ಗಾಂಧಿಗಾಗಿ ಹಳ್ಳಿಗಾಡು ಕಳವಳಿಸಿ ಮೊರೆಯಿಡುತ್ತಿದೆ...
ರೂಪ ಹಾಸನ
ಆಕಾಲಕ್ಕೇ ಗಾಂಧೀಜಿ, ಭಾರತದಲ್ಲಿ ನಗರಗಳ ಪ್ರಭಾವ ಹೆಚ್ಚುತ್ತಿರುವುದನ್ನು ಆತಂಕದಿಂದ ಕಂಡಿದ್ದರು. ನಗರಗಳು ಹಳ್ಳಿಗಳ ರಸವನ್ನು ಹೀರುತ್ತಾ, ಅವುಗಳನ್ನು ನಿಃಸತ್ವಗೊಳಿಸುತ್ತವೆ. ಹಳ್ಳಿಗಳ ಶೋಷಣೆಯೂ ಕೂಡ ವ್ಯವಸ್ಥಿತವಾದಂತಹ ಹಿಂಸೆಯೇ. ಅಹಿಂಸೆಯ ಆಧಾರದ ಮೇಲೆ ನಾವು ಸ್ವರಾಜ್ಯವನ್ನು ಕಟ್ಟಬೇಕಾಗಿದ್ದರೆ ಹಳ್ಳಿಗಳಿಗೆ ತಕ್ಕ ಸ್ಥಾನವನ್ನು ಕೊಡಲೇಬೇಕು ಎನ್ನುತ್ತಿದ್ದರು. ಇಂದು ನಗರಗಳನ್ನು ಅಭಿವೃದ್ಧಿಯ ಹೆಸರಲ್ಲಿ ಸಿಂಗಾಪುರ ಮಾಡುವ ಭರದಲ್ಲಿ, ಹಳ್ಳಿಗಳನ್ನು, ನಗರವಾಸಿಗಳು ಉತ್ಪಾದಿಸುವ ಕಸಕ್ಕೆ ಡಸ್ಟ್‌ಬಿನ್ ಮಾಡುತ್ತಿರುವ ಕಾಲಘಟ್ಟದಲ್ಲಿ, ಹೆಚ್ಚಿನ ಹಳ್ಳಿಗಳು ಸಮರ್ಪಕವಾದ ಮೂಲಸೌಕರ್ಯವೂ ಇಲ್ಲದೇ ತತ್ತರಿಸಿರುವ ಈ ಸನ್ನಿವೇಶದಲ್ಲಿ... ಈ ಕುರಿತು ನಾವು ಇನ್ನೂ ಹೆಚ್ಚು ತೀವ್ರವಾಗಿ ಯೋಚಿಸಬೇಕಿದೆಯೆನಿಸುತ್ತದೆ.
ಗಾಂಧೀಜಿಯನ್ನು ದೇವರು ಮಾಡಿ ಪೂಜೆ ಮಾಡುವುದು ತಪ್ಪು ಎನ್ನುತ್ತಿದ್ದಾರೆ. ಆದರೆ ಗಾಂಧಿಯನ್ನು ಕೊಲೆ ಮಾಡಿದವನಿಗೆ ಗುಡಿ ಕಟ್ಟಿ ಪೂಜೆ ಮಾಡಲಾಗುತ್ತಿದೆ. ಇದಕ್ಕೆ ಏನೆನ್ನಬೇಕು? ಖಂಡಿತಾ ಗಾಂಧಿ ದೇವರೂ ಅಲ್ಲ. ಪ್ರಶ್ನಾತೀತರೂ ಅಲ್ಲ. ಆದರೆ ಅವರನ್ನು ಪ್ರಶ್ನಿಸುವ ಅರ್ಹತೆಯನ್ನು ಮೊದಲಿಗೆ ನಾವು ಬೆಳೆಸಿಕೊಳ್ಳಬೇಕಲ್ಲ? ಪ್ರೀತಿ ಮತ್ತು ಸಹನೆ ನನ್ನ ಧರ್ಮ ಎಂದು ಗಾಂಧಿ ಹೇಳುತ್ತಾರೆ. ಹಾಗೇ ಬದುಕುತ್ತಾರೆ. ಆದರೆ ಇಂದು ದ್ವೇಷ ಮತ್ತು ಅಸಹಿಷ್ಣುತೆ ದೇಶದಲ್ಲಿ ತಾಂಡವವಾಡುತ್ತಿದೆ. ಹಾಗಾದರೆ ಈಗ ಇಲ್ಲಿ ಇರುವುದು ಏನು? ಅಧರ್ಮ ಅಲ್ಲವೇ? ಗಾಂಧಿಯನ್ನು ಹುತಾತ್ಮ ಎನ್ನುತ್ತೇವೆ. ಆದರೆ ಕೆಲವೊಮ್ಮೆ ಕಣ್ಣಿಗೆ ಕಾಣುವಂತೆ, ಹಲವು ಬಾರಿ ಕಣ್ಣಿಗೆ ಕಾಣದಂತೆ ಗಾಂಧಿ ನಮ್ಮಿಳಗೇ ಇದ್ದಾರೆ! ನಾನಿದನ್ನು ಹಲವು ರೀತಿಯಲ್ಲಿ ವೈಯಕ್ತಿಕವಾದ ನೆಲೆಯಲ್ಲಿ ಅನುಭವಿಸಿದ್ದೇನೆ. ಸಮಾಜದಲ್ಲಿ ಕಂಡಿದ್ದೇನೆ. ಜೊತೆಗೆ, ಈ ದುರಿತ ಕಾಲದಲ್ಲಿ ಗಾಂಧಿ ಆಪದ್ಬಾಂದವರಂತೆ ಇನ್ನೂ ಹೆಚ್ಚೆಚ್ಚು ಎದ್ದು ಕಾಣಿಸುತ್ತಿದ್ದಾರೆ. ಈ ಸೋಜಿಗಕ್ಕೆ ಏನೆಂದು ಹೆಸರಿಡೋಣ? ಗಾಂಧಿ ಮತ್ತು ಅಂಬೇಡ್ಕರ್ ಈ ದೇಶದ ಎರಡು ಕಣ್ಣುಗಳು. ಅವರಿಬ್ಬರ ನಡುವೆ ಎಷ್ಟೊಂದು ವೈರುಧ್ಯ! ಆದರೂ ಅವೆರಡೂ ಕಣ್ಣುಗಳ ನೋಟವನ್ನು ಒಂದಾಗಿ ಮೇಳೈಸಿ ನೋಡಿದರೆ, ಇಂದಿನ ವಿಷಮ ಸಮಸ್ಯೆಗಳ ಸುಳಿಯಲ್ಲಿ ಬೆಳಕು ಗೋಚರಿಸುತ್ತಿದೆ. ಹೃದಯ ಪರಿವರ್ತನೆಗೆ ಗಾಂಧಿ ಹೆಚ್ಚು ಒತ್ತುಕೊಟ್ಟರು. ಅಂಬೇಡ್ಕರ್, ಮನುಷ್ಯನ ಘನತೆ ಮತ್ತು ನಾಗರಿಕ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದರು. ಎರಡೂ ಮುಖ್ಯವೇ ತಾನೇ? ಎರಡೂ ಒಂದುಗೂಡಿ ಆದ ಸಮಾಜದಲ್ಲಿಯೇ ಅಲ್ಲವೇ ನಮ್ಮ ಸ್ವಾಸ್ಥ ಅಡಗಿರುವುದು? ಆದರೆ ನಾವು, ಯಾವ ಕಣ್ಣಿನ ನೋಟ ಮುಖ್ಯ ಎಂಬ ಗೊಂದಲಕ್ಕೆ ಬಿದ್ದಿದ್ದೇವೆ!
