ವಾಟ್ಸ್ಯಾಪ್‌ನಲ್ಲಿ ಬರಲಿದೆ ಐದು ವಿಶೇಷ ಸೌಲಭ್ಯಗಳು
ವಾಟ್ಸ್ಯಾಪ್ ಕಳೆದ ವಾರ ಬಹುನಿರೀಕ್ಷಿತ ಡಾರ್ಕ್‌ಮೋಡ್ ಸೌಲಭ್ಯಕ್ಕೆ ಚಾಲನೆ ನೀಡಿತ್ತು. ಇದರ ಅನ್ವಯ ಬಳಕೆದಾರರು ರಾತ್ರಿ ವೇಳೆಯಲ್ಲೂ ವಾಟ್ಸಾಪ್ ಸಂದೇಶಗಳನ್ನು ಸುಲಭವಾಗಿ ಓದಬಹುದಾಗಿದೆ. ಇದೀಗ ಹೊಸದಾಗಿ 5 ವಿಶೇಷ ಸೌಲಭ್ಯಗಳನ್ನು ವಾಟ್ಸ್ಯಾಪ್ ಪರಿಚಯಿಸುತ್ತಿದೆ. ಈ ಎಲ್ಲ ಸೌಲಭ್ಯಗಳು ಈ ವರ್ಷದಲ್ಲೇ ಜಾರಿಯಾಗಲಿವೆ.
ಶೀಘ್ರವೇ ಹೊಸದಾಗಿ ಪರಿಚಯಿಸಲಿರುವ ಮಲ್ಟಿಪಲ್ ಡಿವೈಸ್ ಸಪೋರ್ಟ್ ವ್ಯವಸ್ಥೆಯಡಿ ಒಂದೇ ವಾಟ್ಸ್ಯಾಪ್ ಖಾತೆಯನ್ನು ಬೇರೆ ಬೇರೆ ಸಾಧನಗಳಲ್ಲಿ ಏಕಕಾಲಕ್ಕೆ ಬಳಸಲು ಅವಕಾಶವಾಗಲಿದೆ. ವಾಟ್ಸ್ಯಾಪ್ ಆ್ಯಂಡ್ರಾಯ್ಡ್ ನಲ್ಲಿ ಈಗಾಗಲೇ ಫಿಂಗರ್‌ಪ್ರಿಂಟ್ ಲಾಕ್ ಸಪೋರ್ಟ್ ವ್ಯವಸ್ಥೆ ಇದ್ದು, ಇದೇ ಮಾದರಿಯಲ್ಲಿ ಫೇಸ್ ಅನ್‌ಲಾಕ್ ಎಂಬ ಹೊಸ ಸೌಲಭ್ಯ ಪರಿಚಯಿಸಲು ಕೂಡಾ ಮುಂದಾಗಿದೆ.
ವಾಟ್ಸ್ಯಾಪ್ ಈಗಾಗಲೇ ಲಾಸ್ಟ್ ಸೀನ್‌ಗೆ ಮೂರು ಆಯ್ಕೆಗಳನ್ನು ನೀಡುತ್ತಿದೆ. ಅವುಗಳೆಂದರೆ ಕಾಂಟ್ಯಾಕ್ಟ್ಸ್, ಎವೆರಿವನ್ ಅಥವಾ ಓನ್ಲಿ ಮಿ. ಇದೀಗ ಹೊಸದಾಗಿ ಲಾಸ್ಟ್ ಸೀನ್ ಫಾರ್ ಸೆಲೆಕ್ಟ್ ಫ್ರೆಂಡ್ಸ್ ಎಂಬ ಹೊಸ ಫೀಚರ್ ಜಾರಿಗೆ ತರಲು ಉದ್ದೇಶಿಸಿದೆ. ಇದರ ಅನ್ವಯ ಕೊನೆಯ ಬಾರಿ ವಾಟ್ಸ್ಯಾಪ್ ನೀಡಿದ ಮಾಹಿತಿ ಆಯ್ದ ಸ್ನೇಹಿತರಿಗಷ್ಟೇ ಲಭ್ಯವಾಗಲಿದೆ.
ಅಂತೆಯೇ ಗ್ರಾಹಕರು ನಿಗದಿಪಡಿಸಿದ ಸಮಯಕ್ಕೆ ಅನುಸಾರವಾಗಿ ವಾಟ್ಸ್ಯಾಪ್ ಸಂದೇಶಗಳು ಸ್ವಯಂಚಾಲಿತವಾಗಿ ಡಿಲೀಟ್ ಆಗುವ ಡಿಸೆಪಿಯರಿಂಗ್ ಮೆಸೇಜ್ ಎಂಬ ಸೌಕರ್ಯದ ಬಗ್ಗೆಯೂ ವಾಟ್ಸ್ಯಾಪ್ ಯೋಚಿಸುತ್ತಿದೆ. ಇದರ ಜತೆಗೆ ಸೆಕ್ಯೂರ್ ಚಾಟ್ ಬ್ಯಾಕಪ್ಸ್ ಎಂಬ ಹೊಸ ಭದ್ರತಾ ಸೌಲಭ್ಯದ ಬಗ್ಗೆಯೂ ಚಿಂತನೆ ನಡೆದಿದೆ. ಇದರ ಅನ್ವಯ ಬಳಕೆದಾರರು ತಮ್ಮ ಚಾಟ್ ಇತಿಹಾಸವನ್ನು ಐ ಕ್ಲೌಡ್ ಮತ್ತು ಗೂಗಲ್ ಡ್ರೈವ್‌ನಲ್ಲಿ ದಾಸ್ತಾನು ಮಾಡಿಡಲು ಅವಕಾಶವಿದೆ.