್ತಾರೆ ಅನ್ನುವ ಕಾರಣಕ್ಕಿರಬಹುದು. ಆದರೆ ಸತ್ಯಾಂಶವೇನೆಂದರೆ ಅವರಿಗೆ ದೃಷ್ಟಿ ದೋಷವಿರುವುದರಿಂದಲೇ ಬೋರ್ಡು ಕಾಣಿಸಲೆಂದು ಅಧ್ಯಾಪಕರು ಅವರನ್ನು ಮುಂದೆ ಕುಳ್ಳಿರಿಸಿ ಬಿಡುತ್ತಿದ್ದರು.

ನನಗೆ ಅರ್ಫಾಝ್ ಎನ್ನುವ ಸಹಪಾಠಿಯೊಬ್ಬನಿದ್ದ. ಅವನಿಗೆ ಕನ್ನಡಕ ಹುಟ್ಟಿನಿಂದಲೇ ಕೈ, ಕಾಲು, ಕಿವಿಗಳಂತೆಯೇ ಇತ್ತೆನ್ನುವಷ್ಟು ಅವನು ಅಂಟಿಕೊಂಡು ಬಿಟ್ಟಿದ್ದ. ಅವನಿಗೂ ಗಾಂಧೀಜಿ ಅಂತ ಯಾರೋ ಹೆಸರಿಟ್ಟ ಮೇಲೆ, ತರಗತಿಯ ಚೂಟಿ ಹುಡುಗರೆಲ್ಲಾ ಹಾಗೆಯೇ ಕರೆಯುತ್ತಿದ್ದರು. ಇದು ಬರೆಯಬೇಕಿನಿಸಿದಾಗ ಅವನನ್ನೂ ನೆನಪಾಗಿ ಅವನಿಗೆ ಫೋನ್ ಹಚ್ಚಿದೆ. ಅವನ ಅನುಭವ ಪ್ರಪಂಚ ನನ್ನನ್ನು ತುಂಬಾ ಭಾವನಾತ್ಮಕವಾಗಿ ಅಲುಗಾಡಿಸಿತು. ಒಮ್ಮೆ ಆತ ರಾತ್ರಿ ರಸ್ತೆ ದಾಟುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ವಾಹನದ ಬೆಳಕಿನ ತೀಕ್ಷ್ಣತೆ ತಾಳಲಾರದೆ ಮೆಲ್ಲನೆ ನಡೆದು, ಕೂದಲೆಳೆಯ ಅಂತರದಲ್ಲಿ ಅಪಘಾತದಿಂದ ಪಾರಾದನಂತೆ. ಆತನಿಗೆ ಒಂದೇ ಹೆಡ್ಲೈಟ್ ಕಾಣುತ್ತಿತ್ತಾದರೂ ಆಮೇಲೆ ನೋಡಿದರೆ ಅದೊಂದು ಕಾರು ಆಗಿತ್ತಂತೆ. ಒಂಟಿ ಹೆಡ್ಲೈಟ್ ಹಾಕಿದ್ದರಿಂದ ಗುರ್ತಿಸಲಾಗದೆ ಅದು ಬೈಕಿರಬಹುದೆಂದು ತಪ್ಪಾಗಿ ಭಾವಿಸಿದ್ದ ಅವನನ್ನು ನೋಡಿ ಚಾಲಕ ನಿಲ್ಲಿಸಿ ಗದರಲಾರಂಭಿಸಿದಾಗ, ಮೊದಲು ನಿಮ್ಮ ಹೆಡ್ಲೈಟ್ ಸರಿಪಡಿಸಿ ಸ್ವಾಮಿ ಎಂದು ಇವನೂ ವಾದಿಸಿ ಕೊನೆಗೂ ಸಮರ್ಥಿಸಿಕೊಳ್ಳಲು ಯಶಸ್ವಿಯಾದನಂತೆ.