ಗಾಂಧೀಜಿ ಒಬ್ಬ ಮಹಾನ್ ಕನಸುಗಾರ. ಈ ದೇಶದ ಬಗ್ಗೆ, ಇಲ್ಲಿನ ಜನರ ಬಗ್ಗೆ, ಅವರ ನೆಮ್ಮದಿ, ಸಂತೋಷಗಳ ಬಗ್ಗೆ ಆತ್ಯಂತಿಕವಾದ ಕನಸುಗಳನ್ನು ಇಟ್ಟುಕೊಂಡಿದ್ದರು. ಈ ನೂರು ವರ್ಷಗಳಲ್ಲಿ ಇಲ್ಲಿನ ಜನನಾಯಕರು ಇಚ್ಛಾಶಕ್ತಿ ತೋರಿಸಿದ್ದರೆ ಗಾಂಧೀಜಿಯ ಗ್ರಾಮಸ್ವರಾಜ್ ಕನಸು ಸ್ವಲ್ಪವಾದರೂ ನನಸಾಗಿ, ಹಳ್ಳಿಗಳು ನಳನಳಿಸುತ್ತಿದ್ದವು. ಆದರೆ 72 ವರ್ಷಗಳ ಸ್ವಾತಂತ್ರಾನಂತರದ ಕಾಲವನ್ನು ಹಿಂದಿರುಗಿ ಆತ್ಮಾವಲೋಕನ ಮಾಡಿಕೊಂಡರೆ, ಗಾಂಧೀಜಿಯ ಗ್ರಾಮ ಭಾರತದ ಪಥದಲ್ಲಿ ನಾವು ಹಿಮ್ಮುಖ ಚಲನೆಯಲ್ಲಿದ್ದೇವೇನೋ ಎನ್ನಿಸುತ್ತದೆ.
ಗಾಂಧೀಜಿ ಗ್ರಾಮಸ್ವರಾಜ್ಯದ ಕನಸು ಕಂಡಾಗ ಭಾರತ, ಸುಮಾರು ಶೇ.80ರಷ್ಟು ಹಳ್ಳಿಗಳ ನಾಡಾಗಿತ್ತು. ಈಗಲೂ ಶೇ.60ರ ಆಸುಪಾಸಿನಷ್ಟು ನಮ್ಮದು ಹಳ್ಳಿಗಳ ನಾಡೆ. ಆದರೆ ದಿನದಿನಕ್ಕೂ ಈ ಪ್ರಮಾಣ ಕ್ಷೀಣಿಸುತ್ತಿದೆ. ಅಭಿವೃದ್ಧಿಯ ಹೆಸರಲ್ಲಿ, ಹೆಚ್ಚೆಚ್ಚು ನಗರ ಕೇಂದ್ರಿತವಾದ ವ್ಯವಸ್ಥೆಯನ್ನು ರೂಪುಗೊಳಿಸುತ್ತಿದ್ದೇವೆ. ಇದು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೋ ಎಂದು ಗಾಬರಿಯಾಗುತ್ತಿದೆ. ಏಕೆಂದರೆ ನಗರಗಳಲ್ಲಿ ಬೃಹತ್ ಕಟ್ಟಡಗಳ ಪಕ್ಕದಲ್ಲೇ ಬೃಹದಾಕಾರವಾಗಿ ಬೆಳೆಯುತ್ತಿರುವ ಕೊಳಚೆಪ್ರದೇಶಗಳು ಏನನ್ನು ಸೂಚಿಸುತ್ತಿವೆ? ತಿರಸ್ಕೃತ ಹಳ್ಳಿಯ ಪ್ರತಿರೂಪವನ್ನೇ ಅಲ್ಲವೇ? ವೇದನೆಯಾಗುತ್ತದೆ.
