ಪಾಕಿಸ್ತಾನಕ್ಕೆ ರೈಲು ಪಯಣ

Update: 2020-02-22 16:13 GMT

ಅಮೃತಾ ದತ್ತಾ

ಸ್ವಾತಂತ್ರ್ಯದ ನಂತರದ ಹಲವು ದಶಕಗಳು ಇಂದು ನಾವು ಬಾಂಗ್ಲಾದೇಶ ಎಂದು ಕರೆಯುತ್ತಿರುವ ನೆಲದಲ್ಲಿ ತಮ್ಮ ಧರ್ಮದ ಕಾರಣಕ್ಕಾಗಿ ಲಕ್ಷಾಂತರ ಹಿಂದೂಗಳು ಹಿಂಸೆಗೊಳಗಾಗಿದ್ದರು. ಅವರು ಭಾರತದಲ್ಲಿ ಆಶ್ರಯ ಕಂಡುಕೊಂಡರು. ಅದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. 1971ರ ನಂತರ ಮರುರೂಪುಗೊಳ್ಳುತ್ತಿರುವ ಪಶ್ಚಿಮ ಬಂಗಾಳದ ಚರಿತ್ರೆ ಇದು. ಇದು ನನ್ನ ಕುಟುಂಬದ ಚರಿತ್ರೆಯೂ ಹೌದು. ಹಾಗೆಯೇ ಭಾರತದಲ್ಲಿ ಬೆಳವಣಿಗೆ ಕಂಡುಕೊಳ್ಳುತ್ತಿರುವ ಮತ್ತು ಪರಿಪಾಟಲು ಪಡುತ್ತಿರುವ ಹಲವರ ಚರಿತ್ರೆ ಕೂಡ.

 ಆ ಪಾಸ್‌ಪೋರ್ಟ್ ಕೆಂಪಗಿತ್ತು, ಮಾಮೂಲಿನಂತೆ ಶಾಯಿ ನೀಲಿ ಬಣ್ಣದ್ದಾಗಿರಲಿಲ್ಲ. ಅದರೊಳಗೆ ಹಳದಿಬಣ್ಣಕ್ಕೆ ತಿರುಗಿ ಮಾಸಿಹೋಗಿದ್ದ ಒಂದು ಪುಟದಲ್ಲಿ ಹುಡುಗನೊಬ್ಬನ ಫೋಟೊ. ಸೂಟಿಯಾದ ಮುಖ. ಅದು ಯಾರು ಅಂತ ತಿಳಿಯುತ್ತಿರಲಿಲ್ಲ. ಅದು ನಮ್ಮ ತಂದೆ. ಕವರ್ ಮೇಲೆ ಅಶೋಕ ಚಕ್ರದ ಲಾಂಛನದ ಕೆಳಗೆ ಬರೆದಿತ್ತು- ‘‘ಇಂಡಿಯಾ-ಪಾಕಿಸ್ತಾನ್ ಪಾಸ್‌ಪೋರ್ಟ್ (ಈಸ್ಟ್ ಜೋನ್)’’ ಅಂತ. ಆ ಹೈಫನ್ ವಿಶೇಷವಾಗಿತ್ತು. ಆ ಹೈಫನ್ ಅಡ್ಡಗೆರೆ ಎರಡು ವೈರಿ ದೇಶಗಳ ನಡುವಿನ ಮುಳ್ಳು ಬೇಲಿಯಾಗಿರಲಿಲ್ಲ. ಬದಲಾಗಿ ಅದು ಗಡಿ ದಾಟಲು ಪರವಾನಿಗೆಯಾಗಿತ್ತು. ನಾನು ಕಲ್ಪಿಸಿಕೊಳ್ಳುವಂತೆ ಅದೊಂದು ಇಕ್ಕಟ್ಟಿನ ಹಾದಿಯೇ. 1947ರ ನಂತರ ನನ್ನ ಅಪ್ಪ ಮತ್ತು ಅವರ ಸೋದರರಿಗೆ ಹಳೆಯ ದೇಶದಿಂದ ಹೊಸ ದೇಶಕ್ಕೆ ಅಂದರೆ ಇಂಡಿಯಾದಿಂದ ಪೂರ್ವ ಪಾಕಿಸ್ತಾನಕ್ಕೆ ಹೋಗಿಬರಲು ಅದು ಸಾಕಿತ್ತು. ಈ ಪರವಾನಿಗೆ ಇರುವವರೆಗೆ ಅವರು ಹೋಗಿಬಂದು ಮಾಡುತ್ತಿದ್ದರು.