ದೃಷ್ಟಿ ಕಡಿಮೆಯಾದಷ್ಟು ಕನ್ನಡಕದ ಲೆನ್ಸ್‌ಗಳಿಗೆ ದಪ್ಪ ಜಾಸ್ತಿ. ಅದು ಸಹಜವಾಗಿಯೇ ವಯಸ್ಸನ್ನು ಅಧಿಕಗೊಳಿಸಿಬಿಡುತ್ತದೆ. ಇದನ್ನು ತಪ್ಪಿಸಲಿಕ್ಕಾಗಿ ರೂಪದರ್ಶಿಗಳು, ಪಬ್ಲಿಕ್ ಐಕಾನ್‌ಗಳು ಲೆನ್ಸಿಗೆ ಮೊರೆ ಹೋಗುವುದು ಸಹಜ. ಅದು ಕೆಲವೊಮ್ಮೆ ವಾಶ್ ಬೇಸಿನಿನಲ್ಲಿ ಬಿದ್ದು ಹೋಗುವುದು, ಸ್ನಾನ ಗೃಹದಲ್ಲಿ ಮಾಯವಾಗುವುದು ಎಂಬಿತ್ಯಾದಿ ಸಹಸ್ರ ಸಮಸ್ಯೆಗಳಿರುವುದರಿಂದ ಸಹಜವಾಗಿಯೇ ಆ ದುಬಾರಿ ಲೆನ್ಸಗಳನ್ನು ಸಾಮಾನ್ಯರು ಬಳಸುವುದು ಕಡಿಮೆ. ಒಮ್ಮೆ ತಥಾಕಥಿತ ಗೆಳೆಯ ಏನೋ ಕೊಂಡುಕೊಳ್ಳಲಿಕ್ಕಾಗಿ ಅಂಗಡಿಯೊಂದಕ್ಕೆ ಹೋಗಿದ್ದನಂತೆ. ಅಂಗಡಿಯವರು ಕುಶಲೋಪರಿ ನಡೆಸುತ್ತಾ, ಇವನ ಕನ್ನಡಕದ ಅವತಾರ ಕಂಡು ನಿಮಗೆಷ್ಟು ಮಕ್ಕಳು? ಎಂದು ಕೇಳಿದರಂತೆ. ಇದರಿಂದ ಮುಜುಗರಕ್ಕೀಡಾದ ಅವನು, ಇನ್ನು ಯಾವ ಕಷ್ಟಕಾಲಕ್ಕೂ ಆ ಅಂಗಡಿಗೆ ಹೋಗುವುದಿಲ್ಲವೆಂದು ಸ್ವತಃ ಅಸಹಕಾರ ಚಳವಳಿ ಕೈಗೊಂಡನಂತೆ. ನಿನ್ನನ್ನು ಗಾಂಧೀಜಿ ಎಂದು ಕರೆದದ್ದಕ್ಕೆ ಸಾರ್ಥಕವಾಯ್ತು ಮಾರಾಯ ಎಂದು ಪ್ರತಿಯಾಗಿ ಛೇಡಿಸಿದೆ.

ಈಗ ತಂಪು ಕನ್ನಡಕಗಳು ಬೆಲೆಬಾಳುತ್ತದೆ. ಅವುಗಳ ಬ್ರಾಂಡ್‌ಗಳು ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಸೂಟು ಬೂಟುಗಳನ್ನು ಮೀರಿ ಜನರ ಕಣ್ಣು ರೇಬ್ಯಾನ್, ಚೋಪರ್ಡ್ ಡಿ ರಿಗೋ ವಿಶನ್, ಡೋಲ್ಸೆ ಗಬ್ಬಾನ, ಮೇಬ್ಯಾಕ್ ಗಳಿಗೆ ಇಣುಕುತ್ತದೆ. ಅವನ ಆರ್ಥಿಕ ಸ್ಥಿರತೆ ಅಲ್ಲಿಂದಲೇ ನಿಗದಿಯಾಗುತ್ತದೆ. ಇತ್ತೀಚೆಗೆ ನನ್ನದೂ ಒಂದು ಕನ್ನಡಕ ಕಳೆದುಹೋಯಿತು. ಸದ್ಯ ಇವಿಷ್ಟೇ ಬರೆಯಲು ಹೋಗಿ ಇನ್ನಷ್ಟು ತಲೆನೋವು ಬರಿಸಿಕೊಳ್ಳಲು ನಾನು ತಯಾರಿಲ್ಲ. ಇಷ್ಟು ಓದಿಕೊಂಡು ಕನ್ನಡಕದಾರಿಗಳ ಅಹವಾಲು ಅರ್ಥೈಸಿಕೊಂಡರೆ ನಾನೂ ಕನ್ನಡಕ ಸಂಘದ ಸದಸ್ಯನಾದುದಕ್ಕೆ ಸಾರ್ಥಕ.

Writer - ಮುನವ್ವರ್ ಜೋಗಿಬೆಟ್ಟು

contributor

Editor - ಮುನವ್ವರ್ ಜೋಗಿಬೆಟ್ಟು

contributor

Similar News