ವಸುಧೇಂದ್ರರ ‘ತೇಜೋ....’

Update: 2020-03-15 04:12 GMT

ಲೇಖಕರ ಮುನ್ನುಡಿ ಇಲ್ಲದೆ, ಶುರುವಿಗೇ ಹಲವಾರು ಬಗೆಯ ‘ಮೆಚ್ಚುಗೆ’ಗಳನ್ನು ಮುಂದಿಟ್ಟುಕೊಂಡು ಬಂದಿರುವ ‘ತೇಜೋ ತುಂಗಭದ್ರ’ ಕನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳು ಅಪರೂಪವಾಗುತ್ತಿರುವ ಈ ದಿನಗಳಲ್ಲಿ ಒಂದು ಕುತೂಹಲಕಾರಿಯಾದ ಬೆಳಸು. ಸ್ವಾಗತಾರ್ಹವಾದ ಕೃತಿ. ಐತಿಹಾಸಿಕ ಕಾದಂಬರಿ ಎಂದರೆ ಅರಮನೆಯ ವೈಭವ, ಮಹಾರಾಜರ ದರ್ಬಾರು, ಅಂತಃಪುರಗಳ ಸುಖಭೋಗಗಳು, ಅಮಾತ್ಯರ ಚಾಣಕ್ಯತನ, ಪಿತೂರಿಗಾರರ ಕುತಂತ್ರಗಳ ಸರಮಾಲೆ ಎಂಬ ಪರಿಕಲ್ಪನೆಗೆ ಪಕ್ಕಾಗಿರುವ ಓದುಗರಿಗೆ ವಿಭಿನ್ನ ದೃಷ್ಟಿಕೋನದಿಂದ ಇತಿಹಾಸದ ದರ್ಶನ ಮಾಡಿುವ ಕ್ರಮದಿಂದಾಗಿ ವಿಶಿಷ್ಟವಾದುದು.

ಇಪ್ಪತ್ತೊಂದನೆಯ ಶತಮಾನದ ಶುರುವಿನ ಎರಡು ದಶಕಗಳ ಕನ್ನಡ ಸಾಹಿತ್ಯದ ಒಂದು ಗಮನಾರ್ಹ ಬೆಳವಣಿಗೆಯೆಂದರೆ, ನವ್ಯ ಬಂಡಾಯಗಳ ಉಬ್ಬರ-ಅಬ್ಬರಗಳು ತಗ್ಗಿ ಕಾವ್ಯ, ಕಥಾಸಾಹಿತ್ಯಗಳಲ್ಲಿ ಸಾಚಾತನ ಮತ್ತು ತಾಜಾತನಗಳಿಂದ ಕೂಡಿದ ಹೊಸ ದನಿಗಳು ಕೇಳಿಬರಲಾರಂಭಿಸಿದ್ದು. ದಲಿತ ಬಂಡಾಯಗಳ ಶೋಷಣೆ, ನೋವು, ಆಕ್ರಂದನಗಳಿಲ್ಲದ, ನವ್ಯದ ಅನಾಥಪ್ರಜ್ಞೆ ಅಥವಾ ಆತ್ಮರತಿಗಳಿಲ್ಲದ ಹೊಸದೊಂದು ವರ್ಗದ(ಕಾರ್ಪೊರೇಟ್ ವಲಯ?) ದನಿಯಾಗಿ ಮೂಡಿ ಬಂದ ಈ ಹೊಸ ಇಂಚರದಲ್ಲಿ ಗಮನಿಸಬೇಕಾದ ದನಿ ಕಥೆಗಾರ ವಸುಧೇಂದ್ರ. ಕನ್ನಡ ಕಥಾ ಸಾಹಿತ್ಯದಲ್ಲಿ ಹೀಗೆ ಕಾಣಿಸಿಕೊಂಡ ಹೊಸದಿಗಂತದಲ್ಲಿ ಉಲ್ಕೆಯಂತೆ ಪ್ರತ್ಯಕ್ಷರಾದ ವಸುಧೇಂದ್ರ ಇವತ್ತು ವೃತ್ತಪತ್ರಿಕೆಗಳ ಶೀರ್ಷಿಕೆಗಳಲ್ಲಿ ಮಿಂಚುತ್ತಿದ್ದಾರೆ. ಅವರ ಇತ್ತೀಚಿನ ಕೃತಿ ‘ತೇಜೋ-ತುಂಗಭದ್ರಾ’ ಕಾದಂಬರಿ ಮೊದಲ ಮುದ್ರಣದ ಮೂರು ನಾಲ್ಕು ತಿಂಗಳುಗಳಲ್ಲೇ ನಾಲ್ಕನೆಯ ಮುದ್ರಣದ ‘ಭಾಗ್ಯ’ವನ್ನು ಕಂಡಿದೆ. ಅವರು ಈ ವರ್ಷದ ಕರ್ನಾಟಕ ಸಾಹಿತ್ಯ ಅಕಾಡಮಿಯ ‘ಸಾಹಿತ್ಯ ಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡದಲ್ಲಿ ಸಾಹಿತ್ಯ ಕೃತಿಗಳು ಸಾವಿರದ ಅಂಚನ್ನೂ ದಾಟದೆ, ಪ್ರಥಮ ಮುದ್ರಣದಲ್ಲೇ ಗತಕಾಲಕ್ಕೆ ಸೇರುತ್ತಿರುವ ದಿನಗಳಲ್ಲಿ ಕಾದಂಬರಿಯೊಂದು ಅತ್ಯಲ್ಪಅವಧಿಯಲ್ಲಿ ನಾಲ್ಕು ಮುದ್ರಣಗಳನ್ನು ಕಂಡಿರುವುದು ಲಕ್ಷಿಸಬೇಕಾದ ಸಂಗತಿಯೇ.