ಉತ್ತರದಲ್ಲಿ ಹೇಗಿತ್ತೋ ಹಾಗೆಯೇ ಪೂರ್ವದಲ್ಲೂ ಇತ್ತು. ವಿಭಜನೆ ಅನ್ನೋದು ಮನೆಮಾರು ಆಸ್ತಿಪಾಸ್ತಿಗಳ ನಡುವೆ ಒಂದು ಬಲವಾದ ಗೆರೆ ಎಳೆದುಬಿಟ್ಟಿತ್ತು. ನಮ್ಮಜ್ಜ ಮೊಂಗೊಲಪುರ್ ಹಳ್ಳಿಯ ಇನ್ನೊಂದು ಬದಿಯ ಸಿಲ್ಹೆಟ್‌ನಲ್ಲಿ ಉಳಿದರು. ಅದು ಅವರಿಗೆ ಜನ್ಮ ನೀಡಿದ ಸ್ಥಳ. ಅವರ ಬೇರುಗಳು ಇದ್ದದ್ದು ಅಲ್ಲೇ. ಅವರ ಕೆಲವು ಮಕ್ಕಳು ನೂರಾರು ಕಿಲೋಮೀಟರುಗಳು ಪ್ರಯಾಣ ಮಾಡಿ, ಬ್ರಿಟಿಷರು ಕಟ್ಟಿದ್ದ ಟೀ ಎಸ್ಟೇಟಿಗೆ ಕೆಲಸ ಹುಡುಕಿಕೊಂಡು ಬಂದಿದ್ದರು. ಅವರೆಲ್ಲಾ ದಿಢೀರನೆ ಇನ್ನೊಂದು ದೇಶದವರಾಗಿಬಿಟ್ಟರು. ಅವರ ಹಣೇಬರಹವೇ ಬದಲಾಗಿಬಿಟ್ಟಿತು. ವಿಭಜನೆಯ ನಂತರವೂ ಆಗ ಒಂದಿಷ್ಟು ಫಾರ್ಮುುಗಳನ್ನು ಭರ್ತಿಮಾಡಿ ಚೆಕ್‌ಪೋಸ್ಟ್‌ನಲ್ಲಿ ನೀಡಿ ಅಲ್ಲಿಗೂ ಇಲ್ಲಿಗೂ ಹೋಗಿಬರಬಹುದಿತ್ತು. ಅಂತಹ ಪಾಸ್‌ಪೋರ್ಟ್‌ಗಳನ್ನು 1950ರ ಆರಂಭದಲ್ಲಿ ಕೊಡುತ್ತಿದ್ದರು. ಒಟ್ಟಿನಲ್ಲಿ ಸುಲಲಿತವಾಗಿ ನೀರಿನಂತೆ ಏಕವಾಗಿದ್ದ ನಾಡನ್ನು ಗೆರೆ ಎಳೆದು ಭೂಪಟವಾಗಿಸಿತ್ತು, ದೇಶವಾಗಿಸಿತ್ತು, ರಾಷ್ಟ್ರವಾಗಿಸಿತ್ತು, ತಾಯ್ನೆಲವಾಗಿಸಿ ಅಥವಾ ವೈರಿನೆಲವಾಗಿಸಿ, ನಡುಗಡ್ಡೆಕಟ್ಟಿಸಿಬಿಟ್ಟಿತು. ಜುಲೈ 1947ಕ್ಕೆ ಮೊದಲು ನಡೆದ ರೆಫರೆಂಡಂನಲ್ಲಿ ಸಿಲ್ಹೆಟ್ ಪ್ರಾಂತವೂ ಪಾಕಿಸ್ತಾನಕ್ಕೆ ಸೇರಿತು. ಟೀ ತೋಟಗಳಿಗೆ ಹೆಸರುವಾಸಿಯಾಗಿದ್ದ ಸಿಲ್ಹೆಟ್ ಈ ಮೊದಲು ಅಸ್ಸಾಮಿನ ಭಾಗವಾಗಿತ್ತು. ಅಸ್ಸಾಮಿ ನಾಯಕರು ಬಂಗಾಳಿ ಪ್ರಾಬಲ್ಯದಿಂದ ಜಿಗುಪ್ಸೆಗೊಂಡಿದ್ದರು. ಇದನ್ನು ಅವರು ಜನಾಭಿಪ್ರಾಯ ಸಂಗ್ರಹಣೆಗೆ ಮೊದಲೇ ಆ ಬಗ್ಗೆ ಸ್ಪಷ್ಟಪಡಿಸಿದ್ದರು. 19ನೇ ಶತಮಾನದಲ್ಲಿ ಬ್ರಿಟಿಷರು ಬಂಗಾಳಿಗಳು ಹೆಚ್ಚಿಗೆ ಇದ್ದ ಭಾಗವನ್ನು ಆಗ ಅಸ್ಸಾಮಿಗೆ ಸೇರಿಸಿದ್ದರಲ್ಲಿ ಕಂದಾಯ ಹೆಚ್ಚು ಬರುತ್ತೆ ಅನ್ನೋ ಆಸೆಯೂ ಇರಬೇಕು. ಆದರೀಗ ಅವರು ಅದನ್ನು ಯಾವ ಸಂಕೋಚವೂ ಇಲ್ಲದೆ ವಿಭಜಿಸಿಬಿಟ್ಟರು. ಬರಾಕ್ ಕಣಿವೆಯ ಒಂದಿಷ್ಟು ಭಾಗ ಬಿಟ್ಟರೆ ಉಳಿದದ್ದನ್ನೆಲ್ಲಾ ಪ್ರತ್ಯೇಕಿಸಿದರು. ಇಂದು ಅದರ ಅಂಚಿನಲ್ಲಿಯೇ ಇರುವ ಕರೀಂಗಂಜ್ ನಗರ ಹಾಗೂ ಅಲ್ಲಿ ನನ್ನಪ್ಪ ಬರಿಗಾಲಿನಲ್ಲೇ ಫುಟ್‌ಬಾಲ್ ಆಡಿದ್ದ ಆ ಕೆಸರು ಗದ್ದೆಗಳು-ಇವೆಲ್ಲವೂ ಕುಶಿಯರಾ ನದಿಯಲ್ಲಿಯೇ ತನ್ನ ಕಾಲುಗಳನ್ನು ಇಳಿಬಿಟ್ಟುಕೊಂಡಿದೆ. ನದಿಯ ಇನ್ನೊಂದು ಬದಿಯಲ್ಲಿ ಸಿಲ್ಹೆಟ್ ಇದೆ.

ಈ ಹೊಸ ರಾಷ್ಟ್ರ, ಈ ಪೌರತ್ವ ಮುಂತಾದ ಹೊಸ ಕಲ್ಪನೆಗಳಿಗೆ ಹೋಲಿಸಿದರೆ ಆ ಹಳೆಯ ಸಂಬಂಧಗಳೇ ತುಂಬಾ ಗಟ್ಟಿ ಎನಿಸುತ್ತದೆ. ಹಾಗಾಗಿ ನನ್ನ ತಂದೆ ಹಾಗೂ ಅವರ ಅಣ್ಣತಮ್ಮಂದಿರು ನಮ್ಮಲ್ಲಿಗೆ ಪದೇ ಪದೇ ಬಂದು ಹೋಗುತ್ತಿದ್ದರು. ಹಿಂದೂ-ಮುಸ್ಲಿಮ್ ಕೋಮುದಂಗೆಗಳು ಹಿಂದೂಗಳನ್ನು ಭಾರತದ ಗಡಿಯತ್ತ ಧಾವಿಸುವಂತೆ ಮಾಡುತ್ತಿತ್ತು. ಆದರೂ ಹಲವರಿಗೆ ತಮ್ಮ ನೆಲೆ ಬದಲಿಸಬೇಕು ಅನ್ನಿಸಿರಲಿಲ್ಲ. ಪಾಕಿಸ್ತಾನಕ್ಕೆ ಹೋಗಿಬರುವ ರೈಲು ಹತ್ತಿ ಪದೇಪದೇ ಅಲ್ಲಿಗೂ ಇಲ್ಲಿಗೂ ಹೋಗಿಬರುತ್ತಿದ್ದರು. ಭಾರತಕ್ಕೆ ಸೇರಿದ ಮಹಿಸಾಸನ್ ರೈಲುನಿಲ್ದಾಣಕ್ಕೆ ಮೊದಲು ಹೋಗಿ, ಅಲ್ಲಿಂದ ಈಗ ವಿದೇಶವಾಗಿಬಿಟ್ಟಿದ್ದ ಲಾತು ನಗರಕ್ಕೆ ಬಂದು ಹೋಗುತ್ತಿದ್ದರು. ಆ ಲಾತು ನಗರ ಮಹಿಸಾಸನ್‌ಗೆ ಅನ್ಯೋನ್ಯವಾಗಿ ಅಂಟಿಕೊಂಡೇ ಇತ್ತು. ಆದರೀಗ ಅದು ವಿದೇಶೀ ನಾಡಾಗಿ ಬದಲಾಗಿತ್ತು. ಈ ಪ್ರಯಾಣಗಳು 1959ರ ಹೊತ್ತಿಗೆ ಕ್ರಮೇಣ ನಿಂತೇ ಹೋದವು. ಮಕ್ಕಳು ಬಾರದಿದ್ದಲ್ಲಿ ಮಕ್ಕಳನ್ನು ನೋಡಲು ಅವರ ತಂದೆಯೇ ಪಾಕಿಸ್ತಾನಿ ಪಾಸ್‌ಪೋರ್ಟ್‌ನಲ್ಲಿ ಬರುತ್ತಿದ್ದರು. ನನ್ನಜ್ಜ ಕೊನೆಯ ಬಾರಿ ಕರಿಂಗಂಜ್‌ಗೆ ಬಂದಾಗ ಮಕ್ಕಳೆಲ್ಲಾ ಅವರನ್ನು ಅಕ್ಕರೆಯಿಂದ ಮುತ್ತಿಕೊಂಡಿದ್ದರು. ಆದರೂ ಅವರೋ ಮರಳಿಹೋಗಲು ಚಡಪಡಿಸುತ್ತಿದ್ದರು. ರೈಲ್ವೆ ಸ್ಟೇಷನ್‌ಗೆ ನಡೆದುಕೊಂಡು ಹೊರಟೇಬಿಟ್ಟರು. ಹುಟ್ಟಿದ ಊರಿಗೆ ಹೋಗುವ ರೈಲನ್ನು ಯಾವಾಗ ಹತ್ತುತ್ತೇನೋ ಅಂತ ತವಕಿಸುತ್ತಿದ್ದರು. ‘‘ಇಲ್ಲಿರಲು ನನಗೆ ಇಷ್ಟ ಇಲ್ಲ.....’’ ಇಲ್ಲಿ ಸಾಯೋದಕ್ಕಂತೂ ನನಗೆ ಬಿಲ್ಕುಲ್ ಇಷ್ಟ ಇಲ್ಲ ಅಂತ ವಾಪಸ್ ಹೋಗಿಬಿಟ್ಟರು. ವಿದೇಶಿ ನೆಲದಲ್ಲಿ ಸಾಯುವ ಸ್ಥಿತಿ ಅವರಿಗೆ ಬರಲಿಲ್ಲ.

