ವಿವಿಧ ಇಲಾಖೆ, ಜನಪ್ರತಿನಿಧಿಗಳ ನಿರಾಸಕ್ತಿ: ಕಪ್ಪು ಮರಳಿನ ಕಡಲ ತೀರದ ಅಭಿವೃದ್ಧಿ ನನೆಗುದಿಗೆ
ಕಾರವಾರ, ಫೆ.22: ಜಗತ್ತಿನಲ್ಲೇ ಅತೀ ಅಪರೂಪವಾಗಿರುವ ಕಪ್ಪು ಮರಳಿನ ಕಡಲತೀರ ಜಿಲ್ಲೆಯ ಗಡಿಭಾಗ ಮಾಜಾಳಿಯ ತಿಳಮಾತಿಯಲ್ಲಿದ್ದು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರಾಸಕ್ತಿಯಿಂದಾಗಿ ಕಡಲತೀರದ ಅಭಿವೃದ್ಧಿ ನನೆಗುದಿಗೆ ಬಿದ್ದಿದೆ.
ಪ್ರವಾಸೋದ್ಯಮದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಅರ್ಹತೆ ಹೊಂದಿರುವ ಈ ಕಡಲ ತೀರ ಮೂಲಸೌಕರ್ಯ ಕೊರತೆಯಿಂದಾಗಿ ಹಿಂದುಳಿದಿದೆ. ಹಿಂದಿನ ಸರಕಾರ ತೀಳಮಾತಿ ಕಡಲ ತೀರದ ಅಭಿವೃದ್ಧಿಗಾಗಿ ಹಾಗೂ ತೂಗುಸೇತುವೆ ನಿರ್ಮಾಣ ಮಾಡಲು ಅನುದಾನ ಮಂಜೂರಿ ಮಾಡಿತ್ತು. ಆದರೆ ಕೆಲ ಸಮಸ್ಯೆಗಳಿಂದ ಕಾಮಗಾರಿ ನಡೆಯದೆ ಅನುದಾನ ವಾಪಾಸಾಗಿತ್ತು.
ಕಡಲ ತೀರದ ಮರಳಿನ ಬಣ್ಣ ತಿಳಿ ಹಳದಿ ಅಥವಾ ಬಂಗಾರದ ಬಣ್ಣದ್ದಿರುತ್ತದೆ. ಜಗತ್ತಿನಲ್ಲಿ ಕಪ್ಪು ಮರಳಿನ ಕಡಲ ತೀರಗಳು ಬೆರಳೆಣಿಕೆಯಷ್ಟಿವೆ. ಭಾರತದಲ್ಲಿ ಈ ರೀತಿಯ ನಾಲ್ಕು ಕಡಲ ತೀರಗಳಿದ್ದು, ಅವುಗಳಲ್ಲಿ ತಾಲೂಕಿನ ಮಾಜಾಳಿ ಗ್ರಾಪಂ ವ್ಯಾಪ್ತಿಯ ತಿಳಮಾತಿಯೂ ಒಂದಾಗಿದೆ.
ತಿಳಮಾತಿಗೆ ತೆರಳಲು ಒಂದು ಸಣ್ಣ ಗುಡ್ಡ ಹತ್ತಿ ಇಳಿಯಬೇಕಿದ್ದು, ತೆರೆಗಳ ಅಬ್ಬರ ಜೋರಾಗಿದ್ದಾಗ ಸಮುದ್ರದ ಸಣ್ಣ ಭಾಗವನ್ನು ದಾಟಲು ಕಿರು ಸೇತುವೆಯ ಅಗತ್ಯವಿದೆ. ಆದರೆ ಈ ಅಪರೂಪದ ನಿಸರ್ಗ ಸೌಂದರ್ಯ ಸವಿಯಬಯಸುವ ಪ್ರವಾಸಿಗರಿಗೆ ಬೀಚಿಗೆ ಹೋಗಲು ಸರಿಯಾದ ದಾರಿಯಿಲ್ಲ. ಇದುವರೆಗಿನ ಹಲವು ಪ್ರಯತ್ನಗಳ ನಡುವೆಯೂ ಇಲ್ಲಿ ಸಮುದ್ರವನ್ನು ದಾಟುವ ಕಿರು ಸೇತುವೆ ಮತ್ತು ಸಮರ್ಪಕವಾದ ದಾರಿ ನಿರ್ಮಾಣ ಇನ್ನೂ ಸಾಧ್ಯವಾಗಿಲ್ಲ.
ನಬಾರ್ಡ್‌ನಿಂದ ಮಂಜೂರಾದ ಹಣ ನಿಗದಿತ ವೇಳೆಯಲ್ಲಿ ಬಳಕೆಯಾಗದೇ ವಾಪಸಾಗಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂಬುದು ಇಲ್ಲಿನ ನಾಗರಿಕರ ಆರೋಪವಾಗಿದೆ. ಕಿರಿ ಸೇತುವೆ ಅಥವಾ ತೂಗು ಸೇತುವೆ ನಿರ್ಮಿಸುವ ಸ್ಥಳ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಇಲಾಖೆಯ ಪರವಾನಿಗೆ ಲಭಿಸದೆ ತೊಂದರೆಯಾಗಿದ್ದರಿಂದ ಮಂಜೂರಾಗಿದ್ದ ಅಭಿವೃದ್ಧಿ ಕಾಮಗಾರಿ ನಡೆಯದೆ ಹಾಗೇ ಉಳಿಯುವಂತಾಯಿತು.
ಅಪರೂಪದ ಪ್ರವಾಸಿ ಸ್ಥಳ ತಿಳಮಾತಿ ಕಡಲತೀರ ಅಭಿವೃದ್ಧಿಗೆ ಬಂದಿದ್ದ ನಬಾರ್ಡ್ ಹಣ ವಾಪಸಾಗಿದೆ. ತಿಳಮಾತಿ ಕಡಲ ತೀರಕ್ಕೆ ತೆರಳಲು, ಸೇತುವೆ, ರಸ್ತೆ ನಿರ್ಮಾಣಕ್ಕೆ 2017ರಲ್ಲಿ ನಬಾರ್ಡ್ ಪ್ರವಾಸೋದ್ಯಮ ಇಲಾಖೆಗೆ 3.23 ಕೋಟಿ ರೂ. ಬಿಡುಗಡೆ ಮಾಡಿತ್ತು. 600 ಮೀಟರ್ ರಸ್ತೆ ಹಾಗೂ ಸಮುದ್ರ ದಾಟಲು ಮಿನಿ ಸೇತುವೆ ನಿರ್ಮಾಣ ಈ ಯೋಜನೆಯಲ್ಲಿ ಸೇರಿತ್ತು. ಪ್ರವಾಸೋದ್ಯಮ ಇಲಾಖೆ ಲೋಕೋಪಯೋಗಿ ಇಲಾಖೆಗೆ ಕಾಮಗಾರಿಯ ಜವಾಬ್ದಾರಿ ವಹಿಸಿತ್ತು.
ಆದರೆ, ಕಾಮಗಾರಿಯ ಪ್ರಗತಿ ತೋರಿಸದ ಹಿನ್ನೆಲೆಯಲ್ಲಿ ನಬಾರ್ಡ್ ನೀಡಿದ್ದ ಹಣ ಭರವಸೆ ಪತ್ರದ 18 ತಿಂಗಳ ಅವಧಿ ಮುಗಿದು ಹೋಗಿದೆ. ಈಗ ಮತ್ತೆ ಹಣ ನೀಡುವಂತೆ ಮರು ಅರ್ಜಿ ಸಲ್ಲಿಸಲಾಗಿದ್ದು, ಹಣ ಬಿಡುಗಡೆಗೆ ಇನ್ನಷ್ಟು ವಿಳಂಬವಾಗಲಿದ್ದು, ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವವನ್ನು ಸಲ್ಲಿಸಲಾಗಿದೆ.
ರಾಜ್ಯದ ಏಕೈಕ ಕಪ್ಪು ಮರಳಿನ ತಿಳಮಾತಿ ಕಡಲತೀರಕ್ಕೆ ತೂಗುಸೇತುವೆ ನಿರ್ಮಿಸಲು 1 ಕೋಟಿ ರು. ಮಂಜೂರಾಗಿತ್ತು. ಆದರೆ, ಸ್ಥಳ ಪರಿಶೀಲನೆ ಬಳಿಕ ಈ ಮೊತ್ತದಲ್ಲಿ ತೂಗುಸೇತುವೆ ನಿರ್ಮಾಣ ಅಸಾಧ್ಯ. ಹೆಚ್ಚುವರಿ 1 ಕೋಟಿ ರೂ. ನೀಡುವಂತೆ 2015ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದರಂತೆ ಹೆಚ್ಚುವರಿ 1 ಕೋಟಿ ರೂ. ಮಂಜೂರಾಗಿತ್ತು. ಅಲ್ಲದೆ ಮಾಜಾಳಿ ಕಡಲತೀರದಿಂದ ತಿಳಮಾತಿ ಕಡಲತೀರಕ್ಕೆ ತೆರಳುವಾಗ ಎರಡು ಗುಡ್ಡಗಳನ್ನು ಹತ್ತಿಳಿಯಬೇಕಾಗುತ್ತದೆ. ಈ ಸ್ಥಳದಲ್ಲಿ 160 ಮೀಟರ್ ಉದ್ದದ ತೂಗುಸೇತುವೆ ನಿರ್ಮಿಸಲು ಯೋಜನೆ ಸಿದ್ಧವಾಗಿತ್ತು. ಸಾರ್ವಜನಿಕರ ಆಗ್ರಹದಿಂದ ಮತ್ತೆ ಪ್ರವಾಸೋದ್ಯಮ ಇಲಾಖೆ ಪ್ರಸ್ತಾವ ಸಲ್ಲಿಸಿದ್ದು, ಪ್ರವಾಸಿಗರಲ್ಲಿ ತೀಳಮಾತಿ ಕಡಲ ತೀರದ ಅಭಿೃದ್ಧಿಯ ಭರವಸೆ ಮತ್ತೆ ಮೂಡಿದೆ.
