ಆದಿವಾಸಿಗಳ ಅನನ್ಯತೆ ಕಸಿಯಲು ಆರೆಸ್ಸೆಸ್ ಯತ್ನ!

Update: 2020-02-18 18:22 GMT

ಮೂಲನಿವಾಸಿಗಳ ಜಗತ್ತು ಬೇರೆಯೇ ಆದುದಾಗಿದೆ. ಅವರು ಪ್ರಾಣಿ ಪೂಜಕರಾಗಿದ್ದಾರೆ ಮತ್ತು ತಮ್ಮದೇ ಆದ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ಅವರಲ್ಲಿ ಹಲವರು ತಮ್ಮ ಆಯ್ಕೆಯ ಧರ್ಮಗಳಿಗೆ ಮತಾಂತರಗೊಂಡಿದ್ದಾರೆ. ಇಂತಹ ವಿಷಯಗಳಲ್ಲಿ ಸ್ವಯಂಗ್ರಹಿಕೆಯನ್ನು ಹೊಂದುವುದು ಅತ್ಯಂತ ಮುಖ್ಯವಾದುದಾಗಿದೆ. ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ‘‘ಆದಿವಾಸಿಗಳು ಹಿಂದೂಗಳಲ್ಲ’’ ಎಂದು ಗಮನಸೆಳೆದಿದ್ದಾರೆ. ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು, ನಮ್ಮ ಜನಗಣತಿಯ ಫಾರಂಗಳಲ್ಲಿ ಆದಿವಾಸಿಗಳು ಮೂಲನಿವಾಸಿಗಳೆಂಬ ಸ್ಥಾನ ಪಡೆಯುವ ಅಗತ್ಯವಿದೆ.


ಪ್ರಸಕ್ತ ಎನ್‌ಪಿಆರ್, ಎನ್‌ಆರ್‌ಸಿ ಹಾಗೂ ಸಿಎಎ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಇದೇ ವೇಳೆ ನಾವು 2021ರಲ್ಲಿ ದಶಕದ ಜನಗಣತಿ ಪ್ರಕ್ರಿಯೆಯನ್ನು ಆರಂಭಿಸಲಿದ್ದೇವೆ. ಈಗಾಗಲೇ ಎನ್‌ಪಿಆರ್, ಎನ್‌ಆರ್‌ಸಿ ಹಾಗೂ ಸಿಎಎಗೆ ಉತ್ತೇಜನ ನೀಡುವ ಕಾರ್ಯದಲ್ಲಿ ಆರೆಸ್ಸೆಸ್ ಸಕ್ರಿಯವಾಗಿದೆ. ಇದೇ ಸಮಯದಲ್ಲಿ ಆದಿವಾಸಿಗಳು ಜನಗಣತಿಯಲ್ಲಿ ತಮ್ಮನ್ನು ‘ಇತರರು’ ಅಂಕಣದಲ್ಲಿ ನಮೂದಿಸುವ ಬದಲು ಹಿಂದೂಗಳು ಎಂದು ನೋಂದಾಯಿಸಿಕೊಳ್ಳಬೇಕೆಂದು ಆರೆಸ್ಸೆಸ್ ಬಯಸುತ್ತಿದೆ. 2011ರ ಜನಗಣತಿಯಲ್ಲಿ ಆದಿವಾಸಿಗಳು ತಮ್ಮನ್ನು ಇತರರು ಅಂಕಣದಲ್ಲಿ ನಮೂದಿಸಿದ್ದರಿಂದಾಗಿ, ಹಿಂದೂಗಳ ಒಟ್ಟು ಸಂಖ್ಯೆ ಶೇ. 79.8ಕ್ಕೆ ಇಳಿದಿದ್ದು, ಶೇ. 0.7 ಕುಸಿದಂತಾಗಿದೆ. ಹೀಗಾಗಿ ಹಿಂದೂ ರಾಷ್ಟ್ರವಾದಿ ಸಂಘಟನೆಯಾದ ಆರೆಸ್ಸೆಸ್, ಈ ಸಲದ ಜನಗಣತಿಯಲ್ಲಿ ಆದಿವಾಸಿಗಳು, ಹಿಂದೂಗಳ ಅಂಕಣದಲ್ಲಿ ತಮ್ಮನ್ನು ಗುರುತು ಮಾಡಿಕೊಳ್ಳುವುದನ್ನು ಖಾತರಿಪಡಿಸಿಕೊಳ್ಳುತ್ತಿದೆ.