ಅದು ಅಂದರೆ ಪಶ್ಚಿಮ ಪಾಕಿಸ್ತಾನ ಈಗ ನನ್ನಜ್ಜನ ಮಕ್ಕಳ ದೇಶವಾಗಿಬಿಟ್ಟಿತ್ತು. ಆದರದು ಸುರಕ್ಷಿತ ಸ್ಥಳವೆನಿಸಿರಲಿಲ್ಲ. ಅದರಲ್ಲೂ ಒಬ್ಬ ಮಗನಿಗಂತೂ ಅಲ್ಲಿ ಉಳಿಯುವುದು ಅಪಾಯವೆನಿಸಿಬಿಟ್ಟಿತ್ತು. ಅವರು ಅಯ್ಯೂಬ್ ಖಾನ್‌ರ ಆಡಳಿತದ ಪೂರ್ವ ಪಾಕಿಸ್ತಾನದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದವರು. ಅವರು 1967ರ ಒಂದು ರಾತ್ರಿ ಅಲಿನಗರದ ಟೀ ತೋಟದಲ್ಲಿನ ತನ್ನ ಅಣ್ಣನ ಮನೆಗೆ ಬಂದು, ರೇಡಿಯೊ ಆನ್ ಮಾಡಿ, ದೀಪಗಳನ್ನು ಹಾಕಿ, ತನ್ನ ಅಣ್ಣನ ಮನೆಯವರನ್ನೆಲ್ಲಾ ಕರೆದುಕೊಂಡು ಆ ಕತ್ತಲೆಯಲ್ಲಿ ನಡೆದು ಬಿಟ್ಟರು-ಭಾರತದ ಕಡೆಗೆ.

*****

ಇತಿಹಾಸದ ಗೋಜಲಿನಲ್ಲಿ ಸಿಲುಕಿಕೊಂಡಿರುವ ನನ್ನಂತಹ ಮಂದಿ ಈ ಕಥೆಗಳನ್ನು ಕೇಳಿಕೊಂಡು ಬೆಳೆಯಲಿಲ್ಲ. ಊಟಕ್ಕೆ ಕೂತಾಗಲೂ ಬಿಟ್ಟುಬಂದ ಹುಟ್ಟೂರಿನ ಹಳಹಳಿಕೆ ನಮ್ಮನ್ನು ಕಾಡಲಿಲ್ಲ. ಬಿಟ್ಟುಬಂದ ಜನರಿಗಾಗಿ ಹಂಬಲಿಸಲಿಲ್ಲ. ವಿಭಜನೆಯಲ್ಲಿ ಕಳೆದುಕೊಂಡ ಸಾಮಾನು ಸಂಜಾಮುಗಳ ಬಗ್ಗೂ ಕೊರಗಲಿಲ್ಲ. ಯಾರಿಗೂ ಬೇಡವಾದ ಈ ಜನರು ಹುಟ್ಟಿಬೆಳೆದ ನೆನಪುಗಳ ವಾಂಛೆಗೆ ಜೋತುಬೀಳದೆೆ ವಲಸೆ ಹೋಗಲು ಸಿದ್ಧರಾಗಿದ್ದರು. ನನ್ನಪ್ಪ ಶಿಲ್ಲಾಂಗಿನ ಬೆಟ್ಟಗಳ ಕಡೆ ಸಾಗಿ ಅಲ್ಲಿ ಅವರಿಗೆ ಕೆಲಸ ಸಿಕ್ಕಿ ಅಲ್ಲೇ ಮನೆ ಮಾಡಿಕೊಂಡರು. ಈ ಬೆಟ್ಟದ ತಾಣ ಈ ಸಮುದಾಯಕ್ಕೆ ಆಧುನಿಕತೆಯೊಂದಿಗೆ ಮುಖಾಮುಖಿಯಾಗುವ ಅವಕಾಶವನ್ನು ಒದಗಿಸುವುದರ ಜೊತೆಗೆ ಆ ನೆಲದ ಹಿಮಾವೃತ ಪೈನ್ ಮರಗಳು ಹಾಗೂ ಮೋಡಿಮಾಡುವ ಆಕಾಶದ ಕಾವ್ಯವನ್ನೂ ಜೋಡಿಸಿತ್ತು. ಪಾಸ್ ಪೋರ್ಟ್ ಮೇಲೆ ಮುದ್ರೆಯೊತ್ತಿರುವ ಈ ಕನಸಿನ ಮಂಜಿನ ನಗರಿಯಲ್ಲಷ್ಟೇ ಈ ಪೌರತ್ವದ ಭರವಸೆ ಈಡೇರುವುದಕ್ಕೆ ಸಾಧ್ಯವೇನೋ!