ನೂರು ವರ್ಷಗಳ ಹಿಂದಿನ ನಮ್ಮ ಹಳ್ಳಿಗಳು ಹೇಗಿದ್ದವು? ಅಜ್ಞಾನ, ಅನಕ್ಷರತೆ, ಮೌಢ್ಯ, ಕುರುಡು ನಂಬಿಕೆಗಳು, ಉಳ್ಳವರ ದರ್ಪ, ಪಾಳೇಗಾರಿಕೆ, ಲಿಂಗ ಮತ್ತು ಜಾತಿ ತಾರತಮ್ಯದಿಂದ ರೋಗದ ಕೂಪವಾಗಿತ್ತು. ಅದರಲ್ಲೂ ಮಹಿಳೆ ಮತ್ತು ತಳಸಮುದಾಯದವರನ್ನು ಸಮಾನತೆಯ ಆಶಯವಿರಲಿ, ಕನಿಷ್ಠ ಮನುಷ್ಯರೂ ಎಂದು ಪರಿಭಾವಿಸುವುದೂ ಕಷ್ಟವಾಗಿದ್ದಂತಹ ಕಾಲಘಟ್ಟ ಅದು. ಇಂತಹ ವಿಷಮ ಸಂದರ್ಭದಲ್ಲೂ ಗಾಂಧೀಜಿ ಗ್ರಾಮಸ್ವರಾಜ್ ರೂಪಿಸುವ ಕನಸು ಕಂಡಿದ್ದರೆಂದರೆ ಅದಕ್ಕೆ ಕಾರಣ, ಅವರು ಮಾನವ ಕುಲದ ಮೇಲೆ ಇಟ್ಟ ನಂಬಿಕೆ ಹಾಗೂ ಅವರ ಆಳದಲ್ಲಿ, ಇಂತಲ್ಲೂ ಬದಲಾವಣೆಯಾಗೇ ಆಗುತ್ತದೆ ಎನ್ನುವ ಅದಮ್ಯ ವಿಶ್ವಾಸ. ಇಲ್ಲಿಂದಲೇ ಅವರ ಚಿಂತನೆಗಳು ಅರಳಿ, ಗ್ರಾಮ ಸ್ವಾವಲಂಬನೆ ಪ್ರಾಮುಖ್ಯತೆ ಪಡೆಯುತ್ತದೆ. ಜೊತೆಗೆ ಒಂದು ಹಳ್ಳಿಯ ಜನರು ಪರಸ್ಪರ ಪ್ರೀತಿ ಮತ್ತು ಸಹಕಾರದಿಂದ ಹೊಂದಾಣಿಕೆ ಮಾಡಿಕೊಳ್ಳುವಂತಹ ಆಡಳಿತ ವ್ಯವಸ್ಥೆಯೂ ಇಲ್ಲಿರಬೇಕೆಂದೂ ಆಶಿಸುತ್ತಾರೆ. ಗಾಂಧೀಜಿಯ ದೃಷ್ಟಿಯಲ್ಲಿ ಹಳ್ಳಿಗಳು ಆಡಳಿತದ ಪ್ರಾಥಮಿಕ ಘಟಕಗಳಾಗಬೇಕಿತ್ತು. ತನ್ಮೂಲಕ ಕೆಳಗಿನಿಂದ ಮೇಲಿನವರೆಗಿನ ಅಧಿಕಾರವನ್ನು ನಿಯಂತ್ರಿಸುವುದು ಮತ್ತು ನಿರ್ವಹಿಸುವುದು ಗ್ರಾಮಸ್ವರಾಜ್ಯದ ಉದ್ದೇಶ ಆಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಮದ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಹೀನಾಯ ಸ್ಥಿತಿಯಲ್ಲಿರುವವರ ಉದ್ಧಾರಕ್ಕೆ, ಅವರ ಮಾತಲ್ಲೇ ಹೇಳುವುದಾದರೆ ಅಂತ್ಯೋದಯಕ್ಕೆ ಮೊದಲ ಆದ್ಯತೆ.
ಭಾರತದಲ್ಲಿ ಕೈಗಳು ಅಪಾರ ಪ್ರಮಾಣದಲ್ಲಿದೆ. ಹೀಗಾಗಿ ವ್ಯಾಪಕ ಯಾಂತ್ರೀಕರಣ, ದೇಶಕ್ಕೆ ಒಂದು ಅನಿಷ್ಟ ಎಂದವರು ಬಗೆದಿದ್ದರು. ಜೊತೆಗೆ ಮಾನವ ಸಂಬಂಧಗಳಲ್ಲಿನ ಆಪ್ತತೆಯನ್ನು ಯಂತ್ರಗಳು ನಾಶ ಮಾಡುತ್ತದೆಂಬುದೂ ಅವರ ನಂಬಿಕೆ. ಆದ್ದರಿಂದ ಹಳ್ಳಿಗರಿಗೆ ಪರಂಪರಾಗತವಾಗಿ ನಡೆಸಿಕೊಂಡು ಬಂದ ಗುಡಿಕೈಗಾರಿಕೆಗಳ ಮೂಲಕ ಕೆಲಸ ಸೃಷ್ಟಿಸಬೇಕೆಂದವರು ನಂಬಿದ್ದರು. ಇದಾಗದೇ ಹೋದರೆ ಹಳ್ಳಿಗಳು ನಾಶವಾಗುತ್ತದೆ. ಆ ಮೂಲಕ ಭಾರತದ ಆತ್ಮ ನಾಶವಾಗುತ್ತದೆ. ಆಗ ಭಾರತ ತನ್ನ ನಿಜ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ದೊಡ್ಡ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆಯಾದಾಗ ಪೈಪೋಟಿ ಮತ್ತು ಲಾಭ ಮುಖ್ಯವಾಗಿ, ಗ್ರಾಮೀಣರ ಪ್ರತ್ಯಕ್ಷ ಅಥವಾ ಪರೋಕ್ಷ ಶೋಷಣೆ ನಡೆಯುತ್ತದೆ. ಆದ್ದರಿಂದ ಹಳ್ಳಿಗಳು ತನ್ನಷ್ಟಕ್ಕೇ ಸ್ವಯಂ ಪರಿಪೂರ್ಣವಾಗುವಂತೆ, ತನ್ನ ಉಪಯೋಗಕ್ಕಾಗಿ ಮಾತ್ರ ಪದಾರ್ಥಗಳನ್ನು ತಯಾರಿಸಿಕೊಳ್ಳುವಂತೆ ಗಮನ ಹರಿಸಬೇಕು ಎಂದವರು ಪ್ರತಿಪಾದಿಸಿದ್ದರು. ಪಂಚಾಯತ್‌ಗಳ ಮೂಲಕ ಹಳ್ಳಿಯ ಆಂತರಿಕ ವ್ಯಾಜ್ಯ ಮತ್ತು ನ್ಯಾಯ ತೀರ್ಮಾನ ಕೂಡ ಆಗಬೇಕು ಎಂದು ಗಾಂಧೀಜಿ ಪ್ರತಿಪಾದಿಸುತ್ತಿದ್ದರು. ಅಧಿಕಾರ ವಿಕೇಂದ್ರೀಕರಣಕ್ಕಾಗಿ ಗ್ರಾಮಸ್ವರಾಜ್ಯದ ಮೂಲಕ ರಾಜಕೀಯ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಕೀಲಿಕೈಯಾಗಿ ಬಳಸಬೇಕೆಂದು ಅವರು ಸೂಚಿಸಿದ್ದರು. ಹೀಗಾಗಿ ಪ್ರತಿ ಗ್ರಾಮಸಭೆಯೂ ತನ್ನ ಅನುಕೂಲಕ್ಕೆ ಬೇಕಾದ ಪ್ರತಿಯೊಂದು ನಿರ್ಣಯಗಳನ್ನು ನಿಷ್ಪಕ್ಷಪಾತವಾಗಿ ತೆಗೆದುಕೊಳ್ಳಲಿಕ್ಕೆ ಅರ್ಹವಾಗಿರಬೇಕೆಂದು ಅವರು ಬಯಸಿದ್ದರು. ಆ ಕಾಲಕ್ಕೇ ಗಾಂಧೀಜಿ, ಭಾರತದಲ್ಲಿ ನಗರಗಳ ಪ್ರಭಾವ ಹೆಚ್ಚುತ್ತಿರುವುದನ್ನು ಆತಂಕದಿಂದ ಕಂಡಿದ್ದರು. ನಗರಗಳು ಹಳ್ಳಿಗಳ ರಸವನ್ನು ಹೀರುತ್ತಾ, ಅವುಗಳನ್ನು ನಿಃಸತ್ವಗೊಳಿಸುತ್ತವೆ. ಹಳ್ಳಿಗಳ ಶೋಷಣೆಯೂ ಕೂಡ ವ್ಯವಸ್ಥಿತವಾದಂತಹ ಹಿಂಸೆಯೇ. ಅಹಿಂಸೆಯ ಆಧಾರದ ಮೇಲೆ ನಾವು ಸ್ವರಾಜ್ಯವನ್ನು ಕಟ್ಟಬೇಕಾಗಿದ್ದರೆ ಹಳ್ಳಿಗಳಿಗೆ ತಕ್ಕ ಸ್ಥಾನವನ್ನು ಕೊಡಲೇಬೇಕು ಎನ್ನುತ್ತಿದ್ದರು. ಇಂದು ನಗರಗಳನ್ನು ಅಭಿವೃದ್ಧಿಯ ಹೆಸರಲ್ಲಿ ಸಿಂಗಾಪುರ ಮಾಡುವ ಭರದಲ್ಲಿ, ಹಳ್ಳಿಗಳನ್ನು, ನಗರವಾಸಿಗಳು ಉತ್ಪಾದಿಸುವ ಕಸಕ್ಕೆ ಡಸ್ಟ್‌ಬಿನ್ ಮಾಡುತ್ತಿರುವ ಕಾಲಘಟ್ಟದಲ್ಲಿ, ಹೆಚ್ಚಿನ ಹಳ್ಳಿಗಳು ಸಮರ್ಪಕವಾದ ಮೂಲಸೌಕರ್ಯವೂ ಇಲ್ಲದೇ ತತ್ತರಿಸಿರುವ ಈ ಸನ್ನಿವೇಶದಲ್ಲಿ... ಈ ಕುರಿತು ನಾವು ಇನ್ನೂ ಹೆಚ್ಚು ತೀವ್ರವಾಗಿ ಯೋಚಿಸಬೇಕಿದೆಯೆನಿಸುತ್ತದೆ. ಹಳ್ಳಿಗಳ ಸಾಮುದಾಯಿಕ ಬಾವಿಗಳು, ದೇವಾಲಯ, ಸಂತೆ, ಗೋಮಾಳ, ಸಹಕಾರಿ ತತ್ವದಲ್ಲಿ ಪದಾರ್ಥಗಳ ಕೊಡು ಕೊಳ್ಳುವಿಕೆ, ಪ್ರಾಥಮಿಕ ಹಂತದವರೆಗಿನ ಶಾಲೆ... ಈ ಎಲ್ಲವೂ ಜಾತಿ/ಲಿಂಗಭೇದ, ತಾರತಮ್ಯವಿಲ್ಲದೇ ಎಲ್ಲರನ್ನೂ ಒಳಗೊಳ್ಳುವಂತಾಗಬೇಕು ಎನ್ನುವುದವರ ಮಹತ್ತರ ಆಶಯ. ನನಗೆ ಗೊತ್ತು ಆದರ್ಶ ಗ್ರಾಮವನ್ನು ರೂಪಿಸುವುದು ತುಂಬಾ ಕಷ್ಟ. ಆದರೆ ಭಾರತವೊಂದು ಆದರ್ಶ ದೇಶವಾಗಬೇಕು ಎಂದರೆ ಪ್ರತಿಗ್ರಾಮವೂ ಆದರ್ಶ ಗ್ರಾಮವಾಗಬೇಕು. ಆಗ ಮಾತ್ರ ಅದು ವಿಶ್ವಕ್ಕೇ ಆದರ್ಶಪ್ರಾಯವಾಗುತ್ತದೆ. ಆರ್ಥಿಕ ಮತ್ತು ರಾಜಕೀಯ ಅಧಿಕಾರ ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃತವಾದರೆ ಅದು ಪ್ರಜಾಪ್ರಭುತ್ವಕ್ಕೆ ಮತ್ತು ಸ್ವರಾಜ್ ಕಲ್ಪನೆಗೇ ಮಾರಕ ಎಂದು, ದಾರ್ಶನಿಕರಂತೆ ನುಡಿದಿದ್ದ ಗಾಂಧಿಯ ಮಾತು, ಆರ್ಥಿಕತೆಯ ಲಗಾಮು ಮತ್ತು ರಾಜಕೀಯ ಅಧಿಕಾರ ಕೆಲವೇ ವ್ಯಕ್ತಿಗಳಲ್ಲಿ ಧ್ರುವೀಕರಣಗೊಂಡು, ಬಂಡವಾಳಶಾಹಿಯ ಕಪಿಮುಷ್ಟಿಯಲ್ಲಿ ಪ್ರಜಾಪ್ರಭುತ್ವ ಉಸಿರುಗಟ್ಟಿ ವಿಲವಿಲನೆ ಒದ್ದಾಡುತ್ತಿರುವ ಈ ಹೊತ್ತಿನಲ್ಲಿ ಅತ್ಯಂತ ಪ್ರಸ್ತುತ ಎನ್ನಿಸುತ್ತಿದೆ. ಅಂಬೇಡ್ಕರ್ ಕಣ್ಣಿನಿಂದ ಹಳ್ಳಿಗಳನ್ನು ನೋಡಿದರೆ, ಅವು ಅಸಮಾನತೆ ಮತ್ತು ಶೋಷಣೆಯ ಕೂಪಗಳು. ಇಂತಹ ಹಳ್ಳಿಗಳ ಮೂಲಕ ಸ್ವರಾಜ್ ನಿರ್ಮಿಸುವುದು ಅಸಾಧ್ಯ ಮತ್ತು ಅಸಾಧು ಎಂದವರು ನಂಬಿದ್ದರು. ಅಂಬೇಡ್ಕರ್ ಅವರಿಗೆ, ಪ್ರಬಲ ರಾಜಕೀಯ ಅಧಿಕಾರ ಇರುವ ಪ್ರಜಾತಂತ್ರ ಮತ್ತು ಸರಕಾರದಿಂದ ಮಾತ್ರ ಅಸಮಾನತೆಯ ಕೂಪದಿಂದ ಜನರನ್ನು ಮೇಲೆತ್ತಬಹುದು ಎನ್ನುವ ನಂಬಿಕೆ ಇತ್ತು.
