ಜನಗಣತಿಯಲ್ಲಿ ಹಿಂದೂ ಬಿಟ್ಟು, ಲಿಂಗಾಯತ ಎಂದು ಬರೆಯಿರಿ: ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನ

Update: 2020-03-08 13:41 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.6: ಯಾವುದೇ ರೀತಿಯ ಜಾತಿಗಣತಿ ಸಮೀಕ್ಷೆ ಪ್ರಕ್ರಿಯೆ ನಡೆಯಲಿ, ಲಿಂಗಾಯತ ಸಮುದಾಯದ ಸದಸ್ಯರು, ಧರ್ಮ ಹೆಸರಿನ ಕಾಲಂನಲ್ಲಿ ‘ಹಿಂದೂ ಬಿಟ್ಟು, ಲಿಂಗಾಯತ ಧರ್ಮ’ ಎಂದು ಕಡ್ಡಾಯವಾಗಿ ಬರೆಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನ ಶುರು ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

"ಶರಣು, ಶರಣಾರ್ಥಿ, ಬಸವಣ್ಣ ಅವರು 900 ವರ್ಷಗಳ ಹಿಂದೆ ಸ್ಥಾಪಿಸಿದ ಲಿಂಗಾಯತ ಧರ್ಮವು ಕಾಲದ ತುಳಿತಕ್ಕೆ ಸಿಕ್ಕು ತನ್ನ ಆಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿದೆ. ಈ ದುಃಸ್ಥಿತಿಗೆ ಲಿಂಗಾಯತರ ಅಜ್ಞಾನವೇ ಕಾರಣ. ಲಿಂಗಾಯತ ಧರ್ಮವನ್ನು ಉಳಿಸಿ, ಬೆಳೆಸುವ ಅವಕಾಶವೊಂದು ಈಗ ನಮ್ಮ ಮುಂದಿದೆ. ಹಾಗಾಗಿ, ಇದೇ ವಾರ್ಷಿಕ ಸಾಲಿನಲ್ಲಿ ಎಪ್ರಿಲ್‌ನಲ್ಲಿ ಆರಂಭವಾಗುವ ಜನಗಣತಿ ಪ್ರಕ್ರಿಯೆಯಲ್ಲಿ ಲಿಂಗಾಯತ ಎಂದು ಬರೆಯಬೇಕು" ಎಂದು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಪ್ ಗಳಲ್ಲಿ ಸಂದೇಶಗಳು ಹರಿದಾಡುತ್ತಿವೆ.

ನಾಲ್ಕು ಪುಟಗಳ ಪ್ರಕಟನೆಯನ್ನು ಲಿಂಗಾಯತ ಸಮುದಾಯದ ಜನರಿಗೆ ತಲುಪಿಸಲಾಗುತ್ತಿದ್ದು, ಕೇಂದ್ರ ಸರಕಾರದಿಂದ ಲಿಂಗಾಯತವೂ ಒಂದು ಪ್ರತ್ಯೇಕ ಸ್ವತಂತ್ರ ಧರ್ಮವೆಂದು ಮಾನ್ಯತೆ ಪಡೆಯುವುದಕ್ಕಾಗಿ, ಈ ಹೋರಾಟ ನಡೆಯುತ್ತಿದೆ. 'ಲಿಂಗಾಯತ ಹಿಂದೂ ಧರ್ಮದ ಭಾಗವೂ ಅಲ್ಲ. ಶಾಖೆಯೂ ಅಲ್ಲ. ಲಿಂಗಾಯತವು ನಮ್ಮ ಹಕ್ಕು, ಅದು ನಮ್ಮ ಗುರುತು, ನಮ್ಮ ಆಸ್ತಿತ್ವ, ಆಸ್ಮಿತೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ಬ್ರಿಟಿಷರು 1871ರಲ್ಲಿ ನಡೆಸಿದ ಪ್ರಥಮ ಜನಗಣತಿಯಲ್ಲಿ ಲಿಂಗಾಯತರನ್ನು ಪ್ರತ್ಯೇಕ ಸ್ವತಂತ್ರ ಧರ್ಮದವರೆಂದು ಗುರುತಿಸಿದ್ದರು. ಆದರೆ, 1881ರ ಎರಡನೆಯ ಜನಗಣತಿಯಲ್ಲಿ ಅಂದಿನ ಮೈಸೂರಿನ ದಿವಾನರು ಲಿಂಗಾಯತರನ್ನು ಶೂದ್ರ ಜಾತಿಗಳಲ್ಲಿ ಸೇರಿಸಿ ಬಿಟ್ಟರು. ದೀರ್ಘ ಹೋರಾಟದ ನಂತರ ಮೈಸೂರಿನ ಮಹಾರಾಜರು 1891ರ ಮೂರನೇಯ ಜನಗಣತಿಯಲ್ಲಿ ಲಿಂಗಾಯತರನ್ನು ಮತ್ತೊಮ್ಮೆ ಪ್ರತ್ಯೇಕ ಸ್ವತಂತ್ರ ಧರ್ಮವೆಂದು ಪರಿಗಣಿಸಿದರು.

