ದೂರದ ಬೆಟ್ಟ
ಸುಂದರ ಬನ ಎಂಬುದು ಅತ್ಯಂತ ದೊಡ್ಡ ಅರಣ್ಯ. ಅಲ್ಲಿ ಅನೇಕ ಪಕ್ಷಿ ಪ್ರಾಣಿಗಳು ವಾಸಿಸುತ್ತಿದ್ದವು. ಆ ಕಾಡಿನ ಒಂದು ಮರದ ಮೇಲೆ ಎರಡು ಗಿಳಿಗಳು ಕೂಡ ವಾಸಿಸುತ್ತಿದ್ದವು. ಅವುಗಳು ಪ್ರೀತಿಯಿಂದ ಒಬ್ಬರನ್ನೊಬ್ಬರು ಬೆಳ್ಳಿ ಮೆಳ್ಳಿ ಎಂದು ಕರೆದುಕೊಳ್ಳುತ್ತಿದ್ದವು. ಬೆಳ್ಳಿ ಮೆಳ್ಳಿ ಪಕ್ಷಿಗಳು ತುಂಬಾ ಆತ್ಮೀಯರಾಗಿದ್ದರು. ಆಹಾರ ಹುಡುಕಲು ಒಟ್ಟಿಗೆ ಹೋಗುತ್ತಿದ್ದವು. ಒಂದೇ ಗಿಡದಲ್ಲಿ ಅಕ್ಕಪಕ್ಕ ಗೂಡನ್ನು ಕಟ್ಟಿ ಸುಖವಾದ ಸಂಸಾರವನ್ನು ನಡೆಸುತ್ತಿದ್ದವು. ಯಾವುದೇ ತಂಟೆ ತಕರಾರುಗಳಿಲ್ಲದೆ ಸುಖವಾಗಿ ಜೀವನ ಸಾಗಿಸುತ್ತಿದ್ದವು. ಕಷ್ಟಕಾಲದಲ್ಲಿ ಪರಸ್ಪರ ಸಹಕಾರದೊಂದಿಗೆ ಒಟ್ಟಿಗೆ ಬದುಕುತ್ತಿದ್ದವು. ಬೆಳ್ಳಿ ಮೆಳ್ಳಿಯನ್ನು ಆ ಕಾಡಿನ ಎಲ್ಲಾ ಪ್ರಾಣಿಗಳು ಪಕ್ಷಿಗಳು ಒಂದೇ ಜೀವ ಎರಡು ದೇಹ ಎನ್ನುತ್ತಿದ್ದವು.
ಒಂದು ದಿನ ಬೆಳ್ಳಿ ಮೆಳ್ಳಿ ಆಹಾರ ಹುಡುಕುತ್ತ ಕಾಡಿನಿಂದ ನಾಡಿಗೆ ಬಂದವು. ನಾಡಿನಲ್ಲಿ ಕೇವಲ ಮನೆಗಳನ್ನು ಕಂಡು ಆಶ್ಚರ್ಯಗೊಂಡವು. ಇಲ್ಲಿ ಮರಗಳು ಅತಿ ವಿರಳವಾಗಿ ಇರುವುದನ್ನು ಕಂಡು ದುಃಖಿಸಿದವು. ನಾಡಿನಲ್ಲಿ ಆಹಾರ ಹುಡುಕುವುದು ಹೇಗೆಂದು ಚಿಂತೆಗೀಡಾದವು. ಆ ಸಂದರ್ಭದಲ್ಲಿ ನಾಡಿನ ಕಾಗೆಯೊಂದು ಬೆಳ್ಳಿ ಮೆಳ್ಳಿಗೆ ಭೇಟಿಯಾಯಿತು. ಕಾಗೆ ತನ್ನ ಪರಿಚಯವನ್ನು ಮಾಡಿಕೊಂಡಿತು. ‘‘ಸ್ನೇಹಿತರೇ, ನಾನು ಈ ನಾಡಿನ ಕಾಗೆ. ನನ್ನನ್ನು ಕಾಗಕ್ಕ ಎಂದು ಕರೆಯುತ್ತಾರೆ. ಒಂದು ಕಾಲದಲ್ಲಿ ಈ ಪ್ರದೇಶ ಗಿಡಮರಗಳಿಂದ ಸಮೃದ್ಧವಾಗಿತ್ತು. ಇಲ್ಲಿ ಯಥೇಚ್ಛವಾಗಿ ಆಹಾರ ನಮಗೆ ದೊರಕುತ್ತಿತ್ತು. ಆದರೆ ಮಾನವರು ಎಲ್ಲ ಗಿಡ ಮರಗಳನ್ನು ಕಡಿದು ತಮ್ಮ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಈಗ ಅಲ್ಲಿ ಇಲ್ಲಿ ಮಾತ್ರ ಸಣ್ಣ ಸಣ್ಣ ಸಸ್ಯಗಳಿವೆ ಅಷ್ಟೇ. ಇಲ್ಲಿ ಆಹಾರ ದೊರೆಯದೇ ಇರುವುದರಿಂದ ನನ್ನ ಕುಟುಂಬವೆಲ್ಲ ಬೇರೆಬೇರೆ ದಿಕ್ಕಿನೆಡೆಗೆ ಹಾರಿಹೋದವು. ಬನ್ನಿ ಈ ನಗರವನ್ನು ಒಮ್ಮೆ ನೋಡುವಿರಂತೆ’’ ಎಂದು ಕಾಗಕ್ಕ ಇಬ್ಬರನ್ನು ಕರೆದುಕೊಂಡು ನಗರದ ಪ್ರದಕ್ಷಿಣೆ ಹಾಕತೊಡಗಿತು.
ಬೆಳ್ಳಿ ಮೆಳ್ಳಿಗೆ ಅಲ್ಲಿನ ದೊಡ್ಡ ದೊಡ್ಡ ಕಟ್ಟಡಗಳನ್ನು ಕಂಡು ಸಂತಸವೇನೋ ಆಯಿತು. ವಿಶಾಲವಾದ ಬಯಲು, ಆಟದ ಸ್ಥಳವನ್ನು ಕಂಡು ಆಟವಾಡಿದವು. ಬೆಳ್ಳಿ ಮೆಳ್ಳಿಗೆ ಹಸಿವು ಹಾಗೂ ನೀರಡಿಕೆಯಾದಾಗ ಅವುಗಳಿಗೆ ತಿನ್ನಲು ಎಲ್ಲೂ ಆಹಾರ, ನೀರು ಸಿಗಲಿಲ್ಲ . ಒಂದು ಅಂಗಡಿಯ ಬಳಿ ಧಾನ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು. ಅಲ್ಲಿ ಧಾನ್ಯಗಳನ್ನು ತಿನ್ನಲು ಹೋದಾಗ ಅವುಗಳನ್ನು ಹೊಡೆದು ಓಡಿಸಲಾಯಿತು. ಆಗ ಕಾಗಕ್ಕ ‘‘ಅಗೋ, ಅಲ್ಲಿ ಕಸ ಚೆಲ್ಲಿರುವರಲ್ಲ ಅಲ್ಲಿ ನಮಗೆ ಆಹಾರ ಸಿಗುತ್ತದೆ ಹೋಗೋಣ ಬನ್ನಿ’’ ಎಂದು ಕರೆದುಕೊಂಡು ಹೋಯಿತು.ಆ ಸ್ಥಳದಿಂದ ಗಬ್ಬುವಾಸನೆ ಬರುತ್ತಿದ್ದ ಆಹಾರ ಪದಾರ್ಥಗಳು ಕಂಡವು. ತಿನ್ನೋಣ ಬನ್ನಿ ಎಂದು ಕಾಗಕ್ಕ ಕರೆದಾಗ ಬೆಳ್ಳಿ ಮೆಳ್ಳಿ, ‘‘ಛೆ , ಇಂತಹ ಕೆಟ್ಟ ಆಹಾರವನ್ನು ತಿನ್ನಬೇಕೇ? ನಾವು ಕಾಡಿನಲ್ಲಿ ಇರುವಾಗ ಗಿಡದಲ್ಲಿ ಇದ್ದ ತಾಜಾ ಹಣ್ಣುಗಳನ್ನು ಕಾಳುಗಳನ್ನು ತಿನ್ನುತ್ತಿದ್ದೆವು. ಇಂಥಹ ಕೆಟ್ಟ ಆಹಾರ ಪದಾರ್ಥಗಳನ್ನು ನಾವು ತಿನ್ನಲಾರೆವು’’ ಎಂದಾಗ ಕಾಗೆ ‘‘ನಿಮಗೆ ಇಲ್ಲಿ ಆಹಾರ ಸಿಗುವುದಿಲ್ಲ. ಹಾರಾಡಲು ಶಕ್ತಿಗಾದರೂ ಸ್ವಲ್ಪ ತಿನ್ನಿ’’ ಎಂದಿತು. ಹಕ್ಕಿಗಳು ಅನಿವಾರ್ಯವಾಗಿ ತಿನ್ನಬೇಕಾಯಿತು. ಅಲ್ಲಿ ವಾಹನಗಳು, ಧ್ವನಿವರ್ಧಕಗಳು, ಕಾರ್ಖಾನೆಗಳು ಮುಂತಾದವುಗಳ ಕರ್ಕಶ ಶಬ್ದದಿಂದ ಹಕ್ಕಿಗಳು ಬೆಚ್ಚಿದವು. ನಗರದ ಹೊಗೆಯಿಂದಾಗಿ ಉಸಿರುಗಟ್ಟಿದ ಅನುಭವ ಹಕ್ಕಿಗಳಿಗಾಯಿತು. ಹಕ್ಕಿಗಳ ಎದೆಯ ಬಡಿತ ಜೋರಾಯಿತು. ಯಾವುದೋ ತರಂಗಗಳು ತಮಗೆ ತೊಂದರೆ ಕೊಡುತ್ತಿವೆ ಏನು ಎಂದೆನಿಸಿ ಕಾಗೆಗೆ ಕೇಳಿದಾಗ ‘‘ಸ್ನೇಹಿತರೇ, ಅಗೋ ನೋಡಿ ಅದು ಮೊಬೈಲ್ ಟವರ್. ಅದು ತರಂಗಗಳನ್ನು ಸೂಸುತ್ತದೆ. ಮಾನವರು ಒಬ್ಬರಿಗೊಬ್ಬರ ಸಂವಹನಕ್ಕಾಗಿ ಮೊಬೈಲ್ ಎಂಬ ವಸ್ತುವನ್ನು ಬಳಸುತ್ತಾರೆ. ಇವುಗಳಿಂದ ಮಾರಕ ತರಂಗಗಳು ಹೊಮ್ಮುತ್ತವೆ. ಇವುಗಳಿಂದ ನಮಗೆ ತೊಂದರೆ ತಪ್ಪಿದ್ದಲ್ಲ. ಈ ತರಂಗಗಳಿಂದ ದೂರ ಹೋಗೋಣ ಬನ್ನಿ’’ ಎಂದಿತು.
ಅಲ್ಲಿ ಕೆಲವು ಜನರು ಈ ಹಕ್ಕಿಗಳನ್ನು ಕಂಡು ಕಲ್ಲು ಬೀರತೊಡಗಿದರು. ಹಕ್ಕಿಗಳು ಎಲ್ಲಾ ಶಕ್ತಿಯನ್ನು ಒಂದು ಮಾಡಿ ಮುಗಿಲಿನ ಕಡೆಗೆ ಹಾರಿದವು. ಆಗ ಕಾಗೆಗೆ ‘‘ಗೆಳೆಯ ನಿನ್ನ ಕಂಡದ್ದು ತುಂಬಾ ಸಂತೋಷವಾಯಿತು. ಆದರೆ ಈ ಜಾಗ ನಮ್ಮ ವಾಸಕ್ಕೆ ತಕ್ಕದ್ದಲ್ಲ. ನಮಗೆ ಕಾಡೇ ವಾಸಿ. ಬಾ ಹೋಗೋಣ. ಕಾಡಿಗೆ ಹೋಗಿ ನೆಮ್ಮದಿಯ ಬದುಕು ಸಾಗಿಸುವ’’ ಎಂದಾಗ ಕಾಗೆಯು ಒಪ್ಪಿ ತನ್ನ ಸಂಸಾರ ಸಮೇತವಾಗಿ ಕಾಡಿನ ಕಡೆ ನಡೆಯಿತು. ಎಲ್ಲಾ ಪಕ್ಷಿಗಳು ಕಾಡಿನಲ್ಲಿ ಸ್ವಚ್ಛಂದವಾಗಿ ಬದುಕಿ ಬಾಳಿದವು.