ಈ ಹೊತ್ತಿನ ಹೊತ್ತಿಗೆ
‘ಮನೆಯ ಹೆಬ್ಬಾಗಿಲಿನ ಮೇಲೆ ಇರುವ ನಾಗಂದಿಗೆಯಲ್ಲಿ ಏನೆಲ್ಲಾ ಬೇಕಾದ ಮತ್ತು ಬೇಡವಾದವಸ್ತುಗಳನ್ನೂ ತಳ್ಳಿ ಬಿಟ್ಟಿರುತ್ತೇವೆ ಎಂಬುದು ಕಂಡವರಿಗೆ ಗೊತ್ತಿದೆ. ನಾಗಂದಿಗೆಯ ಮಹತ್ವ, ಅವಶ್ಯವಾದುದನ್ನು ಹುಡುಕುವಾಗ ಕೆಲವು ಅನಗತ್ಯವಾದ ವಸ್ತುಗಳೂ ಕೈಯನ್ನು ಸ್ಪರ್ಶಿಸಿ ‘ನೋಡು, ನಾನು ಇಲ್ಲಿದ್ದೇನೆ’ ಎಂದು ಹೇಳಿದಂತಾಗುತ್ತದೆ. ಹಾಗೆಯೇ ನಾನು ಪೇರಿಸಿಟ್ಟ ಕೆಲವು ಹಳೆಯ ನೆನಪುಗಳು ನನ್ನ ಕೈ ಹಿಡಿದು ಜಗ್ಗಿಸಿ ಬರೆಯುವಂತೆ ಸ್ಫೂರ್ತಿ ತುಂಬಿಸಿವೆ. ನಾಗಂದಿಗೆಯೊಳಗಿನ ವಸ್ತುಗಳು ಅಕ್ಷಯವಾಗಿರುವಂತೆ ನನ್ನ ನೆನಪುಗಳೂ ಅಕ್ಷಯ ಭಂಡಾರವೇ ಆಗಿದೆ. ಆದರೆ ನಾನು ಮಾತ್ರ ನನ್ನ ಕೈಗೆ ದಕ್ಕಿದವುಗಳನ್ನೇ ಕೃತಿಗಿಳಿಸಿದ್ದೇನೆ. ನನ್ನದೇನಿದ್ದರೂ ಮಣ್ಣಿನ ಮನೆಗಳ ಹಂಚು ಹೊದಿಸಿದ ಕಾಲದ ಅನುಭವಗಳು...’
ತನ್ನ ಆತ್ಮಕಥನ ‘ನಾಗಂದಿಗೆಯೊಳಗಿಂದ’ ಪುಟಗಳ ಕುರಿತಂತೆ ಲೇಖಕಿ ಬಿ. ಎಂ. ರೋಹಿಣಿ ಅವರ ಮಾತಿದು. ಮಧ್ಯಮ ವರ್ಗದ ಕುಟುಂಬದೊಳಗಿನ ಕತ್ತಲ ಕೋಣೆಗೆ ದೀಪದ ಬೆಳಕು ಹಚ್ಚಿಟ್ಟಂತೆ ಈ ಕೃತಿಯಲ್ಲಿ ತನ್ನ ಬದುಕು ಕಂಡು ಉಂಡ ನಿಷ್ಠುರ ಸತ್ಯಗಳನ್ನು ಅವರು ಹಂಚಿಕೊಳ್ಳುತ್ತಾರೆ. ಸ್ತ್ರೀವಾದಿಯಾಗಿ, ಶಿಕ್ಷಕಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ, ಕಥೆಗಾರ್ತಿಯಾಗಿ ...ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ರೋಹಿಣಿ ಅವರನ್ನು ಗಟ್ಟಿಯಾಗಿ ರೂಪಿಸಿದ ಅವರ ಬದುಕು, ಅಂದಿನ ತಲೆಮಾರಿನ ಬಹುತೇಕ ಮಹಿಳೆಯರ ಬದುಕೂ ಹೌದು. ಒಂದೂವರೆ ವರ್ಷದ ಮಗುವಾಗಿದ್ದಾಗ ಲೇಖಕಿಯ ಎಡಕೈಗೆ ಬಿಸಿ ಪದಾರ್ಥ ಬಿದ್ದು ಸಂಪೂರ್ಣ ಬೆಂದು ಹೋಗುತ್ತದೆ. ಆದರೆ ಈ ಕೃತಿಯಲ್ಲಿ ಅದೊಂದು ರೂಪಕದಂತಿದೆ. ಬೇಯುವ ಪ್ರಕ್ರಿಯೆ ಅವರ ಬದುಕಿನಲ್ಲಿ ಮತ್ತೆ ಮತ್ತೆ ಎದುರಾಗುತ್ತದೆ. ರೋಹಿಣಿ ಎಂದರೆ ಬೆಂದು ಹದವಾದ ಮಡಿಕೆ.