 ನಾನು ಬೆಳೆದ ಷಿಲ್ಲಾಂಗ್ ಅದು ಇನ್ನೂ ಛಿದ್ರವಿಚ್ಛಿದ್ರ ನಗರವಾಗಿತ್ತು. ಎಳೆಯರಾದ ನಮಗೇನೆ ನಾವು ನೆಲ, ನೆಲೆಯಿಲ್ಲದವರು ಎಂಬ ನಿಜ ಅರ್ಥವಾಗಿತ್ತು. ಅಲ್ಲಿನ ರಸ್ತೆಗಳ ಮೇಲೆ ನಾವು ನಡೆದಾಡುವಾಗ ನಮ್ಮ ಹೆಜ್ಜೆಗಳನ್ನದು ದುರ್ಬಲಗೊಳಿಸುತ್ತಿತ್ತು. ಮುಂದಿನ ಕೆಲವು ದಶಕಗಳಲ್ಲಿ ಈ ಬುಡಕಟ್ಟು ನಾಡಿನಲ್ಲಿ ಬಂಗಾಳಿಗಳು ಬೇಡದ ಡಾಕರ್ (Dkhar) ಆಗಿಬಿಟ್ಟಿದ್ದೆವು. ಇದು ಬಿಹಾರಿ ಹಾಗೂ ನೇಪಾಳಿಗಳ ವಿಷಯದಲ್ಲೂ ನಿಜವಾಗಿತ್ತು. ನಿರಂತರ ಸುಲಿಗೆ, ದಾಳಿ ಹಾಗೂ ನಾವು ಅನುಭವಿಸಿದ ಹಿಂಸೆ-ಯಾವ ದಾಖಲೆಗಳೂ ಇಲ್ಲದೆ ಜರುಗುತ್ತಿತ್ತು ಮತ್ತು ನಮಗೆ ನ್ಯಾಯವೂ ಸಿಗುವುದಿಲ್ಲ ಎನ್ನುವುದೂ ಕೂಡ ತಿಳಿದಿತ್ತು. ಇದು ನಮ್ಮನ್ನು ಮತ್ತಷ್ಟು ಕುಗ್ಗಿಸಿತ್ತು. ಹಾಗಾಗಿ ಇನ್ನಷ್ಟು ಕಳೆದುಕೊಳ್ಳುವುದು ಬೇಡ ಅನ್ನಿಸಿತು. ಅಲ್ಲಿಂದ ಹೊರಟುಬಿಡೋಣ ಅನ್ನಿಸಿತು. ನಮ್ಮ ಅಪ್ಪ ಅಮ್ಮ ಮತ್ತೊಂದು ವಲಸೆಗೆ ಸಿದ್ಧವಾದರು.

ಹೊಗೆಯುಗುಳುತ್ತಿದ್ದ ಕಲ್ಕತ್ತೆಯ ಸಣ್ಣ ಅಪಾರ್ಟ್‌ಮೆಂಟ್‌ಗಳಲ್ಲಿ ಸಮುದಾಯದ ಹಲವು ಹಿರಿಯರು ಹರಿದು ಹಂಚಿಹೋಗಿದ್ದರು. ದಿಗ್ಬ್ರಾಂತರಾಗಿದ್ದ ಸಂಬಂಧಿಕರು ‘‘ಕೊನೇಪಕ್ಷ ಇಲ್ಲಿ ನಾವು ಎರಡನೆಯ ದರ್ಜೆಯ ಪ್ರಜೆಗಳಲ್ಲ’’ ಎಂದು ಆಗಾಗ ಹೇಳಿಕೊಳ್ಳುತ್ತಿದ್ದುದನ್ನು ನಾನು ಕೇಳಿಸಿಕೊಂಡಿದ್ದೇನೆ. ಕೆಲವೊಮ್ಮೆ ದೊಡ್ಡ ಪಟ್ಟಣ ಹುಟ್ಟುಹಾಕುವ ಒಂಟಿತನ, ಸ್ನೇಹಿತರನ್ನು ಕಳೆದುಕೊಂಡಿದ್ದರ ಜೊತೆಗೆ ನೆಲೆಕಂಡುಕೊಳ್ಳಲು ಸಾಧ್ಯವಾಗದ ತಲ್ಲಣ-ಇವೆಲ್ಲವೂ ಕೂಡಿಕೊಂಡು ಖಿನ್ನತೆಯಿಂದ ಎಲ್ಲರೂ ಬೆಪ್ಪಾಗಿದ್ದರು.