ಆದರೆ, 1901ರ ನಾಲ್ಕನೆಯ ಜನಗಣತಿಯಲ್ಲಿ ಬಸವ ತತ್ವಗಳ ವಿರೋಧಿಗಳಿಂದ ಲಿಂಗಾಯತರನ್ನು ವೀರಶೈವ ಬ್ರಾಹ್ಮಣರೆಂದು ಪರಿಗಣಿಸಿದರು. ಮುಂದೆ ಅದೇ ಲಿಂಗೀ ಬ್ರಾಹ್ಮಣ ಎಂದು ಪ್ರಸಿದ್ಧವಾಯಿತು. 1911ರ ಐದನೇಯ ಜನಗತಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಲಿಂಗಾಯತರಲ್ಲೂ ವರ್ಣಾಶ್ರಮ ಪದ್ಧತಿಯೆಂದು ಸಾಧಿಸಿ, ಆ ರೀತಿ ಆದೇಶ ಹೊರಡಿಸಲಾಯಿತು. ಅದೇ ಪದ್ಧತಿ ಮುಂದುವರೆದು ಎಲ್ಲ ಲಿಂಗಾಯತರು ತಮ್ಮನ್ನು ‘ಹಿಂದೂ’ಗಳೆಂದು ಬರೆಸುತ್ತ ಬಂದಿದ್ದು, ಇದು ಐತಿಹಾಸಿಕ ದುರಂತವಾಗಿದೆ. ಇಂತಹ ದುರಂತವನ್ನು ನೀವು ಮಾತ್ರ ಮಾಡದೆ, ಲಿಂಗಾಯತ ಧರ್ಮವೆಂದು ನಮೂದಿಸಿ' ಎಂದು ಪ್ರಚಾರ ಮಾಡಲಾಗುತ್ತಿರುವುದು ವಿವಾದ ಹುಟ್ಟು ಹಾಕಿದೆ.

ಇನ್ನು, 2020ರ ಇದೇ ಎಪ್ರಿಲ್ ತಿಂಗಳಲ್ಲಿ ಮನೆಗಣತಿ ಮತ್ತು ಎನ್‌ಪಿಆರ್ ಸಲುವಾಗಿ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಮನೆ ಬಾಗಿಲಿಗೆ ಬರುತ್ತಾರೆ. ಆಗ ಅವರು ಧರ್ಮ ಮತ್ತು ಜಾತಿಯ ಬಗ್ಗೆ ಯಾವುದೇ ಪ್ರಶ್ನೆ ಕೇಳುವುದಿಲ್ಲ. ಆದರೆ, 2021ನೇ ಸಾಲಿನಲ್ಲಿ ಜನಗಣತಿ ನಡೆಯಲಿದ್ದು, ಆಗ ಕಡ್ಡಾಯವಾಗಿ ಲಿಂಗಾಯತವೆಂದೇ ಬರೆಸಬೇಕೆಂದು ಪ್ರಕಟನೆಗಳಲ್ಲಿ ಕೋರಿ ಹಂಚಿಕೆ ಮಾಡಲಾಗುತ್ತಿದೆ.

ಹಿಂದೂ ಬಿಟ್ಟು, ‘ಲಿಂಗಾಯತ’

ಲಿಂಗಾಯತ ಪ್ರತ್ಯೇಕ ಸ್ವತಂತ್ರ ಧರ್ಮವಾಗಿದೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ಮಾತ್ರವಲ್ಲದೆ, ಯಾವುದೇ ರೀತಿಯ ಜಾತಿ ಆಧಾರಿತ ಸಮೀಕ್ಷೆಗಳು ನಡೆದರೂ, ಲಿಂಗಾಯತ ಸಮುದಾಯದ ಸದಸ್ಯರು, ಧರ್ಮದ ಹೆಸರನ್ನು ಲಿಂಗಾಯತ ಎಂದೇ ಉಲ್ಲೇಖಿಸಬೇಕು. ಈ ಕುರಿತು ಆಂದೋಲನವನ್ನು ಆರಂಭಿಸಲಾಗಿದೆ.

-ಎಸ್.ಎಂ.ಜಾಮದರ್, ನಿವೃತ್ತ ಐಎಎಸ್ ಅಧಿಕಾರಿ, ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಗಾರ

Writer - -ಸಮೀರ್ ದಳಸನೂರು

contributor

Editor - -ಸಮೀರ್ ದಳಸನೂರು

contributor

Similar News