ಕಾಶ್ಮೀರಿ ಪಂಡಿತರ ಬಗ್ಗೆ ಏನು ಹೇಳುತ್ತೀರಿ?

Update: 2020-02-25 04:33 GMT

2020ರ ಜನವರಿ ತಿಂಗಳಿಗೆ ಕಾಶ್ಮೀರದ ಕಣಿವೆಯಿಂದ ಕಾಶ್ಮೀರಿ ಪಂಡಿತರ ಬೃಹತ್ ಸಂಖ್ಯೆಯ ವಲಸೆ ನಡೆದು 30 ವರ್ಷಗಳಾಗಿವೆ. ಕಾಶ್ಮೀರ ಕಣಿವೆಯಲ್ಲಿ ತಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೇರುಗಳಿಂದ ಬೇರ್ಪಟ್ಟು ವಲಸೆ ಹೋಗುವ ಮೊದಲು ಅವರು ತೀವ್ರವಾದ ಅನ್ಯಾಯ, ಹಿಂಸೆ ಮತ್ತು ಅವಮಾನಗಳನ್ನು ಅನುಭವಿಸಿದ್ದರು. 1980ರ ದಶಕದಲ್ಲಿ ಕಾಶ್ಮೀರದಲ್ಲಿ ತೀವ್ರಗಾಮಿತ್ವ ಕೋಮುವಾದೀಕರಣದಿಂದಾಗಿ ಆ ವಲಸೆ ನಡೆದಿತ್ತು. ದೇಶವನ್ನಾಳಿದ ಯಾವ ಸರಕಾರಗಳೂ ಈ ಸಮಸ್ಯೆಯನ್ನು ಬಗೆಹರಿಸಲು ಸಾಕಷ್ಟು ಗಮನಹರಿಸಲಿಲ್ಲ. ಆದರೂ ಮಾನವ ಹಕ್ಕು ಕಾರ್ಯಕರ್ತರು ಭಾರತದಲ್ಲಿರುವ ಮುಸ್ಲಿಮ್ ಅಲ್ಪಸಂಖ್ಯಾತರ ಬಗ್ಗೆ ಮಾತನಾಡಿದಾಗಲೆಲ್ಲಾ ‘‘ಕಾಶ್ಮೀರಿ ಪಂಡಿತರ ಬಗ್ಗೆ ಏನು ಹೇಳುತ್ತೀರಿ?’’ ಎಂದು ಕೋಮುವಾದಿ ಶಕ್ತಿಗಳು ದನಿ ಏರಿಸಿ ಕೇಳುತ್ತಿರುತ್ತವೆ. ವಿಶೇಷವಾಗಿ, ಕೋಮು ಹಿಂಸೆ ನಡೆದ ಬಳಿಕ ಈ ಪ್ರಶ್ನೆ ಕೇಳಿಬರುತ್ತಿರುತ್ತದೆ. ‘‘ಕಾಶ್ಮೀರ ಕಣಿವೆಯಿಂದ ಕಾಶ್ಮೀರಿ ಪಂಡಿತರನ್ನು ಹೊರಗಟ್ಟಿದಾಗ ನೀವೆಲ್ಲಿದ್ದೀರಿ?’’ ಎಂದು ಕೇಳಲಾಗುತ್ತದೆ. ಒಂದು ರೀತಿಯಲ್ಲಿ ಒಂದು ಅಲ್ಪಸಂಖ್ಯಾತ ಸಮುದಾಯದ ಮೇಲೆ ಹೊರಿಸುವ ದುರಂತವನ್ನು ಕಾಶ್ಮೀರಿ ಪಂಡಿತರ ಯಾತನೆಯ ಹೆಸರಿನಲ್ಲಿ ಸಮರ್ಥಿಸಲಾಗುತ್ತಿದೆ ಮತ್ತು ಹೀಗೆ ಹಿಂಸೆಯನ್ನು ಸಾಮಾನ್ಯಗೊಳಿಸಲಾಗುತ್ತಿದೆ. ಕಾಶ್ಮೀರಿ ಪಂಡಿತರ ಯಾತನೆಗೆ ಮುಸ್ಲಿಮ್ ಅಲ್ಪಸಂಖ್ಯಾತರ ಪರವಾಗಿ ಮಾತನಾಡುವವರು ಜವಾಬ್ದಾರಿ ಎಂಬಂತೆ ಹೀಗೆಲ್ಲ ಕೇಳಲಾಗುತ್ತಿದೆ.

