ಈ ಹೊತ್ತಿನಲ್ಲಿ ಹುದುಗಿ ಹೋದವರಿಗೆ ನಾಳೆ ಅರ್ಥವಾಗದು
ಅನೇಕ ದೇಶಗಳ ವಿಜ್ಞಾನಿಗಳು ವರ್ಷಗಳ ಕಾಲ ಕುಳಿತು ಅಧ್ಯಯನ ಮಾಡಿ ನೀಡಿದ ವರದಿಯನ್ನು ಬಹಳಷ್ಟು ದೇಶಗಳ ಅಧಿಕಾರಸ್ಥ ರಾಜಕಾರಣಿಗಳು ಕಟ್ಟುಕತೆ ಎಂದು ಬಿಟ್ಟಿದ್ದಾರೆ. ಅವರಿಗೆ ಕಣ್ಣಮುಂದಿನ ಸತ್ಯ ಕಾಣದಾಗಿದೆ; ದಿನೇ ದಿನೇ ಏರುತ್ತಿರುವ ಸಾಗರಗಳ ಮೇಲ್ಮೈ ತಾಪಮಾನ, ಹೆಚ್ಚುತ್ತಿರುವ ಚಂಡಮಾರುತ, ಪ್ರವಾಹ ಮತ್ತು ಬರಗಾಲಗಳ ಸಂಖ್ಯೆ ಇತ್ಯಾದಿಗಳು ಯಾವುದೇ ಕೆಟ್ಟ ಸೂಚನೆಯನ್ನು ನೀಡುತ್ತಿಲ್ಲವೆಂಬ ಹಠ ಅವರದ್ದು. ಧ್ರುವಗಳು ಕರಗುತ್ತವೆ ಎಂದರೆ, ಬೇಶ್, ಅಲ್ಲಿರುವ ತೈಲವನ್ನು ಪಡೆದುಕೊಳ್ಳಲು ಒಳ್ಳೆಯ ಅವಕಾಶ ಎಂದು ಚಪ್ಪಾಳೆ ತಟ್ಟಿದವರು ಇವರು. ತುಘಲಕ್ ಹೇಳಿದಂತೆ, ವರ್ತಮಾನದಲ್ಲಿ ಹುದುಗಿಹೋದವರಿಗೆ ನಾಳಿನ ದರ್ಶನ ಹೇಗೆ ಅರ್ಥವಾದೀತು?
‘‘ಈ ಹೊತ್ತಿನಲ್ಲಿ ಹುದುಗಿಹೋದವರಿಗೆ ನಾಳಿನ ದರ್ಶನ ಹೇಗೆ ಅರ್ಥವಾದೀತು?’’ ಇದು ಕಾರ್ನಾಡರ ‘ತುಘಲಕ್’ ನಾಟಕದಲ್ಲಿ ತುಘಲಕ್ ಆಡುವ ಮಾತುಗಳು. ನಾಟಕದ ಆರನೇ ದೃಶ್ಯದಲ್ಲಿರುವ ಈ ಮಾತುಗಳು ತುಘಲಕ್‌ನ ನೋವನ್ನು ಪೂರ್ಣವಾಗಿ ಹಿಡಿದಿಡುತ್ತವೆ. ತನ್ನ ವಿಶಾಲವಾದ ಸಾಮ್ರಾಜ್ಯದ ಉತ್ತರದ ತುದಿಯಲ್ಲಿರುವ ದಿಲ್ಲಿ ಪಟ್ಟಣವೇ ಒಂದು ದೊಡ್ಡ ದೌರ್ಬಲ್ಯವೆಂದು ಪರಿಗಣಿಸುವ ತುಘಲಕ್, ತನ್ನ ರಾಜಧಾನಿಯನ್ನು ಸಾಮ್ರಾಜ್ಯದ ಕೇಂದ್ರ ಸ್ಥಾನವಾದ ದೌಲತ್ತಾಬಾದಿಗೆ ಸ್ಥಳಾಂತರಿಸಲು ಉದ್ದೇಶಿಸಿರುತ್ತಾನೆ; ಇದನ್ನು ವಿರೋಧಿಸುವ ದಿಲ್ಲಿಯ ಅಮೀರರು ಅವನನ್ನು ಕೊಲ್ಲಲು ಸಂಚು ಹೂಡಿ ಸಭೆಯೊಂದರ ನೆಪ ಹೂಡಿ ಅವನಲ್ಲಿಗೆ ಬಂದಿರುತ್ತಾರೆ. ತನ್ನನ್ನು ಕೊಲ್ಲಲು ಇವರೆಲ್ಲಾ ಬಂದಿದ್ದಾರೆ ಎಂದು ಅರಿವಿದ್ದೂ ತುಘಲಕ್ ಈ ಮಾತುಗಳನ್ನು ಹೇಳುತ್ತಾನೆ. ಅಮೀರರು ತನ್ನ ಉದ್ದೇಶವನ್ನು ಪೂರ್ಣವಾಗಿ ಅರಿಯದೇ ಹೋಗಿರುವವರಲ್ಲ ಎನ್ನುವ ದುಃಖ ಅವನಿಗೆ. ‘ತುಘಲಕ್’ 1964ರಲ್ಲಿ ರಚಿತವಾದ ನಾಟಕ; ಕನ್ನಡದ ಎರಡು ತಲೆಮಾರುಗಳನ್ನು ಪ್ರಭಾವಿಸಿರುವ ಕೃತಿಯಿದು. ಒಂದು ಕೃತಿ ವರ್ತಮಾನಕ್ಕೆ ಸ್ಪಂದಿಸುವ ಗುಣವನ್ನು ನಿರಂತರವಾಗಿ ಹೊಂದಿದ್ದರೆ, ಅದು ಕ್ಲಾಸಿಕ್ ಆಗಿಬಿಡುತ್ತದೆ. ಮತ್ತೆ ಮತ್ತೆ ಓದಿಸಿಕೊಳ್ಳುವ ಕೃತಿಯನ್ನು ಚೈತನ್ಯವೊಂದು ಬರೆದಿರಲು ಸಾಧ್ಯವೆಂದು ಅರ್ಜೆಂಟೀನಾದ ಚಿಂತಕ ಬೋರೆಸ್ ಉದ್ಗರಿಸುತ್ತಾನೆ. ತುಘಲಕ್ ನಾಟಕದ ಹೊಸ ಪ್ರದರ್ಶನಕ್ಕೆ ಕಾತುರದಿಂದ ಕಾಯುತ್ತಿರುವುದಾಗಿ ವಿಮರ್ಶಕ ರಾಜೇಂದ್ರ ಚೆನ್ನಿಯವರು ಗಿರೀಶ್ ಕಾರ್ನಾಡರ ಕುರಿತು ಬರೆದ ಲೇಖನವೊಂದರಲ್ಲಿ ಹೇಳುತ್ತಾರೆ; ಸಾಹಿತ್ಯದ ಮೂಲ ಶಕ್ತಿಯಿರುವುದು ಇಂತಹ ಕೃತಿ-ಓದುಗ ಮುಖಾಮುಖಿಯಾಗುವ ಘಳಿಗೆಗಳಲ್ಲಿಯೇ.