* * * *

ಎನ್‌ಆರ್‌ಸಿಗೆ ದಾಖಲೆ ನೀಡೋದಕ್ಕೆ ಅಂತ ನಮ್ಮಪ್ಪನನ್ನು ಹಳೆಯ ದಾಖಲೆಗಾಗಿ ಪೀಡಿಸುತ್ತಿದ್ದೆ. ಆಗ ನನ್ನ ಸಂಬಂಧಿ ಆ ಕೆಂಪು ಪಾಸ್‌ಪೋರ್ಟ್ ತಂದು ಕೊಟ್ಟ. ಅದನ್ನವನು ಜೋಪಾನವಾಗಿ ಇಟ್ಟುಕೊಂಡಿದಕ್ಕೆ ಥ್ಯಾಂಕ್ಸ್ ಹೇಳಲೇ ಬೇಕು. ಈ ಗಡಿಭಾಗಕ್ಕೆ ಯಾರ್ಯಾರು ಸೇರಿದ್ದಾರೆ ಅನ್ನೊ ಪ್ರಶ್ನೆಯನ್ನು ಈಗ ಅಸ್ಸಾಂ ಎನ್‌ಆರ್‌ಸಿ ಮುಂದೊಡ್ಡಿದೆೆ. ಈಶಾನ್ಯ ರಾಜ್ಯಗಳು ಸಿಎಎ ವಿರುದ್ಧ ಕೋಪದಿಂದ ಭುಗಿಲೆದ್ದಿವೆ. 1947ರ ಸ್ವಾತಂತ್ರ ಅಂದರೆ ಏನು? ಅದು ಸ್ವಾತಂತ್ರವೋ ಅಥವಾ ನಂಬಿಕೆದ್ರೋಹವೋ ಅಂತ ಈಗ ಚಕಿತಳಾಗಿದ್ದೇನೆ. ಸಿಎಎ ಎಂಬುದೊಂದು ಜಾದುಗಾರನ ಕಣ್ಕಟ್ಟು. ಸ್ವಾತಂತ್ರದ ನಂತರದ ಹಲವು ದಶಕಗಳು ಇಂದು ನಾವು ಬಾಂಗ್ಲಾದೇಶ್ ಎಂದು ಕರೆಯುತ್ತಿರುವ ನೆಲದಲ್ಲಿ ತಮ್ಮ ಧರ್ಮದ ಕಾರಣಕ್ಕಾಗಿ ಲಕ್ಷಾಂತರ ಹಿಂದೂಗಳು ಹಿಂಸೆಗೊಳಗಾಗಿದ್ದರು. ಅವರು ಭಾರತದಲ್ಲಿ ಆಶ್ರಯ ಕಂಡುಕೊಂಡರು. ಅದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. 1971ರ ನಂತರ ಮರುರೂಪುಗೊಳ್ಳುತ್ತಿರುವ ಪಶ್ಚಿಮ ಬಂಗಾಳದ ಚರಿತ್ರೆ ಇದು. ಇದು ನನ್ನ ಕುಟುಂಬದ ಚರಿತ್ರೆಯೂ ಹೌದು. ಹಾಗೆಯೇ ಭಾರತದಲ್ಲಿ ಬೆಳವಣಿಗೆ ಕಂಡುಕೊಳ್ಳುತ್ತಿರುವ ಮತ್ತು ಪರಿಪಾಟಲು ಪಾಡುತ್ತಿರುವ ಹಲವರ ಚರಿತ್ರೆ ಕೂಡ. ಕೆಲವು ವರ್ಷಗಳು ಸುಮಾರಾದ ಶಾಂತಿ ಹಾಗೂ ಸೌಹಾರ್ದದಿಂದಲೇ ಇದ್ದೆವು. ಈ ವರ್ತಮಾನದ ಗಲಭೆ ಮತ್ತೆ ಬಂಗಾಳಿಗಳನ್ನು ‘‘ಆಶ್ರಯ’’ ಮತ್ತು ‘‘ನಿರಾಶ್ರಿತರು’’ ಇವೆರಡರ ನಡುವಿನ ಕಮರಿಗೆ ತಂದು ನಿಲ್ಲಿಸಿದೆ. ಅದರಲ್ಲೂ ಈಶಾನ್ಯ ಭಾಗದ ಬುಡಕಟ್ಟುನಾಡಿನಲ್ಲಿ ಬಂಗಾಳಿಗಳ ಇರುವಿಕೆಯನ್ನು ವಿರೋಧಿಸಲಾಗುತ್ತಿದೆ. ಈ ಪ್ರಾಂತವನ್ನು ಮಿಲಿಟರೀಕರಣಗೊಳಿಸಿ ಸವರ್ಣೀಯವಾಗಿಸುತ್ತಿರುವವರ ಪರವಾಗಿ ನಾವಿದೆ್ದೀವೆ ಎಂದು ಅನೇಕರು ಭಾವಿಸಿದ್ದಾರೆ. ನಮ್ಮದಾದರೂ ಎಂತಹ ಇತಿಹಾಸ? ನೆಲೆ ಕೆಳೆದುಕೊಂಡು, ಗಾಯದ ಮೇಲೆ ಗಾಯವಾಗಿ ಗುಳೇ ಬಂದು, ಬಾಂಗ್ಲಾದೇಶೀಯರು ಎಂಬ ತಿರಸ್ಕಾರಕ್ಕೊಳಗಾದ ಅಲ್ಪಸಂಖ್ಯಾತರ ಇತಿಹಾಸವಲ್ಲವೇ?