ಹಿಂದೂ ಪದವನ್ನು ವ್ಯಾಖ್ಯಾನಿಸುವಲ್ಲಿ ಆರೆಸ್ಸೆಸ್ ಅತ್ಯಂತ ಜಾಣ್ಮೆಯ ನಡವಳಿಕೆಯನ್ನು ಪ್ರದರ್ಶಿಸಿದೆ. ಸಿಂಧೂನದಿ ಪೂರ್ವ ಭಾಗವನ್ನು ಯಾರು ಪವಿತ್ರ ಭೂಮಿ ಹಾಗೂ ಪಿತೃಭೂಮಿಯೆಂದು ಪರಿಗಣಿಸುವರೋ ಅವರೆಲ್ಲರೂ ಹಿಂದೂಗಳು ಎಂಬ ಸೂತ್ರವನ್ನು ಸಾವರ್ಕರ್ ಎಲ್ಲರಿಗಿಂತಲೂ ಮೊದಲು ಪ್ರತಿಪಾದಿಸಿದ್ದರು. ಈ ಸಿದ್ಧಾಂತವು ಮುಸ್ಲಿಮರು ಮತ್ತು ಕ್ರೈಸ್ತರನ್ನು ಹೊರಗಿಟ್ಟು, ಉಳಿದ ಎಲ್ಲರನ್ನೂ ಹಿಂದುತ್ವದ ತೆಕ್ಕೆಗೆ ಸೆಳೆಯುತ್ತದೆ. 1980ರ ದಶಕದಿಂದೀಚೆಗೆ ಚುನಾವಣಾ ಕಾರಣಗಳಿಗಾಗಿ ಸಂಘಪರಿವಾರವು ಭಾರತದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳು ಎಂದು ಬಿಂಬಿಸಲು ಯತ್ನಿಸುತ್ತಾ ಬಂದಿದೆ. ಮುಸ್ಲಿಮರನ್ನು ‘ಅಹ್ಮದಿಯಾ ಹಿಂದೂಗಳು’ ಹಾಗೂ ಕ್ರೈಸ್ತರು ‘ಕ್ರಿಸ್ತಿ ಹಿಂದೂ’ಗಳು ಎಂದು ಮುರಳಿ ಮನೋಹರ ಜೋಶಿ ಕರೆದಿದ್ದರು. ತೀರಾ ಇತ್ತೀಚೆಗೆ ಆರೆಸ್ಸೆಸ್, ಸಿಖ್ಖರು ಪ್ರತ್ಯೇಕವಾದ ಧರ್ಮವಲ್ಲ. ಅವರು ಹಿಂದೂಧರ್ಮದ ಪಂಗಡವಾಗಿದ್ದಾರೆಂದು ಮತ್ತೆ ಹೇಳತೊಡಗಿದಾಗ ವಿವಾದವುಂಟಾಗಿತ್ತು. ಸಿಖ್ ಧರ್ಮವು ಸ್ವತಃ ಒಂದು ಪ್ರತ್ಯೇಕ ಧರ್ಮವಾಗಿದೆಯೆಂದು ಹಲವಾರು ಸಿಖ್ ಸಂಘಟನೆಗಳು ಪ್ರತಿಕ್ರಿಯಿಸಿದ್ದವು ಹಾಗೂ ಅವು ಇದಕ್ಕೆ ನಿದರ್ಶನವಾಗಿ ಕಹಾನ್ ಸಿಂಗ್ ನಭಾ ಅವರ ‘ಹಮ್ ಹಿಂದೂ ನಹೀಂ’ ಎಂಬ ಪುಸ್ತಕದ ಬರಹಗಳನ್ನು ಉಲ್ಲೇಖಿಸಿದ್ದವು.

1951ರ ಆನಂತರದ ಜನಗಣತಿಯಲ್ಲಿ ಹಿಂದೂ, ಮುಸ್ಲಿಮ್, ಸಿಖ್, ಕ್ರೈಸ್ತ, ಜೈನ ಹಾಗೂ ಬೌದ್ಧರ ಜೊತೆಗೆ, ‘ಇತರರು’ ಎಂಬ ಅಂಕಣ ಕೂಡಾ ಇದ್ದಿತ್ತು. ಆದರೆ ಅದನ್ನು 2011ರಲ್ಲಿ ತೆಗೆದುಹಾಕಲಾಗಿತ್ತು. ಬ್ರಿಟಿಷ್ ಆಳ್ವಿಕೆಯ ಯುಗದಲ್ಲಿ ನಡೆದ ಜನಗಣತಿಗಳ ಬಗ್ಗೆ ದೃಷ್ಟಿಹಾಯಿಸಿದರೂ ಕೂಡಾ (1871ರಿಂದ 1931ರವರೆಗೆ), ಬುಡಕಟ್ಟು ಜನರಿಗೆ ತಮ್ಮನ್ನು ಮೂಲನಿವಾಸಿಗಳೆಂದು ಅಂಕಣದಲ್ಲಿ ಗುರುತಿಸಿಕೊಳ್ಳಲು ಅವಕಾಶವಿತ್ತು. ಆದಿವಾಸಿಗಳು ಸುಮಾರು 83 ಬಗೆಯ ಧಾರ್ಮಿಕ ಆಚರಣೆಗಳನ್ನು ಅನುಸರಿಸುತ್ತಿದ್ದು, ಸಾರ್ನಾ, ಗೊಂಡಿ, ಪುನೆಮ್, ಆದಿ ಹಾಗೂ ಕೊಯಾ ಅವುಗಳಲ್ಲಿ ಪ್ರಮುಖವಾಗಿವೆ. ಪ್ರಾಣಿಗಳನ್ನು, ಪ್ರಕೃತಿ ಹಾಗೂ ತಮ್ಮ ಪೂರ್ವಿಕರ ಚೈತನ್ಯಗಳನ್ನು ಆರಾಧಿಸುವುದು ಈ ಬುಡಕಟ್ಟು ಪಂಗಡಗಳಲ್ಲಿ ಕಂಡುಬರುವ ಸಾಮ್ಯತೆಗಳಾಗಿವೆ. ಅವರಲ್ಲಿ ವೈದಿಕ ಪುರೋಹಿತ ವರ್ಗವಿರುವುದಿಲ್ಲ ಅಥವಾ ಪವಿತ್ರ ಗ್ರಂಥಗಳಿರುವುದಿಲ್ಲ ಹಾಗೂ ವಿಶಾಲವಾದ ಹಿಂದೂ ಧರ್ಮದ ಲಕ್ಷಣಗಳಾದ ದೇವರು ಹಾಗೂ ದೇವತೆಗಳ ಆರಾಧನೆ ಅವರಲ್ಲಿಲ್ಲ.

ಆದರೆ ಆರೆಸ್ಸೆಸ್ ತನ್ನ ರಾಜಕೀಯ ಕಾರ್ಯಸೂಚಿಯ ಭಾಗವಾಗಿ ಅವರನ್ನು ವನವಾಸಿಗಳೆಂದು ಪರಿಗಣಿಸುತ್ತದೆ. ಬುಡಕಟ್ಟು ಜನರು ಹಿಂದೂ ಧರ್ಮದ ಭಾಗವಾಗಿದ್ದರು, ಮುಸ್ಲಿಮ್ ದಾಳಿಕೋರರು ತಮ್ಮನ್ನು ಬಲವಂತದ ಮತಾಂತರಿಸುವುದರಿಂದ ಪಾರಾಗಲು ಅವರು ಕಾಡುಗಳಿಗೆ ಪಲಾಯನಗೈದರೆಂದು ಆರೆಸ್ಸೆಸ್ ಪ್ರಚುರಪಡಿಸುತ್ತಾ ಬಂದಿದೆ. ಆದರೆ ಈ ಚರ್ವಿತಚರ್ವಣ ಕಥೆಯು, ಜನಸಂಖ್ಯಾ ವಂಶವಾಹಿನಿಯ ಅಧ್ಯಯನವನ್ನು ಆಧರಿಸಿದ ವ್ಯಾಖ್ಯಾನಗಳಿಗೆ ಸಂಪೂರ್ಣ ವ್ಯತಿರಿಕ್ತವಾದುದಾಗಿದೆ. ಆರ್ಯರು ಭಾರತದ ಮೂಲ ನಿವಾಸಿಗಳಾಗಿದ್ದು, ಇಲ್ಲಿಂದ ಅವರು ಜಗತ್ತಿನ ಎಲ್ಲೆಡೆಗೆ ಹರಡಿದರು ಎಂದು ಹಿಂದೂ ರಾಷ್ಟ್ರವಾದಿಗಳು ಪ್ರತಿಪಾದಿಸುತ್ತಾರೆ. ಟೋನಿ ಜೋಸೆಫ್ ತನ್ನ ‘ಅರ್ಲಿ ಇಂಡಿಯನ್ಸ್’ (ಆದಿಮ ಭಾರತೀಯರು) ಕೃತಿಯು ಏಕ ಜನಾಂಗೀಯ ಸಿದ್ಧಾಂತವನ್ನು ತಳ್ಳಿಹಾಕಿದ್ದು, ಭಾರತೀಯರು ಸಮ್ಮಿಶ್ರ ಜನಾಂಗೀಯರೆಂದು ಹೇಳಿದೆ. 60 ಸಾವಿರ ವರ್ಷಗಳ ಹಿಂದೆ ದಕ್ಷಿಣ ಏಶ್ಯದಿಂದ ವಲಸೆ ಬಂದವರು ಭಾರತದ ಮೊದಲ ಮೂಲನಿವಾಸಿಗಳೆಂದು ಅದು ಹೇಳಿದೆ.
ಇಂಡೋ-ಆರ್ಯ ಸಮುದಾಯವು ಮೂರು ಸಾವಿರ ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬಂದಿತ್ತು ಹಾಗೂ ಅವರ ಇಲ್ಲಿನ ಮೂಲನಿವಾಸಿಗಳನ್ನು ಗುಡ್ಡಗಾಡು ಹಾಗೂ ಅರಣ್ಯಗಳಿಗೆ ಅಟ್ಟಿದ್ದರು. ಈ ಮೂಲನಿವಾಸಿಗಳೇ ಈಗ ಭಾರತದ ಆದಿವಾಸಿ ಸಮುದಾಯವಾಗಿದೆ ಎಂದು ಅದು ಹೇಳಿದೆ.