ತುಘಲಕ್‌ನ ಮಂತ್ರಿ ನಜೀಬ ಒಂದೆಡೆ ಹೇಳುವ ಮಾತುಗಳು ಹೀಗಿವೆ: ‘‘ಜನರ ಸುಖವನ್ನು ಮುಕ್ತಿಯಲ್ಲೋ ಸ್ವರ್ಗದಲ್ಲೋ ಕಾಣುವ ಅಸ್ಪಷ್ಟ ಆಸೆಯಿಲ್ಲ. ಆ ದರ್ಶನವನ್ನು ಈ ಜಗತ್ತಿನಲ್ಲಿ ಮೂರ್ತಗೊಳಿಸುವ ಹಂಬಲವಿದೆ ಎಂದು ನಿಮ್ಮಂತೆ ನಾನು ನಂಬಿದೆ. ಆದರೆ ಈಗ ಸ್ಪಷ್ಟವಾಗಿ ಗೊತ್ತಾಗಿದೆ. ಈ ಜಗತ್ತಿನಲ್ಲಿ ಯಾವ ಸ್ವರ್ಣಯುಗವೂ ಶಕ್ಯವಿಲ್ಲ. ಇಲ್ಲಿರುವುದು ಬರೇ ವರ್ತಮಾನದ ಗಳಿಗೆ. ಅದರ ಮೇಲೆ ಹಿಡಿತ ತಪ್ಪದಂತೆ ನೋಡಿಕೊಳ್ಳಬೇಕು’’ (ದೃಶ್ಯ ಎರಡು). ಈ ಸಾಲುಗಳನ್ನು ನಾನು ಓದುತ್ತಿದ್ದ ಸಂದರ್ಭದಲ್ಲಿಯೇ, ಅಂಟಾರ್ಟಿಕ ಖಂಡದ ಬೇಸಿಗೆಯ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ತಲುಪಿದ ಸುದ್ದಿಯು ನನ್ನ ಫೋನ್‌ನ ನೋಟಿಫಿಕೇಶನ್‌ನಲ್ಲಿ ಮೂಡಿಬಂತು. ನಜೀಬನ ಇಲ್ಲಿರುವುದು ವರ್ತಮಾನದ ಗಳಿಗೆ. ಅದರ ಮೇಲೆ ಹಿಡಿತ ತಪ್ಪದಂತೆ ನೋಡಿಕೊಳ್ಳಬೇಕು ಎನ್ನುವ ಮಾತುಗಳು ಎಷ್ಟು ಖರೆ ಮಾತುಗಳು ಎನಿಸಿದವು. ಅಚ್ಚರಿಯ ಬೆನ್ನಲ್ಲೇ, ಇದೇ ಫೆಬ್ರವರಿ 13ರಂದು ತೀರಿಕೊಂಡ ಆರ್.ಕೆ. ಪಚೂರಿಯ ನೆನಪಾದರು. ಭೂಮಿಯ ಹವಾಮಾನದ ಅಧ್ಯಯನ ಮಾಡುವ ಅಂತರ್‌ರಾಷ್ಟ್ರೀಯ ಸಂಸ್ಥೆಯಾದ ಐಪಿಸಿಸಿಯ(ಇಂಟರ್ ಗೌರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೆಟ್ ಚೇಂಜ್) ಮುಖ್ಯಸ್ಥರಾಗಿದ್ದ ಇವರು ಹವಾಮಾನ ವೈಪರೀತ್ಯಗಳು ಮಾನವನ ಭವಿಷ್ಯದ ಮೇಲೆ ಬೀರುತ್ತಿರುವ ಪ್ರತಿಕೂಲ ಪರಿಣಾಮಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದವರು; ಇದರ ಫಲವಾಗಿ ಐಪಿಸಿಸಿ ಸಂಸ್ಥೆಗೆ ದೊರೆತ ನೊಬೆಲ್ ಶಾಂತಿ ಪ್ರಶಸ್ತಿಯನ್ನು 2007ರಲ್ಲಿ ಪಡೆದುಕೊಂಡವರು. 