ಅಸ್ಸಾಮಿಗಳಿಗೆ ಮತ್ತು ಸಿಎಎ ವಿರುದ್ಧ ಹೋರಾಡುತ್ತಿರುವ ಸ್ಥಳೀಯರಿಗೆ ಬಂಗಾಳಿಗಳ ಬಗ್ಗೆ ಇನ್ನೂ ಸಂಶಯ ಉಳಿದಿದೆ. ಅವರಲ್ಲಿ ಭಾಷಾ ಗಲಭೆಯ ನೆನಪುಗಳು ಇನ್ನೂ ಮಾಸಿಲ್ಲ. ಉದಾರವಾದಿ ಎಡಪಂಥೀಯರಿಗೆ ನಾವು ಹಿಂದೂ ಸವರ್ಣೀಯರ ಒಂದು ಸಮುದಾಯ. ಅವರನ್ನು ಒಪ್ಪಿಕೊಳ್ಳುವುದು ಅವರಿಗೆ ಕಷ್ಟ. ಹಾಗೆ ಒಪ್ಪಿಕೊಂಡುಬಿಟ್ಟರೆ ಎಷ್ಟೋ ಮುಜುಗರಗಳನ್ನು ಎದುರಿಸಬೇಕಾಗುತ್ತದೆ. ನಮ್ಮ ಬವಣೆ, ನಮ್ಮ ಜರ್ಜರಿತ ಬದುಕಿನ ಗಾಯಗಳನ್ನು ಹಿಂದೂ ಬಲಪಂಥೀಯ ಗುಂಪು ಗುರುತಿಸುತ್ತದೆ, ನಿಜ. ಆದರೆ ಅಸ್ಸಾಮಿನಲ್ಲಿನ ಅವರ ಲೆಕ್ಕಾಚಾರ ಗಮನಿಸಿದರೆ ಅವರು ನಷ್ಟ ಕಟ್ಟಿಕೊಡುವ ಸೋಗಿನಲ್ಲಿ ನಮ್ಮನ್ನು ವಂಚಿಸುತ್ತಿದ್ದಾರೆ. ನಿಮಗಾಗಿರುವ ಆಘಾತವನ್ನು ನಮಗೆ ಕೊಟ್ಟುಬಿಡಿ, ನಿಮ್ಮ ಕೋಪವನ್ನು ತಣಿಸಲು ಇನ್ನೂ ಹೆಚ್ಚೆಚ್ಚು ದ್ವೇಷವನ್ನು ನಾವು ನಿಮಗೆ ನೀಡುತ್ತೇವೆೆ ಎಂಬ ಭ್ರಮೆ ಹುಟ್ಟುಹಾಕುತ್ತಿದ್ದಾರೆ. ದುರದೃಷ್ಟ ಎಂದರೆ ನನ್ನ ಕುಟುಂಬವೂ ಸೇರಿದಂತೆ ಬಹುಪಾಲು ಹಿಂದೂ ಕುಟುಂಬಗಳು ಈ ವ್ಯವಹಾರವನ್ನು ಒಪ್ಪಿಕೊಂಡಿವೆೆ.