ಧರ್ಮದ ಸುತ್ತಲೂ ತಮ್ಮ ರಾಷ್ಟ್ರವಾದವನ್ನು ರಚಿಸುವ ಎಲ್ಲಾ ರಾಷ್ಟ್ರವಾದಿಗಳಂತೆಯೇ, ಹಿಂದೂ ರಾಷ್ಟ್ರವಾದಿಗಳು ಕೂಡಾ ಹಿಂದೂಗಳು ಈ ನೆಲದ ಮೂಲನಿವಾಸಿಗಳೆಂದು ಪ್ರತಿಪಾದಿಸುತ್ತಾರೆ. ಅದಕ್ಕೆ ಅನುಗುಣವಾಗಿ ಅವರು ತಮ್ಮ ವ್ಯಾಖ್ಯಾನಗಳನ್ನು ಕೂಡಾ ಎರಕಹೊಯ್ಯುತ್ತಾರೆ. ಆರೆಸ್ಸೆಸ್ ಆರಂಭದಿಂದಲೂ ಬುಡಕಟ್ಟು ಜನರಿಗೆ ಆದಿವಾಸಿಗಳೆಂಬ ಪದವನ್ನು ಬಳಸುವುದಿಲ್ಲ. ಬದಲಿಗೆ ಅವರನ್ನು ವನವಾಸಿಗಳೆಂದು ಕರೆಯುತ್ತದೆ. ಅದರ ಕಾರ್ಯಸೂಚಿಯ ಪ್ರಕಾರ ಬುಡಕಟ್ಟು ಜನರನ್ನು ಆರೆಸ್ಸೆಸ್ ಆದಿವಾಸಿಗಳೆಂದೂ ಕರೆಯದಿದ್ದರೂ, ಅವರು ಹಿಂದೂ ಧರ್ಮದ ಭಾಗವಾಗಿರಬೇಕೆಂದು ಅದು ಬಯಸುತ್ತಿದೆ. ಆದರೆ ತಾವು ಹಿಂದೂಗಳಲ್ಲ. ತಾವು ಹಿಂದೂ ಧರ್ಮದಿಂದ ತುಂಬಾ ವಿಭಿನ್ನವಾದ ನಂಬಿಕೆಗಳು ಹಾಗೂ ಆಚರಣೆಗಳನ್ನು ಅನುಸರಿಸುತ್ತೇವೆ ಎಂದು ಸ್ವತಃ ಆದಿವಾಸಿಗಳೇ ಹೇಳುತ್ತಾರೆ.