ಕೌಟುಂಬಿಕ ವಲಯದಲ್ಲಿ ಹೆಣ್ಣು ಎದುರಿಸುವ ಸವಾಲು, ಸಮಾಜದಲ್ಲಿ ಆಕೆಯ ಮುಂದೆ ಎದುರಾಗುವ ಪ್ರಶ್ನೆ ಅವುಗಳಿಗೆ ಆಕೆ ನೀಡುವ ಉತ್ತರಗಳು ಎಲ್ಲ ಮಹಿಳೆಯರಿಗೂ ಆತ್ಮವಿಶ್ವಾಸವನ್ನು ನೀಡುವಂತಹದು. ಒಂಟಿ ಹೆಣ್ಣೊಬ್ಬಳು ಸ್ವಾವಲಂಬಿಯಾಗಿ ತನ್ನ ಬದುಕನ್ನು ತಾನೇ ರೂಪಿಸಲು ಹೊರಡುವುದು ಈಗಲೂ ಸುಲಭದ ಮಾತಲ್ಲ. ಹೀಗಿರುವಾಗ 70ರ ದಶಕದ ಕಾಲದಲ್ಲಿ ಅಂತಹದೊಂದು ಮನಸ್ಥಿತಿಯನ್ನು ಮಹಿಳೆ ಹೊಂದುವಾಗ ಆಕೆಗೆ ಎದುರಾಗುವ ಅಡೆತಡೆಗಳು ಯಾವುವು ಎನ್ನುವ ವಿವರಗಳು ಇಲ್ಲಿವೆ. ಈ ಕೃತಿಯಲ್ಲಿ ಹೊರಗಿನ ವಿವರಕ್ಕಿಂತ ನಮ್ಮನ್ನು ಕಾಡುವುದು ಅವರ ಒಳಗಿನ ವಿವರಗಳು. ಲೇಖಕಿ ಅದರ ಕುರಿತಂತೆ ಹೀಗೆ ಬರೆಯುತ್ತಾರೆ ‘‘ಸಮಾಜದೊಂದಿಗೆ ಗಟ್ಟಿಯಾದ ಬಾಂಧವ್ಯವನ್ನು ಬೆಳೆಸಿಕೊಂಡು ನಾನು ಕಂಡುಕೊಂಡ ಸತ್ಯವೇನೆಂದರೆ, ನಮ್ಮ ಸುತ್ತಮುತ್ತಲೂ ಸಮಾಜವೇ ಕಟ್ಟಿದ ಗೋಡೆಗಳನ್ನಾದರೂ ಸುಲಭದಲ್ಲಿ ಕೆಡವಬಹುದು. ಆದರೆ ನಮ್ಮ ಮನಸ್ಸಿನಲ್ಲಿ ನಾವೇ ಕಟ್ಟಿಕೊಂಡ ಗೋಡೆಗಳನ್ನು ಅಲ್ಲಾಡಿಸುವುದು ಬಿಡಿ, ಮುಟ್ಟಲಿಕ್ಕೂ ಸಾಧ್ಯವಿಲ್ಲ...’’
ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರು ಈ ಕೃತಿಯನ್ನು ಹೊರತಂದಿದೆ. 288 ಪುಟಗಳ ಈ ಕೃತಿಯ ಮುಖಬೆಲೆ 300 ರೂಪಾಯಿ. ಆಸಕ್ತರು 97317 84976 ದೂರವಾಣಿಯನ್ನು ಸಂಪರ್ಕಿಸಬಹುದು.