2015ರಲ್ಲಿ ಕೆಲವು ಗಂಭೀರ ಆರೋಪಗಳಿಗೆ ಒಳಗಾಗಿ ಐಪಿಸಿಸಿಯ ಅಧಿಕಾರ ತ್ಯಜಿಸಿದವರು; ಆದರೆ, ಇವರ ನಾಯಕತ್ವದಲ್ಲಿ ಐಪಿಸಿಸಿ ಮಂಡಿಸಿದ ವರದಿಯು ವೈಜ್ಞಾನಿಕವಾದುದು ಎಂಬುದು ಹವಾಮಾನ ತಜ್ಞರ ಒಮ್ಮತದ ಅಭಿಮತವಾಗಿದೆ. ಅನೇಕ ದೇಶಗಳ ವಿಜ್ಞಾನಿಗಳು ವರ್ಷಗಳ ಕಾಲ ಕುಳಿತು ಅಧ್ಯಯನ ಮಾಡಿ ನೀಡಿದ ವರದಿಯನ್ನು ಬಹಳಷ್ಟು ದೇಶಗಳ ಅಧಿಕಾರಸ್ಥ ರಾಜಕಾರಣಿಗಳು ಕಟ್ಟುಕತೆ ಎಂದು ಬಿಟ್ಟಿದ್ದಾರೆ. ಅವರಿಗೆ ಕಣ್ಣಮುಂದಿನ ಸತ್ಯ ಕಾಣದಾಗಿದೆ; ದಿನೇ ದಿನೇ ಏರುತ್ತಿರುವ ಸಾಗರಗಳ ಮೇಲ್ಮೈ ತಾಪಮಾನ, ಹೆಚ್ಚುತ್ತಿರುವ ಚಂಡಮಾರುತ, ಪ್ರವಾಹ ಮತ್ತು ಬರಗಾಲಗಳ ಸಂಖ್ಯೆ ಇತ್ಯಾದಿಗಳು ಯಾವುದೇ ಕೆಟ್ಟ ಸೂಚನೆಯನ್ನು ನೀಡುತ್ತಿಲ್ಲವೆಂಬ ಹಠ ಅವರದ್ದು. ಧ್ರುವಗಳು ಕರಗುತ್ತವೆ ಎಂದರೆ, ಬೇಶ್, ಅಲ್ಲಿರುವ ತೈಲವನ್ನು ಪಡೆದುಕೊಳ್ಳಲು ಒಳ್ಳೆಯ ಅವಕಾಶ ಎಂದು ಚಪ್ಪಾಳೆ ತಟ್ಟಿದವರು ಇವರು. ತುಘಲಕ್ ಹೇಳಿದಂತೆ, ವರ್ತಮಾನದಲ್ಲಿ ಹುದುಗಿಹೋದವರಿಗೆ ನಾಳಿನ ದರ್ಶನ ಹೇಗೆ ಅರ್ಥವಾದೀತು? ಅಂಟಾರ್ಟಿಕ ಖಂಡದ ತಾಪಮಾನ ಹೀಗೆ ಹೆಚ್ಚುತ್ತಾ ಸಾಗಿದರೆ ಅಲ್ಲಿರುವ ಹಿಮಕರಗಿ ಸಾಗರ ನೀರಿನ ಮಟ್ಟ ಹೆಚ್ಚಾಗುತ್ತದೆ. ಸಮುದ್ರಗಳ ನೀರಿನ ಮಟ್ಟ ಅರ್ಧ ಅಡಿ ಹೆಚ್ಚಾದರೂ ಸಾಕು, ಅನೇಕ ದ್ವೀಪ ರಾಷ್ಟ್ರಗಳು ಮುಳುಗಿ ಹೋಗುತ್ತವೆ. ಐದು ಅಡಿ ಹೆಚ್ಚಾದಲ್ಲಿ, ನಮ್ಮ ದೇಶದ ಮುಂಬೈನಂತಹ ಸಮುದ್ರದಂಚಿನ ನಗರಗಳು ಇಲ್ಲವಾಗುತ್ತವೆ ಎನ್ನುವುದು ಐಪಿಸಿಸಿಯ ವರದಿಯಾಗಿದೆ. ಮುಂದಿನ ಐವತ್ತು ವರ್ಷಗಳಲ್ಲಿ ನಡೆಯುವ ಈ ಘಟನೆಗಳಿಗೆ ಉತ್ತರ ಕಂಡುಕೊಳ್ಳುವ ಹೊಣೆಗಾರಿಕೆಯಿರುತ್ತದೆ. ಆದರೆ ಇಂದಿನ ದಿನದ ವ್ಯವಹಾರದಲ್ಲೇ ಪೂರ್ಣ ಮುಳುಗಿ ಹೋಗಿರುವವರನ್ನು ನಾಳಿನ ಕುರಿತು ಎಚ್ಚರಿಸುವುದು ಹೇಗೆ?
ತುಘಲಕ್ ನಾಟಕದಲ್ಲಿ ತುಘಲಕ್‌ಗೆ ತನ್ನ ಮಂತ್ರಿ ನಜೀಬನ ಮೇಲೆ ಅಪಾರವಾದ ನಂಬಿಕೆ, ಏಕೆಂದರೆ ‘‘ಅವನು ನನಗೆ ನಿಷ್ಠನಾಗಿರಲಿಲ್ಲ; ಸಿಂಹಾಸನಕ್ಕೆ ನಿಷ್ಠನಾಗಿದ್ದ’’ (ದೃಶ್ಯ ಹತ್ತು). ಈ ನಜೀಬನ ಪಾತ್ರ ಕುತೂಹಲಕಾರಿ ಪಾತ್ರವಾಗುತ್ತದೆ. ಓರ್ವ ಅಧಿಕಾರಿ ಹೇಗಿರಬೇಕೆಂಬುದರ ಉದಾಹರಣೆ ಈತ. ಒಮ್ಮೆ ತುಘಲಕ್‌ನೊಂದಿಗೆ ಮಾತನಾಡುತ್ತಾ ನಜೀಬ ‘‘ಸಂದೇಹಕ್ಕೆ ಯಾರೂ ಹೊರತಲ್ಲ... ಸುಲ್ತಾನರು ಸಹ’’ ಎನ್ನುವ ನಿಷ್ಠೆಯನ್ನು ತೋರುತ್ತಾನೆ.
ಎಲ್ಲವನ್ನೂ, ಎಲ್ಲರನ್ನೂ ಸಂದೇಹದಿಂದಲೇ ನೋಡುವ ನಜೀಬನಿಗೆ ಒಂದೇ ಗುರಿ ಅರಸೊತ್ತಿಗೆಗೆ ಏನೂ ಆಗಬಾರದು. ಅರಸನು ಅಧಿಕಾರದಲ್ಲಿರಬೇಕು, ತನ್ಮೂಲಕ ರಾಜ್ಯದಲ್ಲಿ ಆಡಳಿತ ಸುಗಮವಾಗಿರಬೇಕು. ಜನರು ತಮ್ಮ ವೃತ್ತಿಗಳಲ್ಲಿ ಏಳಿಗೆಯನ್ನು ಕಾಣಬೇಕು, ಸಂಪಾದನೆ ಮಾಡಬೇಕು. ಈ ಸಂಪಾದನೆಯ ಮೇಲೆ ತೆರಿಗೆ ಸಂಗ್ರಹಿಸಿ, ರಾಜ್ಯದ ಬೊಕ್ಕಸ ತುಂಬಬೇಕು. ಹೀಗೆ ತುಂಬಿದ ಬೊಕ್ಕಸದ ಮೂಲಕ ಉತ್ತಮ ಆಡಳಿತ ನೀಡುವ ಕಾರ್ಯದಲ್ಲಿ ತೊಡಗಬೇಕು. ಅರಸನಿಗೆ ಒಳ್ಳೆಯ ಹೆಸರು ಬರಬೇಕು; ರಾಜ್ಯಕ್ಕೂ ಒಳ್ಳೆಯ ಹೆಸರು ಬರಬೇಕು. ನಜೀಬ ಅಧಿಕಾರಶಾಹಿ ವರ್ಗದ ಅತ್ಯುತ್ತಮ ಮಾದರಿಯಾಗಿ ಬಿಡುತ್ತಾನೆ. ಅವನಿಗೆ ರಾಜನ ಕೆಟ್ಟತನ, ಒಳ್ಳೆಯತನ, ದೌರ್ಬಲ್ಯಗಳ ಅರಿವು ಇದೆ; ಆದರೆ ಈ ಎಲ್ಲಾ ಜ್ಞಾನವನ್ನು ಸುಗಮ ಆಡಳಿತದ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡುತ್ತಾನೆ. ಗೂಢಾಚಾರ ವ್ಯವಸ್ಥೆಯ ಮೂಲಕ ಅವನಿಗೆ ಎಲ್ಲವೂ ತಿಳಿದಿರುತ್ತದೆ. ಆಡಳಿತಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಅದನ್ನು