ತನ್ನ ರಾಜಕೀಯ ನೆಲೆಯಲ್ಲಿ ಜನರನ್ನು ಅಧಿಕಗೊಳಿಸುವುದಕ್ಕಾಗಿ ಆರೆಸ್ಸೆಸ್ 1980ರ ದಶಕದಿಂದೀಚೆಗೆ ಅದರಲ್ಲೂ ವಿಶೇಷವಾಗಿ ಆದಿವಾಸಿಗಳ ಪ್ರದೇಶಗಳಲ್ಲಿ ತನ್ನ ಚಟುವಟಿಕೆಗಳನ್ನು ಅದು ತೀವ್ರಗೊಳಿಸಿತು. ಸಂಘಪರಿವಾರದ ಭಾಗವಾದ ‘ವನವಾಸಿ ಕಲ್ಯಾಣ ಆಶ್ರಮ’ವು ಇದಕ್ಕೂ ಮೊದಲೇ ಸಕ್ರಿಯವಾಗಿದ್ದರೂ, 1980ರ ದಶಕದಲ್ಲಿ ಆದಿವಾಸಿ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಪ್ರಚಾರಕರನ್ನು ಕಳುಹಿಸುವ ಮೂಲಕ ಅದು ತನ್ನ ಚಟುವಟಿಕೆಗಳನ್ನು ಚುರುಕುಗೊಳಿಸಿತು. ಗುಜರಾತ್, ಡಾಂಗ್ಸ್ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಸ್ವಾಮಿ ಅಸೀಮಾನಂದ, ಮಧ್ಯಪ್ರದೇಶದಲ್ಲಿ ಜಬುವಾವನ್ನು ಕೇಂದ್ರೀಕರಿಸಿದ ಸ್ಥಳಗಳಲ್ಲಿ ಅಸಾರಾಂ ಬಾಪು ಅವರ ಅನುಯಾಯಿಗಳನ್ನು ಹಾಗೂ ಒಡಿಶಾದಲ್ಲಿ ಲಕ್ಷ್ಮಣಾನಂದ ಅವರನ್ನು ನಿಯೋಜಿಸಿತ್ತು. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಕ್ರೈಸ್ತ ಮಿಶನರಿಗಳು ಸಲ್ಲಿಸುತ್ತಿರುವ ಸೇವೆಗಳು ಆದಿವಾಸಿಗಳನ್ನು ಹಿಂದೂಕರಿಸುವ ತಮ್ಮ ಯೋಜನೆಗೆ ತೊಡಕಾಗುತ್ತಿದೆಯೆಂದು ಆರೆಸ್ಸೆಸ್ ಭಾವಿಸಿತ್ತು. ಕ್ರೈಸ್ತ ಮಿಶನರಿಗಳ ವಿರುದ್ಧ ಆರೆಸ್ಸೆಸ್ ನಡೆಸಿದ ಅಪಪ್ರಚಾರವು, ಅಂತಿಮವಾಗಿ ಕ್ರೈಸ್ತಧರ್ಮಗುರು ಪ್ಯಾಸ್ಟರ್ ಗ್ರಹಾಂ ಸ್ಟೇನ್ಸ್ ಅವರ ಬರ್ಬರ ಹತ್ಯೆಗೆ ಕಾರಣವಾಯಿತು. ಇದೇ ರೀತಿಯ ಅಪಪ್ರಚಾರಗಳು ವಿವಿಧ ರೂಪದಲ್ಲಿ ಕ್ರೈಸ್ತ ವಿರೋಧಿ ಹಿಂಸಾಚಾರಕ್ಕೆ ದಾರಿ ಮಾಡಿಕೊಟ್ಟದ್ದು, 2008ರಲ್ಲಿ ನಡೆದ ಕಂಧಮಾಲ್ ಹಿಂಸಾಚಾರವು ಅವುಗಳಲ್ಲಿ ಅತ್ಯಂತ ಭಯಾನಕವಾದುದಾಗಿತ್ತು.