ಜಾತಿ ಆಧಾರಿತ ವ್ಯವಸ್ಥೆ ಶೋಷಿಸುವ ರೀತಿಯಲ್ಲೇ, ಬಹುಮತ ಹೊಂದಿದ ಪ್ರಜಾತಾಂತ್ರಿಕ ವ್ಯವಸ್ಥೆಯೂ ಶೋಷಿಸಬಹುದೆಂಬ ಅಳುಕು ಆಳದಲ್ಲಿ ಇದ್ದೇ ಇತ್ತು. ಅವರ ಈ ಮಾತುಗಳು ನಿಧಾನವಾಗಿ ನಿಜವಾಗುತ್ತಿರುವುದೇ ಆತಂಕಕಾರಿಯಾದುದು.
ಗಾಂಧಿ ಹಾಗೂ ಅಂಬೇಡ್ಕರ್ ಇಬ್ಬರ ಚಿಂತನೆಯ ಸಾರದ ಆಧಾರದಲ್ಲಿ ಆಧುನಿಕ ಸಮಾಜದ ಅವಶ್ಯಕತೆಗಳನ್ನು ಆಧರಿಸಿ ಸಂವಿಧಾನಕ್ಕೆ 73ನೇ ತಿದ್ದುಪಡಿಯನ್ನು ತರುವ ಮೂಲಕ 1992ರಲ್ಲಿ ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಶಿಕ್ಷಣ, ನೈರ್ಮಲ್ಯ, ಆರೋಗ್ಯದ ಅವಶ್ಯಕತೆ, ಕೆರೆ ಕಟ್ಟೆಗಳ ಶುಚಿತ್ವ ಮತ್ತು ದೇಖರೇಕಿ ಮತ್ತು ದಮನಿತ ಜನರ ಉದ್ಧಾರಕ್ಕಾಗಿ ನಿತ್ಯ ಶ್ರಮ ಇವು ಪಂಚಾಯತ್‌ರಾಜ್‌ನ ಮೂಲತತ್ವವಾಗಿತ್ತು. ಆ ಮೂಲಕ ನಿಧಾನವಾಗಿಯಾದರೂ ಗ್ರಾಮಗಳಲ್ಲಿ ಮೇಲ್ಮಟ್ಟದ ಗುರುತರ ಬದಲಾವಣೆಗಳಾದುದನ್ನು ತಳ್ಳಿ ಹಾಕುವಂತಿಲ್ಲ. ಅದೇ ಸಮಯದಲ್ಲಿ, ಅಧಿಕಾರ ಮತ್ತು ಆಡಳಿತಶಾಹಿ ಕಪಿಮುಷ್ಟಿಯ ಬಗ್ಗೆ ಗಾಂಧೀಜಿಗಿದ್ದ ಆತಂಕ ಕೂಡ ಇವತ್ತು ಬಹು ಪಾಲು ನಿಜವಾಗಿದೆ! ಮೂಲಸೌಕರ್ಯದ ಹೆಸರಿನಲ್ಲಿ ಆರೋಗ್ಯ, ಶಿಕ್ಷಣ, ನೀರು, ವಿದ್ಯುತ್, ಚರಂಡಿ ವ್ಯವಸ್ಥೆ, ರಸ್ತೆ/ಬಸ್ ಸಂಪರ್ಕ, ವೈಯಕ್ತಿಕ ಶೌಚಾಲಯ, ಅಂಚಿಗೊತ್ತರಿಸಲ್ಪಟ್ಟವರ ಉದ್ಧಾರದ ಹೆಸರಲ್ಲಿ ನೂರಾರು ಯೋಜನೆಗಳಿಗಾಗಿ ಕೋಟಿಗಟ್ಟಲೆ ಹಣ ಹಳ್ಳಿಗಳಿಗಾಗಿ ವ್ಯಯವಾಗಿದೆ. ಆದರೆ ನಗರಗಳಿಗೆ ಹೋಲಿಸಿದರೆ ಬಹುಶಃ ನಮ್ಮ ಹಳ್ಳಿಗಳು ಅಭಿವೃದ್ಧಿಯಿಂದ ಒಂದು ಶತಮಾನದಷ್ಟು ಹಿಂದೆ ಬಿದ್ದಿವೆ. ಒಂದು ಉದಾಹರಣೆಯನ್ನು ನೋಡುವುದಾದರೆ, ಕಳೆದ ಅಕ್ಟೋಬರ್ ಎರಡರ ಗಾಂಧಿ ಜಯಂತಿಯಂದು ನಮ್ಮ ಪ್ರಧಾನಿ ಇಡೀ ದೇಶವನ್ನು ಬಯಲುಶೌಚ ಮುಕ್ತ ದೇಶವೆಂದು ಘೋಷಿಸಿದರು. ಆದರೆ ವರದಿಗಳಲ್ಲಿ ದಾಖಲಾದಂತೆ, ವಾಸ್ತವದಲ್ಲಿ ಕಾಣುತ್ತಿರುವಂತೆ ಈ ಇಪ್ಪತ್ತೊಂದನೆಯ ಶತಮಾನದ ರಾಕೆಟ್ ಯುಗದಲ್ಲೂ ಇಂದಿಗೂ ಗ್ರಾಮೀಣ ಪ್ರದೇಶದ ಶೇಕಡಾ 35ರಷ್ಟು ಮನೆಗಳಲ್ಲಿನ್ನೂ ಶೌಚಾಲಯ ವ್ಯವಸ್ಥೆ ಇಲ್ಲದೇ ಬಯಲನ್ನೇ ಅವಲಂಬಿಸಿದ್ದಾರೆಂದರೆ ಅದಿನ್ನೆಂತಹ ನಾಚಿಕೆಗೇಡಿನ, ಅನಾಗರಿಕ ಗ್ರಾಮಜಗತ್ತಿನಲ್ಲಿ ನಾವಿದ್ದೇವೆ ಎಂದು ಖೇದವಾಗುತ್ತದೆ. ಹೆಚ್ಚಿನ ಗ್ರಾಮಗಳಲ್ಲಿ ಇಂದಿಗೂ ಮೌಢ್ಯ ಮತ್ತು ಕುರುಡು ಸಾಂಪ್ರದಾಯಿಕ ಆಚರಣೆಗಳು ಚಾಲ್ತಿಯಲ್ಲಿವೆ. ಇದೆಲ್ಲದರ ಪರಿಣಾಮವನ್ನು ನೇರವಾಗಿ ಅನುಭವಿಸುವವಳು ಗ್ರಾಮೀಣ ಮಹಿಳೆ ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಂಚಿಗೊತ್ತರಿಸಲ್ಪಟ್ಟ ಸಮುದಾಯಗಳು. ಕೇವಲ ದಿನ ಬಳಕೆಯ ನೀರಿಗಾಗಿ, ಉರುವಲಿಗಾಗಿ ಗ್ರಾಮೀಣ ಮಹಿಳೆಯರು ಗಂಟೆಗಟ್ಟಲೆ, ಮೈಲಿಗಟ್ಟಲೆ ನಡೆದು ಅದನ್ನು ಸಂಪಾದಿಸಬೇಕಾದ ಶೋಚನೀಯ ಸ್ಥಿತಿ ಇರುವಾಗ, ಅವರು ವಿದ್ಯಾಭ್ಯಾಸ, ಕೌಶಲ್ಯಾಭಿವೃದ್ಧಿ, ಆರ್ಥಿಕ ಸ್ವಾವಲಂಬನೆಯ ಕಕ್ಷೆಯಿಂದ ದೂರವೇ ಉಳಿದುಬಿಡುತ್ತಾರೆ. ಜೊತೆಗೆ ಇಂದಿಗೂ ಜೀವಂತವಾಗಿರುವ ಬಾಲ್ಯವಿವಾಹ, ವಧುಮಾರಾಟ, ಅತ್ಯಂತ ಹೆಚ್ಚಿನ ಪ್ರಮಾಣದ ಅತ್ಯಾಚಾರಗಳು, ಹೆಣ್ಣುಮಕ್ಕಳ ಕಳ್ಳಸಾಗಣೆಗಳಂತಹ ಜ್ವಲಂತ ಸಮಸ್ಯೆಗಳಿಂದಾಗಿ ಗ್ರಾಮೀಣ ಪ್ರದೇಶದ, ಅದರಲ್ಲೂ ತಳಸಮುದಾಯದ ಮಹಿಳೆ ಮೇಲೇಳದಂತೆ ತತ್ತರಿಸಿ ಹೋಗಿದ್ದಾಳೆ. ಇಷ್ಟೆಲ್ಲದರ ಮಧ್ಯೆ ಕೂಡ ಗ್ರಾಮೀಣ ದುಡಿಮೆ ಮತ್ತು ಅರ್ಥವ್ಯವಸ್ಥೆಯ ಶೇ.60ರಷ್ಟು ಆದಾಯ ಮಹಿಳೆಯರಿಂದಲೇ ಗಳಿಕೆಯಾಗುತ್ತಿರುವುದು ಕೂಡ ಇನ್ನೊಂದು ವಾಸ್ತವ. ಸ್ತ್ರೀಶಕ್ತಿ ಸಂಘಗಳ ರಚನೆಯ ಮೂಲಕ ತಮ್ಮ ಕೆಲಮಟ್ಟಿನ ಆದಾಯವನ್ನಾದರೂ ಉಳಿತಾಯ ಮಾಡಲು ಮಹಿಳೆಯರು ಕಲಿತಿದ್ದು ಹಳ್ಳಿಗಳ ಬದಲಾವಣೆಗೆ ಕಾರಣವಾಗಿದೆ.