  ಬಳ್ಳಾರಿ ಜಿಲ್ಲೆಯ ನಿಧಿನಿಕ್ಷೇಪಗಳ ಆಗರವಾದ ಸೊಂಡೂರು ವಸುಧೇಂದ್ರರ ಹುಟ್ಟೂರು(1969). ಸೊಂಡೂರಿನ ಈ ನಿಕ್ಷೇಪಕ್ಕೆ ಸಾಣೆ ಹಿಡಿದು ಅದರ ಪ್ರಕಾಶವನ್ನು ಹೊರಜಗತ್ತಿಗೆ ತೋರಿದ್ದು ಸಾಹಿತ್ಯವಾದರೂ ಅದಕ್ಕೂ ಮುಂಚೆ ಅವರು ಮಾಹಿತಿ ತಂತ್ರಜ್ಞಾನದ ದಿನಮಾನದಲ್ಲಿ ಒಬ್ಬ ‘ಟೆಕ್ಕಿ’ಯಾಗಿ ಸಾಫ್ಟ್‌ವೇರ್ ತಂತ್ರಜ್ಞಾನದ ಗೋಳದ ಮೇಲೆ ಕುಳಿತು ಒಂದು ಪ್ರದಕ್ಷಿಣೆ ಹಾಕಿ ಆ ಲೋಕದ ಅನುಭವದ ಲಗ್ಗೇಜಿನೊಂದಿಗೆ ಸಾಹಿತ್ಯಲೋಕಕ್ಕೆ ಇಳಿದು ಬಂದವರು. ಸುರತ್ಕಲ್ ಇಂಜಿನಿಯರಿಂಗ್ ಕಾಲೇಜ್ ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಸುಮಾರು ಇಪ್ಪತ್ತು ವರ್ಷಗಳ ಕಾಲ ಸಾಫ್ಟ್ ವೇರ್ ಪ್ರಪಂಚದ ‘ಸುಖಭೋಗ’ ಅನುಭವಿಸಿ, ಸಾಕೆನಿಸಿಯೋ ಏನೋ ಅದಕ್ಕೆ ವಿದಾಯ ಹೇಳಿ ತಮ್ಮ ಪ್ರತಿಭೆ, ಸಂವೇದನೆಗಳನ್ನು ಸಾಹಿತ್ಯದ ಸೃಜನಶೀಲತೆಯ ಒರೆಗೆಹಚ್ಚಿದವರು. ಆಧುನಿಕ ಜಗತ್ತಿನ ಒಂದು ‘ಸಿರಿಭೂವಲಯ’ದಿಂದ ಸಾಹಿತ್ಯ ಕಲೆಗಳ ಗರೀಬಿ ವಲಯಕ್ಕೆ ವಲಸೆ ಬಂದ ವಸುಧೇಂದ್ರ ಸೃಜನಶೀಲ ಲೇಖಕರಾಗಿ, ಉದ್ಯಮಶೀಲ ಪ್ರಕಾಶಕರಾಗಿ ಬಲುಬೇಗ ಕನ್ನಡಿಗರ ಗಮನ ಸೆಳೆದರು. ಏಳು ಕಥಾ ಸಂಕಲನಗಳು,ಏಳು ಲಲಿತ ಪ್ರಬಂಧ ಸಂಕಲನಗಳು ಮತ್ತು ಒಂದು ಕಾದಂಬರಿ ವಸುಧೇಂದ್ರರ ಇಲ್ಲಿಯವರೆಗಿನ ಖಾನೇಶುಮಾರಿ. ಇನ್ನೊಂದು ಅವರು ಗಳಿಸಿರುವ ಅಭಿಮಾನಿ ಓದುಗರ ಬಳಗ. ವಸುಧೇಂದ್ರರ ಎಲ್ಲ ಕೃತಿಗಳು ಮೂರಕ್ಕಿಂತ ಹೆಚ್ಚಿನ ಮುದ್ರಣಗಳನ್ನು ಕಂಡಿವೆ. ಮೊದಲ ಕಥಾ ಸಂಕಲನ ‘ಮನೀಷೆ’ ಆರು ಮರು ಮುದ್ರಣಗಳನ್ನು ಕಂಡಿದ್ದರೆ, ‘ಹಂಪಿ ಎಕ್ಸ್‌ಪ್ರೆಸ್’ ಎಂಟು ಮರು ಮುದ್ರಣಗಳನ್ನು ಕಂಡಿವೆೆ. ಕನ್ನಡದ ಶ್ರೇಷ್ಠ ಕೃತಿಗಳಿಗೂ ದ್ವಿತೀಯ ಮುದ್ರಣದ ‘ಅದೃಷ್ಟವಿಲ್ಲದ’ ದಿನಗಳಲ್ಲಿ ವಸುಧೇಂದ್ರರ ಕೃತಿಗಳ ಮರುಮುದ್ರಣ ಸಾಧನೆಯ ಹಿಂದಿನ ಮರ್ಮವೇನಿರಬಹುದು ಎಂದು ಕುತೂಹಲ ಪಡುವಂತಾಗುತ್ತದೆ. ಅದೇನೇ ಇರಲಿ ಇದೊಂದು ವಿಕ್ರಮವೇ. ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವ ಉದ್ದೇಶವುಳ್ಳ ‘ಛಂದ’ ಪುಸ್ತಕದ ಪ್ರಕಾಶಕರಾಗಿ ಭರವಸೆಯ ಹಲವಾರು ಪ್ರತಿಭೆಗಳನ್ನು ಪರಿಚಯಿಸುತ್ತಿರುವುದು ವಸುಧೇಂದ್ರರ ಮತ್ತೊಂದು ವಿಕ್ರಮ.

ಈ ವಸುಧೇಂದ್ರ ಪ್ರಸ್ತುತ ಕಾದಂಬರಿಗೆ ಪೂರ್ವದಲ್ಲಿ, ಕೆಲವು ವರ್ಷಗಳ ಹಿಂದೆ (2013) ಸಲಿಂಗರತಿಯ ‘ಮೋಹನಸ್ವಾಮಿ’ಯನ್ನು ಬರೆದು, ಪ್ರಕಟಿಸಿ ಹಾಗೂ ಲೈಂಗಿಕತೆಯಲ್ಲಿ ತಮ್ಮ ಆಯ್ಕೆಯನ್ನು ಬಹಿರಂಗಗೊಳಿಸಿ ಮಡಿವಂತ ಸಮಾಜಕ್ಕೆ ಒಂದು ಸಣ್ಣ ಶಾಕ್ ಕೊಟ್ಟವರು. ಸಲಿಂಗರತಿ ಸಹಜ ಪ್ರಕೃತಿಯಲ್ಲ ಎಂದು ಮೂಗು ಮುರಿಯುವವರು ಅದರ ಪರ ಸಹಾನುಭೂತಿಯುಳ್ಳವರು ಇಬ್ಬರಲ್ಲೂ ಚರ್ಚೆಗೆ ಗ್ರಾಸವಾದವರು. ‘ಮೋಹನಸ್ವಾಮಿ’ ಇಲ್ಲಿಯವರೆಗೆ ಐದು ಮರುಮುದ್ರಣಗಳನ್ನು ಕಂಡಿರುವುದು ಜನಪ್ರಿಯತೆಯಷ್ಟೇ ಅಲ್ಲ, ಅದು ಕನ್ನಡಿಗರಲ್ಲಿ ಮಡಿವಂತಿಕೆಯ ಚಳಿ ಬಿಡಿಸಿರುವುದಕ್ಕೂ ನಿದರ್ಶನವಾಗಬಲ್ಲದು.

***

  ಲೇಖಕರ ಮುನ್ನುಡಿ ಇಲ್ಲದೆ, ಶುರುವಿಗೇ ಹಲವಾರು ಬಗೆಯ ‘ಮೆಚ್ಚುಗೆ’ಗಳನ್ನು ಮುಂದಿಟ್ಟುಕೊಂಡು ಬಂದಿರುವ ‘ತೇಜೋ ತುಂಗಭದ್ರಾ’ ಕನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳು ಅಪರೂಪವಾಗುತ್ತಿರುವ ಈ ದಿನಗಳಲ್ಲಿ ಒಂದು ಕುತೂಹಲಕಾರಿಯಾದ ಬೆಳಸು. ಸ್ವಾಗತಾರ್ಹವಾದ ಕೃತಿ. ಐತಿಹಾಸಿಕ ಕಾದಂಬರಿ ಎಂದರೆ ಅರಮನೆಯ ವೈಭವ, ಮಹಾರಾಜರ ದರ್ಬಾರು, ಅಂತಃಪುರಗಳ ಸುಖಭೋಗಗಳು, ಅಮಾತ್ಯರ ಚಾಣಕ್ಯತನ, ಪಿತೂರಿಗಾರರ ಕುತಂತ್ರಗಳ ಸರಮಾಲೆ ಎಂಬ ಪರಿಕಲ್ಪನೆಗೆ ಪಕ್ಕಾಗಿರುವ ಓದುಗರಿಗೆ ವಿಭಿನ್ನ ದೃಷ್ಟಿಕೋನದಿಂದ ಇತಿಹಾಸದ ದರ್ಶನ ಮಾಡಿಸುವ ಕ್ರಮದಿಂದಾಗಿ ವಿಶಿಷ್ಟವಾದುದು. ಈ ಕಾದಂಬರಿಯ ಹರಹು, ಹಾಸುಬೀಸುಗಳು ದೊಡ್ಡದು, ವಿಸ್ತಾರವಾದುದು. 1492-1518 ಕಾಲಾವಧಿಯದು. ವ್ಯಾಪ್ತಿ ಪೂರ್ವ-ಪಶ್ಚಿಮಗಳ ಎರಡು ತುದಿಗಳನ್ನು ಒಳಗೊಂಡು ವಿಸ್ತಾರವೂ ವಿಶಾಲವೂ ಆದುದು. ಕಥನದ ವ್ಯಾಪ್ತಿ ಭೌಗೋಳಿಕವಾಗಿ ಸಾಗರೋತ್ತರವಾಗಿದ್ದು ಇಲ್ಲಿ ಜನರು ಬದುಕನ್ನು ಅರಸುತ್ತಾ ದೇಶವಿದೇಶಗಳ ಎಡತಾಕುತ್ತಾರೆ, ರಾಜಾಜ್ಞೆಗೆ ವಿಧೇಯರಾಗಿ ಬದುಕು ಸವೆಸುತ್ತಾರೆ, ಶಿಕ್ಷೆ ಅನುಭವಿಸುತ್ತಾರೆ. ತೇಜೋ ನದಿಯ ಲಿಸ್ಬನ್‌ನಲ್ಲಿ ಶುರುವಾಗುವ ಕಥನ, ಗೋವೆ, ಹಂಪಿಗಳತ್ತ ಸಾಗುತ್ತದೆ. ಆರು ಅಧ್ಯಾಯಗಳಲ್ಲಿ ಇಲ್ಲೆಲ್ಲ ಹಿಂದೆ-ಮುಂದೆ ಚಲಿಸುತ್ತದೆ. ಈ ವ್ಯಾಪ್ತಿಗಳಲ್ಲಿ ರಾಜ್ಯ ವ್ಯವಸ್ಥೆಯುಂಟು, ಧಾರ್ಮಿಕ ವ್ಯವಸ್ಥೆಯುಂಟು. ಈ ವ್ಯವಸ್ಥೆಗಳೇ ಪ್ರಧಾನ ಪಾತ್ರವಾದರೂ ಅವು ನೇಪಥ್ಯದಲ್ಲೇ ಉಳಿಯುತ್ತವೆ. ಆಲ್ಬುಕರ್ಕ್, ಆದಿಲ್ ಷಾಹಿ, ಕೃಷ್ಣದೇವರಾಯ ಮೊದಲಾದ ರಾಜಮಹಾರಾಜರು, ಚರ್ಚ್ ಮತ್ತು ಮಠಗಳು ನೇಪಥ್ಯದಲ್ಲೇ ಉಳಿದರೂ ಅವರ ನಿರ್ಧಾರಗಳೇ ಜನಜೀವನದಲ್ಲಿ ನಿರ್ಣಾಯಕ. ಹೀಗೆ ಬಾಧಿಸಲ್ಪಟ್ಟ ಜನಜಿವನವೇ ಕಾದಂಬರಿಯ ಕೇಂದ್ರ ಬಿಂದು. ಈ ಬಿಂದುವಿನಲ್ಲಿ ಪ್ರೀತಿಯ ಗುರುತ್ವಾಕರ್ಷಣೆಯೂ ಉಂಟು. ರಂಗಮಧ್ಯದಲ್ಲಿ ಜನರ ಬದುಕುಬವಣೆಗಳು, ಪ್ರೀತಿ, ಅಂತಃಕರಣಗಳು ಪ್ರಕಾಶಕ್ಕೆ ಬರಬರುತ್ತಲೇ ನೇಪಥ್ಯದಲ್ಲಿ ನಿಂತ ವ್ಯವಸ್ಥೆಯ ಕ್ರೌರ್ಯಗಳು ನಮ್ಮನ್ನು ಬೆಚ್ಚಿಬಿಳಿಸುವಂತೆ ತೆರೆದುಕೊಳ್ಳುತ್ತವೆ. ಲಿಸ್ಬನ್‌ನಲ್ಲಿ ಸಾವಿರಾರು ಮಂದಿ ಯೆಹೂದಿಗಳನ್ನು ಕ್ರಿಶ್ಚಿಯನ್ ಧರ್ಮ ಅಥವಾ ಸಾವು ಇವೆರಡರಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳಬೇಕಾದ ಧರ್ಮಸಂಕಟದಲ್ಲಿ ಸಿಲುಕಿಸುವುದು; ಗೋವೆಯಲ್ಲಿ ಹಿಂದೂಗಳು ಮತ್ತು ಕ್ರಿಶ್ಚಿಯನ್ನರನ್ನು ಇಸ್ಲಾಮಿಗೆ ಮತಾಂತರಗೊಳ್ಳಿ ಅಥವಾ ಸಾವಿಗೆ ಸಿದ್ಧರಾಗಿ ಎಂದು ಬಿಜಾಪುರ ಸುಲ್ತಾನ ಆದಿಲ್ ಷಾಹಿ ಇದೇ ರೀತಿ ಧರ್ಮಸಂಕಟದಲ್ಲಿ ಸಿಲುಕಿಸುವುದು, ಆಲ್ಬುಕರ್ಕ್ ಮುಸ್ಲಿಮರಾಗಿ ಮತಾಂತರಗೊಂಡ ತನ್ನ ಜನಗಳ ಕಿವಿಮೂಗುಗಳನ್ನು ಕೊಯ್ಯಿಸುವುದು, ಕೆರೆಗೆ ನೀರು ಬರಲಿ ಎಂದು ಜ್ಯೋತಿಷಿಗಳ ಮಾತಿನಂತೆ ಕೃಷ್ಣದೇವರಾಯ ಅರವತ್ತು ಮಂದಿ ಕೈದಿಗಳನ್ನು ಬಲಿಕೊಡುವುದು, ಹೀಗೆ ವ್ಯವಸ್ಥೆಯ ಕ್ರೌರ್ಯಗಳು, ಯುದ್ಧಕಾಮಿ ಅರಸರ ಕುದುರೆಗಳ ಖಯಾಲಿಗಳು ಹಾಡಹಗಲೇ ಘಟಿಸುತ್ತವೆ. ನಾಗರಿಕತೆಯ ತೊಟ್ಟಿಲು ಎನಿಸಿದ ಎರಡು ನದಿಗಳ ಸಮಕ್ಷಮದಲ್ಲೇ ಇಂತಹ ತಲ್ಲಣಗಳ ಬದುಕಿಗೆ ಮೂಕ ಸಾಕ್ಷಿಯಾಗುವ ‘ತೇಜೋ- ತುಂಗಭದ್ರೆ’ಯರಿಗೆ ಒಂದು ಗತಿ, ರಭಸ ಬರುವುದು ಗಂಡುಹೆಣ್ಣುಗಳ ಪ್ರೀತಿಯ ಸೆಳೆತದಿಂದಲೇ.