ಬಿಜೆಪಿ, ಕಾಂಗ್ರೆಸ್, ತೃತೀಯ ರಂಗವೂ ಸೇರಿದಂತೆ ಹಲವು ಪಕ್ಷಗಳ ಸರಕಾರಗಳು ಕಳೆದ ಮೂರು ದಶಕಗಳ ಕಾಲ ದೇಶವನ್ನಾಳಿವೆ. ವಲಸೆ ನಡೆದಾಗ ಕಾಶ್ಮೀರವು ರಾಷ್ಟ್ರಪತಿ ಆಡಳಿತಕ್ಕೊಳಪಟ್ಟಿತ್ತು ಮತ್ತು ಆಗ ವಿ.ಪಿ. ಸಿಂಗ್ ಸರಕಾರ ಅಧಿಕಾರದಲ್ಲಿತ್ತು. ಬಳಿಕ 1998ರಿಂದ, ಅಟಲ್ ಬಿಹಾರಿ ವಾಜಪೇಯಿಯವರ ನಾಯಕತ್ವದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರ ನಡೆಸಿತ್ತು. ಆ ಬಳಿಕ, 2014ರಿಂದ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಬಿಜೆಪಿ ಭಾರೀ ಬಹುಮತದಿಂದ ಅಧಿಕಾರ ನಡೆಸುತ್ತಿದೆ.

ಈಗ, ‘‘ಕಾಶ್ಮೀರಿ ಪಂಡಿತರ ಬಗ್ಗೆ ಏನು ಹೇಳುತ್ತೀರಿ?’’ ಎಂದು ಕೇಳುತ್ತಿರುವವರು ತಮ್ಮ ಕೋಮುವಾದಿ ಬಣ್ಣವನ್ನು ಮುಚ್ಚಿಡಲಿಕ್ಕಾಗಿಯಷ್ಟೇ ಹೀಗೆ ಕೇಳುತ್ತಿದ್ದಾರೆ.

ಕಾಶ್ಮೀರದ ವಿಷಯಗಳು, ಸಮಸ್ಯೆಗಳು ತುಂಬಾ ಸಂಕೀರ್ಣವಾಗಿವೆ; ಮನಸ್ಸನ್ನು ನೋಯಿಸುವಂತಹವುಗಳಾಗಿವೆ. ಇವುಗಳನ್ನು ಈಗ ಕೆಲವರು ಮಾಡುತ್ತಿರುವ ಹಾಗೆ ಭಾರತದ ಮುಸ್ಲಿಮರ ತಲೆಗೆ ಕಟ್ಟುವಂತಿಲ್ಲ. ಇವತ್ತು ಮೋದಿ ಸರಕಾರ ತೆಗೆದುಕೊಂಡಿರುವ ಕ್ರಮಗಳಿಂದಾಗಿ, 370ನೇ ವಿಧಿ ರದ್ದತಿ, ಕಾಶ್ಮೀರವನ್ನು ಒಂದು ಕೇಂದ್ರಾಡಳಿತ ಪ್ರದೇಶವಾಗಿ ಮಾಡಿರುವುದು ಇತ್ಯಾದಿಗಳಿಂದಾಗಿ ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಮರಳುವುದು ಇನ್ನಷ್ಟು ಕಷ್ಟವಾಗುವಂತಹ ಸ್ಥಿತಿ ನಿರ್ಮಾಣವಾಗಿರಬಹುದು.