ಅತ್ಯಾಕರ್ಷಕ ಕಡಲ ತೀರ: ಸ್ಥಳೀಯ ಕೊಂಕಣಿ ಮತ್ತು ಮರಾಠಿಯಲ್ಲಿ ತಿಳ್ ಎಂದರೆ ಎಳ್ಳು, ಮಾತಿ ಅಂದರೆ ಮಣ್ಣು. ಎಳ್ಳನ್ನು ಹೋಲುವ ಮಣ್ಣಿರುವುದಕ್ಕೆ ಈ ಕಡಲತೀರಕ್ಕೆ ತಿಳಮಾತಿ ಎಂಬ ಹೆಸರು ಬಂದಿದೆ. ಕೇರಳದ ಕೋವಾಲಂ, ಮಹಾರಾಷ್ಟ್ರದ ನವಪುರ, ಗುಜರಾತ್‌ನ ದುಮಾಸ್ ಎನ್ನುವ ಕಡಲ ತೀರಗಳಲ್ಲಿ ಕಪ್ಪು ಮರಳಿದೆ.
ಕಡಲ ತೀರದ ಅಕ್ಕ ಪಕ್ಕದಲ್ಲಿ ಕಡುಗಪ್ಪು ಬಣ್ಣದ ಬಂಡೆಗಲ್ಲುಗಳ ರಾಶಿ ಚಾಚಿಕೊಂಡಿವೆ. ಈ ಕಲ್ಲುಗಳೇ ಅಲೆಗಳ ರಭಸಕ್ಕೆ ಸಿಕ್ಕಿ ಮರಳಾಗುತ್ತವೆ. ಅದು ನೀರಿನ ಸುಳಿಗೆ ಸಿಲುಕಿ ಹೊರಹೋಗದೇ ಇರುವುದರಿಂದ ಕಪ್ಪು ಮರಳಿನ ಕಡಲ ತೀರ ನಿರ್ಮಾಣವಾಗಿದೆ. ಕಡಲ ತೀರದಲ್ಲಿ ಸೂರ್ಯಾಸ್ತ ದೃಶ್ಯ ಅಷ್ಟೆ ಮನಮೋಹಕವಾಗಿ ಕಂಡುಬರುತ್ತಿದೆ. ಕಪ್ಪು ಮರಳಿನಲ್ಲಿ ಮೂಡುವ ಸೂರ್ಯನ ಕಿರಣಗಳ ಚಿತ್ತಾರ ಹೊಸ ಅನುಭವ ನೀಡುತ್ತಿದೆ.
-ನಿತೇಶ್, ಪ್ರವಾಸಿಗತಿಳಮಾತಿಗೆ ಹೋಗಬೇಕೆಂದರೆ, ಮಾಜಾಳಿ ಕಡಲತೀರದಲ್ಲಿರುವ ಗುಡ್ಡದ ಕಿರಿದಾದ ದಾರಿಯಲ್ಲಿ ಒಂದು ಕಿ.ಮೀ. ಚಾರಣ ಮಾಡಬೇಕು. ನಗರದಿಂದ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಸಾಗಿದರೆ ಮಾಜಾಳಿ ಗ್ರಾಮ ಸೇರುತ್ತೇವೆ. ಅಲ್ಲಿಂದ ಎಡಕ್ಕೆ ತಿರುಗಿ ಕಿರಿದಾದ ಡಾಂಬರು ರಸ್ತೆಯಲ್ಲಿ ಸುಮಾರು ಮೂರ್ನಾಲ್ಕು ಕಿ.ಮೀ. ಕ್ರಮಿಸಿದ ಮೇಲೆ ಮಾಜಾಳಿ ಕಡಲತೀರ ಎದುರುಗೊಳ್ಳುತ್ತದೆ. ಈ ನಡುವೆ ಕಡಲತೀರದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಪ್ರವಾಸಕ್ಕೆ ತೆರಳುವವರು, ಮದ್ಯದ ಬಾಟಲಿಗಳನ್ನು ಅಲ್ಲೇ ಎಸೆಯುವುದರಿಂದ ಕಡಲತೀರದ ಸೊಬಗು ಕಳೆಗುಂದಿದೆ. ಈ ನಿಟ್ಟಿನಲ್ಲಿ ಇಲ್ಲಿನ ಅಭಿವೃದ್ಧಿ ಅಗತ್ಯವಿದೆ.
-ವಿಶಾಲ್ ನಾಯ್ಕ, ಸ್ಥಳೀಯರು