ಬಳಸಿಕೊಳ್ಳುತ್ತಾನೆ. ಆಡಳಿತದ ವಿಷಯ ಬಂದಾಗ ಇರುವುದನ್ನು ನೇರವಾಗಿ ನಮ್ರನಾಗಿ ಸುಲ್ತಾನನಿಗೆ ಹೇಳುವ ವ್ಯಕ್ತಿತ್ವ ಅವನದ್ದು. ಹೇಳುವುದಷ್ಟೇ ತನ್ನ ಕೆಲಸ; ನಿರ್ಧಾರ ಕೈಗೊಳ್ಳುವುದು ಅರಸನ ಕೆಲಸ. ಅರಸ ಆಜ್ಞಾಪಿಸಿದ್ದನ್ನು ಜಾರಿಗೊಳಿಸಿ, ಅದರ ಪರಿಣಾಮಗಳನ್ನು ಅರಸನ ಗಮನಕ್ಕೆ ತರುವುದು ತನ್ನ ಕರ್ತವ್ಯ ಎಂದು ನಂಬಿರುವವ ಈತ. ರಾಜ್ಯದ ಉನ್ನತಿಯಷ್ಟೇ ಮುಖ್ಯ, ಉಳಿದೆಲ್ಲವೂ ಅಮುಖ್ಯ ಇವನಿಗೆ. ಯಾರನ್ನೂ ಯಾವುದನ್ನೂ ಪುರಾವೆ ಇಲ್ಲದೆ ನಂಬುವುದಿಲ್ಲ, ಒಪ್ಪುವುದಿಲ್ಲ. ಅವನೇ ಹೇಳುವ ಹಾಗೆ ಸಂದೇಹ ನನ್ನ ಪ್ರಕೃತಿ. ಸುದೈವದಿಂದ ನನ್ನ ಕರ್ತವ್ಯವೂ ಅದೇ ಆಗಿದೆ!
ನಮ್ಮ ಇಂದಿನ ತುರ್ತು ನಜೀಬನಂತಹ ಅಧಿಕಾರಿಗಳಾಗಿದ್ದಾರೆ. ಇವನಂತಹ ವೃತ್ತಿಪರ ಶಿಕ್ಷಕರು, ವಿಜ್ಞಾನಿಗಳು ಮತ್ತು ತಂತ್ರಜ್ಞರು ಇಂದಿನ ಅನಿವಾರ್ಯತೆೆ. ಏಕೆಂದರೆ, ವೃತ್ತಿಪರರು ಮಾತ್ರ ಯಾವುದೇ ವೈಯಕ್ತಿಕ ಆಸೆ ಆಕಾಂಕ್ಷೆಗಳಿಲ್ಲದೆ ಕೇವಲ ವೃತ್ತಿಧರ್ಮಕ್ಕಾಗಿ ದುಡಿಯಲು ಸಾಧ್ಯ. ಅದರಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ರಾಜಕಾರಣದ ಅವಶ್ಯಕತೆಗಳು ಅನೇಕ ರಾಜಿಗಳಿಗೆ ಇಲ್ಲವೇ ಹೋರಾಟಗಳಿಗೆ ಅವಕಾಶ ನೀಡುತ್ತದೆ. ಅನೇಕ ವೇಳೆ ಇವು ಜನರ ಒಟ್ಟಾರೆ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ನಿರ್ಧಾರ ಗಟ್ಟಿಯಾಗಿರುತ್ತದೆ ಎನ್ನುವುದು ಸತ್ಯವೇ ಆದರೂ, ವಾಸ್ತವವನ್ನು ಬಿಡಿಸಿ ಹೇಳುವ ವೃತ್ತಿಪರರು ಇಲ್ಲವಾದಲ್ಲಿ, ಓರ್ವ ಸಾಮಾನ್ಯ ಮತದಾರರ ಇಂದಿನ ಸಂಕೀರ್ಣ ಪರಿಸ್ಥಿತಿಗಳನ್ನು ಅರಿಯುವುದು ಅಸಾಧ್ಯವಾಗುತ್ತದೆ. ಜನ ಸಾಮಾನ್ಯರ ಬುದ್ಧಿಗೆ ಸರಳವಾಗಿ ದಕ್ಕದ ಕ್ಲಿಷ್ಟಕರ ರಚನೆಗಳು ಇಂದು ಉಂಟಾಗಿವೆ. ನಮ್ಮ ದೇಶದ ನಿರ್ಧಾರವೊಂದರ ಭವಿಷ್ಯದ ಕುರಿತು ಕೇಳಿದ ಪ್ರಶ್ನೆಗೆ ಅದನ್ನು ಭಾರತದ ಪ್ರಜಾಪ್ರಭುತ್ವ ತೀರ್ಮಾನಿಸುತ್ತದೆ ಎನ್ನುವ ಸುಂದರ ಉತ್ತರವನ್ನು ವಿದೇಶಾಂಗ ಮಂತ್ರಿಗಳಾದ ಜಯಶಂಕರ್ ಇತ್ತೀಚೆಗೆ ನೀಡಿದ್ದಾರೆ. ಪ್ರಜಾಪ್ರಭುತ್ವದ ಕುರಿತು ಬಹುತೇಕರ ಅಭಿಪ್ರಾಯವು ಇದೇ ಆಗಿದೆ.
ಆದರೆ ಇಲ್ಲೊಂದು ಸಮಸ್ಯೆಯಿದೆ. ಇಂದಿನ ಸಂಕೀರ್ಣ ಪರಿಸ್ಥಿತಿಯನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಹರಿಯುವ ನೀರಿಗೆ ಯಾವ ಮೈಲಿಗೆ ಎಂದು ನಂಬಿರುವ ಜನರಿಗೆ, ಸಾಗರವೇ ಮೈಲಿಗೆಯಾಗಿ ಕೊಚ್ಚೆಗುಂಡಿಯಾಗಿ ಹೋಗಿದೆ ಎಂದು ಹೀಗೆ ಸುಮ್ಮನೆ ಬಿಡಿಸಿ ಹೇಳಲು ಆಗುವುದಿಲ್ಲ. ಏಕೆಂದರೆ ಶತಮಾನಗಳಿಂದ ಅವರ ನಂಬಿಕೆಗಳು ಬೆಳೆದು ಬಂದಿರುತ್ತವೆ. ನಮ್ಮ ಊರಿನ ನದಿ ಬತ್ತಿಹೋಗಲು, ಸಮುದ್ರದ ತಾಪಮಾನದ ಏರಿಳಿತ ಕಾರಣ; ಕೇವಲ ಪೂಜೆ ಮಾಡಿದರೆ ಇಲ್ಲವೇ ಪ್ರಾರ್ಥಿಸಿದರೆ ಸರಿಹೋಗುವುದಿಲ್ಲವೆಂದು ಅವರನ್ನು ಒಪ್ಪಿಸುವುದು ಸುಲಭವಲ್ಲ. ಇದನ್ನು ಮಾಡಲು ನಮಗೆ ನಜೀಬನಂತಹ ನಿಷ್ಠಾವಂತ ಅಧಿಕಾರಿಗಳು ಬೇಕಾಗುತ್ತಾರೆ; ಅವರು ಮಾತ್ರ ಅರಸನಿಗೂ ಸತ್ಯ ಹೇಳಲು ಸಾಧ್ಯ. ಏಕೆಂದರೆ ಅರಸನ ತುರ್ತುಗಳು ಬೇರೆಯವೇ ಇರುತ್ತವೆ. ಸುಲ್ತಾನನಾದ ತುಘಲಕ್‌ನನ್ನು ಕುರಿತು ನಾಟಕದಲ್ಲಿ ಬರುವ ಮಾತಿದು: ‘‘ನಿನ್ನ ಸುಲ್ತಾನನಂತಹ ಪ್ರಾಮಾಣಿಕ ಮೋಸಗಾರನನ್ನು ನಾನು ನನ್ನ ಜನ್ಮದಲ್ಲಿಯೇ ನೋಡಿಲ್ಲ!’’