ಕಾಶ್ಮೀರದಲ್ಲಿ ಸ್ವಾಯತ್ತತೆ ಷರತ್ತನ್ನು ರದ್ದುಗೊಳಿಸಿರುವುದರಿಂದ ಅದು ಉಗ್ರಗಾಮಿತ್ವಕ್ಕೆ ಕಾರಣವಾಗಿ ಅದಕ್ಕೆ ಪಾಕಿಸ್ತಾನ ಬೆಂಬಲ ನೀಡಿತು. ಅಲ್‌ಖಾಯಿದಾ ಶಕ್ತಿಗಳು ಕಾಶ್ಮೀರವನ್ನು ಪ್ರವೇಶಿಸಿ ಅಲ್ಲಿಯ ಪರಿಸ್ಥಿತಿಯನ್ನು ಕೋಮುವಾದಿಗೊಳಿಸಿದವು. ಈ ಶಕ್ತಿಗಳು ಕಾಶ್ಮೀರವನ್ನು ಪ್ರವೇಶಿಸುವುದರೊಂದಿಗೆ ಕಾಶ್ಮೀರಿ ಪಂಡಿತರಿಗೆ ಕಿರುಕುಳ, ಹಿಂಸೆ ನೀಡುವುದು ಆರಂಭವಾಯಿತು.

ಗುಡ್‌ವಿಲ್ ಅಭಿಯಾನವು (ಗುಡ್‌ವಿಲ್ ಮಿಶನ್) ಕಾಶ್ಮೀರ ಪಂಡಿತರನ್ನು ಅಲ್ಲೇ ಉಳಿಯುವಂತೆ ಒತ್ತಾಯಿಸಿತು. ಸ್ಥಳೀಯ ಮುಸ್ಲಿಮರು ಪಂಡಿತ ವಿರೋಧಿ ವಾತಾವರಣವನ್ನು ಎದುರಿಸಲು ತಾವು ನೆರವಾಗುವುದಾಗಿ ಆಶ್ವಾಸನೆ ನೀಡಿದರು. ರಾಜ್ಯಪಾಲ ಜಗ್‌ಮೋಹನ್, ಆ ಬಳಿಕ ಎನ್‌ಡಿಎ ಸರಕಾರದಲ್ಲಿ ಸಚಿವರಾದವರು, ಪಂಡಿತರಿಗೆ ಭದ್ರತೆ ನೀಡುವ ಬದಲು ಪಂಡಿತರ ಸಾಮೂಹಿಕ ವಲಸೆಗೆ ಅನುಕೂಲತೆಗಳನ್ನು ಒದಗಿಸುವುದು ಉತ್ತಮವೆಂದು ತಿಳಿದರು. ಅವರು ಉಗ್ರಗಾಮಿಗಳನ್ನು ಸದೆಬಡಿಯುವುದನ್ನು ಮತ್ತಷ್ಟು ತೀವ್ರಗೊಳಿಸಿ ಸಂಕಷ್ಟದಲ್ಲಿದ್ದ ಪಂಡಿತ ಸಮುದಾಯವನ್ನು ರಕ್ಷಿಸಬಹುದಿತ್ತು. ಯಾಕಾಗಿ ಇದನ್ನು ಮಾಡಲಿಲ್ಲ?

ಇಂದು ‘‘ಕಾಶ್ಮೀರಿ ಪಂಡಿತರ ಬಗ್ಗೆ ಏನು ಹೇಳುತ್ತೀರಿ?’’ ಎಂಬ ವಿಷಯದಲ್ಲಿ ಗಂಭೀರವಾಗಿ ಚಿಂತಿಸಬೇಕಾಗಿದೆ. 2014ರ ಎನ್‌ಡಿಎ ಸರಕಾರ ಕಾಶ್ಮೀರ ಕಣಿವೆಯಲ್ಲಿ ಪಂಡಿತರ ವಾಸ ಪ್ರದೇಶಗಳ ಸುತ್ತ ಆವರಣ (ಗೋಡೆ) ನಿರ್ಮಿಸಲು ಯೋಚಿಸಿತ್ತು. ಇದು ಒಂದು ಪರಿಹಾರವೇ? ಕಾಶ್ಮೀರ ಪಂಡಿತರಿಗೆ ನ್ಯಾಯ ಒದಗಿಸುವುದೇ ಸೂಕ್ತ ಪರಿಹಾರವಾಗಿದೆ. ಅಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇನೆ ಹಾಜರಿರುವಾಗ, ಉಸಿರುಗಟ್ಟಿಸುವ ವಾತಾವರಣ ಇರುವಾಗ ಪಂಡಿತರು ಅಲ್ಲಿಗೆ ಮರಳಲು ಬಯಸುತ್ತಾರೆಯೇ? ಬಯಸಿಯಾರೇ?

ಖಂಡಿತವಾಗಿಯೂ ಅಲ್‌ಖಾಯಿದಾ ರೀತಿಯ ಶಕ್ತಿಗಳು ಸ್ಥಳೀಯ ಕಾಶ್ಮೀರಿಗಳ ಪ್ರತ್ಯೇಕತೆಯನ್ನು, ಒಂಟಿತನವನ್ನು ಪ್ರತಿನಿಧಿಸುವುದಿಲ್ಲ. ಕಾಶ್ಮೀರಿಗಳ ಸಮಸ್ಯೆ ಪರಿಹಾರಕ್ಕಾಗಿ ಅವರನ್ನು ಮಾತುಕತೆಯ, ಸಂವಾದದ ಒಂದು ಪ್ರಕ್ರಿಯೆಗೆ ಆಹ್ವಾನಿಸಬೇಕಿದೆ. ಅಲ್ಲಿ ಹೊರಗಿನವರನ್ನು ಕರೆತಂದು ನೆಲೆ ನಿಲ್ಲಿಸುವ ಮೂಲಕ ಕೋಮು ಸಾಮರಸ್ಯವನ್ನು ತರಲು ಸಾಧ್ಯವಾಗುವುದಿಲ್ಲ. ಪಂಡಿತರ ವಲಸೆ ಸಮಸ್ಯೆಯನ್ನು ಪರಿಹರಿಸಲು ಪ್ರಜಾಪ್ರಭುತ್ವ ಒಂದೇ ಹಾದಿಯಾಗಿದೆ. ಅಲ್ಲಿ ಬೃಹತ್ ಸಂಖ್ಯೆಯ ಸೇನಾ ಜಮಾವಣೆಗೆ ಹೆದರಿ ಅಲ್ಲಿಂದ ಹೊರ ಹೋಗಿರುವ ಸಾಕಷ್ಟು ಸಂಖ್ಯೆಯ ಮುಸ್ಲಿಮರ ಸಮಸ್ಯೆಯ ಪರಿಹಾರಕ್ಕೂ ಪ್ರಜಾಪ್ರಭುತ್ವವಲ್ಲದೆ ಬೇರೆ ಪರಿಹಾರವಿಲ್ಲ. ಅಲ್ಲಿ 1990 ಜನವರಿಯಿಂದ 1992ರ ಅಕ್ಟೋಬರ್‌ನ ಅವಧಿಯಲ್ಲಿ ಉಗ್ರಗಾಮಿಗಳು 1,585 ಮಂದಿಯನ್ನು ಕೊಂದರು; ಅವರಲ್ಲಿ 982 ಮಂದಿ ಮುಸ್ಲಿಮರು ಮತ್ತು 218 ಮಂದಿ ಹಿಂದೂಗಳು ಎಂಬ 1992ರ ಫೆಬ್ರುವರಿ 5ರ ಟೈಮ್ಸ್ ಆಫ್ ಇಂಡಿಯಾ ವರದಿಯನ್ನು ನಾವು ಜ್ಞಾಪಿಸಿಕೊಳ್ಳಬೇಕಾಗಿದೆ.

ಪ್ರಜಾಸತ್ತಾತ್ಮಕ ನಿಯಮಗಳ ಕತ್ತು ಹಿಸುಕುವ ಹಾದಿಯಲ್ಲಿ ನಾವು ಸಾಗುತ್ತಿದ್ದೇವೆ. ಇದು ಪಂಡಿತರ ಮಸ್ಯೆಯನ್ನು ನಿವಾರಿಸಬಲ್ಲದೇ?

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News