ಇದರ ಜೊತೆಗೇ ಸಂವಿಧಾನದ ಆಶಯದಂತೆ, ಇಂದಿಗೂ ಭಾರತದ ಸಾವಿರಾರು ಹಳ್ಳಿಗಳಲ್ಲಿ ಮೂಲ ಶಿಕ್ಷಣ ಒದಗಿಸಲು ಸರಕಾರಿ ಶಾಲೆಗಳಿಲ್ಲ. ಇರುವ ಶಾಲೆಗಳೂ ಅಂಕೆಯಿಲ್ಲದ ಖಾಸಗಿಯವರ ದರ್ಬಾರಿನಿಂದಾಗಿ ವರ್ಷದಿಂದ ವರ್ಷಕ್ಕೆ ಸಾವಿರ ಸಂಖ್ಯೆಯಲ್ಲಿ ಮುಚ್ಚಿಹೋಗುತ್ತಿರುವ ಈ ಹೊತ್ತಿನಲ್ಲಿ ಹೆಣ್ಣುಮಕ್ಕಳು ಮತ್ತು ತಳಸಮುದಾಯದ ಮಕ್ಕಳು ಶಾಶ್ವತವಾಗಿ ಶಿಕ್ಷಣದಿಂದ ದೂರ ಉಳಿಯುವಂತಾಗುತ್ತದೆ. ಮಕ್ಕಳನ್ನು, ಅದರಲ್ಲೂ ಹೆಣ್ಣುಮಕ್ಕಳನ್ನು ಮನೆ ಮುಂದಿನ ಉಚಿತ, ಸರಕಾರಿ ಶಾಲೆಗಳಿಗೆ ಕಳಿಸಲೇ ಹಿಂದೆಮುಂದೆ ನೋಡುವ ಬಡ ಪೋಷಕರು, ಇಂದಿನ ಅಸುರಕ್ಷಿತ ವಾತಾವರಣದಲ್ಲಿ ತಮ್ಮ ಮಕ್ಕಳನ್ನು ದೂರದ ಶಾಲೆಗಳಿಗೆ, ದುಡ್ಡುಕೊಟ್ಟು ಖಾಸಗಿ ಶಾಲೆಗಳಿಗೆ ಕಳಿಸಲು ಸಾಧ್ಯವೇ? ಬಾಲಕಾರ್ಮಿಕತೆ, ಬಾಲ್ಯವಿವಾಹ, ಶಾಲೆ ಇಲ್ಲದ ಕೊರತೆ, ಸೌಲಭ್ಯಗಳಿಲ್ಲದ ಕೊರತೆ... ಹೀಗೆ ಅನೇಕ ವಾಸ್ತವಿಕ ಕಾರಣಗಳಿಂದಾಗಿ ಲಕ್ಷಾಂತರ ಗ್ರಾಮೀಣ ಮಕ್ಕಳು ಇಂದಿಗೂ ಶಾಲೆಯಿಂದ ಹೊರಗೇ ಇದ್ದಾರೆ. ಸಂವಿಧಾನವೇ ಒಪ್ಪಿಕೊಂಡಿರುವ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಯಾಗದಿರುವುದರಿಂದ ಹಳ್ಳಿಗಾಡಿನ ಮಕ್ಕಳು, ಶಾಲೆ ಸೇರಬೇಕಾದ ಎಳೆಯ ಹಂತದಲ್ಲೇ ಅಸಮಾನತೆಗೆ ತುತ್ತಾಗಿ ಅದು ಮುಂದಿನ ಅವರ ಬದುಕಿನ ಪ್ರತಿ ಹಂತಗಳಲ್ಲೂ ಶಾಶ್ವತ ಪರಿಣಾಮಗಳನ್ನು ಮಾಡುತ್ತಲೇ ಹೋಗುತ್ತಿದೆ. ಕಂದರ ಹೆಚ್ಚುತ್ತಲೇ ಇದೆ. ಸರ್ವರಿಗೂ ಸಮಾನ ಶಿಕ್ಷಣ ಎಂಬ ಗಾಂಧೀಜಿ ಮತ್ತು ಅಂಬೇಡ್ಕರ್ ಆಶಯ ಕನಸಾಗಿಯೇ ಉಳಿದಿದೆ.
ಇಂದಿನ ಹಳ್ಳಿಗಾಡಿನ ಮತ್ತೊಂದು ಭೀಕರ ಸಮಸ್ಯೆ, ಮದ್ಯಪಾನ ಚಟದ್ದು. ಎಗ್ಗಿಲ್ಲದಂತೆ ಬೀದಿ ಬೀದಿಯಲ್ಲಿ, ಚಿಕ್ಕಪುಟ್ಟ ಅಂಗಡಿಗಳಲ್ಲಿಯೂ ಪ್ಯಾಕೆಟ್‌ಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಪ್ರತಿ ತಿಂಗಳೂ ಟಾರ್ಗೆಟ್ ನೀಡಿ, ಬೇಡಿಕೆ ಹೆಚ್ಚಿಸಿ ಜನರನ್ನು ಕುಡಿತದ ದಾಸರನ್ನಾಗಿಸಿ ಸರಕಾರಗಳೇ ಕುಟುಂಬಗಳನ್ನು ಸುಡುತ್ತಿರುವ ದುರಂತವನ್ನು ಕಾಣುತ್ತಿದ್ದೇವೆ. ಪ್ರತಿ ವರ್ಷ ಮದ್ಯಪಾನ ಚಟಕ್ಕೆ ಬೀಳುವವರ ಪ್ರಮಾಣ ಶೇ.18ರಷ್ಟು ಹೆಚ್ಚಾಗುತ್ತಿದೆ. ಕುಟುಂಬದ ಪುರುಷರ ಅತಿಯಾದ ಮದ್ಯಪಾನ ಚಟದಿಂದಾಗಿ ನಿತ್ಯ ಮನೆಗಳಲ್ಲಿ ಜಗಳ, ಹೊಡೆದಾಟ, ಹಿಂಸೆ... ತಾಳಲಾರದೇ ಮದ್ಯನಿಷೇಧಕ್ಕೆ ಆಗ್ರಹಿಸಿ ಸಾವಿರಾರು ಗ್ರಾಮೀಣ ಹೆಣ್ಣುಮಕ್ಕಳು ಒಗ್ಗೂಡಿ ಸರಕಾರದ ಧೋರಣೆಯನ್ನು ಪ್ರತಿಭಟಿಸಿ ಬೀದಿಗಿಳಿದಿದ್ದಾರೆ.