ಹಿಂದೂಧರ್ಮದ ತೆಕ್ಕೆಗೆ ಬುಡಕಟ್ಟು ಜನರನ್ನು ಸಾಂಸ್ಕೃತಿಕವಾಗಿ ಮಿಳಿತಗೊಳಿಸಲು ಅವರು ಬುಡಕಟ್ಟು ಪ್ರದೇಶಗಳಲ್ಲಿ ಸರಣಿ ಸಮಾವೇಶಗಳನ್ನು, ಧಾರ್ಮಿಕ ಸಭೆಗಳನ್ನು ಏರ್ಪಡಿಸಿದ್ದರು. ಡಾಂಗ್ಸ್ ಹಾಗೂ ಇತರ ಆದಿವಾಸಿ ಬಾಹುಳ್ಯದ ಪ್ರದೇಶಗಳಲ್ಲಿ ನಡೆದ ಶಬರಿ ಕುಂಭವು ಭಯದ ವಾತಾವರಣವನ್ನು ಸೃಷ್ಟಿಸಿತ್ತು. ಈ ಸಮಾವೇಶದ ಭಾಗವಾಗುವಂತೆ ಆದಿವಾಸಿಗಳಿಗೆ ಸೂಚಿಸಲಾಯಿತು ಹಾಗೂ ಕೇಸರಿ ಧ್ವಜಗಳನ್ನು ವಿತರಿಸಲಾಯಿತು ಹಾಗೂ ಅದನ್ನು ತಮ್ಮ ಮನೆಗಳಲ್ಲಿ ಹಾರಿಸುವಂತೆ ಅವರಿಗೆ ಸೂಚಿಸಲಾಯಿತು. ಈ ಪ್ರದೇಶಗಳಲ್ಲಿ ಶಬರಿ ಹಾಗೂ ಹನುಮಂತ ಹೀಗೆ ಎರಡು ಮೇರು ಧಾರ್ಮಿಕ ಸಂಕೇತಗಳನ್ನು ಜನಪ್ರಿಯಗೊಳಿಸಲಾಯಿತು. ಇದಕ್ಕೆಲ್ಲಾ ಮುಕುಟವಿಟ್ಟಂತೆ ಏಕಲವ್ಯ ವಿದ್ಯಾನಿಲಯಗಳು ಈ ಪ್ರದೇಶಗಳಲ್ಲಿ ಆರೆಸ್ಸೆಸ್‌ನಿಂದ ವ್ಯಾಖ್ಯಾನಿಸಲ್ಪಟ್ಟ ಇತಿಹಾಸವನ್ನು ಬೋಧಿಸತೊಡಗಿದವು. ಇನ್ನೊಂದು ದೃಷ್ಟಿಕೋನದಲ್ಲಿ ನೋಡುವುದಾದರೆ ಆದಿವಾಸಿಗಳು ವಾಸಿಸುತ್ತಿರುವ ಪ್ರದೇಶಗಳು ಹೇರಳವಾದ ಖನಿಜಗಳಿಂದ ಸಮೃದ್ಧವಾದ ಪ್ರದೇಶಗಳಾಗಿವೆ. ಹೀಗಾಗಿ ಈ ಪ್ರದೇಶಗಳಲ್ಲಿ ನಿಯಂತ್ರಣ ಸಾಧಿಸಲು ಬಿಜೆಪಿ ಬೆಂಬಲಿಗ ಕಾರ್ಪೊರೇಟ್ ಶಕ್ತಿಗಳು ಬಯಸುತ್ತಿವೆ.

ಮೂಲನಿವಾಸಿಗಳ ಜಗತ್ತು ಬೇರೆಯೇ ಆದುದಾಗಿದೆ. ಅವರು ಪ್ರಾಣಿ ಪೂಜಕರಾಗಿದ್ದಾರೆ ಮತ್ತು ತಮ್ಮದೇ ಆದ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ಅವರಲ್ಲಿ ಹಲವರು ತಮ್ಮ ಆಯ್ಕೆಯ ಧರ್ಮಗಳಿಗೆ ಮತಾಂತರಗೊಂಡಿದ್ದಾರೆ. ಇಂತಹ ವಿಷಯಗಳಲ್ಲಿ ಸ್ವಯಂಗ್ರಹಿಕೆಯನ್ನು ಹೊಂದುವುದು ಅತ್ಯಂತ ಮುಖ್ಯವಾದುದಾಗಿದೆ. ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ‘‘ಆದಿವಾಸಿಗಳು ಹಿಂದೂಗಳಲ್ಲ’’ ಎಂದು ಗಮನಸೆಳೆದಿದ್ದಾರೆ. ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು, ನಮ್ಮ ಜನಗಣತಿಯ ಫಾರಂಗಳಲ್ಲಿ ಆದಿವಾಸಿಗಳು ಮೂಲನಿವಾಸಿಗಳೆಂಬ ಸ್ಥಾನ ಪಡೆಯುವ ಅಗತ್ಯವಿದೆ.

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News