ಅಸ್ಸಾಮಿನಲ್ಲಿ ಸಿಎಎ ವಿರುದ್ಧ ತೀವ್ರವಾದ ಆದರೆ ಮತೀಯವಲ್ಲದ ಪ್ರತಿಭಟನೆಯನ್ನು ನೋಡುತ್ತಿರುವಾಗ ನನ್ನ ಮನಸ್ಸಿನಲ್ಲಿ ‘‘ಹೀಗೆ ಹೋರಾಡಲು ನಮಗೂ ಒಂದು ನಾಡು ಇದ್ದಿದ್ದರೆ ಏನಾಗುತ್ತಿತ್ತು’’ ಎಂದು ದೇಶವಿಲ್ಲದವರೊಬ್ಬರ ಮನದಲ್ಲಿ ಮೂಡುವಂತಹ ಅಸೂಯೆ ಇಣಕಿತು. ಭೂಪ್ರದೇಶವೇ ಮಾನವನ ಘನತೆಯನ್ನು ನಿರ್ಧರಿಸುವ ಅಂಶವಾಗಿದೆಯೇ? ಆದರೆ ಹಾಗಿಲ್ಲ. ಕಾಲಿನಡಿ ನೆಲವೇ ಇಲ್ಲದಿದ್ದವರಿಗೂ ಆಗ ಅವರು ಹಿಂದೂ ಕ್ರೈಸ್ತ, ಮುಸ್ಲಿಮ್, ಸಿಖ್ ಅಥವಾ ಬೌದ್ಧ ಯಾವುದೇ ಧರ್ಮದವರಾಗಿರಲಿ, ಅವರಿಗೆ ಪೌರತ್ವವನ್ನು ನೀಡುವ ಆಶ್ವಾಸನೆ ನೀಡಲಾಗಿತ್ತು. ಆದರದು ಪೂರ್ತಿಯಾಗೇನು ಈಡೇರಲಿಲ್ಲ. ಅಲ್ಲೂ ಹಲವು ವಂಚನೆಗಳು ಮತ್ತು ಹೊಂದಾಣಿಕೆಗಳು ನಡೆದಿದ್ದವು. ಇತಿಹಾಸದ ಜೂಜಾಟದಿಂದ ಬಚಾವಾಗಲು ಆಗ ಬಹುಶಃ ನವುಗಿದ್ದ ಉತ್ತಮ ಆಯ್ಕೆ ಅದೇ ಆಗಿತ್ತು.

ಕದಡಿಹೋಗಿರುವ ಈಶಾನ್ಯ ರಾಜ್ಯದಿಂದ ದೂರದಲ್ಲಿರುವ ಬೆಂಗಳೂರಿನಲ್ಲಿನ ಅಪಾರ್ಟಮೆಂಟ್‌ಗಳಿಗೆ ಸಂಬಂಧಿಸಿದಂತೆ ವೃತ್ತಪತ್ರಿಕೆಯಲ್ಲಿ ವರದಿಯೊಂದು ಬಂದಿತ್ತು. ಕೆಲಸಗಾರರಲ್ಲಿ ‘‘ಅಕ್ರಮ ಬಾಂಗ್ಲಾದೇಶೀ’’ ಪ್ರತ್ಯೇಕಿಸುವ ಪ್ರಯತ್ನ ನಡೆಯುತ್ತಿದೆ ಅಂತ ಅದರಲ್ಲಿ ವರದಿಯಾಗಿತ್ತು. ಅಕಸ್ಮಾತ್ ಅದು ನನ್ನಪ್ಪನ ಕಣ್ಣಿಗೆ ಬಿತ್ತು. ಅವರು ನನಗೆ ಅದನ್ನು ತೋರಿಸಿ ಅವರಿಗೆ ಇದು ಹೇಗೆ ತಿಳಿಯುತ್ತೆ? ಎಂದು ಪ್ರಶ್ನಿಸಿದರು. ನನ್ನ ಊಟ ಆಯಿತು ಅನ್ನುವುದಕ್ಕೆ ‘‘ಅಮಿ ಖಾಯೇಚಿ’’ ಎಂದು ಹೇಳುವವರು ಸಕ್ರಮ; ‘‘ಆಮಿ ಖಾಯ್‌ಸಿ’’ ಎಂದು ಹೇಳುವವರು ಅಕ್ರಮ ಎಂದೆ. ಅಂದರೆ, ಇಕ್ಕಟ್ಟಿಗೆ ಸಿಕ್ಕಿಸಿದ ಆ ಉಪಭಾಷೆಯನ್ನು ಮಾತಾಡುವ ನಮ್ಮಪ್ಪತಲೆ ಎತ್ತಿ ನನ್ನತ್ತ ನೋಡಿದರು. ಅವರ ಮುಖದಲ್ಲಿ ಪೆಚ್ಚು ನಗು. ‘‘ಅಮ್ರಾರ್ ಆರ್ ಉಫಾಯ್ ನಾಯ್ ಇನ್ನು ನಮ್ಮ ಕಥೆ ಮುಗಿಯಿತು.’’

(“Road to Pakistan” by Amritha Dutta, translated with permission of Indian express (P) limited. Copy right 2020. All right resereved)

Writer - ಅಮೃತಾ ದತ್ತಾ

contributor

Editor - ಅಮೃತಾ ದತ್ತಾ

contributor

Similar News