ಮದ್ಯನಿಷೇಧಕ್ಕೆ ಗಾಂಧೀಜಿಯೇ ಮುಖ್ಯ ಪ್ರೇರಣೆ. ನಿಜವಾದ ಆರೋಗ್ಯಕರ ಸ್ವಸ್ಥ ಗ್ರಾಮಕ್ಕೆ ಮದ್ಯನಿಷೇಧವೇ ಮದ್ದು ಎಂದು ಗಾಂಧೀಜಿ ಬಲವಾಗಿ ನಂಬಿದ್ದರು. ಆದರೆ ಸರಕಾರದ ಅಬಕಾರಿ ಇಲಾಖೆಯ ಕಚೇರಿಗಳಲ್ಲಿ ಗಾಂಧೀಜಿಯ ಭಾವಚಿತ್ರದಡಿಯಲ್ಲೇ ಹೆಚ್ಚೆಚ್ಚು ಮದ್ಯ ಮಾರಾಟ ಮಳಿಗೆಗಳಿಗೆ ಪರವಾನಿಗೆಯನ್ನು ನೀಡುತ್ತಿರುವುದು ಗಾಂಧೀಜಿಯನ್ನೇ ಅಪಹಾಸ್ಯ ಮಾಡುವಂತಿದೆ! ಅದಕ್ಕೆ ಮದ್ಯ ನಿಷೇಧ ಆಂದೋಲನ ಕರ್ನಾಟಕದ ತಾಯಂದಿರು, ನಮ್ಮ ಗಾಂಧಿ ನಮಗೆ ಕೊಡಿ, ಇಲ್ಲವೆಂದರೆ ಸರಕಾರ ಮದ್ಯ ಮಾರಾಟ ನಿಲ್ಲಿಸಲಿ ಎಂದು ದಶಕದಿಂದ ಅಹಿಂಸಾತ್ಮಕ ಹೋರಾಟ ನಡೆಸುತ್ತಿದ್ದಾರೆ. ಸಂವಿಧಾನದ 73ನೆಯ ತಿದ್ದುಪಡಿಯ ಆಶಯದಂತೆ, ಗಾಂಧೀಜಿಯ ಕನಸಾದ ಗ್ರಾಮಗಳ ಭವಿಷ್ಯವನ್ನು ನಿರ್ಧರಿಸುವ ಹಕ್ಕು ಗ್ರಾಮಸಭೆಗೆ ನೀಡುವ ಮೂಲಕ ಪಂಚಾಯತ್ ವ್ಯಾಪ್ತಿಯಲ್ಲಿ ಮದ್ಯದಂಗಡಿ ನಿಷೇಧಿಸುವ ಅಧಿಕಾರಕ್ಕಾಗಿ ಪಟ್ಟು ಹಿಡಿದು ಕೂತಿದ್ದಾರೆ. ಗಾಂಧೀಜಿಯ ಕನಸು ಈಗಲಾದರೂ ನನಸಾದೀತೇ?
ಮಹಾತ್ಮ್ಮಾಗಾಂಧಿ ನೂರು ವರ್ಷಗಳ ಹಿಂದೆಯೇ ಗಂಡಿನ ಕಾಮಕ್ಕಾಗಿ ತಮ್ಮ ಶೀಲವನ್ನೇ ಅನೇಕ ಮಹಿಳೆಯರು ಮಾರಬೇಕಾದ ಸ್ಥಿತಿ ಅತ್ಯಂತ ಕಹಿಯಾದ ಅಪಮಾನ, ದುಃಖ ಹಾಗೂ ಗಾಢವಾದ ಅವಹೇಳನ. ದುರ್ಬಲವರ್ಗವೆಂದು ಅನ್ನಿಸುವ ಈ ಗುಂಪನ್ನು ಈ ರೀತಿಯಾಗಿ ಅಪಮಾನಿಸಿದ್ದಕ್ಕೆ ಪ್ರತಿಯಾಗಿ, ದಮನಿತರು ಅಹಿಂಸಾತ್ಮಕವಾದ ದಂಗೆ ಸಾರಬೇಕು ಎಂದು ಪ್ರತಿಪಾದಿಸಿದ್ದರು. ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆರೋಗ್ಯ ಇಲಾಖೆಯಡಿ ಒಂದು ಘಟಕವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಗಳ ಏಡ್ಸ್ ನಿಯಂತ್ರಣ ಮಂಡಳಿ, ವೇಶ್ಯಾವಾಟಿಕೆಯ ಜಾಲಕ್ಕೆ ಬಿದ್ದಿರುವ, ಹೆಚ್ಚಾಗಿ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳನ್ನು ಕಳೆದ 15-20 ವರ್ಷಗಳಿಂದ ನೋಂದಾಯಿಸಿಕೊಂಡು ಏಡ್ಸ್ ನಿಯಂತ್ರಣದ ಹೆಸರಿನಲ್ಲಿ ಅವರಿಂದ ಉಚಿತ ಕಾಂಡೋಮ್ ಹಂಚಿಸುತ್ತಾ ಲೈಂಗಿಕ ಜೀತದ ಜಾಲವೊಂದನ್ನು ಸೃಷ್ಟಿ ಮಾಡಿರುವುದು ಸುಲಭಕ್ಕೆ ಕಣ್ಣಿಗೆ ಕಾಣದ ನಾಗರಿಕ ಸಮಾಜದ ಘೋರ ದುರಂತ. ಇದರಲ್ಲಿ ಹೆಚ್ಚಿನವರು ತಳಸಮುದಾಯದ, ಹಿಂದುಳಿದ ಜಾತಿ ವರ್ಗದ ಗ್ರಾಮೀಣ ಮಹಿಳೆಯರೆನ್ನುವುದು ಅತ್ಯಂತ ನೋವಿನ ಸಂಗತಿ. ಇದೊಂದು ರೀತಿಯಲ್ಲಿ ಸರಕಾರಿ ಪ್ರಾಯೋಜಿತ ವೇಶ್ಯಾವಾಟಿಕೆಯೇ ಆಗಿರುವುದು ಗಾಂಧೀಜಿ ಮತ್ತು ಅಂಬೇಡ್ಕರ್ ಕಂಡಿದ್ದ ಹೆಣ್ಣಿನ ಘನತೆಯುತ ಬದುಕಿನ ಕನಸನ್ನು ಸರಕಾರವೇ ಅವಮಾನಿಸುತ್ತಿರುವ ದುರಂತ ಸ್ಥಿತಿ.
ವ್ಯವಸ್ಥೆ ಹೆಣ್ಣುಮಕ್ಕಳಿಗೆ ಸಮರ್ಪಕವಾದ ರಕ್ಷಣೆ, ಆರ್ಥಿಕ ಬೆಂಬಲವನ್ನು ನೀಡದೇ ಅವರನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಅನಿವಾರ್ಯವಾಗಿ ಮೈಮಾರಿಕೊಳ್ಳುವ ದಂಧೆಗೆ ಬಿದ್ದಿರುವ ದೇಶದ ಲಕ್ಷಾಂತರ ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಲೈಂಗಿಕ ದಮನಿತರು ಎಂದೇ ಸಂಬೋಧಿಸಬೇಕಾಗಿದೆ. ಇವರ ಸಂಕಷ್ಟಗಳನ್ನು ಕರ್ನಾಟಕ ಸರಕಾರವೇ ನೇಮಿಸಿದ್