 ಗೇಬ್ರಿಯಲ್ ಮತ್ತು ಬೆಲ್ಲಾ, ಕೇಶವ-ಹಂಪಮ್ಮ ಇವರ ನಡುವಣ ಪ್ರೀತಿಯ ಹಂದರ ಕಾದಂಬರಿಯ ಗತಿದಿಕ್ಕುಗಳನ್ನು ನಿರ್ಧರಿಸುತ್ತದೆ ಯಷ್ಟೇ ಅಲ್ಲ, ಅದಕ್ಕೊಂದು ವೇಗೋತ್ಕರ್ಷವನ್ನು ತಂದುಕೊಡುತ್ತದೆ. ಹಣ ಸಂಪಾದನೆ ಮಾಡಿ ಯೆಹೂದಿ ಬೆಲ್ಲಾಳ ಕೈಹಿಡಿಯುವ ನಿರ್ಧಾರದಿಂದ ಗೇಬ್ರಿಯಲ್ ಭಾರತಕ್ಕೆ ಹೊರಟ ಆಲ್ಬುಕರ್ಕನ ಹಡಗು ಹತ್ತುತ್ತಾನೆ. ಭಾರತದಿಂದ ಸಂಪದವನ್ನು ದೋಚಿತರುವುದು ಆಲ್ಬುಕರ್ಕನ ನೌಕಾಯಾನದ ಉದ್ದೇಶ. ಇತ್ತ ತುಂಗಭದ್ರೆಯ ದಡದಲ್ಲಿ ಕೃಷ್ಣದೇವರಾಯನ ಯುದ್ಧೋನ್ಮಾದದ ಒತ್ತಡದಲ್ಲೇ ಬದುಕುತ್ತಿರುವ ಗಣಪಯ್ಯ ಗೌಡರ ಕುಟುಂಬದ ಹೆಣ್ಣುಮಗಳು ಹಂಪಮ್ಮನಿಗೆ ಕೇಶವ ಎಂಬ ಶಿಲ್ಪಿಮಾರುಹೋಗುತ್ತಾನೆ. ಅರಮನೆ ರಕ್ಷಣೆಯ ಹೊಣೆ ಹೊತ್ತ ಜಟ್ಟಿ ಮಾಪಳ ನಾಯಕನಿಗೂ ಹಂಪಮ್ಮ ಬೇಕು, ಪುತ್ರ ಸಂತಾನ ಪಡೆಯಲು. ಹಂಪಮ್ಮಳನ್ನು ಪಡೆಯು ವುದು ತುರುಕರ ಹಾವಳಿಯಿಂದ ಅವಳ ಮಾನರಕ್ಷಿಸಿದ ತನ್ನ ಹಕ್ಕು ಎಂದೇ ನಾಯಕ ಭಾವಿಸುತ್ತಾನೆ. ಅವಳನ್ನು ಪಡೆಯಲು ಕೇಶವ ಮತ್ತು ನಾಯಕರ ನಡುವೆ ಮಲ್ಲಯುದ್ಧ ನಡೆಯುತ್ತದೆ. ಕೃಷ್ಣದೇವರಾಯನ ಸಮ್ಮುಖದಲ್ಲೇ ನಡೆದ ಪಣದ ಮಲ್ಲಯುದ್ಧದಲ್ಲಿ ಕೇಶವ ಮಾಪಳ ನಾಯಕನ ಗೋಣುಮುರಿದು ಹಂಪಮ್ಮಳನ್ನು ಗೆಲ್ಲುತ್ತಾನೆ. ಹಂಪಮ್ಮಳೊಂದಿಗೆ ದಾಂಪತ್ಯ ನಡೆಸುತ್ತಲೇ ಕೇಶವ ಕುಲವೃತ್ತಿ ತೊರೆದು ಅರಮನೆಯ ಸೈನ್ಯಪಡೆ ಸೇರಿ, ಕೃಷ್ಣದೇವರಾಯನಿಗೆ ಪುತ್ರಸಂತಾನವಾದಾಗ ಆ ಸಂತಾನವನ್ನುಳಿಸಲು ಪ್ರಾಣಾರ್ಪಣೆಮಾಡುವ ಶರತ್ತಿಗೆ ಒಪ್ಪಿ ಲೆಂಕನಾಗುತ್ತಾನೆ. 1518ರಲ್ಲಿ ಕೃಷ್ಣದೇವರಾಯನಿಗೆ ಪುತ್ರಸಂತಾನವಾಗಿ ಕೇಶವನ ಪ್ರಾಣಾರ್ಪಣೆಯೊಂದಿಗೆ ಕಾದಂಬರಿ ದುರಂತದ ಪರಾಕಾಷ್ಠೆ ಮುಟ್ಟುತ್ತದೆ. ಅರಮನೆಯ ಉಂಬಳಿಯ ಆಸೆಯಿಂದ ಹಂಪಮ್ಮಳ ಕುಟುಂಬದವರು ಸತಿ ಹೋಗುವಂತೆ ಅವಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಹಣಸಂಪಾದಿಸಲು ಬಂದ ಗೇಬ್ರಿಯಲ್ಲನೂ ಆಲ್ಬುಕರ್ಕನ ಕ್ರೌರ್ಯ ತಾಳಲಾರದೆ ಬೆಲ್ಲಾಳನ್ನು ವರಿಸುವ ಕನಸು ತ್ಯಜಿಸಿ ಭಾರತದಲ್ಲೇ ಉಳಿದುಬಿಡುವ ನಿರ್ಧಾರಕ್ಕೆ ಬರುತ್ತಾನೆ.