ಮುಖ ಗೊತ್ತು.. ಹೆಸರು ನೆನಪಿಲ್ಲ
‘‘ಇದೆಂಥಾ ವಿಚಿತ್ರ ಶಿರೋನಾಮೆ?... ಎಂಥದಪ್ಪಾ ಇದು?’’ ಎಂದು ಹುಬ್ಬೇರಿಸದಿರಿ. ಲೇಖನ ಓದಿದ ಬಳಿಕ ಈ ಅಭಿಪ್ರಾಯಕ್ಕೆ ನಿಮ್ಮ ಸಮರ್ಥನೆ ಇದೆ ಎಂಬುದು ನನ್ನ ಭಾವನೆ. ಇದಕ್ಕೊಂದು ಗಟ್ಟಿ ಹಿನ್ನೆಲೆ ಇದೆ.
ನಾಲ್ಕೈದು ವರ್ಷಗಳ ಹಿಂದೆ ಒಂದು ವಿವಾಹ ಸಮಾರಂಭಕ್ಕೆ ನಾನೊಬ್ಬಳೇ ಹೋದ ಸಂದರ್ಭ. ಒಬ್ಬರು ಅಪರಿಚಿತರಿಗೂ ನನಗೂ ನೇರ ಮುಖಾಮುಖಿಯಾಯಿತು. ಬಳಿ ಬಂದ ಅವರು ನನ್ನನ್ನೇ ನೋಡಿ ಮುಗುಳ್ನಕ್ಕು ‘‘ನಮಸ್ಕಾರ’’ ಎಂದಾಗ ನಾನೂ ‘‘ನಮಸ್ಕಾರ’’ ಎಂದೆ ನನ್ನ ತಬ್ಬಿಬ್ಬು ನೋಡಿ ಅವರು ‘‘ಮೇಡಂ ನನ್ನ ಗುರುತಾಯಿತೇ?’’ ಎಂದು ನೇರ ಪ್ರಶ್ನೆ ಹಾಕಬೇಕೆ. ನನ್ನ ಸೋಲು ಅವರಿಗ್ಯಾಕೆ ಅರಿವಾಗಬೇಕು ಎಂದುಕೊಂಡು ನಾನು ‘‘ಹೌದು’’ ಎಂದು ಹುಸಿ ನುಡಿದು ಹಸಿ ನಗು ತೇಲಿಸಿದೆ! ಅಷ್ಟಕ್ಕೆ ಸುಮ್ಮನಾಗದ ಅವರ ಛಲ ಬಿಡದ ಬೇತಾಳನಂತೆ ತನಿಖೆಗೆ ಇಳಿದರು. ‘‘ಹಾಗಾದ್ರೆ.. ನನ್ನ ಹೆಸರು ಹೇಳಿ ಅಥವಾ ಜಾಬ್ ಯಾವುದು? ಅದನ್ನಾದ್ರೂ ಹೇಳಿ..’’ ಎಂದು ಸವಾಲು ಹಾಕಿದರು.
ಒಳಗೆಲ್ಲೋ ಪರಿಚಯವಿದೆ ಅನ್ನಿಸಿದರೂ ಸ್ಪಷ್ಟ ಅರಿವಾಗದೆ ನಾನು ಕಕ್ಕಾಬಿಕ್ಕಿ! ನೀರವತೆಯ ಪೆಚ್ಚಿನಿಂದ ಅವರನ್ನೇ ದಿಟ್ಟಿಸಿದಾಗ, ನನ್ನ ಬಂಡವಾಳ ಅರಿವಾಗಿರಬೇಕು ಅವರಿಗೆ, ಗೆದ್ದ ಹುಂಜದ ರೀತಿಯಲ್ಲಿ ಅವರು ‘‘ನಾನು..... ಅಲ್ವಾ.... ನನ್ನ ಕೆಲಸ.. ಅಲ್ವಾ? ನೆನಪಾಯ್ತಾ ಈಗ..’’ ಎನ್ನುತ್ತ ಎಲ್ಲಾ ಬಿಚ್ಚಿಡಬೇಕೆ?
ಅದೆಲ್ಲವೂ ನಿಜವೇ. ಅವರನ್ನು ಪರಿಚಿತ ವಲಯದಿಂದ ಮರೆವಿನ ಕೋಶಕ್ಕೆ ತಳ್ಳಿದ್ದೆ ನಾನು ಅಥವಾ ನನ್ನ ವಯಸ್ಸು! ‘‘ಹಾಂ ಹೌದು ಎಲ್ಲ ನೆನಪಾಯ್ತು... ಈಗ ಮರೆತಿದ್ದೆ ಕ್ಷಮಿಸಿ’’ ಎಂದು ಪ್ರಾಮಾಣಿಕತೆ ಮೊೆದಿದ್ದೆ ಕೊನೆಯಲ್ಲಿ! ಅಷ್ಟರಲ್ಲಿ ಅವರು ಪರ್ವಾಗಿಲ್ಲ.. ಆದರೆ ನಾನು ನಿಮ್ಮ ಪರಿಚಯ ಮರೆತಿಲ್ಲ.. ನೀವು ...... ಅಲ್ವಾ?’’ ಎಂದು ನನ್ನ ವಿವರ ಕರೆಕ್ಟಾಗಿ ತಿಳಿಸಿದರು. ಆಗ ಮತ್ತೆ ಪೆಚ್ಚಾಗುವ ಸರದಿ ನನ್ನದೇ. ಮೊದಲಿಗೆ ನಾನು ‘ನೀವು ಗೊತ್ತು’ ಎಂದು ಪೂರ್ತಿ ಸುಳ್ಳು ಹೇಳಿದ್ದೆ. ಬದಲಾಗಿ ‘‘ನಿಮ್ಮ ಮುಖ ಗೊತ್ತು.. ಹೆಸರು ನೆನಪಿಲ್ಲ’’ ಎಂದಾದರೂ ಹೇಳಿದ್ದರೆ ಆಗುತ್ತಿತ್ತಲ್ವಾ? ಹಾಗೆಂದಿದ್ದರೆ ಅವರಿಗೂ ಒಂದಿಷ್ಟು ತೃಪ್ತಿ ಸಮಾಧಾನ... ನನಗೂ ಅರ್ಧ ಗೌರವ ಬಳಿಯುತ್ತಿತ್ತು’’ ಎಂದು ತಡವಾಗಿ ಜ್ಞಾನೋದಯವಾಯಿತು. ಅಂದಿನಿಂದ ಅಂತಹ ಸಂದರ್ಭಗಳಲ್ಲಿ ಅದೇ ಉತ್ತರವೆಂಬ ಸಿದ್ಧಾಂತದ ಅನುಯಾಯಿ ನಾನು!
ಬೇರೆಯವರ ಹೆಸರು, ಪರಿಚಯವಿದ್ದರೂ ಇಲ್ಲದಂತೆ ಮಾತನಾಡಿಸದೆ ಇರುವವರದೇ ಒಂದು ವರ್ಗ. ಇಂತಹವರು ಧನಮದ, ವಿದ್ಯಾಮದ, ಕೀರ್ತಿಮದಗಳಿಂದ ಮತ್ತರಾದವರೇ ಸರಿ. ಕೆಲವರಿಗಂತೂ ಮೊಬೈಲ್ ಗೀಳು. ಮುಖಕ್ಕೆ ಮೊಬೈಲ್ ಅಡ್ಡ ಹಿಡಿದು ತಲೆ ಬಾಗುತ್ತ ಅದನ್ನು ಒತ್ತುವ ಭಂಗಿ ಅವರದು. ಅವರೇ ಮೊದಲು ಮಾತನಾಡಿಸಲು, ಆವಾಗ ನೋಡುವ ಎಂಬಂತಿರುವವರೂ ಇಲ್ಲದಿಲ್ಲ. ಪರರ ಹೆಸರು ಗೊತ್ತಿದ್ದರೂ ಹೇಳದಿರುವ ವಿಶೇಷ ಅಂದರ್ಬಗಳಿವೆ. ವಿವಾಹ ಮಹೋತ್ಸವ ಸಮಾರಂಭಗಳಲ್ಲಿ ವರನ ಗೃಹಪ್ರವೇಶ, ಪ್ರಸ್ಥದ ದಿನ, ಕೊಠಡಿ ಪ್ರವೇಶ ಇತ್ಯಾದಿ ಸಂದರ್ಭಗಳಲ್ಲಿ ನೂತನ ಜೋಡಿಯು ಪರಸ್ಪರ ಹೆಸರು ಹೇಳಬೇಕೆಂದು ನಿಕಟ ಬಂಧುಗಳೋ, ಆಪ್ತ ಸ್ನೇಹಿತರೋ ಬಲವಂತ ಪಡಿಸುವುದಿದೆ. ಆಗ ನವದಂಪತಿಗಳು ಒಗಟಿನಲ್ಲಿ ಹೆಸರು ತಂದು ಹೇಳುವುದು, ಸಮಾನಾರ್ಥಕ ಹೆಸರು ಉಚ್ಛರಿಸುವುದು, ಕವಿತೆಕಟ್ಟಿ ನಾಮಧೇಯ ಸೇರಿಸಿ ಹೇಳುವುದು ಇತ್ಯಾದಿ ಇರುತ್ತದೆ. ಅದು ಹೊಸ ಜೋಡಿಯ ಹಿರಿಹಿಗ್ಗು, ನವಿರು ಪುಲಕಗಳಿಗೆ ಕಾರಣವಾಗುವುದಿದೆ. ಅದೊಂದು ಸಾಂದರ್ಭಿಕ ಸುರಮ್ಯ ಸನ್ನಿವೇಶವೇ ನಿಜ.
ಒಟ್ಟಿನಲ್ಲಿ ಹೆಸರು ಹೇಳುವಲ್ಲಿನ ಸಾಂದರ್ಭಿಕ ಮರೆವಿಗೊಂದು ಕ್ಷಮೆಯ ಸುಂದರ ಲೇಪನ ಹೊತ್ತ ಮುದ್ದಾದ ವಾಕ್ಯವೇ ‘ಮುಖ ಗೊತ್ತು.. ಹೆಸರು ನೆನಪಿಲ್ಲ’’.