ಜನಸಾಮಾನ್ಯರ ಬದುಕನ್ನು ನುಂಗಿ ನೊಣೆಯುವ ಆ ದಿನಗಳ ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆಯ ಅಮಾನುಷತೆಗೆ ಸಂಕೇತವಾಗುವ ಈ ಎರಡು ಜೋಡಿಯ ಸೋತಪ್ರೀತಿಗಳು ಇದುವರೆಗೆ ಗೌಣವಾಗಿದ್ದ ಕೆಲವು ಪಾತ್ರಗಳನ್ನು ಮುನ್ನೆಲೆಗೆ ಬರಲು ಪ್ರೇರೇಪಿಸುತ್ತವೆ. ಕಲಾವಂತೆ ಗುಣಸುಂದರಿ, ಅರ್ಚಕ ಅಣ್ಣಂ ಭಟ್ಟರು, ಪುರಂದರ ದಾಸರು, ಅಡವಿ ಸ್ವಾಮಿ ಅಂತಹ ಪಾತ್ರಗಳು. ಸಹಗಮನಕ್ಕೆ ಸಿದ್ಧಳಾದ ಹಂಪಮ್ಮಳ ನಿರ್ಧಾರ ಸೃಷ್ಟಿಸುವ ಬಿಕ್ಕಟ್ಟು ಕಾದಂಬರಿಯ ಗತಿಯನ್ನು ಬದಲಾಯಿಸುತ್ತದೆ.ವಾಡಿಕೆಯಂತೆ ನಡೆದಿದ್ದರೆ ಹಂಪಮ್ಮಳ ಸಹಗಮನದಲ್ಲಿ ಕಾದಂಬರಿ ದುರಂತದಲ್ಲಿ ಅಂತ್ಯಗೊಂಡು ಯಥಾಸ್ಥಿತಿ ಮುಂದುವರಿಯಬೇಕಿತ್ತು. ಈ ಹಂತದಲ್ಲಿ ತ್ರಯಂಬಕೇಶ್ವರನಿಗೆ ಭೋಗ ಸೇವೆ ಸಲ್ಲಿಸುವ ನೃತ್ಯ ಕಲಾವಿದೆ ಗುಣಸುಂದರಿ ಸಹಗಮನದ ಬಗ್ಗೆ ಧರ್ಮ ಏನನ್ನುತ್ತದೆ ಎಂಬ ಪ್ರಶ್ನೆಯನ್ನು ಎತ್ತುತ್ತಾಳೆ. ಅಣ್ಣಂಭಟ್ಟರು ಮಾದ್ರಿ-ಕುಂತಿಯರ ಉದಾಹರಣೆಯಲ್ಲಿ ಧರ್ಮದ ಇಬ್ಬಂದಿತನ ಬಯಲುಮಾಡುತ್ತಾರೆ. ರೂಢಿಗೆ ಹೊಂದಿಕೊಂಡ ಜನ ತಮಗೆ ಇಷ್ಟವಾದುದನ್ನು ಧರ್ಮವೆಂದು ಸ್ವೀಕರಿಸುವ ಅನುಕೂಲಸಿಂಧು ನೀತಿಯನ್ನು ಹೇಳುತ್ತಾರೆ. ಅನುಕೂಲಸಿಂಧು ನೀತಿಯೆಂದರೆ ಇಲ್ಲಿ ಹಂಪಮ್ಮ ಸತಿಹೋಗುವುದರಿಂದಲೇ ಅವಳ ಕುಟುಂಬಕ್ಕೆ ಅನುಕೂಲವಿದೆ. ಆದರೆ ಗುಣಸುಂದರಿ ಶಂಕರಾಚಾರ್ಯರ ‘ಅಹಂಬ್ರಹ್ಮಾಸ್ಮಿ’ ವಾದ ಮುಂದಿಟ್ಟು ಪ್ರಾಣ ಮುಖ್ಯ ಎಂದಾಗ ಅಣ್ಣಂಭಟ್ಟರು ನಿರುತ್ತರರಾಗುತ್ತಾರೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಧರ್ಮ ವ್ಯವಸ್ಥೆಗೆ ಸಹಾಯಕವಾಗುವ ಅನುಕೂಲಸಿಂಧು ನೀತಿಯನ್ನು ಅನುಸರಿಸಬೇಕೆ ಅಥವಾ ಜೀವಪರವಾದ ಮನುಷ್ಯ ಧರ್ಮವನ್ನು ಪಾಲಿಸಬೇಕೇ ಎಂಬ ನೈತಿಕ ಪ್ರಶ್ನೆಯನ್ನು ಕಾದಂಬರಿ ಎತ್ತುತ್ತದೆ. ಭವರೋಗ ಚಿಕಿತ್ಸಕನಂತೆ ಕಾಣಿಸಿಕೊಳ್ಳುವ ಮುಮುಕ್ಷು ಅಡವಿಸ್ವಾಮಿಯೂ ತನ್ನ ಚಿಕಿತ್ಸಕ ಶಕ್ತಿಯನ್ನು ಕಳೆದುಕೊಂಡು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಈ ಬಿಕ್ಕಟ್ಟಿನ ಸನ್ನಿವೇಶದಲ್ಲಿ, ಶೌಚದ ನೆಪದಲ್ಲಿ ಹಂಪಮ್ಮ ಸಹಗಮನದ ನಿರ್ಧಾರ ಬದಲಾಯಿಸುವುದು, ಅದೇಕಾಲಕ್ಕೆ ಅವಳ ಬಸಿರಲ್ಲಿ ಕೇಶವನ ಕುಡಿ ಬೆಳೆಯುತ್ತಿರುವುದು ನಾಟಕೀಯವಾಗಿ ಸ್ಫೋಟಿಸಿ ಕಾದಂಬರಿ ಹೊಸ ದಿಕ್ಕಿನತ್ತ ಚಲಿಸಲಾರಂಭಿಸುತ್ತದೆ. ಕಾವ್ಯನ್ಯಾಯವೆಂಬಂತೆ ಈ ನಡೆ ಮನುಷ್ಯ ಧರ್ಮಕ್ಕೆ ಪೂರಕವಾಗಿಯೇ ಇದೆ. ಗುಣಸುಂದರಿಯಂತೆ ಈ ಘಟ್ಟದಲ್ಲಿ ಪುರಂದರ ದಾಸರ ಪ್ರವೇಶವಾಗುತ್ತದೆ. ಉತ್ತಮ ಪ್ರಭುತ್ವ ಸೇರಿ ಎಲ್ಲವೂ ಲೊಳಲೊಟ್ಟೆ ಎನ್ನುವ ದಾಸರು, ಪ್ರಾಣವೇ ಪರಮ ಶ್ರೇಷ್ಠ ಎನ್ನುವ ಗುಣ ಸುಂದರಿ, ಇವರಿಬ್ಬರಲ್ಲಿ ಯಾರು ಸರಿ? ಕಲೆ ದೇವರಿಗೆ ಭೋಗ ಸೇವೆಯಲ್ಲಿ ಆಧ್ಯಾತ್ಮಿಕ ಮಾರ್ಗದರ್ಶಿಯಾಗುವಂತೆಯೇ ಲೌಕಿಕದಲ್ಲಿ ಜೀವಪರವೂ ಆಗಬೇಕೆಂಬುದು ಗುಣಸುಂದರಿಯ ಇಂಗಿತ. ಹಂಪಮ್ಮಳನ್ನು ಸತಿಹೋಗುವುದರಿಂದ ಪಾರು ಮಾಡುವ ಅವಳ ಈ ಪ್ರಯತ್ನದಲ್ಲಿ, ಹಂಪಮ್ಮಳನ್ನು, ಅವಳ ಹೊಟ್ಟ್ಟೆಯಲ್ಲಿನ ಕೂಸನ್ನು ಉಳಿಸುವ, ವ್ಯವಸ್ಥೆಯ ಕ್ರೂರ ಮುಖವಾದ ಮೂಕಬಲಿಯ ಪುನರಾವರ್ತನೆಯನ್ನು ತಪ್ಪಿಸುವ ಜೀವಪರ ನಿಲುವು ಸ್ಪಷ್ಟವಾಗುತ್ತದೆ. ಲೊಳಲೊಟ್ಟೆ ಬದುಕಿನ ವ್ಯಂಗ್ಯ, ವಿಡಂಬನೆ ವಿಷಾದಗಳಷ್ಟೆ. ಅದೇ ಕೊನೆಯಲ್ಲ. ಅದು ಬದುಕನ್ನು ನಿರಾಕರಿಸುವುದಿಲ್ಲ. ‘‘ಇಷ್ಟು ದಿನ ತನಗೆ ಮಹತ್ವವೆನಿಸಿದ್ದೆಲ್ಲವೂ ಲೊಳಲೊಟ್ಟೆ’’ ಎನ್ನುವ ದಾಸರ ಮಾತು ಹಂಪಮ್ಮಳಿಗೆ ವಿಶೇಷವಾಗಿ ತೋರಿದರೂ ದಾಸರೇ ಹೇಳುವಂತೆ ವಿಷಾದದ ರಾಗವನ್ನು ಎಷ್ಟು ದಿನ ಹಾಡೋಕೆ ಸಾಧ್ಯ? ದಾಸರು ಬದುಕನ್ನು ಸ್ವೀಕರಿಸಿ, ಅನುಭವಿಸಿ ಪಕ್ವಗೊಂಡನಂತರದ ‘ಲೊಳಲೊಟೆ’್ಟ ಇದು. ಎಂದೇ ಬದುಕು ಆಖೈರಾಗಿ ‘ಲೊಳಲೊಟ್ಟೆ’ಯೆಂಬ ನೇತ್ಯಾತ್ಮಕ ಧೋರಣೆಯ ಕಾದಂಬರಿಯ ಅಂತರಂಗದ ಸಿದ್ದ್ಧಾಂತ ಎಂದು ಅರ್ಥೈಸುವುದು ಸರಿಯಾದ ನಿರ್ಧಾರವಾಗದು. ಹೀಗಾಗಿಯೇ ‘ತೇಜೋ-ತುಂಗಭದ್ರೆ’ಯರಿಗೆ ಆಧುನಿಕ ನಾಗರಿಕತೆಯ ಸಂವೇದನೆಯ ಉಪನದಿಗಳೂ ಹುಟ್ಟಿಕೊಳ್ಳುತ್ತವೆ.ಸಹಗಮನದಿಂದ ಪಾರಾಗುವ ಹಂಪಮ್ಮನಿಗೊಂದು ನ್ಯಾಯ ದೊರೆಯುತ್ತದೆ. ಹಾಗೆಯೇ ಅನ್ಯಾಯ ಅಧರ್ಮಗಳ ತೌರುದೇಶವನ್ನು ನಿರಾಕರಿಸುವುದರಲ್ಲಿ ಗೇಬ್ರಿಯಲ್, ಅಗ್ವೇದರೂ ತಮ್ಮದೇ ನ್ಯಾಯ ಕಂಡುಕೊಳ್ಳುತ್ತಾನೆ. ಗೇಬ್ರಿಯಲ್, ಕಣ್ಣು, ಮೂಗು, ಶಿಶ್ನ ಕೊಯ್ಸಿಕೊಂಡು ಅಹಮದ್ ಖಾನ್ ಆಗಿ, ಅಮ್ಮಕಣ್ಣನಾಗಿ ಪಡುವ ಪಾಡು ಶೋಚನೀಯವಾದುದು. ಹಂಪಮ್ಮ ಚಿತೆಯಿಂದ ಹೊರಬರುವಷ್ಟೇ ನಾಟಕೀಯವಾಗಿ, ಇನಿಯನನ್ನು ತನ್ನಿಂದ ದೂರಮಾಡಿದ ಭಾರತವನ್ನು ಶಪಿಸುವ ಬೆಲ್ಲಾ ಕ್ರಿಸ್ಟಿಯನ್ನು ವಿವಾಹವಾಗಿ ಅದೇ ಭಾರತಕ್ಕೆ ಬರುವುದು ಗೇಬ್ರಿಯಲ್‌ನನ್ನು ಭೇಟಿಯಾಗುವುದು ನಡೆಯುತ್ತದೆ. ಈ ಭೇಟಿ ಗೇಬ್ರಯಲ್‌ನನ್ನು ಅವನ ನಿರ್ಧಾರದಿಂದ ವಿಚಲಿತನಾಗಿಸುವುದಿಲ್ಲ. ದೈಹಿಕವಾಗಿ, ಮಾನಸಿಕವಾಗಿ ಅವನೀಗ ಬದಲಾಗಿದ್ದಾನೆ. ಅವನು ಹಂಪಮ್ಮಳ ಪ್ರೀತಿಯನ್ನು ನಿರಾಕರಿಸುತ್ತಾನೆ. ಈ ಸನ್ನಿವೇಶದಲ್ಲಿ ಅವನು ಹೇಳುವ, ‘‘ಕಿವಿಮೂಗು ಇಲ್ಲದ ವ್ಯಕ್ತಿ ನಿನಗೂ ಸ್ವಲ್ಪೇ ದಿನದಲ್ಲಿ ಬೇಸರ ಹುಟ್ಟಿಸಲಾರಂಭಿಸುತ್ತಾನೆ, ವಿಕಾರವೆನ್ನಿಸತೊಡಗುತ್ತಾನೆ’’ ಈ ಮಾತುಗಳು ಇಂದಿನ ಆಧುನಿಕ ಪ್ರಜ್ಞೆಗೆ ಮರ್ಮಘಾತುಕವಾದುವು. ‘‘ಮನುಷ್ಯನಾದವನಿಗೆ ಬೇಕಾದ್ದು ಹೃದಯವೊಂದೇ’’ ಎನ್ನುವ ಹಂಪಮ್ಮಳ ಮಾತುಗಳನ್ನು ಒಪ್ಪಲೂ ಅವನು ಸಿದ್ಧನಿಲ್ಲ. ದೇಶ, ಸಂಸ್ಕೃತಿ ಕುರಿತ ಅವನ ಪ್ರಶ್ನೆಗಳಿಗೂ ಅವಳಲ್ಲಿ ಸಮಾಧಾನವಿದೆ: ‘‘..ಸರಿಯಾಗಿ ಸೇರಿಸಿದರೆ ಹಲವು ಬಣ್ಣಗಳೂ ಸೊಗಸಾಗಿ ಹೊಂದಿಕೊಳ್ಳುತ್ತವೆ’’ ಎನ್ನುವ ಅವಳ ಮಾತು ಅವನಿಗೆ ಪ್ರಶ್ನೆಯಾಗಿಯೇ ಉಳಿದರೂ ಕಾದಂಬರಿ ಮುಕ್ತ ಅಂತ್ಯದಲ್ಲಿ ಕೊನೆಗೊಳ್ಳುತ್ತದೆ. ಇದೇ ವೇಳೆಗೆ ಅರಬಿ ಕಡಲಿನಲ್ಲಿ ಮುಳುಗಿ ತಂಪಾಗಿದ್ದ ಸೂರ್ಯ ಮರು ಮುಂಜಾನೆ ಮತ್ತೆ ಉದಯಿಸಿದಾಗ ಅದು ಎಂದಿನ ಬೆಳಗಾಗಿರುವುದೇ?. ಕಾದಂಬರಿಯಲ್ಲಿ ಸಂದರ್ಭೋಚಿತವಾಗಿ ಬರುವ ವ್ಯವಸ್ಥೆಯ ವಿವರಣೆಗಳಲ್ಲಿ(ಊರಿನ ಹೆಸರಿನ ಬದಲಾವಣೆ, ಮತಾಂತರ, ಪೋರ್ಚುಗೀಸರ ಧರ್ಮಾಂಧತೆ, ಇತ್ಯಾದಿಗಳು) ವರ್ತಮಾನದ ರಾಜಕೀಯದ ‘ಇನ್ನೊಂದನ್ನು’, ಮತ್ತೊಂದನ್ನು ಬೆರಳುಮಾಡಿತೋರುವ ಧ್ವನಿಗಳೂ ಇವೆ.

***

ಪ್ರಿಯವೂ ಅಪ್ರಿಯವೂ ಆಗಬಹುದಾದ ಸತ್ಯಗಳನ್ನು ಇತಿಹಾಸದಿಂದ ಹೆಕ್ಕಿ ತೆಗೆದು ತೋರಿಸುವಲ್ಲಿ ಕಲೆಯ ಕೆಲಸ ತಾಧ್ಯಾತ್ಮಕ ಅಧ್ಯಯನವನ್ನೂ ಸಂಯಮವನ್ನೂ, ವಸ್ತುನಿಷ್ಠ ಮೌಲ್ಯವಿವೇಚನೆಯ ಸಮಚಿತ್ತವನ್ನು ಬೇಡುವ ಅಪಾರ ಪರಿಶ್ರಮದ ಕೆಲಸ. ಇದರಲ್ಲಿ ವಸುಧೇಂದ್ರ ಬಹುಮಟ್ಟಿಗೆ ಯಶಸ್ವಿಯಾಗಿದ್ದಾರೆಂದು ಹೇಳಲು ಸಂತೋಷವಾಗುತ್ತದೆ. ಒಂದು ಒಳ್ಳೆಯ ಕಾದಂಬರಿಯನ್ನು ಕೊಟ್ಟಿದ್ದಕ್ಕಾಗಿ ಅವರಿಗೆ ವಂದನೆಗಳು, ಪ್ರಶಸ್ತಿಗಾಗಿ ಅಭಿನಂದನೆಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